ಯೂರೋಪಿಯನ್ ಹೂಡಿಕೆ ಬ್ಯಾಂಕ್ ಅಧ್ಯಕ್ಷ ಡಾ. ವಾರ್ನರ್ ಹೋಯೆರ್ ಅವರಿಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಅವರೊಂದಿಗೆ ಬ್ಯಾಂಕ್ ನ ಹಿರಿಯ ಅಧಿಕಾರಿಗಳೂ ಇದ್ದರು.
ಪ್ರಧಾನಮಂತ್ರಿಯವರು ಒಂದು ವರ್ಷದ ಹಿಂದೆ ಇ.ಯು. – ಭಾರತ ಶೃಂಗದಲ್ಲಿ ಯುರೋಪಿಯನ್ ಹೂಡಿಕೆ ಬ್ಯಾಂಕ್ ನ ಉನ್ನತ ಮಟ್ಟದ ನಿಯೋಗವನ್ನು ಭೇಟಿ ಮಾಡಿದ್ದರು ಮತ್ತು ದೆಹಲಿಯಲ್ಲಿ ಬ್ಯಾಂಕ್ ನ ಪ್ರಾದೇಶಿಕ ಕಚೇರಿ ಸ್ಥಾಪಿಸಲು ಬೆಂಬಲ ನೀಡುವ ಭರವಸೆ ನೀಡಿದ್ದರು. ಈ ಕಚೇರಿ ಇಂದು ಉದ್ಘಾಟನೆಗೊಂಡಿತು.
ಇಂದು ನಡೆದ ಮಾತುಕತೆಯ ವೇಳೆ, ಪ್ರಧಾನಮಂತ್ರಿಯವರು, ಹವಾಮಾನ ಬದಲಾವಣೆ ಮತ್ತು ಪರಿಸರದ ಸುಸ್ಥಿರತೆಯ ಕ್ಷೇತ್ರಗಳಲ್ಲಿ ಭಾರತದ ನೀತಿಗಳನ್ನು ವಿವರಿಸಿದರು. ಯುರೋಪಿಯನ್ ಹೂಡಿಕೆ ಬ್ಯಾಂಕ್ ಲಖನೌ ಮೆಟ್ರೋ ಸೇರಿದಂತೆ ಪರಿಸರಾತ್ಮಕವಾಗಿ ಸುಸ್ಥಿರವಾದ ಯೋಜನೆಗಳಿಗೆ ಒಂದು ಶತಕೋಟಿ ಯುರೋಗಳಿಗೂ ಹೆಚ್ಚು ಹಣವನ್ನು ಸಾಲವಾಗಿ ನೀಡುತ್ತಿದೆ.
ಡಾ. ಹೋಯೆರ್ ಅವರು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಭಾರತದ ಬಲವಾದ ಮತ್ತು ಪೂರ್ವಭಾವಿ ಕ್ರಮಗಳನ್ನು ಪ್ರಶಂಸಿಸಿದರು, ಮತ್ತು ಈ ನಿಟ್ಟಿನಲ್ಲಿ ಭಾರತದ ಪ್ರಯತ್ನಕ್ಕೆ ಬ್ಯಾಂಕ್ ನ ನಿರಂತರ ಬೆಂಬಲವನ್ನು ವ್ಯಕ್ತಪಡಿಸಿದರು.
AKT/NT