ಪ್ರಧಾನ ಮಂತ್ರಿ ಮಾನ್ಯ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೌಶಲ ಕ್ಷೇತ್ರದಲ್ಲಿ ಹಾಲಿ ಇರುವ ಸಂಸ್ಥೆಗಳಾದ-ರಾಷ್ಟ್ರೀಯ ವೃತ್ತಿ ತರಬೇತಿ ಮಂಡಳಿ(ಎನ್.ಸಿ.ವಿ.ಟಿ.) ಮತ್ತು ರಾಷ್ಟ್ರೀಯ ಕೌಶಲ ಅಭಿವೃದ್ಧಿ ಏಜೆನ್ಸಿ( ಎನ್.ಎಸ್. ಡಿ.ಎ. )ಗಳನ್ನು ಸಂಯೋಜಿಸಿ, ರಾಷ್ಟ್ರೀಯ ವೃತ್ತಿ ಶಿಕ್ಷಣ ಮತ್ತು ತರಬೇತಿ ಮಂಡಳಿ(ಎನ್.ಸಿ.ವಿ.ಟಿ.) ಸ್ಥಾಪನೆಗೆ ಸಮ್ಮತಿ ನೀಡಲಾಯಿತು.
ವಿವರಗಳು:
ಎನ್.ಸಿ.ವಿ.ಇ.ಟಿ. ವೃತ್ತಿ ಶಿಕ್ಷಣ ಹಾಗೂ ತರಬೇತಿಯಲ್ಲಿ ತೊಡಗಿಸಿಕೊಂಡಿರುವ ದೀರ್ಘಾವಧಿ ಹಾಗೂ ಕಡಿಮೆ ಅವಧಿಯ ಸಂಸ್ಥೆಗಳನ್ನು ನಿಯಂತ್ರಿಸುವ ಕಾರ್ಯ ಮಾಡಲಿದೆ ಹಾಗೂ ಇಂಥ ಸಂಸ್ಥೆಗಳು ಅನುಸರಿಸಬೇಕಾದ ಕನಿಷ್ಠ ಮಾನದಂಡಗಳನ್ನು ನಿಗದಿಗೊಳಿಸಲಿದೆ. ಎನ್.ಸಿ.ವಿ.ಇ.ಟಿ. ಪ್ರಾಥಮಿಕ ಕರ್ತವ್ಯಗಳೆಂದರೆ,
* ಕೌಶಲಕ್ಕೆ ಸಂಬಂಧಿಸಿದ ಮಾಹಿತಿ ನೀಡುವವರು, ಮೌಲ್ಯಮಾಪನ ಮಾಡುವ ಸಂಸ್ಥೆಗಳು ಹಾಗೂ ಶಿಕ್ಷಣ ನೀಡುವ ಸಂಸ್ಥೆಗಳನ್ನು ಗುರುತಿಸುವುದು ಹಾಗೂ ನಿಯಂತ್ರಣ
* ವೃತ್ತಿ ಶಿಕ್ಷಣ ನೀಡುವ ಸಂಸ್ಥೆಗಳು ಹಾಗೂ ವಿಭಾಗೀಯ ಕೌಶಲ ಮಂಡಳಿ( ಎಸ್. ಎಸ್. ಸಿ )ಗಳು ಅಭಿವೃದ್ಧಿ ಪಡಿಸುವ ವಿದ್ಯಾರ್ಹತೆಯನ್ನು ಅಂಗೀಕರಿಸುವುದು
* ಅಂಗೀಕರಿಸುವ ಸಂಸ್ಥೆಗಳು ಹಾಗೂ ಮೌಲ್ಯಮಾಪನ ಏಜೆನ್ಸಿಗಳ ಮೂಲಕ ವೃತ್ತಿ ತರಬೇತಿ ನೀಡುವ ಸಂಸ್ಥೆಗಳನ್ನು ಪರೋಕ್ಷವಾಗಿ ನಿಯಂತ್ರಿಸುವುದು
* ಸಂಶೋಧನೆ ಹಾಗೂ ಮಾಹಿತಿಯ ಪ್ರಸಾರ
* ಕುಂದುಕೊರತೆಗಳ ನಿವಾರಣೆ
ಅಧ್ಯಕ್ಷರೊಬ್ಬರು ಮಂಡಳಿಯ ಮುಖ್ಯಸ್ಥರಾಗಿರಲಿದ್ದು, ಕಾರ್ಯನಿರ್ವಾಹಕ ಹಾಗೂ ಕಾರ್ಯನಿರ್ವಾಹಕರಲ್ಲದ ಸದಸ್ಯರು ಇರುತ್ತಾರೆ. ಈಗಾಗಲೇ ಇರುವ ಎರಡು ಸಂಸ್ಥೆಗಳನ್ನು ವಿಲೀನಗೊಳಿಸಿ ಎನ್ಸಿವಿಇಟಿಯನ್ನು ರಚಿಸುವುದರಿಂದ, ಹಾಲಿ ಇರುವ ಮೂಲಸೌಕರ್ಯ ಹಾಗೂ ಸಂಪನ್ಮೂಲಗಳನ್ನೇ ಬಳಸಿಕೊಳ್ಳಲಾಗುತ್ತದೆ. ಜೊತೆಗೆ, ಮಂಡಳಿಯು ಸರಾಗವಾಗಿ ಕಾರ್ಯ ನಿರ್ವಹಿಸಲು ಇನ್ನು ಕೆಲವು ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ. ನಿಯಂತ್ರಣ ಉಪಕ್ರಮಗಳಲ್ಲಿನ ಅತ್ಯುತ್ತಮ ಆಚರಣೆಗಳನ್ನು ನಿಯಂತ್ರಕ ಸಂಸ್ಥೆ ಅನುಸರಿಸಲಿದ್ದು, ಇದರಿಂದ ಅನ್ವಯಿಸುವ ಶಾಸನಗಳ ಅನುಸಾರ ಹಾಗೂ ವೃತ್ತಿಪರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ.
ಅನುಕೂಲಗಳು: ಸಾಂಸ್ಥಿಕ ಸುಧಾರಣೆಯಿಂದ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳ ಮಾರುಕಟ್ಟೆಯ ಪ್ರಸ್ತುತತೆ ಹಾಗೂ ಗುಣಮಟ್ಟ ಹೆಚ್ಚಲಿದ್ದು, ವೃತ್ತಿಶಿಕ್ಷಣ ಹಾಗೂ ತರಬೇತಿಗೆ ವಿಶ್ವಾಸಾರ್ಹತೆ ತಂದುಕೊಡಲಿದೆ ಮತ್ತು ಕೌಶಲ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಹಾಗೂ ಉದ್ಯಮದಾತರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲಿದೆ. ಇದರಿಂದ ಜೋಡಿ ಉದ್ದೇಶಗಳಾದ ವೃತ್ತಿ ಶಿಕ್ಷಣದ ಮೌಲ್ಯ ಹಾಗೂ ಕೌಶಲವಿರುವ ಮಾನವ ಸಂಪನ್ಮೂಲ ಹೆಚ್ಚಳಗೊಳ್ಳಲಿದ್ದು, ಭಾರತವನ್ನು ಜಾಗತಿಕ ಕೌಶಲ ರಾಜಧಾನಿಯನ್ನಾಗಿ ಮಾಡಬೇಕೆಂಬ ಮಾನ್ಯ ಪ್ರಧಾನ ಮಂತ್ರಿಯವರ ಆಶಯಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿದಂತೆ ಆಗಲಿದೆ.
ಎನ್ಸಿವಿಇಟಿಯು ಭಾರತದ ಕೌಶಲ ವ್ಯವಸ್ಥೆಯ ನಿಯಂತ್ರಕ ಆಗಿರುವುದರಿಂದ, ದೇಶದ ವೃತ್ತಿ ಶಿಕ್ಷಣ ಹಾಗೂ ತರಬೇತಿ ವ್ಯವಸ್ಥೆಯ ಭಾಗವಾಗಿರುವ ಪ್ರತಿ ವ್ಯಕ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಕೌಶಲಾಧರಿತ ಶಿಕ್ಷಣ ಎಂಬ ಆಲೋಚನೆಗೆ ಇನ್ನಷ್ಟು ಸ್ಪೂರ್ತಿ ತುಂಬಿದಂತೆ ಆಗಲಿದ್ದು, ಇಂಥ ಕೋರ್ಸ್ ಗಳಿಗೆ ಸೇರುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸಲಿದೆ. ಉದ್ಯಮ ಹಾಗೂ ಸೇವಾ ಕ್ಷೇತ್ರಕ್ಕೆ ಕುಶಲ ಕಾರ್ಮಿಕರನ್ನು ನಿರಂತರವಾಗಿ ಪೂರೈಸುವ ಮೂಲಕ ವ್ಯಾಪಾರದ ಆಗುವಿಕೆ ಸುಲಭಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹಿನ್ನೆಲೆ:
ಭಾರತದ ಜನಸಂಖ್ಯಾ ಹೆಚ್ಚಳದ ಪ್ರಯೋಜನ(ಡೆಮಾಗ್ರಫಿಕ್ ಡೆವಿಡೆಂಡ್) ಪಡೆದುಕೊಳ್ಳಬೇಕೆಂದರೆ, ಅದರ ಕಾರ್ಮಿಕ ಬಲಕ್ಕೆ ಉದ್ಯಮಕ್ಕೆ ಅಗತ್ಯವಾದ ಕೌಶಲಗಳು ಹಾಗೂ ಜ್ಞಾನವನ್ನು ನೀಡಬೇಕಿದ್ದು, ಇದರಿಂದ ಅವರು ಆರ್ಥಿಕ ಬೆಳವಣಿಗೆಗೆ ಗಮನಾರ್ಹ ಕಾಣಿಕೆ ನೀಡಲು ಸಾಧ್ಯವಾಗುತ್ತದೆ. ಈ ಹಿಂದೆ, ದೇಶದ ಕೌಶಲ ಅಗತ್ಯಗಳನ್ನು ಕೈಗಾರಿಕಾ ತರಬೇತಿ ವಿದ್ಯಾಲಯ(ಐ.ಟಿ.ಐ) ಹಾಗೂ ಎನ್.ಸಿ.ವಿ.ಟಿ.ಯಿಂದ ನಿಯಂತ್ರಿಸಲ್ಪಡುತ್ತಿದ್ದ ಮಾಡ್ಯುಲಾರ್ ಎಂಪ್ಲಾಯಬಲ್ ಸ್ಕೀಮ್(ಎಂ.ಇ.ಎಸ್) ಮೂಲಕ ಪೂರೈಸಲಾಗುತ್ತಿತ್ತು. ಆದರೆ, ಈ ಮೂಲಸೌಕರ್ಯವು ದೇಶದ ಹೆಚ್ಚುತ್ತಿರುವ ಕೌಶಲ ಅಗತ್ಯಗಳನ್ನು ಹಾಗೂ ಬೆಳೆಯುತ್ತಿರುವ ಕಾರ್ಮಿಕ ಬಲದ ಕೌಶಲ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಕಾರಣ, ಸರ್ಕಾರವು ಕೌಶಲ ಹೆಚ್ಚಳ ಕಾರ್ಯಕ್ರಮಗಳನ್ನು ಇನ್ನಷ್ಟು ಹೆಚ್ಚಿಸಲು ಹಲವು ಉಪಕ್ರಮಗಳನ್ನು ಆರಂಭಿಸಿತು. ಈ ಪ್ರಯತ್ನಗಳಿಂದಾಗಿ ತರಬೇತಿ ಮೂಲಸೌಲಭ್ಯ, ಅದರಲ್ಲೂ ಖಾಸಗಿ ಕ್ಷೇತ್ರದಲ್ಲಿ, ಭಾರಿ ವಿಸ್ತರಣೆಯಾಗಿದೆ. ಪ್ರಸ್ತುತ 20 ಸಚಿವಾಲಯಗಳು / ಇಲಾಖೆಗಳು ಖಾಸಗಿ ತರಬೇತಿದಾರರನ್ನು ಬಳಸಿಕೊಂಡು ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿವೆ.
ಆದರೆ, ಸೂಕ್ತ ಮೇಲುಸ್ತುವಾರಿ ವ್ಯವಸ್ಥೆ ಇಲ್ಲದ ಕಾರಣ, ನಾನಾ ತರಬೇತಿ ಪೂರೈಕೆದಾರರು ನಡೆಸುತ್ತಿರುವ ವಿವಿಧ ತರಬೇತಿ ಕಾರ್ಯಕ್ರಮಗಳ ಗುಣಮಟ್ಟದಲ್ಲಿ ವ್ಯತ್ಯಾಸವಿದೆ ಹಾಗೂ ಮೌಲ್ಯಮಾಪನ ಮತ್ತು ಸರ್ಟಿಫಿಕೇಷನ್ ವ್ಯವಸ್ಥೆಯನ್ನು ಹೋಲಿಸಲು ಸಾಧ್ಯವಿಲ್ಲದ್ದರಿಂದ, ವೃತ್ತಿ ತರಬೇತಿ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ ಹಾಗೂ ಯುವಜನರ ಉದ್ಯೋಗಾರ್ಹತೆ ಮೇಲೆ ವಿಪರಿಣಾಮ ಉಂಟಾಗಿದೆ. ಸರ್ಕಾರ ಮತ್ತು ಖಾಸಗಿ ಕ್ಷೇತ್ರದ ಕೌಶಲ ಅಭಿವೃದ್ಧಿ ಪ್ರಯತ್ನಗಳನ್ನು ಸಂಯೋಜಿಸಲು-ಹೊಂದಿಸಲು, 2013ರಲ್ಲಿ ರಾಷ್ಟ್ರೀಯ ಕೌಶಲ ಅಭಿವೃದ್ಧಿ ಏಜೆನ್ಸಿ( ಎನ್.ಎಸ್. ಡಿ.ಎ.) ಸ್ಥಾಪನೆ ಮೂಲಕ ಕೆಲವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಯಿತು. ರಾಷ್ಟ್ರೀಯ ಕೌಶಲ ಅರ್ಹತೆ ಚೌಕಟ್ಟ(ಎನ್.ಎಸ್.ಇ,ಎಫ್)ನ್ನು ನೆಲೆಗೊಳಿಸಿ, ಕಾರ್ಯಾಚರಿಸುವ ಮೂಲಕ ಕ್ಷೇತ್ರ ನಿರ್ದಿಷ್ಟ ಅಗತ್ಯ ಹಾಗೂ ಗುಣಮಟ್ಟವನ್ನು ಖಾತ್ರಿಗೊಳಿಸುವುದು ಎನ್ಎಸ್ಡಿಎಯ ಪ್ರಾಥಮಿಕ ಕರ್ತವ್ಯವಾಗಿತ್ತು.
ಆದರೆ, ದೀರ್ಘಾವಧಿ ಹಾಗೂ ಕಡಿಮೆ ಅವಧಿಯ ಕೌಶಲ ಆಧರಿಸಿದ ತರಬೇತಿಯ ಎಲ್ಲ ಅಂಶಗಳನ್ನು ಗಮನಿಸುವ ನಿಯಂತ್ರಣ ವ್ಯವಸ್ಥೆಯೊಂದರ ಅಗತ್ಯ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಎನ್.ಸಿ.ವಿ.ಟಿ. ಹಾಗೂ ಎನ್.ಎಸ್. ಡಿ.ಸಿ ಗೆ ವಹಿಸಿದ್ದ ನಿಯಂತ್ರಣ ಕಾರ್ಯಗಳನ್ನು ನಿರ್ವಹಿಸಬಲ್ಲ ಎನ್ಸಿವಿ.ಇ.ಟಿಯಂಥ ಸಂಸ್ಥೆಯ ಸ್ಥಾಪನೆಯ ಆಲೋಚನೆ ಮಾಡಲಾಯಿತು. ವಿಭಾಗ ಕೌಶಲ ಮಂಡಳಿ( ಎಸ್. ಎಸ್. ಸಿ )ಗಳ ಮೂಲಕ ರಾಷ್ಟ್ರೀಯ ಕೌಶಲ ಅಭಿವೃದ್ಧಿ ಮಂಡಳಿ( ಎನ್.ಎಸ್. ಡಿ.ಸಿ) ನಡೆಸುತ್ತಿದ್ದ ಎಲ್ಲ ನಿಯಂತ್ರಣ ಕೆಲಸಗಳನ್ನು ಎನ್.ಸಿ.ವಿ.ಇ.ಟಿ. ಗೆ ವಹಿಸಲಾಗಿದೆ.