Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ

ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ


ನಮಸ್ಕಾರ!

ತೆಲಂಗಾಣ ರಾಜ್ಯಪಾಲರಾದ ಶ್ರೀ ಜಿಷ್ಣು ದೇವ್ ವರ್ಮಾ ಜೀ, ಒಡಿಶಾದ ರಾಜ್ಯಪಾಲರಾದ ಶ್ರೀ ಹರಿ ಬಾಬು ಜೀ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಜೀ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಶ್ರೀ ಒಮರ್ ಅಬ್ದುಲ್ಲಾ ಜೀ, ತೆಲಂಗಾಣದ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ ಜೀ, ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಜಿ ಜೀ, ನನ್ನ ಸಂಪುಟ ಸಹೋದ್ಯೋಗಿಗಳು-ಶ್ರೀ ಅಶ್ವಿನಿ ವೈಷ್ಣವ್ ಜೀ, ಶ್ರೀ ಜಿ ಕಿಶನ್ ರೆಡ್ಡಿ ಜೀ, ಡಾ ಜಿತೇಂದ್ರ ಸಿಂಗ್ ಜೀ, ಶ್ರೀ ವಿ ಸೋಮಯ್ಯ ಜೀ, ಶ್ರೀ ರವನೀತ್ ಸಿಂಗ್ ಬಿಟ್ಟು ಜೀ, ಶ್ರೀ ಬಂಡಿ ಸಂಜಯ್ ಕುಮಾರ್ ಜೀ, ಇತರ ಸಚಿವರು, ಸಂಸತ್ ಸದಸ್ಯರು, ವಿಧಾನಸಭೆ ಸದಸ್ಯರು, ಗೌರವಾನ್ವಿತ ಅತಿಥಿಗಳು, ಮಹಿಳೆಯರೇ ಮತ್ತು ಮಹನೀಯರೇ!

ಇಂದು ಗುರು ಗೋವಿಂದ ಸಿಂಗ್ ಜಿ ಅವರ ಜನ್ಮದಿನವಾಗಿದೆ. ಅವರ ಬೋಧನೆಗಳು ಮತ್ತು ಆದರ್ಶಪ್ರಾಯ ಜೀವನವು ಸಮೃದ್ಧ ಮತ್ತು ಬಲವಾದ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡುತ್ತಲೇ ಇದೆ. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೇ,

2025ರ ಆರಂಭದಿಂದಲೂ ಭಾರತವು ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಗಣನೀಯ ಪ್ರಗತಿ ಸಾಧಿಸುತ್ತಿದೆ. ನಿನ್ನೆಯಷ್ಟೇ, ದೆಹಲಿ-ಎನ್‌ ಸಿ ಆರ್‌ ನಲ್ಲಿ ನಮೋ ಭಾರತ್ ರೈಲಿನಲ್ಲಿ ಪ್ರಯಾಣಿಸುವ ಮತ್ತು ದೆಹಲಿ ಮೆಟ್ರೋದ ಪ್ರಮುಖ ಯೋಜನೆಗಳ ಉದ್ಘಾಟನೆಯಲ್ಲಿ ಭಾಗವಹಿಸುವ ಅವಕಾಶ ನನಗೆ ಲಭಿಸಿತು. ನಿನ್ನೆ ಭಾರತವು ಒಂದು ಅಸಾಧಾರಣ ಮೈಲಿಗಲ್ಲನ್ನು ತಲುಪಿದೆ – ನಮ್ಮ ದೇಶದ ಮೆಟ್ರೋ ಜಾಲವು ಈಗ ಸಾವಿರ ಕಿಲೋಮೀಟರ್‌ಗಳಿಗೂ ಮೀರಿ ವಿಸ್ತರಿಸಿದೆ. ಇಂದು, ಹಲವು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಭವಿಷ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಉತ್ತರದಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಪೂರ್ವದಲ್ಲಿ ಒಡಿಶಾ ಮತ್ತು ದಕ್ಷಿಣದಲ್ಲಿ ತೆಲಂಗಾಣದವರೆಗೆ, ಇಂದು ದೇಶದ ಬಹುಭಾಗದಲ್ಲಿ ‘ನವಯುಗದ ಸಂಪರ್ಕ’ಕ್ಕೆ ಒಂದು ಮಹತ್ವದ ದಿನವಾಗಿದೆ. ಈ ಮೂರು ರಾಜ್ಯಗಳಲ್ಲಿ ಆಧುನಿಕ ಅಭಿವೃದ್ಧಿ ಯೋಜನೆಗಳ ಆರಂಭವು ಇಡೀ ದೇಶದ ಏಕೀಕೃತ ಪ್ರಗತಿಯ ಸಂಕೇತವಾಗಿದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಮಂತ್ರವು ಆತ್ಮವಿಶ್ವಾಸವನ್ನು ತುಂಬುತ್ತಿದೆ ಮತ್ತು ವಿಕಸಿತ ಭಾರತದ (ಅಭಿವೃದ್ಧಿ ಹೊಂದಿದ ಭಾರತ) ಕನಸನ್ನು ನನಸಾಗಿಸುತ್ತಿದೆ. ಈ ಸಂದರ್ಭದಲ್ಲಿ, ಈ ಮೂರು ರಾಜ್ಯಗಳ ಜನತೆ ಮತ್ತು ಎಲ್ಲಾ ಭಾರತೀಯರಿಗೆ ಈ ಯೋಜನೆಗಳ ಉದ್ಘಾಟನೆಗಾಗಿ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಂದು ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಅವರ ಜನ್ಮದಿನವೂ ಆಗಿದೆ. ಎಲ್ಲರ ಪರವಾಗಿ, ಅವರಿಗೂ ನನ್ನ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೇ,

ವಿಕಸಿತ ಭಾರತದ ದೃಷ್ಟಿಯನ್ನು ನನಸಾಗಿಸಲು ನಮ್ಮ ದೇಶವು ಅವಿರತವಾಗಿ ಶ್ರಮಿಸುತ್ತಿದೆ. ಈ ಗುರಿಯನ್ನು ಸಾಧಿಸುವಲ್ಲಿ ಭಾರತೀಯ ರೈಲ್ವೆಯ ಅಭಿವೃದ್ಧಿಯು ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ ದಶಕದಲ್ಲಿ, ಭಾರತೀಯ ರೈಲ್ವೆ ಐತಿಹಾಸಿಕ ಪರಿವರ್ತನೆಗೆ ಒಳಗಾಗಿದೆ. ರೈಲ್ವೆ ಮೂಲಸೌಕರ್ಯದಲ್ಲಿನ ಪ್ರಗತಿ ಅಸಾಧಾರಣವಾಗಿದ್ದು, ದೇಶದ ಚಿತ್ರಣವನ್ನೇ ಬದಲಿಸಿ, ನಾಗರಿಕರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ.

ಸ್ನೇಹಿತರೇ, 

ನಾವು ನಾಲ್ಕು ಪ್ರಮುಖ ಮಾನದಂಡಗಳ ಮೇಲೆ ಭಾರತೀಯ ರೈಲ್ವೆಯ ಅಭಿವೃದ್ಧಿಯನ್ನು ಮುಂದುವರಿಸುತ್ತಿದ್ದೇವೆ. ಮೊದಲನೆಯದಾಗಿ, ರೈಲ್ವೆ ಮೂಲಸೌಕರ್ಯದ ಆಧುನೀಕರಣ; ಎರಡನೆಯದಾಗಿ, ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸುವುದು; ಮೂರನೆಯದಾಗಿ, ದೇಶದ ಮೂಲೆ ಮೂಲೆಗಳಿಗೆ ರೈಲ್ವೆ ಸಂಪರ್ಕವನ್ನು ವಿಸ್ತರಿಸುವುದು; ಮತ್ತು ನಾಲ್ಕನೆಯದಾಗಿ, ರೈಲ್ವೆಯ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಕೈಗಾರಿಕೆಗಳಿಗೆ ಬೆಂಬಲ ನೀಡುವುದು. ಇಂದಿನ ಕಾರ್ಯಕ್ರಮವು ಈ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. ಹೊಸ ವಿಭಾಗಗಳು ಮತ್ತು ರೈಲ್ವೆ ಟರ್ಮಿನಲ್ ಗಳ ಸ್ಥಾಪನೆಯು ಭಾರತೀಯ ರೈಲ್ವೆಯನ್ನು 21ನೇ ಶತಮಾನದ ಆಧುನಿಕ ಜಾಲವಾಗಿ ಪರಿವರ್ತಿಸಲು ಗಮನಾರ್ಹ ಕೊಡುಗೆ ನೀಡುತ್ತದೆ. ಈ ಬೆಳವಣಿಗೆಗಳು ಆರ್ಥಿಕ ಸಮೃದ್ಧಿಯ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತವೆ, ರೈಲ್ವೆ ಕಾರ್ಯಾಚರಣೆಗಳನ್ನು ಹೆಚ್ಚಿಸುತ್ತವೆ, ಹೆಚ್ಚಿನ ಹೂಡಿಕೆ ಅವಕಾಶಗಳನ್ನು ಸೃಷ್ಟಿಸುತ್ತವೆ ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತವೆ.

ಸ್ನೇಹಿತರೇ,

2014ರಲ್ಲಿ, ನಾವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ವಂದೇ ಭಾರತ್ ರೈಲುಗಳು, ಅಮೃತ ಭಾರತ್ ನಿಲ್ದಾಣಗಳು ಮತ್ತು ನಮೋ ಭಾರತ್ ರೈಲಿನಂತಹ ಸೌಲಭ್ಯಗಳು ಭಾರತೀಯ ರೈಲ್ವೆಗೆ ಹೊಸ ಮಾನದಂಡಗಳನ್ನು ಸ್ಥಾಪಿಸಿವೆ. ಮಹತ್ವಾಕಾಂಕ್ಷೆಯ ಭಾರತ ಇಂದು ಕಡಿಮೆ ಸಮಯದಲ್ಲಿ ಹೆಚ್ಚಿನದನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಜನರು ಈಗ ದೂರದ ಪ್ರಯಾಣವನ್ನು ಸಹ ವೇಗವಾಗಿ ಕೈಗೊಳ್ಳಲು ಬಯಸುತ್ತಾರೆ. ಇದು ದೇಶಾದ್ಯಂತ ಹೈಸ್ಪೀಡ್ ರೈಲುಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಕಾರಣವಾಗುತ್ತದೆ. ಪ್ರಸ್ತುತ, ವಂದೇ ಭಾರತ್ ರೈಲುಗಳು 50 ಕ್ಕೂ ಹೆಚ್ಚು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 136 ಸೇವೆಗಳು ಪ್ರಯಾಣಿಕರಿಗೆ ಆಹ್ಲಾದಕರ ಪ್ರಯಾಣದ ಅನುಭವವನ್ನು ನೀಡುತ್ತಿವೆ. ಕೆಲವು ದಿನಗಳ ಹಿಂದೆ, ವಂದೇ ಭಾರತ್ ರೈಲಿನ ಹೊಸ ಸ್ಲೀಪರ್ ಆವೃತ್ತಿಯು ತನ್ನ ಪ್ರಾಯೋಗಿಕ ಓಟದ ಸಮಯದಲ್ಲಿ ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಓಡುತ್ತಿರುವುದನ್ನು ತೋರಿಸುವ ವೀಡಿಯೊವನ್ನು ನಾನು ನೋಡಿದೆ. ಇಂತಹ ಮೈಲಿಗಲ್ಲುಗಳು ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಯಿಂದ ತುಂಬಿಸುತ್ತವೆ. ಈ ಸಾಧನೆಗಳು ಕೇವಲ ಪ್ರಾರಂಭವಾಗಿವೆ ಮತ್ತು ಭಾರತವು ತನ್ನ ಮೊದಲ ಬುಲೆಟ್ ರೈಲಿನ ಕಾರ್ಯಾಚರಣೆಗೆ ಸಾಕ್ಷಿಯಾಗಲು ಹೆಚ್ಚು ಸಮಯವಿರುವುದಿಲ್ಲ.

ಸ್ನೇಹಿತರೇ,

ಪ್ರಯಾಣ ಆರಂಭಿಕ ನಿಲ್ದಾಣದಿಂದ ಅಂತಿಮ ಗಮ್ಯಸ್ಥಾನದವರೆಗೆ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವುದನ್ನು ಸ್ಮರಣೀಯ ಅನುಭವವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ, ದೇಶಾದ್ಯಂತ 1,300 ಕ್ಕೂ ಹೆಚ್ಚು ಅಮೃತ್ ನಿಲ್ದಾಣಗಳನ್ನು ನವೀಕರಿಸಲಾಗುತ್ತಿದೆ. ಕಳೆದ ದಶಕದಲ್ಲಿ ರೈಲು ಸಂಪರ್ಕವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. 2014 ರಲ್ಲಿ, ದೇಶದಲ್ಲಿ ಕೇವಲ 35% ರೈಲು ಮಾರ್ಗಗಳು ವಿದ್ಯುದ್ದೀಕರಣಗೊಂಡಿವೆ. ಇಂದು, ಭಾರತವು ರೈಲು ಮಾರ್ಗಗಳ 100% ವಿದ್ಯುದ್ದೀಕರಣವನ್ನು ಸಾಧಿಸುವ ಹಂತದಲ್ಲಿದೆ. ಹೆಚ್ಚುವರಿಯಾಗಿ, ನಾವು ರೈಲ್ವೆಗಳ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಿದ್ದೇವೆ. ಕಳೆದ 10 ವರ್ಷಗಳಲ್ಲಿ, 30,000 ಕಿಲೋಮೀಟರ್‌ ಗಳಿಗಿಂತ ಹೆಚ್ಚು ಹೊಸ ರೈಲು ಹಳಿಗಳನ್ನು ಹಾಕಲಾಗಿದೆ ಮತ್ತು ನೂರಾರು ರಸ್ತೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಬ್ರಾಡ್ ಗೇಜ್ ಮಾರ್ಗಗಳಲ್ಲಿ ಮಾನವರಹಿತ ಕ್ರಾಸಿಂಗ್‌ ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ, ಇದರಿಂದಾಗಿ ಅಪಘಾತಗಳನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಮೀಸಲಾದ ಸರಕು ಕಾರಿಡಾರ್‌ ಗಳಂತಹ ಆಧುನಿಕ ರೈಲು ಜಾಲಗಳ ಅಭಿವೃದ್ಧಿಯು ವೇಗವಾಗಿ ಪ್ರಗತಿಯಲ್ಲಿದೆ. ಈ ವಿಶೇಷ ಕಾರಿಡಾರ್‌ ಗಳು ಸಾಮಾನ್ಯ ಹಳಿಗಳ ಮೇಲಿನ ಹೊರೆ ಕಡಿಮೆ ಮಾಡುತ್ತದೆ, ಹೆಚ್ಚಿನ ವೇಗದ ರೈಲು ಕಾರ್ಯಾಚರಣೆಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ.

ಸ್ನೇಹಿತರೇ,

ಭಾರತೀಯ ರೈಲ್ವೆಯಲ್ಲಿ ನಡೆಯುತ್ತಿರುವ ಪರಿವರ್ತನೆಯು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದೆ. ಮೇಡ್-ಇನ್-ಇಂಡಿಯಾ ಉಪಕ್ರಮಗಳ ಪ್ರಚಾರ, ಮೆಟ್ರೋ ಮತ್ತು ರೈಲ್ವೆಗೆ ಆಧುನಿಕ ಬೋಗಿಗಳ ಉತ್ಪಾದನೆ, ನಿಲ್ದಾಣಗಳ ಪುನರಾಭಿವೃದ್ಧಿ, ಸೌರ ಫಲಕಗಳ ಸ್ಥಾಪನೆ ಮತ್ತು ‘ಒಂದು ನಿಲ್ದಾಣ, ಒಂದು ಉತ್ಪನ್ನ’ ದಂತಹ ಉಪಕ್ರಮಗಳ ಅನುಷ್ಠಾನವು ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಕಳೆದ ದಶಕದಲ್ಲಿ, ಲಕ್ಷಾಂತರ ಯುವಕರು ರೈಲ್ವೆಯಲ್ಲಿ ಶಾಶ್ವತ ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದಾರೆ. ಹೊಸ ರೈಲು ಬೋಗಿಗಳನ್ನು ತಯಾರಿಸಲು ಕಚ್ಚಾ ವಸ್ತುಗಳು ಇತರ ಕಾರ್ಖಾನೆಗಳಿಂದ ಬರುತ್ತವೆ ಮತ್ತು ಈ ಕೈಗಾರಿಕೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯು ಹೆಚ್ಚಿನ ಉದ್ಯೋಗಾವಕಾಶಗಳಿಗೆ ಕಾರಣವಾಗುತ್ತದೆ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯವಾಗಿದೆ. ರೈಲ್ವೆ-ನಿರ್ದಿಷ್ಟ ಕೌಶಲ್ಯಗಳನ್ನು ಮತ್ತಷ್ಟು ಬಲಪಡಿಸಲು, ಭಾರತ್ ತನ್ನ ಮೊದಲ ಗತಿ ಶಕ್ತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ, ಇದು ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಸ್ನೇಹಿತರೇ,

ರೈಲ್ವೇ ಜಾಲವು ವಿಸ್ತರಿಸಿದಂತೆ, ಅದಕ್ಕೆ ಅನುಗುಣವಾಗಿ ಹೊಸ ಪ್ರಧಾನ ಕಛೇರಿಗಳು ಮತ್ತು ವಿಭಾಗಗಳನ್ನು ಸ್ಥಾಪಿಸಲಾಗುತ್ತಿದೆ. ಜಮ್ಮು ವಿಭಾಗವು ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರವಲ್ಲದೆ ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನ ಹಲವಾರು ನಗರಗಳಿಗೆ ಪ್ರಯೋಜನವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಇದು ಲೇಹ್-ಲಡಾಖ್ ಜನರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ.

ಸ್ನೇಹಿತರೇ,

ಜಮ್ಮು ಮತ್ತು ಕಾಶ್ಮೀರವು ರೈಲು ಮೂಲಸೌಕರ್ಯದಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗವು ದೇಶಾದ್ಯಂತ ವ್ಯಾಪಕವಾಗಿ ಚರ್ಚಿಸಲ್ಪಡುತ್ತಿದೆ. ಈ ಯೋಜನೆಯು ಭಾರತದ ಉಳಿದ ಭಾಗಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದ ಸಂಪರ್ಕವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಈ ಉಪಕ್ರಮದ ಭಾಗವಾಗಿ, ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ, ಚೆನಾಬ್ ಸೇತುವೆಯನ್ನು ಪೂರ್ಣಗೊಳಿಸಲಾಗಿದೆ. ಇದಲ್ಲದೆ, ಭಾರತದ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆಯಾದ ಅಂಜಿ ಖಾದ್ ಸೇತುವೆಯೂ ಸಹ ಈ ಯೋಜನೆಯ ಒಂದು ಭಾಗವಾಗಿದೆ. ಈ ಎರಡೂ ಅಭೂತಪೂರ್ವ ಎಂಜಿನಿಯರಿಂಗ್ ಸಾಧನೆಗಳಾಗಿದ್ದು, ಈ ಪ್ರದೇಶಕ್ಕೆ ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಯನ್ನು ತರಲು ಸಿದ್ಧವಾಗಿವೆ.

ಸ್ನೇಹಿತರೇ,

ಶ್ರೀ ಜಗನ್ನಾಥನ ಆಶೀರ್ವಾದದೊಂದಿಗೆ, ಒಡಿಶಾವು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ವಿಶಾಲವಾದ ಕರಾವಳಿಯನ್ನು ಹೊಂದಿದ್ದು, ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಅಪಾರ ಸಾಮರ್ಥ್ಯವನ್ನು ಒದಗಿಸುತ್ತದೆ. ಪ್ರಸ್ತುತ, ಒಡಿಶಾದಲ್ಲಿ ಹೊಸ ರೈಲು ಹಳಿಗಳ ಮೇಲೆ ಕೇಂದ್ರೀಕರಿಸಿದ ಹಲವಾರು ಯೋಜನೆಗಳು ನಡೆಯುತ್ತಿವೆ, ₹70,000 ಕೋಟಿಗೂ ಹೆಚ್ಚು ಹೂಡಿಕೆಯೊಂದಿಗೆ. ಏಳು ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ ಗಳನ್ನು ಈಗಾಗಲೇ ರಾಜ್ಯದಲ್ಲಿ ಉದ್ಘಾಟಿಸಲಾಗಿದ್ದು, ವ್ಯಾಪಾರ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇಂದು, ಒಡಿಶಾದಲ್ಲಿ ರಾಯಗಡ ರೈಲ್ವೆ ವಿಭಾಗಕ್ಕೆ ಅಡಿಪಾಯ ಹಾಕಲಾಗಿದ್ದು, ಇದು ರಾಜ್ಯದ ರೈಲ್ವೆ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಬೆಳವಣಿಗೆಯು ಒಡಿಶಾದಲ್ಲಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಗಣನೀಯ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ ಒಡಿಶಾವು ಅಪಾರವಾಗಿ ಪ್ರಯೋಜನ ಪಡೆಯುತ್ತದೆ. ಜನ್ಮನ್ ಯೋಜನೆಯಂತಹ ಉಪಕ್ರಮಗಳ ಮೂಲಕ, ನಾವು ಅತ್ಯಂತ ಹಿಂದುಳಿದ ಬುಡಕಟ್ಟು ಪ್ರದೇಶಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿದ್ದೇವೆ ಮತ್ತು ಈ ಮೂಲಸೌಕರ್ಯವು ಅವರಿಗೆ ವರದಾನವಾಗಲಿದೆ.

ಸ್ನೇಹಿತರೇ,

ಇಂದು ತೆಲಂಗಾಣದ ಚೆರ್ಲಪಲ್ಲಿ ಹೊಸ ಟರ್ಮಿನಲ್ ನಿಲ್ದಾಣವನ್ನು ಉದ್ಘಾಟಿಸಲು ನನಗೆ ಗೌರವವಾಗಿದೆ. ಈ ನಿಲ್ದಾಣವನ್ನು ಹೊರ ವರ್ತುಲ ರಸ್ತೆಗೆ ಸಂಪರ್ಕಿಸುವುದರಿಂದ ಈ ಪ್ರದೇಶದ ಅಭಿವೃದ್ಧಿಗೆ ವೇಗ ದೊರೆಯುತ್ತದೆ. ಈ ನಿಲ್ದಾಣವು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು,  ಅತ್ಯಾಧುನಿಕ ಪ್ಲಾಟ್‌ ಫಾರ್ಮ್‌ಗಳು, ಲಿಫ್ಟ್‌ ಗಳು ಮತ್ತು ಎಸ್ಕಲೇಟರ್‌ ಗಳು ಇದರಲ್ಲಿ ಸೇರಿವೆ. ಈ ನಿಲ್ದಾಣವು ಸೌರಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದು ಗಮನಾರ್ಹ ಅಂಶವಾಗಿದೆ. ಈ ಹೊಸ ರೈಲ್ವೆ ಟರ್ಮಿನಲ್ ಸಿಕಂದರಾಬಾದ್, ಹೈದರಾಬಾದ್ ಮತ್ತು ಕಾಚಿಗುಡದಂತಹ ಅಸ್ತಿತ್ವದಲ್ಲಿರುವ ನಗರ ಟರ್ಮಿನಲ್‌ ಗಳ ಮೇಲಿನ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರಿಗೆ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ. ಈ ಉಪಕ್ರಮವು ಜೀವನವನ್ನು ಸುಲಭಗೊಳಿಸುವುದಲ್ಲದೆ, ವ್ಯಾಪಾರವನ್ನು ಸುಲಭಗೊಳಿಸುತ್ತದೆ.

ಸ್ನೇಹಿತರೇ,

ಇಂದು ದೇಶಾದ್ಯಂತ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಗಮನಾರ್ಹ ಪ್ರಯತ್ನಗಳು ನಡೆಯುತ್ತಿವೆ. ಭಾರತದ ಎಕ್ಸ್‌ಪ್ರೆಸ್‌ ವೇಗಳು, ಜಲಮಾರ್ಗಗಳು ಮತ್ತು ಮೆಟ್ರೋ ಜಾಲಗಳು ಅಭೂತಪೂರ್ವ ವೇಗದಲ್ಲಿ ವಿಸ್ತರಿಸುತ್ತಿವೆ. ದೇಶದ ವಿಮಾನ ನಿಲ್ದಾಣಗಳು ಈಗ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತಿವೆ. 2014ರಲ್ಲಿ, ಭಾರತದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು, ಆದರೆ ಈಗ ಆ ಸಂಖ್ಯೆ ದ್ವಿಗುಣಗೊಂಡು 150ಕ್ಕೂ  ಹೆಚ್ಚಾಗಿದೆ. ಅದೇ ರೀತಿ, 2014ರಲ್ಲಿ, ಕೇವಲ ಐದು ನಗರಗಳಲ್ಲಿ ಮಾತ್ರ ಮೆಟ್ರೋ ಸೇವೆಗಳು ಲಭ್ಯವಿತ್ತು; ಇಂದು, ಅವು 21 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಅಭಿವೃದ್ಧಿಯ ವೇಗ ಮತ್ತು ವಿಸ್ತಾರಕ್ಕೆ  ತಕ್ಕಂತೆ, ಭಾರತೀಯ ರೈಲ್ವೆ ಕೂಡ ನಿರಂತರ ಆಧುನೀಕರಣಕ್ಕೆ ಒಳಗಾಗುತ್ತಿದೆ.

ಸ್ನೇಹಿತರೇ, 

ಈ ಎಲ್ಲಾ ಅಭಿವೃದ್ಧಿ ಉಪಕ್ರಮಗಳು ವಿಕಸಿತ ಭಾರತದ ಮಾರ್ಗಸೂಚಿಯ ಅವಿಭಾಜ್ಯ ಅಂಗವಾಗಿದ್ದು, ಇದು ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಆಕಾಂಕ್ಷೆಯಾಗಿದೆ. ನಾವೆಲ್ಲರೂ ಒಟ್ಟಾಗಿ ಈ ದಿಕ್ಕಿನಲ್ಲಿ ಇನ್ನೂ ಹೆಚ್ಚಿನ ವೇಗದಲ್ಲಿ ಮುನ್ನಡೆಯುತ್ತೇವೆ ಎಂದು ನನಗೆ ವಿಶ್ವಾಸವಿದೆ. ಮತ್ತೊಮ್ಮೆ, ಈ ಸಾಧನೆಗಳಿಗಾಗಿ ನಾನು ಎಲ್ಲಾ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಧನ್ಯವಾದಗಳು.

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.