ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿ ಶ್ರೀ ಅಮಿತ್ ಶಾ, ಚಂಡೀಗಢದ ಆಡಳಿತಾಧಿಕಾರಿ ಶ್ರೀ ಗುಲಾಬ್ ಚಂದ್ ಕಟಾರಿಯಾ ಜೀ, ನನ್ನ ಸಹೋದ್ಯೋಗಿ ರಾಜ್ಯ ಸಭಾ ಸಂಸದ, ಸತ್ನಾಮ್ ಸಿಂಗ್ ಸಂಧು ಜೀ, ಹಾಜರಿರುವ ಇತರ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೇ,
ಚಂಡೀಗಢಕ್ಕೆ ಬಂದಾಗ ನಾನು ನನ್ನವರ ಮಧ್ಯೆಯೇ ಇದ್ದೇನೆ ಎಂಬ ಭಾವನೆ ಮೂಡುತ್ತದೆ. ಚಂಡೀಗಢದ ಹೆಸರು ಶಕ್ತಿ ಸ್ವರೂಪಿಣಿಯಾದ ಮಾ ಚಂಡಿಕೆಯ ಹೆಸರಿನೊಂದಿಗೆ ಬೆಸೆದುಕೊಂಡಿದೆ. ಚಂಡಿ ಮಾತೆ ಸತ್ಯ ಮತ್ತು ನ್ಯಾಯದ ಪ್ರತೀಕ. ಈ ಪರಿಕಲ್ಪನೆಯು ಭಾರತೀಯ ನಾಗರಿಕ ಸಂಹಿತೆ ಮತ್ತು ಭಾರತೀಯ ನಾಗರಿಕ ಸಂರಕ್ಷಣಾ ಸಂಹಿತೆಯ ಅಡಿಪಾಯವಾಗಿದೆ.
ದೇಶವು ‘ವಿಕಸಿತ ಭಾರತ’ದ (ಅಭಿವೃದ್ಧಿ ಹೊಂದಿದ ಭಾರತ) ಗುರಿಯೊಂದಿಗೆ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಸಂವಿಧಾನದ 75ನೇ ವರ್ಷಾಚರಣೆಯನ್ನು ಆಚರಿಸುತ್ತಿರುವ ಈ ಸಮಯದಲ್ಲಿ, ಸಾಂವಿಧಾನಿಕ ಆದರ್ಶಗಳಿಂದ ಪ್ರೇರಿತವಾದ ಭಾರತೀಯ ನ್ಯಾಯ ಸಂಹಿತೆಯ ಪ್ರಾರಂಭವು ಒಂದು ಮಹತ್ವದ ಮೈಲಿಗಲ್ಲಾಗಿದೆ. ನಮ್ಮ ಸಂವಿಧಾನವು ನಾಗರಿಕರಿಗಾಗಿ ಕಲ್ಪಿಸಿರುವ ಆದರ್ಶಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇದೊಂದು ಗಟ್ಟಿ ಪ್ರಯತ್ನ. ಈ ಕಾನೂನುಗಳನ್ನು ಹೇಗೆ ಜಾರಿಗೆ ತರಲಾಗುವುದು ಎಂಬುದರ ನೇರ ಪ್ರಾತ್ಯಕ್ಷಿಕೆಯನ್ನು ನಾನು ಈಗಷ್ಟೇ ವೀಕ್ಷಿಸಿದೆ. ಕಾನೂನು ವಿದ್ಯಾರ್ಥಿಗಳು, ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳು – ಸಾಧ್ಯವಾದರೆ, ಈ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಬೇಕೆಂದು ನಾನು ಎಲ್ಲರಿಗೂ ವಿಶೇಷವಾಗಿ ಒತ್ತಾಯಿಸುತ್ತೇನೆ.ಈ ಸಂದರ್ಭದಲ್ಲಿ, ಭಾರತೀಯ ನ್ಯಾಯ ಸಂಹಿತೆ ಮತ್ತು ನಾಗರಿಕ ಸುರಕ್ಷತಾ ಸಂಹಿತೆಯ ಜಾರಿಗಾಗಿ ಎಲ್ಲಾ ನಾಗರಿಕರಿಗೆ ನನ್ನ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ ಮತ್ತು ಚಂಡೀಗಢ ಆಡಳಿತದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಹೊಸ ಭಾರತೀಯ ನ್ಯಾಯ ಸಂಹಿತೆಯು ಸಮಗ್ರವಾದುದು ಮಾತ್ರವಲ್ಲದೆ ವ್ಯಾಪಕವಾದ ಪ್ರಕ್ರಿಯೆಯ ಮೂಲಕ ರಚಿಸಲ್ಪಟ್ಟಿದೆ. ಇದು ಹಲವಾರು ಸಾಂವಿಧಾನಿಕ ಮತ್ತು ಕಾನೂನು ತಜ್ಞರ ಕಠಿಣ ಪರಿಶ್ರಮವನ್ನು ಒಳಗೊಂಡಿದೆ. 2020ರ ಜನವರಿಯಲ್ಲಿ ಗೃಹ ಸಚಿವಾಲಯವು ಈ ಬಗ್ಗೆ ಸಲಹೆಗಳನ್ನು ಕೋರಿತ್ತು. ದೇಶದ ಮುಖ್ಯ ನ್ಯಾಯಮೂರ್ತಿಗಳ ಮಾರ್ಗದರ್ಶನ ಮತ್ತು ಅಭಿಪ್ರಾಯಗಳು ಮಹತ್ವದ್ದಾಗಿದ್ದವು. ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್, 16 ಹೈಕೋರ್ಟ್ ಗಳು, ನ್ಯಾಯಾಂಗ ಅಕಾಡೆಮಿಗಳು, ಹಲವಾರು ಕಾನೂನು ಸಂಸ್ಥೆಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ಇತರ ಬುದ್ಧಿಜೀವಿಗಳೊಂದಿಗೆ ಅಪಾರ ಬೆಂಬಲವನ್ನು ನೀಡಿದರು. ಈ ಪಾಲುದಾರರು ವರ್ಷಗಳ ಕಾಲ ಚರ್ಚಿಸಿದರು, ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಆಧುನಿಕ ದೃಷ್ಟಿಕೋನದಿಂದ ದೇಶದ ಅಗತ್ಯಗಳನ್ನು ಚರ್ಚಿಸಿದರು. ಸ್ವಾತಂತ್ರ್ಯದ ಏಳು ದಶಕಗಳಲ್ಲಿ ನ್ಯಾಯಾಂಗ ಎದುರಿಸಿದ ಸವಾಲುಗಳನ್ನು ಆಳವಾಗಿ ವಿಶ್ಲೇಷಿಸಲಾಯಿತು ಮತ್ತು ಪ್ರತಿ ಕಾನೂನಿನ ಪ್ರಾಯೋಗಿಕತೆಯನ್ನು ಪರಿಶೀಲಿಸಲಾಯಿತು. ಭವಿಷ್ಯದ ಮಾನದಂಡಗಳ ಮೇಲೆ ಕಠಿಣ ಮೌಲ್ಯಮಾಪನದ ನಂತರ, ಭಾರತೀಯ ನ್ಯಾಯ ಸಂಹಿತೆಯು ತನ್ನ ಪ್ರಸ್ತುತ ರೂಪವನ್ನು ಪಡೆದುಕೊಂಡಿತು. ನಾನು ಸರ್ವೋಚ್ಚ ನ್ಯಾಯಾಲಯ, ಗೌರವಾನ್ವಿತ ನ್ಯಾಯಾಧೀಶರು, ಎಲ್ಲಾ ಉಚ್ಚ ನ್ಯಾಯಾಲಯಗಳಿಗೆ, ವಿಶೇಷವಾಗಿ ಹರಿಯಾಣ ಮತ್ತು ಪಂಜಾಬ್ ಉಚ್ಚ ನ್ಯಾಯಾಲಯಗಳಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಹೊಸ ನ್ಯಾಯ ಸಂಹಿತೆಯನ್ನು ಮುಂದೆ ತಂದು ಅದರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಕ್ಕಾಗಿ ನಾನು ವಕೀಲರ ಸಂಘಕ್ಕೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ವಕೀಲರ ಸಂಘದ ಎಲ್ಲಾ ಸದಸ್ಯರು ಅಪಾರ ಮೆಚ್ಚುಗೆ ಮತ್ತು ಮನ್ನಣೆಗೆ ಅರ್ಹರಾಗಿದ್ದಾರೆ. ಎಲ್ಲರ ಸಹಕಾರದೊಂದಿಗೆ ರಚಿಸಲಾದ ಈ ಭಾರತೀಯ ನ್ಯಾಯ ಸಂಹಿತೆಯು ಭಾರತದ ನ್ಯಾಯದ ಪ್ರಯಾಣದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ.
ಸ್ನೇಹಿತರೇ,
ನಮ್ಮ ದೇಶ 1947ರಲ್ಲಿ ಸ್ವಾತಂತ್ರ್ಯ ಪಡೆಯಿತು. ಶತಮಾನಗಳ ಗುಲಾಮಗಿರಿಯ ನಂತರ, ನಮ್ಮ ರಾಷ್ಟ್ರ ಅಂತಿಮವಾಗಿ ಮುಕ್ತವಾದಾಗ – ಅಸಂಖ್ಯಾತ ತ್ಯಾಗಿಗಳ ತಲೆಮಾರುಗಳ ಕಾಯುವಿಕೆ ಮತ್ತು ಬಲಿದಾನಗಳ ನಂತರ ಸ್ವಾತಂತ್ರ್ಯದ ಬೆಳಕು ಮೂಡಿದಾಗ – ದೇಶಾದ್ಯಂತ ಹಬ್ಬಿದ ಉತ್ಸಾಹ, ಆ ಕಾಲದ ಕನಸುಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಬ್ರಿಟಿಷರ ನಿರ್ಗಮನದೊಂದಿಗೆ ಅವರ ದಬ್ಬಾಳಿಕೆಯ ಕಾನೂನುಗಳು ಸಹ ಕೊನೆಗೊಳ್ಳುತ್ತವೆ ಎಂದು ಜನರು ಆಶಿಸಿದ್ದರು. ಏಕೆಂದರೆ, ಈ ಕಾನೂನುಗಳೇ ಬ್ರಿಟಿಷ್ ಶೋಷಣೆ ಮತ್ತು ದೌರ್ಜನ್ಯದ ಮುಖ್ಯ ಆಯುಧಗಳಾಗಿದ್ದವು. 1857ರಲ್ಲಿ, ನನ್ನ ಯುವ ಸ್ನೇಹಿರೇ, ನಿಮಗೆ ನೆನಪಿಸುತ್ತೇನೆ, ದೇಶದ ಸ್ವಾತಂತ್ರ್ಯಕ್ಕಾಗಿ ಮೊದಲ ದೊಡ್ಡ ಹೋರಾಟ ನಡೆಯಿತು. 1857ರ ಸ್ವಾತಂತ್ರ್ಯ ಸಂಗ್ರಾಮವು ಬ್ರಿಟಿಷ್ ಆಳ್ವಿಕೆಯ ಬುನಾದಿಯನ್ನೇ ಅಲುಗಾಡಿಸಿತು ಮತ್ತು ದೇಶದ ಮೂಲೆ ಮೂಲೆಯಲ್ಲಿಯೂ ಸವಾಲೊಡ್ಡಿತು. ಇದಕ್ಕೆ ಪ್ರತಿಯಾಗಿ, ಮೂರು ವರ್ಷಗಳ ನಂತರ, 1860 ರಲ್ಲಿ, ಬ್ರಿಟಿಷರು ಭಾರತೀಯ ದಂಡ ಸಂಹಿತೆಯನ್ನು (Indian Penal Code-IPC) ಜಾರಿಗೆ ತಂದರು. ಕೆಲವು ವರ್ಷಗಳ ನಂತರ, ಅವರು ಭಾರತೀಯ ಸಾಕ್ಷ್ಯ ಕಾಯ್ದೆ ( Indian Evidence Act) ಯನ್ನು ತಂದರು, ನಂತರ ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಚೌಕಟ್ಟನ್ನು ರೂಪಿಸಿದರು. ಈ ಕಾನೂನುಗಳ ಹಿಂದಿನ ಮುಖ್ಯ ಉದ್ದೇಶ ಭಾರತೀಯರನ್ನು ಶಿಕ್ಷಿಸುವುದು, ಅವರನ್ನು ಅಧೀನಗೊಳಿಸುವುದು ಮತ್ತು ಗುಲಾಮರನ್ನಾಗಿ ಮುಂದುವರಿಸುವುದು. ದುರದೃಷ್ಟವಶಾತ್, ಸ್ವಾತಂತ್ರ್ಯಾನಂತರವೂ, ದಶಕಗಳ ಕಾಲ, ನಮ್ಮ ಕಾನೂನುಗಳು ಈ ಶಿಕ್ಷಾ ಚೌಕಟ್ಟು ಮತ್ತು ದಂಡನಾ ಮನಸ್ಥಿತಿಯನ್ನೇ ಅನುಸರಿಸಿದವು – ನಾಗರಿಕರನ್ನು ಪ್ರಜೆಗಳಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿತ್ತು. ಕಾಲಕಾಲಕ್ಕೆ ಸಣ್ಣಪುಟ್ಟ ಸುಧಾರಣೆಗಳನ್ನು ತರಲಾಯಿತಾದರೂ, ಈ ಕಾನೂನುಗಳ ಮೂಲ ಸ್ವರೂಪ ಬದಲಾಗಲಿಲ್ಲ. ಸ್ವತಂತ್ರ ರಾಷ್ಟ್ರದಲ್ಲಿ, ಗುಲಾಮರಿಗಾಗಿ ರೂಪಿಸಲಾದ ಕಾನೂನುಗಳ ಹೊರೆಯನ್ನು ನಾವು ಏಕೆ ಹೊತ್ತುಕೊಳ್ಳಬೇಕು? ಈ ಪ್ರಶ್ನೆಯನ್ನು ನಾವು ಕೇಳಿಲ್ಲ ಅಥವಾ ಅಧಿಕಾರದಲ್ಲಿದ್ದವರು ಗಂಭೀರವಾಗಿ ಪರಿಗಣಿಸಲಿಲ್ಲ. ಈ ವಸಾಹತುಶಾಹಿ ಮನಸ್ಥಿತಿಯು ಭಾರತದ ಪ್ರಗತಿ ಮತ್ತು ಅಭಿವೃದ್ಧಿಯ ಪ್ರಯಾಣಕ್ಕೆ ಗಮನಾರ್ಹವಾಗಿ ಅಡ್ಡಿಯಾಯಿತು.
ಸ್ನೇಹಿತರೇ,
ದೇಶವು ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರಬೇಕು ಮತ್ತು ರಾಷ್ಟ್ರದ ಸಾಮರ್ಥ್ಯವನ್ನು ರಾಷ್ಟ್ರ ನಿರ್ಮಾಣದ ಕಡೆಗೆ ನಿರ್ದೇಶಿಸಬೇಕು. ಇದಕ್ಕಾಗಿ, ರಾಷ್ಟ್ರೀಯ ದೃಷ್ಟಿಕೋನ ಅತ್ಯಗತ್ಯವಾಗಿತ್ತು. ಅದಕ್ಕಾಗಿಯೇ, ಆಗಸ್ಟ್ 15 ರಂದು, ನಾನು ಕೆಂಪು ಕೋಟೆಯಿಂದ ಗುಲಾಮಗಿರಿಯ ಮನಸ್ಥಿತಿಯಿಂದ ರಾಷ್ಟ್ರವನ್ನು ಮುಕ್ತಗೊಳಿಸುವ ನಿರ್ಣಯವನ್ನು ಮಂಡಿಸಿದೆ. ಈಗ, ಭಾರತೀಯ ನ್ಯಾಯ ಸಂಹಿತೆ ಮತ್ತು ನಾಗರಿಕ ಸಂಹಿತೆಯ ಮೂಲಕ, ದೇಶವು ಈ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ನಮ್ಮ ನ್ಯಾಯ ವ್ಯವಸ್ಥೆಯು “ಜನರಿಂದ, ಜನರಿಗಾಗಿ, ಜನರಿಂದ” ಎಂಬ ತತ್ವವನ್ನು ಸಬಲಗೊಳಿಸುತ್ತಿದೆ, ಇದು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ.
ಸ್ನೇಹಿತರೇ,
ನ್ಯಾಯ ಸಂಹಿತೆಯು ಸಮಾನತೆ, ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯದ ಆಶಯಗಳಿಂದ ನೇಯಲ್ಪಟ್ಟಿದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ನಾವು ಯಾವಾಗಲೂ ಕೇಳಿದ್ದೇವೆ. ಆದರೆ, ವಾಸ್ತವದಲ್ಲಿ ಆಗಾಗ್ಗೆ ಭಿನ್ನವಾದ ಚಿತ್ರಣವೇ ಕಂಡುಬರುತ್ತದೆ. ಬಡವರು ಮತ್ತು ದುರ್ಬಲರು ಐತಿಹಾಸಿಕವಾಗಿ ಕಾನೂನಿನ ಹೆಸರನ್ನೇ ಕೇಳಲು ಹೆದರುತ್ತಿದ್ದರು. ನ್ಯಾಯಾಲಯಗಳು, ಪೊಲೀಸ್ ಠಾಣೆಗಳು ಅಥವಾ ಕಾನೂನು ಪ್ರಕ್ರಿಯೆಗಳಿಗೆ ಸಾಧ್ಯವಾದಷ್ಟು ಹೋಗುವುದನ್ನೇ ತಪ್ಪಿಸುತ್ತಿದ್ದರು. ಈಗ, ಭಾರತೀಯ ನ್ಯಾಯ ಸಂಹಿತೆಯು ಈ ಸಾಮಾಜಿಕ ಮನೋವಿಜ್ಞಾನವನ್ನು ಬದಲಾಯಿಸಲು ಕೆಲಸ ಮಾಡುತ್ತದೆ. ರಾಷ್ಟ್ರದ ಕಾನೂನುಗಳು ಸಮಾನತೆಯನ್ನು ಖಾತರಿಪಡಿಸುತ್ತವೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸುತ್ತದೆ. ಇದು ನಿಜವಾದ ಸಾಮಾಜಿಕ ನ್ಯಾಯದ ಸಾರ, ನಮ್ಮ ಸಂವಿಧಾನವು ಭರವಸೆ ನೀಡುವ ಖಾತ್ರಿ.
ಸ್ನೇಹಿತರೇ,
ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಗಳು ಪ್ರತಿಯೊಬ್ಬ ಬಲಿಪಶುವಿನ ಬಗ್ಗೆಯೂ ಸೂಕ್ಷ್ಮತೆಯಿಂದ ತುಂಬಿವೆ. ದೇಶದ ಪ್ರತಿಯೊಬ್ಬ ನಾಗರಿಕರು ಇದರ ಜಟಿಲತೆಗಳ ಬಗ್ಗೆ ತಿಳಿದಿರುವುದು ಅಷ್ಟೇ ಮುಖ್ಯ. ಆದ್ದರಿಂದ, ಚಂಡೀಗಢದಲ್ಲಿ ತೋರಿಸಿರುವ ಲೈವ್ ಡೆಮೊವನ್ನು ಪ್ರತಿ ರಾಜ್ಯದ ಪೊಲೀಸ್ ಪಡೆಯು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರಸಾರ ಮಾಡಬೇಕೆಂದು ನಾನು ಸೂಚಿಸಲು ಬಯಸುತ್ತೇನೆ. ಉದಾಹರಣೆಗೆ, ದೂರು ದಾಖಲಾದ 90 ದಿನಗಳಲ್ಲಿ, ಪ್ರಕರಣದ ಪ್ರಗತಿಯ ಬಗ್ಗೆ ಬಲಿಪಶುವಿಗೆ ತಿಳಿಸಬೇಕು. ಈ ಮಾಹಿತಿಯನ್ನು SMS ನಂತಹ ಡಿಜಿಟಲ್ ಸೇವೆಗಳ ಮೂಲಕ ನೇರವಾಗಿ ಅವರಿಗೆ ತಲುಪಿಸಲಾಗುತ್ತದೆ. ಪೊಲೀಸ್ ಕೆಲಸಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒಂದು ವ್ಯವಸ್ಥೆಯನ್ನು ರಚಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ನ್ಯಾಯ ಸಂಹಿತೆಯಲ್ಲಿ ಪ್ರತ್ಯೇಕ ಅಧ್ಯಾಯವನ್ನು ಸೇರಿಸಲಾಗಿದೆ. ಈ ಅಧ್ಯಾಯವು ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಸುರಕ್ಷತೆ, ಹಾಗೆಯೇ ಮನೆ ಮತ್ತು ಸಮಾಜದಲ್ಲಿ ಅವರ ಮತ್ತು ಮಕ್ಕಳ ಹಕ್ಕುಗಳನ್ನು ಒಳಗೊಂಡಿದೆ. ಭಾರತೀಯ ನ್ಯಾಯ ಸಂಹಿತೆಯು ಕಾನೂನು ಬಲಿಪಶುವಿನ ಪರವಾಗಿ ನಿಲ್ಲುವಂತೆ ಖಚಿತಪಡಿಸುತ್ತದೆ. ಮತ್ತೊಂದು ಮಹತ್ವದ ನಿಬಂಧನೆಯನ್ನು ಸೇರಿಸಲಾಗಿದೆ: ಅತ್ಯಾಚಾರದಂತಹ ಕ್ರೂರ ಅಪರಾಧಗಳ ಸಂದರ್ಭಗಳಲ್ಲಿ, ಮೊದಲ ವಿಚಾರಣೆಯಿಂದ 60 ದಿನಗಳಲ್ಲಿ ಆರೋಪ ಪಟ್ಟಿಯನ್ನು ರೂಪಿಸಬೇಕು. ಹೆಚ್ಚುವರಿಯಾಗಿ, ವಿಚಾರಣೆಗಳು ಪೂರ್ಣಗೊಂಡ 45 ದಿನಗಳಲ್ಲಿ ತೀರ್ಪು ನೀಡುವುದು ಕಡ್ಡಾಯವಾಗಿದೆ. ಯಾವುದೇ ಪ್ರಕರಣವನ್ನು ಎರಡು ಬಾರಿಗಿಂತ ಹೆಚ್ಚು ಮುಂದೂಡುವಂತಿಲ್ಲ ಎಂದೂ ಷರತ್ತು ವಿಧಿಸಲಾಗಿದೆ.
ಸ್ನೇಹಿತರೇ,
ಭಾರತೀಯ ನ್ಯಾಯ ಸಂಹಿತೆಯ ಮೂಲ ತತ್ವವೆಂದರೆ “ಮೊದಲು ಪ್ರಜೆ!” ಈ ಕಾನೂನು ನಾಗರಿಕ ಹಕ್ಕುಗಳ ರಕ್ಷಕವಾಗುತ್ತಿದೆ, ‘ನ್ಯಾಯದ ಸುಲಭತೆ’ ಯ ಅಡಿಪಾಯವಾಗಿದೆ. ಈ ಹಿಂದೆ, FIR ದಾಖಲಿಸುವುದೂ ಸಹ ಕಷ್ಟಕರವಾಗಿತ್ತು. ಆದರೆ ಈಗ, ಶೂನ್ಯ FIR ಗಳನ್ನು ಕಾನೂನುಬದ್ಧವಾಗಿ ಗುರುತಿಸಲಾಗಿದೆ ಮತ್ತು ನಾಗರಿಕರಿಗೆ ಎಲ್ಲಿಂದಲಾದರೂ ಪ್ರಕರಣವನ್ನು ದಾಖಲಿಸುವ ಅನುಕೂಲವಿದೆ. ಸಂತ್ರಸ್ಥರಿಗೆ FIR ಪ್ರತಿಯನ್ನು ಪಡೆಯುವ ಹಕ್ಕಿದೆ. ಆರೋಪಿಯ ವಿರುದ್ಧದ ಪ್ರಕರಣವನ್ನು ಹಿಂಪಡೆಯಬೇಕಾದರೆ, ಅದನ್ನು ಸಂತ್ರಸ್ತೆಯ ಒಪ್ಪಿಗೆಯೊಂದಿಗೆ ಮಾತ್ರ ಮಾಡಬಹುದು. ಪೊಲೀಸರು ಇನ್ನು ಮುಂದೆ ತಮ್ಮ ವಿವೇಚನೆಯಿಂದ ಯಾರನ್ನೂ ಬಂಧಿಸುವಂತಿಲ್ಲ. ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ, ಬಂಧಿತನ ಕುಟುಂಬಕ್ಕೆ ಮಾಹಿತಿ ನೀಡುವುದು ಪೊಲೀಸರಿಗೆ ಕಡ್ಡಾಯವಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಮತ್ತೊಂದು ಅಂಶವೆಂದರೆ ಅದರ ಮಾನವೀಯತೆ ಮತ್ತು ಸೂಕ್ಷ್ಮತೆ. ಶಿಕ್ಷೆಯಿಲ್ಲದೆ ಆರೋಪಿಯನ್ನು ಇನ್ನು ಮುಂದೆ ದೀರ್ಘಕಾಲ ಜೈಲಿನಲ್ಲಿ ಇರಿಸಲಾಗುವುದಿಲ್ಲ. ಈಗ, ಮೂರು ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಗಳಿಗೆ, ಉನ್ನತ ಅಧಿಕಾರಿಗಳ ಅನುಮೋದನೆಯೊಂದಿಗೆ ಮಾತ್ರ ಬಂಧನವನ್ನು ಮಾಡಬಹುದು. ಸಣ್ಣಪುಟ್ಟ ಅಪರಾಧಗಳಿಗೆ, ಕಡ್ಡಾಯ ಜಾಮೀನಿಗೆ ಅವಕಾಶವಿದೆ. ಹೆಚ್ಚುವರಿಯಾಗಿ, ಸಣ್ಣ ಅಪರಾಧಗಳಿಗೆ, ಶಿಕ್ಷೆಗೆ ಪರ್ಯಾಯವಾಗಿ ಸಮುದಾಯ ಸೇವೆಯನ್ನು ನೀಡಲಾಗುತ್ತದೆ. ಇದು ಆರೋಪಿಗಳಿಗೆ ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡುವ ಅವಕಾಶವನ್ನು ಒದಗಿಸುತ್ತದೆ. ನ್ಯಾಯ ಸಂಹಿತೆಯು ಮೊದಲ ಬಾರಿಗೆ ಅಪರಾಧ ಮಾಡುವವರ ಬಗ್ಗೆಯೂ ಬಹಳ ಸಂವೇದನಾಶೀಲವಾಗಿದೆ. ಭಾರತೀಯ ನ್ಯಾಯ ಸಂಹಿತಾ ಜಾರಿಗೆ ಬಂದ ನಂತರ ಹಳೆಯ ಕಾನೂನುಗಳಿಂದಾಗಿ ಜೈಲಿನಲ್ಲಿದ್ದ ಸಾವಿರಾರು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದರೆ ದೇಶದ ನಾಗರಿಕರು ಸಂತೋಷಪಡುತ್ತಾರೆ. ಹೊಸ ವ್ಯವಸ್ಥೆ, ಹೊಸ ಕಾನೂನು, ನಾಗರಿಕ ಹಕ್ಕುಗಳನ್ನು ಹೇಗೆ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ನೀವು ಊಹಿಸಿಕೊಳ್ಳಬಹುದು.
ಸ್ನೇಹಿತರೇ,
ನ್ಯಾಯದ ಮೊದಲ ಮಾಪನವೆಂದರೆ ಸಕಾಲದಲ್ಲಿ ನ್ಯಾಯ ನೀಡುವುದು. “ವಿಳಂಬಿತ ನ್ಯಾಯವು ನ್ಯಾಯವನ್ನು ನಿರಾಕರಿಸುವುದಾಗಿದೆ” ಎಂದು ನಾವೆಲ್ಲರೂ ಕೇಳಿದ್ದೇವೆ ಮತ್ತು ಹೇಳಿದ್ದೇವೆ. ಅದಕ್ಕಾಗಿಯೇ, ನಮ್ಮ ರಾಷ್ಟ್ರವು ಭಾರತೀಯ ನ್ಯಾಯ ಸಂಹಿತೆ ಮತ್ತು ನಾಗರಿಕ ಸುರಕ್ಷಾ ಸಂಹಿತೆಯ ಮೂಲಕ ಶೀಘ್ರ ನ್ಯಾಯದ ಕಡೆಗೆ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಆರೋಪಪಟ್ಟಿ ಸಲ್ಲಿಸುವುದು ಮತ್ತು ಶೀಘ್ರವಾಗಿ ತೀರ್ಪು ನೀಡುವ ಬಗ್ಗೆ ಗಮನ ಹರಿಸಲಾಗಿದೆ. ಪ್ರಕರಣದ ಪ್ರತಿಯೊಂದು ಹಂತವನ್ನು ಪೂರ್ಣಗೊಳಿಸಲು ಸಮಯ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ವ್ಯವಸ್ಥೆಯನ್ನು ಕೆಲವು ತಿಂಗಳ ಹಿಂದೆಯಷ್ಟೇ ಜಾರಿಗೆ ತರಲಾಗಿದ್ದರೂ, ಅದು ಪಕ್ವವಾಗಲು ಇನ್ನೂ ಸಮಯ ಬೇಕಾಗುತ್ತದೆ. ಆದಾಗ್ಯೂ, ಈ ಕಡಿಮೆ ಅವಧಿಯಲ್ಲಿಯೂ, ನಾವು ಕಾಣುತ್ತಿರುವ ಬದಲಾವಣೆಗಳು ಮತ್ತು ದೇಶದ ವಿವಿಧ ಭಾಗಗಳಿಂದ ಬರುತ್ತಿರುವ ಮಾಹಿತಿ ನಿಜಕ್ಕೂ ತೃಪ್ತಿಕರ ಮತ್ತು ಉತ್ತೇಜನಕಾರಿಯಾಗಿದೆ. ಚಂಡೀಗಢದಲ್ಲಿ, ವಾಹನ ಕಳವು ಪ್ರಕರಣದಲ್ಲಿ, FIR ದಾಖಲಾದ ಕೇವಲ 2 ತಿಂಗಳು 11 ದಿನಗಳಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ನೀವೆಲ್ಲರೂ ತಿಳಿದಿರುವಿರಿ. ಸಾರ್ವಜನಿಕ ಅಶಾಂತಿ ಉಂಟುಮಾಡಿದ ಮತ್ತೊಂದು ಪ್ರಕರಣದಲ್ಲಿ, ನ್ಯಾಯಾಲಯವು ಕೇವಲ 20 ದಿನಗಳಲ್ಲಿ ತೀರ್ಪು ನೀಡಿದೆ. ದೆಹಲಿಯಲ್ಲಿ, FIRನಿಂದ ಶಿಕ್ಷೆ ವಿಧಿಸುವವರೆಗೆ ಒಂದು ಪ್ರಕರಣ ಕೇವಲ 60 ದಿನಗಳನ್ನು ತೆಗೆದುಕೊಂಡಿತು, ಆರೋಪಿಗೆ 20 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಅದೇ ರೀತಿ, ಬಿಹಾರದ ಛಪ್ರಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ, FIRನಿಂದ ತೀರ್ಪಿನವರೆಗೆ ಇಡೀ ಪ್ರಕ್ರಿಯೆ ಕೇವಲ 14 ದಿನಗಳನ್ನು ತೆಗೆದುಕೊಂಡಿತು, ಪರಿಣಾಮವಾಗಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಈ ತೀರ್ಪುಗಳು ಭಾರತೀಯ ನ್ಯಾಯ ಸಂಹಿತೆಯ ಬಲ ಮತ್ತು ಪರಿಣಾಮವನ್ನು ತೋರಿಸುತ್ತವೆ. ಸರ್ಕಾರವು ಸಾಮಾನ್ಯ ನಾಗರಿಕರ ಕಲ್ಯಾಣಕ್ಕೆ ಮೀಸಲಾಗಿರುವಾಗ ಮತ್ತು ಜನರ ಕುಂದುಕೊರತೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸುವಾಗ, ಬದಲಾವಣೆ ಸಂಭವಿಸುತ್ತದೆ ಮತ್ತು ಫಲಿತಾಂಶಗಳು ಅನುಸರಿಸುತ್ತವೆ ಎಂದು ಈ ಬದಲಾವಣೆಗಳು ಸಹ ತೋರಿಸುತ್ತವೆ. ನ್ಯಾಯ ಪಡೆಯುವ ತಮ್ಮ ಶಕ್ತಿ ಎಷ್ಟು ಬೆಳೆದಿದೆ ಎಂದು ಪ್ರತಿಯೊಬ್ಬ ನಾಗರಿಕರಿಗೂ ತಿಳಿಯುವಂತೆ ಈ ತೀರ್ಪುಗಳನ್ನು ರಾಷ್ಟ್ರಾದ್ಯಂತ ವ್ಯಾಪಕವಾಗಿ ಚರ್ಚಿಸಬೇಕೆಂದು ನಾನು ಬಯಸುತ್ತೇನೆ. ಅಂತ್ಯವಿಲ್ಲದ ವಿಳಂಬದ ದಿನಗಳು ಮುಗಿದಿವೆ ಎಂಬ ಸ್ಪಷ್ಟ ಸಂದೇಶವನ್ನು ಇದು ಅಪರಾಧಿಗಳಿಗೆ ಕಳುಹಿಸುತ್ತದೆ.
ಸ್ನೇಹಿತರೇ,
ನಿಯಮಗಳು ಮತ್ತು ಕಾನೂನುಗಳು ತಮ್ಮ ಕಾಲಕ್ಕೆ ಹೊಂದಿಕೊಂಡಾಗ ಮಾತ್ರ ಪರಿಣಾಮಕಾರಿಯಾಗುತ್ತವೆ. ಜಗತ್ತು ವೇಗವಾಗಿ ಬದಲಾಗುತ್ತಿದೆ ಮತ್ತು ಅಪರಾಧ ಮತ್ತು ಅಪರಾಧಿಗಳ ವಿಧಾನಗಳೂ ಸಹ ಬದಲಾಗುತ್ತಿವೆ. 19ನೇ ಶತಮಾನದಲ್ಲಿ ಬೇರೂರಿರುವ ಒಂದು ವ್ಯವಸ್ಥೆಯು ಇಂದಿನ ಜಗತ್ತಿನಲ್ಲಿ ಹೇಗೆ ಪ್ರಾಯೋಗಿಕವಾಗಿ ಉಳಿಯಬಹುದು? ಅದಕ್ಕಾಗಿಯೇ ನಾವು ಈ ಕಾನೂನುಗಳನ್ನು ಹೆಚ್ಚು ಭಾರತೀಯವಾಗಿಸಿದ್ದು ಮಾತ್ರವಲ್ಲದೆ ಅವುಗಳನ್ನು ಆಧುನೀಕರಿಸಿದ್ದೇವೆ. ಉದಾಹರಣೆಗೆ, ಡಿಜಿಟಲ್ ಸಾಕ್ಷ್ಯವನ್ನು ಈಗ ನಿರ್ಣಾಯಕ ಪುರಾವೆಯಾಗಿ ಪರಿಗಣಿಸಲಾಗುತ್ತಿದೆ ಎಂದು ನಾವು ನೋಡಿದ್ದೇವೆ. ಸಾಕ್ಷ್ಯ ಸಂಗ್ರಹಣೆಯ ಪ್ರಕ್ರಿಯೆಯನ್ನು ಈಗ ಕಡ್ಡಾಯವಾಗಿ ವಿಡಿಯೋಗ್ರಫಿ ಮಾಡಲಾಗುತ್ತದೆ ಇದರಿಂದ ಅದು ಟ್ಯಾಂಪರ್-ಪ್ರೂಫ್ ಆಗಿರುತ್ತದೆ. ಈ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು, eSakshya, Nyaya Shruti, Nyaya Setu ಮತ್ತು e-Summon ಪೋರ್ಟಲ್ ನಂತಹ ಪರಿಕರಗಳನ್ನು ಅಭಿವೃದ್ಧಿಪಡಿಸಲಾಗಿದೆ. ನ್ಯಾಯಾಲಯಗಳು ಮತ್ತು ಪೊಲೀಸರು ಈಗ ನೇರವಾಗಿ ವಿದ್ಯುನ್ಮಾನವಾಗಿ ಸಮನ್ಸ್ ಗಳನ್ನು ನೀಡಬಹುದು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಆಡಿಯೋ-ವಿಡಿಯೋ ರೆಕಾರ್ಡ್ ಮಾಡಬಹುದು. ಡಿಜಿಟಲ್ ಸಾಕ್ಷ್ಯಗಳು ನ್ಯಾಯಾಲಯದಲ್ಲಿ ಸ್ವೀಕಾರಾರ್ಹವಾಗಿರುತ್ತವೆ ಮತ್ತು ನ್ಯಾಯಕ್ಕೆ ಆಧಾರವಾಗಿ ಕಾರ್ಯನಿರ್ವಹಿಸುತ್ತವೆ. ಕಳ್ಳತನ ಪ್ರಕರಣಗಳಲ್ಲಿ ಫಿಂಗರ್‌ಪ್ರಿಂಟ್‌ಗಳನ್ನು ಹೊಂದಿಸುವುದು, ಅತ್ಯಾಚಾರ ಪ್ರಕರಣಗಳಲ್ಲಿ ಡಿಎನ್‌ಎ ಮಾದರಿಗಳನ್ನು ಹೊಂದಿಸುವುದು ಅಥವಾ ಕೊಲೆ ಪ್ರಕರಣಗಳಲ್ಲಿ ಆರೋಪಿಯಿಂದ ವಶಪಡಿಸಿಕೊಂಡ ಬಂದೂಕಿನೊಂದಿಗೆ ಬಲಿಪಶುವಿನಿಂದ ಪಡೆದ ಗುಂಡನ್ನು ಹೋಲಿಸುವುದು ಇದಕ್ಕೆ ಉದಾಹರಣೆಗಳಾಗಿವೆ. ಇವುಗಳು, ವೀಡಿಯೊ ಪುರಾವೆಗಳೊಂದಿಗೆ, ಈಗ ಒಂದು ದೃಢವಾದ ಕಾನೂನು ಆಧಾರವನ್ನು ರೂಪಿಸುತ್ತವೆ.
ಸ್ನೇಹಿತರೇ,
ಇದು ಅಪರಾಧಿಗಳನ್ನು ಹಿಡಿಯುವಲ್ಲಿ ಅನಗತ್ಯ ವಿಳಂಬವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಈ ಬದಲಾವಣೆಗಳು ರಾಷ್ಟ್ರೀಯ ಭದ್ರತೆಗೆ ಅಷ್ಟೇ ಮಹತ್ವದ್ದಾಗಿವೆ. ಡಿಜಿಟಲ್ ಪುರಾವೆಗಳು ಮತ್ತು ತಂತ್ರಜ್ಞಾನದ ಏಕೀಕರಣವು ಭಯೋತ್ಪಾದನೆಯ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಲು ನಮಗೆ ಸಹಾಯ ಮಾಡುತ್ತದೆ. ಹೊಸ ಕಾನೂನುಗಳು ಈಗ ಭಯೋತ್ಪಾದಕರು ಅಥವಾ ಭಯೋತ್ಪಾದಕ ಸಂಘಟನೆಗಳು ತಮ್ಮ ಅನುಕೂಲಕ್ಕಾಗಿ ಕಾನೂನು ಸಂಕೀರ್ಣತೆಗಳನ್ನು ಬಳಸಿಕೊಳ್ಳುವುದನ್ನು ತಡೆಯುತ್ತವೆ.
ಸ್ನೇಹಿತರೇ,
ಹೊಸ ಭಾರತೀಯ ನ್ಯಾಯ ಸಂಹಿತೆ ಮತ್ತು ನಾಗರಿಕ ಸುರಕ್ಷಾ ಸಂಹಿತೆಗಳು ಪ್ರತಿಯೊಂದು ಇಲಾಖೆಯ ಉತ್ಪಾದಕತೆಯನ್ನು ಹೆಚ್ಚಿಸುತ್ತವೆ ಮತ್ತು ದೇಶದ ಪ್ರಗತಿಯನ್ನು ವೇಗಗೊಳಿಸುತ್ತವೆ. ಹಿಂದೆ ಭ್ರಷ್ಟಾಚಾರಕ್ಕೆ ಇಂಬು ನೀಡುತ್ತಿದ್ದ ಕಾನೂನು ತೊಡಕುಗಳನ್ನು ಈಗ ಕಡಿಮೆ ಮಾಡಲಾಗುತ್ತದೆ. ಹಿಂದೆ, ಅನೇಕ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದರು ಏಕೆಂದರೆ ಅವರು ವರ್ಷಗಳ ಕಾಲ ಕಾನೂನು ಹೋರಾಟಗಳಲ್ಲಿ ಸಿಲುಕಿಕೊಳ್ಳುವ ಭಯದಲ್ಲಿದ್ದರು. ಈ ಭಯಗಳು ನಿವಾರಣೆಯಾದರೆ, ಹೂಡಿಕೆ ಹೆಚ್ಚಾಗುತ್ತದೆ, ರಾಷ್ಟ್ರದ ಆರ್ಥಿಕತೆಯನ್ನು ಬಲಪಡಿಸುತ್ತದೆ.
ಸ್ನೇಹಿತರೇ,
ದೇಶದ ಕಾನೂನು ಪ್ರಜೆಗಳಿಗಾಗಿರುತ್ತದೆ. ಆದ್ದರಿಂದ, ಕಾನೂನು ಪ್ರಕ್ರಿಯೆಗಳು ಸಹ ನಾಗರಿಕ ಸ್ನೇಹಿಯಾಗಿರಬೇಕು. ಆದಾಗ್ಯೂ, ಹಳೆಯ ವ್ಯವಸ್ಥೆಯ ಅಡಿಯಲ್ಲಿ, ಈ ಪ್ರಕ್ರಿಯೆಯೇ ಶಿಕ್ಷೆಯಾಯಿತು. ಆರೋಗ್ಯಕರ ಸಮಾಜದಲ್ಲಿ, ಕಾನೂನುಗಳು ಜನರನ್ನು ಸಬಲೀಕರಣಗೊಳಿಸಬೇಕು. ಆದರೂ, ಐಪಿಸಿಯ ಅಡಿಯಲ್ಲಿ, ಕಾನೂನಿನ ಭಯವು ಏಕೈಕ ಮಾರ್ಗವಾಗಿತ್ತು-ಇದು ಅಪರಾಧಿಗಳಿಗಿಂತ ಹೆಚ್ಚಾಗಿ ಪ್ರಾಮಾಣಿಕ ಜನರನ್ನು ಬೆದರಿಸುತ್ತಿತ್ತು. ಉದಾಹರಣೆಗೆ, ಜನರು ರಸ್ತೆಯ ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡಲು ಹಿಂಜರಿಯುತ್ತಿದ್ದರು, ಅವರು ಕಾನೂನು ತೊಡಕುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬ ಭಯದಿಂದ. ಈಗ, ಸಹಾಯ ಮಾಡುವವರು ಅಂತಹ ತೊಂದರೆಗಳಿಂದ ಮುಕ್ತರಾಗಿದ್ದಾರೆ. ಅಂತೆಯೇ, ನಾವು ಬ್ರಿಟಿಷರ ಕಾಲದಿಂದ 1,500ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ರದ್ದುಗೊಳಿಸಿದ್ದೇವೆ. ಈ ಕಾನೂನುಗಳನ್ನು ರದ್ದುಗೊಳಿಸುವಾಗ, ನಾವು ಯಾವ ರೀತಿಯ ಕಾನೂನುಗಳ ಹೊರೆಯನ್ನು ಹೊತ್ತಿದ್ದೇವೆ ಎಂದು ತಿಳಿದು ಆಘಾತಕ್ಕೊಳಗಾದರು.
ಸ್ನೇಹಿತರೇ,
ಕಾನೂನು ನಾಗರಿಕರನ್ನು ಸಬಲೀಕರಣಗೊಳಿಸಬೇಕಾದರೆ, ನಾವು ನಮ್ಮ ದೃಷ್ಟಿಕೋನವನ್ನು ವಿಸ್ತರಿಸಬೇಕಾಗಿದೆ. ನಾನು ಇದನ್ನು ಏಕೆ ಒತ್ತಿ ಹೇಳುತ್ತಿದ್ದೇನೆಂದರೆ, ಕೆಲವು ಕಾನೂನುಗಳು ಗಮನಾರ್ಹ ಗಮನವನ್ನು ಪಡೆಯುತ್ತವೆ – ಅವು ಪಡೆಯಬೇಕು – ಆದರೆ ಸಮಾನವಾಗಿ ಮುಖ್ಯವಾದ ಇತರ ಕಾನೂನುಗಳನ್ನು ಕಡೆಗಣಿಸಲಾಗುತ್ತದೆ. ಉದಾಹರಣೆಗೆ, ವಿಧಿ 370 ರದ್ದತಿ, ತ್ರಿವಳಿ ತಲಾಖ್ ವಿರುದ್ಧದ ಕಾನೂನು ಮತ್ತು ಇತ್ತೀಚೆಗೆ ವಕ್ಫ್ ಬೋರ್ಡ್ ಕಾನೂನುಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಿತು. ಆದರೆ ನಾವು ನಾಗರಿಕರ ಘನತೆ ಮತ್ತು ಹೆಮ್ಮೆಯನ್ನು ಹೆಚ್ಚಿಸುವ ಕಾನೂನುಗಳಿಗೆ ಸಮಾನವಾಗಿ ಒತ್ತು ನೀಡಬೇಕು. ಉದಾಹರಣೆಗೆ, ಇಂದು ಅಂತರರಾಷ್ಟ್ರೀಯ ದಿವ್ಯಾಂಗ ದಿನ (Persons with Disabilities). ದಿವ್ಯಾಂಗರು ನಮ್ಮ ಕುಟುಂಬದ ಸದಸ್ಯರು. ಆದರೆ ಹಳೆಯ ಕಾನೂನುಗಳಲ್ಲಿ, ದಿವ್ಯಾಂಗರನ್ನು ತುಂಬಾ ಅಗೌರವದ ರೀತಿಯಲ್ಲಿ ವರ್ಗೀಕರಿಸಲಾಗಿದೆ, ಯಾವುದೇ ನಾಗರಿಕ ಸಮಾಜವು ಸ್ವೀಕರಿಸಲಾಗದ ಪದಗಳನ್ನು ಬಳಸಲಾಗಿದೆ. ಈ ಗುಂಪನ್ನು ಮೊದಲು ದಿವ್ಯಾಂಗ ಎಂದು ಉಲ್ಲೇಖಿಸಲು ಪ್ರಾರಂಭಿಸಿದವರು ನಾವು, ಅವರನ್ನು ಅವಮಾನಕಾರಿ ಪದಗಳ ಕಳಂಕದಿಂದ ಮುಕ್ತಗೊಳಿಸಿದ್ದೇವೆ. 2016 ರಲ್ಲಿ, ನಾವು ದಿವ್ಯಾಂಗರ ಹಕ್ಕುಗಳ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಇದು ದಿವ್ಯಾಂಗರಿಗೆ ಒಂದು ಕಾನೂನು ಮಾತ್ರವಲ್ಲ, ಸಮಾಜವನ್ನು ಹೆಚ್ಚು ಕರುಣಾಮಯಿ ಮತ್ತು ಒಳಗೊಳ್ಳುವಂತೆ ಮಾಡುವ ಒಂದು ಚಳುವಳಿಯಾಗಿದೆ. ನಾರಿ ಶಕ್ತಿ ವಂದನ ಅಧಿನಿಯಮವು ಈಗ ಗಮನಾರ್ಹ ಸಾಮಾಜಿಕ ಪರಿವರ್ತನೆಗೆ ಅಡಿಪಾಯ ಹಾಕುತ್ತಿದೆ. ಅದೇ ರೀತಿ, ಟ್ರಾನ್ಸ್ ಜೆಂಡರ್ ಹಕ್ಕುಗಳ ಕುರಿತ ಕಾನೂನುಗಳು, ಮಧ್ಯಸ್ಥಿಕೆ ಕಾಯ್ದೆ ಮತ್ತು GST ಕಾಯ್ದೆ ಹೆಚ್ಚು ಧನಾತ್ಮಕ ಮತ್ತು ವ್ಯಾಪಕ ಚರ್ಚೆಗೆ ಅರ್ಹವಾದ ಅನೇಕ ಪರಿವರ್ತಕ ಶಾಸನಗಳ ಕೆಲವು ಉದಾಹರಣೆಗಳಾಗಿವೆ.
ಸ್ನೇಹಿತರೇ,
ರಾಷ್ಟ್ರದ ಬಲವು ಅದರ ನಾಗರಿಕರಲ್ಲಿ ಇರುತ್ತದೆ ಮತ್ತು ನಾಗರಿಕರ ಬಲವು ಕಾನೂನಿನಲ್ಲಿ ಇರುತ್ತದೆ. ಅದಕ್ಕಾಗಿಯೇ ಜನರು ಹೆಮ್ಮೆಯಿಂದ, “ನಾನು ಕಾನೂನು ಪಾಲಿಸುವ ನಾಗರಿಕ” ಎಂದು ಹೇಳುತ್ತಾರೆ. ಕಾನೂನಿಗೆ ಈ ಬದ್ಧತೆಯು ಒಂದು ದೊಡ್ಡ ರಾಷ್ಟ್ರೀಯ ಆಸ್ತಿಯಾಗಿದೆ. ಕಾನೂನಿನ ಮೇಲಿನ ಈ ವಿಶ್ವಾಸವು ಹಾಗೇ ಉಳಿಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಪ್ರತಿ ಇಲಾಖೆ, ಏಜೆನ್ಸಿ, ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ಹೊಸ ನಿಬಂಧನೆಗಳನ್ನು ಮತ್ತು ಅವುಗಳ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಕೋರುತ್ತೇನೆ. ಭಾರತೀಯ ನ್ಯಾಯ ಸಂಹಿತೆ ಮತ್ತು ನಾಗರಿಕ ಸುರಕ್ಷಾ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಕ್ರಿಯವಾಗಿ ಕೆಲಸ ಮಾಡುವಂತೆ ನಾನು ವಿಶೇಷವಾಗಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತೇನೆ. ಇದರಿಂದಾಗಿ ಅವುಗಳ ಪರಿಣಾಮವು ನೆಲದ ಮೇಲೆ ಗೋಚರಿಸುತ್ತದೆ. ಈ ಹೊಸ ಕಾನೂನುಗಳ ಅಡಿಯಲ್ಲಿ ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ಚೆನ್ನಾಗಿ ತಿಳಿದಿರಬೇಕು ಎಂದು ನಾನು ಮತ್ತೊಮ್ಮೆ ಒತ್ತಿ ಹೇಳುತ್ತೇನೆ. ಈ ನಿಟ್ಟಿನಲ್ಲಿ ನಾವು ಸಾಮೂಹಿಕ ಪ್ರಯತ್ನಗಳನ್ನು ಮಾಡಬೇಕು. ಈ ಕಾನೂನುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತಂದರೆ, ನಮ್ಮ ಭವಿಷ್ಯವು ಪ್ರಕಾಶಮಾನವಾಗಿರುತ್ತದೆ. ಈ ಭವಿಷ್ಯವು ನಿಮ್ಮ ಜೀವನವನ್ನು ಮಾತ್ರವಲ್ಲದೆ ನಿಮ್ಮ ಮಕ್ಕಳ ಜೀವನವನ್ನೂ ರೂಪಿಸುತ್ತದೆ. ನಿಮ್ಮ ಸೇವೆಯ ತೃಪ್ತಿ ಮತ್ತು ಒಟ್ಟಾರೆ ಅನುಭವವನ್ನು ನಿರ್ಧರಿಸುತ್ತದೆ. ಒಟ್ಟಾಗಿ, ನಾವು ಈ ದಿಕ್ಕಿನಲ್ಲಿ ಕೆಲಸ ಮಾಡುತ್ತೇವೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಪಾತ್ರವನ್ನು ಬಲಪಡಿಸುತ್ತೇವೆ ಎಂದು ನಾನು ದೃಢವಾಗಿ ನಂಬುತ್ತೇನೆ. ಇದರೊಂದಿಗೆ, ಭಾರತೀಯ ನ್ಯಾಯ ಸಂಹಿತೆ ಮತ್ತು ನಾಗರಿಕ ಸುರಕ್ಷಾ ಸಂಹಿತೆಯನ್ನು ಅಂಗೀಕರಿಸಿದ ನಿಮ್ಮೆಲ್ಲರಿಗೂ ಮತ್ತು ದೇಶದ ಎಲ್ಲಾ ನಾಗರಿಕರಿಗೆ ನಾನು ಮತ್ತೊಮ್ಮೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಚಂಡೀಗಢದ ರೋಮಾಂಚಕ ವಾತಾವರಣಕ್ಕೆ, ನಿಮ್ಮ ಪ್ರೀತಿಗೆ ಮತ್ತು ನಿಮ್ಮ ಉತ್ಸಾಹಕ್ಕೆ ವಂದಿಸುತ್ತೇನೆ.
ಧನ್ಯವಾದಗಳು!
Addressing a programme marking the successful implementation of the three new criminal laws. It signifies the end of colonial-era laws. https://t.co/etzg5xLNgf
— Narendra Modi (@narendramodi) December 3, 2024
The new criminal laws strengthen the spirit of - "of the people, by the people, for the people," which forms the foundation of democracy. pic.twitter.com/voOeaWd3Wg
— PMO India (@PMOIndia) December 3, 2024
Nyaya Sanhita is woven with the ideals of equality, harmony and social justice. pic.twitter.com/XDu0Qa6Scq
— PMO India (@PMOIndia) December 3, 2024
The mantra of the Bharatiya Nyaya Sanhita is - Citizen First. pic.twitter.com/RJPTypK8mo
— PMO India (@PMOIndia) December 3, 2024