ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಯುನೈಟೆಡ್ ಕಿಂಗ್‌ಡಂನ ಪ್ರಧಾನಮಂತ್ರಿ ಗೌರವಾನ್ವಿತ ಸರ್ ಕೀರ್ ಸ್ಟಾರ್ಮರ್ ಅವರನ್ನು ಭೇಟಿ ಮಾಡಿದ್ದರು. ಉಭಯ ಪ್ರಧಾನಿಗಳ ನಡುವಿನ ಮೊದಲ ಭೇಟಿ ಇದಾಗಿದೆ. ಪ್ರಧಾನಮಂತ್ರಿಯಾಗಿ ಸ್ಟಾರ್ಮರ್ ಅಧಿಕಾರ ಸ್ವೀಕರಿಸುವುದಕ್ಕೆ ಪ್ರಧಾನಿ ಅಭಿನಂದಿಸಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಐತಿಹಾಸಿಕ ಮೂರನೇ ಅವಧಿಯ ಅಧಿಕಾರ ವಹಿಸಿಕೊಂಡಿರುವುದಕ್ಕೆ ಪ್ರಧಾನಮಂತ್ರಿ ಸ್ಟಾರ್ಮರ್ ಅವರಿಗೆ ಶುಭಾಶಯಗಳನ್ನು ತಿಳಿಸಿದರು.
ದ್ವಿಪಕ್ಷೀಯ ಬಾಂಧವ್ಯದ ಪ್ರಗತಿಗೆ ತೃಪ್ತಿ ವ್ಯಕ್ತಪಡಿಸಿದ ಉಭಯ ಪ್ರಧಾನಮಂತ್ರಿಗಳು, ಆರ್ಥಿಕತೆ, ವ್ಯಾಪಾರ, ನವೀನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಸಂಶೋಧನೆ ಮತ್ತು ನಾವೀನ್ಯತೆ, ಹಸಿರು ಹಣಕಾಸು ಮತ್ತು ಜನರ-ಜನರ ಸಂಪರ್ಕ ಸೇರಿದಂತೆ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಉಭಯ ನಾಯಕರು ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳು ಸೇರಿದಂತೆ ಪರಸ್ಪರ ಹಿತಾಸಕ್ತಿಯ ಹಲವು ಪ್ರಮುಖ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಉಭಯ ನಾಯಕರು ಆದಷ್ಟು ಶೀಘ್ರ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಪುನರಾರಂಭಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು ಸಮತೋಲಿತ, ಪರಸ್ಪರ ಲಾಭದಾಯಕ ಮತ್ತು ಭವಿಷ್ಯದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕಾರಣವಾಗುವ ಪರಸ್ಪರ ತೃಪ್ತಿಗಾಗಿ ಉಳಿದ ಸಮಸ್ಯೆಗಳನ್ನು ಪರಿಹರಿಸಲು ಸಮಾಲೋಚನಾ ತಂಡಗಳ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ವೃದ್ಧಿಯಾಗುತ್ತಿರುವ ದ್ವಿಪಕ್ಷೀಯ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳ ಬೆಳಕಿನಲ್ಲಿ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿರುವ ಭಾರತೀಯ ಸಮುದಾಯದ ದೂತಾವಾಸದ ಅಗತ್ಯತೆಗಳನ್ನು ಉತ್ತಮವಾಗಿ ಪೂರೈಸುವ ದೃಷ್ಟಿಯಿಂದ ಉಭಯ ದೇಶಗಳ ನಡುವೆ ಮತ್ತಷ್ಟು ತೊಡಗಿಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ಗುರುತಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಕಿಂಗ್‌ಡಂನ ಬೆಲ್‌ಫಾಸ್ಟ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ಎರಡು ಹೊಸ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿಗಳನ್ನು ಆರಂಭಿಸುವುದಾಗಿ ಘೋಷಿಸಿದರು. ಪ್ರಧಾನಮಂತ್ರಿ ಸ್ಟಾರ್ಮರ್ ಈ ಘೋಷಣೆಯನ್ನು ಸ್ವಾಗತಿಸಿದರು.
ಭಾರತದಿಂದ ಯುಕೆಗೆ ಬಂದು ನೆಲೆಸಿರುವ ಆರ್ಥಿಕ ಅಪರಾಧಿಗಳ ಸಮಸ್ಯೆಯನ್ನು ಪರಿಹರಿಸುವ ಪ್ರಾಮುಖ್ಯತೆಯನ್ನು ಪ್ರಧಾನಿ ಪ್ರಸ್ತಾಪಿಸಿದರು. ಉಭಯ ನಾಯಕರು ವಲಸೆ ಮತ್ತು ಸಂಚಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಗತಿ ಸಾಧಿಸುವ ಅಗತ್ಯವನ್ನು ಸಹ ಒಪ್ಪಿಕೊಂಡರು.
ಉಭಯ ನಾಯಕರು, ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಭಾಗವಾಗಿರುವ ವಿವಿಧ ತಿಳಿವಳಿಕೆಗಳ ತ್ವರಿತ ಅನುಷ್ಠಾನಕ್ಕೆ ಕಾರ್ಯನಿರ್ವಹಿಸುವಂತೆ ತಮ್ಮ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಬ್ಬರೂ ನಾಯಕರು ಸಹ ಆಗಾಗ್ಗೆ ಸಂವಾದ ಮತ್ತು ಚರ್ಚೆಗಳನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.
*****
Had an extremely productive meeting with Prime Minister Keir Starmer in Rio de Janeiro. For India, the Comprehensive Strategic Partnership with the UK is of immense priority. In the coming years, we are eager to work closely in areas such as technology, green energy, security,… pic.twitter.com/eJk6hBnDJl
— Narendra Modi (@narendramodi) November 18, 2024