Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ (ಪೋಕ್ಸೋ) ಕಾಯಿದೆ 2012ರ ತಿದ್ದುಪಡಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಕ್ಕಳ ವಿರುದ್ಧ ಲೈಂಗಿಕ ಅಪರಾಧ ಎಸಗುವವರಿಗೆ ವಿಧಿಸುವ ಶಿಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸಲು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ (ಪೋಕ್ಸೋ) ಕಾಯಿದೆ 2012ಕ್ಕೆ ತರಲುದ್ದೇಶಿಸಿರುವ ತಿದ್ದುಪಡಿಗಳಿಗೆ ತನ್ನ ಅನುಮೋದನೆ ನೀಡಿದೆ.

 

ಪ್ರಮುಖ ಅಂಶಗಳು:

 

             i.       ಮಕ್ಕಳನ್ನು ಲೈಂಗಿಕ ಆಕ್ರಮಣ, ಲೈಂಗಿಕ ಕಿರುಕುಳದಿಂದ ಕಾಪಾಡಲು ಮತ್ತು ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದಂತೆ ಮಕ್ಕಳ  ಕ್ಷೇಮ ಮತ್ತು ಹಿತ ಕಾಯಲು ಪೋಕ್ಸೋ ಕಾಯಿದೆ 2012ನ್ನು ಜಾರಿಗೆ ತರಲಾಗಿದೆ. ಕಾಯಿದೆಯು 18 ವರ್ಷದೊಳಗಿನ ಯಾವುದೇ ವ್ಯಕ್ತಿಯನ್ನು ಮಕ್ಕಳು ಎಂದು ವ್ಯಾಖ್ಯಾನಿಸುತ್ತದೆ ಮತ್ತು ಮಗುವಿನ ಆರೋಗ್ಯಕರ ಭೌತಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿಯೊಂದು ಹಂತದಲ್ಲಿಯೂ ಮಗುವಿನ ಉತ್ತಮ ಹಿತಾಸಕ್ತಿ ಮತ್ತು ಕ್ಷೇಮವನ್ನು ಅತ್ಯುನ್ನತ ಪ್ರಾಮುಖ್ಯತೆಯ ವಿಷಯವಾಗಿ ಪರಿಗಣಿಸುತ್ತದೆ. ಈ ಕಾಯಿದೆ ಲಿಂಗ ತಟಸ್ಥವಾಗಿದೆ.

 

          ii.       ಸೂಕ್ತ ರೀತಿಯಲ್ಲಿ ಮಕ್ಕಳ ಲೈಂಗಿಕ ನಿಂದನೆಯಂಥ ವಿಚಾರಗಳನ್ನು ಸಮರ್ಥವಾಗಿ ತಡೆಯಲು ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ಸಂರಕ್ಷಿಸುವ (ಪೋಕ್ಸೋ) ಕಾಯಿದೆ, 2012ರ ಸೆಕ್ಷನ್ -4, ಸೆಕ್ಷನ್ -5, ಸೆಕ್ಷನ್ 6, ಸೆಕ್ಷನ್ -9, ಸೆಕ್ಷನ್ 14, ಸೆಕ್ಷನ್ -15 ಮತ್ತು ಸೆಕ್ಷನ್ 42ಕ್ಕೆ ತಿದ್ದುಪಡಿ ತರಲಾಗುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಲೈಂಗಿಕ ದುರುಪಯೋಗ ಪ್ರವೃತ್ತಿಯನ್ನು ತಡೆಯಲು ಕಟ್ಟುನಿಟ್ಟಾದ ಕ್ರಮಗಳಿಗಾಗಿ ಮಾರ್ಪಾಡಿನ ಅಗತ್ಯ ಕಂಡು ಬಂದಿದೆ.

 

        iii.       ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಕಾಪಾಡಲು, ಮಕ್ಕಳ ಮೇಲೆ ಉಲ್ಬಣವಾದ ಅತಿರೇಕದ ಲೈಂಗಿಕ ಅತಿಕ್ರಮಣ ಮಾಡುವವರಿಗೆ ಮರಣ ದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸುವ ಅವಕಾಶ ನೀಡಲು, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರವೃತ್ತಿಯನ್ನು ತಪ್ಪಿಸಲು ನಿರೋಧಕವಾಗಿ ಕಾರ್ಯ ನಿರ್ವಹಿಸುವ ಸೆಕ್ಷನ್ -4, ಸೆಕ್ಷನ್ -5 ಮತ್ತು  ಸೆಕ್ಷನ್ -6ಕ್ಕೆ ತಿದ್ದುಪಡಿ ತರಲುದ್ದೇಶಿಸಲಾಗಿದೆ.

 

        iv.       ಪ್ರಕೃತಿ ವಿಕೋಪ ಮತ್ತು ವಿಪತ್ತಿನ ಸಂದರ್ಭಗಳಲ್ಲಿ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸಲು ಮತ್ತು ವಯಸ್ಸಿಗೆ ಮೊದಲೇ ಲೈಂಗಿಕ ಪ್ರೌಢತೆಗೆ ಬರುವಂತೆ ಯಾವುದೇ ರೀತಿಯಲ್ಲಿ ರಾಸಾಯನಿಕ ವಸ್ತುಗಳು ಅಥವಾ ಯಾವುದೇ ಹಾರ್ಮೋನ್ ನೀಡುವಂಥ ಪ್ರಕರಣ ತಡೆಯಲು ಸೆಕ್ಷನ್ -9ರಲ್ಲಿ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ.

 

          v.       ಮಕ್ಕಳ ಲೈಂಗಿಕತೆಯ ಚಿತ್ರ-ಸಾಹಿತ್ಯದಂಥ ಪಿಡುಗಿನ ವಿರುದ್ಧ ಪೋಕ್ಸೋ ಕಾಯಿದೆ 2012ರ ಸೆಕ್ಷನ್ -14, ಸೆಕ್ಷನ್ -15ಕ್ಕೆ ತಿದ್ದುಪಡಿ ಪ್ರಸ್ತಾಪಿಸಲಾಗಿದೆ. ಮಕ್ಕಳನ್ನು ಒಳಗೊಂಡಿರುವ ಲೈಂಗಿಕ ವಿಷಯಗಳನ್ನು ನಾಶ ಮಾಡದೆ / ಅಳಿಸದೆ ಅಥವಾ ವರದಿ ಮಾಡದಿರುವುದಕ್ಕಾಗಿ ದಂಡ ವಿಧಿಸಲು ಪ್ರಸ್ತಾಪಿಸಲಾಗಿದೆ. ಸೂಚಿಸಲಾದ ರೀತಿಯಂತೆ ವರದಿ ಮಾಡಲು ಮತ್ತು ನ್ಯಾಯಾಲಯದಲ್ಲಿ ಪುರಾವೆಯಾಗಿ ಬಳಕೆಮಾಡುವುದರ ಹೊರತಾಗಿ ಅಂಥ ವಸ್ತುಗಳನ್ನು ಯಾವುದೇ ಸ್ವರೂಪದಲ್ಲಿ ಪ್ರಸಾರ ಮಾಡುವ / ಪ್ರಚಾರ ಮಾಡುವ / ನಿರ್ವಹಿಸುವ ವ್ಯಕ್ತಿಗಳಿಗೆ ದಂಡ ಅಥವಾ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಮಕ್ಕಳನ್ನು ಒಳಗೊಂಡಿರುವ ಯಾವುದೇ ರೂಪದ ಯಾವುದೇ ಲೈಂಗಿಕ ವಸ್ತುಗಳನ್ನು ಸಂಗ್ರಹಿಸುವ / ಇಟ್ಟುಕೊಳ್ಳುವುದಕ್ಕೆ ದಂಡನೀಯ ಅವಕಾಶಗಳನ್ನು ಹೆಚ್ಚು ಕಠಿಣ ಮಾಡಲಾಗಿದೆ.

 

ಪ್ರಯೋಜನಗಳು:

 

ಈ ತಿದ್ದುಪಡಿಯು ಕಾಯಿದೆಯಲ್ಲಿ ಅಳವಡಿಸಲಾಗಿರುವ ಬಲವಾದ ದಂಡನೀಯ ಅವಕಾಶಗಳ ಕಾರಣದಿಂದ ನಿರೋಧಕವಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರವೃತ್ತಿಯನ್ನು ನಿರುತ್ತೇಜನಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಸಂಕಷ್ಟದ ಸಮಯದಲ್ಲಿ ದುರ್ಬಲ ಮಕ್ಕಳ ಹಿತಾಸಕ್ತಿಯನ್ನು ರಕ್ಷಿಸುತ್ತದೆ ಮತ್ತು ಅವರ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಗೊಳಿಸುತ್ತದೆ. ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅದಕ್ಕೆ ವಿಧಿಸುವ ಶಿಕ್ಷೆಯ ಅಂಶಗಳ ಬಗ್ಗೆ ಸ್ಪಷ್ಟತೆ ಸ್ಥಾಪಿಸುವ ಗುರಿಯನ್ನು ಈ ತಿದ್ದುಪಡಿ ಹೊಂದಿದೆ.

 

*****