ಎಲ್ಲಕ್ಕಿಂತ ಮೊದಲು ನೀವು ನನ್ನ ಜೊತೆ ಘೋಷಣೆ ಕೂಗಿ. ನಾನು ಸರ್ದಾರ್ ಪಟೇಲ್ ಎನ್ನುತ್ತೇನೆ, ನೀವು ಅಮರರಾಗಲಿ ಅಮರರಾಗಲಿ ಎಂದು ಹೇಳಿ.
ಸರ್ದಾರ್ ಪಟೇಲ್, ಅಮರರಾಗಲಿ ಅಮರರಾಗಲಿ
ಸರ್ದಾರ್ ಪಟೇಲ್, ಅಮರರಾಗಲಿ ಅಮರರಾಗಲಿ
ಇಂದು ಇಡೀ ದೇಶವು ಸರ್ದಾರ್ ಪಟೇಲ್ ಅವರ ಜನ್ಮ ಜಯಂತಿಯನ್ನು ಆಚರಿಸುತ್ತಿದೆ. ನಾವು ಭಾರತದಲ್ಲಿ ಒಂದೇ ಬಾವುಟದ ಅಡಿಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಟಕ್ ನಿಂದ ಕಟಕ್ ವರೆಗೆ, ಹಿಮಾಲಯದಿಂದ ಸಾಗರದವರೆಗೆ ಒಂದೇ ಭಾರತವನ್ನು ನೋಡುತ್ತಿದ್ದೇವೆ. ಒಂದೇ ಬಾವುಟದ ಅಡಿಯಲ್ಲಿ ಇಡೀ ಭಾರತವನ್ನು ನೋಡುತ್ತಿದ್ದೇವೆಂದರೆ ಅದರ ಶ್ರೇಯ ಸರ್ದಾರ್ ಪಟೇಲ್ ಅವರಿಗೆ ಸಲ್ಲುತ್ತದೆ. ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಎಂತಹ ಷಡ್ಯಂತ್ರ ಮಾಡಿದ್ದರೆಂದರೆ ಅವರು ಹೋಗುತ್ತಿದ್ದಂತೆಯೇ ಇಡೀ ದೇಶವು 500ಕ್ಕಿಂತ ಹೆಚ್ಚು ಸಂಸ್ಥಾನಗಳಾಗಿ ಹರಿದು ಹಂಚಿ ಹೋಗುವಂತೆ ಮಾಡಿದ್ದರು. ಸಣ್ಣ ಸಣ್ಣ ತುಂಡುಗಳಾಗಿ ಹಂಚಿ ಹೋಗಿ ರಾಜರು, ಅರಸರು ತಮ್ಮತಮ್ಮಲ್ಲೇ ಕಾದಾಡಿ ಸಾಯುವಂತಹ, ದೇಶದಲ್ಲಿ ರಕ್ತದ ಹೊಳೆ ಹರಿಯುವಂತಹ ಷಡ್ಯಂತ್ರ ರೂಪಿಸಿ ಹೋಗಿದ್ದರು. ಆದರೆ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧೀಜಿ ಅವರ ನೆರಳಾಗಿ ಜನಾಂದೋಲನವನ್ನು ಜೀವಂತವಾಗಿರಿಸಿ ಅವರ ಪ್ರತಿಯೊಂದು ವಿಚಾರಕ್ಕೂ ಜನಬಲವನ್ನು ದೊರಕಿಸಿಕೊಡುವ ಪ್ರಯತ್ನ ಮಾಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಹಗಲಿನಲ್ಲೇ ನಕ್ಷತ್ರ ತೋರಿಸುವಂತಹ ಸಾಹಸವನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಮಾಡಿದ್ದರು.ಅದೇ ಸರ್ದಾರ್ ಪಟೇಲ್ ಅವರು ಸ್ವಾತಂತ್ರ್ಯದ ನಂತರ ಬ್ರಿಟಿಷರ ಷಡ್ಯಂತ್ರವನ್ನು ಭಾರತದ ಮಣ್ಣಿನಲ್ಲಿ ಹೂತು ಹಾಕಿದರು.
ರಾಜ ಮಹಾರಾಜರನ್ನು ಒಂದುಗೂಡಿಸಿ ಒಂದೇ ಭಾರತದಲ್ಲಿ ನಾವಿಂದು ಜೀವಿಸುವಂತೆ ಮಾಡಿದರು.
ನಮ್ಮ ದೇಶದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ‘ಹಿಮ ಸಾಗರ್’ ರೈಲು ಚಲಿಸುತ್ತದೆ. ಇದು ಅತ್ಯಂತ ಉದ್ದವಾದ ರೈಲು ಮಾರ್ಗವಾಗಿದೆ. ಹಿಮಾಲಯದ ಶಿಖರದಿಂದ ಹೊರಟು ಕನ್ನಾಕುಮಾರಿಯ ಸಾಗರ ತೀರವನ್ನು ತಲುಪುತ್ತದೆ. ನಾವು ಈ ರೈಲಿನಲ್ಲಿ ಪ್ರಯಾಣಿಸುವಾಗ ದಾರಿಯಲ್ಲಿ ಹಲವು ರಾಜ್ಯಗಳು ಸಿಗುತ್ತವೆ. ಆದರೆ ನಾವು ಇದಕ್ಕಾಗಿ ಯಾವುದೇ ರಾಜ್ಯದ ಅನುಮತಿ ಪಡೆಯಬೇಕಿಲ್ಲ, ಯಾವುದೇ ರಾಜ್ಯದ ವೀಸಾ ತೆಗೆದುಕೊಳ್ಳಬೇಕಿಲ್ಲ, ಯಾವುದೇ ರಾಜ್ಯಕ್ಕೆ ತೆರಿಗೆ ಕಟ್ಟಬೇಕಿಲ್ಲ. ಒಂದು ಸಲ ಕಾಶ್ಮೀರದಿಂದ ಹೊರಟರೆ ನಿರ್ವಿಘ್ನವಾಗಿ ಕನ್ಯಾಕುಮಾರಿಯನ್ನು ತಲಪಬಹುದು. ಇದೆಲ್ಲ ಸರ್ದಾರ್ ಪಟೇಲ್ ಅವರು ಅಂದು ಮಾಡಿದ ಕೆಲಸದಿಂದ ಸಾಧ್ಯವಾಗಿದೆ.
ಸೋದರ ಸೋದರಿಯರೆ, ನೀವೇ ಹೇಳಿ, ಭಾರತವು ಶಕ್ತಿಶಾಲಿಯಾಗಿರಬೇಕೊ, ಬೇಡವೋ? ಭಾರತವು ವಿಶ್ವದಲ್ಲಿ ತನ್ನ ಪ್ರಭಾವವನ್ನು ಬೀರಬೇಕೊ ಬೇಡವೋ? ವಿಶ್ವವು ಭಾರತವನ್ನು ಸ್ವೀಕರಿಸುವ ರೀತಿಯಲ್ಲಿ ಭಾರತವು ಇರಬೇಕೊ, ಬೇಡವೋ? ಸೋದರ ಸೋದರಿಯರೆ, ಇದು ನೂರಾ ಇಪ್ಪತ್ತೈದು ಕೋಟಿ ಭಾರತೀಯರ ಕನಸು. ಈಗ ಇಲ್ಲಿ ಒಂದು ರೀತಿಯಲ್ಲಿ ಮಿನಿ ಭಾರತವೇ ನನ್ನ ಮುಂದೆ ಇದೆ, ಭಾರತದ ಎಲ್ಲ ಭಾಷೆ ಮಾತನಾಡುವ ಜನರು ನನ್ನ ಎದುರಿಗಿದ್ದಾರೆ. ಭಾರತವು ದೃಢವಾಗಬೇಕು, ಬಲಶಾಲಿಯಾಗಬೇಕು, ಶಕ್ತಿಶಾಲಿಯಾಗಬೇಕು ಎಂಬುದು ಪ್ರತಿಯೊಬ್ಬ ಭಾರತೀಯರ ಕನಸಾಗಿದೆ. ಭಾರತವು ಸಾಮರ್ಥ್ಯ ಹೊಂದಿರಬೇಕು, ಭಾರತವು ಸಮೃದ್ಧವಾಗಿರಬೇಕು. ಆದರೆ ಸೋದರ ಸೋದರಿಯರೆ, ಈ ಕನಸು ಪೂರ್ತಿಯಾಗಬೇಕಾದರೆ ಮೊದಲು ಭಾರತದಲ್ಲಿ ಏಕತೆ ಇರಬೇಕು.ಸಂಪ್ರದಾಯದ ಹೆಸರಿನಲ್ಲಿ, ಜಾತಿವಾದದ ವಿಷದಲ್ಲಿ, ಮೇಲು ಕೀಳೆಂಬ ವಿಕೃತ ಮಾನಸಿಕತೆಯಲ್ಲಿ, ಬಡವ ಮತ್ತು ಬಲ್ಲಿದರೆಂಬ ಅಂತರದ ನಡುವೆ, ಹಳ್ಳಿ ಮತ್ತು ಪಟ್ಟಣದ ನಡುವೆ ನಮ್ಮ ದೇಶವು ಏಕತೆಯ ಅನುಭವ ಹೊಂದಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ನನ್ನ ಸೋದರ ಸೋದರಿಯರೆ, ತಮ್ಮ ಸಾಮರ್ಥ್ಯದಿಂದ, ತಮ್ಮ ಬುದ್ಧಿ ಕೌಶಲದಿಂದ, ತಮ್ಮ ರಾಜಕೀಯ ಇಚ್ಛಾಶಕ್ತಿಯಿಂದ ಇಡೀ ದೇಶವನ್ನು ಒಂದುಗೂಡಿಸಿದ ಸರ್ದಾರ್ ಪಟೇಲ್ ಅವರ ಜನ್ಮ ಜಯಂತಿಯಂದು ಏಕತೆಯ ಸಂದೇಶವನ್ನು ಸಾರಲಾಗುತ್ತಿದೆ. ಪ್ರತಿಯೊಬ್ಬ ಭಾರತೀಯನೂ ದೇಶಭಕ್ತಿಯಿಂದ ಭಾರತದ ಏಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ದೇಶವನ್ನು ಒಡೆಯಲು, ದೇಶದಲ್ಲಿ ಅಂತರ್ ವಿರೋಧಗಳನ್ನು ಜೀವಂತವಾಗಿರಿಸಲು ಎಲ್ಲ ಶಕ್ತಿಗಳು ಕೆಲಸ ಮಾಡುತ್ತಿವೆ. ಇಂತಹ ಸಮಯದಲ್ಲಿ ಏಕತೆಗಾಗಿ ಜಾಗೃತಿ ಮೂಡಿಸುವ, ಎಚ್ಚರದಿಂದಿರುವ ಅವಶ್ಯಕತೆಯಿದೆ. ಒಂದುಗೂಡಿಸಲು ಇರುವ ಎಲ್ಲ ವಿಚಾರಗಳನ್ನು ಪದೇಪದೇ ನೆನಪಿಸಿಕೊಳ್ಳುವ ಅಗತ್ಯವಿದೆ. ಈ ಭಾರತ ಮಾತೆ, ಈ ಭಾರತ ಮಾತೆಯ ಕೊರಳಿನಲ್ಲಿ ನೂರಾ ಇಪ್ಪತ್ತೈದು ಕೋಟಿ ಭಾರತೀಯರ ರೂಪವು ಹೂಮಾಲೆಯಾಗಿ ಅಲಂಕೃತವಾಗಿದೆ, ನೂರಾ ಇಪ್ಪತ್ತೈದು ಕೋಟಿ ದೇಶವಾಸಿಗಳು ಹೂಗಳಾಗಿ ಈ ಹೂಮಾಲೆಯಲ್ಲಿ ಬಂಧಿತರಾಗಿದ್ದಾರೆ ಮತ್ತು
ಈ ನೂರಾ ಇಪ್ಪತ್ತೈದು ಕೋಟಿ ಪುಷ್ಪಗಳನ್ನು ನಾವೆಲ್ಲ ಭಾರತೀಯರೆಂಬ ಭಾವನೆಯ ದಾರವು ಪೋಣಿಸುತ್ತದೆ. ನಮ್ಮ ಭಾರತೀಯತೆಯ ಭಾವನೆ, ಈ ಭಾರತೀಯತೆ ಎಂಬ ದಾರವು ನೂರಾ ಇಪ್ಪತ್ತೈದು ಕೋಟಿ ಹೃದಯಗಳನ್ನು, ನೂರಾ ಇಪ್ಪತ್ತೈದು ಕೋಟಿ ಮನಸ್ಸುಗಳನ್ನು, ನೂರಾ ಇಪ್ಪತ್ತೈದು ಕೋಟಿ ಜನಸಂಖ್ಯೆಯನ್ನು ತಾಯಿ ಭಾರತಿಗೆ ಮಾಲೆಯ ರೂಪದಲ್ಲಿ ಪೋಣಿಸುತ್ತದೆ. ಈ ನೂರಾ ಇಪ್ಪತ್ತೈದು ಕೋಟಿ ಹೂಗಳ ಸುಗಂಧವೇ ನಮ್ಮ ದೇಶಭಕ್ತಿಯಾಗಿದೆ. ಈ ರಾಷ್ಟ್ರ ಭಕ್ತಿಯ ಸುವಾಸನೆಯು ನಮಗೆ ಪ್ರತಿಕ್ಷಣವೂ ಶಕ್ತಿ ನೀಡುತ್ತದೆ, ಪ್ರೇರಣೆ ನೀಡುತ್ತದೆ, ಚೈತನ್ಯ ನೀಡುತ್ತದೆ.ಅದನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾ ದೇಶದಲ್ಲಿ ಏಕತೆ ಮತ್ತು ಅಖಂಡತೆಯ ವಾತಾವರಣವನ್ನು ನಿರ್ಮಿಸುವಲ್ಲಿ ನಾವು ಯಶಸ್ವಿಯಾಗಬೇಕು.
ನನ್ನ ಪ್ರೀತಿಯ ಯುವಜನರೆ, ಇಂದು ಅಕ್ಟೋಬರ್ 31ನೇ ತಾರೀಖು.ಈ ದಿನ ದೆಹಲಿಯ ಮಣ್ಣಿಗೆ, ದೇಶದ ಜನತೆಗೆ ಭಾರತ ಸರ್ಕಾರದ ವತಿಯಿಂದ ಒಂದು ಬಹು ಮೌಲ್ಯದ ದೃಷ್ಟಿಕೋನ ದೊರಕಲಿದೆ.ಇನ್ನು ಸ್ವಲ್ಪ ಸಮಯದಲ್ಲೇ ದೆಹಲಿಯಲ್ಲಿ ಸರ್ದಾರ್ ಪಟೇಲ್ ಅವರ ಜೀವನವನ್ನು ಬಿಂಬಿಸುವ ಒಂದು ಡಿಜಿಟಲ್ ಮ್ಯೂಸಿಯಂ ಅನ್ನು ಲೋಕಾರ್ಪಣೆ ಮಾಡಲಿದ್ದೇನೆ.ಕನಿಷ್ಠ ಎರಡು ಗಂಟೆ, ಗರಿಷ್ಠ ಒಂದಿಡೀ ದಿನ ಅಥವಾ ವಾರಗಳೇ ಹಿಡಿಯಬಹುದು. ಅಷ್ಟರ ಮಟ್ಟಿಗೆ ವೀಕ್ಷಿಸುವ, ಅರಿತುಕೊಳ್ಳುವ, ಅಧ್ಯಯನ ಮಾಡಬಹುದಾದ ವಿಚಾರಗಳು ಅಲ್ಲಿರುತ್ತವೆ. ಪ್ರಗತಿ ಮೈದಾನದ ಸಮೀಪದಲ್ಲೇ ಈ ಶಾಶ್ವತ ಡಿಜಿಟಲ್ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರ, ಸರ್ದಾರ್ ಪಟೇಲ್ ಅವರು ಗತಿಸಿದ ಇಷ್ಟು ವರ್ಷಗಳ ಬಳಿಕ ಇಂದು ದೆಹಲಿಯಲ್ಲಿ ಸರ್ದಾರ್ ಪಟೇಲ್ ಅವರನ್ನು ಈ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಈ ಕೆಲಸವು 40, 50, 60 ವರ್ಷ ಮೊದಲೇ ಆಗಿರಬೇಕಿತ್ತು. ಆದರೆ ಆಗಲಿಲ್ಲವೇಕೆ ಎಂಬುದು ಗೊತ್ತಿಲ್ಲ. ಇದನ್ನು ಮಾಡಲಿಲ್ಲವೇಕೆ ಎಂಬುದಕ್ಕೆ ಇತಿಹಾಸವು ಉತ್ತರವನ್ನು ಕೇಳುತ್ತದೆ. ನಾವಂತೂ ಏನಾದರೂ ಮಾಡಬೇಕು ಎಂಬ ಭಾವನೆಯೊಂದಿಗೆ ಮುಂದೆ ಸಾಗಲು ಬಯಸುತ್ತಿದ್ದೆವು.
ಸರ್ದಾರ್ ಪಟೇಲ್ ಅವರ ಏಕತೆಯ ಮಂತ್ರವನ್ನು ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಲು, ಪ್ರತಿಯೊಬ್ಬ ಭಾರತೀಯರ ಸಹಜ ಸ್ವಭಾವದಲ್ಲಿ ಸೇರಿ ಹೋಗುವಂತೆ ಮಾಡಲು ಈ ದಿನ ನಾನು ಅದೇ ಕಾರ್ಯಕ್ರಮದಲ್ಲಿ ‘ಒಂದೇ ಭಾರತ, ಶ್ರೇಷ್ಠ ಭಾರತ’ ಎಂಬ ಹೊಸ ಯೋಜನೆಯನ್ನು ಉದ್ಘಾಟಿಸಲಿದ್ದೇನೆ. ಈ ಯೋಜನೆಯು ಸಹ ದೇಶದ ಏಕತೆಗೆ ಬಲ ನೀಡುವ ಯೋಜನೆಯಾಗಲಿದೆ. ಇಂದು ಆ ಪ್ರದರ್ಶನವನ್ನು ಲೋಕಾರ್ಪಣೆ ಮಾಡುವಾಗ ಇದನ್ನು ಸಹ ಉದ್ಘಾಟನೆ ಮಾಡಲಿದ್ದೇನೆ.ಈ ‘Run for Unity’ ‘ಏಕತೆಗಾಗಿ ಓಟ’ವನ್ನು ಅಕ್ಟೋಬರ್ 31ರಿಂದ ಒಂದು ವಾರದವರೆಗೆ ಇಡೀ ಭಾರತದ ಮೂಲೆಮೂಲೆಗಳಲ್ಲಿ ಆಯೋಜಿಸಲಾಗಿದೆ. ನಾವು ಸರ್ದಾರ್ ಪಟೇಲ್ ಅವರನ್ನು ಎಂದಿಗೂ ಮರೆಯಬಾರದು ಎಂದು ದೇಶವಾಸಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಸರ್ದಾರ್ ಅವರ ಏಕತೆಯ ಮಂತ್ರವನ್ನು ನಾವೆಂದೂ ಮರೆಯಬಾರದು. ನಾವು ಎಂತಹ ಭಾರತವನ್ನು ನಿರ್ಮಿಸಲು ಬಯಸುತ್ತೇವೋ ಅಂತಹ ಭಾರತ ನಿರ್ಮಿಸಲು ಇರುವ ಮೊದಲ ಷರತ್ತೆಂದರೆ ದೇಶದ ಏಕತೆ, ಜನರ ನಡುವಿನ ಏಕತೆ, ಪ್ರತಿ ಮನಸ್ಸುಗಳ ನಡುವಿನ ಏಕತೆ, ಪ್ರತಿ ಮನಸ್ಸುಗಳ ಸಂಕಲ್ಪವು ನಮ್ಮ ಭಾರತ ಮಾತೆಯು ಮಹಾನ್ ಆಗಿರುವಂತೆ ಮುನ್ನಡೆಸಬೇಕು ಎನ್ನುವುದೇ ಆಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅದೂ ದೀಪಾವಳಿ ಹಬ್ಬದ ನಡುವೆ ನಿಮ್ಮನ್ನು ಭೇಟಿಯಾಗಿದ್ದು ನಿಜಕ್ಕೂ ನನಗೆ ಆನಂದದ ಅನುಭವವಾಗುತ್ತಿದೆ. ಬಹಳ ಬಹಳ ಧನ್ಯವಾದಗಳು.
Flagged off the ‘Run for Unity.’ Role of Sardar Patel in unifying the nation is invaluable. pic.twitter.com/xlDAoHMYrs
— Narendra Modi (@narendramodi) October 31, 2016