Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೇಶವನ್ನುದ್ದೇಶಿಸಿ ಮಾತನಾಡಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಿಸಿರುವುದಾಗಿ ಪ್ರಕಟಿಸಿದರು.

ಬಡವರಿಗೆ ಸಹಾಯಹಸ್ತ

ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ಇರುವವರಿಗೆ ಆಹಾರ ಪೂರೈಸುವುದು ದೇಶದ ಪರಮೋಚ್ಚ ಆದ್ಯತೆಯಾಗಿತ್ತು. ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆಯೇ, ಸರ್ಕಾರ ಪಿಎಂ ಗರೀಬ್ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿತು. ಇದರಡಿ, 1.75 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಅನ್ನು ಬಡವರಿಗಾಗಿ ಘೋಷಿಸಲಾಯಿತು.

ಕಳೆದ ಮೂರು ತಿಂಗಳುಗಳಲ್ಲಿ 31,000 ಕೋಟಿ ರೂಪಾಯಿಗಳನ್ನು 10 ಕೋಟಿ ಬಡ ಕುಟುಂಬಗಳ ಜನ್ ಧನ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ, 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 18 ಸಾವಿರ ಕೋಟಿ ರೂ. ಜಮಾ ಮಾಡಲಾಗಿದೆ ಮತ್ತು 50 ಸಾವಿರ ಕೋಟಿ ರೂಪಾಯಿಗಳನ್ನು ಉದ್ಯೋಗಾವಕಾಶ ಒದಗಿಸುತ್ತಿರುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನ್ ಗಾಗಿ ವೆಚ್ಚಮಾಡಲಾಗಿದೆ.

ನವೆಂಬರ್ ವರೆಗೆ ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆ ವಿಸ್ತರಣೆ

ಮೂರು ತಿಂಗಳುಗಳ ಕಾಲ 80 ಕೋಟಿ ಬಡವರಿಗೆ ಮಾಸಿಕ ತಲಾ 5 ಕೆಜಿಯಂತೆ ಉಚಿತ ಅಕ್ಕಿ/ಗೋಧಿಯನ್ನು ಕುಟುಂಬಕ್ಕೆ ಮಾಸಿಕ 1 ಕೆಜಿ ಬೇಳೆಯೊಂದಿಗೆ ಬೃಹತ್ತಾಗಿ ನೀಡುತ್ತಿರುವುದು ಇಡೀ ಜಗದ ಗಮನ ಸೆಳೆದಿದೆ ಎಂದು ಪ್ರಧಾನಿ ಹೇಳಿದರು.  ಉಚಿತವಾಗಿ ಪಡಿತರ ಪೂರೈಕೆ ಮಾಡುತ್ತಿರುವವರ ಜನಸಂಖ್ಯೆ ಹಲವು ರಾಷ್ಟ್ರಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಮಳೆಗಾಲ ಆರಂಭವಾಗುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಕೃಷಿ ಕ್ಷೇತ್ರದಲ್ಲಿ ಬಹುತೇಕ ಚಟುವಟಿಕೆ ಆರಂಭವಾಗಿದೆ ಎಂದರು. ಹಲವು ಹಬ್ಬಗಳು ದರೆ ಗುರು ಪೂರ್ಣಿಮಾ, ರಕ್ಷಾ ಬಂಧನ, ಶ್ರೀ ಕೃಷ್ಣ ಜನಾಷ್ಟಮಿ, ಗಣೇಶ ಚತುರ್ಥಿ, ಓಣಂ, ದಸರಾ, ದೀಪಾವಳಿ, ಛತ್ ಪೂಜಾ ಮೊದಲಾದ ಹಬ್ಬಗಳು ಒಂದರ ನಂತರ ಮತ್ತೊಂದು ಬರುತ್ತದೆ ಎಂದೂ ಹೇಳಿದರು. ಸಂದರ್ಭದಲ್ಲಿ ಹೆಚ್ಚಾಗುವ ಅಗತ್ಯ ಮತ್ತು ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಪಿಎಂ ಗರೀಬ್ ಕಲ್ಯಾಣ ಯೋಜನೆಯನ್ನು ದೀಪಾವಳಿ ಮತ್ತು ಛತ್ ಪೂಜಾವರೆಗೆ ಅಂದರೆ ಯೋಜನೆಯನ್ನು ಜುಲೈ ನಿಂದ ನವೆಂಬರ್ ಅಂತ್ಯದವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದರು. ಐದು ತಿಂಗಳುಗಳ ಅವಧಿಯಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಮಾಸಿಕ ತಲಾ 5 ಕೆಜಿ ಗೋಧಿ/ಅಕ್ಕಿಯನ್ನು ಕುಟುಂಬವೊಂದಕ್ಕೆ ತಲಾ 1 ಕೆಜಿ ಬೇಳೆಯ ಜೊತೆಗೆ ಪೂರೈಸಲಾಗುತ್ತದೆ.

ಸರ್ಕಾರ 90,000 ಕೋಟಿ ರೂ.ಗಳನ್ನು ಯೋಜನೆಯ ವಿಸ್ತರಣೆಗಾಗಿ ವೆಚ್ಚ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಕಳೆದ ಮೂರು ತಿಂಗಳುಗಳಲ್ಲಿ ಮಾಡಲಾಗಿರುವ ವೆಚ್ಚವನ್ನೂ ಸೇರಿಸಿದರೆ ಒಟ್ಟು 1.5 ಲಕ್ಷ ಕೋಟಿ ರೂಪಾಯಿಗಳನ್ನು ಯೋಜನೆಗೆ ವೆಚ್ಚ ಮಾಡಿದಂತಾಗುತ್ತದೆ ಎಂದರು. ಸರ್ಕಾರಕ್ಕೆ ಯೋಜನೆ ಅಡಿ ಉಚಿತವಾಗಿ ಆಹಾರ ಧಾನ್ಯ ವಿತರಿಸಲು ಕಾರ್ಯಸಾಧ್ಯವಾಗಿರುವುದರ ಶ್ರೇಯವನ್ನು ಅವರು ಶ್ರಮಿಕ ರೈತರು ಮತ್ತು ಪ್ರಾಮಾಣಿಕ ತೆರಿಗೆದಾರರಿಗೆ ಅರ್ಪಿಸಿದರು. ದೇಶ ಒಂದು ರಾಷ್ಟ್ರ ಒಂದು ಪಡಿತರ ಚೀಟಿಯತ್ತ ಸಾಗುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಹೋಗುವ ಬಡವರಿಗೆ ಇದರಿಂದ ಅಪಾರ ಪ್ರಯೋಜನವಾಗಲಿದೆ ಎಂದರು.

ಅನ್ ಲಾಕ್ 2ರಲ್ಲಿ ಸುರಕ್ಷಿತವಾಗಿರಿ

ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಅನ್ ಲಾಕ್ 2ರತ್ತ ಸಾಗುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಹವಾಮಾನ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದೂ ಹೇಳಿದರು. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಾಳಜಿ ವಹಿಸುವಂತೆ ಆಗ್ರಹಿಸಿದರು.  ಲಾಕ್ ಡೌನ್ ನಂತರ ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದುಕೊಂಡ ಕಾರಣ, ಲಕ್ಷಾಂತರ ಬಡವರ ಜೀವವನ್ನು ಉಳಿಸಲಾಗಿದೆ ಮತ್ತು ಮರಣ ಪ್ರಮಾಣದಲ್ಲಿ ದೇಶ ಜಗತ್ತಿನಲ್ಲಿ ಕಡಿಮೆಯ ಪಟ್ಟಿಯಲ್ಲಿ ಇದೆ ಎಂದು ಪ್ರಧಾನಿ ಹೇಳಿದರು. ಆದಾಗ್ಯೂ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದ ನಡೆವಳಿಕೆ ಅನ್ ಲಾಕ್ 1ರಲ್ಲಿ ಹೆಚ್ಚಾಗಿ ಕಂಡುಬಂತು ಎಂದ ಅವರು, ಹಿಂದೆ ಜನರು ಮಾಸ್ಕ್ ಧಾರಣೆ, ದಿನದಲ್ಲಿ ಹಲವು ಬಾರಿ 20 ಸೆಕೆಂಡ್ ಗಳ ಕಾಲ  ಕೈತೊಳೆಯುವುದು ಮತ್ತು ಎರಡು ಗಜ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದನ್ನು ಎಚ್ಚರಿಕೆಯಿಂದ ಪಾಲಿಸುತ್ತಿದ್ದರು ಎಂದರು. ಇನ್ನೂ ಹೆಚ್ಚು ಹೆಚ್ಚು ಮುಂಜಾಗರೂಕತೆಯ ಅಗತ್ಯ ಪ್ರತಿಪಾದಿಸಿದ ಅವರು, ನಿರ್ಲಕ್ಷ್ಯದ ಹೆಚ್ಚಳ ಚಿಂತೆಯ ವಿಷಯವಾಗಿದೆ ಎಂದರು.

ಲಾಕ್ ಡೌನ್ ಅವಧಿಯಲ್ಲಿ ತೋರಿದ ಗಂಭೀರತೆಯನ್ನು ಈಗಲೂ ಅದರಲ್ಲೂ ಕಂಟೈನ್ಮೆಂಟ್ ವಲಯಗಳಲ್ಲಿ ಅನುಸರಿಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಅಂಥ ನಿಯಮ ಮತ್ತು ನಿಯಂತ್ರಣ ಪಾಲಿಸದವರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.  ದೇಶವೊಂದರ ಪ್ರಧಾನಮಂತ್ರಿಯವರು ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಕ್ಕೆ ಬಂದ ಹಿನ್ನೆಲೆಯಲ್ಲಿ 13 ಸಾವಿರ ರೂಪಾಯಿ ದಂಡ ವಿಧಿಸಿದ್ದನ್ನು ಉದಾಹರಿಸಿದರು. ಸ್ಥಳೀಯ ಆಡಳಿತಗಳು ಸಹ ಅದೇ ಚುರುಕುತನದಿಂದ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು. ಯಾರೊಬ್ಬರೂ ಕಾನೂನಿಗಿಂತ ದೊಡ್ಡವರಲ್ಲ ಎಂದು ಪ್ರಧಾನಿ ಹೇಳಿದರು.

ಮುನ್ನೋಟ

ಮುಂಬರುವ ಸಮಯದಲ್ಲಿ, ಬಡವರು ಮತ್ತು ಅಗತ್ಯ ಇರುವವರನ್ನು ಸಬಲಗೊಳಿಸಲು ಇನ್ನೂ ಹೆಚ್ಚಿನ ಕ್ರಮವನ್ನು ಸರ್ಕಾರ ಕೈಗೊಳ್ಳುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಆರ್ಥಿಕ ಚಟುವಟಿಕೆ ಹೆಚ್ಚಿಸಲಾಗುತ್ತಿದೆ ಎಂದರು. ಆತ್ಮ ನಿರ್ಭರ ಭಾರತದೆಡೆಗೆ ಶ್ರಮಿಸುವ ಸಂಕಲ್ಪವನ್ನು ಪುನರುಚ್ಚರಿಸಿದ ಅವರು, ಸ್ಥಳೀಯತೆಗೆ ಧ್ವನಿಯಾಗಿ ಎಂದರು. ಜನರು ಮಾಸ್ಕ್/ ಮುಖ ಕವಚ ಬಳಸುವಂತೆ, ಎಚ್ಚರಿಕೆಯಿಂದ ಇರುವಂತೆ ಮತ್ತು ಎರಡು ಗಜ ಅಂತರದ ಮಂತ್ರ ಪಾಲಿಸುವಂತೆ ತಿಳಿಸಿದರು.