Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಪ್ರಧಾನಿ ಸಂವಾದ


ಪ್ರಧಾನಮಂತ್ರಿ, ಶ್ರೀ. ನರೇಂದ್ರ ಮೋದಿ ಅವರು ಇಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಂವಾದ ನಡೆಸಿದರು. ಈ ಸಂವಾದವು ‘ಭಾರತದ ಪರಿವರ್ತನೆಯಲ್ಲಿ ರಾಜ್ಯಗಳು ಚಾಲಕ ಶಕ್ತಿ’ ಎಂಬ ಧ್ಯೇಯ ಕುರಿತ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮಾವೇಶದ ಭಾಗವಾಗಿತ್ತು. ಇಂಥ ಸಮಾವೇಶದಲ್ಲಿ ಪ್ರಧಾನಮಂತ್ರಿಯವರು ಭಾಷಣ ಮಾಡಿರುವುದು ಇದೇ ಮೊದಲು. ಮುಖ್ಯ ಕಾರ್ಯದರ್ಶಿಗಳು ತಮ್ಮ ತಮ್ಮ ರಾಜ್ಯಗಳ ಉತ್ತಮ ಪದ್ಧತಿಗಳ ಬಗ್ಗೆ ಮಾತನಾಡಿದರು.  

ಗ್ರಾಮೀಣ ಅಭಿವೃದ್ಧಿ, ಕೌಶಲ ಅಭಿವೃದ್ಧಿ, ಬೆಳೆ ವಿಮೆ, ಆರೋಗ್ಯ ವಿಮೆ, ಪರ್ಯಾಯ (ತೃತೀಯ) ಆರೋಗ್ಯ ರಕ್ಷಣೆ, ದಿವ್ಯಾಂಗ ಮಕ್ಕಳ ಕಲ್ಯಾಣ, ಶಿಶು ಮರಣದ ಪ್ರಮಾಣ ತಗ್ಗಿಸುವುದು, ಬುಡಕಟ್ಟು ಕಲ್ಯಾಣ, ಘನ ತ್ಯಾಜ್ಯ ನಿರ್ವಹಣೆ, ನೈರ್ಮಲ್ಯ, ಕುಡಿಯುವ ನೀರು, ನದಿ ಸಂರಕ್ಷಣೆ, ನೀರಿನ ನಿರ್ವಹಣೆ, ಇ-ಆಡಳಿತ, ಪಿಂಚಣಿ ಸುಧಾರಣೆ, ತುರ್ತು ಸೇವೆಗಳು, ಖನಿಜ-ಸಮೃದ್ಧ ಪ್ರದೇಶಗಳ ಅಭಿವೃದ್ಧಿ, ಸಾರ್ವಜನಿಕ ಪೂರೈಕೆ ವ್ಯವಸ್ಥೆ ಸುಧಾರಣೆ, ಸಬ್ಸಿಡಿಯ ನೇರ ಸವಲತ್ತು ವರ್ಗಾವಣೆ; ಸೌರಶಕ್ತಿ, ಕ್ಲಸ್ಟರ್ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸುಲಭವಾಗಿ ವಾಣಿಜ್ಯ ನಡೆಸುವುದು ಸೇರಿದಂತೆ ಹಲವು ವಿಷಯಗಳ ಮೇಲೆ ಮುಖ್ಯ ಕಾರ್ಯದರ್ಶಿಗಳು ಉತ್ತಮ ಪದ್ಧತಿಗಳ ಮಂಡನೆ ಮಾಡಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಆಡಳಿತದಲ್ಲಿ ಆದ್ಯತೆ ಮತ್ತು ದೃಷ್ಟಿಕೋನ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ನಾವು ರಾಜ್ಯಗಳ ಅನುಭವದಿಂದ ಕಲಿಯಬೇಕಾದ್ದು ಬಹಳಷ್ಟಿದೆ, ಇವು ಹಲವು ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಪರಿಹಾರ ಒದಗಿಸುತ್ತದೆ ಎಂದರು. ಸರ್ಕಾರದ ಉನ್ನತಾಧಿಕಾರಿಗಳಿಗೆ ಸವಾಲುಗಳಿಂದ ಹೊರಬರುವ ಸಂಘಟಿತ ದೃಷ್ಟಿಕೋನ ಮತ್ತು ಸಾಮರ್ಥ್ಯ ಇದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಅನುಭವಗಳ ವಿನಿಮಯ ಮಹತ್ವವಾದ್ದು ಎಂದರು. 
ರಾಜ್ಯಗಳ ಯುವ ಅಧಿಕಾರಿಗಳ ತಂಡ ಈಗ ಪ್ರತಿ ರಾಜ್ಯಕ್ಕೆ ಭೇಟಿ ನೀಡುವ ಮೂಲಕ ಇಂಥ ಉತ್ತಮವಾದ ಪದ್ಧತಿಗಳನ್ನು ಅರಿಯುತ್ತಿದ್ದಾರೆ ಎಂದು ಹೇಳಿದರು. ಇದು ರಾಜ್ಯಗಳಾದ್ಯಂತ ಉತ್ತಮ ಪದ್ಧತಿಗಳನ್ನು ಸಮರ್ಥವಾಗಿ ಅಳವಡಿಸಲು ಅನುಕೂಲವಾಗುತ್ತದೆ ಎಂದರು. 
‘ಸ್ಪರ್ಧಾತ್ಮಕ ಸಹಕಾರಿ ಒಕ್ಕೂಟ ವ್ಯವಸ್ಥೆ’ಯಲ್ಲಿನ ವಿಶ್ವಾಸವನ್ನು ಗಮನದಲ್ಲಿಟ್ಟುಕೊಳ್ಳಲು ಅಧಿಕಾರಿಗಳಿಗೆ ಪ್ರಧಾನ ಮಂತ್ರಿ ಸೂಚಿಸಿದರು. ಜಿಲ್ಲೆಗಳು ಮತ್ತು ನಗರಗಳು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಸದ್ಗುಣಶೀಲ ಸ್ಪರ್ಧಾತ್ಮಕ ಪರಿಸರದ ಭಾಗವಾಗಿರಬೇಕು ಎಂದು ಹೇಳಿದರು. ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯಶಸ್ಸುಗಳನ್ನು ದೊಡ್ಡ ರಾಜ್ಯಗಳು ಆರಂಭದಲ್ಲಿ ಒಂದು ಜಿಲ್ಲೆಯಿಂದ ಪುನರಾವರ್ತಿಸಬೇಕು ಎಂದು ಹೇಳಿದರು. ಈ ನಿಟ್ಟಿನಲ್ಲಿ ಹರಿಯಾಣ ಮತ್ತು ಚಂಡೀಗಢ ಸೀಮೆಎಣ್ಣೆ ಮುಕ್ತ ಆಗಿರುವುದನ್ನು ಪ್ರಸ್ತಾಪಿಸಿದರು. 
ಮಾಸಿಕ ಪ್ರಗತಿ ಸಭೆಯ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ಇದು ದೀರ್ಘ ಕಾಲದಿಂದ ನೆನಗುದಿಗೆ ಬಿದ್ದಿದ್ದ ಹಲವು ಯೋಜನೆಗಳಿಗೆ ನಿರ್ಣಾಯಕ ಚಾಲನೆ ನೀಡಿದೆ ಎಂದರು. ಹಗೇವುಗಳಿಂದ ಹೊರಬಂದು, ಕೇಂದ್ರದೊಂದಿಗೆ ಮತ್ತು ಪರಸ್ಪರ ಜೊತೆಗೂಡಿ ಶ್ರಮಿಸುವಂತೆ ರಾಜ್ಯಗಳಿಗೆ ಕರೆ ನೀಡಿದರು. 
ಇಂದು ಇಡೀ ಜಗತ್ತು ಭಾರತದ ಮೇಲೆ ವಿಶ್ವಾಸವಿಟ್ಟಿದೆ, ಭಾರತದ ಬಗ್ಗೆ ನಿರೀಕ್ಷೆ ಇಟ್ಟಿದೆ, ಮತ್ತು ಭಾರತದೊಂದಿಗೆ ಪಾಲುದಾರನಾಗ ಬಯಸಿದೆ ಎಂದರು. ಇದು ನಮಗೆ ಸುವರ್ಣಾವಕಾಶ ಎಂದ ಅವರು, ಸುಲಭವಾಗಿ ವಾಣಿಜ್ಯ ನಡೆಸುವುದನ್ನು ಪ್ರಥಮ ಆದ್ಯತೆ ಮಾಡಿಕೊಳ್ಳುವಂತೆ ತಿಳಿಸಿದರು. ಇದು ರಾಜ್ಯಗಳಿಗೆ ಬಂಡವಾಳ ಆಕರ್ಷಿಸಲು ನೆರವಾಗುತ್ತದೆ ಎಂದರು. ಸುಲಭವಾಗಿ ವಾಣಿಜ್ಯ ನಡೆಸುವುದರಲ್ಲಿನ ಸುಧಾರಣೆಯು ರಾಜ್ಯಗಳಿಗೆ ಹೆಚ್ಚಿನ ಹೂಡಿಕೆ ತರುತ್ತದೆ ಎಂದರು. ರಾಜ್ಯಗಳಿಗೆ ಇನ್ನೂ ಸ್ಪರ್ಶಿಸದ ಅಗಾಧ ಅಭಿವೃದ್ಧಿಯ ಸಾಮರ್ಥ್ಯವಿದೆ ಎಂದರು. 
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆರಂಭದ ದಿನಗಳಲ್ಲಿ ಭೂಕಂಪಾನಂತರದ ಕಚ್ ಪುನರ್ ನಿರ್ಮಾಣವನ್ನು ಪ್ರಧಾನಿಯವರು ಸ್ಮರಿಸಿದರು. ಆ ದಿನಗಳಲ್ಲಿ ಸಮರ್ಪಣಾಭಾವದಿಂದ ಒಂದು ತಂಡವಾಗಿ ಕೆಲಸ ಮಾಡಿದ ಅಧಿಕಾರಿಗಳನ್ನು ಅವರು ಪ್ರಶಂಸಿಸಿದರು. ಈ ನಿಟ್ಟಿನಲ್ಲಿ ಅವರು ಪುರಾತನ ಕಾನೂನುಗಳನ್ನು ತೆಗೆದುಹಾಕುವ ಮಹತ್ವವನ್ನೂ ಪ್ರಸ್ತಾಪಿಸಿದರು. 
ಕೃಷಿ ವಲಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ತಂತ್ರಜ್ಞಾನದ ಬಳಕೆ ಕಡ್ಡಾಯವಾಗಬೇಕೆಂದರು. ಕೃಷಿ ಉತ್ಪಾದನೆಯಲ್ಲಿ ವ್ಯರ್ಥವಾಗುವುದನ್ನು ಕಡಿಮೆ ಮಾಡಬೇಕು ಎಂದು ಪ್ರತಿಪಾದಿಸಿದ ಅವರು, ಆಹಾರ ಸಂಸ್ಕರಣೆಯ ಮೇಲೆ ಗಮನ ನೀಡಬೇಕೆಂದರು. ಕೃಷಿ ಸುಧಾರಣೆಗಳ ಮೇಲೆ ಮತ್ತು ಇ-ನಾಮ್ ಮೇಲೆ ಗಮನ ಹರಿಸುವಂತೆ ರಾಜ್ಯಗಳಿಗೆ ಕರೆ ನೀಡಿದರು. 
ಹೊಸ ಉಪಕ್ರಮಗಳ ವಿಚಾರದಲ್ಲಿ ಧನಾತ್ಮಕ ಸ್ವಭಾವ ರೂಢಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನಮಂತ್ರಿಯವರು ಮನವಿ ಮಾಡಿದರು. ಆಯ್ಕೆಯಾದ ರಾಜಕೀಯ ನಾಯಕತ್ವ ತನ್ನ ಸಿದ್ಧಾಂತದ ಹೊರತಾಗಿ ಸದಾ ಹೊಸ, ಧನಾತ್ಮಕ ವಿಚಾರಗಳಿಗೆ ಸ್ಪಂದಿಸಬೇಕು ಎಂದರು.

ಆಧಾರ್ ಬಳಕೆ ಸರ್ವಾಂಗೀಣ ಲಾಭ ತಂದಿದೆ ಮತ್ತು ಸೋರಿಕೆ ತಡೆಗಟ್ಟಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಉತ್ತಮ ಆಡಳಿತದ ದೃಷ್ಟಿಯಿಂದ ಇದನ್ನು ಗರಿಷ್ಠಗೊಳಿಸುವಂತೆ ಮನವಿ ಮಾಡಿದರು. ಸರ್ಕಾರದ ಇ –ಮಾರುಕಟ್ಟೆ ತಾಣ (ಜಿಇಎಂ) ಸರ್ಕಾರಿ ದಾಸ್ತಾನಿನಲ್ಲಿ ಸಾಮರ್ಥ್ಯ, ಉಳಿತಾಯ ಮತ್ತು ಪಾರದರ್ಶಕತೆ ತರಲಿದೆ ಎಂದರು. ಎಲ್ಲ ರಾಜ್ಯ ಸರ್ಕಾರಗಳೂ ಆಗಸ್ಟ್ 15ರ ಹೊತ್ತಿಗೆ ಇದರ ಬಳಕೆ ಗರಿಷ್ಠಗೊಳಿಸಬೇಕು ಎಂದರು. 
ಏಕ ಭಾರತ ಶ್ರೇಷ್ಠ ಭಾರತದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ನಾವು ಸದಾ ನಮ್ಮನ್ನು ಒಗ್ಗೂಡಿಸುವ ಅಂಶಗಳನ್ನು ಸ್ಮರಿಸಬೇಕು ಎಂದರು. ಎಲ್ಲ ಮುಖ್ಯ ಕಾರ್ಯದರ್ಶಿಗಳೂ ಈ ಯೋಜನೆಗೆ ಕೆಲಸ ಮಾಡಬೇಕೆಂದರು. 
ಉತ್ತಮ ಆಡಳಿತವು ಸರ್ಕಾರಿ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿಯ ಗುರಿಯ ಯಶಸ್ಸಿನಲ್ಲಿ ಪ್ರಮುಖ ಸಾಧನ ಎಂದು ಪ್ರಧಾನಿ ಹೇಳಿದರು. ರಾಜ್ಯಗಳಲ್ಲಿರುವ ಕಿರಿಯ ಅಧಿಕಾರಿಗಳು ಹೆಚ್ಚಿನ ಸಮಯವನ್ನು ಕ್ಷೇತ್ರ ದರ್ಶನದಲ್ಲಿ ವಿನಿಯೋಗಿಸಬೇಕು, ಆಗ ಅವರಿಗೆ ವಾಸ್ತವದ ಸಾಕ್ಷಾತ್ ಅರಿವು ಆಗುತ್ತದೆ ಎಂದರು. ಸಾಂಸ್ಥಿಕ ಸ್ಮರಣೆಯನ್ನು ಸಂರಕ್ಷಿಸುವ ಮಹತ್ವವನ್ನೂ ಪ್ರಧಾನಿ ಪ್ರತಿಪಾದಿಸಿದರು. ಜಿಲ್ಲೆಗಳಲ್ಲಿ ಅಧಿಕಾರಿಗಳು ಗೆಜೆಟ್ ಬರೆಯುವುದನ್ನು ಕಡ್ಡಾಯ ಮಾಡಬೇಕು ಎಂದು ಅವರು ಹೇಳಿದರು. 
2022ರಲ್ಲಿ ನಾವು ಸ್ವಾಂತಂತ್ಯ್ರದ 75ನೇ ವರ್ಷ ಪೂರೈಸುತ್ತಿದ್ದೇವೆ ಎಂಬುದನ್ನು ಪ್ರಧಾನಿ ಪ್ರಸ್ತಾಪಿಸಿದರು. ಇದು ನಮಗೆ ಸಂಯೋಜಿತ ಸ್ಫೂರ್ತಿಯ ಅವಕಾಶವಾಗಿದ್ದು, ಪ್ರತಿಯೊಬ್ಬರೂ ಸರ್ವಾಂಗೀಣ ಅಭಿವೃದ್ಧಿಗಾಗಿ ಅಭಿಯಾನದೋಪಾದಿಯಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು. 
ಕೇಂದ್ರ ಯೋಜನಾ ಖಾತೆ ಸಹಾಯಕ ಸಚಿವ ಶ್ರೀ. ರಾವ್ ಇಂದ್ರಜಿತ್ ಸಿಂಗ್, ನೀತಿ ಆಯೋಗದ ಉಪಾಧ್ಯಕ್ಷ ಡಾ. ಅರವಿಂದ ಪನಗರಿಯಾ, ನೀತಿ ಆಯೋಗದ ಸಿಇಓ ಶ್ರೀ ಅಮಿತಾಬ್ ಕಾಂತ್ ಮತ್ತು ಸರ್ಕಾರ, ಪ್ರಧಾನಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಮತ್ತು ಸಂಪುಟ ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. 
                                                                         ****
AKT/NT