ಭಾರತ ಮತ್ತು ರಷ್ಯಾದ ನಾಯಕರಾದ ನಾವು, ನಮ್ಮ ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾದ 70ನೇ ವಾರ್ಷಿಕೋತ್ಸವ ವರ್ಷದ ಸಂದರ್ಭದಲ್ಲಿ, ಭಾರತ –ರಷ್ಯಾದ ವಿಶೇಷ ಮತ್ತು ಗೌರವದ ವ್ಯೂಹಾತ್ಮಕ ಪಾಲುದಾರಿಕೆಯು ಎರಡು ದೊಡ್ಡ ಶಕ್ತಿಗಳ ನಡುವೆ ಪರಸ್ಪರ ನಂಬಿಕೆಯಿಂದ ಕೂಡಿದ ಅನನ್ಯ ಬಾಂಧವ್ಯ ಎಂದು ಉಲ್ಲೇಖಿಸಲಿಚ್ಛಿಸುತ್ತೇವೆ. ನಮ್ಮ ಬಾಂಧವ್ಯವು ರಾಜಕೀಯ ಬಾಂಧವ್ಯ, ಭದ್ರತೆ, ವಾಣಿಜ್ಯ ಮತ್ತು ಆರ್ಥಿಕತೆ, ಸೇನೆ ಮತ್ತು ತಾಂತ್ರಿಕ ಕ್ಷೇತ್ರ, ಇಂಧನ, ವೈಜ್ಞಾನಿಕ, ಸಾಂಸ್ಕೃತಿಕ ಮತ್ತು ಮಾನವೀಯ ವಿನಿಮಯ ಹಾಗೂ ವಿದೇಶಾಂಗ ನೀತಿ ಸೇರಿದಂತೆ ಎರಡೂ ದೇಶಗಳ ರಾಷ್ಟ್ರೀಯ ಹಿತವನ್ನು ಉತ್ತೇಜಿಸುವ ಕ್ಷೇತ್ರಗಳನ್ನು ಒಳಗೊಂಡಿದೆ ಹಾಗೂ ಹೆಚ್ಚು ಶಾಂತಿಯುತವಾದ ಮತ್ತು ವಿಶ್ವ ವ್ಯವಸ್ಥೆ ಸ್ಥಾಪಿಸಲೂ ಕೊಡುಗೆ ನೀಡುತ್ತದೆ.
ನಮ್ಮ ದ್ವಿಪಕ್ಷೀಯ ಬಾಂಧವ್ಯ ಆಳವಾದ ಪರಸ್ಪರ ತಿಳಿವಳಿಕೆ ಮತ್ತು ಗೌರವದ ಆಧಾರವಾಗಿದೆ, ಇದೇ ರೀತಿಯ ಆದ್ಯತೆಗಳು ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಮತ್ತು ವಿದೇಶಾಂಗ ನೀತಿಯಲ್ಲೂ ಇದೆ. ನಾವು ಶಾಂತಿ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ಮತ್ತು ಸಾಂಸ್ಕೃತಿಕ ಮತ್ತು ನಾಗರಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಜಾಗತಿಕ ವಿನ್ಯಾಸ ರೂಪಿಸಲು ಮತ್ತು ಮಾನವೀಯತೆಯ ಏಕತೆಯನ್ನು ಬಲಪಡಿಸುವ ಅದೇ ವಿಧಾನಗಳನ್ನು ಇಚ್ಛಿಸುತ್ತೇವೆ. ಭಾರತ – ರಷ್ಯಾ ಬಾಂಧವ್ಯವು ಎಲ್ಲ ಕಾಲದಲ್ಲೂ ಪ್ರಶ್ನಾತೀತವಾಗಿ ನಿಂತಿದೆ ಮತ್ತು ಅದು ಬಾಹ್ಯ ಪ್ರಭಾವವನ್ನು ನಿರೋಧಿಸುವಂತಿದೆ.
ರಷ್ಯಾ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಳುಕಿಲ್ಲದೆ ಬೆಂಬಲ ನೀಡಿತ್ತು ಮತ್ತು ಸ್ವಾವಲಂಬನೆ ಸಾಧಿಸಲು ನೆರವು ನೀಡಿತು. 1971ರ ಆಗಸ್ಟ್ ನಲ್ಲಿ ನಮ್ಮ ದೇಶಗಳು, ಪರಸ್ಪರರ ಸಾರ್ವಭೌಮತ್ವ ಮತ್ತು ಹಿತಾಸಕ್ತಿಗಳನ್ನು, ಉತ್ತಮ ನೆರೆಹೊರೆ ಮತ್ತು ಶಾಂತಿಯುತ ಸಹ-ಅಸ್ತಿತ್ವವನ್ನು ಗೌರವಿಸುವುದನ್ನು ಒತ್ತಿ ಹೇಳುವ ಮೂಲಭೂತ ತತ್ವಗಳುಳ್ಳ ಶಾಂತಿ, ಸ್ನೇಹ ಮತ್ತು ಸಹಕಾರದ ಒಪ್ಪಂದಗಳಿಗೆ ಸಹಿ ಹಾಕಿದವು. ಎರಡು ದಶಕಗಳ ಬಳಿ, 1993ರ ಜನವರಿಯಲ್ಲಿ ಭಾರತ ಮತ್ತು ರಷ್ಯಾ ಹೊಸ ಸ್ನೇಹ ಮತ್ತು ಸಹಕಾರದ ಒಪ್ಪಂದದಲ್ಲಿ ಈ ನಿಯಮಗಳ ಪಾವಿತ್ರ್ಯತೆಯನ್ನು ಪುನರುಚ್ಚರಿಸಿದವು. 2007ರ ಅಕ್ಟೋಬರ್ 3ರಂದು ಭಾರತ ಗಣರಾಜ್ಯ ಮತ್ತು ರಷ್ಯಾ ಒಕ್ಕೂಟದ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯ ಘೋಷಣೆಯು, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ, ಪ್ರಮುಖ ಜಾಗತಿಕ ಮತ್ತು ಪ್ರಾದೇಶಿಕ ಸವಾಲು ಎದಿರಿಸುವುದು, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳ ಆಪ್ತ ಸಹಕಾರದ ಖಾತ್ರಿಪಡಿಸುವ ಸಂಘಟಿತ ದೃಷ್ಟಿಕೋನದೊಂದಿಗೆ ದ್ವಿಪಕ್ಷೀಯ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಿತು. ಈ ಪಾಲುದಾರಿಕೆಯನ್ನು 2010ರ ಡಿಸೆಂಬರ್ 21ರಂದು ವಿಶೇಷ ಮತ್ತು ವಿಶಿಷ್ಠ ವ್ಯೂಹಾತ್ಮಕ ಪಾಲುದಾರಿಕೆಗೆ ಉನ್ನತೀಕರಿಸಲಾಯಿತು.
ಭಾರತ – ರಷ್ಯಾ ಬಾಂಧವ್ಯದ ಸಮಗ್ರ ಅಭಿವೃದ್ಧಿಯನ್ನು ಮುಂದುವರಿಸುವುದು ಎರಡೂ ದೇಶಗಳ ವಿದೇಶಾಂಗ ನೀತಿಯ ಪೂರ್ಣ ಆದ್ಯತೆಯಾಗಿದೆ. ಹೆಚ್ಚು ಫಲಿತಾಂಶ ಆಧಾರಿತವಾಗುವಂತೆ ನಾವು ವಿವಿಧ ಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದ ಪಕ್ರಮಗಳ ಮೂಲಕ ಮತ್ತು ನಮ್ಮ ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ಹೆಚ್ಚಿಸುವ ಮತ್ತು ಶ್ರೀಮಂತಗಳಿಸುವ ಮೂಲಕ ನಮ್ಮ ಸಹಕಾರದ ಸ್ವರೂಪವನ್ನು ವಿಸ್ತರಿಸಲಿದ್ದೇವೆ.
ಇಂಧನ ವಲಯದಲ್ಲಿ ಭಾರತ ಮತ್ತು ರಷ್ಯಾದ ಆರ್ಥಿಕತೆಗಳು ಪರಸ್ಪರ ಪೂರಕವಾಗಿವೆ. ನಾವು ನಮ್ಮ ದೇಶಗಳ ನಡುವೆ ‘ಇಂಧನ ಸೇತುವೆ’ನಿರ್ಮಿಸಲು ಶ್ರಮಿಸಲಿದ್ದೇವೆ ಮತ್ತು ಪರಮಾಣು, ಹೈಡ್ರೋಕಾರ್ಬನ್, ಜಲ ವಿದ್ಯುತ್ ಮತ್ತು ಪುನರ್ ನವೀಕರಿಸಬಹುದಾದ ಇಂಧನ ಮೂಲಗಳು ಹಾಗೂ ಇಂಧನ ದಕ್ಷತೆ ಸುಧಾರಣೆ ಸೇರಿದಂತೆ ಎಲ್ಲ ಇಂಧನ ಸಹಕಾರ ಕ್ಷೇತ್ರದಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ವಿಸ್ತರಿಸಲಿದ್ದೇವೆ.
ಸುಸ್ಥಿರ ಆರ್ಥಿಕ ಪ್ರಗತಿ ಸಾಧಿಸಲು, ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ಕಡಿಮೆ ಮಾಡಲು ಅತ್ಯಂತ ಮಹತ್ವವಾದ ಮತ್ತು ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದದ ನಿಬಂಧನೆಗಳನ್ನು ಪೂರೈಸುವಲ್ಲಿ ಸಹಕಾರಿಯಾದ, ಆರ್ಥಿಕವಾಗಿ ದಕ್ಷವಾದ ಮತ್ತು ಪರಿಸರ ಸ್ನೇಹಿಯಾದ, ಜಾಗತಿಕ ಇಂಧನ ಮಾರುಕಟ್ಟೆಯ ಅವಿಭಾಜ್ಯ ಅಂಗವಾದ ನೈಸರ್ಗಿಕ ಅನಿಲವನ್ನುವ್ಯಾಪಕವಾಗಿ ಬಳಸುವುದರ ಅಗತ್ಯವನ್ನು ಭಾರತ ಮತ್ತು ರಷ್ಯಾ ಗುರುತಿಸಿವೆ. ಶಾಂತಿಯುತ ಉದ್ದೇಶಕ್ಕೆ ಪರಮಾಣು ಇಂಧನ ಬಳಕೆ ಸಹಕಾರವು ಎರಡು ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯ ಮಾನದಂಡವಾಗಿದ್ದು, ಭಾರತದ ಇಂಧನ ಸುರಕ್ಷತೆಗೆ ಕೊಡುಗೆ ನೀಡುತ್ತಿದೆ ಮತ್ತು ವಿಸ್ತೃತ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರವಾಗಿ ಹೊರಹೊಮ್ಮಿದೆ.
ಎರಡೂ ಕಡೆಗಳ ಸಂಘಟಿತ ಪ್ರಯತ್ನದ ಮೂಲಕ, ನಮ್ಮ ನಾಗರಿಕ ಪರಮಾಣು ಸಹಭಾಗಿತ್ವದಲ್ಲಿ ಸತತ ಮತ್ತು ಪ್ರದರ್ಶನಶಕ್ಯವಾದ ಸಾಧನೆಗಳ ಸರಣಿ ಇದಾಗಿದ್ದು, ಇದರಲ್ಲಿ ಕುಡಂಕುಳಂನ ಪರಮಾಣು ವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅದನ್ನು ಭಾರತದ ದೊಡ್ಡ ವಿದ್ಯುತ್ ಕೇಂದ್ರಗಳಲ್ಲಿ ಒಂದನ್ನಾಗಿ ಪರಿವರ್ತಿಸಲಾಗುತ್ತಿದೆ. ನಾವು ಕುಡಂಕುಳಂ ಪರಮಾಣು ಇಂಧನ ಸ್ಥಾವರದ 5 ಮತ್ತು 6ನೇ ಘಟಕಗಳ ಸಾಮಾನ್ಯ ಚೌಕಟ್ಟು ಒಪ್ಪಂದ ಮತ್ತು ಕ್ರೆಡಿಟ್ ಪ್ರೋಟೋಕಾಲ್ ಆಖೈರನ್ನು ನಾವು ಸ್ವಾಗತಿಸುತ್ತೇವೆ. ಶಾಂತಿಯುತ ಉದ್ದೇಶಕ್ಕಾಗಿ ಅಣು ಇಂಧನ ಬಳಕೆ ಕುರಿತಂತೆ 2014ರ ಡಿಸೆಂಬರ್ 11ರಂದು ಎರಡೂ ದೇಶಗಳ ನಡುವೆ ಅಂಕಿತ ಹಾಕಲಾದ ಸಹಕಾರ ಒಪ್ಪಂದವನ್ನು ಬಲಪಡಿಸಲು ವ್ಯೂಹಾತ್ಮಕ ನೋಟದೊಂದಿಗೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಾವು ಶ್ರಮಿಸಲಿದ್ದೇವೆ. ಪರಮಾಣು ಶಕ್ತಿ,ಪರಮಾಣು ಇಂಧನ ವರ್ತುಲ ಮತ್ತು ಪರಮಾಣು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಒಳಗೊಂಡ ವಿಶಾಲ ವ್ಯಾಪ್ತಿಯ ಮೂಲಕ ಭಾರತ-ರಷ್ಯಾ ಸಹಕಾರದ ಭವಿಷ್ಯವು ಭರವಸೆ ಮೂಡಿಸಿದೆ.
ಪರಮಾಣು ಇಂಧನ ವಲಯದಲ್ಲಿ ಹೆಚ್ಚುತ್ತಿರುವ ಭಾರತ – ರಷ್ಯಾ ನಡುವಿನ ಪಾಲುದಾರಿಕೆಯು ಸರ್ಕಾರದ ‘ಮೇಕ್ ಇನ್ ಇಂಡಿಯಾ’ಉಪಕ್ರಮದ ಹಾದಿಯಲ್ಲಿ ಭಾರತದಲ್ಲಿ ಅತ್ಯಾಧುನಿಕ ಪರಮಾಣು ಉತ್ಪಾದನಾ ಸಾಮರ್ಥ್ಯ ಅಭಿವೃದ್ಧಿಯ ಅವಕಾಶವನ್ನು ತೆರೆಯುತ್ತದೆ. ತಮ್ಮ ಪರಮಾಣು ಉದ್ಯಮಗಳನ್ನು ನಿಕಟವಾಗಿ ತೊಡಗಿಸಿಕೊಳ್ಳಲು ಮತ್ತು ಸಮಗ್ರ ಸಹಯೋಗಕ್ಕೆ ಪ್ರೋತ್ಸಾಹಿಸಲು 2015ರ ಡಿಸೆಂಬರ್ 24ರಂದು ಸಹಿ ಹಾಕಲಾದ “ಭಾರತದಲ್ಲಿ ಸ್ಥಳೀಯಕರಣಕ್ಕಾಗಿ ಕಾರ್ಯಸೂಚಿಯ ಕಾರ್ಯಕ್ರಮ” ವನ್ನು ಕಾರ್ಯರೂಪಕ್ಕೆ ತರಲು, ಭಾರತ ಮತ್ತು ರಷ್ಯಾ ಬದ್ಧವಾಗಿವೆ.
ರಷ್ಯಾ ಒಕ್ಕೂಟದ ಉತ್ತರ ಧ್ರುವೀಯ ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಗಳ ಶೋಧನೆ ಮತ್ತು ಹೊರತೆಗೆಯುವಿಕೆ ಕುರಿತ ಜಂಟಿ ಯೋಜನೆಗಳನ್ನು ಪ್ರಾರಂಭಿಸುವುದರಲ್ಲಿ ನಾವು ಆಸಕ್ತಿ ಹೊಂದಿದ್ದೇವೆ.
ನಾವು, ಆಳ ಸಮುದ್ರದ ಶೋಧನೆ ಮತ್ತು ಹೈಡ್ರೋ ಕಾರ್ಬನ್ ಸಂಪನ್ಮೂಲ, ಪಾಲಿ ಲೋಹೀಯ ಖನಿಜಗಳ ಅಭಿವೃದ್ಧಿ ಮತ್ತು ಇತರ ಸಾಗರ ಸಂಪನ್ಮೂಲಗಳನ್ನು ಪರಸ್ಪರರಿಗೆ ಲಾಭದಾಯಕವಾದ ಸಹಕಾರ ಅಭಿವೃದ್ಧಿಪಡಿಸಲು ಸಾಗರ ಸಂಶೋಧನೆ ಮತ್ತು ತರಬೇತಿಯಲ್ಲಿ ಇಬ್ಬರಿಗೂ ಲಾಭದಾಯಕವಾಗುವಂತೆ ಸಾಮರ್ಥ್ಯದ ಸಂಪೂರ್ಣ ಬಳಕೆಯ ಸಹಕಾರಕ್ಕೆ ಜಂಟಿ ಕಾರ್ಯತಂತ್ರ ಅಭಿವೃದ್ಧಿಪಡಿಸಲಿದ್ದೇವೆ.
ಎರಡೂ ದೇಶಗಳ ಇಂಧನ ಕಂಪನಿಗಳ ನಡುವೆ ಹಾಲಿ ಇರುವ ವಿದ್ಯುತ್ ಕೇಂದ್ರಗಳ ಆಧುನೀಕರಣ ಮತ್ತು ಭಾರತದ ಎಲ್ಲೆಯೊಳಗೆ ನೂತನ ಕೇಂದ್ರಗಳ ನಿರ್ಮಾಣಕ್ಕೆ ಸಹಕಾರವನ್ನು ನಾನು ಸ್ವಾಗತಿಸುತ್ತೇವೆ. ತಂತ್ರಜ್ಞಾನ, ವಿಭಿನ್ನ ಭೂ ಪ್ರದೇಶದಲ್ಲಿ ಮತ್ತು ಹವಾಮಾನದಲ್ಲಿ ಕೆಲಸ ಮಾಡಿದ ಅನುಭವ ಮತ್ತು ಶುದ್ಧ, ಹವಾಮಾನ ಸ್ನೇಹಿ ಮತ್ತು ಕೈಗೆಟಕುವ ದರದ ಇಂಧನ ಮೂಲಗಳ ಸೃಷ್ಟಿಗಾಗಿ ಇಂಧನ ದಕ್ಷತೆ ತಂತ್ರಜ್ಞಾನದ ಮೂಲಕ ಪರಸ್ಪರರ ದೇಶಗಳಲ್ಲಿ ಜಂಟಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ನಾವು ಪ್ರಯತ್ನಿಸುತ್ತೇವೆ.
ನಮ್ಮ ಎರಡೂ ದೇಶಗಳ ಪ್ರಮುಖ ಆರ್ಥಿಕ ಗುರಿಗಳಲ್ಲಿ ವ್ಯಾಪಾರ ಮತ್ತು ಬಂಡವಾಳ ವಿಸ್ತರಣೆ ಹಾಗೂ ಸರಕು ಮತ್ತು ಸೇವೆಗಳಲ್ಲಿನ ವ್ಯಾಪಾರದ ವೈವಿಧ್ಯತೆ, ಅದರಲ್ಲೂ ದ್ವಿಪಕ್ಷೀಯ ವಾಣಿಜ್ಯದಲ್ಲಿನ ಉನ್ನತ ತಂತ್ರಜ್ಞಾನದ ಉತ್ಪನ್ನಗಳ ಪಾಲನ್ನು ಹೆಚ್ಚಿಸುವುದು, ಕೈಗಾರಿಕಾ ಸಹಕಾರದ ಸುಧಾರಣೆ ಮಾಡುವುದು, ಉದ್ಯಮಶೀಲತೆ ಮತ್ತು ಹೂಡಿಕೆಗಳಿಗೆ ಪರಿಸರವನ್ನು ಸುಧಾರಿಸುವುದು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯಗಳ ಸಹಕಾರವನ್ನು ಅಭಿವೃದ್ಧಿಪಡಿಸುವುದೂ ಸೇರಿವೆ. ನಮ್ಮು ವ್ಯೂಹಾತ್ಮಕ ಪಾಲುದಾರಿಕೆಯ ಮುಂದಿನ ಹಂತದಲ್ಲಿ, ನಾವು ಪರಸ್ಪರರು ಒಪ್ಪುವ ಕ್ಷೇತ್ರಗಳಲ್ಲಿ ಜಂಟಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ನಮ್ಮ ದ್ವಿಪಕ್ಷೀಯ ತಾಂತ್ರಿಕ, ಆರ್ಥಿಕ ಮತ್ತು ವೈಜ್ಞಾನಿಕ ಸಹಕಾರವನ್ನು ಮೂರನೇ ರಾಷ್ಟ್ರಗಳಿಗೆ ವಿಸ್ತರಿಸುತ್ತಿದ್ದೇವೆ.
ಇತರ ರಾಷ್ಟ್ರಗಳ ಕರೆನ್ಸಿಗಳ ಮೇಲೆ ನಮ್ಮ ದ್ವಿಪಕ್ಷೀಯ ವ್ಯಾಪಾರದ ಅವಲಂಬನೆಯನ್ನು ಕಡಿಮೆಗೊಳಿಸಲು ರಾಷ್ಟ್ರೀಯ ಕರೆನ್ಸಿಗಳಲ್ಲೇ ಭಾರತೀಯ-ರಷ್ಯನ್ ವಹಿವಾಟಿನ ಪಾವತಿ ಉತ್ತೇಜಿಸಲು ನಮ್ಮ ಪ್ರಯತ್ನಗಳನ್ನು ನಾವು ಸಂಘಟಿಸಲಿದ್ದೇವೆ. ನಾವು ನಮ್ಮ ವಾಣಿಜ್ಯ ಸಮುದಾಯಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ರಷ್ಯಾ ಬ್ಯಾಂಕ್ ಚಲಾವಣೆ ಮಾಡಿರುವ ರಾಷ್ಟ್ರೀಯ ಕರೆನ್ಸಿಗಳ ಪಾವತಿಗಾಗಿ ಅಸ್ತಿತ್ವದಲ್ಲಿರುವ ಕಾರ್ಯಸಾಧ್ಯ ಯೋಜನೆಗಳನ್ನು ಮತ್ತು ಯಾಂತ್ರಿಕ ವ್ಯವಸ್ಥೆಗಳ ಬಳಕೆಗೆ ಜಂಟಿಯಾಗಿ ಪ್ರೋತ್ಸಾಹಿಸುತ್ತೇವೆ.
ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುವವರಿಗೆ ಪಾರದರ್ಶಕವಾಗಿರುವ ಮತ್ತು ರಾಜಕೀಯ ಸಂಯೋಗದಿಂದ ಸ್ವತಂತ್ರವಾಗಿರುವ ಕ್ರೆಡಿಟ್ ರೇಟಿಂಗ್ ಉದ್ಯಮವನ್ನು ಅಭಿವೃದ್ದಿಪಡಿಸಲು ನಾವು ನಮ್ಮ ಸಹಯೋಗ ನೀಡುತ್ತೇವೆ. ಈ ಅರ್ಥದಲ್ಲಿ ನಾವು ಕ್ರೆಡಿಟ್ ರೇಟಿಂಗ್ ಗಳ ಪ್ರದೇಶದಲ್ಲಿ ನಮ್ಮ ಶಾಸನವನ್ನು ಸುಸಂಗತಗೊಳಿಸುವ ಅವಕಾಶಗಳನ್ನು ಬಳಸಿಕೊಳ್ಳುವ ಗುರಿಯನ್ನು ಬೆಂಬಲಿಸುತ್ತೇವೆ, ಜೊತೆಗೆ ನಮ್ಮ ಸ್ಥಳೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳ ರೇಟಿಂಗ್ ಗಳ ಮಾನ್ಯತೆಗೆ ನಾವು ಬೆಂಬಲ ನೀಡುತ್ತೇವೆ.
ನಾವು ಪ್ರಾದೇಶಿಕ ಮಟ್ಟದಲ್ಲಿ ಅಭಿವೃದ್ಧಿಶೀಲ ಆರ್ಥಿಕ ರಾಷ್ಟ್ರಗಳ ಸಹಕಾರದ ಮಹತ್ವವನ್ನು ಪರಿಗಣಿಸಲಿದ್ದೇವೆ. ಐರೋಪ್ಯ ಆರ್ಥಿಕ ಒಕ್ಕೂಟ ಮತ್ತು ಭಾರತ ಗಣರಾಜ್ಯದ ನಡುವೆ ಶೀಘ್ರವೇ ನಾವು ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆ ನಡೆಸಲಿದ್ದೇವೆ.
ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಪ್ರಾದೇಶಿಕ ಸಂಪರ್ಕದ ಬಲವಾದ ತರ್ಕವನ್ನು ನಾವು ಪ್ರಶಂಸಿಸುತ್ತೇವೆ. ಪರಸ್ಪರರ ಸಾರ್ವಭೌಮತೆಗೆ ಸೂಕ್ತ ಗೌರವ ನೀಡುವುದರೊಂದಿಗೆ ಎಲ್ಲ ಸಂಬಂಧಿತ ಪಕ್ಷಕಾರರೂ ಮಾತುಕತೆ ಮತ್ತು ಸಮ್ಮತಿಯ ಆಧಾರದ ಮೇಲೆ ಸಂಪರ್ಕ ಬಲಗೊಳ್ಳಬೇಕೆಂದು ನಾವು ನಂಬಿದ್ದೇವೆ. ಪಾರದರ್ಶಕತೆ, ಸುಸ್ಥಿರತೆ ಮತ್ತು ಹೊಣೆಗಾರಿಕೆ, ಅಂತಾರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ ಮತ್ತು ಹಸಿರು ಕಾರಿಡಾರ್ ಅನುಷ್ಠಾನದ ಸಮರ್ಥ ಮೂಲಸೌಕರ್ಯ ನಿರ್ಮಾಣದ ತಮ್ಮ ಬದ್ಧತೆಯ ಮಾರ್ಗದರ್ಶನವನ್ನು ಭಾರತ ಮತ್ತು ರಷ್ಯಾ ಕಡೆಯವರು ಪಡೆದಿರುತ್ತಾರೆ. ಎರಡೂ ದೇಶಗಳು ಇತ್ತೀಚಿನ ವೈಜ್ಞಾನಿಕ ಪ್ರಗತಿ ಮತ್ತು ನಾವೀನ್ಯತೆಯ ಆಧಾರದ ಮೇಲೆ ಜ್ಞಾನಾಧಾರಿತವಾದ ಆರ್ಥಿಕತೆಯ ನಿರ್ಮಾಣಕ್ಕೆ ಬದ್ಧರಾಗಿದ್ದು, ಈ ಬಗ್ಗೆ ಗಮನ ಹರಿಸಲಿದ್ದೇವೆ.
ಬಾಹ್ಯಾಕಾಶ ತಂತ್ರಜ್ಞಾನ, ವಾಯುಯಾನ, ಹೊಸ ಸಾಮಗ್ರಿಗಳು, ಕೃಷಿ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಔಷಧ, ವೈದ್ಯಕೀಯ,ರೋಬಾಟಿಕ್ಸ್, ನ್ಯಾನೊ ತಂತ್ರಜ್ಞಾನ, ಸೂಪರ್ ಕಂಪ್ಯೂಟಿಂಗ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ವಸ್ತು ವಿಜ್ಞಾನಗಳ ಕ್ಷೇತ್ರಗಳಲ್ಲಿನ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಉನ್ನತ ತಂತ್ರಜ್ಞಾನದ ವಸ್ತುಗಳನ್ನು ತರುವುದು ಮತ್ತು ವೈಜ್ಞಾನಿಕ ಸಹಯೋಗ ಹೆಚ್ಚಿಸುವುದಕ್ಕಾಗಿ ನಾವು ನಮ್ಮ ಸಹಕಾರವನ್ನು ವಿಸ್ತರಿಸಲಿದ್ದೇವೆ. ಎರಡೂ ದೇಶಗಳ ನಡುವೆ ಉನ್ನತ ತಂತ್ರಜ್ಞಾನ ಸಹಕಾರಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸುವುದನ್ನು ನಾವು ಸ್ವಾಗತಿಸುತ್ತೇವೆ.
ಮೂಲ ಸೌಕರ್ಯಗಳನ್ನು ಆಧುನೀಕರಿಸುವ ಉದ್ದೇಶದಿಂದ ನಗರೀಕರಣದ ಸವಾಲುಗಳನ್ನು ಜಂಟಿಯಾಗಿ ಎದುರಿಸುವ ಮಾರ್ಗಗಳನ್ನು ಅನ್ವೇಷಿಸಲು ಜಂಟಿ ಪ್ರಯತ್ನಗಳನ್ನು ಕೈಗೊಳ್ಳಲು ನಾವು ಪ್ರಯತ್ನಿಸುತ್ತೇವೆ.ಆಹಾರ ಭದ್ರತೆ, ನೀರು ಮತ್ತು ಅರಣ್ಯ ಸಂಪನ್ಮೂಲಗಳ ಸಂರಕ್ಷಣೆ ಖಾತರಿಪಡಿಸುವುದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತೇವೆ ಮತ್ತು ಆರ್ಥಿಕ ಸುಧಾರಣೆಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಕೈಗೊಳ್ಳುವಲ್ಲಿ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತೇವೆ.
ರಷ್ಯಾ ಮತ್ತು ಭಾರತದಲ್ಲಿ ವಜ್ರಗಳ ಕೈಗಾರಿಕಾ ಕ್ಷೇತ್ರದಲ್ಲಿರುವ ಸಂಪನ್ಮೂಲ ಮತ್ತು ಹಾಲಿ ಬಲದ ಸಂಪೂರ್ಣ ಲಾಭವನ್ನು ಪಡೆಯುವ ಉದ್ದೇಶದೊಂದಿಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಸಾಮರ್ಥ್ಯವರ್ಧನೆಗೆ ನಾವು ಒಗ್ಗೂಡಿ ಶ್ರಮಿಸಲಿದ್ದೇವೆ. ವಜ್ರದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಬಹಿರಂಗವಾಗದ ಸಿಂಥೆಟಿಕ್ ಕಲ್ಲುಗಳನ್ನು ನಿಗ್ರಹಿಸಲು ಮತ್ತು ವಜ್ರಗಳಿಗಾಗಿ ಜೆನೆರಿಕ್ ಮಾರುಕಟ್ಟೆ ಕಾರ್ಯಕ್ರಮಗಳ ಅಭಿವೃದ್ಧಿಯನ್ನು ಬೆಂಬಲಿಸಲು ಜಂಟಿ ಪ್ರಯತ್ನವನ್ನೂ ಹೆಚ್ಚಿಸಲಿದ್ದೇವೆ.
ಹಡಗು ನಿರ್ಮಾಣ, ನದಿ ಪಥದರ್ಶಕ ಮತ್ತು ಅಪಲವಣೀಕರಣದಲ್ಲಿನ ರಷ್ಯಾದ ಶಕ್ತಿಯನ್ನು ಮನಗಂಡು ನಾವು, ಭಾರತದಲ್ಲಿರುವ ವ್ಯಾಪಕ ನದಿ ಸೌಲಭ್ಯ ಬಳಕೆಗಾಗಿ ಒಳನಾಡ ಜಲ ಮಾರ್ಗ, ನದಿ ಒಡ್ಡುಗಳ, ಬಂದರು ಮತ್ತು ಕಾರ್ಗೋ ಕಂಟೈನರ್ ಗಳ ನಿರ್ಮಾಣದ ಅಭಿವೃದ್ಧಿಗಾಗಿ ತಂತ್ರಜ್ಞಾನ ಮತ್ತು ಅನುಭವದ ವಿನಿಮಯದೊಂದಿಗೆ ಜಂಟಿ ಯೋಜನೆ ರೂಪಿಸಲೂ ಒಗ್ಗೂಡಿ ಶ್ರಮಿಸಲಿದ್ದೇವೆ.
ಅತಿ ವೇಗದ ರೈಲುಗಳ ಅಭಿವೃದ್ಧಿ, ಸಮರ್ಪಿತ ಸರಕು ಕಾರಿಡಾರ್ ಗಳ ಅಭಿವೃದ್ಧಿ ಮತ್ತು ಜಂಟಿ ಅಭಿವೃದ್ಧಿ ಹಾಗೂ ತಂತ್ರಜ್ಞಾನ ವಿನಿಮಯದ ಮೂಲಕ ದಕ್ಷ ರೈಲು ಸಾರಿಗೆಗಾಗಿ ಹೊಸ ತಂತ್ರಜ್ಞಾನಗಳ ಅಳವಡಿಕೆ ಮತ್ತು ರೈಲುಮಾರ್ಗದ ವಲಯದಲ್ಲಿ ಪರಸ್ಪರರ ಸಾಮರ್ಥ್ಯಗಳ ಲಾಭ ಪಡೆಯಲು ಸಿಬ್ಬಂದಿಗಳ ತರಬೇತಿಗಾಗಿಯೂ ನಾವು ಒಗ್ಗೂಡಿ ಶ್ರಮಿಸಲಿದ್ದೇವೆ.
ನಾವು ಪರಸ್ಪರರ ದೇಶಗಳಲ್ಲಿನ ಆಹಾರ ಸಾಮಗ್ರಿ ಮತ್ತು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯ ಪ್ರವೇಶ ಸುಧಾರಣೆ ಮಾಡಲು ಒಟ್ಟಿಗೆ ಶ್ರಮಿಸಲಿದ್ದೇವೆ ಮತ್ತು ಆಹಾರ ಸಂಸ್ಕರಣೆ ಹಾಗೂ ಕೃಷಿಯಲ್ಲಿ ಅಸ್ತಿತ್ವದಲ್ಲಿರುವ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಕೃಷಿ, ಸುಗ್ಗಿ, ಉತ್ಪಾದನೆ, ಸಂಸ್ಕರಣೆಯಿಂದ ಮಾರುಕಟ್ಟೆಯ ಕಾರ್ಯತಂತ್ರದವರೆಗೆ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಜಂಟಿ ಕಾರ್ಯತಂತ್ರ ಅಭಿವೃದ್ಧಿಪಡಿಸಲಿದ್ದೇವೆ. ಗಣಿಗಾರಿಕೆ ಮತ್ತು ಖನಿಜ ಕ್ಷೇತ್ರದಲ್ಲಿ ಹವಾಮಾನ ಸ್ನೇಹಿ ಮತ್ತು ಕೈಗೆಟಕುವ ದರದಲ್ಲಿ ನೈಸರ್ಗಿಕ ಸಂಪನ್ಮೂಲ ಬಳಕೆಗಾಗಿ ಹಾಲಿ ಇರುವ ತಂತ್ರಜ್ಞಾನ ಮತ್ತು ಅಭಿವೃದ್ಧಿ ಆನ್ವಯಿಕಗಳನ್ನು ಬಳಸಿಕೊಂಡು ಮತ್ತು ಹೊಸ ತಂತ್ರಜ್ಞಾನಗಳ ಹಂಚಿಕೆಯ ಮೂಲಕ ಪರಸ್ಪರರ ದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲು ಜಂಟಿ ಯೋಜನೆಗಳ ಅನ್ವೇಷಣೆಗೆ ನಾವು ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ.
2020ರಹೊತ್ತಿಗೆ ಭಾರತವು ಮೂರನೇ ಅತಿದೊಡ್ಡ ವೈಮಾನಿಕ ಮಾರುಕಟ್ಟೆ ಆಗಲಿದೆ ಎಂಬುದನ್ನು ನಾವು ಗಮನಿಸಿದ್ದೇವೆ ಮತ್ತು ಈ ನಿಟ್ಟಿನಲ್ಲಿ, ಭಾರತದಲ್ಲಿ ವೈಮಾನಿಕ ಉತ್ಪಾದನೆ ಕ್ಷೇತ್ರದಲ್ಲಿ ಜಂಟಿ ಉತ್ಪಾದನೆಯ ಸಹಕಾರ ಬಲಪಡಿಸಲು ಅವಕಾಶ ಒದಗಿಸುವ ಭಾರತ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಡಿಲ್ಲಿನ ಬೇಡಿಕೆಯನ್ನು ಪೂರೈಸಲು ಮತ್ತು ಮೂರನೇ ದೇಶಕ್ಕೆ ರಫ್ತು ಮಾಡಲು ಭಾರತದಲ್ಲಿ ಜಂಟಿ ಸಹಯೋಗ ಮತ್ತು ಜಂಟಿ ಉತ್ಪಾದನೆಯನ್ನು ಸ್ಥಾಪಿಸಲಿದ್ದೇವೆ.
ನಮ್ಮ ದ್ವಿಪಕ್ಷೀಯ ರಕ್ಷಣಾ ಸಹಕಾರವು ಪರಸ್ಪರ ನಂಬಿಕೆಯ ಮೇಲೆ ನಿರ್ಮಾಣವಾಗಿದೆ. ರಷ್ಯಾ ತನ್ನ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನವನ್ನು ಭಾರತಕ್ಕೆ ರಫ್ತು ಮಾಡುತ್ತದೆ. ನಾವು ಈ ಸಹಕಾರವನ್ನು ಭವಿಷ್ಯದ ತಂತ್ರಜ್ಞಾನ ವಿನಿಮಯದ ಅಳವಡಿಕೆಗಾಗಿ ಹೆಚ್ಚಿನ ವಿಶ್ವಾಸದೊಂದಿಗೆ ಹಾಗೂ ಹಾಲಿ ಇರುವ ರಕ್ಷಣಾ ತಂತ್ರಜ್ಞಾನ ಸಹಕಾರ ಒಪ್ಪಂದಗಳನ್ವಯ ಎರಡೂ ಕಡೆಗಳ ಹೊಣೆಗಾರಿಕೆಯನ್ನು ನಿಭಾಯಿಸುವುದರೊಂದಿಗೆ ರಕ್ಷಣಾ ಯಂತ್ರಾಂಶ ಮತ್ತು ರಕ್ಷಣಾ ಬಿಡಿಭಾಗಗಳ ಜಂಟಿ ಉತ್ಪಾದನೆ, ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿ ಹೆಚ್ಚಿಸುತ್ತೇವೆ ಮತ್ತು ಮೇಲ್ದರ್ಜೆಗೇರಿಸುತ್ತೇವೆ.
ನಾವು ಸೇನೆಯೊಂದಿಗಿನ ಸಹಕಾರವನ್ನು ಗುಣಾತ್ಮಕವಾಗಿ ಉನ್ನತ ಮಟ್ಟಕ್ಕೆ ಒಯ್ಯಲು ಒಗ್ಗೂಡಿ ಶ್ರಮಿಸುತ್ತೇವೆ. ನಾವು ನಿಯಮಿತವಾಗಿ ಭೂ, ನೌಕಾ ಪಡೆಗಳ ಸಮರಾಭ್ಯಾಸ ಮತ್ತು ಪರಸ್ಪರ ಸೇನಾ ಸಂಸ್ಥೆಗಳಲ್ಲಿನ ತರಬೇತಿಯನ್ನು ಮುಂದುವರಿಸುತ್ತೇವೆ. ಈ ವರ್ಷ ಪ್ರಪ್ರಥಮ ಬಾರಿಗೆ ನಾವು ಮೂರೂ ಪಡೆಗಳ ಇಂದ್ರಾ -2017 ಅಭ್ಯಾಸವನ್ನು ನೋಡಿದ್ದೇವೆ.
ಸಮಾಜದ ಒಳಿತಿಗಾಗಿ ಸೂಕ್ತ ತಂತ್ರಜ್ಞಾನದ ಬಳಕೆಯ ದೃಷ್ಟಿಯಿಂದ ನಾವು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ವಿಫುಲ ಅವಕಾಶ ಇರುವುದನ್ನು ಮನಗಂಡಿದ್ದೇವೆ.
ನಾವು ಪ್ರಕೃತಿ ವಿಕೋಪ ತಡೆಗೆ ಮತ್ತು ಅದರ ಸ್ಪಂದನೆಗೆ ಜಂಟಿ ಕಾರ್ಯಾಚರಣೆ ಮುಂದುವರಿಸುತ್ತೇವೆ.
ರಷ್ಯಾದ ದೂರ ಪ್ರಾಚ್ಯಕ್ಕೆ ನಿರ್ದಿಷ್ಟ ಒತ್ತು ನೀಡಿ, ನಮ್ಮ ವಲಯ ಮತ್ತು ದೇಶಗಳ ನಡುವೆ ಹೆಚ್ಚಿನ ಸಹಕಾರ ಉತ್ತೇಜಿಸಲು ನಾವು ಬಯಸಿದ್ದೇವೆ.
21 ನೇ ಶತಮಾನದಲ್ಲಿ ಅಂತಾರಾಜ್ಯ ಸಂಬಂಧಗಳ ವಿಕಾಸದ ಸ್ವಾಭಾವಿಕ ಮತ್ತು ಅನಿವಾರ್ಯ ಪ್ರಕ್ರಿಯೆಯ ಪ್ರತಿಫಲನವಾಗಿ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಬಹು-ಧ್ರುವೀಯ ಜಾಗತಿಕ ಕ್ರಮವನ್ನು ಸ್ಥಾಪನೆಯನ್ನು ಭಾರತ ಮತ್ತು ರಷ್ಯಾ ಗೌರವಿಸುತ್ತದೆ. ಈ ನಿಟ್ಟಿನಲ್ಲಿ ಆಡಳಿತ ಕಾನೂನು ಮತ್ತು ವಿಶ್ವಸಂಸ್ಥೆಯ ವಿಶ್ವ ರಾಜಕೀಯದ ಸಹಯೋಗದ ಕೇಂದ್ರೀಯ ಪಾತ್ರದ ನೀತಿಗಳ ಆಧಾರದ ಮೇಲೆ ಅಂತಾರಾಷ್ಟ್ರೀಯ ಸಂಬಂಧಗಳ ವ್ಯವಸ್ಥೆಯನ್ನು ಪ್ರಜಾಸತ್ತಾತ್ಮಕಗೊಳಿಸಲು ಹೆಚ್ಚಿನ ಸಹಯೋಗ ನೀಡಲಿದ್ದೇವೆ. ಸಮಕಾಲೀನ ವಾಸ್ತವತೆಗಳಿಗೆ ಮತ್ತು ಹೆಚ್ಚುತ್ತಿರುವ ಸವಾಲುಗಳು ಮತ್ತು ಬೆದರಿಕೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಹೆಚ್ಚು ಪ್ರತಿನಿಧಿತ್ವದಿಂದ ಸ್ಪಂದಿಸಲು ವಿಶ್ವಸಂಸ್ಥೆಯ ಅದರಲ್ಲೂ ನಿರ್ದಿಷ್ಟವಾಗಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಅಗತ್ಯವಿದೆಯೆಂದು ನಾವು ಭಾವಿಸುತ್ತೇವೆ. ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ರಷ್ಯಾ ಪೂರ್ಣ ಬೆಂಬಲವನ್ನು ಪುನರುಚ್ಚರಿಸುತ್ತದೆ. ಶಾಂತಿಯನ್ನು ಬಲಪಡಿಸಲು ಮತ್ತು ಜಾಗತಿಕ ಮತ್ತು ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು,ಸವಾಲುಗಳನ್ನು ಮತ್ತು ಬೆದರಿಕೆಗಳನ್ನು ಎದುರಿಸಲು ಮತ್ತು ಬಿಕ್ಕಟ್ಟಿನ ಪರಿಹಾರಕ್ಕೆ ಸುಸಂಘಟಿತ ವಿಧಾನಗಳನ್ನು ಮಾತ್ರವೇ ಸಕ್ರಿಯವಾಗಿ ಉತ್ತೇಜಿಸಲು ಅಂತಾರಾಷ್ಟ್ರೀಯ ಪ್ರಯತ್ನಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಧನಾತ್ಮಕ ಏಕೀಕರಣ ಜಾಗತಿಕ ಕಾರ್ಯಸೂಚಿಯ ಪ್ರಗತಿಯನ್ನು ನಾವು ಬೆಂಬಲಿಸುತ್ತೇವೆ.
ಅಂತಾರಾಷ್ಟ್ರೀಯ ಸಮುದಾಯಗಳ ಎಲ್ಲಾ ಸದಸ್ಯರ ಹಿತಾಸಕ್ತಿಗಳನ್ನು ಉತ್ತಮಗೊಳಿಸುವುದಕ್ಕಾಗಿ ಜಾಗತಿಕ ರಾಜಕೀಯ, ಆರ್ಥಿಕ,ಹಣಕಾಸು ಮತ್ತು ಸಾಮಾಜಿಕ ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕ ಗೊಳಿಸುವ ಕಾರ್ಯವನ್ನು ನಾವು ತ್ವರಿತಗೊಳಿಸಲಿದ್ದೇವೆ. ದೇಶಗಳ ಸಾರ್ವಭೌಮತೆಗೆ ಸಂಬಂಧಿಸಿದಂತೆ ಗೌರವಕ್ಕೆ ಚ್ಯುತಿ ತರುವುದು ಅಥವಾ ಪ್ರಮುಖ ಕಾಳಜಿಗಳನ್ನು ಮತ್ತು ಕಾನೂನುಬದ್ಧ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ, ಏಕಪಕ್ಷೀಯವಾಗಿ ವರ್ತಿಸುವುದನ್ನು ನಾವು ವಿರೋಧಿಸುತ್ತೇವೆ. ಅದರಲ್ಲೂ ನಿರ್ದಿಷ್ಟವಾಗಿ ಒತ್ತಡವನ್ನು ಬೀರುವ ಒಂದು ವಿಧಾನವಾಗಿ ರಾಜಕೀಯ ಮತ್ತು ಆರ್ಥಿಕ ನಿರ್ಬಂಧಗಳ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರವನ್ನು ನಾವು ಅಂಗೀಕರಿಸುವುದಿಲ್ಲ.
ನಾವು ಬ್ರಿಕ್ಸ್ ನೊಂದಿಗೆ ಫಲಪ್ರದವಾದ ಸಹಕಾರವನ್ನು ಮತ್ತಷ್ಟು ನಿರ್ಮಿಸಲು ಉತ್ಸುಕರಾಗಿದ್ದೇವೆ, ನಮ್ಮ ಜಂಟಿ ಪ್ರಯತ್ನದ ಫಲವಾಗಿ ನಾವು ಜಾಗತಿಕ ವ್ಯವಹಾರಗಳಲ್ಲಿ ಅದರ ಪ್ರಭಾವಶಾಲಿ ಮತ್ತು ಅಧಿಕಾರಯುತ ಪಾತ್ರಕ್ಕಾಗಿ ನಿರಂತರವಾಗಿ ಶ್ರಮಿಸುತ್ತೇವೆ. ಡಬ್ಲ್ಯುಟಿಓ, ಜಿ20 ಮತ್ತು ಶಾಂಘೈ ಸಹಕಾರ ಸಂಘಟನೆ ಮತ್ತು ರಷ್ಯಾ, ಭಾರತ ಹಾಗೂ ಚೀನಾ ಸಹಕಾರ ವೇದಿಕೆ ಸೇರಿದಂತೆ ಇತರ ಬಹುಪಕ್ಷೀಯ ವೇದಿಕೆಗಳು ಮತ್ತು ಸಂಸ್ಥೆಗಳೊಂದಿಗೆ ನಮ್ಮ ಸಹಕಾರವನ್ನು ನಿರಂತರವಾಗಿ ಅಭಿವೃದ್ಧಿಪಡಿಸುತ್ತೇವೆ.
ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತದ ಪೂರ್ಣಪ್ರಮಾಣದ ಸದಸ್ಯತ್ವವು ಸಂಘಟನೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವುದಲ್ಲದೆ, ಯುರೇಷಿಯಾ ಮತ್ತು ಏಷ್ಯಾ ಪೆಸಿಫಿಕ್ ವಲಯದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಪ್ರಗತಿ ಹಾಗೂ ಶಾಂತಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ, ಜೊತೆಗೆ ಸಂಘಟನೆಯ ಅಂತಾರಾಷ್ಟ್ರೀಯ ನಿಲುವನ್ನು ಸುಧಾರಿಸುತ್ತದೆ. ಪೂರ್ವ ಏಷ್ಯಾ ಶೃಂಗಸಭೆಯ ಚೌಕಟ್ಟಿನ ಸಂಬಂಧಿತ ಮಾತುಕತೆಗಳ ಅಭಿವೃದ್ಧಿಯ ಮೂಲಕ ವಲಯದ ಎಲ್ಲ ದೇಶಗಳ ಕಾನೂನುಬದ್ಧ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಂಡು,
ನಾವು ಹಂಚಿಕೆಯ ತತ್ವಗಳ ಆಧಾರದ ಮೇಲೆ ಏಷ್ಯಾ ಪೆಸಿಫಿಕ್ ವಲಯದಲ್ಲಿ ಮುಕ್ತ, ಸಮತೋಲಿತ ಮತ್ತು ಸಮಗ್ರ ಸುರಕ್ಷತೆಯ ವಿನ್ಯಾಸವನ್ನು ರೂಪಿಸುವುದಕ್ಕೆ ನಿರಂತರ ಪ್ರಯತ್ನ ಮಾಡುತ್ತೇವೆ.
ರಾಷ್ಟ್ರೀಯ ಸಾರ್ವಭೌಮತೆ ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ತತ್ವಗಳ ಆಧಾರದಲ್ಲಿ, ಆಯಾ ರಾಷ್ಟ್ರಗಳಿಗೆ ತಮ್ಮೊಳಗೆ ಬದಲಾವಣೆಗೆ ಉತ್ತೇಜಿಸುವುದರೊಂದಿಗೆ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಸಿರಿಯಾದ ಬಿಕ್ಕಟ್ಟಿನ ಪ್ರದೇಶಗಳು,ಆಫ್ಘಾನಿಸ್ತಾನದ ರಾಷ್ಟ್ರೀಯ ಸಾಮರಸ್ಯದ ಸಾಧನೆ, ಮಾಸ್ಕೋ ಮಾತುಕತೆಗಳ ಒಪ್ಪಿಗೆ ಚೌಕಟ್ಟು ಒಳಗೊಂಡಂತೆ, ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಸವಾಲಿನ ವಿಷಯಗಳ ಬಗ್ಗೆ ನಾವು ನಮ್ಮ ಸ್ಥಾನಗಳಲ್ಲಿ ಸಹಯೋಗ ನೀಡುತ್ತೇವೆ.
ಸಾಮೂಹಿಕ ನಾಶ ಮಾಡುವಂಥ ಶಸ್ತ್ರಾಸ್ತ್ರಗಳ ಪ್ರಸರಣ ತಡೆಯುವ ನಿಟ್ಟಿನಲ್ಲಿ ಭಾರತ ಮತ್ತು ರಷ್ಯಾ ದೇಶಗಳು ಹಂಚಿಕೆಯ ಬದ್ಧತೆಯನ್ನು ಹೊಂದಿವೆ. ಬಹುಪಕ್ಷೀಯ ರಫ್ತು ನಿಯಂತ್ರಣ ವ್ಯವಸ್ಥೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆಯು ತಮ್ಮ ಬಲ ವರ್ಧನೆಗೆ ಕಾರಣವಾಗುತ್ತದೆ ಎಂದು ರಷ್ಯಾ ಮನವರಿಕೆ ಮಾಡಿಸಿದೆ. ಈ ನಿಟ್ಟಿನಲ್ಲಿ ಪರಮಾಣು ಪೂರೈಕೆ ಗುಂಪಿನಲ್ಲಿ ಮತ್ತು ವಾಸ್ಸೆನರ್ ಅರೇಂಜ್ಮೆಂಟ್ ನಲ್ಲಿ ಭಾರತದ ಅರ್ಜಿಯನ್ನು ರಷ್ಯಾ ಸ್ವಾಗತಿಸಿದೆ ಮತ್ತು ಈ ರಫ್ತು ನಿಯಂತ್ರಣ ಆಡಳಿತದಲ್ಲಿ ಭಾರತದ ಶೀಘ್ರ ಸೇರ್ಪಡೆಯನ್ನು ಬಲವಾಗಿ ಬೆಂಬಲಿಸಿದೆ.
ನಾವು ಭಯೋತ್ಪಾದನೆಯನ್ನು ಅದರ ಎಲ್ಲ ಸ್ವರೂಪವನ್ನೂ ಬಲವಾಗಿ ಖಂಡಿಸಿದ್ದೇವೆ ಮತ್ತು ಭಯೋತ್ಪಾದನೆಯ ಯಾವುದೇ ಕಾರ್ಯಕ್ಕೆ ಯಾವುದೇ ರೀತಿಯಲ್ಲೂ ಅಂದರೆ ಅದು ಸೈದ್ಧಾಂತಿಕವಾಗಿರಲಿ, ಧಾರ್ಮಿಕವಾಗಿರಲಿ, ರಾಜಕೀಯವಾಗಿರಲಿ, ಜನಾಂಗೀಯವಾಗಿರಲಿ, ವರ್ಣದ್ದಾಗಿರಲಿ ಅಥವಾ ಯಾವುದೇ ಇತರ ಕಾರಣದ ಮೇಲಿದ್ದರೂ ಅದರ ಸಮರ್ಥನೆ ಸಾಧ್ಯವಿಲ್ಲ ಎಂಬುದನ್ನು ಒತ್ತಿ ಹೇಳಿದ್ದೇವೆ. ಶಾಂತಿ ಮತ್ತು ಸ್ಥಿರತೆಗೆ ದೊಡ್ಡ ಭೀತಿ ಒಡ್ಡಿರುವ ಅಂತಾರಾಷ್ಟ್ರೀಯ ಭಯೋತ್ಪಾದನೆಯನ್ನು ನಿಗ್ರಹಿಸಲು ನಾವು ಒಟ್ಟಿಗೆ ನಮ್ಮ ಪ್ರಯತ್ನ ಮುಂದುವರಿಸುತ್ತೇವೆ.
ಹಿಂದೆಂದಿಗಿತಲೂ ಹೆಚ್ಚಾಗಿ ವ್ಯಾಪಿಸುತ್ತಿರುವ ಈ ಭೀತಿಯನ್ನು ಹತ್ತಿಕ್ಕಲು ಯಾವುದೇ ದ್ವಂದ್ವ ಅಥವಾ ಆಯ್ಕೆಯಿಲ್ಲದೆ, ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿಯಮಗಳಿಗೆ ಅನುಗುಣವಾಗಿ, ಸಂಪೂರ್ಣ ಜಾಗತಿಕ ಸಮುದಾಯದ ನಿರ್ಣಾಯಕ ಸಾಮೂಹಿಕ ಸ್ಪಂದನೆಯ ಅಗತ್ಯವಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಭಯೋತ್ಪಾದಕ ಜಾಲಗಳು ಮತ್ತು ಅವರಿಗೆ ಹಣಕಾಸು ಪೂರೈಕೆ ತಡೆಗೆ ಮತ್ತು ಗಡಿಯಾಚೆ ಭಯೋತ್ಪಾದಕರ ಸಂಚಾರ ತಡೆಯಲು ಎಲ್ಲ ದೇಶಗಳು ಮತ್ತು ಕಾಯಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ಈ ಉಪಟಳವನ್ನು ನಿಗ್ರಹಿಸಲು ಕಾನೂನಿನ ಚೌಕಟ್ಟಿನಲ್ಲಿ ಮತ್ತು ಜಾಗತಿಕ ಪ್ರಮಾಣಕ್ಕನುಗುಣವಾಗಿ ಭಯೋತ್ಪಾದನೆ ನಿಗ್ರಹ ಕಾರ್ಯಕ್ಕೆ ಬಲ ನೀಡಲು ಅಂತಾರಾಷ್ಟ್ರೀಯ ಭಯೋತ್ಪಾದನೆಯ ಮೇಲಿನ ಸಮಗ್ರ ಸಮಾವೇಶ ಕುರಿತ ಮಾತುಕತೆಗಳ ಶೀಘ್ರ ಆಖೈರಿಗೆ ನಾವು ಕರೆ ನೀಡುತ್ತೇವೆ.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಯಲ್ಲಿ ಸುರಕ್ಷತೆ ಒದಗಿಸುವ ಸಮಾನ ನಿಲುವಿನ ಹಂಚಿಕೆಯಲ್ಲಿ, ಜಾಗತಿಕ ಅಂತರ್ಜಾಲ ಆಡಳಿತದಲ್ಲಿ ನಾವು ಸಾರ್ವತ್ರಿಕ ನಿಯಮ, ಗುಣಮಟ್ಟ ಮತ್ತು ಪ್ರಜಾಸತ್ತಾತ್ಮಕ ಆಧಾರದ ಮೇಲೆ ಮತ್ತು ಬಹು ಬಾಧ್ಯಸ್ಥರನ್ನು ಪ್ರತಿನಿಧಿಸುವ ಮಾದರಿಯೊಂದಿಗೆ ರಾಷ್ಟ್ರಗಳಿಗೆ ಪ್ರಾಮುಖ್ಯತೆ ನೀಡಿ, ದೇಶಗಳ ಜವಾಬ್ದಾರಿಯುತ ಸ್ವಭಾವದ ತತ್ವಗಳನ್ನು ರೂಪಿಸಲು ಒಗ್ಗೂಡಿ ಕೆಲಸ ಮಾಡುವ ನಿಲುವು ಹೊಂದಿದ್ದೇವೆ.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಕೆಯಲ್ಲಿ ಸುರಕ್ಷತೆಯ ಸಹಕಾರಕ್ಕಾಗಿ ಈ ವಲಯದಲ್ಲಿ ಭಾರತ-ರಷ್ಯಾ ಅಂತರ ಸರ್ಕಾರೀಯ ಒಪ್ಪಂದದ ಆಧಾರದ ಮೇಲೆ ನಾವು ದ್ವಿಪಕ್ಷೀಯ ಮಾತುಕತೆಯನ್ನು ಸಕ್ರಿಯಗೊಳಿಸುವ ಅಗತ್ಯವನ್ನೂ ಮನಗಂಡಿದ್ದೇವೆ. ಭಾರತ ಮತ್ತು ರಷ್ಯಾ ಜನರ ನಡುವಿನ ಆಳವಾದ ಪರಸ್ಪರ ಆಸಕ್ತಿ, ಸಹಾನುಭೂತಿ ಮತ್ತು ಗೌರವವನ್ನು ಪರಿಗಣಿಸಿ, ವಾರ್ಷಿಕ ಉತ್ಸವಗಳು ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಆಯೋಜಿಸುವ ಮೂಲಕ ಸಂಸ್ಕೃತಿ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ನಂಟನ್ನು ಇನ್ನಷ್ಟು ಅಭಿವೃದ್ಧಿಪಡಿಸಲೂ ನಾವು ಕೊಡುಗೆ ನೀಡುತ್ತೇವೆ. 2017-18ನೇ ಸಾಲಿನಲ್ಲಿ ರಷ್ಯಾ ಮತ್ತು ಭಾರತ ನಡುವೆ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾದ 70ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನಾವು ಎರಡೂ ರಾಷ್ಟ್ರಗಳ ವಿವಿಧ ನಗರಗಳಲ್ಲಿ ಕಾರ್ಯಕ್ರಮಗನ್ನು ಆಯೋಜಿಸುವುದನ್ನು ಸ್ವಾಗತಿಸುತ್ತೇವೆ.
ಶಿಕ್ಷಣ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರ ದೊಡ್ಡ ಅವಕಾಶಗಳನ್ನು ಒದಗಿಸುತ್ತದೆ. ನಾವು ನಮ್ಮ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ನೇರ ಸಂಪರ್ಕ ಉತ್ತೇಜಿಸುವ ಮೂಲಕ ಮತ್ತು ಎರಡೂ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ನೆರವು ಒದಗಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿನ ಸಹಕಾರವನ್ನು ಬಲಪಡಿಸಲು ಶ್ರಮಿಸುತ್ತೇವೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ನಮ್ಮ ದ್ವಿಪಕ್ಷೀಯ ಸಹಕಾರವು ಸಹ ದೊಡ್ಡ ಅವಕಾಶಗಳನ್ನು ಒದಗಿಸುತ್ತದೆ. ವೈಜ್ಞಾನಿಕ ಆವಿಷ್ಕಾರ ಮತ್ತು ಸಮಾನ ಹಿತದ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ನಾವು ಜಾಗತಿಕ ಸವಾಲುಗಳಾದ ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ, ಶುದ್ಧ ಇಂಧನ, ಸೈಬರ್ ಭದ್ರತೆ, ಕೈಗೆಟಕುವ ದರದ ಆರೋಗ್ಯ ಸೇವೆ, ಸಾಗರ ಜೀವಶಾಸ್ತ್ರ ಇತ್ಯಾದಿ ಕ್ಷೇತ್ರಗಳಲ್ಲಿ ಒಗ್ಗೂಡಿ ಶ್ರಮಿಸಲು ಬದ್ಧರಾಗಿದ್ದೇವೆ. ಸಮಾಜದ ಅಭಿವೃದ್ಧಿಗಾಗಿ ನಾವಿನ್ಯತೆ ನೇತೃತ್ವದ ತಂತ್ರಜ್ಞಾನ ಅಭಿವೃದ್ಧಿಗಾಗಿ ನಾವು ಜ್ಞಾನ ಕೇಂದ್ರಗಳ ಜಾಲ ಸೃಷ್ಟಿ, ಮನಸ್ಸುಗಳ ಮಿಲನ ಮತ್ತು ವೈಜ್ಞಾನಿಕ ಕಾರಿಡಾರ್ ನಿರ್ಮಾಣದ ನಿಟ್ಟಿನಲ್ಲೂ ಒಗ್ಗೂಡಿ ಶ್ರಮಿಸಲಿದ್ದೇವೆ.
ವೀಸಾ ಆಡಳಿತವನ್ನು ಸುಲಭಗೊಳಿಸುವ ಮೂಲಕ ಪ್ರವಾಸೋದ್ಯಮ ಮತ್ತು ಜನರೊಂದಿಗಿನ ಸಂಪರ್ಕ ಅಭಿವೃದ್ಧಿಗಾಗಿ ಹೆಚ್ಚು ವೇಗವಾಗಿ ಕೆಲಸ ಮಾಡಲು ನಾವು ಇಚ್ಛಿಸುತ್ತೇವೆ.
ಭಾರತ ಮತ್ತು ರಷ್ಯಾ ದೇಶಗಳು ಸೌಹಾರ್ದಯುತ ಮತ್ತು ಪರಸ್ಪರರಿಗೆ ಉಪಯುಕ್ತವಾದ ಪಾಲುದಾರಿಕೆ ಮತ್ತು ಎರಡೂ ದೇಶಗಳ ನಡುವೆ ಬಲವಾದ ಸ್ನೇಹಕ್ಕೆ ಮಾದರಿಯಾಗಿ ಮುಂದುವರಿಯುತ್ತವೆ ಎಂಬ ವಿಶ್ವಾಸ ನಮಗಿದೆ. ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಯ ಹಂಚಿಕೆಯ ದೃಷ್ಟಿಕೋನವನ್ನು ರೂಪಿಸಲು, ನಮ್ಮ ದೇಶಗಳ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಪ್ರಯೋಜನಕ್ಕಾಗಿ ಭಾರತ-ರಷ್ಯಾ ನಡುವೆ ವಿಶೇಷ ಮತ್ತು ಆಯಕಟ್ಟಿನ ವ್ಯೂಹಾತ್ಮಕ ಪಾಲುದಾರಿಕೆಯ ಅಗಾಧವಾದ ಸಾಮರ್ಥ್ಯವನ್ನು ಸಾಕಾರಗೊಳಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ.
***
AKT/AK