Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಡೋದರದಲ್ಲಿ ವಿಮಾನ ತಯಾರಿಕಾ ಘಟಕದ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಕನ್ನಡ ಅನುವಾದ

ವಡೋದರದಲ್ಲಿ ವಿಮಾನ ತಯಾರಿಕಾ ಘಟಕದ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಕನ್ನಡ ಅನುವಾದ


ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಜಿ, ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಜಿ, ನನ್ನ ಸಂಪುಟ ಸಹೋದ್ಯೋಗಿ ಮತ್ತು ದೇಶದ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಜಿ, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಜಿ, ಟಾಟಾ ಸನ್ಸ್ನ ಅಧ್ಯಕ್ಷರು, ಏರ್ಬಸ್ ಇಂಟರ್ನ್ಯಾಷನಲ್ನ ಮುಖ್ಯ ವಾಣಿಜ್ಯ ಅಧಿಕಾರಿ, ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರೂ, ಮಹನೀಯರೆ ಮತ್ತು ಮಹಿಳೆಯರೇ..!

ನಮಸ್ಕಾರ !

ಗುಜರಾತಿನಲ್ಲಿ ದೀಪಾವಳಿಯು ದೇವ ದೀಪಾವಳಿಯವರೆಗೆ ಆಚರಿಸಲಾಗುತ್ತದೆ. ಮತ್ತು ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಡೋದರಾ, ಗುಜರಾತ್ ಮತ್ತು ಇಡೀ ದೇಶಕ್ಕೆ ಬೆಲೆ ಕಟ್ಟಲಾಗದ ಉಡುಗೊರೆ ಲಭಿಸಿದೆ. ಗುಜರಾತ್ಗೆ ಇದು ಹೊಸ ವರ್ಷವಾಗಿದ್ದು, ಹೊಸ ವರ್ಷದಲ್ಲಿ ನಾನು ಮೊದಲ ಬಾರಿಗೆ ಗುಜರಾತ್ಗೆ ಬಂದಿದ್ದೇನೆ. ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.. !

ನಾವು ಇಂದು ಭಾರತವನ್ನು ವಿಶ್ವದ ಪ್ರಮುಖ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಿದ್ದೇವೆ. ಭಾರತ ಇಂದು ತನ್ನದೇ ಆದ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇಂದು ಭಾರತ ತನ್ನದೇ ಆದ ಟ್ಯಾಂಕರ್ಗಳು ಮತ್ತು ಜಲಾಂತರ್ಗಾಮಿಗಳನ್ನು ತಯಾರಿಸುತ್ತಿದೆ. ಇದಲ್ಲದೆ, “ಮೇಡ್ ಇನ್ ಇಂಡಿಯಾ” ಔಷಧಿಗಳು ಮತ್ತು ಲಸಿಕೆಗಳು ಇಂದು ವಿಶ್ವದ ಲಕ್ಷಾಂತರ ಜನರ ಜೀವಗಳನ್ನು ಉಳಿಸುತ್ತಿವೆ. ಭಾರತದಲ್ಲಿಯೇ ತಯಾರಿಸಿದ ಮೇಡ್ ಇನ್ ಇಂಡಿಯಾ ವಿದ್ಯುನ್ಮಾನ ಸಾಧನಗಳು, ಮೊಬೈಲ್ ಫೋನ್ಗಳು ಮತ್ತು ಕಾರುಗಳು ಇಂದು ಜಗತ್ತಿನ ಅನೇಕ ದೇಶಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿವೆ. “ಮೇಕ್ ಇನ್ ಇಂಡಿಯಾ” ಮತ್ತು “ಮೇಕ್ ಫಾರ್ ದಿ ಗ್ಲೋಬ್” ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿರುವ ಭಾರತ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಲೇ ಇದೆ. ಈಗ ಭಾರತವು ಪ್ರಯಾಣಿಕರ ವಿಮಾನಗಳ ಪ್ರಮುಖ ತಯಾರಕ ರಾಷ್ಟ್ರವಾಗಲಿದೆ. ಇದು ಇಂದು ಭಾರತದಲ್ಲಿ ಆರಂಭವಾಗಿದೆ ಮತ್ತು ವಿಶ್ವದ ಅತಿ ದೊಡ್ಡ ಪ್ರಯಾಣಿಕರ ವಿಮಾನಗಳು ಭಾರತದಲ್ಲಿ ತಯಾರಾಗುವ ದಿನಗಳನ್ನು ನಾನು ದೃಶ್ಯರೂಪದಲ್ಲಿ ನೋಡುತ್ತಿದ್ದೇನೆ ಮತ್ತು ಅವುಗಳು “ಮೇಕ್ ಇನ್ ಇಂಡಿಯಾ” ಎಂಬ ಗುರುತನ್ನೂ ಸಹ ಹೊಂದಿರಲಿವೆ. 

ಮಿತ್ರರೇ, 

ವಡೋದರಾದಲ್ಲಿ ಇಂದು ಶಂಕುಸ್ಥಾಪನೆ ನೆರವೇರಿಸಲಾದ ಸೌಕರ್ಯವು ದೇಶದ ರಕ್ಷಣಾ ಮತ್ತು ವೈಮಾನಿಕ ವಲಯಗಳನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ. ಭಾರತದ ರಕ್ಷಣಾ ವೈಮಾನಿಕ ವಲಯದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲಾಗುತ್ತಿದೆ. ಇಲ್ಲಿ ತಯಾರಾಗುತ್ತಿರುವ ಪ್ರಯಾಣಿಕರ ವಿಮಾನಗಳು ನಮ್ಮ ಸೇನೆಯನ್ನು ಬಲವರ್ಧನೆಗೊಳಿಸುವುದಲ್ಲದೆ, ವಿಮಾನ ತಯಾರಿಕೆಗೆ ಹೊಸ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿದೆ. ಶಿಕ್ಷಣ ಮತ್ತು ಸಂಸ್ಕೃತಿಯ ಕೇಂದ್ರವೆಂದು ಜನಪ್ರಿಯವಾಗಿರುವ ವಡೋದರಾ ಈಗ ಈ ಹೊಸ ಗುರುತಿನೊಂದಿಗೆ ಜಗತ್ತಿನ ಮುಂದೆ ವೈಮಾನಿಕ ಕ್ಷೇತ್ರದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಭಾರತವು ಈಗಾಗಲೇ ಅನೇಕ ದೇಶಗಳಿಗೆ ವಿಮಾನದ ಸಣ್ಣ ಭಾಗಗಳನ್ನು ರಫ್ತು ಮಾಡುತ್ತಿದ್ದರೂ, ಈಗ ದೇಶದಲ್ಲೇ ಮೊದಲ ಬಾರಿಗೆ ಪ್ರಯಾಣಿಕರ ಮಿಲಿಟರಿ ವಿಮಾನಗಳನ್ನು ತಯಾರಿಸಲು ಹೊರಟಿದೆ. ಅದಕ್ಕಾಗಿ ನಾನು ಟಾಟಾ ಗ್ರೂಪ್ ಮತ್ತು ಏರ್ಬಸ್ ಡಿಫೆನ್ಸ್ ಕಂಪನಿಗೆ  ಶುಭಾಶಯಗಳನ್ನು ತಿಳಿಸುತ್ತೇನೆ. ಭಾರತದ ೧೦೦ ಕ್ಕೂ ಹೆಚ್ಚು ಎಂಎಸ್ಎಂಇಗಳು ಈ ಯೋಜನೆಗೆ ಜೈ ಜೋಡಿಸಿವೆ ಎಂಬುದು ನನಗೆ ತಿಳಿಸಿದೆ. ಭವಿಷ್ಯದಲ್ಲಿ, ವಿಶ್ವದ ಇತರೆ ದೇಶಗಳಿಗೆ ರಫ್ತು ಮಾಡಲು ಇಲ್ಲಿ
ಬೇಡಿಕೆಗಳನ್ನು ಪಡೆದುಕೊಳ್ಳಬಹುದು. ಅದೇನೆಂದರೆ ‘ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ಫಾರ್ ದಿ ಗ್ಲೋಬ್’ ಎಂಬ ಸಂಕಲ್ಪವೂ ಈ ನೆಲದಿಂದಲೇ ಗಟ್ಟಿಯಾಗಲಿದೆ.

ಮಿತ್ರರೇ, 

ಭಾರತದಲ್ಲಿ ಇಂದು ನಾವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರವನ್ನು ಹೊಂದಿದ್ದೇವೆ. ವಿಮಾನ ಸಂಚಾರ ದಟ್ಟಣೆಯಲ್ಲಿ ನಾವು ವಿಶ್ವದ ಅಗ್ರ ಮೂರು ದೇಶಗಳನ್ನು ತಲುಪುವ ಹಂತದಲ್ಲಿದ್ದೇವೆ. ಮುಂದಿನ  4-5 ವರ್ಷಗಳಲ್ಲಿ ಕೋಟಿಗಟ್ಟಲೆ ಹೊಸ ಪ್ರಯಾಣಿಕರು ವಿಮಾನ ಪ್ರಯಾಣಿಕರಾಗಲಿದ್ದಾರೆ. ಉಡಾನ್ ಯೋಜನೆ ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಸಹಕಾರಿಯಾಗಿದೆ. ಮುಂಬರುವ 10-15 ವರ್ಷಗಳಲ್ಲಿ ಭಾರತಕ್ಕೆ ಸುಮಾರು  2000 ಅಧಿಕ ಪ್ರಯಾಣಿಕ ಮತ್ತು ಸರಕು ಸಾಗಣೆ ವಿಮಾನಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಭಾರತಕ್ಕೆ ಮಾತ್ರ 2000 ವಿಮಾನಗಳ ಅಗತ್ಯವಿದೆ; ಇದು ಅಭಿವೃದ್ಧಿ ಎಷ್ಟು ವೇಗವಾಗಿ ನಡೆಯುತ್ತದೆ ಎಂಬುದನ್ನು ತೋರಿಸುತ್ತದೆ..! ಈ ಭಾರಿ ಬೇಡಿಕೆಯನ್ನು ಪೂರೈಸಲು ಭಾರತ ಈಗಾಗಲೇ ಸಿದ್ಧತೆ ನಡೆಸುತ್ತಿದೆ. ಇಂದಿನ ಕಾರ್ಯಕ್ರಮವೂ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಮಿತ್ರರೇ,

ಇಂದಿನ ಈ ಕಾರ್ಯಕ್ರಮವು ಜಗತ್ತಿಗೆ ಸಂದೇಶವನ್ನೂ ನೀಡುತ್ತದೆ. ಭಾರತ ಇಂದು ವಿಶ್ವಕ್ಕೆ ಸುವರ್ಣಾವಕಾಶ ನೀಡುತ್ತಿದೆ. ಪೂರೈಕೆ-ಸರಪಳಿಯಲ್ಲಿನ ಅಡಚಣೆಗಳು ಮತ್ತು ಕರೋನಾ ಸಾಂಕ್ರಾಮಿಕ ಮತ್ತು ಯುದ್ಧವು ಸೃಷ್ಟಿಸಿದ ಸಂದರ್ಭಗಳ ಹೊರತಾಗಿಯೂ ಭಾರತದ ಉತ್ಪಾದನಾ ವಲಯವು ಬೆಳವಣಿಗೆಯ ವೇಗವನ್ನು ಮುಂದುವರಿಸಿದೆ. ಇದೇನು ಏಕಾಏಕಿಯಾದದ್ದಲ್ಲ. ಭಾರತದಲ್ಲಿ ಇಂದು ಕಾರ್ಯಾಚರಣೆಯ ಪರಿಸ್ಥಿತಿಗಳು ನಿರಂತರವಾಗಿ ಸುಧಾರಿಸುತ್ತಿವೆ. ಭಾರತವು ಇಂದು ವೆಚ್ಚದ ಸ್ಪರ್ಧಾತ್ಮಕತೆ ಮತ್ತು ಗುಣಮಟ್ಟಕ್ಕೆ ಒತ್ತು ನೀಡುತ್ತಿದೆ. ಭಾರತವು ಇಂದು ಕಡಿಮೆ ವೆಚ್ಚದ ಉತ್ಪಾದನೆ ಮತ್ತು ಗರಿಷ್ಠ ಉತ್ಪಾದನೆಗೆ ಅವಕಾಶಗಳನ್ನು ಒದಗಿಸುತ್ತಿದೆ. ಭಾರತವು ಇಂದು ಪ್ರತಿಭಾವಂತ ಮತ್ತು ನುರಿತ ಮಾನವಶಕ್ತಿಯ ದೊಡ್ಡ ಸಮೂಹವನ್ನು ಹೊಂದಿದೆ. ಕಳೆದ ಎಂಟು ವರ್ಷಗಳಲ್ಲಿ ನಮ್ಮ ಸರ್ಕಾರ ಕೈಗೊಂಡ ಸುಧಾರಣೆಗಳು ಭಾರತದಲ್ಲಿ ಅತ್ಯುತ್ತಮ  ಉತ್ಪಾದನಾ ವಾತಾವರಣವನ್ನು ಸೃಷ್ಟಿಸಿವೆ. ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಿಸುವ ಕಾರ್ಯಕ್ಕೆ ಹಿಂದೆಂದೂ ನೀಡದಷ್ಟು ಒತ್ತು ನೀಡಿದೆ. ಕಾರ್ಪೊರೇಟ್ ತೆರಿಗೆ ಪದ್ದತಿಯ ಸರಳೀಕರಣ, ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವುದು, ಹಲವು ವಲಯಗಳಲ್ಲಿ ಸ್ವಯಂಚಾಲಿತ ಮಾರ್ಗದ ಮೂಲಕ ಶೇ.೧೦೦ರಷ್ಟು ಎಫ್ಡಿಐಗೆ ಅವಕಾಶ ನೀಡುವುದು, ರಕ್ಷಣೆ, ಗಣಿಗಾರಿಕೆ, ಬಾಹ್ಯಾಕಾಶದಂತಹ  ಖಾಸಗಿ ಕಂಪನಿಗಳಿಗೆ ಹಲವು ವಲಯಗಳನ್ನು ಮುಕ್ತಗೊಳಿಸಿರುವುದು, ಕಾರ್ಮಿಕ ಸುಧಾರಣೆಗಳನ್ನು ತರುವುದು, 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಕೇವಲ 4 ಸಂಹಿತೆಗಳನ್ನಾಗಿ ಪರಿವರ್ತಿಸುವುದು, 33 ಸಾವಿರಕ್ಕೂ ಅಧಿಕ ನಿಯಮ ಪಾಲನೆಗಳನ್ನು ರದ್ದುಪಡಿಸುವುದು ಮತ್ತು ಡಜನ್ಗಟ್ಟಲೆ ತೆರಿಗೆಗಳ ಜಾಲವನ್ನು ತೆಗೆದುಹಾಕುವುದು ಮತ್ತು ಒಂದೇ ಸರಕು ಮತ್ತು ಸೇವಾ ತೆರಿಗೆಯನ್ನು ರಚಿಸುವುದು ಮತ್ತಿತರ ಆರ್ಥಿಕ ಸುಧಾರಣೆಗಳ ಹೊಸ ಯುಗವನ್ನು ಭಾರತದಲ್ಲಿ ಬರೆಯಲಾಗಿದೆ. ನಮ್ಮ ಉತ್ಪಾದನಾ ವಲಯವು ಈ ಸುಧಾರಣೆಗಳ ಲಾಭವನ್ನು ಪಡೆಯುತ್ತಿದೆ.

ಮತ್ತು ಮಿತ್ರರೇ,

ಈ ಯಶಸ್ಸಿನ ಹಿಂದೆ ಇನ್ನೊಂದು ಪ್ರಮುಖ ಕಾರಣವಿದೆ. ಅದೆಂದರೆ ಮನಸ್ಥಿತಿಯ ಬದಲಾವಣೆಯೇ ದೊಡ್ಡ ಕಾರಣ ಎಂದು ನಾನು ಹೇಳುತ್ತೇನೆ. ಸರ್ಕಾರಕ್ಕೆ ಮಾತ್ರ ಎಲ್ಲವೂ ಗೊತ್ತು, ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂಬ ಮನೋಭಾವನೆಯಿಂದ ಸರ್ಕಾರಗಳು ಹಿಂದಿನಿಂದಲೂ ಆಡಳಿತ ನಡೆಸುತ್ತಿವೆ. ಈ ಮನಸ್ಥಿತಿಯು ದೇಶದ ಪ್ರತಿಭೆಯನ್ನು ನಿರ್ಲಕ್ಷಿಸಿತು ಮತ್ತು ಭಾರತದ ಖಾಸಗಿ ವಲಯವನ್ನು ಬೆಳೆಯಲು ಬಿಡಲಿಲ್ಲ. “ಸಬ್ ಕಾ ಪ್ರಯಾಸ್” ಎಂಬ ಮನೋಭಾವದೊಂದಿಗೆ ಮುನ್ನಡೆಯುತ್ತಿರುವ ದೇಶವು ಈಗ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಿಗೆ ಸಮಾನ ಮಹತ್ವವನ್ನು ನೀಡಲಾರಂಭಿಸಿದೆ.

ಮಿತ್ರರೇ,

ಹಿಂದಿನ ಸರ್ಕಾರಗಳು ಸಮಸ್ಯೆಗಳಿಂದ ನುಣಿಚಿಕೊಳ್ಳುವ ಮನಸ್ಸು ಹೊಂದಿದ್ದವು ಮತ್ತು ಅವರು ಕೆಲವು ಸಬ್ಸಿಡಿಗಳನ್ನು ನೀಡುವ ಮೂಲಕ ಉತ್ಪಾದನಾ ವಲಯವನ್ನು ನಡೆಸುತ್ತಿದ್ದರು. ಈ ಮನಸ್ಥಿತಿಯು ಭಾರತದ ಉತ್ಪಾದನಾ ವಲಯಕ್ಕೆ ಸಾಕಷ್ಟು ಹಾನಿ ಮಾಡಿದೆ. ಪರಿಣಾಮವಾಗಿ, ಈ ಮೊದಲು ಯಾವುದೇ ಸಮಗ್ರ ನೀತಿಯನ್ನು ರೂಪಿಸಲಾಗಿಲ್ಲ ಮತ್ತು ಸಾಗಣೆ, ವಿದ್ಯುತ್ ಪೂರೈಕೆ ಮತ್ತು ನೀರು ಪೂರೈಕೆಯ ಅಗತ್ಯಗಳನ್ನು ನಿರ್ಲಕ್ಷಿಸಲಾಯಿತು. ನನ್ನ ದೇಶದ ಯುವ ಪೀಳಿಗೆ ಈ ಮನಸ್ಥಿತಿಯ ಫಲಿತಾಂಶವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲದು. ಈಗ ಭಾರತವು ಹೊಸ ಮನಸ್ಥಿತಿ ಮತ್ತು ಹೊಸ ದುಡಿಯುವ ಸಂಸ್ಕೃತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ನಾವು ನಿರ್ಲಕ್ಷ್ಯ ಮನೋಭಾವದ ವಿಧಾನಗಳನ್ನು ಕೈಬಿಟ್ಟಿದ್ದೇವೆ ಮತ್ತು ಹೂಡಿಕೆದಾರರಿಗೆ ಬೆಳವಣಿಗೆಗಾಗಿ ಹಲವು  ಪ್ರೋತ್ಸಾಹಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಉತ್ಪಾದನೆ ಆಧರಿತ ಪ್ರೋತ್ಸಾಹಕ ಯೋಜನೆಯನ್ನು ಆರಂಭಿಸಿದ್ದು, ಇದರಿಂದ ಆಗಿರುವ ಬದಲಾವಣೆಗಳು ಗೋಚರಿಸುತ್ತೇವೆ. ಇಂದು ನಮ್ಮ ನೀತಿಯು ಸ್ಥಿರವಾಗಿದೆ, ದೃಢವಾಗಿದೆ ಮತ್ತು ಭವಿಷ್ಯಾಧಾರಿತವಾಗಿದೆ. ನಾವು ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ (ಸರಕು ಸಾಗಣೆ) ನೀತಿಗಳ ಮೂಲಕ ದೇಶದ ಸರಕು ಸಾಗಣೆ ವ್ಯವಸ್ಥೆಯನ್ನು ಸುಧಾರಿಸುತ್ತಿದ್ದೇವೆ.

ಮಿತ್ರರೇ,

ಮೊದಲು ಮತ್ತೊಂದು ಮನಸ್ಥಿತಿ ಇತ್ತು, ಅಂದರೆ, “ಭಾರತವು ಉತ್ಪಾದನೆಯಲ್ಲಿ ಶ್ರೇಷ್ಠ ಸಾಧನೆ ಮಾಡಲು  ಸಾಧ್ಯವಿಲ್ಲ, ಆದ್ದರಿಂದ ಅದು ಸೇವಾ ಕ್ಷೇತ್ರದತ್ತ ಮಾತ್ರ ಗಮನಹರಿಸಬೇಕು” ಎಂಬುದು. ನಾವು ಇಂದು ಕೇವಲ ಸೇವಾ ವಲಯದತ್ತ ಗಮನಹರಿಸದೆ ಉತ್ಪಾದನಾ ವಲಯವನ್ನೂ ಸಹ ಶ್ರೀಮಂತಗೊಳಿಸುತ್ತಿದ್ದೇವೆ. ಇಂದು ವಿಶ್ವದ ಯಾವುದೇ ದೇಶವು ಕೇವಲ ಸೇವಾ ವಲಯವನ್ನು ಅಥವಾ ಉತ್ಪಾದನಾ ವಲಯವನ್ನು ಮಾತ್ರ ಅಭಿವೃದ್ಧಿಪಡಿಸುವುದರಿಂದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ನಾವು ಅಭಿವೃದ್ಧಿಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಮತ್ತು ಇಂದಿನ ನವ ಭಾರತವೂ ಅದೇ ಹಾದಿಯಲ್ಲಿ ಆತ್ಮವಿಶ್ವಾಸದಿಂದ ಸಾಗಿದೆ. ನಮ್ಮಲ್ಲಿ ನುರಿತ ಮಾನವಶಕ್ತಿಯ ಕೊರತೆಯಿದೆ ಎಂಬ ಮತ್ತೊಂದು ಸೀಮಿತ ನಂಬಿಕೆ ಇತ್ತು. ಹಾಗಾಗಿ, ದೇಶದ ಕೌಶಲ್ಯಗಳಲ್ಲಿ ವಿಶ್ವಾಸದ ಕೊರತೆ ಇತ್ತು; ದೇಶದ ಪ್ರತಿಭೆಗಳ ಮೇಲೆ ನಂಬಿಕೆಯ ಕೊರತೆ ಇತ್ತು. ಆದ್ದರಿಂದ, ಉತ್ಪಾದನಾ ಕ್ಷೇತ್ರದ ಬಗ್ಗೆ ಒಂದು ರೀತಿಯ ಅಸಡ್ಡೆ ಇತ್ತು ಮತ್ತು ಕಡಿಮೆ ಗಮನವನ್ನು ನೀಡಲಾಯಿತು. ಆದರೆ ಇಂದು ಉತ್ಪಾದನೆಯ ವಿಷಯದಲ್ಲಿಯೂ ಭಾರತ ಮುಂಚೂಣಿಯಲ್ಲಿರಲು ಸಿದ್ಧವಾಗುತ್ತಿದೆ. ಸೆಮಿಕಂಡಕ್ಟರ್ಗಳಿಂದ ವಿಮಾನಗಳವರೆಗೆ, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರಬೇಕು ಎಂಬ ಉದ್ದೇಶದಿಂದ ಬೆಳೆಯುತ್ತಿದ್ದೇವೆ. ಕಳೆದ 8 ವರ್ಷಗಳಲ್ಲಿ ನಾವು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿದ್ದರಿಂದ ಮತ್ತು ಅದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸಿದ್ದರಿಂದ ಇದು ಸಾಧ್ಯವಾಯಿತು. ಈ ಎಲ್ಲಾ ಬದಲಾವಣೆಗಳನ್ನು ಸಂಯೋಜಿಸುವ ಮೂಲಕ, ಇಂದು ಉತ್ಪಾದನಾ ವಲಯದಲಿ ಭಾರತದ ಅಭಿವೃದ್ಧಿ ಪಯಣ ಈ ಹಂತವನ್ನು ತಲುಪಿದೆ.

ಮಿತ್ರರೇ,

ನಮ್ಮ ಸರ್ಕಾರದ ಹೂಡಿಕೆ ಸ್ನೇಹಿ ನೀತಿಗಳ ಫಲ ಎಫ್ಡಿಐನಲ್ಲಿಯೂ ಗೋಚರಿಸುತ್ತದೆ. ಕಳೆದ ಎಂಟು ವರ್ಷಗಳಲ್ಲಿ 160ಕ್ಕೂ ಹೆಚ್ಚು ದೇಶಗಳ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಮತ್ತು ಈ ವಿದೇಶಿ ಹೂಡಿಕೆ ಕೆಲವು ಕೈಗಾರಿಕೆಗಳಲ್ಲಿ ಮಾತ್ರ ಬಂದಿದೆ ಎಂದಲ್ಲ. ಈ ಹೂಡಿಕೆಯು ಆರ್ಥಿಕತೆಯ 60 ಕ್ಕೂ ಹೆಚ್ಚು ವಲಯಗಳನ್ನು ಒಳಗೊಂಡಿದೆ ಮತ್ತು 31ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತಲುಪಿದೆ. ವೈಮಾನಿಕ ವಲಯದಲ್ಲಿಯೇ 3 ಶತಕೋಟಿ ಡಾಲರ್ ಗೂ ಅಧಿಕ  ಹೂಡಿಕೆ ಮಾಡಲಾಗಿದೆ. 2000 ರಿಂದ  2014 ರವರೆಗಿನ  14 ವರ್ಷಗಳಿಗೆ ಹೋಲಿಸಿದರೆ ಈ ಎಂಟು ವರ್ಷಗಳಲ್ಲಿ ಈ ವಲಯದಲ್ಲಿನ ಹೂಡಿಕೆಯು ಐದು ಪಟ್ಟು ಹೆಚ್ಚಾಗಿದೆ. ಮುಂಬರುವ ವರ್ಷಗಳಲ್ಲಿ ರಕ್ಷಣಾ ಮತ್ತು ವೈಮಾನಿಕ ವಲಯಗಳು ‘ಆತ್ಮನಿರ್ಭರ
ಭಾರತ ಅಭಿಯಾನದ ಪ್ರಮುಖ ಆಧಾರಸ್ತಂಭಗಳಾಗಲಿವೆ. 2025ರ ವೇಳೆಗೆ ನಮ್ಮ ರಕ್ಷಣಾ ಉತ್ಪಾದನೆಯನ್ನು 25 ಶತಕೋಟಿ ಡಾಲರ್ ಗೂ ಅಧಿಕಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ರಕ್ಷಣಾ ರಫ್ತುಗಳು 5 ಶತಕೋಟಿ ಡಾಲರ್ ಗುರಿಯನ್ನು ಮೀರುತ್ತದೆ. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ರಕ್ಷಣಾ ಕಾರಿಡಾರ್ಗಳು ಈ ವಲಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇಂದು ನಾನು ದೇಶದ ರಕ್ಷಣಾ ಸಚಿವಾಲಯ ಮತ್ತು ಗುಜರಾತ್ ಸರ್ಕಾರವನ್ನು ಶ್ಲಾಘಿಸುತ್ತೇನೆ. ಕೆಲವು ದಿನಗಳ ಹಿಂದೆ ಅವರು ಗಾಂಧಿನಗರದಲ್ಲಿ ಅದ್ಭುತವಾದ ಡಿಫ್ ಎಕ್ಸ್ಪೋ ವನ್ನು ಆಯೋಜಿಸಿದ್ದನ್ನು ನೀವು ನೋಡಿರಬೇಕು. ನಾನಾ ರಕ್ಷಣಾ ಸಾಧನಗಳಿಗೆ ಸಂಬಂಧಿಸಿದ ಪ್ರಮುಖ ಪ್ರದರ್ಶನ ಅದಾಗಿತ್ತು. ಮತ್ತು ಇದು ಅತ್ಯಂತ ದೊಡ್ಡ ಡಿಫ್-ಎಕ್ಸ್ಪೋ ಎಂದು ಹೇಳಲು ನಿಜಕ್ಕೂ ನನಗೆ ಸಂತೋಷವಾಗುತ್ತಿದೆ.  ಹಾಗಾಗಿ ನಾನು ರಾಜನಾಥ್ ಸಿಂಗ್ ಜಿ ಅವರನ್ನು ಅಭಿನಂದಿಸುತ್ತೇನೆ. ಡಿಫ್-ಎಕ್ಸ್ಪೋದಲ್ಲಿ ಪ್ರದರ್ಶಿಸಲಾದ ಎಲ್ಲಾ ಉಪಕರಣಗಳು ಮತ್ತು ತಂತ್ರಜ್ಞಾನಗಳು “ಮೇಡ್ ಇನ್ ಇಂಡಿಯಾ” ಆಗಿರುವುದು ಈ ಕಾರ್ಯಕ್ರಮದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಅಂದರೆ, ಪ್ರಾಜೆಕ್ಟ್ ಸಿ-295ನ ಪ್ರತಿಬಿಂಬವು ಭವಿಷ್ಯದ ಡಿಫ್-ಎಕ್ಸ್ಪಫೋದಲ್ಲಿ ನಮಗೆ ಗೋಚರಿಸುತ್ತದೆ. ಅದಕ್ಕಾಗಿ ನಾನು ಟಾಟಾ ಗ್ರೂಪ್ ಮತ್ತು ಏರ್ ಬಸ್ ಗೆ ಶುಭಾಶಯ ತಿಳಿಸುತ್ತೇನೆ.

ಮಿತ್ರರೇ,

ಇಂದು, ಈ ಐತಿಹಾಸಿಕ ಸಂದರ್ಭದಲ್ಲಿ, ಉದ್ಯಮದೊಂದಿಗೆ ಸಂಬಂಧ ಹೊಂದಿರುವ ನನ್ನೆಲ್ಲಾ ಸ್ನೇಹಿತರಿಗೆ ಒಂದು ಮನವಿಯನ್ನು ಪುನರುಚ್ಚರಿಸಲು ಬಯಸುತ್ತೇನೆ ಮತ್ತು ಈ ಮಹತ್ವದ ಘಟನೆಗೆ ಸಾಕ್ಷಿಯಾಗಲು ಎಲ್ಲ ಉದ್ಯಮದ ಪ್ರಮುಖರು ಮತ್ತು ನಾನಾ ವಲಯಗಳ ದಿಗ್ಗಜರು ಇಂದು ನಮ್ಮೊಂದಿಗೆ ಸೇರಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಈ ಸಮಯದಲ್ಲಿ ದೇಶದಲ್ಲಿ ನಿರ್ಮಿಸಲಾದ ಅತ್ಯುತ್ತಮ ಹೂಡಿಕೆ ವಿಶ್ವಾಸದಿಂದ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯನ್ನು ಮಾಡಿ. ನೀವು ಸಾಧ್ಯವಾದಷ್ಟು ಬಿರುಸಿನಿಂದ ಮುಂದುವರಿಯಿರಿ, ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ದೇಶದ ನವೋದ್ಯಮಗಳು  ಮುಂದುವರಿಯಲು ಸಹಾಯ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಲು ಉದ್ಯಮದಲ್ಲಿ ನೆಲೆನಿಂತಿರುವ ಕಂಪನಿಗಳನ್ನು  ನಾನು ಆಗ್ರಹಿಸುತ್ತೇನೆ. ದೇಶಾದ್ಯಂತ ನಮ್ಮ ಯುವಜನರ ಸ್ಟಾರ್ಟ್ಅಪ್ಗಳನ್ನು ಅಧ್ಯಯನ ಮಾಡಲು ಎಲ್ಲ ಪ್ರಮುಖ ಕೈಗಾರಿಕೆಗಳು ಒಂದು ’ಸ್ಟಾರ್ಟ್-ಅಪ್ ಕೋಶ’ವನ್ನು ರಚಿಸಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಸಂಶೋಧನೆಯು ಅವರ ಕೆಲಸವನ್ನು ಹೇಗೆ ಹೊಂದಿಸಬಹುದು? ಅವರಿಗೆ ಕೈ ಜೋಡಿಸಿ ಮತ್ತು ನೀವು ಹೇಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದನ್ನು ನೀವು ನೋಡುತ್ತೀರಿ, ಆದರೆ ಆ ಯುವಕರು ಸಹ ಸ್ಟಾರ್ಟ್-ಅಪ್ಗಳ ಜಗತ್ತಿನಲ್ಲಿ ಭಾರತಕ್ಕೆ ಕೀರ್ತಿ ತರುತ್ತಿದ್ದಾರೆ. ಅವರ ಶಕ್ತಿಯೂ ಸಹ ಹಲವು ಪಟ್ಟು ಹೆಚ್ಚಾಗುತ್ತದೆ. ಸಂಶೋಧನೆಯಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಇನ್ನೂ ಸೀಮಿತವಾಗಿದೆ. ನಾವು ಇದನ್ನು ಒಟ್ಟಾಗಿ ಹೆಚ್ಚಿಸಿದರೆ, ನಾವೀನ್ಯ ಮತ್ತು ಉತ್ಪಾದನೆಯ ಸುದೃಢ ಪೂರಕ  ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಸಬ್ ಕಾ ಪ್ರಯಾಸ್ ಎಂಬ ಮಂತ್ರವು ನಮಗೆಲ್ಲರಿಗೂ ಉಪಯುಕ್ತವಾಗಿದೆ ಮತ್ತು ನಮಗೆಲ್ಲರಿಗೂ ಮಾರ್ಗದರ್ಶನ ನೀಡುತ್ತದೆ. ಮತ್ತು ನಾವು ಅದೇ ದಾರಿಯಲ್ಲಿ ನಡೆಯಬೇಕು. ಮತ್ತೊಮ್ಮೆ, ಈ ಆಧುನಿಕ ವಿಮಾನ ತಯಾರಿಕಾ ಸೌಕರ್ಯಕ್ಕಾಗಿ ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ದೇಶದ ಯುವಕರಿಗೆ ಹಲವು ಹೊಸ ಅವಕಾಶಗಳು ಕಾದಿವೆ. ದೇಶದ ಯುವ ಪೀಳಿಗೆಗೂ ನನ್ನ ವಿಶೇಷ ಶುಭಾಶಯಗಳನ್ನು ತಿಳಿಸುತ್ತೇನೆ.

ತುಂಬಾ ಧನ್ಯವಾದಗಳು !

ಘೋಷಣೆ:  ಇದು ಪ್ರಧಾನಿ ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು. 

******