Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ 76 ನೇ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ 76 ನೇ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ


ನಮಸ್ಕಾರ್

ಗೌರವಾನ್ವಿತ ಅಬ್ದುಲ್ಲಾ ಶಹೀದ್ ಜೀ, ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ನಿಮಗೆ ಹಾರ್ಧಿಕ ಅಭಿನಂದನೆಗಳು. ಇದು ಎಲ್ಲಾ ಅಭಿವೃದ್ಧಿಶೀಲ ದೇಶಗಳಿಗೆ ಹೆಮ್ಮೆಯ ಸಂಗತಿ ಮತ್ತು ವಿಶೇಷವಾಗಿ ಅಭಿವೃದ್ಧಿಶೀಲ ಸಣ್ಣ ದ್ವೀಪ ರಾಷ್ಟ್ರಗಳೂ ನಿಮ್ಮನ್ನು ಅಧ್ಯಕ್ಷರನ್ನಾಗಿ ಹೊಂದಿರುವುದಕ್ಕೆ ಹೆಮ್ಮೆಪಡುತ್ತದೆ.

ಮಾನ್ಯ ಅಧ್ಯಕ್ಷರೇ

ಕಳೆದ ಒಂದೂವರೆ ವರ್ಷಗಳಿಂದ, ಇಡೀ ವಿಶ್ವ ಕಳೆದ ನೂರು ವರ್ಷಗಳಲ್ಲಿಯೇ ಅತ್ಯಂತ ದೊಡ್ಡದಾದ ಜಾಗತಿಕ ಸಾಂಕ್ರಾಮಿಕವನ್ನು ಎದುರಿಸುತ್ತಿದೆ. ಇಂತಹ ಭಯಾನಕ ಜಾಗತಿಕ ಸಾಂಕ್ರಾಮಿಕದಲ್ಲಿ  ಜೀವ ಕಳೆದುಕೊಂಡವರಿಗೆ ನಾನು ಶೃದ್ಧಾಂಜಲಿ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬಗಳಿಗೆ ಸಂತಾಪಗಳು.

ಮಾನ್ಯ ಅಧ್ಯಕ್ಷರೇ

ನಾನುಪ್ರಜಾಪ್ರಭುತ್ವದ ಮಾತೆಎಂಬ ಖ್ಯಾತಿಯನ್ನು ಹೊಂದಿರುವ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ. ನಾವು ಸಾವಿರಾರು ವರ್ಷಗಳಿಂದ ಪ್ರಜಾಪ್ರಭುತ್ವದ ಬಹಳ ದೊಡ್ಡ ಪರಂಪರೆಯನ್ನು ಹೊಂದಿದ್ದೇವೆ. ಆಗಸ್ಟ್ 15 ರಂದು ಭಾರತ ಸ್ವಾತಂತ್ರ್ಯದ 75 ನೇ ವರ್ಷವನ್ನು ಪ್ರವೇಶಿಸಿದೆ. ನಮ್ಮ ವೈವಿಧ್ಯತೆ ನಮ್ಮ ಬಲಿಷ್ಟ ಪ್ರಜಾಪ್ರಭುತ್ವದ ಹೆಗ್ಗುರುತು.

ಡಜನ್ನುಗಟ್ಟಲೆ ಭಾಷೆಗಳನ್ನು, ನೂರಾರು ಭಾಷಾ ವೈವಿಧ್ಯಗಳನ್ನು, ವಿವಿಧ ಜೀವನ ವಿಧಾನಗಳನ್ನು, ಅಡುಗೆ ಪದ್ಧತಿಗಳನ್ನು ಹೊಂದಿರುವ ದೇಶ ಭಾರತ. ಇದು ನಮ್ಮರೋಮಾಂಚಕಾರಿ ಪ್ರಜಾಪ್ರಭುತ್ವಕ್ಕೆಅತ್ಯುತ್ತಮ ಉದಾಹರಣೆ.

ಒಂದು ಕಾಲದಲ್ಲಿ ರೈಲ್ವೇ ನಿಲ್ದಾಣದಲ್ಲಿ ಚಹಾ ಅಂಗಡಿಯಲ್ಲಿ ತನ್ನ ತಂದೆಗೆ ಸಹಾಯ ಮಾಡುತ್ತಿದ್ದ ಸಣ್ಣ ಹುಡುಗ, ಇಂದು ಭಾರತದ ಪ್ರಧಾನ ಮಂತ್ರಿಯಾಗಿ ನಾಲ್ಕನೇ ಬಾರಿಗೆ ಯು.ಎನ್.ಜಿ..ಯನ್ನು ಉದ್ದೇಶಿಸಿ ಮಾತನಾಡಲು ಸಾಧ್ಯವಾಗಿರುವುದು ಭಾರತದ ಪ್ರಜಾಪ್ರಭುತ್ವದ ಶಕ್ತಿಯಿಂದಾಗಿ.

ಬಹಳ ಧೀರ್ಘ ಕಾಲ ಗುಜರಾತಿನ ಮುಖ್ಯಮಂತ್ರಿಯಾಗಿ ಮತ್ತು ಬಳಿಕ ಕಳೆದ 7 ವರ್ಷಗಳಿಂದ ಭಾರತದ ಪ್ರಧಾನ ಮಂತ್ರಿಯಾಗಿ, ನಾನು ಕಳೆದ 20 ವರ್ಷಗಳಿಂದ ಸರಕಾರದ ಮುಖ್ಯಸ್ಥನಾಗಿ ದೇಶವಾಸಿಗಳಿಗೆ ಸೇವೆ ಸಲ್ಲಿಸುತ್ತಿದ್ದೇನೆ.

ಮತ್ತು ನಾನಿದನ್ನು ನನ್ನ ಅನುಭವದ ಆಧಾರದಲ್ಲಿ ಹೇಳುತ್ತಿದ್ದೇನೆ

ಹೌದು, ಪ್ರಜಾಪ್ರಭುತ್ವ ಇದನ್ನೆಲ್ಲ ಮಾಡಬಲ್ಲುದು, ಹೌದು ಪ್ರಜಾಪ್ರಭುತ್ವ ಇದನ್ನೆಲ್ಲ ಸಾಧ್ಯ ಮಾಡಿದೆ, ಮಾನ್ಯ ಅಧ್ಯಕ್ಷರೇ,

ಇಂದು ಪಂಡಿತ್ ದೀನ ದಯಾಳ ಉಪಾಧ್ಯಾಯ ಜೀ ಅವರ ಜನ್ಮದಿನ. ಅವರುಏಕಾತ್ಮ ಮಾನವದರ್ಶನ ಪಿತಾಮಹ. ’ಏಕಾತ್ಮ ಮಾನವದರ್ಶನಅಂದರೆ ಸಮಗ್ರ ಮಾನವತೆ. ಅಂದರೆ ಅಭಿವೃದ್ಧಿ ಮತ್ತು ಸ್ವಂತದಿಂದ ಸಾಮೂಹಿಕತೆಯತ್ತ ಸಹಪ್ರಯಾಣ

ಸ್ವಂತದ ವಿಸ್ತರಣೆ ಎಂದರೆ ವೈಯಕ್ತಿಕ ನೆಲೆಯಿಂದ ಸಮಾಜಕ್ಕೆ, ರಾಷ್ಟ್ರಕ್ಕೆ ವಿಸ್ತರಣೆ ಮತ್ತು ಇಡೀ ಮಾನವತೆಯತ್ತ ಸಾಗುವುದು. ಮತ್ತು ಆಶಯ ಅಂತ್ಯೋದಯಕ್ಕಾಗಿ ಅರ್ಪಿತವಾದಂತಹದು. ಅಂತ್ಯೋದಯ ಎಂದರೆ ಇಂದಿನ ವ್ಯಾಖ್ಯಾನದ ಪ್ರಕಾರ ಅಲ್ಲಿ ಯಾರೊಬ್ಬರೂ ಹಿಂದುಳಿದಿರುವುದಿಲ್ಲ.

ಸ್ಪೂರ್ತಿ, ಉತ್ಸಾಹದೊಂದಿಗೆ ಭಾರತವು ಇಂದು ಸಮಗ್ರ, ಸಮಾನ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಅಭಿವೃದ್ಧಿ ಎಲ್ಲರನ್ನೂ ಒಳಗೊಳ್ಳುವಂತಿರಬೇಕು, ಎಲ್ಲರನ್ನೂ ಸ್ಪರ್ಶಿಸಬೇಕು, ಸರ್ವ ವ್ಯಾಪಿಯಾಗಿರಬೇಕು ಮತ್ತು ಸರ್ವ ಹೊಣೆಗಾರಿಕೆ ಇರಬೇಕುಇದು ನಮ್ಮ ಆದ್ಯತೆ.

ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ 430 ಮಿಲಿಯನ್ನಿಗೂ ಅಧಿಕ ಜನರು ಬ್ಯಾಂಕಿಂಗ್ ವ್ಯವಸ್ಥೆ ಜೊತೆ ಸಂಪರ್ಕಿಸಲ್ಪಟ್ಟಿದ್ದಾರೆ. ಅವರಿಗೆ ಸೌಲಭ್ಯ ಅಲ್ಲಿಯವರೆಗೆ ನಿರಾಕರಿಸಲ್ಪಟ್ಟಿತ್ತು. ಇಂದು 360 ಮಿಲಿಯನ್ನಿಗೂ ಅಧಿಕ ಜನರು ಮೊದಲು ಅದನ್ನು ಕನಸಿನಲ್ಲೂ ಕಾಣಲು ಅಸಾಧ್ಯ ಎಂದು ಭಾವಿಸಿದ ವಿಮಾ ಸೌಲಭ್ಯವನ್ನು ಹೊಂದಿದ್ದಾರೆ.

50 ಕೋಟಿಗೂ ಅಧಿಕ ಜನರಿಗೆ ಉಚಿತ ಚಿಕಿತ್ಸೆ ಒದಗಿಸುವ ಮೂಲಕ ಭಾರತವು ಅವರನ್ನು ಗುಣಮಟ್ಟದ ಆರೋಗ್ಯ ಸೇವೆಯೊಂದಿಗೆ ಬೆಸೆದಿದೆ. ಭಾರತವು 30 ಮಿಲಿಯನ್ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡಿದ್ದು, ವಸತಿ ರಹಿತರು ಈಗ ಮನೆಗಳ ಮಾಲಕರಾಗಿದ್ದಾರೆ.

ಮಾನ್ಯ ಅಧ್ಯಕ್ಷರೇ,

ಮಲಿನ ನೀರು ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಬಹಳ ದೊಡ್ಡ ಸಮಸ್ಯೆ ಮತ್ತು ಬಡವರಿಗೆ ಹಾಗು ಅಭಿವೃಧಿಶೀಲ ರಾಷ್ಟ್ರಗಳಿಗೆ ಇದರ ತೊಂದರೆ ಇನ್ನೂ ಹೆಚ್ಚು. ಭಾರತದಲ್ಲಿ ಸವಾಲನ್ನು ಎದುರಿಸಲು 170 ಮಿಲಿಯನ್ನಿಗೂ ಅಧಿಕ ಮನೆಗಳಿಗೆ ಕೊಳವೆ ಮೂಲಕ ನೀರೊದಗಿಸಲು ಬಹಳ ದೊಡ್ಡ ಆಂದೋಲನವನ್ನು ಕೈಗೆತ್ತಿಕೊಂಡಿದ್ದೇವೆ.

ಜಗತ್ತಿನ ಬಹಳ ದೊಡ್ಡ ಸಂಘಟನೆಗಳು ಯಾವುದೇ ದೇಶದ ಅಭಿವೃದ್ಧಿಗೆ ಅದರ ನಾಗರಿಕರಿಗೆ ಭೂ ಆಸ್ತಿ ಹಕ್ಕು ಮತ್ತು ಮನೆ ಬಹಳ ಮುಖ್ಯ ಎಂದು ಪರಿಗಣಿಸಿವೆ, ಅಂದರೆ ಮಲಕತ್ವದ ದಾಖಲೆ ಅವಶ್ಯ. ಜಗತ್ತಿನ ವಿಶಾಲ ದೇಶಗಳಲ್ಲಿ ಭೂ ಆಸ್ತಿಯ ಒಡೆತನ , ಹಕ್ಕು  ಮತ್ತು ಮನೆಗಳನ್ನು ಹೊಂದಿಲ್ಲದ ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ.

ನಾವಿಂದು ಭಾರತದ 600000ಕ್ಕೂ ಅಧಿಕ  ಗ್ರಾಮಗಳನ್ನು ಡ್ರೋನ್ ಮೂಲಕ ಮ್ಯಾಪಿಂಗ್ ನಡೆಸಿ ಮಿಲಿಯಾಂತರ ಜನರಿಗೆ ಅವರ ಮನೆಗಳ ಮತ್ತು ಭೂ ಒಡೆತನದ ಡಿಜಿಟಲ್ ದಾಖಲೆಗಳನ್ನು ಒದಗಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ.

ಡಿಜಿಟಲ್ ದಾಖಲೆಗಳು ಜನರಿಗೆ ಸಾಲ ಪಡೆಯಲುಬ್ಯಾಂಕ್ ಸಾಲ ಪಡೆಯಲು ಅನುಕೂಲಗಳನ್ನು ಮಾಡಿಕೊಡುತ್ತವೆ. ಮತ್ತು ಆಸ್ತಿ ವಿವಾದಗಳನ್ನು ಕಡಿಮೆ ಮಾಡುತ್ತವೆ.

ಮಾನ್ಯ ಅಧ್ಯಕ್ಷರೇ

ಇಂದು, ಜಗತ್ತಿನಲ್ಲಿರುವ ಪ್ರತೀ ಆರು ಮಂದಿಯಲ್ಲಿ ಓರ್ವರು ಭಾರತೀಯರಾಗಿದ್ದಾರೆ. ಭಾರತೀಯರು ಪ್ರಗತಿ ಸಾಧಿಸಿದಾಗ ವಿಶ್ವದ ಪ್ರಗತಿಗೆ ಕೂಡಾ ಉತ್ತೇಜನ ದೊರೆಯುತ್ತದೆ.

ಭಾರತ ಬೆಳವಣಿಗೆ ಸಾಧಿಸಿದಾಗ ವಿಶ್ವವೂ ಬೆಳವಣಿಗೆ ಸಾಧಿಸುತ್ತದೆ, ಭಾರತ ಸುಧಾರಣೆಗಳನ್ನು ಅಳವಡಿಸಿಕೊಂಡಾಗ ಜಗತ್ತೂ ಪರಿವರ್ತನೆಗಳನ್ನು ಮೈಗೂಢಿಸಿಕೊಳ್ಳುತ್ತದೆ.

ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಅನ್ವೇಷಣೆಗಳೀಂದಾಗಿ  ಜಗತ್ತಿಗೆ ನಮ್ಮ ತಂತ್ರಜ್ಞಾನ ಪರಿಹಾರಗಳು ಬಹಳ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಬಲ್ಲವು ಮತ್ತು ಅವುಗಳ ಪ್ರಮಾಣ ಹಾಗು ಅವು  ಎಷ್ಟು  ಕಡಿಮೆ ಖರ್ಚಿನವು ಎಂಬುದಕ್ಕೆ ಬೇರೆ ಹೋಲಿಕೆ ಇರದು.

ನಮ್ಮ ಏಕೀಕೃತ ಪಾವತಿ ವ್ಯವಸ್ಥೆ ಇಂಟರ್ಫೇಸ್ ಯು.ಪಿ..ಯೊಂದಿಗೆ ಭಾರತದಲ್ಲಿಂದು ಮಾಸಿಕ 3.5 ಬಿಲಿಯನ್ ವರ್ಗಾವಣೆಗಳು ನಡೆಯುತ್ತಿವೆ. ಭಾರತದ ಲಸಿಕೆ ವಿತರಣಾ ವೇದಿಕೆ ಕೋವಿನ್ ಏಕದಿನದಲ್ಲಿ ಮಿಲಿಯಾಂತರ ಲಸಿಕಾ ಡೋಸ್ ಗಳಿಗೆ ಡಿಜಿಟಲ್ ಬೆಂಬಲ ನೀಡುತ್ತಿದೆ.

ಮಾನ್ಯ ಅಧ್ಯಕ್ಷರೇ,

सेवापरमोधर्म: (ಸೇವೆಯೇ ಪರಮ ಧರ್ಮ)

ಭಾರತವು ಸೇವೆಯೇ ಪರಮ ಧರ್ಮ ಎಂಬ ತತ್ವದ ಆಧಾರದಲ್ಲಿ ಮುನ್ನಡೆಯುತ್ತಿದೆ. ಸೀಮಿತ ಸಂಪನ್ಮೂಲಗಳಿದ್ದಾಗ್ಯೂ ಅದು ಲಸಿಕಾ ಅಭಿವೃದ್ಧಿಯಲ್ಲಿ ಮತ್ತು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿತ್ತು,

ನಾನು ಯು.ಎನ್.ಜಿ..ಗೆ ತಿಳಿಸಲಿಚ್ಛಿಸುತ್ತೇನೆ, ಭಾರತವು ವಿಶ್ವದ ಮೊದಲ , ವಿಶ್ವದ ಮೊದಲ ಡಿ.ಎನ್..ಆಧಾರಿತ ಲಸಿಕೆಯನ್ನು ಅಭಿವೃದ್ಧಿ ಮಾಡಿದೆ, ಅದನ್ನು 12 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ನೀಡಬಹುದಾಗಿದೆ.

ಇನ್ನೊಂದು ಎಂಆರ್.ಎನ್.. ಲಸಿಕೆಯು ಅದರ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ. ಭಾರತದ ವಿಜ್ಞಾನಿಗಳು ಕೊರೊನಾಕ್ಕೆ ಮೂಗಿನ ಮೂಲಕ ಹಾಕುವ ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ. ಮಾನವತೆಯತ್ತ ತನ್ನ ಜವಾಬ್ದಾರಿಯನ್ನು  ಮನಗಂಡು , ಭಾರತವು ಮತ್ತೊಮ್ಮೆ ಜಗತ್ತಿನ ಅವಶ್ಯಕತೆಯುಳ್ಳ ಜನರಿಗೆ ಲಸಿಕೆಯನ್ನು ನೀಡಲು ಆರಂಭ ಮಾಡಿದೆ.

ನಾನು ಜಗತ್ತಿನಾದ್ಯಂತದ ಲಸಿಕಾ ತಯಾರಕರಿಗೆ ಆಹ್ವಾನ ನೀಡುತ್ತೇನೆ

ಬನ್ನಿ! ಭಾರತದಲ್ಲಿ ಲಸಿಕೆ ತಯಾರಿಸಿರಿ.

ಮಾನ್ಯ ಅಧ್ಯಕ್ಷರೇ,

ಇಂದು ನಮಗೆಲ್ಲಾ ಗೊತ್ತಿದೆ, ಮಾನವ ಜೀವನದಲ್ಲಿ ತಂತ್ರಜ್ಞಾನ ಎಷ್ಟು ಮುಖ್ಯ ಎಂಬುದಾಗಿ. ಆದರೆ ಬದಲಾಗುತ್ತಿರುವ ವಿಶ್ವದಲ್ಲಿ ತಂತ್ರಜ್ಞಾನವು ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ಮಿಳಿತವಾಗಿರುವಂತೆ ಖಾತ್ರಿಪಡಿಸುವುದೂ ಮುಖ್ಯ.

ಭಾರತೀಯ ಮೂಲದ ವೈದ್ಯರು, ಅನ್ವೇಷಕರು, ಇಂಜಿನಿಯರುಗಳು, ಮ್ಯಾನೇಜರುಗಳು, ಯಾವುದೇ ದೇಶದಲ್ಲಿರಲಿ, ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳು ಅವರು ಮಾನವತೆಯ ಸೇವೆಯಲ್ಲಿ ತೊಡಗಿಕೊಂಡಿರಲು ಉತ್ತೇಜಿಸುತ್ತಿರುತ್ತವೆ. ಮತ್ತು ನಾವಿದನ್ನು ಕೊರೊನಾ ಕಾಲದಲ್ಲಿಯೂ ನೋಡಿದ್ದೇವೆ.

ಮಾನ್ಯ ಅಧ್ಯಕ್ಷರೇ,

ಕೊರೊನಾ ಜಾಗತಿಕ ಸಾಂಕ್ರಾಮಿಕವು ಈಗ ಜಾಗತಿಕ ಆರ್ಥಿಕತೆ ಹೆಚ್ಚು ವೈವಿಧ್ಯಮಯವಾಗಬೇಕು ಎಂಬ ಪಾಠವನ್ನು ಕಲಿಸಿಕೊಟ್ಟಿದೆ. ಇದಕ್ಕಾಗಿ ಜಾಗತಿಕ ಮೌಲ್ಯ ಸರಪಳಿ ವಿಸ್ತರಣೆ ಅವಶ್ಯ.

ನಮ್ಮ ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಆಂದೋಲನ ಸ್ಪೂರ್ತಿಯನ್ನು ಅಡಕಗೊಳಿಸಿದ ಕಾರ್ಯಕ್ರಮ. ಭಾರತವು ಜಾಗತಿಕ ಕೈಗಾರಿಕಾ ವೈವಿಧೀಕರಣಕ್ಕೆ  ಜಗತ್ತಿಗೇ ಪ್ರಜಾಸತ್ತಾತ್ಮಕ ಮತ್ತು ನಂಬಿಕಸ್ತ ಪಾಲುದಾರನಾಗುತ್ತಿದೆ.

ಮತ್ತು   ಆಂದೋಲನದಲ್ಲಿ, ಭಾರತವು ಆರ್ಥಿಕತೆ ಮತ್ತು ಪರಿಸರದಲ್ಲಿ ಉತ್ತಮ ಸಮತೋಲನವನ್ನು ಸಾಧಿಸಿದೆ. ದೊಡ್ಡ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ವಾತಾವರಣಕ್ಕೆ ಸಂಬಂಧಿಸಿದ ಕ್ರಮಗಳಲ್ಲಿ ಭಾರತದ ಪ್ರಯತ್ನಗಳನ್ನು ನೋಡಿದರೆ ನೀವು ಖಂಡಿತವಾಗಿಯೂ ಹೆಮ್ಮೆ ಪಡುತ್ತೀರಿ. ಇಂದು ಭಾರತವು 450 ಗಿಗಾ ವ್ಯಾಟ್ ನಷ್ಟು ಮರುನವೀಕರಿಸಬಹುದಾದ ಇಂಧನ ಗುರಿಯನ್ನು ಸಾಧಿಸಲು ಬಹಳ ತ್ವರಿತಗತಿಯಿಂದ ಮುನ್ನಡೆಯುತ್ತಿದೆ. ನಾವು ಭಾರತವನ್ನು ಜಗತ್ತಿನ ಬಹಳ ದೊಡ್ಡ ಹಸಿರು ಜಲಜನಕ ತಾಣವಾಗಿ ಮಾಡುವ ಆಂದೋಲನದಲ್ಲಿ ನಿರತರಾಗಿದ್ದೇವೆ.

ಮಾನ್ಯ ಅಧ್ಯಕ್ಷರೇ

ನಾವು ನಿರ್ಧಾರಗಳನ್ನು ಕೈಗೊಳ್ಳುವಾಗ ಮುಂದಿನ ತಲೆಮಾರಿಗೆ ಉತ್ತರಿಸಬೇಕಾದಂತಹ ಸ್ಥಿತಿಯಲ್ಲಿದ್ದೇವೆ. ಜಗತ್ತಿಗೆ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ ಇರುವಾಗ ಅವರೇನು ಮಾಡುತ್ತಿದ್ದಾರೆ?. ಇಂದು ಜಗತ್ತಿನೆದುರು ಪ್ರತಿಗಾಮಿ ಚಿಂತನೆ ಮತ್ತು ತೀವ್ರಗಾಮಿತ್ವದ ಅಪಾಯ ಹೆಚ್ಚುತ್ತಿದೆ.

ಇಂತಹ ಪರಿಸ್ಥಿತಿಗಳಲ್ಲಿ, ಇಡೀ ಜಗತ್ತು ವಿಜ್ಞಾನ ಆಧಾರಿತ, ವಿಚಾರವಾದಿ ಮತ್ತು ಪ್ರಗತಿಪರ ಚಿಂತನೆಗಳನ್ನು ಅಭಿವೃದ್ಧಿಯ ತಳಹದಿಯನ್ನಾಗಿಸಿಕೊಳ್ಳಬೇಕು.

ವಿಜ್ಞಾನ ಆಧಾರಿತ ಧೋರಣೆಗಳನ್ನು ಬಲಪಡಿಸಲು ಭಾರತವು ಅನುಭವ ಆಧಾರಿತ ಕಲಿಕೆಯನ್ನು ಉತ್ತೇಜಿಸುತ್ತಿದೆ. ನಾವು ಸಾವಿರಾರು ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು ಶಾಲೆಗಳಲ್ಲಿ ತೆರೆದಿದ್ದೇವೆ, ಇನ್ಕ್ಯುಬೇಟರುಗಳನ್ನು ನಿರ್ಮಾಣ ಮಾಡಿದ್ದೇವೆ. ಮತ್ತು ಬಲಿಷ್ಟ ನವೋದ್ಯಮಗಳ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಿದ್ದೇವೆ.

 

ಸ್ವಾತಂತ್ರ್ಯದ 75 ನೇ ವರ್ಷಾಚರಣೆ ನೆನಪಿನಲ್ಲಿ  ಭಾರತವು ಭಾರತೀಯ ವಿದ್ಯಾರ್ಥಿಗಳು ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಭಿವೃದ್ಧಿಪಡಿಸುತ್ತಿರುವಂತಹ 75 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿ ಬಿಡಲಿದೆ,.

ಮಾನ್ಯ ಅಧ್ಯಕ್ಷರೇ,

ಇನ್ನೊಂದೆಡೆ ಪ್ರಗತಿವಿರೋಧಿ ಚಿಂತನೆಗಳೊಂದಿಗೆ, ದೇಶಗಳು ಭಯೋತ್ಪಾದನೆಯನ್ನು ರಾಜಕೀಯ ದಾಳವಾಗಿ ಬಳಸುತ್ತಿದ್ದು, ಅವುಗಳು ಕೂಡಾ ಭಯೋತ್ಪಾದನೆ ತಮಗೂ  ಅಷ್ಟೇ ದೊಡ್ಡ ಶತ್ರು ಎಂಬುದನ್ನು ಮನಗಾಣಬೇಕಾಗಿದೆ. ಅಪಘಾನಿಸ್ಥಾನದ ಮಣ್ಣು ಭಯೋತ್ಪಾದನೆ ಮತ್ತು  ಭಯೋತ್ಪಾದಕ ದಾಳಿಗಳಿಗೆ ಬಳಕೆಯಾಗದಂತೆ ಖಾತ್ರಿಪಡಿಸುವುದು ಬಹಳ ಮುಖ್ಯವಾಗಿದೆ.

ಯಾವುದೇ ದೇಶ ಅಲ್ಲಿಯ ಸೂಕ್ಷ್ಮ ಪರಿಸ್ಥಿತಿಯನ್ನು ಅದರ ಸ್ವಾರ್ಥಪೂರಿತ ಆಶಯಗಳಿಗೆ ಬಳಸಲು ಪ್ರಯತ್ನಗಳನ್ನು ಮಾಡದಂತೆ ಜಾಗರೂಕರಾಗಿರಬೇಕು.

ಪ್ರಸ್ತುತ, ಅಪಘಾನಿಸ್ಥಾನದ ಜನತೆಗೆ ,ಅಲ್ಲಿರುವ  ಮಹಿಳೆಯರು ಮತ್ತು ಮಕ್ಕಳು, ಅಲ್ಲಿರುವ ಅಲ್ಪಸಂಖ್ಯಾತರಿಗೆ ಸಹಾಯದ ಅವಶ್ಯಕತೆ ಇದೆ ಮತ್ತು ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ.

ಮಾನ್ಯ ಅಧ್ಯಕ್ಷರೇ,

ನಮ್ಮ ಸಾಗರಗಳು ಕೂಡಾ ಸಮಾನ ಪರಂಪರೆಯನ್ನು ಹೊಂದಿವೆ. ಆದುದರಿಂದ ನಾವು ನಮ್ಮ ಸಾಗರ ಸಂಪನ್ಮೂಲಗಳನ್ನು ಬಳಸುವಾಗ ಅವುಗಳನ್ನು ದುರುಪಯೋಗ ಮಾಡಬಾರದೆಂಬ ಎಚ್ಚರಿಕೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.ನಮ್ಮ ಸಾಗರಗಳು ಅಂತಾರಾಷ್ಟ್ರೀಯ ವ್ಯಾಪಾರದ ಜೀವನ ರೇಖೆಗಳು. ನಾವು ಅವುಗಳನ್ನು ವಿಸ್ತರಣೆಯ ಸ್ಪರ್ಧೆಯಿಂದ ಸಂರಕ್ಷಿಸಬೇಕು.

ಕಾನೂನು ಆಧಾರಿತ ವಿಶ್ವ ವ್ಯವಸ್ಥೆಯನ್ನು ಬಲಪಡಿಸಲು ಅಂತಾರಾಷ್ಟ್ರೀಯ ಸಮುದಾಯವು.ಏಕತ್ರ ಧ್ವನಿಯಲ್ಲಿ ಮಾತನಾಡಬೇಕು. ಭದ್ರತಾ ಮಂಡಳಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ರೂಪಿತವಾದ ವಿಸ್ತಾರವಾದ ಒಟ್ಟಾಭಿಪ್ರಾಯಗಳು ನಾವಿಕ ಭದ್ರತೆಗೆ ಸಂಬಂಧಿಸಿ ವಿಶ್ವಕ್ಕೆ ಮುಂದಿನ ಹಾದಿಯನ್ನು ತೋರಿಸುವಂತಹವಾಗಿವೆ.

ಮಾನ್ಯ ಅಧ್ಯಕ್ಷರೇ,

ಭಾರತದ ಶ್ರೇಷ್ಟ ತತ್ವಜ್ಞಾನಿ, ಆಚಾರ್ಯ ಚಾಣಕ್ಯ ಹಲವು ಶತಮಾನಗಳ ಹಿಂದೆ ಹೇಳಿದ್ದರು

ಕಾಲಾತಿ ಕ್ರಮತ್ ಕಾಲ್ ಮತ್ತು ಫಾಲಂ ಪಿಬಟ್ಟಿ

ಸರಿಯಾದ ಸಮಯಕ್ಕೆ ಸರಿಯಾದ ಕೆಲಸವನ್ನು ಮಾಡದೇ ಇದ್ದಾಗ, ಕಾಲವೇ ಕೆಲಸದ  ಯಶಸ್ಸನ್ನು ಹಾಳು ಮಾಡುತ್ತದೆ.

ವಿಶ್ವಸಂಸ್ಥೆಯು ತಾನು ಪ್ರಸ್ತುತವಾಗುಳಿಯಬೇಕೆಂದರೆಅದು ತನ್ನ ಪರಿಣಾಮಕಾರತ್ವವನ್ನು, ದಕ್ಷತೆಯನ್ನು ಸುಧಾರಿಸಿಕೊಳ್ಳಬೇಕು ಮತ್ತು ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು.

ಇಂದು ವಿಶ್ವ ಸಂಸ್ಥೆಯ ಬಗ್ಗೆ ಹಲವಾರು ಪ್ರಶ್ನೆಗಳು ಏಳುತ್ತಿವೆ. ವಾತಾವರಣ ಬಿಕಟ್ಟು ಮತ್ತು ಕೋವಿಡ್ ಬಿಕ್ಕಟ್ಟಿನಲ್ಲಿ ನಾವಿದನ್ನು ಅನುಭವಿಸಿದ್ದೇವೆ. ಜಗತ್ತಿನ ಹಲವು ಭಾಗಗಳಲಿ ನಡೆಯುತ್ತಿರುವ ಛಾಯಾ ಸಮರ, ಅಪಘಾನಿಸ್ಥಾನದಲ್ಲಿಯ ಭಯೋತ್ಪಾದನೆ ಮತ್ತು ಬಿಕ್ಕಟ್ಟು ಪ್ರಶ್ನೆಗಳನ್ನು ಇನ್ನಷ್ಟು ತೀವ್ರ ಮಾಡಿದೆ. ಕೋವಿಡ್ ಮೂಲ ವಿಷಯಕ್ಕೆ ಸಂಬಂಧಿಸಿ ಮತ್ತು ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ ಶ್ರೇಯಾಂಕ , ಜಾಗತಿಕ ಆಡಳಿತ ಸಂಸ್ಥೆಗಳು ಹಲವಾರು ದಶಕಗಳಿಂದ ಬಹಳ ಶ್ರಮಪಟ್ಟು ಬೆಳೆಸಿದ್ದ ಅವುಗಳ ವಿಶ್ವಾಸಾರ್ಹತೆಯನ್ನು ಹಾಳುಗೆಡವಿವೆ.

ಜಾಗತಿಕ ವ್ಯವಸ್ಥೆಯನ್ನು, ಜಾಗತಿಕ ಕಾನೂನುಗಳನ್ನು ಮತ್ತು ಜಾಗತಿಕ ಮೌಲ್ಯಗಳನ್ನು  ರಕ್ಷಿಸಲು ನಾವು ವಿಶ್ವ ಸಂಸ್ಥೆಯನ್ನು ಸತತವಾಗಿ ಬಲಪಡಿಸುವುದು ಬಹಳ ಮುಖ್ಯ. ನೊಬೆಲ್ ಸಾಹಿತಿ ಗುರುದೇವ ರವೀಂದ್ರನಾಥ ಟ್ಯಾಗೋರ್ ಜೀ ಅವರ ಮಾತುಗಳೊಂದಿಗೆ ನಾನು ಮುಕ್ತಾಯ ಮಾಡುತ್ತೇನೆ.

शुभोकोर्मोपोथे / धोरोनिर्भोयोगान, शोबदुर्बोलसोन्शोय /होकओबोसान।(ಶುಭೋ ಕೊರ್ಮೊ ಪೋಥೆ/ಧೋರೋ ನಿರ್ಭಯೋ ಗಾನ್, ಶೋನ್ ದರ್ಬೋಲ್ ಸೌನ್ ಶೋಯ್/ಹೊಕ್ ಔಬೋಶನ್)

ಅಂದರೆ, ನಿಮ್ಮ ಪವಿತ್ರ ಕರ್ಮಪಥದಲ್ಲಿ ಭಯಮುಕ್ತರಾಗಿ ಮುನ್ನಡೆಯಿರಿ. ಎಲ್ಲಾ ದೌರ್ಬಲ್ಯಗಳು ಮತ್ತು ಸಂಶಯಗಳು ನಿವಾರಣೆಯಾಗಲಿ.

ಸಂದೇಶ ಇಂದಿನ ಪರಿಸ್ಥಿತಿಯಲ್ಲಿ ವಿಶ್ವ ಸಂಸ್ಥೆಗೆ ಮತ್ತು ಪ್ರತೀ ಜವಾಬ್ದಾರಿಯುತ ದೇಶಕ್ಕೆ ಬಹಳ ಪ್ರಸ್ತುತ. ನಾವೆಲ್ಲರೂ ಜಗತ್ತಿನಲ್ಲಿ ಶಾಂತಿಯನ್ನು ಹೆಚ್ಚಿಸಲು ಮತ್ತು ಸೌಹಾರ್ದತೆಯನ್ನು ಹರಡಲು ಪ್ರಯತ್ನಿಸೋಣ, ಜಗತ್ತನ್ನು ಆರೋಗ್ಯವಂತವನ್ನಾಗಿ, ಸುರಕ್ಷತೆಯುಳ್ಳ ಮತ್ತು ಸಮೃದ್ಧಿಯ ಜಗತ್ತನ್ನಾಗಿ ರೂಪಿಸೋಣ.

ಶುಭಾಶಯಗಳೊಂದಿಗೆ

ನಿಮಗೆಲ್ಲ ಬಹಳ ಧನ್ಯವಾದಗಳು

ನಮಸ್ಕಾರ !

ಘೋಷಣೆ: ಇದು ಸರಿಸುಮಾರಾದ ಭಾಷಾಂತರ.ಮೂಲ ಪ್ರತಿಕ್ರಿಯೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

***