ರಷ್ಯಾ ಒಕ್ಕೂಟದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೂರವಾಣಿ ಸಂಭಾಷಣೆ ನಡೆಸಿದರು.
ದ್ವಿಪಕ್ಷೀಯ ಸಹಕಾರ ಸಂಬಂಧಿತ ಹಲವು ವಿಚಾರಗಳಲ್ಲಿನ ಪ್ರಗತಿ ಕುರಿತು ಪರಿಶೀಲನೆ ನಡೆಸಿದ ಉಭಯ ನಾಯಕರು, ಇತ್ತೀಚೆಗೆ ಜೋಹಾನ್ಸ್ಬರ್ಗ್ನಲ್ಲಿ ತೆರೆ ಕಂಡ “ಬ್ರಿಕ್ಸ್” ಶೃಂಗ ಸೇರಿದಂತೆ ಪ್ರಾದೇಶಿಕ ಹಾಗೂ ಜಾಗತಿಕ ವಿಚಾರ, ಸವಾಲುಗಳ ಕುರಿತೂ ವಿಚಾರ ವಿನಿಮಯ ನಡೆಸಿದರು.
ಸೆಪ್ಟೆಂಬರ್ 9-10ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ- 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣವಾದ ಅಂಶಗಳ ಬಗ್ಗೆ ತಿಳಿಸಿದ ಅಧ್ಯಕ್ಷ ಪುಟಿನ್ ಅವರು ರಷ್ಯಾ ಒಕ್ಕೂಟವನ್ನು ವಿದೇಶಾಂಗ ಸಚಿವರಾದ ಗೌರವಾನ್ವಿತ ಶ್ರೀ ಸರ್ಗೆ ಲಾವ್ರೋವ್ ಅವರು ಪ್ರತಿನಿಧಿಸಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ರಷ್ಯಾದ ನಿಲುವನ್ನು ಅರ್ಥೈಸಿಕೊಂಡ ಪ್ರಧಾನ ಮಂತ್ರಿಗಳು ಭಾರತ ಅಧ್ಯಕ್ಷತೆ ವಹಿಸಿರುವ ಜಿ-20 ಶೃಂಗಸಭೆಯ ಎಲ್ಲ ಉಪಕ್ರಮಗಳಿಗೆ ರಷ್ಯಾ ನಿರಂತರವಾಗಿ ಬೆಂಬಲ ನೀಡುತ್ತಿರುವುದಕ್ಕಾಗಿ ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಸಲ್ಲಿಸಿದರು. ಹಾಗೆಯೇ ಉಭಯ ನಾಯಕರು ನಿರಂತರ ಸಂಪರ್ಕದಲ್ಲಿರಲು ತೀರ್ಮಾನಿಸಿದರು.
****