Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಷ್ಯಾ ಒಕ್ಕೂಟದ ವಿದೇಶಾಂಗ ಸಚಿವ ಶ್ರೀ ಸರ್ಗೈ ಲಾವ್ರೊವ್ ಅವರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭೇಟಿ


ರೈಸಿನ ಮಾತುಕತೆಯಲ್ಲಿ ಭಾಗವಹಿಸುವ ಸಲುವಾಗಿ ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಒಕ್ಕೂಟದ ವಿದೇಶಾಂಗ ಸಚಿವ ಶ್ರೀ ಸರ್ಗೈ ಲಾವ್ರೊವ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.

ವಿದೇಶಾಂಗ ಸಚಿವ ಲಾವ್ರೊವ್, ರಷ್ಯಾ ಒಕ್ಕೂಟದ ಅಧ್ಯಕ್ಷ, ಗೌರವಾನ್ವಿತ ವ್ಲಾಡಿಮಿರ್ ಪುಟಿನ್ ಅವರ ಪರವಾಗಿ ಪ್ರಧಾನಿ ಅವರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು. ಪ್ರಧಾನಮಂತ್ರಿ ಅವರು ಪರಸ್ಪರ ಆತ್ಮೀಯವಾಗಿ ಸ್ಪಂದಿಸಿ, ಹೊಸ ವರ್ಷದಲ್ಲಿ ರಷ್ಯಾದ ಜನರು ಶಾಂತಿ ಮತ್ತು ಶ್ರೇಯೋಭಿವೃದ್ಧಿ ಹೊಂದಲಿ ಎಂದು ಶುಭಾಶಯಗಳನ್ನು ತಿಳಿಸುವಂತೆ ಕೋರಿದರು.

ಪ್ರಧಾನಮಂತ್ರಿ ಅವರು 2020ರ ಜನವರಿ 13ರಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಜೊತೆ ದೂರವಾಣಿ ಮೂಲಕ ವಿಸ್ತೃತ ಸಮಾಲೋಚನೆ ನಡೆಸಿದ್ದನ್ನು ಉಲ್ಲೇಖಿಸಿದರು ಮತ್ತು ಕಳೆದ ವರ್ಷ ಉಭಯ ದೇಶಗಳ ನಡುವಿನ ವಿಶೇಷ ಮತ್ತು ವಿಶೇಷಾಧಿಕಾರ ಕಾರ್ಯತಂತ್ರ ಪಾಲುದಾರಿಕೆ ಪ್ರಗತಿಯನ್ನು ಉಲ್ಲೇಖಿಸಿದರು.

ವಿದೇಶಾಂಗ ಸಚಿವ ಲಾವ್ರೊವ್, ಮೇ 2020ರಲ್ಲಿ ನಡೆಯಲಿರುವ ವಿಜಯೋತ್ಸವದ 75ನೇ ವಾರ್ಷಿಕೋತ್ಸವ ಮತ್ತು ಜುಲೈ 2020ರಲ್ಲಿ ನಡೆಯಲಿರುವ ಬ್ರಿಕ್ಸ್ ಮತ್ತು ಎಸ್ ಸಿ ಒ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಲಿರುವ ಭೇಟಿಯನ್ನು ಅಧ್ಯಕ್ಷ ಪುಟಿನ್ ಅವರು ಎದುರು ನೋಡುತ್ತಿದ್ದಾರೆ ಎಂಬ ಸಂದೇಶವನ್ನು ರವಾನಿಸಿದರು. ಪ್ರಧಾನಮಂತ್ರಿ ಅವರು, ಈ ವರ್ಷ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಮಾಡಲು ಹಲವು ಸಂದರ್ಭಗಳು ಒದಗಿರುವುದನ್ನು ಸ್ವಾಗತಿಸಿದರು ಮತ್ತು ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗೆ ಅಧ್ಯಕ್ಷ ಪುಟಿನ್ ಅವರಿಗೆ ಆತಿಥ್ಯ ನೀಡಲು ತಾವೂ ಕೂಡ ಎದುರು ನೋಡುತ್ತಿರುವುದಾಗಿ ಹೇಳಿದರು.

ಪ್ರಧಾನಮಂತ್ರಿ ಅವರು, 2019ರಲ್ಲಿ ಉಭಯ ದೇಶಗಳ ನಡುವೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಮತ್ತು ಅವುಗಳಿಂದ ಉತ್ತಮ ಫಲಿತಾಂಶ ದೊರೆತಿದೆ ಎಂದು ಪ್ರಸ್ತಾಪಿಸಿದರು. ಈ ವರ್ಷ 2020ರಲ್ಲಿ ಭಾರತ ಮತ್ತು ರಷ್ಯಾ ಒಕ್ಕೂಟದ ಕಾರ್ಯತಂತ್ರ ಪಾಲುದಾರಿಕೆ ಸ್ಥಾಪನೆಯ 20ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ‘ಈವರೆಗೆ ಕೈಗೊಂಡ ನಿರ್ಧಾರಗಳನ್ನು ಅನುಷ್ಠಾನಗೊಳಿಸುವ ವರ್ಷ’ ಎಂದು ಪರಿಗಣಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.

ವಿದೇಶಾಂಗ ಸಚಿವ ಲಾವ್ರೊವ್, ಪ್ರಮುಖ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ರಷ್ಯಾದ ನಿಲುವಿನ ಬಗ್ಗೆ ಪ್ರದಾನಮಂತ್ರಿ ಅವರಿಗೆ ವಿವರಿಸಿದರು.

*******