ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೂರು ಪರಿವರ್ತಕ ಹೊಸ ಕ್ರಿಮಿನಲ್ ಕಾನೂನುಗಳಾದ – ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳ ಯಶಸ್ವಿ ಅನುಷ್ಠಾನವನ್ನು 2024ರ ಡಿಸೆಂಬರ್ 3 ರಂದು ಮಧ್ಯಾಹ್ನ 12 ಗಂಟೆಗೆ ಚಂಡೀಗಢದಲ್ಲಿ ದೇಶಕ್ಕೆ ಸಮರ್ಪಿಸಲಿದ್ದಾರೆ.
ಮೂರು ಕಾನೂನುಗಳ ಪರಿಕಲ್ಪನೆಯು ಸ್ವಾತಂತ್ರ್ಯಾ ನಂತರ ಅಸ್ತಿತ್ವದಲ್ಲಿದ್ದ ವಸಾಹತುಶಾಹಿ ಯುಗದ ಕಾನೂನುಗಳನ್ನು ತೆಗೆದುಹಾಕುವ ಮತ್ತು ಶಿಕ್ಷೆಯಿಂದ ನ್ಯಾಯದ ಕಡೆಗೆ ನ್ಯಾಯಾಂಗ ವ್ಯವಸ್ಥೆಯನ್ನು ಪರಿವರ್ತಿಸಬೇಕೆಂಬ ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ ಪ್ರೇರಿತವಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು, “ಸುರಕ್ಷಿತ ಸಮಾಜ, ಅಭಿವೃದ್ಧಿ ಹೊಂದಿದ ಭಾರತ- ಶಿಕ್ಷೆಯಿಂದ ನ್ಯಾಯದೆಡೆಗೆ” ಎಂಬ ಧ್ಯೇಯದಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರವ್ಯಾಪಿಯಾಗಿ 2024ರ ಜುಲೈ 1 ರಂದು ಜಾರಿಗೆ ಬಂದಿರುವ ಹೊಸ ಕ್ರಿಮಿನಲ್ ಕಾನೂನುಗಳು, ಭಾರತದ ಕಾನೂನು ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ಪರಿಣಾಮಕಾರಿ ಮತ್ತು ಸಮಕಾಲೀನ ಸಮಾಜದ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ಮಾಡುವ ಗುರಿಯನ್ನು ಹೊಂದಿವೆ. ಈ ಮಹತ್ವದ ಸುಧಾರಣೆಗಳು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಐತಿಹಾಸಿಕ ಕೂಲಂಕುಷ ಪರೀಕ್ಷೆಗೆ ಒಡ್ಡುತ್ತಾ, ಆಧುನಿಕ-ದಿನದ ಸವಾಲುಗಳಾದ ಸೈಬರ್ ಅಪರಾಧ, ಸಂಘಟಿತ ಅಪರಾಧ ಮತ್ತು ವಿವಿಧ ಅಪರಾಧಗಳ ಸಂತ್ರಸ್ತರಿಗೆ ನ್ಯಾಯ ಒದಗಿಸುವಿಕೆ ಖಾತರಿಪಡಿಸುವುದು ಮೊದಲಾದವುಗಳನ್ನು ನಿಭಾಯಿಸಲು ಹೊಸ ಚೌಕಟ್ಟುಗಳನ್ನು ನೀಡಿವೆ.
ಈ ಕಾನೂನುಗಳನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ಈ ಕಾರ್ಯಕ್ರಮದಲ್ಲಿ ಪ್ರಾಯೋಗಿಕವಾಗಿ ಪ್ರದರ್ಶಿಸಲಾಗುತ್ತದೆ ಅಂದರೆ ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಹೊಸ ಕಾನೂನು ಹೇಗೆ ನವೀನ ರೂಪ ನೀಡುತ್ತಿವೆ ಎಂಬುದನ್ನು ಈ ಕಾರ್ಯಕ್ರಮ ತೋರಿಸಲಿದೆ. ಅಪರಾಧ ದೃಶ್ಯದ ತನಿಖೆಯನ್ನು ಹೊಸ ಕಾನೂನಿನನ್ವಯ ಹೇಗೆ ಮಾಡಬೇಕು ಎಂಬ ಬಗ್ಗೆ ಈ ಕಾರ್ಯಕ್ರಮದಲ್ಲಿ ನೇರ ಪ್ರಾತ್ಯಕ್ಷಿಕೆ ಕೂಡ ನೀಡಲಾಗುವುದು.
*****