Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮ್ಯಾನ್ಮಾರ್ ದೇಶದ ಕೌನ್ಸಿಲರೊಂದಿಗೆ ನೇ ಪೆ ತೋನಲ್ಲಿ ಜಂಟಿ ಮಾಧ್ಯಮ ಹೇಳಿಕೆಯ ವೇಳೆ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆಯ ಕನ್ನಡ ಪಠ್ಯ

ಮ್ಯಾನ್ಮಾರ್ ದೇಶದ ಕೌನ್ಸಿಲರೊಂದಿಗೆ ನೇ ಪೆ ತೋನಲ್ಲಿ ಜಂಟಿ ಮಾಧ್ಯಮ ಹೇಳಿಕೆಯ ವೇಳೆ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆಯ ಕನ್ನಡ ಪಠ್ಯ

ಮ್ಯಾನ್ಮಾರ್ ದೇಶದ ಕೌನ್ಸಿಲರೊಂದಿಗೆ ನೇ ಪೆ ತೋನಲ್ಲಿ ಜಂಟಿ ಮಾಧ್ಯಮ ಹೇಳಿಕೆಯ ವೇಳೆ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆಯ ಕನ್ನಡ ಪಠ್ಯ


ಘನತೆವೆತ್ತ ಸ್ಟೇಟ್ ಕೌನ್ಸಿಲರ್ ಅವರೇ,

ಗೌರವಾನ್ವಿತ ಪ್ರತಿನಿಧಿಗಳೇ,

ಮಾಧ್ಯಮದ ಮಿತ್ರರೇ,

ಮಿಂಗ್ಲಾಬಾ,

ನಾನು 2014ರಲ್ಲಿ ಆಸಿಯಾನ್ ಶೃಂಗದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದೆ, ಆದಾಗ್ಯೂ, ಇದು ಚಿನ್ನದ ನಾಡು ಮ್ಯಾನ್ಮಾರ್ ಗೆ ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಆದರೆ ನನಗೆ ನೀಡಲಾದ ಆತಿಥ್ಯದಿಂದ ನನಗೆ ತವರು ಮನೆಯಲ್ಲೇ ಇರುವಂತೆ ಭಾಸವಾಗುತ್ತಿದೆ. ನಾನು ಇದಕ್ಕಾಗಿ ಮ್ಯಾನ್ಮಾರ್ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ.

ಘನತೆವೆತ್ತರೇ,

ಮ್ಯಾನ್ಮಾರ್ ಶಾಂತಿ ಪ್ರಕ್ರಿಯೆಗೆ ನಿಮ್ಮ ದಿಟ್ಟ ನಾಯಕತ್ವ ಅಮೂಲ್ಯವಾದ್ದು. ನೀವು ಎದುರಿಸುತ್ತಿರುವ ಸವಾಲುಗಳನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದೇವೆ. ರಾಖೈನ್ ರಾಜ್ಯದಲ್ಲಿ ವಿಧ್ವಂಸಕತೆಯ ಕಾರಣದಿಂದ ಆಗುತ್ತಿರುವ ಮುಗ್ದ ಜನರ ಮತ್ತು ಭದ್ರತಾ ಪಡೆಗಳ ಜೀವಹಾನಿಯ ಬಗ್ಗೆ ನಿಮ್ಮ ಕಳಕಳಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ.

ಅದು ದೊಡ್ಡ ಶಾಂತಿ ಪ್ರಕ್ರಿಯೆ ಇರಲಿ ಅಥವಾ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸುವ ಕ್ರಮವಿರಲಿ, ಎಲ್ಲ ಬಾಧ್ಯಸ್ಥರೂ ಈ ನಿಟ್ಟಿನಲ್ಲಿ ಮ್ಯಾನ್ಮಾರ್ ನ ಸಮಗ್ರತೆ ಮತ್ತು ಏಕತೆಯನ್ನು ಗೌರವಿಸಿ, ಒಗ್ಗೂಡಿ ಶ್ರಮಿಸಿದಾಗ ಶಾಂತಿ, ನ್ಯಾಯ ಮತ್ತು ಎಲ್ಲರಿಗೂ ಗೌರವ ತರುವುದನ್ನು ಖಾತ್ರಿಪಡಿಸಿಕೊಳ್ಳಬಹುದು.

ಸ್ನೇಹಿತರೇ,

ಭಾರತದ ಪ್ರಜಾಸತ್ತಾತ್ಮಕ ಅನುಭವವು ಮ್ಯಾನ್ಮಾರ್ ಗೆ ಸೂಕ್ತವೆಂದು ನಾನು ಭಾವಿಸುತ್ತೇನೆ. ಹೀಗಾಗಿ, ಕಾರ್ಯಕಾರಿ, ಶಾಸಕಾಂಗ, ಚುನಾವಣಾ ಆಯೋಗ ಮತ್ತು ಪತ್ರಿಕಾ ಮಂಡಳಿಯಂಥ ಸಂಸ್ಥೆಗಳ ಸಾಮರ್ಥ್ಯ ವರ್ಧನೆಯ ಬಗ್ಗೆ ಸಮಗ್ರ ಸಹಕಾರಕ್ಕೆ ನಾವು ಹೆಮ್ಮೆಪಡುತ್ತೇವೆ. ಭದ್ರತೆಯ ಕ್ಷೇತ್ರದಲ್ಲಿ ನಮ್ಮ ಆಸಕ್ತಿಗಳು ನೆರೆಹೊರೆಯವರಾಗಿ ಸಾಮಾನ್ಯವಾಗಿದೆ. ನಮ್ಮ ಪ್ರಾದೇಶಿಕ ಮತ್ತು ಕರಾವಳಿಯ ಉದ್ದನೆಯ ಗಡಿಗಳ ಸ್ಥಿರತೆಯ ಖಾತ್ರಿಗೆ ನಾವು ಒಗ್ಗೂಡಿ ದುಡಿಯುವುದು ಅಗತ್ಯವಾಗಿದೆ. ರಸ್ತೆ ಮತ್ತು ಸೇತುವೆಗಳ ನಿರ್ಮಾಣ, ಇಂಧನ ಕ್ಷೇತ್ರದಲ್ಲಿನ ನಂಟು ಮತ್ತು ಸಂಪರ್ಕ ಹೆಚ್ಚಿಸುವ ನಮ್ಮ ಪ್ರಯತ್ನಗಳು ಉತ್ತಮ ಭವಿಷ್ಯದ ಸಂಕೇತಗಳಾಗಿವೆ. ನಾವು ಕಾಲಾದನ್ ಯೋಜನೆಯಲ್ಲಿ ಸಿಟ್ವಿ ಬಂದರು ಮತ್ತು ಪಲೆಟ್ವಾ ದ್ವೀಪದ ಜಲಮಾರ್ಗಗಳ ಟರ್ಮಿನಲ್ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ. ಮತ್ತು ರಸ್ತೆಯ ಘಟಕದ ಕಾಮಗಾರಿ ಆರಂಭವಾಗಿದೆ. ಮ್ಯಾನ್ಮಾರ್ ಮೇಲ್ದಂಡೆಯ ಅಗತ್ಯಗಳನ್ನು ಪೂರೈಸುವ ಸಲುವಾಗಿ, ಭಾರತದಿಂದ ಎರಡೂ ಕಡೆ ಅತಿ ವೇಗದ ಡೀಸೆಲ್ ಟ್ರಕ್ ಸಂಚಾರ ಆರಂಭವಾಗಿದೆ. ಮ್ಯಾನ್ಮಾರ್ ನಲ್ಲಿ ಉನ್ನತ ಗುಣಮಟ್ಟದ ಆರೋಗ್ಯ, ಶಿಕ್ಷಣ ಮತ್ತು ಸಂಶೋಧನೆ ಸೌಲಭ್ಯಗಳ ಅಭಿವೃದ್ಧಿಯು ನಮ್ಮ ಅಭಿವೃದ್ಧಿ ಪಾಲುದಾರಿಕೆ ಅಡಿಯಲ್ಲಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ. ಈ ನಿಟ್ಟಿನಲ್ಲಿ, ಮ್ಯಾನ್ಮಾರ್ ಮಾಹಿತಿ ತಂತ್ರಜ್ಞಾನ ಸಂಸ್ಥೆ ಮತ್ತು ಕೃಷಿ ಸಂಶೋಧನೆ ಮತ್ತು ಮುಂದುವರಿದ ಶಿಕ್ಷಣ ಕೇಂದ್ರಗಳನ್ನು ವಿಶೇಷವಾಗಿ ಪ್ರಸ್ತಾಪಿಸಬಹುದಾಗಿದೆ. ಈ ಎರಡೂ ಶಿಕ್ಷಣದ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮಿವೆ. ಭವಿಷ್ಯದಲ್ಲಿ ನಮ್ಮ ಯೋಜನೆಗಳು ಮ್ಯಾನ್ಮಾರ್ ನ ಆದ್ಯತೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಮಾತ್ರವೇ ಇರುತ್ತದೆ. ಇಂದು ನಮ್ಮ ದೇಶಗಳ ನಡುವೆ ಅಂಕಿತ ಹಾಕಲಾದ ಒಪ್ಪಂದಗಳು ನಮ್ಮ ನಡುವಿನ ಬಹುಮುಖಿ ದ್ವಿಪಕ್ಷೀಯ ಸಹಕಾರವನ್ನು ಇನ್ನೂ ಬಲಪಡಿಸುತ್ತವೆ.

ಸ್ನೇಹಿತರೆ,

ಭಾರತಕ್ಕೆ ಬರಲು ಇಚ್ಛಿಸುವ ಮ್ಯಾನ್ಮಾರ್ ನ ಎಲ್ಲ ಪ್ರಜೆಗಳಿಗೆ ನಾವು ಉಚಿತವಾಗಿ ವೀಸಾ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಲು ನಾನು ಹರ್ಷಿಸುತ್ತೇನೆ. ಭಾರತದ ಕಾರಾಗೃಹಗಳಲ್ಲಿ ಬಂಧಿಗಳಾಗಿರುವ 40 ಮ್ಯಾನ್ಮಾರ್ ಪ್ರಜೆಗಳನ್ನು ಬಿಡುಗಡೆ ಮಾಡಲೂ ನಾವು ನಿರ್ಧರಿಸಿದ್ದೇವೆ. ಅವರು ಮ್ಯಾನ್ಮಾರ್ ನಲ್ಲಿನ ತಮ್ಮ ಕುಟುಂಬದ ಸದಸ್ಯರನ್ನು ಶೀಘ್ರವೇ ಭೇಟಿ ಮಾಡುತ್ತಾರೆಂದು ನಾನು ಭಾವಿಸುತ್ತೇನೆ.

ಘನತೆವೆತ್ತರೆ,

ನೇ ಪೆ ತೋನಲ್ಲಿ ನನ್ನ ಈ ವಾಸ್ತವ್ಯದ ಅವಧಿ ಅರ್ಥಪೂರ್ಣವಾಗಿತ್ತು. ನಾನು ಮ್ಯಾನ್ಮಾರ್ ನಲ್ಲಿ ಉಳಿದ ಅವಧಿಯ ಬಗ್ಗೆಯೂ ಕುತೂಹಲಭರಿತನಾಗಿದ್ದೇನೆ. ಇಂದು ನಾನು ಭಗಾನ್ ನಲ್ಲಿ ಆನಂದ ದೇವಾಲಯಕ್ಕೆ ಹೋಗುತ್ತೇನೆ. ಕಳೆದ ವರ್ಷ ಸಂಭವಿಸಿದ ಭೂಕಂಪದಿಂದ ಹಾನಿಯಾಗಿದ್ದ ಆನಂದ ದೇವಾಲಯ ಮತ್ತು ಇತರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಕಟ್ಟಡಗಳ ಜೀರ್ಣೋದ್ಧಾರ ಕಾರ್ಯವನ್ನು ಭಾರತದ ನೆರವಿನಿಂದ ಮಾಡಲಾಗಿದೆ. ನಾನು ಯಾಂಗಾನ್ ನಲ್ಲಿ ಭಾರತೀಯ ಮೂಲದ ಸಮುದಾಯವನ್ನು ಭೇಟಿ ಮಾಡುವುದರ ಜೊತೆಗೆ, ನಾನು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಸ್ಮಾರಕಗಳಲ್ಲಿ ಗೌರವನಮನ ಸಲ್ಲಿಸಲಿದ್ದೇನೆ. ಮುಂಬರುವ ಸಮಯದಲ್ಲಿ ನಮ್ಮ ಪರಸ್ಪರ ಲಾಭಕ್ಕಾಗಿ ಬಲವಾದ ಮತ್ತು ಆಪ್ತವಾದ ಪಾಲುದಾರಿಕೆ ನಿರ್ಮಿಸಲು ಒಗ್ಗೂಡಿ ಶ್ರಮಿಸುತ್ತೇವೆ.

ಧನ್ಯವಾದಗಳು,

ಚೇಜು ದಿನ್ ಬಾ ಡೆ