ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ವಿಪತ್ತಿನಿಂದ ಪುನಶ್ಚೇತರಿಸಬಲ್ಲ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ’ದ 6ನೇ ಆವೃತ್ತಿಯನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಎಲ್ಲ ಗಣ್ಯರಿಗೆ ಆತ್ಮೀಯ ಸ್ವಾಗತ ಕೋರಿದರು ಮತ್ತು ಗಣ್ಯರ ಭಾಗವಹಿಸುವಿಕೆಯು ವಿಪತ್ತಿನಿಂದ ಪುನಶ್ಚೇತರಿಸಬಲ್ಲ ಮೂಲಸೌಕರ್ಯದ ಮಹತ್ವದ ವಿಷಯದ ಬಗ್ಗೆ ಜಾಗತಿಕ ಚರ್ಚೆ ಮತ್ತು ನಿರ್ಧಾರಗಳನ್ನು ಬಲಪಡಿಸುತ್ತದೆ ಎಂದು ಹೇಳಿದರು. 2019ರಲ್ಲಿ ʻವಿಪತ್ತಿನಿಂದ ಪುನಶ್ಚೇತರಿಸಬಲ್ಲ ಮೂಲಸೌಕರ್ಯ ಒಕ್ಕೂಟʼ ಪ್ರಾರಂಭವಾದಾಗಿನಿಂದಲೂ ಅದರ ಪ್ರಭಾವಶಾಲಿ ಬೆಳವಣಿಗೆಯ ಬಗ್ಗೆ ಗಮನ ಸೆಳೆದ ಪ್ರಧಾನಿಯವರು, ಇದು ಈಗ 39 ದೇಶಗಳು ಮತ್ತು 7 ಸಂಸ್ಥೆಗಳ ಜಾಗತಿಕ ಒಕ್ಕೂಟವಾಗಿದೆ ಎಂದು ಒತ್ತಿ ಹೇಳಿದರು. “ಇದು ಭವಿಷ್ಯಕ್ಕೆ ಉತ್ತಮ ಸಂಕೇತವಾಗಿದೆ,” ಎಂದು ಅವರು ಹೇಳಿದರು.
ಹೆಚ್ಚುತ್ತಿರುವ ನೈಸರ್ಗಿಕ ವಿಪತ್ತುಗಳ ಪುನರಾವರ್ತನೆ ಮತ್ತು ತೀವ್ರತೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಅದರಿಂದ ಉಂಟಾದ ಹಾನಿಯನ್ನು ಸಾಮಾನ್ಯವಾಗಿ ಡಾಲರ್ ಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಆದರೆ, ಜನರು, ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಅದರ ನೈಜ ಪರಿಣಾಮವು ಅಂಕಿ-ಸಂಖ್ಯೆಗಳನ್ನು ಮೀರಿದ್ದಾಗಿದೆ ಎಂದು ಒತ್ತಿ ಹೇಳಿದರು. ಮಾನವರ ಮೇಲೆ ನೈಸರ್ಗಿಕ ವಿಪತ್ತುಗಳ ಪರಿಣಾಮದ ಬಗ್ಗೆ ಶ್ರೀ ಮೋದಿ ಅವರು ಗಮನ ಸೆಳೆದರು. ಭೂಕಂಪಗಳು ಮನೆಗಳನ್ನು ನಾಶಪಡಿಸುತ್ತವೆ, ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡುತ್ತವೆ ಮತ್ತು ನೈಸರ್ಗಿಕ ವಿಪತ್ತುಗಳು ನೀರು ಮತ್ತು ಒಳಚರಂಡಿ ವ್ಯವಸ್ಥೆಗಳಿಗೆ ಅಡಚಣೆ ಮಾಡುತ್ತಿವೆ. ಜನರ ಆರೋಗ್ಯವನ್ನು ಅಪಾಯಕ್ಕೆ ಒಡ್ಡುತ್ತಿವೆ ಎಂದು ಉಲ್ಲೇಖಿಸಿದರು. ಇಂಧನ ಸ್ಥಾವರಗಳ ಮೇಲೆ ಪರಿಣಾಮ ಬೀರುವ ನೈಸರ್ಗಿಕ ವಿಪತ್ತುಗಳು ಅಪಾಯಕಾರಿ ಪರಿಸ್ಥಿತಿಗಳಿಗೂ ಕಾರಣವಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು.
“ಉತ್ತಮ ನಾಳೆಗಾಗಿ ನಾವು ಇಂದು ಸ್ಥಿತಿಸ್ಥಾಪಕ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವುದು ಅಗತ್ಯ,” ಎಂದು ಪ್ರಧಾನಿ ಒತ್ತಿ ಹೇಳಿದರು. ವಿಪತ್ತು ನಂತರದ ಪುನರ್ನಿರ್ಮಾಣದ ಭಾಗವಾಗಿರುವಾಗ ಹೊಸ ಮೂಲಸೌಕರ್ಯ ಸೃಷ್ಟಿಯಲ್ಲಿ ಸ್ಥಿತಿಸ್ಥಾಪಕತ್ವವನ್ನು ಪರಿಗಣಿಸಬೇಕು ಎಂದು ಅವರು ಪ್ರತಿಪಾದಿಸಿದರು. ವಿಪತ್ತು ಸಂಭವಿಸಿದ ಬಳಿಕ ಪರಿಹಾರ ಮತ್ತು ಪುನರ್ವಸತಿ ಕೈಗೊಂಡ ನಂತರ ಮೂಲಸೌಕರ್ಯದಲ್ಲಿ ಮರುಚೇತರಿಕೆ ಬಗ್ಗೆ ಗಮನ ಹರಿಸಬೇಕು ಎಂದು ಪ್ರಧಾನಿ ಹೇಳಿದರು.
ಪ್ರಕೃತಿ ಮತ್ತು ವಿಪತ್ತುಗಳಿಗೆ ಯಾವುದೇ ಗಡಿಗಳಿಲ್ಲ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪರಸ್ಪರ ಹೆಚ್ಚು ಸಂಪರ್ಕ ಹೊಂದಿದ ಇಂದಿನ ಜಗತ್ತಿನಲ್ಲಿ ವಿಪತ್ತುಗಳು ಮತ್ತು ಅಡೆತಡೆಗಳು ವ್ಯಾಪಕ ಪರಿಣಾಮ ಬೀರುತ್ತವೆ ಎಂದರು. “ಪ್ರತಿಯೊಂದು ದೇಶವು ವೈಯಕ್ತಿಕವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯ ಹೊಂದಿದಾಗ ಮಾತ್ರ ಜಗತ್ತು ಸಾಮೂಹಿಕವಾಗಿ ಪುನಶ್ಚೇತನ ಸಾಮರ್ಥ್ಯ ಹೊಂದಿರಲು ಸಾಧ್ಯ” ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಅಪಾಯಗಳೂ ಪರಸ್ಪರ ಹಂಚಿಕೆಯ ರೂಪದಲ್ಲಿರುವುದರಿಂದ ಚೇತರಿಕೆಯೂ ಪರಸ್ಪರ ಹಂಚಿಕೆಯ ಸ್ವರೂಪದಲ್ಲಿರಬೇಕಾದ ಮಹತ್ವವನ್ನು ಅವರು ಒತ್ತಿ ಹೇಳಿದರು. ಇದೇ ವೇಳೆ, ʻಸಿಡಿಆರ್‌ಐʼ ಮತ್ತು ಈ ಸಮ್ಮೇಳನವು ಈ ಸಾಮೂಹಿಕ ಉದ್ದೇಶಕ್ಕಾಗಿ ಜಗತ್ತು ಒಗ್ಗೂಡಲು ಸಹಾಯ ಮಾಡುತ್ತವೆ ಎಂದು ಹೇಳಿದರು.
” ಪರಸ್ಪರ ಸಹಕಾರದ ಚೇತರಿಕೆಯನ್ನು ಸಾಧಿಸಲು, ನಾವು ಅತ್ಯಂತ ದುರ್ಬಲರನ್ನು ಬೆಂಬಲಿಸಬೇಕು” ಎಂದು ಪ್ರಧಾನಿ ಕರೆ ನೀಡಿದರು. ಹೆಚ್ಚಿನ ವಿಪತ್ತುಗಳ ಅಪಾಯದಲ್ಲಿರುವ ಸಣ್ಣ ದ್ವೀಪಗಳು, ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಅಂತಹ 13 ಸ್ಥಳಗಳಲ್ಲಿ ಯೋಜನೆಗಳಿಗೆ ಧನಸಹಾಯ ನೀಡುವ ʻಸಿಡಿಆರ್‌ಐʼ ಕಾರ್ಯಕ್ರಮವನ್ನು ಉಲ್ಲೇಖಿಸಿದರು. ಡೊಮಿನಿಕಾದಲ್ಲಿ ಪುನಶ್ಚೇತನಗೊಳ್ಳಬಲ್ಲ ವಸತಿ, ಪಪುವಾ ನ್ಯೂ ಗಿನಿಯಾದಲ್ಲಿ ಪುನಶ್ಚೇತನಗೊಳ್ಳಬಲ್ಲ ಸಾರಿಗೆ ಜಾಲಗಳು ಮತ್ತು ಡೊಮಿನಿಕನ್ ರಿಪಬ್ಲಿಕ್ ಮತ್ತು ಫಿಜಿಯಲ್ಲಿ ಸುಧಾರಿತ ಪೂರ್ವಭಾವಿ ಎಚ್ಚರಿಕೆ ವ್ಯವಸ್ಥೆಗಳ ಉದಾಹರಣೆಗಳನ್ನು ಅವರು ನೀಡಿದರು. ʻಸಿಡಿಆರ್‌ಐʼ ಜಾಗತಿಕ ದಕ್ಷಿಣದ ಕಡೆಗೂ ಗಮನ ಹರಿಸಿರುವ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.
ವಿಪತ್ತು ಅಪಾಯ ತಗ್ಗಿಸುವ ಹೊಸ ಕಾರ್ಯಪಡೆಯನ್ನು ರಚಿಸಿ ಅದಕ್ಕೆ ಹಣಕಾಸು ನೆರವನ್ನು ಒದಗಿಸುವ ವಿಚಾರವು ಭಾರತದ ʻಜಿ-20ʼ ಅಧ್ಯಕ್ಷತೆಯ ಅವಧಿಯಲ್ಲಿ ನಡೆದ ಚರ್ಚೆಗಳ ಪ್ರಮುಖ ಭಾಗವಾಗಿತ್ತು ಎಂದು ಪ್ರಧಾನಿ ಸ್ಮರಿಸಿದರು ಮತ್ತು ಇಂತಹ ಕ್ರಮಗಳು ಸಿಡಿಆರ್‌ಐ ಬೆಳವಣಿಗೆಯೊಂದಿಗೆ ಜಗತ್ತನ್ನು ಪುನಶ್ಚೇತರಿಸಿಕೊಳ್ಳಬಲ್ಲ ಭವಿಷ್ಯಕ್ಕೆ ಕೊಂಡೊಯ್ಯುತ್ತವೆ ಎಂದು ಹೇಳಿದರು. ಮುಂದಿನ ಎರಡು ದಿನಗಳಲ್ಲಿ ʻಐಸಿಡಿಆರ್‌ಐʼನಲ್ಲಿ ಫಲಪ್ರದ ಚರ್ಚೆಗಳು ನಡೆಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಪ್ರಧಾನಿಯವರು ತಮ್ಮ ಮಾತು ಮುಗಿಸಿದರು.
*****