ನನ್ನ ಸಂಪುಟ ಸಹೋದ್ಯೋಗಿಗಳಾದ, ಶ್ರೀ ರಾಜನಾಥ್ ಸಿಂಗ್ ಅವರೇ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರೇ, ಸೇನಾಪಡೆಗಳ ಮೂರು ವಿಭಾಗಗಳ ಮುಖ್ಯಸ್ಥರೇ, ಭಾರತ ಸರ್ಕಾರದ ಎಲ್ಲಾ ಹಿರಿಯ ಅಧಿಕಾರಿಗಳೇ ಮತ್ತು ಉದ್ಯಮದ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ.
ಭಾರತದ ರಕ್ಷಣಾ ಉತ್ಪಾದನೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಪಾಲುದಾರರು ಇಲ್ಲಿ ಸೇರಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಈ ವಿಚಾರ ಸಂಕಿರಣವನ್ನು ಆಯೋಜಿಸಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅವರ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ. ಈ ಅಧಿವೇಶನದ ಫಲಿತಾಂಶವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ನಮ್ಮ ಪ್ರಯತ್ನಗಳಿಗೆ ಉತ್ತೇಜನವನ್ನು ನೀಡುತ್ತದೆ. ಈ ಸಾಮೂಹಿಕ ಮಂಥನದ ಅಧಿವೇಶನದಲ್ಲಿ ನೀವು ನೀಡಿದ ಸಲಹೆಗಳು ಮುಂಬರುವ ದಿನಗಳಲ್ಲಿ ಬಹಳ ಉಪಯುಕ್ತವಾಗುತ್ತವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಿಷನ್ ಮೋಡ್ನಲ್ಲಿ ಕಾರ್ಯನಿರ್ವಹಿಸುವವರು ಎಂಬುದು ನನಗೆ ಸಂತೋಷದ ವಿಚಾರ. ಅವರು ಪಟ್ಟುಬಿಡದೇ ಮಾಡುವ ಪ್ರಯತ್ನಗಳು ಉತ್ತಮ ಫಲಿತಾಂಶಗಳಿಗೆ ಕಾರಣವಾಗುತ್ತವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.
ಸ್ನೇಹಿತರೇ, ಕಳೆದ ಹಲವಾರು ವರ್ಷಗಳಿಂದ ಭಾರತವು ವಿಶ್ವದ ಪ್ರಮುಖ ರಕ್ಷಣಾ ಆಮದುದಾರರಲ್ಲಿ ಒಂದಾಗಿದೆ ಎಂಬುದು ಗುಟ್ಟಾಗಗೇನೂ ಉಳಿದಿಲ್ಲ. ಭಾರತವು ಸ್ವತಂತ್ರ ಗಳಿಸಿದಾಗಿನಿಂದಲೂ ರಕ್ಷಣಾ ಉತ್ಪಾದನೆಯಲ್ಲಿ ಅದು ದೊಡ್ಡ ಸಾಮರ್ಥ್ಯಗಳನ್ನು ಹೊಂದಿತ್ತು. ಭಾರತದಲ್ಲಿ ರಕ್ಷಣಾ ಉತ್ಪಾದನೆಯಲ್ಲಿ 100 ವರ್ಷಗಳಷ್ಟು ಹಳೆಯದಾದ ವ್ಯವಸ್ಥೆ ಇತ್ತು. ಅನೇಕ ದೇಶಗಳು ಭಾರತದಷ್ಟು ಸಂಪನ್ಮೂಲಗಳು ಮತ್ತು ಸಾಮರ್ಥ್ಯವನ್ನು ಹೊಂದಿರಲಿಲ್ಲ. ಆದರೆ ಹಲವಾರು ದಶಕಗಳಿಂದ ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸದಿರುವುದು ದುರದೃಷ್ಟಕರ. ಯಾವುದೇ ಗಂಭೀರ ಪ್ರಯತ್ನಗಳು ನಡೆಯಲಿಲ್ಲ. ನಮ್ಮ ನಂತರ ಪ್ರಾರಂಭಿಸಿದ ಹಲವಾರು ದೇಶಗಳು ಕಳೆದ 50 ವರ್ಷಗಳಲ್ಲಿ ನಮಗಿಂತ ಮುಂದೆ ಹೋಗಿವೆ. ಆದರೆ, ಈಗ ಪರಿಸ್ಥಿತಿ ಬದಲಾಗುತ್ತಿದೆ.
ಕಳೆದ ಕೆಲವು ವರ್ಷಗಳಲ್ಲಿ, ಈ ವಲಯದ ಎಲ್ಲಾ ಸಂಕೋಲೆಗಳನ್ನು ಕಳಚಲು ನಾವು ಮಾಡುತ್ತಿರುವ ಪ್ರಯತ್ನಗಳನ್ನು ನೀವು ಗಮನಿಸಿರಬೇಕು. ಉತ್ಪಾದನೆ, ಭಾರತದಲ್ಲಿ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಈ ನಿರ್ದಿಷ್ಟ ಕ್ಷೇತ್ರದಲ್ಲಿ ಖಾಸಗಿ ವಲಯದ ಗರಿಷ್ಠ ಬೆಳವಣಿಗೆಯನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ. ಆದ್ದರಿಂದ, ಪರವಾನಗಿ ಪ್ರಕ್ರಿಯೆಯಲ್ಲಿ ಸುಧಾರಣೆಗಳು, ಸೂಕ್ತ ವಾತಾವರಣ ನಿರ್ಮಾಣ, ರಫ್ತು ಪ್ರಕ್ರಿಯೆಯ ಸರಳೀಕರಣ ಇತ್ಯಾದಿ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಸ್ನೇಹಿತರೇ, ಈ ಎಲ್ಲ ಹಂತಗಳಲ್ಲಿ, ಹೆಚ್ಚು ಮುಖ್ಯವಾದುದು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದ ಹೊಸ ಮನಸ್ಥಿತಿ. ಹೊಸ ಮನಸ್ಥಿತಿಯು ನಮ್ಮ ಅನಭವಕ್ಕೆ ಬರುತ್ತಿದೆ. ಆಧುನಿಕ ಮತ್ತು ಸ್ವಾವಲಂಬಿ ಭಾರತವನ್ನು ಮಾಡಲು ರಕ್ಷಣಾ ಕ್ಷೇತ್ರದಲ್ಲಿ ಆತ್ಮವಿಶ್ವಾಸದ ಮನೋಭಾವ ಅಗತ್ಯವಾಗಿದೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ನೇಮಕ ಕುರಿತು ದೇಶವು ಬಹಳ ದಿನಗಳಿಂದ ಚರ್ಚಿಸುತ್ತಿತ್ತು, ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ. ಈ ನಿರ್ಧಾರವು ನವ ಭಾರತದ ಆತ್ಮ ವಿಶ್ವಾಸದ ಸಂಕೇತವಾಗಿದೆ.
ರಕ್ಷಣಾ ಉತ್ಪಾದನೆಯಲ್ಲಿ ದೀರ್ಘಕಾಲದವರೆಗೆ ವಿದೇಶಿ ನೇರ ಹೂಡಿಕೆಗೆ ಯಾವುದೇ ಅನುಮತಿ ಇರಲಿಲ್ಲ. ಈ ನಿಟ್ಟಿನಲ್ಲಿ ಪೂಜ್ಯ ಅಟಲ್ ಜಿಯವರ ಸರ್ಕಾರವು ಮೊದಲ ಪ್ರಯತ್ನವನ್ನು ಕೈಗೊಂಡಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ಸುಧಾರಣೆಗಳನ್ನು ಕೈಗೊಳ್ಳಲಾಯಿತು. ಈ ವಲಯದಲ್ಲಿ ಮೊದಲ ಬಾರಿಗೆ ಶೇ.74 ರಷ್ಟು ಸ್ವಯಂಚಾಲಿತ ವಿದೇಶಿ ನೇರ ಹೂಡಿಕೆಗೆ ಮುಕ್ತಗೊಳಿಸಲಾಗುತ್ತಿದೆ. ಇದು ನವ ಭಾರತದ ಆತ್ಮ ವಿಶ್ವಾಸದ ಫಲಿತಾಂಶವಾಗಿದೆ.
ದಶಕಗಳಿಂದ, ಯುದ್ಧೋಪಕರಣ ಕಾರ್ಖಾನೆಗಳು ಸರ್ಕಾರಿ ಇಲಾಖೆಗಳಂತೆ ನಡೆಯುತ್ತಿದ್ದವು. ಸೀಮಿತ ದೃಷ್ಟಿಯಿಂದಾಗಿ ದೇಶವು ತೊಂದರೆ ಅನುಭವಿಸಿದ್ದಷ್ಟೇ ಅಲ್ಲ, ಅಲ್ಲಿ ಕೆಲಸ ಮಾಡುತ್ತಿದ್ದವರು, ಪ್ರತಿಭೆ ಮತ್ತು ಬದ್ಧತೆಯನ್ನು ಹೊಂದಿದ್ದವರು, ಕಷ್ಟಪಟ್ಟು ದುಡಿಯುವವರು, ನಮ್ಮ ಕಠಿಣ ಮತ್ತು ಅನುಭವಿ ಕಾರ್ಮಿಕ ವರ್ಗದವರೂ ಸಹ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದರು.
ಕೋಟ್ಯಂತರ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದಾದ ಕ್ಷೇತ್ರದ ವ್ಯವಸ್ಥೆಯು ಬಹಳ ಸೀಮಿತವಾಗಿಯೇ ಉಳಿದಿತ್ತು. ಈಗ, ನಾವು ಯುದ್ಧೋಪಕರಣ ಕಾರ್ಖಾನೆಗಳ ಸಾಂಸ್ಥೀಕರಣದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಕಾರ್ಮಿಕರು ಮತ್ತು ಸೇನಾಪಡೆ ಇಬ್ಬರಿಗೂ ಇದು ಮಹತ್ವದ್ದಾಗಿದೆ. ಇದು ನವ ಭಾರತದ ಆತ್ಮ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ಸ್ನೇಹಿತರೇ, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಬಗೆಗಿನ ನಮ್ಮ ಬದ್ಧತೆ ಚರ್ಚೆ ಅಥವಾ ಕಾಗದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರ ಅನುಷ್ಠಾನಕ್ಕೆ ಹಲವಾರು ದೃಢವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೇನಾ ಸಿಬ್ಬಂದಿ ಮುಖ್ಯಸ್ಥರ ರಚನೆಯು ಮಿಲಿಟರಿಯ ಎಲ್ಲಾ ಮೂರು ವಿಭಾಗಗಳ ನಡುವೆ ಖರೀದಿ ಸಮನ್ವಯವನ್ನು ಸುಧಾರಿಸಿದೆ ಮತ್ತು ಇದು ರಕ್ಷಣಾ ಸಾಧನಗಳ ಖರೀದಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮುಂದಿನ ದಿನಗಳಲ್ಲಿ, ದೇಶೀಯ ಉದ್ಯಮಕ್ಕೆ ಖರೀದಿ ಆದೇಶಗಳು ಹೆಚ್ಚಾಗಲಿವೆ. ಇದನ್ನು ಖಚಿತಪಡಿಸಿಕೊಳ್ಳಲು, ರಕ್ಷಣಾ ಸಚಿವಾಲಯದ ಬಂಡವಾಳ ಬಜೆಟ್ನ ಒಂದು ಭಾಗವನ್ನು ಭಾರತದಲ್ಲಿ ತಯಾರಿಸಿದ ಸಾಧನಗಳಿಗಾಗಿ ಮೀಸಲಿಡಲಾಗಿದೆ.
ಇತ್ತೀಚೆಗೆ ದೇಶೀಯ ಖರೀದಿಯಲ್ಲಿ 101 ರಕ್ಷಣಾ ವಸ್ತುಗಳನ್ನು ಸೇರಿಸಿರುವುದನ್ನು ನೀವು ನೋಡಿರಬೇಕು. ಮುಂದಿನ ದಿನಗಳಲ್ಲಿ, ಈ ಪಟ್ಟಿಯನ್ನು ಇನ್ನೂ ಹೆಚ್ಚು ಸಮಗ್ರವಾಗಿ ಮಾಡಲಾಗುವುದು ಮತ್ತು ಅದಕ್ಕೆ ಅನೇಕ ವಸ್ತುಗಳನ್ನು ಸೇರಿಸಲಾಗುವುದು. ಈ ಪಟ್ಟಿಯ ಗುರಿ ಆಮದುಗಳನ್ನು ನಿರ್ಬಂಧಿಸುವುದು ಮಾತ್ರವಲ್ಲ, ಬದಲಿಗೆ ಭಾರತದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಖಾಸಗಿ ವಲಯ, ಸಾರ್ವಜನಿಕ ವಲಯ, ಎಂಎಸ್ಎಂಇ, ಅಥವಾ ಸ್ಟಾರ್ಟ್ಅಪ್ಯಾವುದೇ ಆಗಿರಲಿ, ಸರ್ಕಾರದ ಮನೋಭಾವ ಮತ್ತು ಭವಿಷ್ಯದ ಸಾಧ್ಯತೆಗಳನ್ನು ನಿಮ್ಮೆಲ್ಲರ ಪಾರದರ್ಶಕವಾಗಿ ಇಡಲಾಗಿದೆ.
ಇದರೊಂದಿಗೆ, ನಾವು ಖರೀದಿ ಪ್ರಕ್ರಿಯೆಯನ್ನು ವೇಗಗೊಳಿಸಲು, ಪರೀಕ್ಷಾ ಕಾರ್ಯವಿಧಾನವನ್ನು ಸುಗಮಗೊಳಿಸಲು ಮತ್ತು ಗುಣಮಟ್ಟದ ಅವಶ್ಯಕತೆಗಳನ್ನು ತರ್ಕಬದ್ಧಗೊಳಿಸಲು ಕೆಲಸ ಮಾಡುತ್ತಿದ್ದೇವೆ. ಈ ಪ್ರಯತ್ನಗಳು ಸೇನಾಪಡೆಗಳ ಎಲ್ಲಾ ಮೂರು ವಿಭಾಗಗಳ ಸಹಕಾರವನ್ನು ಬಹಳ ಸಂಘಟಿತ ರೀತಿಯಲ್ಲಿ ಹೊಂದಿವೆ ಎಂಬುದು ನನಗೆ ಸಂತೋಷ ತಂದಿದೆ.
ಸ್ನೇಹಿತರೇ, ಆಧುನಿಕ ಸಾಧನಗಳಲ್ಲಿ ಸ್ವಾವಲಂಬನೆಗಾಗಿ ತಂತ್ರಜ್ಞಾನ ಉನ್ನತೀಕರಣ ಅತ್ಯಗತ್ಯವಾಗಿದೆ. ಮುಂದಿನ ಪೀಳಿಗೆಯ ಉತ್ಪನ್ನಗಳನ್ನು ತಯಾರಿಸುವ ಅವಶ್ಯಕತೆಯಿದೆ. ಇದನ್ನು ಸಾಧಿಸುವ ಸಲುವಾಗಿ, ಡಿಆರ್ಡಿಒ ಜೊತೆಗೆ, ಖಾಸಗಿ ವಲಯ, ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಸಹ ಪ್ರೋತ್ಸಾಹಿಸಲಾಗುತ್ತಿದೆ. ತಂತ್ರಜ್ಞಾನ ವರ್ಗಾವಣೆ ಸೌಲಭ್ಯದ ಬದಲು ವಿದೇಶಿ ಪಾಲುದಾರರೊಂದಿಗೆ ಜಂಟಿ ಉದ್ಯಮಗಳ ಮೂಲಕ ಸಹ–ಉತ್ಪಾದನಾ ಮಾದರಿಗೆ ಒತ್ತು ನೀಡಲಾಗುತ್ತಿದೆ. ಈಗ, ನಮ್ಮ ವಿದೇಶಿ ಪಾಲುದಾರರು ನಮ್ಮ ಮಾರುಕಟ್ಟೆಯ ಗಾತ್ರಕ್ಕೆ ಅನುಗುಣವಾಗಿ ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಉತ್ತಮ ಆಯ್ಕೆಯನ್ನು ಹೊಂದಿದ್ದಾರೆ.
ಸ್ನೇಹಿತರೇ, ನಮ್ಮ ಸರ್ಕಾರ ಮೊದಲಿನಿಂದಲೂ ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರ ಮಂತ್ರದ ಮೇಲೆ ಕೆಲಸ ಮಾಡಿದೆ. ಅಧಿಕಾರಶಾಹಿ ವ್ಯವಸ್ಥೆಯನ್ನು ಕಡಿಮೆ ಮಾಡಿ, ರತ್ನಗಂಬಳಿ ಹಾಕುವುದು ನಮ್ಮ ಪ್ರಯತ್ನವಾಗಿದೆ. 2014 ರಿಂದ ಸುಗಮ ವ್ಯಾಪಾರದಲ್ಲಿ ನಡೆದ ಸುಧಾರಣೆಗಳನ್ನು ಇಡೀ ಜಗತ್ತು ಕಂಡಿದೆ. ಬಹಳ ಕಷ್ಟಕರ ಮತ್ತು ಸಂಕೀರ್ಣವೆಂದು ಪರಿಗಣಿಸಲಾಗಿರುವ ಬೌದ್ಧಿಕ ಆಸ್ತಿ, ತೆರಿಗೆ, ದಿವಾಳಿ ಮತ್ತು ದಿವಾಳಿತನ ಮತ್ತು ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿಯಲ್ಲೂ ನಾವು ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಕಾರ್ಮಿಕ ಕಾನೂನುಗಳಲ್ಲಿನ ಸುಧಾರಣೆಗಳ ಸರಣಿಯ ಬಗ್ಗೆ ಈಗ ನಿಮಗೆ ಸಂಪೂರ್ಣವಾಗಿ ಗೊತ್ತಿದೆ ಮತ್ತು ಇದು ಇನ್ನೂ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ.
ಹಿಂದಿನ ಕೆಲವು ವರ್ಷಗಳವರೆಗೂ, ಈ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಇಂದು, ಈ ಸುಧಾರಣೆಗಳು ಕಾರ್ಯಗತವಾಗಿವೆ. ಸುಧಾರಣೆಗಳ ಪ್ರಕ್ರಿಯೆಯು ಇಲ್ಲಿಗೇ ನಿಲ್ಲುವುದಿಲ್ಲ; ನಾವು ಮುಂದುವರಿಯಲಿದ್ದೇವೆ. ಆದ್ದರಿಂದ, ಯಾವುದೇ ನಿಲುಗಡೆಯೂ ಇಲ್ಲ, ಆಯಾಸವೂ ಇಲ್ಲ. ನಾನು ಅಥವಾ ನೀವು ಆಯಾಸಗೊಳ್ಳುವುಲ್ಲ. ನಾವು ಮುಂದೆ ಸಾಗುತ್ತಲೇ ಇರಬೇಕು. ನಮ್ಮ ಕಡೆಯಿಂದ ನಿಮಗೆ ಇದು ನಮ್ಮ ಬದ್ಧತೆ.
ಸ್ನೇಹಿತರೇ, ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ, ರಕ್ಷಣಾ ಕಾರಿಡಾರ್ಗಳ ಕೆಲಸವು ತ್ವರಿತಗತಿಯಲ್ಲಿ ನಡೆಯುತ್ತಿದೆ. ಉತ್ತರ ಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳ ಸಹಯೋಗದೊಂದಿಗೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ಐದು ವರ್ಷಗಳವರೆಗೆ 20,000 ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಗುರಿಯನ್ನು ನಾವು ನಿಗದಿಪಡಿಸಿದ್ದೇವೆ. ಎಂಎಸ್ಎಂಇ ಮತ್ತು ಸ್ಟಾರ್ಟ್ ಅಪ್ಗಳಿಗೆ ಸಂಬಂಧಿಸಿದ ಉದ್ಯಮಿಗಳನ್ನು ಉತ್ತೇಜಿಸಲು ಪ್ರಾರಂಭಿಸಲಾದ ಐಡಿಎಕ್ಸ್ನಿಂದ ನಾವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ. 50 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಈ ವೇದಿಕೆಯ ಮೂಲಕ ಸಶಸ್ತ್ರ ಪಡೆಗಳ ಬಳಕೆಗಾಗಿ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ.
ಸ್ನೇಹಿತರೇ, ನಿಮ್ಮ ಮುಂದೆ ನಾನು ಇನ್ನೊಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಸ್ವಾವಲಂಬಿ ಭಾರತಕ್ಕಾಗಿ ನಮ್ಮ ಸಂಕಲ್ಪವು ಸಂಕುಚಿತವಾದುದಲ್ಲ. ಜಾಗತಿಕ ಆರ್ಥಿಕತೆಯನ್ನು ಹೆಚ್ಚು ಸ್ಥಿತಿಸ್ಥಾಪಕಗೊಳಿಸಲು, ಹೆಚ್ಚು ಸ್ಥಿರವಾಗಿಸಲು ಮತ್ತು ಜಗತ್ತಿನಲ್ಲಿ ಶಾಂತಿ ನೆಲೆಸಲು ಸಮರ್ಥ ಭಾರತವನ್ನು ನಿರ್ಮಿಸುವುದು ಗುರಿಯಾಗಿದೆ. ರಕ್ಷಣಾ ಉತ್ಪಾದನೆಯ ಸ್ವಾವಲಂಬನೆಯ ಹಿಂದೆಯೂ ಅದೇ ಮನೋಭಾವವಿದೆ. ಹಲವಾರು ಮಿತ್ರ ರಾಷ್ಟ್ರಗಳಿಗೆ ರಕ್ಷಣಾ ಉತ್ಪನ್ನಗಳ ವಿಶ್ವಾಸಾರ್ಹ ಪೂರೈಕೆದಾರರಾಗುವ ಸಾಮರ್ಥ್ಯ ಭಾರತಕ್ಕೆ ಇದೆ. ಇದು ಭಾರತದ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಹೊಸ ಆವೇಗವನ್ನು ನೀಡುತ್ತದೆ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತಾ ಪೂರೈಕೆದಾರನಾಗಿ ಭಾರತದ ಪಾತ್ರವನ್ನು ಬಲಪಡಿಸಲಾಗುತ್ತದೆ.
ಸ್ನೇಹಿತರೇ, ಸರ್ಕಾರದ ಪ್ರಯತ್ನಗಳು ಮತ್ತು ಬದ್ಧತೆಗಳು ನಿಮ್ಮ ಮುಂದೆ ಇವೆ. ಒಟ್ಟಿನಲ್ಲಿ, ನಾವು ಸ್ವಾವಲಂಬಿ ಭಾರತಕ್ಕಾಗಿ ಸಂಕಲ್ಪ ತೊಡಬೇಕು. ಸ್ವಾವಲಂಬಿ ಭಾರತವು ಖಾಸಗಿ ವಲಯ ಅಥವಾ ಸಾರ್ವಜನಿಕ ವಲಯ ಅಥವಾ ನಮ್ಮ ವಿದೇಶಿ ಪಾಲುದಾರು ಯಾರೇ ಆಗಿರಲಿ ಪ್ರತಿಯೊಬ್ಬರಿಗೂ ಗೆಲುವಿನ ಸಂಕಲ್ಪವಾಗಿದೆ. ನಿಮಗೆ ಉತ್ತಮ ವ್ಯವಸ್ಥೆಯನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
ನೀವು ನೀಡಿರುವ ಸಲಹೆಗಳು ಬಹಳ ಉಪಯೋಗಕ್ಕೆ ಬರುತ್ತವೆ. ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿಯ ಕರಡನ್ನು ಎಲ್ಲಾ ಪಾಲುದಾರರೊಂದಿಗೆ ಹಂಚಿಕೊಳ್ಳಲಾಗಿದೆ. ಈ ನೀತಿಯ ಆರಂಭಿಕ ಅನುಷ್ಠಾನಕ್ಕೆ ನಿಮ್ಮ ಪ್ರತಿಕ್ರಿಯೆ ನೆರವಾಗುತ್ತದೆ. ಇಂದಿನ ವಿಚಾರ ಸಂಕಿರಣ ಒಂದು ಬಾರಿಯ ಕಾರ್ಯಕ್ರಮವಾಗಬಾರದು, ಭವಿಷ್ಯದಲ್ಲಿ ಇಂತಹ ಹೆಚ್ಚು ಸೆಮಿನಾರ್ಗಳು ನಡೆಯಬೇಕು. ಉದ್ಯಮ ಮತ್ತು ಸರ್ಕಾರದ ನಡುವೆ ನಿರಂತರ ಚರ್ಚೆ ಮತ್ತು ಫೀಡ್ ಬ್ಯಾಕ್ ನ ಸ್ವಾಭಾವಿಕ ಸಂಸ್ಕೃತಿ ಇರಬೇಕು.
ಈ ಸಾಮೂಹಿಕ ಪ್ರಯತ್ನಗಳೊಂದಿಗೆ ನಮ್ಮ ಸಂಕಲ್ಪಗಳು ಕಾರ್ಯರೂಪಕ್ಕೆ ಬರುತ್ತವೆ ಎಂದು ನಾನು ನಂಬಿದ್ದೇನೆ. ಸ್ವಾವಲಂಬಿ ಭಾರತ ನಿರ್ಮಿಸಲು ಆತ್ಮವಿಶ್ವಾಸದಿಂದ ಇಲ್ಲಿ ಸೇರಿರುವ ನಿಮಗೆ ನಾನು ಮತ್ತೊಮ್ಮೆ ಧನ್ಯವಾದಗಳು. ಈ ಸಂಕಲ್ಪವನ್ನು ಸಾಕಾರಗೊಳಿಸಲು ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತೇವೆ ಎಂದು ನಾನು ನಂಬುತ್ತೇನೆ.
ಮತ್ತೊಮ್ಮೆ, ನಿಮ್ಮೆಲ್ಲರಿಗೂ ಶುಭಾಶಯಗಳು.
ತುಂಬು ಧನ್ಯವಾದಗಳು.
***
Making India self-reliant in the defence sector. https://t.co/GDgfmgXzAV
— Narendra Modi (@narendramodi) August 27, 2020