ಇದುವರೆಗೆ ಒಂದೇ ಒಂದು ಗೋವು ಹೊಂದಿಲ್ಲದ ಗ್ರಾ,ಮಸ್ಥರಿಗೆ ರುವಾಂಡಾ ಸರಕಾರದ ಗಿರಿಂಕಾ ಯೋಜನೆಯಡಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 200 ಗೋವುಗಳನ್ನು ಕೊಡುಗೆಯಾಗಿ ನೀಡಿದರು. ಗೋವುಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ರುವೆರು ಮಾದರಿ ಗ್ರಾಮದಲ್ಲಿ ರುವಾಂಡಾ ಅಧ್ಯಕ್ಷ ಪೌಲ್ ಕಗಾಮೆ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಂಧರ್ಭ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಿರಿಂಕಾ ಕಾರ್ಯಕ್ರಮವನ್ನು ಶ್ಲಾಘಿಸಿದರಲ್ಲದೆ ಈ ನಿಟ್ಟಿನಲ್ಲಿ ಅಧ್ಯಕ್ಷ ಪೌಲ್ ಕಗಾಮೆ ಅವರ ಉಪಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ದೂರದ ರುವಾಂಡಾದಲ್ಲಿ ಗ್ರಾಮಗಳ ಸಶಕ್ತೀಕರಣದ ಅಂಗವಾಗಿ ಗೋವುಗಳಿಗೆ ನೀಡುತ್ತಿರುವ ಇಂತಹ ಪ್ರಾಮುಖ್ಯದ ಬಗ್ಗೆ ಭಾರತದ ಜನತೆ ಸಂತೋಷಾಶ್ಚರ್ಯಗಳನ್ನು ಹೊಂದಿರುತ್ತಾರೆ ಎಂದರು. ಎರಡು ದೇಶಗಳ ಗ್ರಾಮೀಣ ಬದುಕಿನಲ್ಲಿರುವ ಹೋಲಿಕೆಗಳ ಬಗ್ಗೆ ಅವರು ಮಾತನಾಡಿದರು. ಗಿರಿಂಕಾ ಕಾರ್ಯಕ್ರಮ ರುವಾಂಡಾದ ಹಳ್ಳಿಗಳಲ್ಲಿ ಪರಿವರ್ತನೆ ತರಲು ಸಹಕಾರಿಯಾಗಲಿದೆ ಎಂದರು .
ಹಿನ್ನೆಲೆ:
’ಗಿರಿಂಕಾ’ ಶಬ್ದವನ್ನು ’ನೀವು ಗೋವನ್ನು ಹೊಂದಬಹುದು’ ಎಂಬುದಾಗಿ ಭಾಷಾಂತರಿಸಬಹುದು. ಮತ್ತು ಅದು ರುವಾಂಡಾದ ಶತಮಾನಗಳಷ್ಟು ಹಳೆಯ ಸಾಂಸ್ಕೃತಿಕ ಆಚರಣೆಯನ್ನು ವಿವರಿಸುತ್ತದೆ. ಅಲ್ಲಿ ಗೋವನ್ನು ಗೌರವ ಮತ್ತು ಕೃತಜ್ಞತೆಯ ಕುರುಹಾಗಿ ಒಬ್ಬರು ಇನ್ನೊಬ್ಬರಿಗೆ ನೀಡುವ ಸಂಪ್ರದಾಯವಿದೆ.
ಗಿರಿಂಕಾ ಯೋಜನೆಯು ಅಧ್ಯಕ್ಷ ಪೌಲ್ ಕಗಾಮೆ ಅವರು ಮಕ್ಕಳಲ್ಲಿ ಇದ್ದ ಗಂಭೀರ ಪ್ರಮಾಣದ ನ್ಯೂನ ಪೋಷಣೆಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರಂಭಿಸಿದ ಯೋಜನೆಯಾಗಿದೆ ಮತ್ತು ಇದರ ಹಿಂದೆ ಬಡತನದ ಪ್ರಮಾಣವನ್ನು ತಗ್ಗಿಸುವ , ಜಾನುವಾರು ಸಾಕಾಣಿಕೆಯನ್ನು ಸಮಗ್ರಗೊಳಿಸುವ ಮತ್ತು ವ್ಯವಸಾಯವನ್ನು ಉತ್ತೇಜಿಸುವ ಇರಾದೆ ಇದೆ. ಬಡವರಿಗೆ ಗೋವನ್ನು ನೀಡುವ ಯೋಜನೆ ಇದಾಗಿದ್ದು ಜನರ ಜೀವನೋಪಾಯದಲ್ಲಿ ಸುಧಾರಣೆ ತರುವ ಆಶಯ ಹೊಂದಿದೆ. ಗೊಬ್ಬರವನ್ನು ರಸಗೊಬ್ಬರದ ರೀತಿಯಲ್ಲಿ ಬಳಸಿ ಕೃಷಿ ಉತ್ಪನ್ನವನ್ನು ಹೆಚ್ಚಿಸುವ ಮತ್ತು ಆ ಮೂಲಕ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸುವ ಹಾಗು ಹುಲ್ಲು ಮತ್ತು ಗಿಡಗಳನ್ನು ನೆಡುವ ಮೂಲಕ ಮಣ್ಣಿನ ಕೊರೆತವನ್ನು ತಡೆಯುವ ಉದ್ದೇಶ ಹೊಂದಿದೆ.
2006ರಲ್ಲಿ ಇದನ್ನು ಅನುಷ್ಟಾನಕ್ಕೆ ತಂದ ಬಳಿಕ ಸಾವಿರಾರು ಜನರು ಗಿರಿಂಕಾ ಯೋಜನೆಯಡಿ ಗೋವುಗಳನ್ನು ಪಡೆದುಕೊಂಡಿದ್ದಾರೆ. 2016 ರ ಜೂನ್ ವೇಳೆಗೆ ಒಟ್ಟು 248,566 ಗೋವುಗಳನ್ನು ಬಡವರಿಗೆ ವಿತರಿಸಲಾಗಿದೆ.
ಈ ಯೋಜನೆ ರುವಾಂಡಾದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಿದೆ. ಅದರಲ್ಲೂ ವಿಶೇಷವಾಗಿ ಹಾಲು ಉತ್ಪಾದನೆ ಮತ್ತು ಹೈನು ಉತ್ಪಾದನೆಗಳಲ್ಲಿ ಹೆಚ್ಚಳವಾಗಿದೆ, ನ್ಯೂನ ಪೋಷಣೆ ಕಡಿಮೆಯಾಗಿದೆ , ಆದಾಯ ಹೆಚ್ಚಳವಾಗಿದೆ. ರುವಾಂಡಾದ ಜನರಲ್ಲಿ ಗೋವನ್ನು ಒಬ್ಬರು ಇನ್ನೊಬ್ಬರಿಗೆ ಕೊಡುವುದರಿಂದ ಕೊಡುಗೆ ನೀಡಿದವರಲ್ಲಿ ಮತ್ತು ಪಡೆದವರಲ್ಲಿ ಪರಸ್ಪರ ನಂಬಿಕೆ ಮತ್ತು ಗೌರವಗಳು ಸ್ಥಾಪಿತವಾಗುತ್ತವೆ ಎಂಬ ಸಾಂಸ್ಕೃತಿಕ ತತ್ವ ಭೂಮಿಕೆಯ ಆಧಾರದಲ್ಲಿ ಈ ಕಾರ್ಯಕ್ರಮ ಏಕತೆಯನ್ನು ಮತ್ತು ಹೊಂದಾಣಿಕೆಯನ್ನು ಪ್ರಚುರಪಡಿಸಿದೆ. ಗಿರಿಂಕಾ ಯೋಜನೆಯ ಮೂಲ ಗುರಿ ಇದಲ್ಲದಿದ್ದರೂ ಅದು ಕಾರ್ಯಕ್ರಮದ ಪ್ರಮುಖಾಂಶವಾಗಿ ಮೂಡಿ ಬಂದಿದೆ. ಫಲಾನುಭವಿಗಳು ಯಾರಾಗಬೇಕು ಎಂಬುದಕ್ಕೆ ಕೆಲವಾರು ಗುಣಮಾನಕಗಳನ್ನು ನಿಗದಿ ಮಾಡಲಾಗಿದೆ. ರುವಾಂಡಾ ಸರಕಾರದ ಅಧಿಕಾರಿಗಳ ಪ್ರಕಾರ ಗೋವುಗಳನ್ನು ಸಾಕಲು ಅವಶ್ಯವಾದ ಹುಲ್ಲು ಬೆಳೆಯಲು ಭೂಮಿ ಇರುವ ಆದರೆ ಗೋವು ಹೊಂದಿಲ್ಲದ ಬಡ ಕುಟುಂಬಗಳನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಫಲಾನುಭವಿಗಳು ಗೋವನ್ನು ಸಾಕಲು ಹಟ್ಟಿಯನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಅಥವಾ ಸಮುದಾಯದ ಗೋಶಾಲೆಯನ್ನು ನಿರ್ಮಿಸಲು ಇತರರೊಂದಿಗೆ ಕೈಜೋಡಿಸುವ ಇಚ್ಚೆಯನ್ನು ಹೊಂದಿರಬೇಕಾಗುತ್ತದೆ.
Got a glimpse of rural life in Rwanda during the memorable visit to Rweru Model Village.
— Narendra Modi (@narendramodi) July 24, 2018
I thank President @PaulKagame for accompanying me. Gifted 200 cows to villagers who do not yet own one, as a part of the Rwandan Government's Girinka Programme. pic.twitter.com/ZVxTCWnYJM
The Girinka Programme is helping transform the lives of people across rural Rwanda.
— Narendra Modi (@narendramodi) July 24, 2018
I also told President @PaulKagame about the initiatives we are taking in India for the development of our villages. pic.twitter.com/po4fH6X5df