Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೈನ್ ಲ್ಯಾಂಡ್ (ಚೆನ್ನೈ) ಮತ್ತು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ನಡುವೆ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೈನ್ ಲ್ಯಾಂಡ್ (ಚೆನ್ನೈ) ಮತ್ತು ಪೋರ್ಟ್ ಬ್ಲೇರ್ ಮತ್ತು ಇತರ ದ್ವೀಪಗಳಿಗೆ ಅಂದರೆ ಲಿಟ್ಲ್ ಅಂಡಮಾನ್, ಕಾರ್ ನಿಕೋಬಾರ್, ಹ್ಯಾವ್ಲಾಕ್, ಕಮೋರ್ತಾ ಮತ್ತು ಗ್ರೇಟ್ ನಿಕೋಬಾರ್ ನಡುವೆ ಪ್ರತ್ಯೇಕ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ (ಓ.ಎಫ್.ಸಿ.) ಮೂಲಕ ನೇರ ಸಂಪರ್ಕ ಕೊಂಡಿ ಬೆಸೆಯಲು ತನ್ನ ಅನುಮೋದನೆ ನೀಡಿದೆ.

ಈ ಯೋಜನೆಯ ಅಂದಾಜು ವೆಚ್ಚ ರೂ.1102.38 ಕೋಟಿ ಆಗಿದ್ದು, ಇದರಲ್ಲಿ ಐದು ವರ್ಷಗಳ ಕಾರ್ಯನಿರ್ವಹಣಾ ವೆಚ್ಚವೂ ಸೇರಿದೆ. ಈ ಯೋಜನೆ 2018ರ ಡಿಸೆಂಬರ್ ವೇಳೆಗೆ ಪೂರ್ಣವಾಗುವ ನಿರೀಕ್ಷೆ ಇದೆ.

ಈ ಅನುಮೋದನೆಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ (ಎ.ಎನ್.ಐ.) ಕ್ಕೆ ಸೂಕ್ತ ಬ್ರಾಂಡ್ ವಿಡ್ತ್ ಮತ್ತು ಟೆಲಿಕಾಂ ಸಂಪರ್ಕ ಒದಗಿಸಿ ಇ ಆಡಳಿತ ಉಪಕ್ರಮ ಜಾರಿಗೆ; ಉದ್ದಿಮೆ ಮತ್ತು ಇ-ವಾಣಿಜ್ಯ ಸೌಲಭ್ಯ ಸ್ಥಾಪನೆಗೆ ನೆರವಾಗಲಿದೆ. ಅಲ್ಲದೆ ಇದು ಶೈಕ್ಷಣಿಕ ಸಂಸ್ಥೆಗಳಿಗೆ ಜ್ಞಾನ ವಿನಿಮಯಕ್ಕೂ ಬೆಂಬಲ ನೀಡಲಿದೆ ಮತ್ತು ಉದ್ಯೋಗದ ಲಭ್ಯತೆ ಹಾಗೂ ಡಿಜಿಟಲ್ ಇಂಡಿಯಾ ಮುನ್ನೋಟದ ಸಾಕಾರಕ್ಕೂ ಕಾರಣವಾಗಲಿದೆ.

ಹಿನ್ನೆಲೆ:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತಕ್ಕೆ ಅಪಾರ ಆಯಕಟ್ಟಿನ ಮಹತ್ವ ಹೊಂದಿವೆ. ಬಂಗಾಳಕೊಲ್ಲಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಸರಣಿ ದ್ವೀಪಗಳ ತಾಣ ಮತ್ತು ಭೌಗೋಳಿಕ ರಚನೆ ಭಾರತದ ಪೂರ್ವ ಕಡಲ ತಡಿಯನ್ನು ರಕ್ಷಿಸುತ್ತಿದೆ. ಈ ದ್ವೀಪಗಳಿಗೆ ಸುರಕ್ಷಿತ, ವಿಶ್ವಾಸಾರ್ಹ, ಉತ್ತೇಜಕ ಮತ್ತು ಕೈಗೆಟಕುವ ದರದ ದೂರಸಂಪರ್ಕ ಸೌಲಭ್ಯ ದೇಶದ ಕಾರ್ಯತಂತ್ರಾತ್ಮಕ ದೃಷ್ಟಿಯಿಂದ ಮಹತ್ವದ್ದಾಗಿದೆ ಮತ್ತು ಈ ದ್ವೀಪಗಳ ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಅಗತ್ಯವಾಗಿದೆ.

ಪ್ರಸ್ತುತ ಮೈನ್ ಲ್ಯಾಂಡ್ ಮತ್ತು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ನಡುವೆ ದೂರಸಂಪರ್ಕಕ್ಕೆ ಇರುವ ಏಕೈಕ ಮಾಧ್ಯಮ ಉಪಗ್ರಹ ಮೂಲಕವಾದ್ದಾಗಿದೆ, ಆದರೆ ಬ್ರಾಂಡ್ ವಿಡ್ತ್ ಕೇವಲ 1ಜಿಬಿಪಿಎಸ್ ಗೆ ಸೀಮಿತವಾಗಿದೆ. ಉಪಗ್ರಹ ಆಧಾರಿತ ಬ್ರಾಂಡ್ ವಿಡ್ತ್ ದುಬಾರಿಯಾಗಿದೆ ಮತ್ತು ಭವಿಷ್ಯದ ಬ್ರಾಂಡ್ ವಿಡ್ತ್ ಅವಶ್ಯಕತೆಯನ್ನು ಇದೊಂದರ ಮೂಲಕ ಸರಿದೂಗಿಸಲು ಆಗದ ಕಾರಣ ಅದರ ಲಭ್ಯತೆ ಸೀಮಿತವಾಗಿದೆ. ಅವಕಾಶಗಳು ಹೇರಳವಾಗಿರುವಾಗ, ಯಾವುದೇ ಪರ್ಯಾಯ ಮಾಧ್ಯಮ ತುರ್ತು ಸಂದರ್ಭದಲ್ಲಿ ಲಭ್ಯವಿರುವುದಿಲ್ಲ. ದ್ವೀಪಗಳ ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ದೂರವಾಣಿ ಸಂಪರ್ಕ ಮತ್ತು ಬ್ರಾಂಡ್ ವಿಡ್ತ್ ಕೊರತೆಯೂ ಅಡ್ಡಿಯಾಗಿದೆ. ಮೈನ್ ಲ್ಯಾಂಡ್ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಡುವೆ ಜಲಾಂತರ್ಗಾಮಿ ಓ.ಎಫ್.ಸಿ. ಸಂಪರ್ಕ ಅಗತ್ಯವಾಗಿದ್ದು, ಭವಿಷ್ಯದ ಬ್ರಾಂಡ್ ವಿಡ್ತ್ ಅಗತ್ಯಕ್ಕೆ ಇದೊಂದೇ ಏಕೈಕ ಮಾರ್ಗವಾಗಿದೆ.

***

AKT/VBA/SH