ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನೋಯಿಡಾ- ಬೃಹತ್ ನೋಯಿಡಾ ನಡುವಿನ 29.707 ಕಿ.ಮೀ ಮೆಟ್ರೋ ರೈಲು ಯೋಜನೆಗೆ ತನ್ನ ಅನುಮೋದನೆ ನೀಡಿದೆ. ಯೋಜನೆಯ ಸಂಪೂರ್ಣ ವೆಚ್ಚ 5,503 ಕೋಟಿ ರೂಪಾಯಿಯಾಗಿದೆ.
ನೋಯಿಡಾ ಮತ್ತು ಬೃಹತ್ ನೋಯಿಡಾ ನಡುವಿನ ಮೆಟ್ರೋ ರೈಲು ಸಂಪರ್ಕದಿಂದ ಜನ ಸಂಚಾರದ ಖಾತ್ರಿ ದೊರಕುತ್ತದೆ ಮತ್ತು ಬಾರಿ ಜನಸಂದಣಿಯ ದೆಹಲಿಯಿಂದ ಈ ಉಪ ನಗರಗಳಿಗೆ ಹೆಚ್ಚಿನ ಜನರು ತೆರಳಲು ಇಚ್ಛಿಸುತ್ತಾರೆ. ಇದರ ಫಲವಾಗಿ ಈ ವಲಯದಲ್ಲಿ ಹೆಚ್ಚಿನ ವಾಣಿಜ್ಯ ಮತ್ತು ವಸತಿ ಸಮುಚ್ಛಯಗಳು ಅಭಿವೃದ್ಧಿ ಹೊಂದಲಿವೆ. ಮೆಟ್ರೋ ರೈಲು ಜಾರಿಯಾದರೆ, ರಸ್ತೆಗಳಲ್ಲಿ ವಾಹನ ದಟ್ಟಣೆಯೂ ಕಡಿಮೆ ಆಗಲಿದ್ದು, ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಹಾಗೂ ಕಡಿಮೆ ಪಳೆಯುಳಿಕೆ ಇಂಧನ ಬಳಕೆಯಲ್ಲಿ ಮತ್ತು ಕಡಿಮೆ ಪರಿಸರ ಮಾಲಿನ್ಯದಲ್ಲಿ ಓಡಾಟ ಮಾಡಬಹುದಾಗಿದೆ. ಸುಮಾರು 7.50 ಲಕ್ಷ ಜನಸಂಖ್ಯೆಯ ಬೃಹತ್ ನೋಯಿಡಾ – ನೋಡಿಯಾ ಜನರು, ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಈ ಮೆಟ್ರೋ ಸಂಪರ್ಕದಿಂದ ಅನುಕೂಲವಾಗಲಿದೆ.
ಯೋಜನೆಯನ್ನು ನೋಯಿಯಾ ಮೆಟ್ರೋ ರೈಲು ನಿಗಮ ನಿಯಮಿತವು ಅನುಷ್ಠಾನ ಮಾಡಲಿದ್ದು, ಇದಕ್ಕೆ ಭಾರತ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರದ ಪಾಲುಜಂಟಿಯಾಗಿ 50:50 ಆಗಿರುತ್ತದೆ. ಹಾಲಿ ಇರುವ ನೋಯಿಡಾ ಮೆಟ್ರೋ ರೈಲು ನಿಗಮ ನಿಯಮಿತ (ಎನ್.ಎಂ.ಆರ್.ಸಿ.ಎಲ್) ರಾಜ್ಯ ಸರ್ಕಾರದ ಒಡೆತನದ ವಿಶೇಷ ಉದ್ದೇಶದ ವಾಹಕ (ಎಸ್.ಪಿ.ವಿ.) ಆಗಿದ್ದು, ಇದನ್ನು ಯೋಜನೆಯ ಜಾರಿಗಾಗಿ ಭಾರತ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಜಂಟಿ ಎಸ್.ಪಿ.ವಿ.ಯಾಗಿ ಬದಲಾಯಿಸಲಾಗುತ್ತದೆ.
ಈ ಯೋಜನೆಯು ಗಣನೀಯ ಪ್ರಮಾಣದಲ್ಲಿ ಕೌಶಲ, ಅರೆ ಕೌಶಲ ಮತ್ತು ಕೌಶಲರಹಿತ ಕಾರ್ಯಪಡೆಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶ ಕಲ್ಪಿಸಲಿದೆ. ಈ ಯೋಜನೆಯ ನಿರ್ಮಾಣ ಮತ್ತು ಕಾರ್ಯಾಚರಣೆಗಳ ಹಂತದಲ್ಲಿ ಗಣನೀಯ ಪ್ರಮಾಣದ ಪರೋಕ್ಷ ಉದ್ಯೋಗವೂ ಸೃಷ್ಟಿಯಾಗಲಿದೆ.
ಸವಿವರವಾದ ಯೋಜನಾ ವರದಿಯ ರೀತ್ಯ (ಡಿಪಿಆರ್) ಈ ಯೋಜನೆಯನ್ನು 2018ರ ಏಪ್ರಿಲ್ ಹೊತ್ತಿಗೆ ಪೂರ್ಣಗೊಳಿಸಲು ಕಾಲ ನಿಗದಿ ಮಾಡಲಾಗಿದೆ. ಸುಮಾರು ಶೇ.70ರಷ್ಟು ನಿರ್ಮಾಣ ಕಾಮಗಾರಿಯ ಪ್ರಗತಿ ಮತ್ತು ಶೇ.40ರಷ್ಟು ಹಣಕಾಸು ಪ್ರಗತಿಯನ್ನು ಸಾಧಿಸಲಾಗಿದೆ.
ಯೋಜನೆ ಕೇಂದ್ರ ಮೆಟ್ರೋ ಕಾಯಿದೆ, ಮೆಟ್ರೋ ರೈಲು (ನಿರ್ಮಾಣ ಕಾಮಗಾರಿ) ಕಾಯಿದೆ 1978 ಮತ್ತು ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆ 2002 ಮತ್ತು ಕಾಲ ಕಾಲಕ್ಕೆ ಆದ ತಿದ್ದುಪಡಿಗಳ ಅಡಿಯಲ್ಲಿ ಕಾನೂನಿನ ಚೌಕಟ್ಟು ಹೊಂದಿದೆ.
ಹಿನ್ನೆಲೆ:
ನೋಯಿಡಾ ನಗರ, ಉತ್ತರ ಪ್ರದೇಶ ರಾಜ್ಯದ ಗೌತಮಬುದ್ಧ ನಗರ ಜಿಲ್ಲೆಯಲ್ಲಿದೆ, ಇದನ್ನು ಉತ್ತರ ಪ್ರದೇಶ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯಿದೆ ಅಡಿಯಲ್ಲಿ ರಚಿಸಲಾಗಿದೆ. ಇದು ರಾಷ್ಟ್ರ ರಾಜಧಾನಿ ವಲಯ(ಎನ್.ಸಿ.ಆರ್) ದೆಹಲಿಯ ಉಪ ನಗರದಂತಿದ್ದು, ಇದರಲ್ಲಿ ಎಲ್ಲ ಆಧುನಿಕ ಸೌಲಭ್ಯಗಳಿವೆ. 2011ರ ಭಾರತದ ಜನಗಣತಿಯ ಪ್ರಕಾರ ನೋಯಿಡಾ ಮತ್ತು ಬೃಹತ್ ನೋಯಿಡಾ ಜನಸಂಖ್ಯೆ 7,50,000 ಆಗಿದ್ದು, 2021ರಹೊತ್ತಿಗೆ 19,00,000ಕ್ಕೆ ಏರುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ. ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದ ಜನರು ನೋಯಿಡಾದಲ್ಲಿ ಬಂದು ನೆಲೆಸುತ್ತಿದ್ದಾರೆ. ನೋಯಿಡಾಕ್ಕೆ 10 ಸಾವಿರ ಕೈಗಾರಿಕಾ ಘಟಕಗಳ ನಿರ್ಮಾಣದ ಸಾಮರ್ಥ್ಯವಿದ್ದು, ಪ್ರಸ್ತುತ 7,500 ಕೈಗಾರಿಕೆಗಳು ಅಭಿವೃದ್ಧಿಯಾಗಿ ಕಾರ್ಯಾಚರಣೆ ಮಾಡುತ್ತಿವೆ. ನೋಯಿಡಾ ಈ ಕೈಗಾರಿಕಾ ಘಟಕಗಳಲ್ಲಿ ವಲಯದ ಸುಮಾರು 2ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿದೆ. ನೋಯಿಡಾ ಮುಖ್ಯವಾಗಿ ದೆಹಲಿ ಮತ್ತು ಸುತ್ತಲ ಪ್ರದೇಶಗಳಾದ ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯದೊಂದಿಗೆ ರಸ್ತೆ ಸಂಪರ್ಕ ಹೊಂದಿದೆ. ನೋಯಿಡಾದಲ್ಲಿ ರೈಲ್ವೆ ನಿಲ್ದಾಣವಿಲ್ಲ. ಹತ್ತಿರದ ರೈಲು ನಿಲ್ದಾಣ ಎಂದರೆ 15 ಕಿ.ಮೀ. ದೂರದಲ್ಲಿರುವ ಹಜರತ್ ನಿಜಾಮುದ್ದೀನ್.ನೋಯಿಡಾಗೆ ಹತ್ತಿರದ ವಿಮಾನ ನಿಲ್ದಾಣ ದೆಹಲಿಯಾಗಿದ್ದು ಇದು 30 ಕಿ.ಮೀ. ದೂರದಲ್ಲಿದೆ.
ಬೃಹತ್ ನೋಯಿಡಾವನ್ನು ಸಹ ದೆಹಲಿಗೆ ವಲಸೆ ಹೋಗುವುದನ್ನು ನಿಯಂತ್ರಿಸಲು ಉಪ ನಗರವಾಗಿ ಮಾಡಲಾಗಿದೆ. ಇದರಲ್ಲಿ 2021ರ ಹೊತ್ತಿಗೆ 12,00,000 ಜನಸಂಖ್ಯೆ ಮತ್ತು 4,50,000 ಉದ್ಯೋಗದ ಸಾಮರ್ಥ್ಯದ ಅಂದಾಜು ಮಾಡಲಾಗಿದೆ. ಈ ಮಧ್ಯೆ ಬೃಹತ್ ನೋಯಿಡಾದಲ್ಲಿ ವಸತಿ ಸಮುಚ್ಛಯಗಳು ತಲೆ ಎತ್ತುತ್ತಿವೆ, ಇದು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ ಮತ್ತು ನೋಯಿಡಾ ಮತ್ತು ದೆಹಲಿಯೊಂದಿಗೆ ಹೆಚ್ಚಿನ ಸಂಪರ್ಕದ ಅಗತ್ಯವಿದೆ. ಈ ವಾಸ್ತವತೆಯನ್ನು ಮನಗಂಡು, ಕಡಿಮೆ ವೆಚ್ಚದ ಮನೆಗಳು ಬೃಹತ್ ನೋಯಿಡಾದಲ್ಲಿ ಪರಿಗಣನೆಯಲ್ಲಿದ್ದು, ಜನರು ಗ್ರೇಟರ್ ನೋಯಿಡಾದಲ್ಲಿ ನೆಲೆಸಲು ಇಚ್ಛಿಸುತ್ತಿದ್ದಾರೆ ಮತ್ತು ಕೆಲಸಕ್ಕಾಗಿ ನೋಯಿಡಾ ಮತ್ತು ದೆಹಲಿ ನಡುವೆ ಸಂಚರಿಸುತ್ತಿದ್ದಾರೆ. ಗ್ರೇಟರ್ ನೋಯಿಡಾ ಸಹ ಪ್ರಮುಖವಾಗಿ ಅಂತರ ನಗರ ಸಂಪರ್ಕಕ್ಕೆ ದೆಹಲಿ ಮತ್ತು ನೋಯಿಡಾ ರಸ್ತೆಯನ್ನೇ ಅವಲಂಬಿಸಿದೆ. ಗ್ರೇಟರ್ ನೋಯಿಡಾದಲ್ಲೂ ರೈಲು ನಿಲ್ದಾಣ ಇಲ್ಲ. ಹತ್ತಿರದ ರೈಲು ನಿಲ್ದಾಣ ಎಂದರೆ ಬೊರಾಕಿ, ಇದು ಉದ್ದೇಶಿತ ಮೆಟ್ರೋ ರೈಲು ನಿಲ್ದಾಣದಿಂದ 3 ಕಿ.ಮೀ. ದೂರದಲ್ಲಿದೆ. ಗ್ರೇಟರ್ ನೋಯಿಡಾಗೆ ಹತ್ತಿರದ ವಿಮಾನ ನಿಲ್ದಾಣ ಎಂದರೆ ದೆಹಲಿ ವಿಮಾನ ನಿಲ್ದಾಣ. ಇದು 45 ಕಿ.ಮೀ. ದೂರದಲ್ಲಿದೆ. ಮುಂಬರುವ ವರ್ಷಗಳಲ್ಲಿ ನೋಯಿಡಾ ಮತ್ತು ಗ್ರೇಟರ್ ನೋಯಿಡಾಗಳಲ್ಲಿ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ.
***
AKT/SH