ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಅನ್ನು ಅನುಮೋದಿಸಿದೆ. ಮಿಷನ್ನ ಆರಂಭಿಕ ವೆಚ್ಚವು 19,744 ಕೋಟಿ ರೂಪಾಯಿಗಳಾಗಿರುತ್ತದೆ, ಇದರಲ್ಲಿ ಸೈಟ್ ಕಾರ್ಯಕ್ರಮಕ್ಕಾಗಿ 17,490 ಕೋಟಿ ರೂಪಾಯಿಗಳು, ಪ್ರಾಯೋಗಿಕ ಯೋಜನೆಗಳಿಗೆ 1,466 ಕೋಟಿ ರೂಪಾಯಿಗಳು, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 400 ಕೋಟಿ ರೂಪಾಯಿಗಳು ಮತ್ತು ಇತರ ಮಿಷನ್ ಘಟಕಗಳಿಗೆ 388 ಕೋಟಿ ರೂಪಾಯಿಗಳು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂಎನ್ಆರ್ ಇ) ಆಯಾ ಘಟಕಗಳ ಅನುಷ್ಠಾನಕ್ಕಾಗಿ ಯೋಜನೆಯ ಮಾರ್ಗಸೂಚಿಗಳನ್ನು ರೂಪಿಸುತ್ತದೆ.
2030 ರ ವೇಳೆಗೆ ಮಿಷನ್ ನಿಂದಾಗಿ ಈ ಕೆಳಗಿನ ಫಲಿತಾಂಶಗಳು ಸಂಭವನೀಯವಾಗುವುದು:
• ದೇಶದಲ್ಲಿ ಸುಮಾರು 125 ಗಿಗಾವ್ಯಾಟ್ ನಷ್ಟು ಸಂಬಂಧಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಜೊತೆಗೆ ವಾರ್ಷಿಕ ಕನಿಷ್ಠ 5 ಎಂಎಂಟಿ (ಮಿಲಿಯನ್ ಮೆಟ್ರಿಕ್ ಟನ್) ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯದ ಅಭಿವೃದ್ಧಿ
• ಒಟ್ಟು ಹೂಡಿಕೆ ಸುಮಾರು ರೂಪಾಯಿ ಎಂಟು ಲಕ್ಷ ಕೋಟಿ
• ಆರು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
• ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಪಳೆಯುಳಿಕೆ ಇಂಧನ ಆಮದುಗಳಲ್ಲಿ ಒಟ್ಟುಗೂಡಿದ ಕಡಿತ.
• ವಾರ್ಷಿಕ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಸುಮಾರು 50 ಎಂಎಂಟಿ ಕಡಿತ
ಈ ಮಿಷನ್ ವಿಶಾಲ ವ್ಯಾಪ್ತಿಯ ಪ್ರಯೋಜನಗಳನ್ನು ಹೊಂದಿರುತ್ತದೆ – ಹಸಿರು ಜಲಜನಕ ಮತ್ತು ಅದರ ಉತ್ಪನ್ನಗಳಿಗೆ ರಫ್ತು ಅವಕಾಶಗಳ ಸೃಷ್ಟಿ; ಕೈಗಾರಿಕಾ, ಚಲನಶೀಲತೆ ಮತ್ತು ಶಕ್ತಿ ವಲಯಗಳ ಡಿಕಾರ್ಬೊನೈಸೇಶನ್ (ಇಂಗಾಲ ಹೊರಸೂಸುವಿಕೆಯ ಕಡಿತ); ಆಮದು ಮಾಡಿದ ಪಳೆಯುಳಿಕೆ ಇಂಧನಗಳು ಮತ್ತು ಫೀಡ್ಸ್ಟಾಕ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು; ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳ ಅಭಿವೃದ್ಧಿ; ಉದ್ಯೋಗಾವಕಾಶಗಳ ಸೃಷ್ಟಿ; ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿ. ಸುಮಾರು 125 ಗಿಗಾವ್ಯಾಟ್ ನಷ್ಟು ಸಂಬಂಧಿತ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯದ ಸೇರ್ಪಡೆಯೊಂದಿಗೆ ಭಾರತದ ಹಸಿರು ಹೈಡ್ರೋಜನ್ (ಜಲಜನಕ) ಉತ್ಪಾದನಾ ಸಾಮರ್ಥ್ಯವು ವಾರ್ಷಿಕವಾಗಿ ಕನಿಷ್ಠ 5 ಎಂಎಂಟಿ ಅನ್ನು ತಲುಪುವ ಸಾಧ್ಯತೆಯಿದೆ. 2030ರ ವೇಳೆಗೆ ಈ ಗುರಿಗಳು ರೂ. 8 ಲಕ್ಷ ಕೋಟಿ ಹೂಡಿಕೆ ಮತ್ತು 6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. 2030ರ ವೇಳೆಗೆ ಸುಮಾರು 50 ಎಂಎಂಟಿ ವಾರ್ಷಿಕ ಇಂಗಾಲ ಹೊರಸೂಸುವಿಕೆಯನ್ನು ತಡೆಯುವ ನಿರೀಕ್ಷೆಯಿದೆ.
ಹಸಿರು ಜಲಜನಕದ ಬೇಡಿಕೆ ಸೃಷ್ಟಿ, ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಮಿಷನ್ ಅನುಕೂಲ ಮಾಡುತ್ತದೆ. ಗ್ರೀನ್ ಹೈಡ್ರೋಜನ್ ಪರಿವರ್ತನೆ ಕಾರ್ಯಕ್ರಮದ (ಎಸ್ಐಜಿಎಚ್ ಟಿ – ಸೈಟ್) ಕಾರ್ಯತಂತ್ರದ ಮಧ್ಯಸ್ಥಿಕೆಗಳ ಅಡಿಯಲ್ಲಿ, ಎರಡು ವಿಭಿನ್ನ ಆರ್ಥಿಕ ಪ್ರೋತ್ಸಾಹ ಕಾರ್ಯವಿಧಾನಗಳನ್ನು – ಎಲೆಕ್ಟ್ರೋಲೈಸರ್ಗಳ ದೇಶೀಯ ಉತ್ಪಾದನೆ ಮತ್ತು ಹಸಿರು ಜಲಜನಕದ ಉತ್ಪಾದನೆಯನ್ನು ಗುರಿಯಾಗಿಟ್ಟುಕೊಂಡು ಮಿಷನ್ ಅಡಿಯಲ್ಲಿ ಒದಗಿಸಲಾಗುತ್ತದೆ. ಮಿಷನ್ ಉದಯೋನ್ಮುಖ ಬಳಕೆದಾರರ ವಲಯಗಳು ಮತ್ತು ಉತ್ಪಾದನಾ ಮಾರ್ಗಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಸಹ ಬೆಂಬಲಿಸುತ್ತದೆ. ದೊಡ್ಡ ಪ್ರಮಾಣದ ಉತ್ಪಾದನೆ ಮತ್ತು/ಅಥವಾ ಜಲಜನಕದ ಬಳಕೆಯನ್ನು ಬೆಂಬಲಿಸುವ ಸಾಮರ್ಥ್ಯವಿರುವ ಪ್ರದೇಶಗಳನ್ನು ಗ್ರೀನ್ ಹೈಡ್ರೋಜನ್ ಹಬ್ಸ್ ಎಂದು ಗುರುತಿಸಲಾಗುತ್ತದೆ ಮತ್ತು ಅಭಿವೃದ್ಧಿಪಡಿಸಲಾಗುತ್ತದೆ.
ಹಸಿರು ಜಲಜನಕ ಪರಿಸರ ವ್ಯವಸ್ಥೆಯ ಸ್ಥಾಪನೆಯನ್ನು ಬೆಂಬಲಿಸಲು ಸಕ್ರಿಯಗೊಳಿಸುವ ನೀತಿ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗುವುದು. ದೃಢವಾದ ಮಾನದಂಡಗಳು ಮತ್ತು ನಿಯಮಾವಳಿಗಳ ಚೌಕಟ್ಟನ್ನು ಸಹ ಅಭಿವೃದ್ಧಿಪಡಿಸಲಾಗುವುದು. ಇದಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿ (ಸ್ಟ್ರಾಟೆಜಿಕ್ ಹೈಡ್ರೋಜನ್ ಇನ್ನೋವೇಶನ್ ಪಾಲುದಾರಿಕೆ – ಎಸ್ಎಚ್ಐಪಿ)ಗಾಗಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಚೌಕಟ್ಟನ್ನು ಮಿಷನ್ ಅಡಿಯಲ್ಲಿ ಸುಗಮಗೊಳಿಸಲಾಗುತ್ತದೆ; ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು ಗುರಿ ಆಧಾರಿತ, ಸಮಯ ಬದ್ಧವಾಗಿದ್ದು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸೂಕ್ತವಾಗಿ ಹೆಚ್ಚಿಸಲಾಗುತ್ತದೆ. ಮಿಷನ್ ಅಡಿಯಲ್ಲಿ ಒಂದು ಸಂಘಟಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಸಹ ಕೈಗೊಳ್ಳಲಾಗುವುದು.
ಮಿಷನ್ ನ ಉದ್ದೇಶಗಳ ಯಶಸ್ವಿ ಸಾಧನೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಸಂಬಂಧಿತ ಸಚಿವಾಲಯಗಳು, ಇಲಾಖೆಗಳು, ಏಜೆನ್ಸಿಗಳು ಮತ್ತು ಸಂಸ್ಥೆಗಳು ಕೇಂದ್ರೀಕೃತ ಮತ್ತು ಸಂಘಟಿತ ಕ್ರಮಗಳನ್ನು ಕೈಗೊಳ್ಳುತ್ತವೆ. ಮಿಷನ್ ನ ಒಟ್ಟಾರೆ ಸಮನ್ವಯ ಮತ್ತು ಅನುಷ್ಠಾನಕ್ಕೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಜವಾಬ್ದಾರವಾಗಿರುತ್ತದೆ.
****
National Green Hydrogen Mission, which the Union Cabinet approved today, is a landmark step towards sustainable development and creating investment opportunities for our youth. https://t.co/PTwbbTqkjL https://t.co/dB79JrpNp3
— Narendra Modi (@narendramodi) January 4, 2023