ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ರಾಷ್ಟ್ರೀಯ ಸೆಣಬು ಉತ್ಪಾದಕರ ನಿಗಮ ಲಿಮಿಟೆಡ್ (ಎನ್.ಜೆ.ಎಂ.ಸಿ.) ಮತ್ತು ಅದರ ಸಹವರ್ತಿ ಸಂಸ್ಥೆ ಬರ್ಡ್ ಸೆಣಬು ಮತ್ತು ರಫ್ತು ಲಿಮಿಟೆಡ್ (ಬಿ.ಜೆ,ಇ.ಎಲ್) ಮುಚ್ಚುಗಡೆಗೆ ಅನುಮೋದನೆ ನೀಡಿತು.
ಮುಚ್ಚುಗಡೆಗೆ ಪ್ರಕ್ರಿಯೆಗಳು:
I. ನಿರಖು ಆಸ್ತಿಗಳು ಮತ್ತು ಚಾಲ್ತಿ ಆಸ್ತಿಗಳ ವಿಲೇವಾರಿಯು 14.06.2018ರಂದು ಹೊರಡಿಸಲಾದ ಡಿ.ಪಿ.ಇ. ಮಾರ್ಗದರ್ಶಿಗಳ ಅನ್ವಯ ಮಾಡತಕ್ಕದ್ದು ಮತ್ತು ಆ ಆಸ್ತಿಗಳ ಮಾರಾಟದಿಂದ ಬರುವ ಆದಾಯ ಸಾಲ ಮರುಸಂದಾಯದ ಬಳಿಕ ಭಾರತದ ಸಮುಚ್ಚಯ ನಿಧಿಯಲ್ಲಿ ಠೇವಣಿ ಇಡಬೇಕು.
II. 14.06.2018ರ ದಿನಾಂಕದ ಡಿ.ಪಿ.ಇ . ಮಾರ್ಗದರ್ಶಿಗಳ ಪ್ರಕಾರ ಆಸ್ತಿಗಳ ವಿಲೇವಾರಿಗೆ ಭೂ ನಿರ್ವಹಣಾ ಏಜೆನ್ಸಿಯನ್ನು (ಎಲ್.ಎಂ.ಎ.) ಬಳಸಿಕೊಳ್ಳಬೇಕು. ಡಿ.ಪಿ.ಇ. ಮಾರ್ಗದರ್ಶಿಗಳ ಅನ್ವಯ ಆಸ್ತಿ ವಿಲೇವಾರಿ ಮಾಡುವುದಕ್ಕೆ ಮೊದಲು ಎಲ್.ಎಂ.ಎ.ಯು ಆಸ್ತಿಗಳ ಬಗ್ಗೆ ಪೂರ್ಣ ಪ್ರಮಾಣದ ಮತ್ತು ಅಮೂಲಾಗ್ರ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಲಾಗುವುದು
III. ಜವಳಿ ಸಚಿವಾಲಯವು ಬಿ.ಜೆ.ಎ.ಎಲ್.ನ ಯಾವುದೇ ಭೂಮಿಯನ್ನು ಅಥವಾ ಕಟ್ಟಡವನ್ನು ತನ್ನ ಬಳಕೆ ಉದ್ದೇಶಕ್ಕೆ ಅಥವಾ ಅದರ ಯಾವುದೇ ಇತರ ಸಿ.ಪಿ.ಎಸ್.ಇ.ಗಳ ಬಳಕೆಗೆ ಪ್ರಸ್ತಾವ ಮಂಡಿಸಿಲ್ಲ ಮತ್ತು ಅದರನ್ವಯ ಭೂಮಿ ನಿರ್ವಹಣಾ ಏಜೆನ್ಸಿಗೆ ಈ ಬಗ್ಗೆ ತಿಳಿಸಲಾಗುವುದು.
ಲಾಭಗಳು:
ರೋಗಗ್ರಸ್ಥ ಸಿ.ಪಿ.ಎಸ್.ಇ. ಗಳನ್ನು ಮತ್ತು ಅವುಗಳ ಚಟುವಟಿಕೆಯನ್ನು ನಿರ್ವಹಿಸುವುದರಿಂದ ಸರಕಾರದ ಬೊಕ್ಕಸದ ಮೇಲೆ ಪದೇ ಪದೇ ಬೀಳುವ ಹೊರೆ ತಗ್ಗುವುದರಿಂದಾಗಿ ಈ ನಿರ್ಧಾರ ಅದಕ್ಕೆ ಲಾಭ ತರಲಿದೆ. ಈ ಪ್ರಸ್ತಾವವು ರೋಗಗ್ರಸ್ಥ ಕಂಪೆನಿಗಳನ್ನು ಮುಚ್ಚಿ, ಅದರಿಂದ ಮೌಲ್ಯಯುತ ಆಸ್ತಿಗಳನ್ನು ಉತ್ಪಾದನಾ ಬಳಕೆಗೆ ಲಭ್ಯವಾಗುವಂತೆ ಮಾಡಲು ಸಾಧ್ಯವಾಗುತ್ತದೆ.
ಸಿ.ಪಿ.ಎಸ್.ಇ.ಗಳಲ್ಲಿ ಲಭ್ಯ ಇರುವ ಭೂಮಿಯನ್ನು ಸಮಾಜದ ಸರ್ವತೋಮುಖ ಅಭಿವೃದ್ದಿಗೆ, ಸಾರ್ವಜನಿಕ ಬಳಕೆಗೆ ಅಥವಾ ಇತರ ಸರಕಾರೀ ಬಳಕೆಗೆ ಒದಗಿಸಲಾಗುವುದು.
ಹಿನ್ನೆಲೆ:
I.ಎನ್.ಜೆ.ಎಂ.ಸಿ.ಯು ಹಲವಾರು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದು ಮತ್ತು ಅದು 1993 ರಿಂದ ಬಿ.ಐ.ಎಫ್.ಆರ್ ಅಡಿಯಲ್ಲಿ ಪ್ರಸ್ತಾವನೆಯಲ್ಲಿತ್ತು. ಕಂಪೆನಿಯ ಪ್ರಾಥಮಿಕ ಉತ್ಪಾದನೆ ವಿವಿಧ ರಾಜ್ಯಗಳು ಆಹಾರ ಧಾನ್ಯ ಮತ್ತು ಕಾಳುಗಳನ್ನು ಪ್ಯಾಕೇಜಿಂಗ್ ಮಾಡಲು ಬಳಸುವ ಸೆಣಬು ನಾರಿನ ಚೀಲಗಳನ್ನು ತಯಾರಿಸುವುದಾಗಿತ್ತು. ಕಳೆದ ಹಲವಾರು ವರ್ಷಗಳಿಂದ ನಾರಿನ ಚೀಲಗಳಿಗೆ ಬೇಡಿಕೆ ಕುಸಿಯುತ್ತಾ ಬಂದಿದ್ದು, ಕಾಲಕ್ರಮೇಣ ಬೇಡಿಕೆಯೇ ಇಲ್ಲದಂತಾಯಿತು, ಮತ್ತು ಇದರಿಂದಾಗಿ ಕಂಪೆನಿಯನ್ನು ನಡೆಸುವುದು ವಾಣಿಜ್ಯಿಕವಾಗಿ ಅನುಕೂಲಕರ ಅಲ್ಲವೆಂದು ಕಂಡು ಬಂದಿತ್ತು.
II. ಪುನಃಶ್ಚೇತನ ಪ್ರಸ್ತಾವ ಮಂಡಿಸಲಾಗಿದ್ದ ಎನ್.ಜೆ.ಎಂ.ಸಿ. ಗಿರಣಿಗಳಾದ ತಿತಾಘರ್ ನ ಕಿನ್ನಿಸನ್ ಗಿರಣಿ, ಖಾರ್ಧಾದಲ್ಲಿಯ ಖಾರ್ಧಾ ಗಿರಣಿ ಮತ್ತು ಕತಿಯಾರ್ ನಲ್ಲಿಯ ಆರ್.ಬಿ.ಎಚ್.ಎಂ. ಗಿರಣಿ ಗಳು 2016ರ ಆಗಸ್ಟ್ ತಿಂಗಳಿನಿಂದ ಅಮಾನತಿನಲ್ಲಿವೆ. (ಕೊನೆಯದಾಗಿ ಮುಚ್ಚಲಾದ ಗಿರಣಿ ಎಂದರೆ ಕಿನ್ನಿಸನ್ ಗಿರಣಿ, ಇದನ್ನು 31.08.2016 ರಂದು ಮುಚ್ಚಲಾಗಿದೆ ) . ಉದ್ಯೋಗ ಗುತ್ತಿಗೆದಾರರು ಉದ್ಯೋಗವನ್ನು ದಕ್ಷತೆಯಿಂದ ಅನುಷ್ಟಾನ ಮಾಡುವಲ್ಲಿ ವಿಫಲರಾಗಿರುವುದು ಮತ್ತು ಸ್ಥಳೀಯ ಕಾರ್ಮಿಕರ ಸಮಸ್ಯೆಯಿಂದಾಗಿ ಈ ಕ್ರಮ ಜಾರಿಯಾಗಿದೆ. ಹೊರಗುತ್ತಿಗೆ ನೀಡುವ ವಿವಿಧ ಮಾದರಿಗಳನ್ನು ಪ್ರಯತ್ನಿಸಲಾಯಿತಾದರೂ ಅವು ಯಶಸ್ವಿಯಾಗಲಿಲ್ಲ. ಅದರ ಹಿಂದಿನ ಸಾಧನೆ , ಮಾರುಕಟ್ಟೆ ಪರಿಸ್ಥಿತಿ, ಮತ್ತು ಪ್ಲಾಸ್ಟಿಕ್ಕಿನಿಂದ ಎದುರಾಗಿರುವ ಸ್ಪರ್ಧೆ ಹಾಗು ಖಾಸಗಿ ಸಣಬಿನ ಗಿರಣಿಗಳಿಂದ ಎದುರಾಗಿರುವ ಸ್ಪರ್ಧೆಗಳ ಹಿನ್ನೆಲೆಯನ್ನು ಪರಿಶೀಲಿಸಿ ಎನ್.ಜೆ.ಎಂ.ಸಿ. ತನ್ನ ಕಾರ್ಯಾಚರಣಾ ಲಾಭದ ಮೂಲಕ ಋಣಾತ್ಮಕ ಪರಿಸ್ಥಿತಿಯಿಂದ ಹೊರಬರಲಾರದು ಎಂಬುದನ್ನು ಗಮನಿಸಲಾಯಿತು. ಜೊತೆಗೆ ಎನ್.ಜೆ.ಎಂ.ಸಿ . ಹಾಜರಿ ಪಟ್ಟಿಯಲ್ಲಿ ಯಾವುದೇ ಸಿಬ್ಬಂದಿ/ ಕಾರ್ಮಿಕರು ಇಲ್ಲ. ಆದುದರಿಂದ ಮುಚ್ಚಲು ತೀರ್ಮಾನಿಸಲಾಯಿತು.
III. ಎನ್.ಜೆ.ಎಂ.ಸಿ.ಯ ಸಹವರ್ತಿ ಸಂಸ್ಥೆಯಾದ ಬಿ.ಜೆ.ಇ.ಎಲ್. ಸಂಸ್ಥೆಯನ್ನು ಬಿ.ಐ.ಎಫ್.ಆರ್.ಗೆ ಪರಿಶೀಲನೆಗೆ ಕಳುಹಿಸಲಾಗಿತ್ತು. ಅದನ್ನು ಪುನಃಶ್ಚೇತನಕ್ಕೆ ಪರಿಗಣಿಸಲಾಗಿತ್ತು. ಆದರೆ ಕರಡು ಪುನಃಶ್ಚೇತನ ಯೋಜನೆಯನ್ನು ಪಶ್ಚಿಮ ಬಂಗಾಲ ಸರಕಾರ ಭೂ ಬಳಕೆ ಪರಿವರ್ತನೆಗೆ ಒಪ್ಪಿಕೊಳ್ಳದೇ ಇದ್ದುದರಿಂದ ಮತ್ತು ಎ.ಎಸ್.ಸಿ.ಗೆ ರಾಜ್ಯ ಸರಕಾರದ ಪ್ರತಿನಿಧಿಯನ್ನು ಮೂರು ವರ್ಷದ ವಿಳಂಬದ ಬಳಿಕ ನಾಮಕರಣಗೊಳಿಸಿದುದರಿಂದ ಜಾರಿಗೆ ತರಲಾಗಲಿಲ್ಲ. ಬಿ.ಜೆ.ಇ.ಎಲ್. ನಲ್ಲಿ ಸಿಬ್ಬಂದಿಗಳು ಇಲ್ಲದೇ ಇರುವುದರಿಂದ ಮತ್ತು ಕಾರ್ಖಾನೆಯು ಕಾರ್ಯಾಚರಿಸುತ್ತಿಲ್ಲದೇ ಇರುವುದರಿಂದ , ಅದನ್ನು ಮುಚ್ಚುವುದರಿಂದ ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲ.
******