ಭಾರತ –ರಶ್ಯಾ: : ಬದಲಾಗುತ್ತಿರುವ ವಿಶ್ವದಲ್ಲಿ ನಿರಂತರ ಸಹಭಾಗಿತ್ವ.
1. ಪ್ರಜಾಪ್ರಭುತ್ವವಾದಿ ರಾಷ್ಟ್ರವಾದ ಭಾರತದ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಮತ್ತು ರಶ್ಯಾ ಒಕ್ಕೂಟದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ವ್ಲಾದಮೀರ್ ಪುಟಿನ್ ಅವರು 2018 ರ ಅಕ್ಟೋಬರ್ 4-5ರಂದು ಹೊಸದಿಲ್ಲಿಯಲ್ಲಿ ನಡೆದ ವಾರ್ಷಿಕ ದ್ವಿಪಕ್ಷೀಯ ಶೃಂಗದ 19 ನೇ ಆವೃತ್ತಿಯಲ್ಲಿ ಪಾಲ್ಗೊಂಡರು. ಭಾರತ ಮತ್ತು ರಶ್ಯಾ ನಡುವಿನ ಬಾಂಧವ್ಯವು 1971 ರ ಶಾಂತಿ, ಸ್ನೇಹ ಮತ್ತು ಸಹಕಾರಕ್ಕೆ ಸಂಬಂಧಿಸಿ ರಿಪಬ್ಲಿಕ್ ಆಫ್ ಇಂಡಿಯಾ ಮತ್ತು ಯು.ಎಸ್.ಎಸ್.ಆರ್. ನಡುವೆ ಏರ್ಪಟ್ಟ ಒಪ್ಪಂದ, 1993 ರಲ್ಲಿ ರಿಪಬ್ಲಿಕ್ ಆಫ್ ಇಂಡಿಯಾ ಮತ್ತು ರಶ್ಯನ್ ಒಕ್ಕೂಟದ ನಡುವೆ ನಡೆದ ಸ್ನೇಹ ಮತ್ತು ಸಹಕಾರ ಕುರಿತ ಒಪ್ಪಂದ, ರಿಪಬ್ಲಿಕ್ ಆಫ್ ಇಂಡಿಯಾ ಮತ್ತು ರಶ್ಯನ್ ಫೆಡರೇಶನ್ ನಡುವೆ ಏರ್ಪಟ್ಟ ವ್ಯೂಹಾತ್ಮಕ ಸಹಭಾಗಿತ್ವ ಕುರಿತ 2000 ನೇ ಇಸವಿಯ ಘೋಷಣೆ ಮತ್ತು 2010ರಲ್ಲಿ ಹೊರಡಿಸಲಾದ ಸಹಕಾರವನ್ನು ವಿಶೇಷ ಮತ್ತು ಸವಲತ್ತುಗಳನ್ನೊಳಗೊಂಡ ವ್ಯೂಹಾತ್ಮಕ ಸಹಭಾಗಿತ್ವ ದ ಮಟ್ಟಕ್ಕೆ ಏರಿಸಿದ ಜಂಟಿ ಘೋಷಣೆಯನ್ನು ಆಧರಿಸಿದೆ. ಭಾರತ ಮತ್ತು ರಶ್ಯಾ ನಡುವಿನ ಸಹಕಾರ ವಿವಿಧ ವಲಯಗಳನ್ನು ಆವರಿಸಿಕೊಂಡಿದ್ದು, ರಾಜಕೀಯ ಮತ್ತು ವ್ಯೂಹಾತ್ಮಕ ಸಹಕಾರ, ಮಿಲಿಟರಿ ಮತ್ತು ಭದ್ರತೆ ಸಹಕಾರ, ಆರ್ಥಿಕ, ಇಂಧನ , ಕೈಗಾರಿಕೋದ್ಯಮ , ವಿಜ್ಞಾನ ಮತ್ತು ತಂತ್ರಜ್ಞಾನ ಹಾಗು ಸಾಂಸ್ಕೃತಿಕ ಮತ್ತು ಮಾನವೀಯ ಸಹಕಾರ ಕ್ಷೇತ್ರಗಳ ಮೂಲಭೂತ ಆಧಾರ ಸ್ತಂಭಗಳ ಮೇಲೆ ನಿಂತಿದೆ.
2. 2018 ರ ಮೇ 21 ರಂದು ಸೋಚಿಯಲ್ಲಿ ನಡೆದ ಅನೌಪಚಾರಿಕ ಸಭೆಯ ಸಮಕಾಲೀನ ಔಚಿತ್ಯತೆ ಮತ್ತು ಪ್ರಾಮುಖ್ಯತೆಯ ಬಗ್ಗೆ ಭಾರತ ಮತ್ತು ರಶ್ಯಾಗಳು ಮೌಲ್ಯಮಾಪನ ನಡೆಸಿದವು. ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಇದೊಂದು ವಿಶಿಷ್ಟ ಸಭೆಯಾಗಿರುವುದಲ್ಲದೆ , ಪ್ರಧಾನ ಮಂತ್ರಿ ಶ್ರೀ ಮೋದಿ ಮತ್ತು ಅಧ್ಯಕ್ಷ ಪುಟಿನ್ ಅವರ ನಡುವಿನ ಆಳವಾದ ನಂಬಿಕೆ ಮತ್ತು ಭರವಸೆಯನ್ನು ಪ್ರತಿಬಿಂಬಿಸುತ್ತದೆ ಹಾಗು ಉಭಯ ದೇಶಗಳು ನಿಯಮಿತ ಸಂಪರ್ಕದೊಂದಿಗೆ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಆಗಾಗ ಸಮಾಲೋಚನೆ ನಡೆಸುವ ಮತ್ತು ಪರಸ್ಪರ ಸಮನ್ವಯವನ್ನು ಹೆಚ್ಚಿಸುವ , ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ತಮ್ಮ ನಿಲುವನ್ನು ಏಕೀಭವಿಸುವ ಆಶಯವನ್ನೂ ಈ ಇಬ್ಬರು ನಾಯಕರು ವ್ಯಕ್ತಪಡಿಸಿದ್ದಾರೆ. ಸೋಚಿ ಶೃಂಗವು ಭಾರತ ಮತ್ತು ರಶ್ಯಾದ ನಡುವೆ ಬಹು ದ್ರುವೀಕರಣದ ವಿಶ್ವ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಪ್ರಣಾಳಿಕೆಯನ್ನು ಒಳಗೊಂಡಿತ್ತು. ಉಭಯ ದೇಶಗಳವರೂ ಇಂತಹ ಅನೌಪಚಾರಿಕ ಸಭೆಗಳ ಪದ್ದತಿಯನ್ನು ಮುಂದುವರಿಸಿಕೊಂಡು ಹೋಗಲು ಮತ್ತು ನಿಯಮಿತವಾಗಿ ಎಲ್ಲಾ ಮಟ್ಟದಲ್ಲಿಯೂ ವ್ಯೂಹಾತ್ಮಕ ಸಂಪರ್ಕವನ್ನು ನಿರ್ವಹಿಸಿಕೊಂಡು ಹೋಗಲು ಒಪ್ಪಿಕೊಂಡಿದ್ದಾರೆ.
3 .ವಿಶೇಷ ಮತ್ತು ಸವಲತ್ತುಗಳುಳ್ಳ ವ್ಯೂಹಾತ್ಮಕ ಸಹಭಾಗಿತ್ವವನ್ನು ಭಾರತ ಮತ್ತು ರಶ್ಯಾ ನಡುವೆ ಮುಂದುವರೆಸಿಕೊಂಡು ಹೋಗುವ ಆಶಯವನ್ನು ಉಭಯ ದೇಶಗಳು ಪುನರುಚ್ಚರಿಸಿವೆ. ಈ ಬಾಂಧವ್ಯ ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ ಬಹಳ ಮುಖ್ಯವಾದುದು ಎಂದು ಘೋಷಿಸಿದ್ದಲ್ಲದೆ ಜಾಗತಿಕ ಶಾಂತಿ ಮತ್ತು ಸ್ಥಿರತೆ ಕಾಪಾಡುವಲ್ಲಿ ಪ್ರಮುಖ ಶಕ್ತಿಗಳಾಗಿ ಸಮಾನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದಕ್ಕಾಗಿ ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿವೆ.
4. ತಮ್ಮ ಬಾಂಧವ್ಯ ಪಕ್ವವಾದುದಾಗಿದೆ ಮತ್ತು ಭರವಸೆಯುಕ್ತವಾದುದಾಗಿದೆ, ಎಲ್ಲಾ ಕ್ಷೇತ್ರಗಳನ್ನು ಅದು ಆವರಿಸಿದೆ ಮತ್ತು ಅದು ಆಳವಾದ ನಂಬಿಕೆ , ಪರಸ್ಪರ ಗೌರವ, ಮತ್ತು ಪರಸ್ಪರ ಸ್ಥಾನ ಮಾನಗಳ ನಿಕಟ ತಿಳುವಳಿಕೆಯಿಂದಾಗಿ ಇದು ರೂಪುಗೊಂಡಿದೆ ಎಂದು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಬಹು ಸಂಸ್ಕೃತಿ, ಬಹುಭಾಷಿಕ ಮತ್ತು ಬಹು ಧರ್ಮೀಯ ಸಮಾಜಗಳನ್ನು ಹೊಂದಿದ್ದರೂ ಭಾರತ ಮತ್ತು ರಶ್ಯಾಗಳು ಆಧುನಿಕ ಕಾಲದ ಸವಾಲುಗಳನ್ನು ಎದುರಿಸಲು ನಾಗರಿಕ ತಿಳುವಳಿಕೆ , ಜ್ಞಾನವನ್ನು ಹೊಂದಿವೆ ಎಂಬುದನ್ನೂ ಅವರು ಪುನರುಚ್ಚರಿಸಿದರು. ಜೊತೆಯಾಗಿ ಹೆಚ್ಚು ಅಂತರ್ ಸಂಪರ್ಕಿತವಾದ ಮತ್ತು ವೈವಿಧ್ಯಮಯವಾದ ವಿಶ್ವವನ್ನು ನಿರ್ಮಾಣ ಮಾಡಲು ಕೊಡುಗೆ ನೀಡುವುದಾಗಿ ಅವರು ಘೋಷಿಸಿದರು.
5.ಜಾಗತಿಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಅಹಿಂಸೆ, ಸಹಕಾರ, ಪಾರದರ್ಶಕತೆಯಂತಹ ಆದರ್ಶಗಳನ್ನು ಪ್ರಚುರಪಡಿಸಲು ಹಾಗು ಅಂತಾರಾಷ್ಟ್ರ ಉದ್ವಿಗ್ನತೆಗೆ ಸಂಬಂಧಿಸಿ ಮುಕ್ತ ನಿಲುವು ತೋರ್ಪಡಿಸಲು ಒಗ್ಗೂಡಿ ಕೆಲಸ ಮಾಡುವಂತೆ ಎರಡೂ ಕಡೆಯವರು ಎಲ್ಲಾ ದೇಶಗಳಿಗೆ ಮನವಿ ಮಾಡಿದರು. ತ್ವರಿತ ಮತ್ತು ಸಹ್ಯ ಆರ್ಥಿಕ ಅಭಿವೃದ್ದಿ ಖಾತ್ರಿಪಡಿಸುವ , ಬಡತನ ನಿವಾರಣೆ ಮಾಡುವ , ದೇಶಗಳ ನಡುವಿನ ಅಸಮಾನತೆಯನ್ನು ಕಡಿಮೆ ಮಾಡುವ ಹಾಗು ಮೂಲ ಆರೋಗ್ಯ ರಕ್ಷಣೆಯನ್ನು ಒದಗಿಸುವ ಕಾರ್ಯಗಳು ಇನ್ನೂ ಕೂಡಾ ವಿಶ್ವದ ಹಲವು ದೇಶಗಳಲ್ಲಿ ಸವಾಲಿನ ಕೆಲಸಗಳಾಗಿ ಉಳಿದಿರುವುದರ ಬಗ್ಗೆ ಅವರು ಒತ್ತಿ ಹೇಳಿದರು. ಭಾರತ ಮತ್ತು ರಶ್ಯಾ ಈ ಗುರಿ ಸಾಧನೆಗೆ ಪರಸ್ಪರ ಸಹಕಾರ ನೀಡುವ ಬಗ್ಗೆ ಪ್ರತಿಜ್ಞೆ ಮಾಡಿದವು.
6. ಎರಡು ದೇಶಗಳ ನಡುವೆ, ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸಿದಂತೆ ಸಚಿವರ ಮಟ್ಟದಲ್ಲಿ 50 ಕ್ಕೂ ಅಧಿಕ ಭೇಟಿಗಳು ತೃಪ್ತಿಕರವಾಗಿ ನಡೆದಿವೆ ಮತ್ತು ಇದರಿಂದ ಎರಡೂ ದೇಶಗಳ ಸಂಬಂಧ ತೃಪ್ತಿಕರವಾಗಿದೆ ಹಾಗು ಆಪ್ತವಾಗಿದೆ . 2017-18 ರ ಅವಧಿಗೆ ವಿದೇಶೀ ಕಚೇರಿ ಸಮಾಲೋಚನೆಗಳ ಶಿಷ್ಟಾಚಾರವನ್ನು ಯಶಸ್ವಿಯಾಗಿ ಅನುಷ್ಟಾನಿಸಿದ್ದು, ಉಭಯ ಕಡೆಯವರೂ ಮತ್ತೆ ಐದು ವರ್ಷಗಳ ಅವಧಿಗೆ (2019-2023) ಸಮಾಲೋಚನೆಗಳ ಅವಧಿಯನ್ನು ವಿಸ್ತರಿಸಲು ಒಪ್ಪಿಕೊಂಡಿವೆ. ಮತ್ತು ಈ ನಿಟ್ಟಿನಲ್ಲಿ ಶಿಷ್ಟಾಚಾರಕ್ಕೆ ಅಂಕಿತ ಹಾಕಿವೆ. ಎಕ್ಟೆರಿನ್ ಬರ್ಗ್ ಮತ್ತು ಆಸ್ತ್ರಕಾನ್ ಗಳಲ್ಲಿ ಭಾರತದ ಕಾನ್ಸುಲ್ಸ್ ಜನರಲ್ ಅವರನ್ನು ನೇಮಕ ಮಾಡಿರುವುದನ್ನು ರಶ್ಯಾವು ಸ್ವಾಗತಿಸಿದೆ. ಇದರಿಂದ ಉಭಯ ದೇಶಗಳ ಜನತೆ ಮತ್ತು ವಲಯಗಳ ನಡುವೆ ನಿಕಟ ಸಂವಾದಕ್ಕೆ ಇದು ಅನುಕೂಲಗಳನ್ನು ಒದಗಿಸಲಿದೆ.
7. 2017 ರ ನವೆಂಬರ್ ತಿಂಗಳಲ್ಲಿ ಸಂಬಂಧಿತ ಅಧಿಕಾರಿ ಮತ್ತು ಪ್ರಾಧಿಕಾರಿಗಳ ಜೊತೆ ನಡೆದ ಆಂತರಿಕ ಭದ್ರತೆ , ಮಾದಕ ದ್ರವ್ಯ ಸಾಗಾಟ ತಡೆ ಮತ್ತು ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಸಹಕಾರ , ಭಾರತದ ಗೃಹ ವ್ಯವಹಾರಗಳ ಸಚಿವಾಲಯದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಮತ್ತು ರಶ್ಯಾ ಒಕ್ಕೂಟದ ಆಂತರಿಕ ಸಚಿವಾಲಯಗಳ ನಡುವೆ 2018-2020 ರ ಅವಧಿಗೆ ಏರ್ಪಟ್ಟ ಜಂಟಿ ಕ್ರಿಯಾ ಯೋಜನೆ ಸಹಿತ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು. ವಿಪತ್ತು ನಿರ್ವಹಣೆಯಲ್ಲಿ ರಶ್ಯಾದ ತಾಂತ್ರಿಕ ಪರಿಣತಿಯನ್ನು ಭಾರತ ಸರಕಾರ ಮೆಚ್ಚಿಕೊಂಡಿತು ಮತ್ತು ಸಹಕಾರದ ಸಾಧ್ಯತೆಯನ್ನು ಅವಲೋಕಿಸಿತು. ತುರ್ತು ಪ್ರತಿಕ್ರಿಯಾ ರಚನೆಗಳ ಅಭಿವೃದ್ದಿ ಮತ್ತು ತರಬೇತುದಾರರಿಗೆ ತರಬೇತಿ ಇದರಲ್ಲಿ ಸೇರಿದೆ.
8 ಭಾರತ ಮತ್ತು ರಶ್ಯಾಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದ 70 ನೇ ವಾರ್ಷಿಕೋತ್ಸವ ಆಚರಣೆ ಯಶಸ್ವಿಯಾಗಿ ಸಮಾರೋಪಗೊಂಡದ್ದನ್ನು ಉಭಯ ಕಡೆಯವರೂ ಗಮನಕ್ಕೆ ತೆಗೆದುಕೊಂಡರು ಮತ್ತು ಉಭಯ ದೇಶಗಳ ಜನತೆಯ ಉತ್ಸಾಹ ಪೂರ್ಣ ಪ್ರತಿಕ್ರಿಯೆಯನ್ನೂ ಈ ಆಚರಣೆ ದಾಖಲಿಸಿಕೊಂಡದ್ದನ್ನೂ , ಉಭಯ ದೇಶಗಳ ಜನತೆಯ ನಡುವೆ ಬಾಂಧವ್ಯ ದೃಢಗೊಳ್ಳುತಿರುವ ಅಂಶವನ್ನೂ ಪರಿಗಣನೆಗೆ ತೆಗೆದುಕೊಂಡರು. 2017 ರಲ್ಲಿ ಅಂಕಿತ ಹಾಕಲಾದ 2017-19 ರ ಅವಧಿಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅನುಷ್ಟಾನದ ಬಗ್ಗೆ ಉಭಯ ಕಡೆಯವರೂ ತೃಪ್ತಿ ವ್ಯಕ್ತಪಡಿಸಿದರು. ಭಾರತದಲ್ಲಿ ರಶ್ಯನ್ ಉತ್ಸವ ಮತ್ತು ರಶ್ಯಾದಲ್ಲಿ ಭಾರತದ ಉತ್ಸವಗಳನ್ನು ಇಬ್ಬರೂ ಸ್ವಾಗತಿಸಿದರಲ್ಲದೆ ಈಗ ಚಾಲನೆಯಲ್ಲಿರುವ ಯುವ ವಿನಿಮಯ ಕಾರ್ಯಕ್ರಮ , ಬರಹಗಾರರ ವಿನಿಮಯ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಪ್ರತಿಕ್ರಿಯಾತ್ಮಕ ಬೆಂಬಲವನ್ನು ಅವರು ಸ್ವಾಗತಿಸಿದರು. ಕಳೆದ ಎರಡು ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪರಸ್ಪರ ಸಾಧಿಸಿರುವ ಪ್ರಗತಿ, ಪ್ರವಾಸಿಗರ ಪ್ರಮಾಣದ ಕುರಿತು ಉಭಯ ಕಡೆಯವರು ತೃಪ್ತಿ ವ್ಯಕತಪಡಿಸಿದ್ದಲ್ಲದೆ, ಈ ಧನಾತ್ಮಕ ವರ್ತನೆಯನ್ನು ಇನ್ನಷ್ಟು ಉತ್ತೇಜಿಸಲೂ ಉಭಯ ಕಡೆಯವರೂ ಒಪ್ಪಿಕೊಂಡರು. 2018 ರ ಎಫ್.ಐ.ಎಫ್.ಎ. (ಫಿಫಾ) ವಿಶ್ವ ಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಿದ್ದಕ್ಕಾಗಿ ರಶ್ಯಾವನ್ನು ಭಾರತವು ಅಭಿನಂದಿಸಿತು. ರಶ್ಯನ್ ವಿಜ್ಞಾನ ಅಕಾಡೆಮಿಯ ಓರಿಯಂಟಲ್ ಅಧ್ಯಯನ ಸಂಸ್ಥೆ ಯು ಹಲವಾರು ದಶಕಗಳಿಂದ ಭಾರತ –ರಶ್ಯಾ ಸಂಬಂಧ ವರ್ಧನೆಯ ನಿಟ್ಟಿನಲ್ಲಿ ಉತ್ತೇಜನ ನೀಡಲು ಮಾಡುತ್ತಿರುವ ಕಾರ್ಯವನ್ನು ಎರಡೂ ಕಡೆಯವರು ಪರಿಗಣನೆಗೆ ತೆಗೆದುಕೊಂಡರು. ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಈ ಸಂಸ್ಥೆ ಸ್ಥಾಪನೆಯ 200 ನೇ ವರ್ಷಾಚರಣೆಯ ಯಶಸ್ಸಿಗೆ ಭಾರತವೂ ಕೊಡುಗೆ ನೀಡುವ ಬಗ್ಗೆ ಒತ್ತಿ ಹೇಳಿದರು.
ಆರ್ಥಿಕತೆ
9. ರಶ್ಯನ್ ಒಕ್ಕೂಟದ ಉಪ ಪ್ರಧಾನ ಮಂತ್ರಿ ಯೂರಿ ಐ. ಬೊರಿಸೋವ್ ಮತ್ತು ಪ್ರಜಾಪ್ರಭುತ್ವವಾದೀ ರಾಷ್ಟ್ರ ಭಾರತದ ವಿದೇಶೀ ವ್ಯವಹಾರಗಳ ಸಚಿವರಾದ ಸುಷ್ಮಾ ಸ್ವರಾಜ್ ಅವರ ಸಹ ಅಧ್ಯಕ್ಷತೆಯಲ್ಲಿ ವ್ಯಾಪಾರ, ಆರ್ಥಿಕತೆ , ವಿಜ್ಞಾನ , ತಂತ್ರಜ್ಞಾನ, ಮತ್ತು ಸಾಂಸ್ಕೃತಿಕ ಸಹಕಾರ ಕುರಿತಂತೆ 2018 ರ ಸೆಪ್ಟೆಂಬರ್ 14 ರಂದು ಮಾಸ್ಕೋದಲ್ಲಿ ನಡೆದ ಭಾರತ –ರಶ್ಯಾ ಅಂತರ-ಸರಕಾರೀ ಆಯೋಗದ 23 ನೇ ಸಭೆಯ ಫಲಶ್ರುತಿಯ ಬಗ್ಗೆ ಎರಡೂ ಕಡೆಯವರು ಹರ್ಷ ವ್ಯಕ್ತಪಡಿಸಿದರು.
10.ದ್ವಿಮುಖವಾಗಿ ಹೂಡಿಕೆಯನ್ನು 2015 ರ ವೇಳೆಗೆ 30 ಬಿಲಿಯನ್ ಅಮೇರಿಕನ್ ಡಾಲರ್ ಗಳಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಎರಡೂ ಕಡೆಯವರು ಪರಾಮರ್ಶಿಸಿದರು ಮತ್ತು ಉಭಯ ದೇಶಗಳು ಈ ಗುರಿಯನ್ನು ಸಾಧಿಸುವ ಹಾದಿಯಲ್ಲಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. 2017 ರಲ್ಲಿ ದ್ವಿಪಕ್ಷೀಯ ವ್ಯಾಪಾರ 20% ಗೂ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ಗಮನಿಸಿದ ಅವರು ಇದರ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಮತ್ತು ವೈವಿಧ್ಯಮಯಗೊಳಿಸುವ ಬಗ್ಗೆಯೂ ಒಪ್ಪಿಕೊಂಡರು. ರಾಷ್ಟ್ರೀಯ ಕರೆನ್ಸಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ಉತ್ತೇಜಿಸುವುದಕ್ಕೆ ಉಭಯ ಕಡೆಯವರೂ ಬೆಂಬಲ ವ್ಯಕ್ತಪಡಿಸಿದರು.
11. ಭಾರತದ ನೀತಿ (ಎನ್.ಐ.ಟಿ.ಐ.) ಆಯೋಗ ಮತ್ತು ರಶ್ಯನ್ ಒಕ್ಕೂಟದ ಆರ್ಥಿಕ ಅಭಿವೃದ್ದಿ ಸಚಿವಾಲಯದ ನಡುವೆ ವ್ಯೂಹಾತ್ಮಕ ಆರ್ಥಿಕ ಮಾತುಕತೆಯ ಮೊದಲ ಸಭೆ 2018 ರ ಕೊನೆಯಲ್ಲಿ ರಶ್ಯಾದಲ್ಲಿ ನಡೆಯಲಿರುವ ಬಗ್ಗೆಯೂ ಉಭಯ ಕಡೆಯವರು ಗಮನ ಹರಿಸಿದರು.
12. ಯುರೇಶಿಯನ್ ಆರ್ಥಿಕ ಒಕ್ಕೂಟ ಮತ್ತು ಅದರ ಸದಸ್ಯ ರಾಷ್ಟ್ರಗಳು ಒಂದೆಡೆ ಮತ್ತು ಪ್ರಜಾಪ್ರಭುತ್ವವಾದೀ ಭಾರತ ಇನ್ನೊಂದೆಡೆಯಲ್ಲಿ ಗುರುತಿಸಿಕೊಂಡು ಇವುಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿ ಸಮಾಲೋಚನೆಗಳನ್ನು ಆರಂಭಿಸುವುದನ್ನು ಉಭಯ ಕಡೆಯವರೂ ಸ್ವಾಗತಿಸಿದ್ದಲ್ಲದೆ ತ್ವರಿತ ಮಾತುಕತೆ ಪ್ರಕ್ರಿಯೆಯ ಚಿಂತನೆಯನ್ನು ಬೆಂಬಲಿಸಿದವು.
13. ವ್ಯಾಪಾರ ಅಭಿವೃದ್ದಿ ಮತ್ತು ಆರ್ಥಿಕ ಬಾಂಧವ್ಯಗಳ ವೃದ್ದಿ ಹಾಗು ಹೂಡಿಕೆ ಸಹಕಾರಗಳಿಗಾಗಿ ಜಂಟಿ ಕ್ರಿಯಾ ತಂತ್ರ ರೂಪಿಸಲು ಅನುಷ್ಟಾನಿಸಿದ ಜಂಟಿ ಅಧ್ಯಯನದ ಬಗ್ಗೆ ಉಭಯ ಕಡೆಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಇದನ್ನು ಮುಂದುವರೆಸಿಕೊಂಡು ಹೋಗಲು ಉಭಯ ಕಡೆಯವರೂ ಅನುಕ್ರಮವಾಗಿ ಭಾರತೀಯ ವಿದೇಶೀ ವ್ಯಾಪಾರ ಸಂಸ್ಥೆ ಮತ್ತು ಅಖಿಲ ರಶ್ಯನ್ ವಿದೇಶೀ ವ್ಯಾಪಾರ ಅಕಾಡೆಮಿಯನ್ನು ನಾಮಕರಣ ಮಾಡಿದರು.
14. ಭಾರತದಲ್ಲಿ ರಶ್ಯನ್ ಹೂಡಿಕೆದಾರರಿಗೆ ಉತ್ತೇಜನ ನೀಡಲು ’ಭಾರತದಲ್ಲಿ ಹೂಡಿಕೆ” ನಿಟ್ಟಿನಲ್ಲಿ ಮಾಡಲಾದ ಕಾರ್ಯಗಳನ್ನು ಉಭಯ ಕಡೆಯವರು ಮೆಚ್ಚಿದ್ದಲ್ಲದೆ ರಶ್ಯಾದಲ್ಲಿ ಭಾರತೀಯ ಕಂಪೆನಿಗಳ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲು ರಶ್ಯನ್ ಒಕ್ಕೂಟದ ಆರ್ಥಿಕ ಅಭಿವೃದ್ದಿ ಸಚಿವಾಲಯ “ಏಕ ಗವಾಕ್ಷ ಸೇವೆಯನ್ನು” ಆರಂಭಿಸಲು ಯೋಜನೆ ಹಾಕಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
15. ಭಾರತ-ರಶ್ಯಾ ವ್ಯಾಪಾರೋದ್ಯಮ ಶೃಂಗವನ್ನು ಹೊಸದಿಲ್ಲಿಯಲ್ಲಿ 2018 ರ ಅಕ್ಟೋಬರ್ 4-5 ರಂದು 19 ನೇ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಆಯೋಜಿಸುತ್ತಿರುವುದನ್ನೂ ಉಭಯ ಕಡೆಯವರು ಸ್ವಾಗತಿಸಿದರು. ಉಭಯ ದೇಶಗಳ ವ್ಯಾಪಾರೋದ್ಯಮಿಗಳ ನಿಯೋಗಗಳು ದೊಡ್ಡ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಂಡಿದ್ದು, ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಪ್ರಮುಖ ಕ್ಷೇತ್ರಗಳನ್ನು ಇವು ಪ್ರತಿನಿಧಿಸಿವೆ ಹಾಗು ಉಭಯ ದೇಶಗಳ ವ್ಯಾಪಾರೋದ್ಯಮ ಕ್ಷೇತ್ರದ ಸಾಮರ್ಥ್ಯ ಮತ್ತು ಇಚ್ಛಾಶಕ್ತಿಯ ಬಗ್ಗೆ ಬಲವಾದ ಸಂಕೇತಗಳನ್ನು ನೀಡಿವೆ. ಆರ್ಥಿಕ , ವ್ಯಾಪಾರೋದ್ಯಮ ಮತ್ತು ಹೂಡಿಕೆ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ಹೆಜ್ಜೆ ಇದಾಗಿದೆ ಎಂದು ಎರಡೂ ಕಡೆಯವರು ಅಭಿಪ್ರಾಯಪಟ್ಟಿದ್ದಾರೆ.
16. ಗಣಿಗಾರಿಕೆ , ಲೋಹಗಳ ಕ್ಷೇತ್ರ, ವಿದ್ಯುತ್, ತೈಲ ಮತ್ತು ಅನಿಲ , ರೈಲ್ವೇಗಳು, ಔಷಧ ವಿಜ್ಞಾನ , ಮಾಹಿತಿ ತಂತ್ರಜ್ಞಾನ , ರಾಸಾಯನಿಕಗಳು, ಮೂಲಸೌಕರ್ಯ, ವಾಹನ ಕ್ಷೇತ್ರ, ವಾಯುಯಾನ, ಬಾಹ್ಯಾಕಾಶ, ಹಡಗು ನಿರ್ಮಾಣ, ಮತ್ತು ವಿವಿಧ ಯಂತ್ರಗಳ ತಯಾರಿಕೆ ಕ್ಷೇತ್ರಗಳಲ್ಲಿ ಆದ್ಯತಾ ಹೋಡಿಕೆ ಯೋಜನೆಗಳ ಅನುಷ್ಟಾನದ ಪ್ರಗತಿಯನ್ನು ಎರಡೂ ಕಡೆಯವರು ಪರಾಮರ್ಶಿಸಿದರು. ರಶ್ಯಾದಲ್ಲಿ ಅಡ್ವಾನ್ಸ್ ಫಾರ್ಮಾ ಕಂಪೆನಿಯು ಔಷಧ ತಯಾರಿಕಾ ಘಟಕವನ್ನು ಸ್ಥಾಪಿಸಿರುವುದನ್ನು ಎರಡೂ ಕಡೆಯವರು ಸ್ವಾಗತಿಸಿದ್ದಲ್ಲದೆ, ರಶ್ಯಾದಿಂದ ರಸಗೊಬ್ಬರ ಆಮದನ್ನು ಹೆಚ್ಚಿಸುವ ಭಾರತದ ಇರಾದೆಯನ್ನು ಇದೇ ಸಂದರ್ಭ ತಿಳಿಸಲಾಯಿತು. ಅಲ್ಯೂಮಿನಿಯಂ ಕ್ಷೇತ್ರದಲ್ಲಿ ಸಹಯೋಗದ ವಿಸ್ತರಣೆಯ ಮಹತ್ವವನ್ನು ಎರಡೂ ಕಡೆಯವರು ಮನಗಂಡರು.
17 ಭಾರತದ ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ಮತ್ತು ರಶ್ಯನ್ ಸಣ್ಣ ಮತ್ತು ಮಧ್ಯಮ ವ್ಯಾಪಾರೋದ್ಯಮ ನಿಗಮ ಗಳ ನಡುವೆ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಿರುವುದನ್ನು ಅವರು ಸ್ವಾಗತಿಸಿದರು.
18. ಉಭಯ ದೇಶಗಳಿಗೂ ಮೂಲಸೌಕರ್ಯ ಅಭಿವೃದ್ದಿ ಅತ್ಯಂತ ಪ್ರಮುಖ ರಾಷ್ಟ್ರೀಯ ಆದ್ಯತೆಯಾಗಿದೆ ಮತ್ತು ಇದರಲ್ಲಿ ಎರಡೂ ದೇಶಗಳಿಗೆ ಸಹಕಾರಕ್ಕೆ ವಿಪುಲ ಅವಕಾಶಗಳಿವೆ ಎಂಬ ಅಂಶವನ್ನು ಎರಡು ಕಡೆಯವರು ಮನಗಂಡರು. ಭಾರತವು ದೇಶದಲ್ಲಿ ಕೈಗಾರಿಕಾ ಕಾರಿಡಾರುಗಳನ್ನು, ರಸ್ತೆ ಮತ್ತು ರೈಲು ಮೂಲಸೌಕರ್ಯ ಸಹಿತ ಅಭಿವೃದ್ದಿ ಮಾಡಲು, ಸ್ಮಾರ್ಟ ಸಿಟಿಗಳ ನಿರ್ಮಾಣ, ವ್ಯಾಗನುಗಳ ನಿರ್ಮಾಣ ಮತ್ತು ಜಂಟಿ ಸಾರಿಗೆ-ಸಾಗಾಟ ಕಂಪೆನಿಗಳ ರಚನೆಗೆ ರಶ್ಯಾಕ್ಕೆ ಆಹ್ವಾನ ನೀಡಿತು. ಭಾರತದಲ್ಲಿ ಜಂಟಿ ಯೋಜನೆಗಳ ಸಾಕಾರಕ್ಕೆ ಮೇಲೆ ಹೇಳಿದ ಕೈಗರಿಕಾ ಕಾರಿಡಾರುಗಳ ಚೌಕಟ್ಟಿನಲ್ಲಿ ರಶ್ಯಾ ಕಡೆಯಿಂದ ಉಪಗ್ರಹ ಆಧಾರಿತ ತಂತ್ರಜ್ಞಾನದಿಂದ ತೆರಿಗೆ ಸಂಗ್ರಹಣೆ ತಜ್ಞತೆಯನ್ನು ಒದಗಿಸುವ ಪ್ರಸ್ತಾಪಗಳು ಮಂಡಿಸಲ್ಪಟ್ಟವು. ರಶ್ಯಾವು ಭಾರತದ ರೈಲ್ವೇ ಮಂತ್ರಾಲಯವು ರೈಲ್ವೇ ಯೋಜನೆಗಳ ತ್ವರಿತ ಅನುಷ್ಟಾನಕ್ಕೆ ಅಂತಾರಾಷ್ಟ್ರೀಯ ಹರಾಜು ಕರೆದಾಗ ಅದರಲ್ಲಿ ಪಾಲ್ಗೊಳ್ಳುವ ಆಶಯವನ್ನು ವ್ಯಕ್ತಪಡಿಸಿತು. ಸಾರಿಗೆ ಶಿಕ್ಷಣ , ಸಿಬ್ಬಂದಿ ತರಬೇತಿ ಮತ್ತು ಅಂತಾರಾಷ್ಟ್ರೀಯ ಸಾರಿಗೆ ಕಾರಿಡಾರುಗಳ ಅನುಷ್ಟಾನದಲ್ಲಿ ವೈಜ್ಞಾನಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಸಹಕಾರದ ಮಹತ್ವವನ್ನು ಎರಡೂ ಕಡೆಯವರು ಮನವರಿಕೆ ಮಾಡಿಕೊಂಡರು. ಈ ಉದ್ದೇಶಗಳಿಗಾಗಿ ಭಾರತದ ರಾಷ್ಟ್ರೀಯ ರೈಲ್ವೇ ಮತ್ತು ಸಾರಿಗೆ ಸಂಸ್ಥೆ (ವಡೋದರ) ಮತ್ತು ರಶ್ಯನ್ ಸಾರಿಗೆ ವಿಶ್ವವಿದ್ಯಾಲಯ (ಎಂ.ಐ.ಐ.ಟಿ) ಜತೆ ಸಹಕಾರಕ್ಕೆ ಉಭಯ ಕಡೆಯವರೂ ನಿರ್ಧರಿಸಿದರು.
19. ತಮ್ಮ ನಡುವೆ ಸಂಪರ್ಕ ಹೆಚ್ಚಬೇಕಾಗಿರುವ ಅಗತ್ಯವನ್ನು ಎರಡೂ ಕಡೆಯವರು ಮನಗಂಡಿದ್ದಾರೆ. ಅವರು ಅಂತಾರಾಷ್ಟ್ರೀಯ ದಕ್ಷಿಣೋತ್ತರ ಸಾರಿಗೆ ಕಾರಿಡಾರ್ (ಐ.ಎನ್.ಎಸ್.ಟಿ.ಸಿ.) ಅನ್ನು ಕಸ್ಟಮ್ಸ್ ಅಧಿಕಾರಿಗಳೆದುರು ಬಾಕಿ ಇರುವ ವಿಷಯಗಳನ್ನು ಅಂತಿಮಗೊಳಿಸಿ , ಪ್ರಯತ್ನಗಳನ್ನು ಚುರುಕುಗೊಳಿಸುವ ಹಾಗು ದ್ವಿಪಕ್ಷೀಯ ಮಾತುಕತೆ ಹಾಗು ಇತರ ಸಹಭಾಗೀ ದೇಶಗಳ ಜೊತೆ ಆದಷ್ಟು ತ್ವರಿತವಾಗಿ ಮಾತುಕತೆ ನಡೆಸುವ ಮೂಲಕ ರಸ್ತೆ ಮತ್ತು ರೈಲು ಮೂಲಸೌಕರ್ಯ ಅಭಿವೃದ್ದಿ ಮತ್ತು ಅದಕ್ಕೆ ಅವಶ್ಯವಾದ ಹಣಕಾಸು ಸೌಲಭ್ಯವನ್ನು ಒದಗಿಸಲು ಉಭಯದೇಶಗಳು ಒಪ್ಪಿಕೊಂಡಿವೆ. ಪ್ರಜಾಪ್ರಭುತ್ವವಾದೀ ಭಾರತ, ರಶ್ಯನ್ ಒಕ್ಕೂಟ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಡುವೆ “ಸಾರಿಗೆ ಸಪ್ತಾಹ-2018 ” ರ ನೇಪಥ್ಯದಲ್ಲಿ ಮಾಸ್ಕೋದಲ್ಲಿ ಪ್ರಸ್ತಾವಿಸಿರುವ ತ್ರಿಪಕ್ಷೀಯ ಸಭೆಯನ್ನು ಉಭಯ ದೇಶಗಳು ಸ್ವಾಗತಿಸಿವೆ. ಇರಾನ್ ಭೂಭಾಗದ ಮೂಲಕ ರಶ್ಯಾಕ್ಕೆ ಭಾರತದ ಸರಕುಗಳ ಸಾಗಾಣಿಕೆಗೆ ಸಂಬಂಧಿಸಿ ಈ ಪ್ರಸ್ತಾವನೆ ಮಾಡಲಾಗಿದೆ. ಭಾರತವು ಟಿ.ಐ.ಆರ್. ಅಡಿಯಲ್ಲಿ ಅಂತಾರಾಷ್ಟ್ರೀಯ ಸರಕು ಸಾಗಾಣಿಕೆಗೆ ಸಂಬಂಧಿಸಿದ ಕಸ್ಟಮ್ಸ್ ಸಂಪ್ರದಾಯಗಳನ್ನು ಅನುಸರಿಸುವುದಾಗಿ ರಶ್ಯಾಕ್ಕೆ ತಿಳಿಸಿದೆ. ಉಭಯ ಕಡೆಯವರೂ ಐ.ಎನ್.ಎಸ್.ಟಿ.ಸಿ. ಸಚಿವ ಮಟ್ಟದ ಸಭೆಯನ್ನು ಕರೆಯಲು ಮತ್ತು ಸಮನ್ವಯ ಸಭೆಯನ್ನು ಆದ್ಯತೆಯಾಧಾರದಲ್ಲಿ ಕರೆಯಲು ಪ್ರಯತ್ನಗಳನ್ನು ಮಾಡುವುದಾಗಿ ಒಪ್ಪಿಕೊಂಡಿದ್ದಾರೆ.
20. ವ್ಯಾಪಾರೋದ್ಯಮವನ್ನು ಉತ್ತೇಜಿಸಲು ಯಾವುದೇ ಉತ್ಪನ್ನವನ್ನು ರಫ್ತು ಯಾ ಆಮದು ಮಾಡುವಾಗ ಕಡ್ಡಾಯ ಪರಿವೀಕ್ಷಣೆ /ನಿಯಮಾವಳಿಗಳ ಅಗತ್ಯವನ್ನು ಈಡೇರಿಸಲು ಉಭಯ ದೇಶಗಳು ಇವುಗಳನ್ನು ಉತ್ತಮ ಆಶಯಗಳ ಆಧಾರದಲ್ಲಿ ಪರಸ್ಪರ ಹಂಚಿಕೊಳ್ಳಲು ಒಪ್ಪಿಕೊಂಡಿವೆ. ಇದರಿಂದ ಇಂತಹ ಪರಿವೀಕ್ಷಣೆಗಾಗಿ ತಗಲುವ ಕಾಲಾವಕಾಶದಲ್ಲಿ ವಿಳಂಬವಾಗುವುದು ತಪ್ಪುತ್ತದೆ.
21. ಉಭಯ ಕಡೆಗಳವರೂ ಅವರ ವ್ಯಾಪಾರೋದ್ಯಮ ಪ್ರದರ್ಶನ ಮತ್ತು ಮೇಳಗಳ ಪಟ್ಟಿಯನ್ನು ಹಾಗೂ ರಫ್ತು ಉತ್ತೇಜನ ಮಂಡಳಿಗಳ /ಸಂಸ್ಥೆಗಳ ಮತ್ತು ಇತರ ರಫ್ತು ಸಂಬಂಧಿತ ಸಂಸ್ಥೆಗಳ ಮೂಲಕ ಎರಡು ದೇಶಗಳ ರಫ್ತುದಾರರು/ ಆಮದುದಾರರ ವಿವರಗಳನ್ನು ಪಡೆಯಲು ಒಪ್ಪಿಕೊಂಡಿವೆ. ಇದರಿಂದ ಅವರ ನಡುವೆ ಸಂವಾದಕ್ಕೆ ಅವಕಾಶವಾಗಲಿದೆ.
22. ಭಾರತ ಮತ್ತು ರಶ್ಯಾ ನಡುವೆ ಸಾಗಾಟ ಮಾಡಲಾಗುವ ಸರಕುಗಳಿಗೆ ಸಂಬಂಧಿಸಿ ಕಸ್ಟಮ್ಸ್ ಕಾರ್ಯಾಚರಣೆಯನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಹಸಿರು ಕಾರಿಡಾರ್ ಯೋಜನೆಯನ್ನು ಶೀಘ್ರದಲ್ಲಿಯೇ ಆರಂಭಿಸುವ ಬಗ್ಗೆ ಎರಡೂ ದೇಶಗಳು ಬೆಂಬಲ ವ್ಯಕ್ತಪಡಿಸಿವೆ. ಪರಸ್ಪರ ವ್ಯಾಪಾರ ಹೆಚ್ಚಳದ ನಿಟ್ಟಿನಲ್ಲಿ ಇದೊಂದು ಪ್ರಮುಖ ಕ್ರಮ ಎಂದು ಅವು ಭಾವಿಸಿವೆ. ಈ ಯೋಜನೆ ಕಾರ್ಯಾರಂಭಗೊಂಡ ಬಳಿಕ ಉಭಯ ದೇಶಗಳ ಕಸ್ಟಮ್ಸ್ ಆಡಳಿತಗಳು ಇದರ ಇನ್ನಷ್ಟು ವಿಸ್ತರಣೆಗೆ ಬದ್ದವಾಗಿರುತ್ತವೆ.
23. ಭಾರತೀಯ ರಾಜ್ಯಗಳು ಮತ್ತು ರಶ್ಯಾದ ಪ್ರಾದೇಶಿಕ ವಲಯಗಳ ನಡುವೆ ಸಹಕಾರವನ್ನು ಸಾಂಸ್ಥೀಕರಣಗೊಳಿಸುವ ಮತ್ತು ಅದನ್ನು ಇನ್ನಷ್ಟು ಗಾಢಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಉಭಯ ಕಡೆಯವರೂ ಶ್ಲ್ಯಾಘಿಸಿದರು. ರಾಜ್ಯಗಳು ಮತ್ತು ಭಾರತದ ನಡುವೆ ಹಾಗು ರಶ್ಯನ್ ಫೆಡರೇಶನ್ನಿನ ಪ್ರಜೆಗಳ ನಡುವೆ ಸಹಕಾರದ ವೇಗವನ್ನು ವರ್ಧಿಸಲು ಎರಡೂ ಕಡೆಯವರು ವ್ಯಾಪಾರೋದ್ಯಮಿಗಳು ಮತ್ತು ಸರಕಾರದ ಸಂಸ್ಥೆಗಳ ನಡುವೆ ನೇರ ಸಂಪರ್ಕ ವೃದ್ದಿಗೆ ನಿರ್ದೇಶನ ನೀಡಿವೆ. ಅಸ್ಸಾಂ ಮತ್ತು ಸಖಾಲಿನ್ , ಹರ್ಯಾಣ ಮತ್ತು ಬಾಷ್ಕೊರೋಸ್ತಾನ್, ಗೋವಾ ಮತ್ತು ಕಾಲಿನಿನ್ ಗ್ರಾದ್, ಒಡಿಶಾ ಮತ್ತು ಇರ್ಕುಟಸ್ಕ್ , ವಿಶಾಖಪಟ್ಟಣಂ ಮತ್ತು ವ್ಲಾದಿವೋಸ್ಟೋಕ್ ಗಳ ನಡುವೆ ಒಪ್ಪಂದಗಳನ್ನು ಏರ್ಪಡಿಸಿ ಸಹಿ ಹಾಕುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳ ಬಗ್ಗೆ ಉಭಯ ಕಡೆಯವರೂ ಹರ್ಷ ವ್ಯಕ್ತಪಡಿಸಿದರು. ಎರಡೂ ಕಡೆಯವರು ಸೈಂಟ್ ಪೀಟರ್ಸ ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ , ಪೂರ್ವ ಆರ್ಥಿಕ ವೇದಿಕೆ, ಮತ್ತು ಸಹಭಾಗಿತ್ವ/ ಹೂಡಿಕೆ ಸಮಾವೇಶಗಳಂತಹ ಪ್ರಮುಖ ಕಾರ್ಯಕ್ರಮಗಳಲ್ಲಿ ಪ್ರಾದೇಶಿಕ ನಿಯೋಗಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಉಭಯ ಕಡೆಯವರೂ ಒಪ್ಪಿಕೊಂಡರು.
24. ಉತ್ಪಾದಕತೆ, ದಕ್ಷತೆ ಮತ್ತು ಆರ್ಥಿಕ ಬಳಕೆಯ ನೈಸರ್ಗಿಕ ಸಂಪನ್ಮೂಲಗಳನ್ನು ಪರಸ್ಪರ ದೇಶದೊಳಗೆ ಅನ್ವೇಷಣೆ ನಡೆಸುವ ನಿಟ್ಟಿನಲ್ಲಿ ಜೊತೆಗೂಡಿ ಕಾರ್ಯನಿರ್ವಹಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಸೂಕ್ತ ತಂತ್ರಜ್ಞಾನ ಬಳಸಿ , ಸಹ್ಯ, ಪರಿಸರ ಸ್ನೇಹೀ ವಿಧಾನ ಖಾತ್ರಿಪಡಿಸಿ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗುವುದು. ಕೃಷಿ ಕ್ಷೇತ್ರವು ಸಹಕಾರಕ್ಕೆ ಬಹಳ ಮುಖ್ಯವಾದ ಕ್ಷೇತ್ರವಾಗಿರುವುದನ್ನು ಪರಿಗಣಿಸಿದ ಎರಡೂ ದೇಶಗಳು ಈ ನಿಟ್ಟಿನಲ್ಲಿ ವ್ಯಾಪಾರಕ್ಕೆ ಇರುವ ಅಡೆ –ತಡೆಗಳನ್ನು ನಿವಾರಿಸಲು ಮತ್ತು ಉತ್ಪಾದನೆ ಹೆಚ್ಚಿಸಲು ಹಾಗು ಕೃಷಿ ಉತ್ಪನ್ನಗಳ ವ್ಯಾಪಾರ ಹೆಚ್ಚಿಸಲು ತಮ್ಮ ಬದ್ದತೆಯನ್ನು ವ್ಯಕ್ತಪಡಿಸಿವೆ.
25.ಭಾರತದ ಕಂಪೆನಿಗಳಿಗೆ ಕಚ್ಚಾ ವಜ್ರ ಪೂರೈಕೆಗೆ ಸಂಬಂಧಿಸಿ ಪಿ.ಜೆ.ಎಸ್.ಸಿ. ಅಲ್ರೋಸಾ (ಎ.ಎಲ್.ಆರ್. ಒ.ಎಸ್. ಎ.) ಜೊತೆ ಧೀರ್ಘಾವಧಿ ಹೊಸ ಒಪ್ಪಂದಕ್ಕೆ ಸಹಿ, ಮುಂಬಯಿಯಲ್ಲಿ ಅಲ್ರೋಸಾವನ್ನು ಪ್ರತಿನಿಧಿಸುವ ಕಚೇರಿ ಆರಂಭ, ಭಾರತೀಯ ಮಾರುಕಟ್ಟೆ ಸಹಿತ ಸಾಮಾನ್ಯ ವಜ್ರಗಳ ಮಾರುಕಟ್ಟೆಗಾಗಿ ಕಾರ್ಯಕ್ರಮಗಳ ಅಭಿವೃದ್ದಿಗೆ ಮತ್ತು ಅಲ್ರೋಸಾ ಹಾಗು ಅಂತಾರಾಷ್ಟ್ರೀಯ ವಜ್ರ ಉತ್ಪಾದಕರ ಸಂಘಟನೆಯ ಭಾರತೀಯ ಜೆಮ್ ಆಂಡ್ ಜ್ಯುವೆಲ್ಲರಿ ರಫ್ತು ಉತ್ತೇಜನ ಮಂಡಳಿಗಳು ಜೊತೆಗೂಡಿ ಹೂಡಿಕೆ ಒಳಗೊಂಡಂತೆ ವಜ್ರ ವಲಯದಲ್ಲಿ ಸಾಧಿಸಲಾದ ಸಹಕಾರದ ಮಟ್ಟವನ್ನು ಉಭಯ ಕಡೆಯವರೂ ಶ್ಲ್ಯಾಘಿಸಿದರು. ರಶ್ಯಾದ ದೂರ ಪೂರ್ವದಲ್ಲಿ ವಜ್ರ ಉತ್ಪಾದನಾ ಕ್ಷೇತ್ರದಲ್ಲಿ ಭಾರತೀಯ ಕಂಪೆನಿಗಳು ಇತ್ತೀಚೆಗೆ ಮಾಡಿದ ಹೂಡಿಕೆಯ ಬಗ್ಗೆ ಗಮನ ಹರಿಸಿದರು. ಅಮೂಲ್ಯ ಲೋಹಗಳು, ಖನಿಜ ಸಂಪತ್ತು , ನೈಸರ್ಗಿಕ ಸಂಪನ್ಮೂಲಗಳು ಮತ್ತು ಅರಣ್ಯ ಉತ್ಪನ್ನಗಳು, ಮರ ಮುಟ್ಟು, ಕ್ಷೇತ್ರಗಳಲ್ಲಿ ಜಂಟಿ ಹೂಡಿಕೆ , ಉತ್ಪಾದನೆ , ಸಂಸ್ಕರಣೆ ಮತ್ತು ಕೌಶಲ್ಯ ಯುಕ್ತ ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿ ಜಂಟಿ ಸಹಯೋಗದ ಹೊಸ ಸಾಧ್ಯತೆಗಳನ್ನು ಅವಲೋಕಿಸುವ ಬಗ್ಗೆಯೂ ಉಭಯ ದೇಶಗಳು ಒಪ್ಪಿಕೊಂಡವು.
26. ರಶ್ಯನ್ ದೂರ ಪೂರ್ವದಲ್ಲಿ ಹೂಡಿಕೆ ಮಾಡುವಂತೆ ಭಾರತವನ್ನು ರಶ್ಯಾ ಆಮಂತ್ರಿಸಿತು. ಮುಂಬಯಿಯಲ್ಲಿ ಫಾರ್ ಈಸ್ಟ್ ಏಜೆನ್ಸಿಯ ಕಚೇರಿಯನ್ನು ತೆರೆಯುವ ನಿರ್ಧಾರವನ್ನು ಭಾರತ ಸ್ವಾಗತಿಸಿತು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಮತ್ತು ನಾಗರಿಕ ವಾಯುಯಾನ ಸಚಿವರಾದ ಶ್ರೀ ಸುರೇಶ ಪ್ರಭು ಅವರ ನೇತೃತ್ವದಲ್ಲಿ ಭಾರತೀಯ ನಿಯೋಗವು 2018 ರ ಸೆಪ್ಟೆಂಬರ್ ನಲ್ಲಿ ವ್ಲಾದಿವೋಸ್ಟಾಕ್ ನಲ್ಲಿ ಏರ್ಪಟ್ಟ ಪೂರ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ರಶ್ಯಾದ ಉನ್ನತಾಧಿಕಾರದ ನಿಯೋಗವು ಭಾರತಕ್ಕೆ ಭೇಟಿ ನೀಡಿ ದೂರ ಪೂರ್ವದಲ್ಲಿ ಭಾರತೀಯರಿಂದ ಹೆಚ್ಚಿನ ಹೂಡಿಕೆ ಉತ್ತೇಜಿಸಲು ಮತ್ತು ಹೂಡಿಕೆಯನ್ನು ಸಂಘಟಿಸಲು ರೋಡ್ ಶೋಗಳನ್ನು ಆಯೋಜನೆ ಮಾಡಲಿದೆ.
27. ಮೂರನೇ ರಾಷ್ಟ್ರಗಳಲ್ಲಿ ರೈಲ್ವೇ, ಇಂಧನ, ಮತ್ತು ಇತರ ಪೂರಕ ತಂತ್ರಜ್ಞಾನ ಹಾಗು ಸಂಪನ್ಮೂಲ ಇರುವ ಕ್ಷೇತ್ರಗಳಲ್ಲಿ ಜಂಟಿ ಸಹಯೋಗದ ಯೋಜನೆಗಳನ್ನು ಉತ್ತೇಜಿಸಲು ಕ್ರಿಯಾತ್ಮಕವಾಗಿ ವ್ಯವಹರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ವಿಜ್ಞಾನ ಮತ್ತು ತಂತ್ರಜ್ಞಾನ
28.ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಸಹಕಾರವನ್ನು ಹೆಚ್ಚಿಸುವ ಅಗತ್ಯವನ್ನು ಎರಡೂ ಕಡೆಯವರು ಮನಗಂಡದ್ದಲ್ಲದೆ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿ 10 ನೇ ಭಾರತ –ರಶ್ಯಾ ಕಾರ್ಯ ಗುಂಪಿನ ಯಶಸ್ವೀ ಆಯೋಜನೆಯನ್ನು ಸ್ವಾಗತಿಸಿದರು. ಈ ಗುಂಪಿನ ಮೇಲುಸ್ತುವಾರಿಯನ್ನು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ರಶ್ಯನ್ ಒಕ್ಕೂಟದ ವಿಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವಾಲಯಗಳು ವಹಿಸಿಕೊಂಡು 2018ರ ಫೆಬ್ರವರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದವು.
29.ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗು ರಶ್ಯನ್ ಮೂಲ ಸಂಶೋಧನೆ ಪ್ರತಿಷ್ಟಾನಗಳು ಯಶಸ್ವೀ ಸಹಯೋಗದಲ್ಲಿ ತಮ್ಮ ಮೂಲ ಮತ್ತು ಆನ್ವಯಿಕ ವಿಜ್ಞಾನಗಳ ಜಂಟಿ ಸಂಶೋಧನೆಯ 10 ನೇ ವಾರ್ಷಿಕೋತ್ಸವವನ್ನು 2017 ರ ಜೂನ್ ತಿಂಗಳಲ್ಲಿ ಆಯೋಜಿಸಿದ್ದನ್ನು ಎರಡು ಕಡೆಯವರು ಪರಿಗಣನೆಗೆ ತೆಗೆದುಕೊಂಡರು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗು ರಶ್ಯನ್ ಮೂಲ ಸಂಶೋಧನೆ ಪ್ರತಿಷ್ಟಾನಗಳ ಯಶಸ್ವೀ ಸಹಯೋಗವನ್ನು ಎರಡೂ ಕಡೆಯವರು ಗಮನಿಸಿ ತೃಪ್ತಿ ವ್ಯಕ್ತಪಡಿಸಿದರು. ವಿಜ್ಞಾನ –ತಂತ್ರಜ್ಞಾನ ಮತ್ತು ಅನ್ವೇಷಣೆಗೆ ಸಂಬಂಧಿಸಿ ಭಾರತ ಸರಕಾರ ಮತ್ತು ರಶ್ಯನ್ ಸರಕಾರಗಳ ನಡುವೆ ವಿವಿಧ ಪ್ರಯೋಗಾಲಯಗಳು, ಆಕಾಡೆಮಿಕ್ ತಜ್ಞತೆಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ವಿಜ್ಞಾನ ಮತ್ತು ತಂತ್ರಜ್ಝಾನ ಕ್ಷೇತ್ರದ ಸಂಸ್ಥೆಗಳು ಮತ್ತು ಸಂಘಟನೆಗಳ ನಡುವೆ ಪರಸ್ಪರ ಹಿತಾಸಕ್ತಿಯ ಮತ್ತು ಆದ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಸಮಗ್ರ ಧೀರ್ಘಾವಧಿ ಕಾರ್ಯಕ್ರಮಗಳ ಮೂಲಕ ಪುನಃಶ್ಚೇತನಗೊಳಿಸಲು ಉಭಯ ಕಡೆಯವರೂ ಒಪ್ಪಿಕೊಂಡರು.
30. ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅದರಲ್ಲೂ ಇಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಉತ್ಪಾದನೆ , ತಂತ್ರಾಂಶ ಅಭಿವೃದ್ದಿ, ಸೂಪರ್ ಕಂಪ್ಯೂಟಿಂಗ್ , ಇ-ಆಡಳಿತ , ಸಾರ್ವಜನಿಕ ಸೇವೆಗಳ ಒದಗಣೆ, ನೆಟ್ವರ್ಕ್ ಭದ್ರತೆ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಬಳಕೆಯಲ್ಲಿ ಭದ್ರತೆ, ಫಿನ್ –ಟೆಕ್, ಅಂತರ್ಜಾಲಕ್ಕೆ ಸಂಬಂಧಪಟ್ಟ ವಿಷಯಗಳು, ಸ್ಟ್ಯಾಂಡರ್ಡೈಜೇಶನ್, ರೇಡಿಯೋ ನಿಯಂತ್ರಣ ಮತ್ತು ರೇಡಿಯೋ ತರಂಗಾಂತರ ನಿಯಂತ್ರಣ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಳಕ್ಕೆ ಉಭಯ ಕಡೆಯವರೂ ಒಪ್ಪಿಕೊಂಡರು. ಬ್ರಿಕ್ಸ್ ( ಬಿ.ಆರ್.ಐ.ಸಿ.ಎಸ್.) ಮತ್ತು ಐ.ಟಿ.ಯು. ಸಹಿತ ವಿವಿಧ ವೇದಿಕೆಗಳಲ್ಲಿ ಪರಸ್ಪರ ಸಹಕಾರ ಮತ್ತು ಪರಸ್ಪರ ಏಕತ್ರಗೊಳಿಸುವ ನಿಲುವನ್ನು ಮುಂದುವರೆಸಿಕೊಂಡು ಹೋಗಲು ಎರಡೂ ಕಡೆಯವರು ಒಪ್ಪಿಕೊಂಡರು.
31. ’ಭಾರತ –ರಶ್ಯಾ ಆರ್ಥಿಕ ಸಹಕಾರ: ಮುಂದಿರುವ ಹಾದಿ’ ಕುರಿತಂತೆ ಜಂಟಿ ಘೋಷಣೆಗೆ ಸಹಿ ಹಾಕಿರುವುದನ್ನು ಉಭಯ ಕಡೆಯವರು ಸ್ವಾಗತಿಸಿದರು. ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಮತ್ತು ರಶ್ಯನ್ ಒಕ್ಕೂಟದ ಆರ್ಥಿಕ ಅಭಿವೃದ್ದಿ ಸಚಿವರಾದ ಮ್ಯಾಕ್ಸಿಂ ಒರೇಷ್ಕಿನ್ ಅವರು 2018 ರ ಮಾರ್ಚ್ ತಿಂಗಳಲ್ಲಿ ಹೊಸದಿಲ್ಲಿಯಲ್ಲಿ ಇದಕ್ಕೆ ಸಹಿ ಹಾಕಿದ್ದರು. ಮೊಟ್ಟ ಮೊದಲ ಭಾರತ –ರಶ್ಯಾ ನವೋದ್ಯಮ ಸಮಾವೇಶವನ್ನು 2018 ರ ಡಿಸೆಂಬರ್ ನಲ್ಲಿ ಆಯೋಜಿಸಲು ಕೈಗೊಂಡಿರುವ ನಿರ್ಧಾರವನ್ನು ಅವರು ಮುಕ್ತ ಕಂಠದಿಂದ ಪ್ರಶಂಸಿಸಿದರು. ಭಾರತದ ಕೈಗಾರಿಕೋದ್ಯಮದ ಮಹಾ ಒಕ್ಕೂಟ ಮತ್ತು ಸ್ಕೋಲ್ ಕೋವೋ ಪ್ರತಿಷ್ಟಾನಗಳು ಇದನ್ನು ಸಂಘಟಿಸುತ್ತಿವೆ. ನವೋದ್ಯಮಗಳಿಗೆ , ಹೂಡಿಕೆದಾರರಿಗೆ , ಇನ್ಕ್ಯುಬೇಟರ್ ಗಳಿಗೆ ಮತ್ತು ಉಭಯ ದೇಶಗಳ ಆಸಕ್ತ ಉದ್ಯಮಿಗಳಿಗೆ ಪರಸ್ಪರ ಸಂವಾದಕ್ಕಾಗಿ ಮತ್ತು ನವೋದ್ಯಮಗಳ ಜಾಗತೀಕರಣಕ್ಕೆ ಅವಕಾಶ ಒದಗಿಸಲು ಮತ್ತು ಅದರ ವಿಸ್ತರಣೆಗಾಗಿ ಜೊತೆಗೆ ಸೂಕ್ತ ಸಂಪನ್ಮೂಲವನ್ನು ಒದಗಿಸಲು ಆನ್ ಲೈನ್ ಪೋರ್ಟಲ್ ಆರಂಭಿಸುವ ಚಿಂತನೆಯನ್ನು ಅವರು ಸ್ವಾಗತಿಸಿದರು.
32. ಬಾಹ್ಯಾಕಾಶ ಕ್ಷೇತ್ರದಲ್ಲಿ ಪರಸ್ಪರ ಲಾಭದಾಯಕವಾದ ಭಾರತ ಮತ್ತು ರಶ್ಯಾ ನಡುವಿನ ಸಹಕಾರ ಒಪ್ಪಂದದ ಮಹತ್ವವನ್ನು ಒತ್ತಿ ಹೇಳಿದ ಉಭಯ ಕಡೆಯವರು ಭಾರತದ ಪ್ರಾದೇಶಿಕ ಸಂಚಾರಿ ಉಪಗಗ್ರಹ ವ್ಯವಸ್ಥೆ ನಾವಿಕ್ ಮತ್ತು ರಶ್ಯಾದ ಸಂಚಾರಿ ಉಪಗ್ರಹ ವ್ಯವಸ್ಥೆ ಜಿ.ಎಲ್.ಒ.ಎನ್.ಎ.ಎಸ್.ಎಸ್. ಅಳತೆ ದತ್ತಾಂಶ ಸಂಗ್ರಹಣೆಗಾಗಿ ಭೂ ಕೇಂದ್ರವನ್ನು ಅನುಕ್ರಮವಾಗಿ ರಶ್ಯಾ ಒಕ್ಕೂಟದ ಭೌಗೋಳಿಕ ವ್ಯಾಪ್ತಿಯಲ್ಲಿ ಮತ್ತು ಭಾರತದ ಭೌಗೋಳಿಕ ವ್ಯಾಪ್ತಿಯಲ್ಲಿ ಸ್ಥಾಪಿಸುವ ಚಟುವಟಿಕೆಯನ್ನು ಸ್ವಾಗತಿಸಿದರು. ಬಾಹ್ಯಾಕಾಶ ಕ್ಷೇತ್ರವನ್ನು ಶಾಂತಿಯುತ ಉದ್ದೇಶಗಳಿಗಾಗಿ ಬಳಸುವ ಮತ್ತು ಅನ್ವೆಷಣಾ ಕ್ಷೇತ್ರದಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಬಗ್ಗೆಯೂ ಉಭಯ ಕಡೆಯವರು ಒಪ್ಪಿಕೊಂಡರು. ಇದರಲ್ಲಿ ಮಾನವ ಸಹಿತ ಉಪಗ್ರಹ ಯಾನ ಕಾರ್ಯಕ್ರಮಗಳು, ವೈಜ್ಞಾನಿಕ ಯೋಜನೆಗಳು ಸೇರಿವೆಯಲ್ಲದೆ ಎರಡೂ ಕಡೆಯವರು ಬ್ರಿಕ್ಸ್ ದೂರ ಸಂವೇದಿ ಉಪಗ್ರಹಗಳ ವ್ಯವಸ್ಥೆಯಲ್ಲಿ ಸಹಕಾರವನ್ನು ಅಭಿವೃದ್ದಿಗೊಳಿಸುವುದನ್ನು ಮುಂದುವರೆಸುವುದಕ್ಕೂ ಒಪ್ಪಿಕೊಂಡಿದ್ದಾರೆ.
33 .ಉತ್ತರ ದ್ರುವದಲ್ಲಿ ಜಂಟಿ ವೈಜ್ಞಾನಿಕ ಸಂಶೋಧನೆ ಕೈಗೊಳ್ಳುವುದೂ ಸೇರಿದಂತೆ ಪರಸ್ಪರ ಲಾಭದಾಯಕ ಸಹಕಾರ ಅಭಿವೃದ್ದಿಗೆ ಉಭಯ ದೇಶಗಳೂ ಆಸಕ್ತಿ ವ್ಯಕ್ತಪಡಿಸಿದವು.ಅಂಟಾರ್ಟಿಕಾದಲ್ಲಿ ಭಾರತೀಯ ಮತ್ತು ರಶ್ಯನ್ ವಿಜ್ಞಾನಿಗಳ ಧೀರ್ಘಕಾಲೀನ ಸಹಕಾರದ ಬಗ್ಗೆ ಉಭಯ ದೇಶಗಳೂ ತೃಪ್ತಿ ವ್ಯಕ್ತಪಡಿಸಿದವು.
34 . ಎರಡೂ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ಜೋಡಿಸುವಿಕೆಯ ವಿಸ್ತರಣೆಯನ್ನು ಪರಿಗಣಿಸಿದ ಉಭಯ ದೇಶಗಳವರೂ ಇದು ಸಾಧ್ಯ ಮಾಡಿರುವ ಭಾರತ-ರಶ್ಯಾ ವಿಶ್ವವಿದ್ಯಾಲಯಗಳ ಜಾಲದ ಕಾರ್ಯಚಟುವಟಿಕೆಗಳಿಗೆ ಕೃತಜ್ಞತೆ ದಾಖಲಿಸಿದರು. 2015 ರಲ್ಲಿ ಆರಂಭಗೊಂಡ ಈ ಜಾಲ ಈಗಾಗಲೇ ಮೂರು ಬಾರಿ ಸಭೆ ಸೇರಿದೆ, ಮತ್ತು ಅದರ ಒಟ್ಟು ಸದಸ್ಯತ್ವದ ಸಂಖ್ಯೆ 42ಕ್ಕೇರಿದೆ. ಎರಡೂ ಕಡೆಯವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ವಿನಿಮಯ ಮತ್ತು ಜಂಟಿ ಸಂಶೋಧನೆ ಹಾಗು ಶೈಕ್ಷಣಿಕ ಯೋಜನೆಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಿದರು.
ಇಂಧನ
35. ನೈಸರ್ಗಿಕ ಅನಿಲ ಸಹಿತ ರಶ್ಯಾದ ಇಂಧನ ಆಸ್ತಿಗಳ ಮೇಲೆ ಭಾರತದ ಆಸಕ್ತಿಯ ಹಿನ್ನೆಲೆಯನ್ನು ಪರಿಗಣನೆಗೆ ತೆಗೆದುಕೊಂಡು ಭಾರತ ಮತ್ತು ರಶ್ಯಾ ನಡುವೆ ಇಂಧನ ಸಹಕಾರವನ್ನು ವಿಸ್ತರಿಸುವ ಪ್ರಾಮುಖ್ಯತೆಯನ್ನು ಎರಡೂ ಕಡೆಯವರು ಮನಗಂಡರು. ಪುನರ್ ನವೀಕರಿಸಬಹುದಾದ ಇಂಧನ ಮೂಲಗಳ ಕ್ಷೇತ್ರದಲ್ಲಿ ಭರವಸೆದಾಯಕ ಜಂಟಿ ಯೋಜನೆಗಳನ್ನು ಅನುಷ್ಟಾನಿಸುವ ಬಗ್ಗೆಯೂ ಉಭಯ ದೇಶಗಳು ಗಮನ ಹರಿಸಿದವು.
36. ಇಂಧನ ಕ್ಷೇತ್ರದಲ್ಲಿ ಪರಸ್ಪರ ಲಾಭದಾಯಕ ಸಹಕಾರದ ಸಾಮರ್ಥ್ಯ ಮತ್ತು ಅವಕಾಶವನ್ನು ಉಭಯ ದೇಶಗಳವರು ಗಣನೆಗೆ ತೆಗೆದುಕೊಂಡರು ಮತ್ತು ತಮ್ಮ ಕಂಪೆನಿಗಳಿಗೆ ಪರಸ್ಪರ ಸಹಕಾರಕ್ಕೆ ವಿಶಾಲ ವ್ಯಾಪ್ತಿಯ , ಧೀರ್ಘಾವಧಿಯ ಗುತ್ತಿಗೆ, ಜಂಟಿ ಸಹಯೋಗದ ಉದ್ಯಮ ಮತ್ತು ಉಭಯ ದೇಶಗಳಲ್ಲಿ ಇಂಧನ ಆಸ್ತಿಗಳ ಸ್ವಾಧೀನ ಮತ್ತು ತೃತೀಯ ದೇಶಗಳಲ್ಲಿ ಸಹಕಾರದ ಸಾಧ್ಯತೆಯನ್ನು ಅವಲೋಕಿಸುವಂತೆ ಪ್ರೋತ್ಸಾಹಿಸಿದರು.
37. ರಶ್ಯಾದ ವಾಂಕೋರ್ ನೆಫ್ಟ್ ಮತ್ತು ತಾಸ್ ಯೂರ್ಯಾಕ್ನೆಫ್ಟಿಗಾಜೋಡೊಬೈಚಾ ದಲ್ಲಿ ಭಾರತೀಯ ಹೂಡಿಕೆ ಮತ್ತು ಎಸ್ಸಾರ್ ತೈಲ ಕ್ಯಾಪಿಟಲ್ ನಲ್ಲಿ ಪಿ.ಜೆ.ಎಸ್.ಸಿ. ರೋಸ್ನೆಟ್ ತೈಲ ಕಂಪೆನಿಯ ಸಹಭಾಗಿತ್ವವೂ ಸೇರಿದಂತೆ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡುವಲ್ಲಿ ಭಾರತೀಯ ಮತ್ತು ರಶ್ಯನ್ ಕಂಪೆನಿಗಳ ನಡುವಿನ ಸಹಕಾರವನ್ನು ಉಭಯ ಕಡೆಯವರೂ ಸ್ವಾಗತಿಸಿದರು. ಸಮಗ್ರ ಸಹಕಾರ ಅಭಿವೃದ್ದಿಯಲ್ಲಿ ಕಂಪೆನಿಗಳು ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಎರಡೂ ದೇಶಗಳವರು ವಾಂಕೋರ್ ಗುಚ್ಚದ ಮಾತುಕತೆಗಳು ಆದಷ್ಟು ಬೇಗ ಪೂರ್ಣಗೊಳ್ಳುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
38. ಎಲ್.ಎನ್.ಜಿ. ಕ್ಷೇತ್ರದಲ್ಲಿ ಸಹಕಾರಕ್ಕಾಗಿ ರಶ್ಯನ್ ಮತ್ತು ಭಾರತೀಯ ಕಂಪೆನಿಗಳು ಆಸಕ್ತಿ ವ್ಯಕ್ತಪಡಿಸುತ್ತಿರುವುದನ್ನು ಗಣನೆಗೆ ತೆಗೆದುಕೊಂಡ ಉಭಯ ದೇಶಗಳು ಗಜರ್ಪೋಂ ಗುಂಪು ಮತ್ತು ಗೈಲ್ (ಜಿ.ಎ.ಐ.ಎಲ್.) ಇಂಡಿಯಾ ಲಿಮಿಟೆಡ್ ನಡುವೆ ಧೀರ್ಘಾವಧಿ ಒಪ್ಪಂದದ ಅನ್ವಯ ಎಲ್.ಎನ್.ಜಿ. ಪೂರೈಕೆ ಆರಂಭಗೊಂಡಿರುವುದನ್ನು ಸ್ವಾಗತಿಸಿದವು.
39. ಪಿ.ಜೆ.ಎಸ್.ಸಿ. ನೊವಾಟೆಕ್ ಮತ್ತು ಭಾರತದ ಇಂಧನ ಕಂಪೆನಿಗಳ ನಡುವೆ ಮಾತುಕತೆ ವಿಸ್ತರಣೆ ಮುಂದುವರೆಸುವುದಕ್ಕೆ ಎರಡೂ ಕಡೆಯವರು ಬೆಂಬಲ ವ್ಯಕ್ತಪಡಿಸಿದರು ಮತ್ತು ಎಲ್.ಎನ್.ಜಿ. ಕ್ಷೇತ್ರದಲ್ಲಿ ಸಹಕಾರ ಅಭಿವೃದ್ದಿಗೆ ವ್ಯಕ್ತವಾಗಿರುವ ಜಂಟಿ ಆಸಕ್ತಿಯನ್ನು ಸ್ವಾಗತಿಸಿದರು.
40. ರಶ್ಯಾದ ಉತ್ತರ ದ್ರುವ ಭಾಗವೂ ಸೇರಿದಂತೆ ರಶ್ಯನ್ ಭೂಭಾಗದಲ್ಲಿ ತೈಲ ಕ್ಷೇತ್ರಗಳ ಜಂಟಿ ಅಭಿವೃದ್ದಿ ಅವಕಾಶಗಳ ಸಾಧ್ಯತೆಯನ್ನು ಅನ್ವೇಷಿಸುವ ಮತ್ತು ಆ ನಿಟ್ಟಿನಲ್ಲಿ ಸಹಕಾರ ಅಭಿವೃದ್ದಿಗೆ ಎರಡು ಕಡೆಯಿಂದ ಕಂಪೆನಿಗಳಿಗೆ ಬೆಂಬಲ ನೀಡುವ ಆಶಯವನ್ನು ಉಭಯ ದೇಶಗಳು ವ್ಯಕ್ತಪಡಿಸಿದವು. ಪೆಚೋರಾ ಮತ್ತು ಒಕೋಟ್ಸ್ಕ್ ಸಮುದ್ರ ಪ್ರದೇಶಗಳಲ್ಲಿ ಜಂಟಿ ಯೋಜನೆಗಳನ್ನು ಅಭಿವೃದ್ದಿ ಮಾಡುವ ಬಗ್ಗೆಯೂ ಅವರು ಬೆಂಬಲ ವ್ಯಕ್ತಪಡಿಸಿದರು.
41. ರಶ್ಯಾ ಮತ್ತು ಇತರ ದೇಶಗಳಿಂದ ಭಾರತಕ್ಕೆ ಅನಿಲ ಪೂರೈಕೆ ಕೊಳವೆ ಮಾರ್ಗಗಳ ಬಗ್ಗೆ 2017 ರಲ್ಲಿ ನಡೆದ ಜಂಟಿ ಅಧ್ಯಯನವನ್ನು ಸ್ವಾಗತಿಸಿದ ಎರಡೂ ಕಡೆಯವರು ಭಾರತದ ಮತ್ತು ರಶ್ಯಾದ ಸಚಿವಾಲಯಗಳು ಮತ್ತು ಕಂಪೆನಿಗಳ ನಡುವೆ ಭಾರತಕ್ಕೆ ಅನಿಲ ಪೈಪ್ ಲೈನ್ ನಿರ್ಮಾಣ ಸಾಧ್ಯತೆ ಅನ್ವೇಷಣೆ ಕುರಿತಂತೆ ನಡೆಯುತ್ತಿರುವ ಸಮಾಲೋಚನೆಗಳನ್ನು ಪರಿಗಣಿಸಿದರಲ್ಲದೆ ಎರಡು ಸಚಿವಾಲಯಗಳ ನಡುವೆ ತಿಳುವಳಿಕಾ ಒಡಂಬಡಿಕೆಯನ್ನು ಪೂರ್ಣಗೊಳಿಸುವ ಸಾಧ್ಯತೆ ಬಗ್ಗೆ ಪರಸ್ಪರ ಸಮಾಲೋಚನೆಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೂ ಒಪ್ಪಿಕೊಂಡರು.
42. ಭಾರತದ ಇಂಧನ ಭದ್ರತೆಗೆ ಕೊಡುಗೆ ನೀಡುತ್ತಿರುವ ಭಾರತ ಮತ್ತು ರಶ್ಯಾ ನಡುವಿನ ನಾಗರಿಕ ಅಣು ಸಹಕಾರವು ವ್ಯೂಹಾತ್ಮಕ ಸಹಭಾಗಿತ್ವದ ಪ್ರಮುಖ ಘಟಕಾಂಶವಾಗಿದ್ದು, ಹವಾಮಾನ ವೈಪರಿತ್ಯಕ್ಕೆ ಸಂಬಂಧಿಸಿದ ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಇದು ಅದರ ಬದ್ದತೆಯಾಗಿದೆ. ಕುಡಾಂಕುಲಂ ಎನ್.ಪಿ.ಪಿ. ಯಲ್ಲಿ ಆರು ವಿದ್ಯುತ್ ಘಟಕಗಳ ಸ್ಥಾಪನೆ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಮತ್ತು ಅವುಗಳ ಘಟಕಗಳ ತಯಾರಿಕೆಯಲ್ಲಿ ಸ್ಥಳೀಕರಣದ ಪ್ರಯತ್ನಗಳನ್ನೂ ಉಭಯ ದೇಶಗಳೂ ಪರಿಗಣಿಸಿದವು. ಭಾರತದಲ್ಲಿ ಹೊಸ ರಶ್ಯನ್ ವಿನ್ಯಾಸಿತ ಎನ್.ಪಿ.ಪಿ ಮತ್ತು ಅಣು ಉಪಕರಣಗಳನ್ನು ಜಂಟಿ ತಯಾರಿಕೆ ಮಾಡುವ ಹಾಗು ಮೂರನೆ ರಾಷ್ಟ್ರಗಳಲ್ಲಿ ಸಹಕಾರ ನಿಟ್ಟಿನ ಮಾತುಕತೆಗಳನ್ನು ಉಭಯ ದೇಶಗಳೂ ಸ್ವಾಗತಿಸಿದವು. ಬಾಂಗ್ಲಾ ದೇಶದ ರೂಪ್ಪುರ್ ಅಣು ವಿದ್ಯುತ್ ಯೋಜನೆಯ ಅನುಷ್ಟಾನದಲ್ಲಿ ತ್ರಿಪಕ್ಷೀಯ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಯಲ್ಲಿ ಹೇಳಲಾದ ಅಂಶಗಳನ್ನು ಈಡೇರಿಸುವಲ್ಲಿ ಮಾಡಲಾದ ಪ್ರಗತಿಯ ಬಗ್ಗೆ ಎರಡೂ ಕಡೆಯವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಜಂಟಿಯಾಗಿ ಗುರುತಿಸಲಾದ ಅಣು ಕ್ಷೇತ್ರಗಳಲ್ಲಿ ಸಹಕಾರವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲು ಮತ್ತು ಅನುಷ್ಟಾನಕ್ಕೆ ತರಲು ಕ್ರಿಯಾ ಯೋಜನೆಗೆ ಅಂಕಿತ ಹಾಕಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು.
43. ಜಲ ಮತ್ತು ಪುನರ್ನವೀಕರಿಸಬಹುದಾದ ಇಂಧನ ಮೂಲಗಳು, ಇಂಧನ ದಕ್ಷತೆ, ಹವಾಮಾನ ಬದಲಾವಣೆಯ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವಿಕೆಯೂ ಸೇರಿದಂತೆ ಈ ಕ್ಷೇತ್ರಗಳಲ್ಲಿ ನಿಕಟ ಸಹಕಾರದ ಇನ್ನಷ್ಟು ಸಾಧ್ಯತೆಗಳನ್ನು ಅನ್ವೇಷಿಸಲು ಉಭಯ ಕಡೆಯವರು ನಿರ್ಧರಿಸಿದರು.
ಮಿಲಿಟರಿ-ತಾಂತ್ರಿಕ ಸಹಕಾರ.
44. ತಮ್ಮ ವ್ಯೂಹಾತ್ಮಕ ಸಹಭಾಗಿತ್ವಕ್ಕೆ ಉಭಯ ದೇಶಗಳ ನಡುವೆ ಮಿಲಿಟರಿ ಮತ್ತು ಮಿಲಿಟರಿ-ತಾಂತ್ರಿಕ ಸಹಕಾರ ಬಹುಮುಖ್ಯ ಆಧಾರಸ್ತಂಭಗಳು ಎಂಬ ಅಂಶವನ್ನು ಎರಡೂ ಕಡೆಯವರು ಮನಗಂಡಿದ್ದಾರೆ. ಮಿಲಿಟರಿ ತಾಂತ್ರಿಕ ಸಹಕಾರಕ್ಕೆ ಸಂಬಂಧಿಸಿದ ಭಾರತ-ರಶ್ಯಾ ಅಂತರ ಸರಕಾರೀ ಆಯೋಗದ ಸಭೆ 2018 ರ ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು ಇದನ್ನು ಎರಡೂ ಕಡೆಯವರು ಸ್ವಾಗತಿಸಿದರು. ಮಿಲಿಟರಿ ಸಹಕಾರದ ಹಾದಿ ಉಭಯ ದೇಶಗಳ ಮಿಲಿಟರಿಗಳ ನಡುವೆ ವಿಸ್ತೃತ ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿದೆಯಲ್ಲದೆ , ತರಬೇತಿ, ಮಿಲಿಟರಿಗಳ ಹಿರಿಯ ಅಧಿಕಾರಿಗಳ ವಿನಿಮಯ , ಸಿಬ್ಬಂದಿ ಮಾತುಕತೆ, ಮತ್ತು ಸಮರಾಭ್ಯಾಸಗಳನ್ನೂ ಒಳಗೊಂಡಿದೆ. ರಶ್ಯ ಸರಕಾರವು ಸೇನಾ ಕ್ರೀಡಾಕೂಟ 2018 ರಲ್ಲಿ ಭಾರತದ ಸೇನೆಯ ಪಾಲ್ಗೊಳ್ಳುವಿಕೆಯನ್ನು ಮತ್ತು ಅಂತಾರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಮಾಸ್ಕೋ ಸಮ್ಮೇಳನದಲ್ಲಿಯ ಭಾಗವಹಿಸುವಿಕೆಯನ್ನು ಧನಾತ್ಮಕ ಮೌಲ್ಯಮಾಪನವಾಗಿ ಪರಿಗಣಿಸಿದೆ. ಉಭಯ ಕಡೆಯವರೂ ಮೊಟ್ಟ ಮೊದಲ ತ್ರಿ ಸೇವಾ ಅಭ್ಯಾಸ -ಇಂದ್ರ 2017 ನ್ನು ಯಶಸ್ವಿಯಾಗಿ ಪೂರ್‍ಣಗೊಳಿಸಿರುವುದನ್ನು ಶ್ಲಾಘಿದರಲ್ಲದೆ ತಮ್ಮ ಜಂಟಿ ಮಿಲಿಟರಿ ಅಭ್ಯಾಸಗಳಾದ –ಇಂದ್ರ ನೌಕಾಸೇನೆ, ಇಂದ್ರ ಭೂಸೇನೆ ಮತ್ತು ಏವಿಯಾ ಇಂದ್ರ -ಇವುಗಳನ್ನು 2018 ರಲ್ಲಿ ಮುಂದುವರೆಸಲು ಬದ್ದತೆಯನ್ನು ಪ್ರಕಟಿಸಿವೆ.
45. ಭಾರತಕ್ಕೆ ಭೂಮಿಯಿಂದ ಆಕಾಶಕ್ಕೆ ನೆಗೆಯುವ ದೂರಗಾಮಿ ಕ್ಷಿಪಣಿ ವ್ಯವಸ್ಥೆಯಾದ ಎಸ್-400ನ್ನು ಪೂರೈಸುವ ಗುತ್ತಿಗೆ ಅಂತಿಮಗೊಳಿಸಿರುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು. ಭಾರತ ಮತ್ತು ರಶ್ಯಾ ನಡುವೆ ಮಿಲಿಟರಿ ತಾಂತ್ರಿಕ ಸಹಕಾರ ಹೆಚ್ಚಳಕ್ಕೆ ಬದ್ದತೆಯನ್ನು ಮರುದೃಢಪಡಿಸಿದ ಉಭಯ ದೇಶಗಳು ಪರಸ್ಪರ ವಿಶ್ವಾಸದ ಮತ್ತು ಪರಸ್ಪರ ಪ್ರಯೋಜನಕಾರಿಯಾದ ಬಲು ಧೀರ್ಘ ಇತಿಹಾಸವನ್ನು ಈ ನಿಟ್ಟಿನಲ್ಲಿ ಹೊಂದಿರುವುದನ್ನೂ ಗಣನೆಗೆ ತೆದುಕೊಂಡವು. ಮಿಲಿಟರಿ ತಾಂತ್ರಿಕ ಸಹಕಾರದ ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳಲ್ಲಿ ಮಾಡಲಾಗಿರುವ ಪ್ರಮುಖವಾದ ಪ್ರಗತಿಗೆ ಉಭಯ ಕಡೆಯವರೂ ತೃಪ್ತಿ ವ್ಯಕ್ತಪಡಿಸಿದರು. ಮತ್ತು ಉಭಯ ದೇಶಗಳ ನಡುವೆ ಜಂಟಿ ಸಂಶೋಧನೆ ಹಾಗು ಮಿಲಿಟರಿ ತಾಂತ್ರಿಕ ಸಲಕರಣೆಗಳ ಜಂಟಿ ಉತ್ಪಾದನೆಯನ್ನು ಪರಿಗಣನೆಗೆ ಒಳಪಡಿಸಿದವು. ಮಿಲಿಟರಿ ಕೈಗಾರಿಕಾ ಸಮಾವೇಶ ಪ್ರಕ್ರಿಯೆಯನ್ನು ಭಾರತ ಸರಕಾರದ ’ಮೇಕ್ ಇನ್ ಇಂಡಿಯಾ” ನೀತಿ ಉತ್ತೇಜಿಸುವ ಪ್ರಮುಖ ವ್ಯವಸ್ಥೆ ಎಂದು ಅವು ಮೌಲ್ಯಮಾಪನ ಮಾಡಿದವು. ಉನ್ನತ ತಂತ್ರಜ್ಞಾನದಲ್ಲಿ ಸಹಕಾರಕ್ಕೆ ಸಂಬಂಧಿಸಿ 2017ರ ನವೆಂಬರ್ ತಿಂಗಳಲ್ಲಿ ನೇಮಿಸಲಾದ ಉನ್ನತಾಧಿಕಾರದ ಸಮಿತಿಯ ಸಭೆಯನ್ನು ಧನಾತ್ಮಕವೆಂದು ಉಭಯ ಕಡೆಯವರೂ ಪರಿಗಣಿಸಿದರು.ಇದರಲ್ಲಿ ಸಂಬಂಧಿಸಿದ ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ದಿಗೆ ಸಂಬಂಧಿಸಿ ಬಲಿಷ್ಟವಾದ್ ಯೋಜನೆಗಳನ್ನು ಗುರುತಿಸಲಾಗಿದೆ.
ಅಂತಾರಾಷ್ಟ್ರೀಯ ವಿಷಯಗಳು
46. ವಿಶ್ವ ಸಂಸ್ಥೆಯ ಸನ್ನದಿನಲ್ಲಿ ಪ್ರತಿಬಿಂಬಿಸಲ್ಪಟ್ಟ ಅಂತಾರಾಷ್ಟ್ರೀಯ ಕಾನೂನುಗಳ ವಿಶ್ವ ಮಾನ್ಯತೆಯ ಮಾನ ದಂಡಗಳ ಪ್ರಕಾರ ಮತ್ತು 1970 ರ ಅಂತಾರಾಷ್ಟ್ರೀಯ ಸ್ನೇಹ ಬಾಂದವ್ಯ ಸಂಬಂಧಿ ತತ್ವಗಳ ಘೋಷಣೆಯ ಪ್ರಕಾರ ಮತ್ತು ರಾಷ್ಟ್ರಗಳ ನಡುವಿನ ಸಹಕಾರ ಕುರಿತ ವಿಶ್ವ ಸಂಸ್ಥೆಯ ಸನ್ನದಿನ ಅನ್ವಯ “ಸಮಾನತೆ , ಪರಸ್ಪರ ಗೌರವ ಮತ್ತು ನಿಶಃಸ್ತ್ರೀಕರಣ ವನ್ನು ಉಭಯ ರಾಷ್ಟ್ರಗಳೂ ಪ್ರತಿಪಾದಿಸಿದವು.
47. 2018 ರ ಜುಲೈ ತಿಂಗಳಲ್ಲಿ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ನ 10ನೇ ವಾರ್ಷಿಕೋತ್ಸವದ ಫಲಶ್ರುತಿಯನ್ನು ಉಲ್ಲೇಖಿಸಿದ ಉಭಯ ದೇಶಗಳೂ ಸಂಘಟನೆಯೊಳಗೆ ವ್ಯೂಹಾತ್ಮಕ ಸಹಭಾಗಿತ್ವವನ್ನು ಹೆಚ್ಚಿಸುವ ಸಲುವಾಗಿ ಉತ್ಪಾದಕತೆಯ ಸಂವಾದವನ್ನು ಮುಂದುವರೆಸುವ ಬಗ್ಗೆ ಭಾರತ ಮತ್ತು ರಶ್ಯಾ ಗಳ ಉದ್ದೇಶವನ್ನು ಎರಡೂ ಕಡೆಯವರು ಗುರುತಿಸಿದರು. ನ್ಯಾಯೋಚಿತ ಮತ್ತು ಬಹುದ್ರುವೀಕೃತ ವಿಶ್ವ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವ ಸಂಸ್ಥೆ ಸನ್ನದಿನ ಕಟ್ಟುನಿಟ್ಟಿನ ಪಾಲನೆಯ ಆಧಾರದಲ್ಲಿ ರೂಪಿಸುವ ಆದ್ಯತೆಯನ್ನು ಎರಡೂ ಕಡೆಯವರು ಸಮರ್ಥಿಸಿಕೊಂಡರು.
48. ಅಫ್ಘಾನ್ ನೇತೃತ್ವದ ಮತ್ತು ಅಫ್ಘಾನ್ ಮಾಲಕತ್ವದ ರಾಷ್ಟ್ರೀಯ ಶಾಂತಿ ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ಜಾರಿಗೆ ತರುವ ಅಫ್ಘಾನ್ ಸರಕಾರದ ಪ್ರಯತ್ನಗಳಿಗೆ ಎರಡೂ ಕಡೆಯವರು ತಮ್ಮ ಬೇಂಬಲ ಘೋಷಿಸಿದರು. ಅನಿರ್ಬಂಧಿತ ಹಿಂಸಾಚಾರ ಮತ್ತು ಅಫ್ಘಾನಿನಲ್ಲಿ ಗಂಭೀರವಾಗಿ ಶಿಥಿಲಗೊಂಡ ಭದ್ರತಾ ಪರಿಸ್ಥಿತಿ ಮತ್ತು ಅದರಿಂದ ಆ ವಲಯದಲ್ಲಿ ಉದ್ಭವಿಸಿರುವ ಪ್ರತಿಕೂಲ ಪರಿಣಾಮ ಕುರಿತಂತ ಕಳವಳ ವ್ಯಕ್ತಪಡಿಸಿರುವ ಉಭಯ ದೇಶಗಳು ಮಾಸ್ಕೋ ಚೌಕಟ್ಟಿನಡಿಯಲ್ಲಿ , ಅಫಘಾನಿಸ್ಥಾನಕ್ಕೆ ಸಂಬಂಧಿಸಿದ ಎಸ್.ಸಿ.ಒ. ಸಂಪರ್ಕ ಗುಂಪು ಮತ್ತು ಇತರ ಎಲ್ಲಾ ಅಂಗೀಕೃತ ಮಾದರಿ, ಚೌಕಟ್ಟುಗಳ ಒಳಗೆ ಅಪಘಾನಿಸ್ತಾನದ ಧೀರ್ಘ ಕಾಲೀನ ಸಂಘರ್ಷವನ್ನು ಶೀಘ್ರ ಪರಿಹಾರ ಮಾಡುವ , ಭಯೋತ್ಪಾದಕರ ಹಿಂಸಾಚಾರವನ್ನು ಕೊನೆಗೊಳಿಸುವ , ಭಯೋತ್ಪಾದಕರ ಬಾಹ್ಯ ಸುರಕ್ಷಾ ಸ್ವರ್ಗಗಳನ್ನು ಮತ್ತು ಭಯೋತ್ಪಾದಕರ ಸುರಕ್ಷಾಧಾಮಗಳನ್ನು ಹತ್ತಿಕ್ಕ್ಕುವ ಮತ್ತು ದೇಶದೊಳಗಿನ ಹದಗೆಟ್ಟಿರುವ ಮಾದಕ ದ್ರವ್ಯ ಸಮಸ್ಯೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುವ ನಿರ್ಣಯ ಕೈಗೊಂಡಿವೆ. ಅಪಘಾನಿಸ್ತಾನದಲ್ಲಿ ಯಾವುದೇ ಬಾಹ್ಯ ಹಸ್ತಕ್ಷೇಪವನ್ನು ತೊಡೆಯಲು ನಡೆಸುವ ಪ್ರಯತ್ನಗಳಿಗೆ ಕೈಜೋಡಿಸುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿವೆ. ಆರ್ಥಿಕತೆಯ ಮರುಸ್ಥಾಪನೆ, ಶಾಂತಿ ಮತ್ತು ಭದ್ರತೆಯ ಮುಂದುವರಿಕೆ, ಸ್ಥಿರ , ಭದ್ರ, ಏಕೀಕೃತ , ಸಮೃದ್ದ ಮತ್ತು ಸ್ವತಂತ್ರ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಯ ಅಫಘಾನಿಸ್ತಾನದ ಉದಯಕ್ಕೆ ಕಾರಣವಾಗುವ ಪ್ರಯತ್ನಗಳಿಗೆ ನೆರವಾಗಬೇಕು ಎಂದು ಉಭಯ ದೇಶಗಳು ಕರೆ ನೀಡಿವೆ. ಎರಡೂ ದೇಶಗಳು ಅಪಘಾನಿಸ್ಥಾನದಲ್ಲಿ ಜಂಟಿ ಅಭಿವೃದ್ದಿ ಮತ್ತು ಸಾಮರ್ಥ್ಯ ವರ್ಧನೆ ಯೋಜನೆಗಳ ಆರಂಭಕ್ಕೆ ತಮ್ಮ ಅಂಗಸಂಸ್ಥೆಗಳಿಗೆ ನಿರ್ದೇಶನ ನೀಡಲಿವೆ.
49. ಸಿರಿಯಾದ ಬಿಕ್ಕಟ್ಟನ್ನು ಸಿರಿಯನ್ ನೇತೃತ್ವದ , ಸಿರಿಯನ್ ಮಾಲಕತ್ವದ ರಾಜಕೀಯ ಪ್ರಕ್ರಿಯೆಯ ಮೂಲಕ, ಆ ದೇಶದ ಸಾರ್ವಭೌಮತೆ , ಸ್ವಾತಂತ್ರ್ಯ ಮತ್ತು ಭೌಗೋಳಿಕ ಸಮಗ್ರತೆಗೆ ಯಾವುದೇ ಧಕ್ಕೆ ಬಾರದಂತೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2254 (2015) ರನ್ವಯ ನಿಭಾಯಿಸಬೇಕು ಎನ್ನುವ ರಾಜಕೀಯ ನಿರ್ಣಯಕ್ಕೆ ಭಾರತ ಮತ್ತು ರಶ್ಯಾಗಳು ತಮ್ಮ ಬದ್ದತೆಯನ್ನು ಪುನರುಚ್ಚರಿಸಿದವು. ಜಿನಿವಾ ಪ್ರಕ್ರಿಯೆ ಮತ್ತು ವಿಶ್ವ ಸಂಸ್ಥೆ ಮುಂದಿಟ್ಟ ಮಧ್ಯಸ್ಥಿಕೆ ಪ್ರಸ್ತಾಪ, ಜೊತೆಗೆ ಆಸ್ಟಾನಾ ಪ್ರಕ್ರಿಯೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ ಎರಡು ಉಪಕ್ರಮಗಳು ಪರಸ್ಪರ ಪೂರಕ ರೀತಿಯಲ್ಲಿರಬೇಕಾದ ಅಗತ್ಯವನ್ನು ಒತ್ತಿ ಹೇಳಿವೆ. ಎಲ್ಲಾ ಭಾಗೀದಾರರು ಶಾಂತಿಯುತ, ಸ್ಥಿರ ಮತ್ತು ಸಾರ್ವಭೌಮ ಸಿರಿಯನ್ ದೇಶ ಕಟ್ಟುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಮತ್ತು ಯಾವುದೇ ಪೂರ್ವ ಶರತ್ತು ಇಲ್ಲದೆ ಅಥವಾ ಬಾಹ್ಯ ಮಧ್ಯಪ್ರವೇಶ ಇಲ್ಲದೆ ಅಂತರ್ ಸಿರಿಯಾ ಮಾತುಕತೆಗೆ ಬೆಂಬಲ ನೀಡಬೇಕು ಎಂದು ಎರಡೂ ಕಡೆಯವರು ಕರೆ ನೀಡಿದರು. ತುರ್ತು ಮರುನಿರ್ಮಾಣ ಆವಶ್ಯಕತೆಗಳು ಮತ್ತು ನಿರಾಶ್ರಿತರ ಮರಳಿಸುವಿಕೆ ಹಾಗು ದೇಶದೊಳಗೆ ನಿರಾಶ್ರಿತರಾದವರನ್ನು ಗಮನದಲ್ಲಿಟ್ಟುಕೊಂಡು ಸಿರಿಯನ್ ಜನತೆ ಬಹಳ ಧೀರ್ಘ ಕಾಲದಿಂದ ಅನುಭವಿಸುತ್ತಿರುವ ಯಾತನೆಯನ್ನು ಶೀಘ್ರವೇ ಅಂತ್ಯಗೊಳಿಸಲು ಅವಶ್ಯ ಮಾನವೀಯ ನೆರವನ್ನು ನೀಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಹೆಚ್ಚಿಸಬೇಕೆಂದು ಉಭಯ ದೇಶಗಳು ಕರೆ ನೀಡಿದವು.
50. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ವ್ಯವಸ್ಥೆಯ ಬೆಂಬಲಾರ್ಥ , ನಿಃಶಸ್ತ್ರೀಕರಣ ಆಡಳಿತವನ್ನು ಬಲಪಡಿಸಲು ಮತ್ತು ಇರಾನಿನ ಜೊತೆ ಸಾಮಾನ್ಯ ಆರ್ಥಿಕ ಸಹಕಾರವನ್ನು ಅಭಿವೃದ್ದಿಪಡಿಸಲು ಇರಾನಿನ ಅಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಜಂಟಿ ಸಮಗ್ರ ಕಾರ್ಯ ಯೋಜನೆಯನ್ನು ( ಜೆ.ಸಿ.ಪಿ.ಒ.ಎ.) ಪೂರ್ಣವಾಗಿ ಮತ್ತು ಕ್ರಿಯಾಶೀಲವಾಗಿ ಅನುಷ್ಟಾನಿಸಬೇಕಾದ ಪ್ರಾಮುಖ್ಯತೆಯನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಇರಾನಿನ ಅಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳೂ ಶಾಂತಿಯುತವಾಗಿ ಮತ್ತು ಮಾತುಕತೆಯ ಮೂಲಕ ಬಗೆಹರಿಸಲ್ಪಡಬೇಕು ಎಂದು ಆಗ್ರಹಿಸಿದರು.
51. ಕೊರಿಯನ್ ದ್ವೀಪ ಕಲ್ಪದ ಧನಾತ್ಮಕ ಬೆಳವಣಿಗೆಗಳನ್ನು ಉಭಯ ದೇಶಗಳೂ ಸ್ವಾಗತಿಸಿದವು ಮತ್ತು ಈ ಉಪ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ರಾಜತಾಂತ್ರಿಕ ಕ್ರಮಗಳು ಹಾಗು ಮಾತುಕತೆಯ ಮೂಲಕ ಸ್ಥಾಪಿಸುವ ಪ್ರಯತ್ನಗಳಿಗೆ ಬೆಂಬಲ ಘೋಷಿಸಿದವು. ಕೊರಿಯನ್ ದ್ವೀಪ ಕಲ್ಪದ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯತಂತ್ರ ರೂಪಿಸಬೇಕು ಎಂಬುದಕ್ಕೆ ಒಪ್ಪಿಗೆ ಸೂಚಿಸಿದ ಉಭಯ ರಾಷ್ಟ್ರಗಳು ಅದರ ಶಸ್ತ್ರೀಕರಣಕ್ಕೆ ಜೋಡಣೆಯಾಗಿರುವ ಕಳವಳಗಳನ್ನು ಗಣನೆಗೆ ತೆಗೆದುಕೊಳ್ಳುವುದು ಅಗತ್ಯ ಎಂದೂ ಅಭಿಪ್ರಾಯಪಟ್ಟವು.
52. ಬಾಹ್ಯಾಕಾಶದಲ್ಲಿ ಶಸ್ತ್ರ ಪೈಪೋಟಿ ಸಾಧ್ಯತೆ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಉಭಯ ಕಡೆಗಳವರೂ ಬಾಹ್ಯಾಕಾಶ ಮಿಲಿಟರಿ ಸಂಘರ್ಷದ ಕ್ಷೇತ್ರವಾಗಿ ಬದಲಾಗುತ್ತಿರುವ ಸಂಭವನೀಯತೆಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿಯನ್ನು ನಿರ್ಬಂಧಿಸುವ ಬಗ್ಗೆ (ಪಿ.ಎ.ಆರ್. ಒ.ಎಸ್.) ತಮ್ಮ ನಿಲುವನ್ನು ಪುನರುಚ್ಚರಿಸಿದ ಎರಡೂ ರಾಷ್ಟ್ರಗಳು ಇದರಿಂದ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅಪಾಯ ತಪ್ಪಿಸಬಹುದು ಎಂಬುದನ್ನು ಪುನರುಚ್ಚರಿಸಿವೆ. ಪಿ.ಎ.ಆರ್. ಒ.ಎಸ್. ಗೆ ಕಾನೂನಿನ ಚೌಕಟ್ಟನ್ನು ಒದಗಿಸುವ ಸಾಧ್ಯತೆಗೆ ಸಂಬಂಧಿಸಿದಂತೆ ಸರಕಾರಿ ತಜ್ಞರ ವಿಶ್ವ ಸಂಸ್ಥೆ ಗುಂಪಿನ ಸಭೆಯ ಚರ್ಚೆಯನ್ನು ಎರಡು ಕಡೆಗಳವರು ಸ್ವಾಗತಿಸಿದ್ದಲ್ಲದೆ ಬಾಹ್ಯಾಕಾಶದಲ್ಲಿ ಶಸ್ತ್ರಗಳನ್ನು ಇಡುವುದನ್ನು ನಿಯಂತ್ರಿಸುವ, ನಿರ್ಬಂಧಿಸುವ ಕುರಿತ ಸಮಾಲೋಚನೆಯನ್ನೂ ಬೆಂಬಲಿಸಿದರು. ಪ್ರಾಯೋಗಿಕ ಪಾರದರ್ಶಕತೆ ಮತ್ತು ವಿಶ್ವಾಸ ವೃದ್ದಿಸುವ ಕ್ರಮಗಳು ಕೂಡಾ ಪಿ.ಎ.ಆರ್.ಒ.ಎಸ್. ನ ಉದ್ದೇಶಗಳಲ್ಲಿ ಒದಗಬೇಕು ಎಂಡು ಅವರು ಪ್ರತಿಪಾದಿಸಿದರು.
53. ರಾಸಾಯನಿಕ ಅಸ್ತ್ರಗಳ ದಾಸ್ತಾನು ಮಾಡುವಿಕೆ, ಉತ್ಪಾದನೆ, ಅಭಿವೃದ್ದಿ ನಿರ್ಬಂಧಿಸುವ , ರಾಸಾಯನಿಕ ಅಸ್ತ್ರ ಬಳಸುವ ಮತ್ತು ಅವುಗಳ ನಾಶ ಹಾಗು ರಾಸಾಯನಿಕ ಶಸ್ತ್ರಗಳನ್ನು ನಿರ್ಬಂಧಿಸುವ ಸಂಘಟನೆಗಳ ಕಾರ್ಯ ಚಟುವಟಿಕೆಗಳು ರಾಜಕೀಕರಣಗೊಳ್ಲುವುದನ್ನು ತಡೆಯಲು ಸಮಾವೇಶದ ನಿರ್ಣಯಗಳ ಪಾತ್ರವನ್ನು ಸಂರಕ್ಷಿಸುವ ಉಪಕ್ರಮಗಳು ಮತ್ತು ಪ್ರಯತ್ನಗಳಿಗೆ ಉಭಯ ದೇಶಗಳೂ ತಮ್ಮ ಬೆಂಬಲವನ್ನು ಪುನರುಚ್ಚರಿಸಿದವು. ರಶ್ಯನ್ ಒಕ್ಕೂಟವು ತನ್ನ ರಾಸಾಯನಿಕ ಅಸ್ತ್ರಗಳ ದಾಸ್ತಾನನ್ನು ನಾಶ ಮಾಡುವ ಕಾರ್ಯವನ್ನು ಸಾಕಷ್ಟು ಮುಂಚಿತವಾಗಿಯೇ ಪೂರ್ಣಗೊಳಿಸಿದ್ದನ್ನು ಭಾರತದ ಕಡೆಯಿಂದ ಶ್ಲ್ಯಾಘಿಸಲಾಯಿತಲ್ಲದೆ ಈ ಮೂಲಕ ಅದು ರಾಸಾಯನಿಕ ಅಸ್ತ್ರ ಮುಕ್ತ ವಿಶ್ವ ನಿರ್ಮಾಣ ಮಾಡುವ ಗುರಿಗೆ ಪ್ರಮುಖ ಕೊಡುಗೆ ನೀಡಿದಂತಾಗಿದೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
54. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಮತ್ತು ಅದರ ರೂಪಾಂತರಗಳನ್ನು ಖಂಡಿಸಿರುವ ಉಭಯ ಕಡೆಯವರೂ ಅಂತಾರಾಷ್ಟ್ರೀಯ ಭಯೋತ್ಪಾದನೆಯನ್ನು ನಿರ್ಧಾರಾತ್ಮಕ ಮತ್ತು ಸಾಮೂಹಿಕ ಪ್ರತಿಕ್ರಿಯೆಯ ಮೂಲಕ ಯಾವುದೇ ದ್ವಿಮುಖ ನೀತಿ ಇಲ್ಲದೆ ದಮನ ಮಾಡಬೇಕು ಎಂಬ ನಿಲುವನ್ನು ಪುನರುಚ್ಚರಿಸಿದ್ದಾರೆ. ಭಯೋತ್ಪಾದಕ ಜಾಲಗಳನ್ನು ನಿರ್ಮೂಲನೆ ಮಾಡುವ, ಅವರ ಹಣಕಾಸು ಮೂಲಗಳನ್ನು ಹಣಿಯುವ, ಶಸ್ತ್ರ ಮತ್ತು ಹೋರಾಟಗಾರರ ಪೂರೈಕೆ ಜಾಲಗಳನ್ನು , ಭಯೋತ್ಪಾದನೆಯ ಚಿಂತನೆಯನ್ನು ತೊಡೆಯುವ ಮತ್ತು ಆ ಬಗ್ಗೆವ್ಯಾಪಕ ಪ್ರಚಾರಾಂದೋಲನ ಮಾಡುವ , ನೇಮಕಾತಿ ಮಾಡುವುದರ ಮೇಲೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆ ಸಹಿತ ಭಯೋತ್ಪಾದಕರಿಗೆ ಸರಕಾರಗಳ ಎಲ್ಲಾ ರೀತಿಯ ಬೆಂಬಲ ಮತ್ತು ಭಯೋತ್ಪಾದಕರಿಗೆ ಸುರಕ್ಷಾ ಸ್ವರ್ಗ ನಿರ್ಮಾಣ ಮಾಡುವ ಮತ್ತು ಅವರ ಜಾಲವನ್ನು ಪೋಷಿಸುವ ಕ್ರಮಗಳನ್ನು ಎರಡೂ ಕಡೆಯವರು ಖಂಡಿಸಿದ್ದಾರೆ. ಅಂತಾರಾಷ್ಟ್ರೀಯ ಭಯೋತ್ಪಾದನೆಯ ಬಗ್ಗೆ ವಿಶ್ವ ಸಂಸ್ಥೆಯಲ್ಲಿ ಬಾಕಿ ಇರುವ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಸಮಗ್ರ ಒಡಂಬಡಿಕೆ ಅಂತಾರಾಷ್ಟ್ರೀಯ ಕಾನೂನಿನ ಭಾಗವಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಉಭಯ ಕಡೆಯವರೂ ಈ ತೀರ್ಮಾನಕ್ಕೆ ಬರಲು ಅಂತಾರಾಷ್ಟ್ರೀಯ ಸಮುದಾಯ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು ಎಂದೂ ಕರೆನೀಡಿದ್ದಾರೆ. ರಾಸಾಯನಿಕ ಮತ್ತು ಜೈವಿಕ ಭಯೋತ್ಪಾದನೆಯ ಆತಂಕವನ್ನು ಎದುರಿಸಲು ಎರಡೂ ಕಡೆಯವರು ನಿಶಃಸ್ತ್ರೀಕರಣ ಸಮಾವೇಶದಲ್ಲಿ ಬಹುಪಕ್ಷೀಯ ಮಾತುಕತೆಗಳು ನಡೆಯಬೇಕು ಎಂಬ ಅಂಶವನ್ನು ಒತ್ತಿ ಹೇಳಿರುವುದರ ಜೊತೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಸಾಯನಿಕ ಮತ್ತು ಜೈವಿಕ ಭಯೋತ್ಪಾದನೆಯ ಕೃತ್ಯಗಳನ್ನು ಅಡಗಿಸಲು ಅಂತಾರಾಷ್ಟ್ರೀಯ ಸಮಾವೇಶಕ್ಕೂ ಆಗ್ರಹಿಸಿದ್ದಾರೆ.
55. ಅಂತಾರಾಷ್ಟ್ರಿಯ ಕಾನೂನಿನ ತತ್ವಗಳಿಗೆ ಎರಡೂ ಕಡೆಯವರು ತಮ್ಮ ಬದ್ದತೆಯನ್ನು ಪುನರುಚ್ಚರಿಸಿದ್ದಾರೆ. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ವಿಶ್ವ ಸಂಸ್ಥೆಯ ಕೇಂದ್ರೀಯತೆಯ ಬಗ್ಗೆಯೂ ಬದ್ದತೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಪರಿಗಣಿಸಲ್ಪಟ್ಟ ತತ್ವಗಳಲ್ಲಿ ಉತ್ತಮ ವಿಶ್ವಾಸ ವ್ಯಕ್ತಪಡಿಸುವುದು ಮತ್ತು ಕೆಲವು ಆಡಳಿತಗಳು ತಮ್ಮ ಆಶಯವನ್ನು ಇತರ ಆಡಳಿತ/ದೇಶಗಳ ಮೇಲೆ ಹೇರುವಂತಹ ಕ್ರಮಗಳಿಗೆ, ದ್ವಿಮುಖ ನೀತಿಗೆ ಮತ್ತು ಏಕ ಪಕ್ಷೀಯ ಘರ್ಷಣಾತ್ಮಕ ಕ್ರಮಗಳ ಜಾರಿಗೆ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಅವಕಾಶ ಇಲ್ಲದಿರುವುದರ ಬಗೆಗಿನ ನಿಲುವನ್ನೂ ಎರಡು ಕಡೆಯವರು ಹಂಚಿಕೊಂಡಿದ್ದಾರೆ. ಮತ್ತು ಇಂತಹ ಸಂಘರ್ಷಾತ್ಮಕ ಕ್ರಮಗಳು ಅಂತಾರಾಷ್ಟ್ರೀಯ ಕಾನೂನನ್ನು ಆಧರಿಸಿದವಲ್ಲ ಎಂದಿರುವ ಎರಡೂ ಕಡೆಯವರು ಜಾಗತಿಕ ಮತ್ತು ಹಂಚಿಕೊಂಡ ಹಿತಾಸಕ್ತಿಗಳನ್ನು ಆಧರಿಸಿ ಪ್ರಜಾಸತ್ತಾತ್ಮಕ ಜಾಗತಿಕ ವ್ಯವಸ್ಥೆಯನ್ನು ಉತ್ತೇಜಿಸಲು ಜೊತೆಯಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
56. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯನ್ನು ಹಾಲಿ ವಿಶ್ವ ವ್ಯವಸ್ಥೆ ಯನ್ನು ಪ್ರತಿಬಿಂಬಿಸುವಂತೆ ಮತ್ತು ಉದಯಿಸುತ್ತಿರುವ ಜಾಗತಿಕ ಸವಾಲುಗಳನ್ನು ಹೆಚ್ಚು ಕ್ರಿಯಾಶೀಲವಾಗಿ ನಿಭಾಯಿಸಲು ಸಮರ್ಥವಾಗುವಂತೆ ಪುನರ್ ರೂಪಿಸಬೇಕಾದ ಅಗತ್ಯವನ್ನು ಉಭಯ ಕಡೆಯವರೂ ಪುನರುಚ್ಚರಿಸಿದ್ದಾರೆ. ವಿಸ್ತರಿತ ಯು.ಎನ್. ಎಸ್.ಸಿ. ಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಭಾರತಕ್ಕೆ ರಶ್ಯಾವು ತನ್ನ ದೃಢ ಬೆಂಬಲವನ್ನು ಪುನರುಚ್ಚರಿಸಿತು. ಎರಡೂ ಕಡೆಯವರು ಶಾಂತಿ, ಭದ್ರತೆ ಮತ್ತು ಪ್ರಾದೇಶಿಕವಾಗಿ ಹಾಗು ಜಾಗತಿಕವಾಗಿ ಸಮಾನ ಅಭಿವೃದ್ದಿ ಖಾತ್ರಿಪಡಿಸಲು ನಿಕಟವಾಗಿ ಕೆಲಸ ಮಾಡಲು ಮತ್ತು ವಿಶ್ವ ವ್ಯವಸ್ಥೆಯ ಸ್ಥಿರತೆಗೆ ಎದುರಾಗುವ ಅಪಾಯಗಳನ್ನು ಎದುರಿಸಲು ತಮ್ಮ ಪ್ರಯತ್ನಗಳನ್ನು ಸಮನ್ವಯಗೊಳಿಸಲು ನಿರ್ಧರಿಸಿದರು.
57. ಸಹ್ಯ ಅಭಿವೃದ್ದಿಗೆ ಸಂಬಂಧಿಸಿದ 2030 ರ ಕಾರ್ಯಪಟ್ಟಿಯನ್ನು ಪೂರ್ಣವಾಗಿ ಅನುಷ್ಟಾನಕ್ಕೆ ತರಲು ತಮ್ಮ ಬದ್ದತೆಯನ್ನು ಉಭಯ ದೇಶಗಳೂ ಪುನರುಚ್ಚರಿಸಿದವು. ಸಮಾನ, ಮುಕ್ತ, ಸರ್ವ ರೀತಿಯ , ಅನ್ವೇಷಣಾ ಬದ್ದ ಮತ್ತು ಎಲ್ಲರನ್ನು ಒಳಗೊಳ್ಳುವ ಸಹ್ಯ ಅಭಿವೃದ್ದಿಯನ್ನು ಆರ್ಥಿಕ, ಸಾಮಾಜಿಕ ಮತ್ತು ಪರಿಸರ –ಹೀಗೆ ಈ ಮೂರು ಆಯಾಮಗಳಲ್ಲಿ ಸಮತೋಲಿತ ಮತ್ತು ಸಮಗ್ರ ರೀತಿಯಲ್ಲಿ ಸಾಧಿಸಲು ಪ್ರಯತ್ನಿಸುವುದಕ್ಕೆ ಉಭಯ ಕಡೆಗಳವರೂ ಒಪ್ಪಿಕೊಂಡರು. ಸಹ್ಯ ಅಭಿವೃದ್ದಿಗೆ ಸಂಬಂಧಿಸಿ ಅತ್ಯುನ್ನತ ಮಟ್ಟದ ರಾಜಕೀಯ ವೇದಿಕೆಯೂ ಸಹಿತವಾಗಿ 2030 ರ ಕಾರ್ಯಪಟ್ಟಿಯನ್ನು ಜಾಗತಿಕವಾಗಿ ಅನುಷ್ಟಾನಿಸುವುದರ ಬಗ್ಗೆ ಸಮನ್ವಯ ಮತ್ತು ಪರಾಮರ್ಶೆ ಮಾಡುವ ವಿಶ್ವ ಸಂಸ್ಥೆಯ ಪ್ರಮುಖ ಪಾತ್ರದ ಬಗ್ಗೆ ಅವರು ಪುನರುಚ್ಚರಿಸಿದರು. ವಿಶ್ವ ಸಂಸ್ಥೆಯ ಅಭಿವೃದ್ದಿ ವ್ಯವಸ್ಥೆಯನ್ನು 2030ರ ಕಾರ್ಯಪಟ್ಟಿಯನ್ನು ಅನುಷ್ಟಾನಿಸುವಲ್ಲಿ ಅದರ ಸದಸ್ಯ ರಾಷ್ಟ್ರಗಳಿಗೆ ಬೆಂಬಲ ನೀಡುವ ರೀತಿಯಲ್ಲಿ ಸುಧಾರಿಸಬೇಕಾದ ಅಗತ್ಯ ಇರುವುದಕ್ಕೆ ಇಬ್ಬರೂ ಸಹಮತ ವ್ಯಕ್ತಪಡಿಸಿದರು. ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಅವರ ಅಧಿಕೃತ ಅಭಿವೃದ್ದಿ ನೆರವನ್ನು ಪೂರ್ಣವಾಗಿ ಸಕಾಲದಲ್ಲಿ ನೀಡುವ ಮೂಲಕ ಬದ್ದತೆಗೆ ಗೌರವ ಕೊಡಬೇಕು ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಹೆಚ್ಚು ಅಭಿವೃದ್ದಿ ಸಂಪನ್ಮೂಲಗಳನ್ನು ಒದಗಿಸಬೇಕು ಎಂದೂ ಎರಡೂ ಕಡೆಯವರು ಮನವಿ ಮಾಡಿದರು.
58. ಸಹ್ಯ ಅಭಿವೃದ್ದಿಯ ಹಿನ್ನೆಲೆಯಲ್ಲಿ ಮತ್ತು ಹಸಿರು ಅಭಿವೃದ್ದಿ ಮತ್ತು ಅಲ್ಪ ಕಾರ್ಬನ್ ಆರ್ಥಿಕತೆ ಹಾಗು ಬಡತನ ನಿರ್ಮೂಲನೆಯನ್ನು ಉತ್ತೇಜಿಸುವ ನಿಲುವಿಗೆ ಉಭಯ ದೇಶಗಳು ಬದ್ದತೆ ವ್ಯಕ್ತಪಡಿಸಿದವು. ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ವಿಶ್ವ ಸಂಸ್ಥೆಯ ಸಮಾವೇಶದ ತತ್ವಗಳ ಅಡಿಯಲ್ಲಿ ಅಂಗೀಕರಿಸಲಾದ ಪ್ಯಾರಿಸ್ ಒಪ್ಪಂದ ಪೂರ್ಣವಾಗಿ ಅನುಷ್ಟಾನಿಸಬೇಕು ಎಂದು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿದ್ದಲ್ಲದೆ ಜೊತೆಗೆ ಜವಾಬ್ದಾರಿಗಳನ್ನು ವಿಂಗಡಿಸಿದ ಮತ್ತು ಅದಕ್ಕನುಗುಣವಾಗಿ ಸಾಮರ್ಥ್ಯ ಸೂಚಿಸಿದ ಸಾಮಾನ್ಯ ತತ್ವಗಳ ಸಹಿತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹಣಕಾಸು, ತಾಂತ್ರಿಕ ಮತ್ತು ಸಾಮರ್ಥ್ಯ ವರ್ಧನೆ ಬೆಂಬಲವನ್ನು, ಅವರ ನಿಭಾವಣಾ ಸಾಮರ್ಥ್ಯ ವರ್ಧನೆಗಾಗಿ ಮತ್ತು ಅದರ ಅಳವಡಿಕೆಗಾಗಿ ಒದಗಿಸಬೇಕು ಎಂದೂ ಆಗ್ರಹಪಡಿಸಿವೆ.
59. ಜಾಗತಿಕ ನಿಶಃಸ್ತ್ರೀಕರಣವನ್ನು ಇನ್ನಷ್ಟು ಬಲಪಡಿಸಲು ಎರಡೂ ಕಡೆಗಳವರು ತಮ್ಮ ಬದ್ದತೆಯನ್ನು ಪುನರುಚ್ಚರಿಸಿದರು. ಅಣು ತಂತ್ರಜ್ಞಾನ ಪೂರೈಕೆ ಗುಂಪಿನಲ್ಲಿ ಭಾರತದ ಸದಸ್ಯತ್ವಕ್ಕೆ ರಶ್ಯಾ ತನ್ನ ಬೆಂಬಲ ವ್ಯಕ್ತಪಡಿಸಿತು
60. ಐ.ಸಿ.ಟಿ.ಗಳ ಬಳಕೆಗೆ ಸಂಬಂಧಿಸಿ ಮುಂಚಿತವಾಗಿ ನಿಯಮಗಳ ಅಂಗೀಕಾರ , ಮಾನದಂಡಗಳು ಮತ್ತು ಆಡಳಿತಗಳ ಜವಾಬ್ದಾರಿಯುತ ವರ್ತನೆಯ ತತ್ವಗಳ ಆವಶ್ಯಕತೆಯನ್ನು ಮತ್ತು ಅದರ ಜೊತೆಗೆ ಐ.ಸಿ.ಟಿ.ಗಳನ್ನು ಕ್ರಿಮಿನಲ್ ಉದ್ದೇಶಕ್ಕಾಗಿ ಬಳಸುವುದನ್ನು ತಡೆಯಲು ಅಂತಾರಾಷ್ಟ್ರೀಯ ಕಾನೂನು ಸಲಕರರಣೆಯನ್ನು ಈ ಗೋಳದಲ್ಲಿ ಅಭಿವೃದ್ದಿಪಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಬೇಕಾದ ಸಹಕಾರದ ಆವಶ್ಯಕತೆಯ ಬಗ್ಗೆಯೂ ಎರಡು ಕಡೆಯವರು ಸಹಮತ ವ್ಯಕ್ತಪಡಿಸಿದರು. ವಿಶ್ವ ಸಂಸ್ಥೆಯು ತನ್ನ 73 ನೇ ಅಧಿವೇಶನದಲ್ಲಿ ಸೂಕ್ತ ನಿರ್ಣಯಗಳನ್ನು ಅಂಗೀಕರಿಸಬೇಕಾದ ಪ್ರಾಮುಖ್ಯತೆಯನ್ನು ಉಭಯ ಕಡೆಯವರು ಒತ್ತಿ ಹೇಳಿದರು. ಬ್ರಿಕ್ಸ್ ರಾಷ್ಟ್ರಗಳ ನಡುವೆ ಐ.ಸಿ.ಟಿ.ಗಳ ಬಳಕೆಯಲ್ಲಿ ಭದ್ರತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಕಾರ್ಯ ಚೌಕಟ್ಟೊಂದನ್ನು ರೂಪಿಸಬೇಕಾದ ಆವಶ್ಯಕತೆಯನ್ನು ಮತ್ತು ಈ ನಿಟ್ಟಿನಲ್ಲಿ ಸಹಕಾರ ಕುರಿತ ಬ್ರಿಕ್ಸ್ ಅಂತರ ಸರಕಾರಿ ಒಪ್ಪಂದ ವ್ಯಾಪಕಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವ ಇಂಗಿತವನ್ನೂ ದೃಢಪಡಿಸಿದವು.
61. ಐ.ಸಿ.ಟಿಗಳ ಬಳಕೆಯಲ್ಲಿ ಭದ್ರತೆ ಖಾತ್ರಿಪಡಿಸುವಿಕೆ ಮತ್ತು ದ್ವಿಪಕ್ಷೀಯ ಅಂತರ ಏಜೆನ್ಸಿ ಪ್ರಾಯೋಗಿಕ ಮಾತುಕತೆ ಬಲಪಡಿಸುವ ಮೂಲಕ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಬಳಕೆಯಲ್ಲಿ ಭದ್ರತಾ ಕ್ಷೇತ್ರದಲ್ಲಿ ಸಹಕಾರ ಕುರಿತ ಅಂತರ ಸರಕಾರ ಒಪ್ಪಂದವನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಸಮಾನ ದೋರಣೆಗಳನ್ನು ಉಭಯ ಕಡೆಯವರೂ ವ್ಯಕ್ತಪಡಿಸಿದರು
62. ಏಶ್ಯಾದ ಎಲ್ಲಾ ದೇಶಗಳಿಗೂ ಮತ್ತು ಫೆಸಿಫಿಕ್ ಹಾಗು ಭಾರತೀಯ ಸಾಗರ ವಲಯಗಳಲ್ಲಿ ಸಮಾನ ಮತ್ತು ಅವಿಭಾಜ್ಯ ಭದ್ರತೆಯನ್ನು ಒದಗಿಸುವ ಪ್ರಾದೇಶಿಕ ಭದ್ರತಾ ರಚನೆಯನ್ನು ಸ್ಥಾಪನೆ ಮಾಡುವ ಚಿಂತನೆಗೆ ಭಾರತವು ಬೆಂಬಲ ವ್ಯಕ್ತಪಡಿಸಿತು. ಈ ವಿಷಯದ ಬಗ್ಗೆ ಬಹುಪಕ್ಷೀಯ ಮತ್ತು ಬಹುಸ್ತರದ ಮಾತುಕತೆಯನ್ನು ಪೂರ್ವ ಏಶಿಯಾ ಶೃಂಗ ಮತ್ತು ಇತರ ಪ್ರಾದೇಶಿಕ ಒಕ್ಕೂಟಗಳ ಚೌಕಟ್ಟಿನಲ್ಲಿ ಮುಂದುವರೆಸಬೇಕಾದ ಪ್ರಾಮುಖ್ಯತೆಯನ್ನು ಉಭಯ ಕಡೆಗಳವರೂ ಒತ್ತಿ ಹೇಳಿದರು. ಪ್ರಾದೇಶಿಕ ವ್ಯವಸ್ಥೆಯನ್ನು ಬಹುಕೋನೀಯವಾದ ,ಪಾರದರ್ಶಕ ತತ್ವಾಧಾರಿತ , ಎಲ್ಲರನ್ನೂ ಒಳಗೊಳ್ಳುವ , ಪರಸ್ಪರ ಗೌರವಿಸುವ , ಮತ್ತು ಸಮಾನ ಉದ್ದೇಶ ಸಾಧನೆಯ ಪ್ರಗತಿಯಲ್ಲಿ ಏಕತೆ ಮತ್ತು ಸಮೃದ್ದತೆಯನ್ನು ಸಾಧಿಸುವ ಉದ್ದೇಶದ ಮತ್ತು ಯಾವುದೇ ಕಾರಣಕ್ಕೂ ಯಾವುದೇ ರಾಷ್ಟ್ರದ ವಿರುದ್ದ ಗುರಿ ಇಡದಂತಹ ಉಪಕ್ರಮಗಳನ್ನು ಕೈಗೊಳ್ಳುವುದಕ್ಕೆ ಎರಡು ಕಡೆಯವರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ 2018 ರ ಆಗಸ್ಟ್ 24 ರಂದು ಮಾಸ್ಕೋದಲ್ಲಿ ರಶ್ಯನ್ ಒಕ್ಕೂಟದ ಉಪ ವಿದೇಶೀ ಸಚಿವರಾದ ಇಗೋರ್ ಮೊರ್ಗುಲೋಯ್ ಮತ್ತು ಪ್ರಜಾಪ್ರಭುತ್ವವಾದೀ ರಾಷ್ಟ್ರ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರ ನಡುವೆ ನಡೆದ ರಚನಾತ್ಮಕ ಸಮಾಲೋಚನೆಯನ್ನು ಉಭಯ ದೇಶಗಳೂ ಸ್ವಾಗತಿಸಿದವು.
63. ಬ್ರಿಕ್ಸ್, ಜಿ-20,ಎಸ್.ಸಿ.ಒ, ಆರ್. ಐ.ಸಿ. ಮತ್ತು ಪೂರ್ವ ಏಶ್ಯಾ ಶೃಂಗಗಳಂತಹ ಬಹುಪಕ್ಷೀಯ ಪ್ರಾದೇಶಿಕ ಸಂಘಟನೆಗಳ ಜೊತೆಗೂ ಸಂವಾದ ಮತ್ತು ಸಮನ್ವಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುವುದಕ್ಕೆ ಉಭಯ ಕಡೆಗಳವರೂ ಬದ್ದತೆಯನ್ನು ವ್ಯಕ್ತಪಡಿದರು. ಯುರೇಶಿಯನ್ ಆರ್ಥಿಕ ವೇದಿಕೆಯ ಜೊತೆ ಸಹಕಾರವನ್ನು ವಿಸ್ತರಿಸುವ ಆಶಯವನ್ನು ಭಾರತವು ವ್ಯಕ್ತಪಡಿಸಿತು.
64.ಪ್ರಜಾಪ್ರಭುತ್ವವಾದೀ ರಾಷ್ಟ್ರ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018 ರ ಜೂನ್ ತಿಂಗಳಲ್ಲಿ ಕ್ವಿಂಗ್ದಾವೋನಲ್ಲಿ ನಡೆದ ಎಸ್.ಸಿ.ಓ .ಮುಖ್ಯಸ್ಥರ ಮಂಡಳಿ ಸಭೆಯಲ್ಲಿ ಭಾಗವಹಿಸಿರುವುದನ್ನು ಪರಿಗಣನೆಗೆ ತೆಗೆದುಕೊಂಡ ಉಭಯ ದೇಶಗಳು, ಈ ಸಂಘಟನೆಯಲ್ಲಿ ಪೂರ್ಣಾಧಿಕಾರದ ಸದಸ್ಯನಾಗಿ ಭಾರತ ಯಶಸ್ವೀ ಕಾರ್ಯಭಾರ ನಡೆಸಿದ್ದನ್ನು ಉಲ್ಲೇಖಿಸಿದವು . ಎಸ್.ಸಿ.ಓ. ಸನ್ನದಿಗೆ ತಮ್ಮ ಬದ್ದತೆಯನ್ನು ವ್ಯಕ್ತಪಡಿಸಿದ ಉಭಯ ದೇಶಗಳು ಅದರ ಮಾನದಂಡಗಳು, ಅಂತಾರಾಷ್ಟ್ರೀಯ ಕಾನೂನಿನ ತತ್ವಗಳು ಸಂಘಟನೆಯ ಸಾಮರ್ಥ್ಯವನ್ನು ಎಲ್ಲಾ ಕೋನಗಳಲ್ಲಿ ಒರೆಗೆ ಹಚ್ಚಿ ಅನಾವರಣಗೊಳಿಸಲಿವೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದವು. ಭದ್ರತೆ ಮತ್ತು ಸ್ಥಿರತೆ ವಿಷಯಗಳಿಗೆ, ಭಯೋತ್ಪಾದನೆ ವಿರುದ್ದ ಸಮರ, ಅಕ್ರಮ ಮಾದಕ ದ್ರವ್ಯ ಕಳ್ಳಸಾಗಾಣಿಕೆ ಮತ್ತು ಸಂಘಟಿತ ಅಪರಾಧ ತಡೆ ಸಹಿತ ಎಲ್ಲ ವಿಷಯಗಳಲ್ಲೂ ಸಂಘಟನೆ ವಿಶೇಷ ಗಮನ ಕೊಡುತ್ತದೆ , ಆ ಮೂಲಕ ಅದು ಎಸ್.ಸಿ.ಒ. ಭಯೋತ್ಪಾದಕ ನಿರೋಧಿ ರಚನೆಯಲ್ಲಿ ಸಹಕಾರದ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಭಯೋತ್ಪಾದನಾ ಪ್ರತಿಬಂಧಕ ಮಿಲಿಟರಿ ಕಾರ್ಯಾಚರಣೆ “ ಪೀಸ್ ಮಿಷನ್ -2018 ” ರಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ರಶ್ಯಾ ಸ್ವಾಗತಿಸಿತು. ಎಸ್.ಸಿ.ಓ. ದ ಆರ್ಥಿಕ ಘಟಕವನ್ನು ಅಭಿವೃದ್ದಿಪಡಿಸುವ ಪ್ರಧಾನ ಗುರಿಯನ್ನು ಉಭಯ ದೇಶಗಳು ಪರಾಮರ್ಶಿಸಿದವಲ್ಲದೆ ಎಸ್.ಸಿ.ಓ. ಸಂಘಟನೆಯೊಳಗೆ ಅಂತರ್ ಸಂಪರ್ಕ ಒದಗಿಸುವ ಉದ್ದೇಶದ ಸಾರಿಗೆ ಮತ್ತು ಮೂಲಸೌಕರ್ಯ ಯೋಜನೆಗಳ ಅನುಷ್ಟಾನವನ್ನು ವೀಕ್ಷಕರು, ಸಹಭಾಗಿ ದೇಶಗಳು ಮತ್ತು ಇತರ ಆಸಕ್ತ ದೇಶಗಳೊಂದಿಗೆ ಜಾರಿಗೆ ತರಲು ಆದ್ಯತೆ ನೀಡುವುದಕ್ಕೆ ಸಂಬಂಧಿಸಿ ಉಭಯ ದೇಶಗಳು ಪರಿಶೀಲನೆ ನಡೆಸಿದವು. ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರಗಳಲ್ಲಿ ಎಸ್.ಸಿ.ಓ.ದ ಪಾತ್ರ ಹೆಚ್ಚಳಗೊಳ್ಳುವುದಕ್ಕೆ ಒಲವು ವ್ಯಕ್ತಪಡಿಸಿದ ಉಭಯ ದೇಶಗಳು ಎಸ್.ಸಿ.ಓ. ದ ಸಂಪರ್ಕ ಮತ್ತು ಸಹಕಾರ ವ್ಯಾಪ್ತಿಯನ್ನು ವಿಶ್ವ ಸಂಸ್ಥೆ ಮತ್ತು ಅದರ ರಚನೆಗಳ ಜೊತೆ , ಇತರ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಘಟನೆಗಳ ಜೊತೆ ವಿಸ್ತರಿಸಿಕೊಳ್ಳುವ ಅಗತ್ಯವನ್ನೂ ಪ್ರತಿಪಾದಿಸಿದವು. ಎಸ್.ಸಿ.ಒ. ದೊಳಗೆ ಸಾಂಸ್ಕೃತಿಕ ಮತ್ತು ಮಾನವೀಯ ಬಾಂಧವ್ಯವನ್ನು ಇನ್ನಷ್ಟು ಆಳಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.
65. ಮುಕ್ತ, ಒಳಗೊಳ್ಳುವ , ಪಾರದರ್ಶಕ, ಅಸಮಾನತೆ ರಹಿತ ಮತ್ತು ನಿಯಮಾಧಾರಿತ ಬಹು ಆಯಾಮದ ವ್ಯಾಪಾರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧಗಳು ವಿಭಜನೆಗೊಳ್ಳುವುದನ್ನು ಹಾಗು ಎಲ್ಲಾ ಮಾದರಿಯ ವ್ಯಾಪಾರ ಸಂರಕ್ಷಣೆಯನ್ನು ತಡೆಯಲು ಎರಡೂ ಕಡೆಯವರು ನಿರ್ಧರಿಸಿದರು.
66.ರಾಷ್ಟ್ರೀಯ ಅಭಿವೃದ್ದಿಯ ತಂತ್ರಗಳನ್ನು ಒಳಗೊಂಡ ಬಹುರೂಪೀ ಸಮಗ್ರತಾ ಯೋಜನೆಗಳನ್ನು ಅಂತಾರಾಷ್ಟ್ರೀಯ ಕಾನೂನುಗಳ ಕಣ್ಗಾವಲಿನಲ್ಲಿ, ಸಮಾನತೆಯ ತತ್ವದಲ್ಲಿ, ಪರಸ್ಪರ ಗೌರವ ಭಾವನೆಯಲ್ಲಿ ಮತ್ತು ಪರಸ್ಪರ ರಾಷ್ಟ್ರಿಯ ಧೋರಣೆಗಳನ್ನು ಗಣನೆಗೆ ತೆಗೆದುಕೊಂಡು ಅವುಗಳ ಆಧಾರದಲ್ಲಿ ರಚನಾತ್ಮಕ ಸಹಕಾರದ ಕ್ರಿಯಾಶೀಲ ವೇದಿಕೆಯನ್ನು ನಿರ್ಮಾಣ ಮಾಡಲು ರಶ್ಯಾ ಕೈಗೆತ್ತಿಕೊಂಡ ಬೃಹತ್ ಯುರೇಶಿಯನ್ ಸಹಭಾಗಿತ್ವ ರಚನೆಯ ಉಪಕ್ರಮವನ್ನು ಭಾರತ ಸ್ವಾಗತಿಸಿದೆ.
67. ಭಾರತ-ರಶ್ಯಾ ಸಂಬಂಧಗಳ ಸುಧಾರಣೆ ನಿಟ್ಟಿನಲ್ಲಾದ ಪ್ರಗತಿ , ಹಿತಾಸಕ್ತಿಗಳ ಸಮಭಾಗಿತ್ವ ಮತ್ತು ದ್ವಿಪಕ್ಷೀಯ ವಿಷಯಗಳು ಹಾಗು ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ಒಂದೇ ರೀತಿಯ ಧೋರಣೆ ಕುರಿತಂತೆ ಉಭಯ ಕಡೆಯವರೂ ತೃಪ್ತಿ ವ್ಯಕ್ತಪಡಿಸಿದ್ದಲ್ಲದೆ, ಈ ನಿಲುವನ್ನು ನಿಕಟ ಸಹಕಾರ, ಸಮನ್ವಯ, ಮತ್ತು ಪ್ರಯೋಜನಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ದಿಶೆಯಲ್ಲಿ ಭಾರತ ಮತ್ತು ರಶ್ಯಾ ನಡುವಿನ ವಿಶೇಷ ಹಾಗು ಹಕ್ಕು ಬಾದ್ಯತೆಯ ವ್ಯೂಹಾತ್ಮಕ ಸಹಭಾಗಿತ್ವವನ್ನು ಉಭಯ ದೇಶಗಳ ಜನರ ಸಮೃದ್ದಿಗಾಗಿ ಮುಂದುವರೆಸಿಕೊಂಡು ಹೋಗುವ ಆಶಯವನ್ನು ವ್ಯಕ್ತಪಡಿಸಿದವು.
68. ರಶ್ಯನ್ ಒಕ್ಕೂಟದ ಅಧ್ಯಕ್ಷರಾದ ವ್ಲಾದಮೀರ್ ಪುಟಿನ್ ಅವರು ತಮಗೆ ನೀಡಲಾದ ಆತಿಥ್ಯಕ್ಕಾಗಿ ಭಾರತದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋ ದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಲ್ಲದೆ 2019 ರಲ್ಲಿ ನಡೆಯಲಿರುವ 20 ನೇ ವಾರ್ಷಿಕ ಶೃಂಗಕ್ಕೆ ರಶ್ಯಾಕ್ಕೆ ಬರುವಂತೆ ಆಹ್ವಾನವಿತ್ತರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅತ್ಯಂತ ಸಂತೋಷದಿಂದ ಈ ಆಹ್ವಾನವನ್ನು ಅಂಗೀಕರಿಸಿದರು.
Human resource development से लेकर natural resources तक,
— PMO India (@PMOIndia) October 5, 2018
trade से लेकर investment तक,
नाभिकीय ऊर्जा के शान्तिपूर्ण सहयोग से लेकर सौर ऊर्जा तक,
technology से लेकर tiger कन्ज़र्वेशन तक,
सागर से लेकर अंन्तरिक्ष तक,
भारत और रूस के सम्बन्धों का और भी विशाल विस्तार होगा: PM
आतंकवाद के विरूद्ध संघर्ष, अफगानिस्तान तथा Indo Pacific के घटनाक्रम, जलवायु परिवर्तन, SCO, BRICS जैसे संगठनों एवं G20 तथा ASEAN जैसे संगठनों में सहयोग करने में हमारे दोनों देशों के साझा हित हैं।
— PMO India (@PMOIndia) October 5, 2018
हम अंतरराष्ट्रीय संस्थानों में अपने लाभप्रद सहयोग को जारी रखने पर सहमत हुए हैं: PM
भारत- रूस मैत्री अपने आप में अनूठी है।
— PMO India (@PMOIndia) October 5, 2018
इस विशिष्ट रिश्ते के लिए President Putin की प्रतिबद्धता से इन संबंधों को और भी ऊर्जा मिलेगी।
और हमारे बीच प्रगाढ़ मैत्री और सुदृढ़ होगी और हमारी Special and Privileged Strategic Partnership को नई बुलंदियां प्राप्त होंगी: PM
Addressing a joint press meet with President Putin. Watch. @KremlinRussia_E https://t.co/Ybc7EU67AF
— Narendra Modi (@narendramodi) October 5, 2018
Here is my speech at the business summit with President Putin. https://t.co/VCS5uDyUF3
— Narendra Modi (@narendramodi) October 5, 2018
President Putin has played a vital role in further enhancing the friendship between India and Russia.
— Narendra Modi (@narendramodi) October 5, 2018
We had fruitful talks today, covering various aspects of the Special and Privileged Strategic Partnership between our nations. @KremlinRussia_E pic.twitter.com/395yFKeGzt