Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮುಂಬೈನಲ್ಲಿ ಆರ್‌ಬಿಐ@90 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ಮಹಾರಾಷ್ಟ್ರ ರಾಜ್ಯಪಾಲರಾದ ಶ್ರೀ ರಮೇಶ್ ಬೈಸ್ ಜಿ, ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಜಿ, ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ನಿರ್ಮಲಾ ಸೀತಾರಾಮನ್ ಜಿ, ಭಾಗವತ್ ಕರದ್ ಜಿ ಮತ್ತು ಪಂಕಜ್ ಚೌಧರಿ ಜಿ, ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಜಿ ಮತ್ತು ಅಜಿತ್ (ಪವಾರ್) ಜಿ, ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್, ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು, ಇತರೆ ಗಣ್ಯರು, ಮಹಿಳೆಯರು ಮತ್ತು ಮಹನೀಯರೆ,

ಇಂದು ಭಾರತೀಯ ರಿಸರ್ವ್ ಬ್ಯಾಂಕ್ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) 90 ವರ್ಷ ಪೂರೈಸಿದೆ. ಒಂದು ಸಂಸ್ಥೆಯಾಗಿ, ಆರ್‌ಬಿಐ ಸ್ವಾತಂತ್ರ್ಯಾಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ಯುಗಗಳೆರಡಕ್ಕೂ ಜ್ವಲಂತ ಸಾಕ್ಷಿಯಾಗಿದೆ. ಇಂದು ಆರ್‌ಬಿಐ ಹೊಂದಿರುವ ವಿಶ್ವಾದ್ಯಂತ ಮಾನ್ಯತೆ ಅದರ ವೃತ್ತಿಪರತೆ ಮತ್ತು ಬದ್ಧತೆಗೆ ಕಾರಣವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಯಾಗಿ 90 ವರ್ಷಗಳನ್ನು ಪೂರೈಸಿದ ಎಲ್ಲಾ ಉದ್ಯೋಗಿಗಳು ಮತ್ತು ಅಧಿಕಾರಿಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಇದಲ್ಲದೆ, ಈ ಸಮಯದಲ್ಲಿ ಆರ್‌ಬಿಐ ಜೊತೆ ಸಂಬಂಧ ಹೊಂದಿರುವವರು ತುಂಬಾ ಅದೃಷ್ಟವಂತರು ಎಂದು ನಾನು ನಂಬುತ್ತೇನೆ. ಇಂದು ನೀವು ರೂಪಿಸುವ ಉತ್ತಮ ನೀತಿಗಳು, ನೀವು ಮಾಡುವ ಕೆಲಸಗಳು ಮುಂದಿನ ದಶಕದಲ್ಲಿ ಆರ್‌ಬಿಐನ ಹೊಸ ದಿಕ್ಕನ್ನು ನಿರ್ಧರಿಸುತ್ತವೆ. ಈ ದಶಕವು ಈ ಸಂಸ್ಥೆಯನ್ನು ಶತಮಾನೋತ್ಸವ ವರ್ಷಕ್ಕೆ ಕೊಂಡೊಯ್ಯುತ್ತದೆ. ಈ ದಶಕವು ‘ವಿಕ್ಷಿತ ಭಾರತ’ದ ‘ಸಂಕಲ್ಪ ಯಾತ್ರೆ’ಗೂ ಅಷ್ಟೇ ನಿರ್ಣಾಯಕವಾಗಿದೆ. ಅದಕ್ಕಾಗಿ, ನಿಮ್ಮ ಮಂತ್ರವೇ ಸೂಚಿಸುವಂತೆ – ಆರ್‌ಬಿಐನ ಕ್ಷಿಪ್ರ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುವಾಗ, ನಂಬಿಕೆ ಮತ್ತು ಸ್ಥಿರತೆಯ ಮೇಲೆ ಗಮನ ಕೇಂದ್ರೀಕರಿಸುವುದು ಅಷ್ಟೇ ಮುಖ್ಯ. ಅದರ ಉದ್ದೇಶಗಳು ಮತ್ತು ನಿರ್ಣಯಗಳಿಗಾಗಿ ನಾನು ಆರ್‌ಬಿಐಗೆ ಶುಭ ಹಾರೈಸುತ್ತೇನೆ.

ಸ್ನೇಹಿತರೆ,

ನೀವು ಆಯಾ ಕ್ಷೇತ್ರಗಳಲ್ಲಿ ಪರಿಣಿತರು. ದೇಶದ ಆರ್ಥಿಕತೆ ಮತ್ತು ಜಿಡಿಪಿ ಬೆಳವಣಿಗೆಯು ಹೆಚ್ಚಾಗಿ ವಿತ್ತೀಯ ಮತ್ತು ಹಣಕಾಸಿನ ನೀತಿಗಳ ಸಮನ್ವಯವನ್ನು ಅವಲಂಬಿಸಿರುತ್ತದೆ ಎಂಬುದು ನಿಮಗೂ ತಿಳಿದಿದೆ. 2014ರಲ್ಲಿ ರಿಸರ್ವ್ ಬ್ಯಾಂಕಿನ 80ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದಾಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. ಭಾರತದ ಸಂಪೂರ್ಣ ಬ್ಯಾಂಕಿಂಗ್ ವಲಯವು ಸಮಸ್ಯೆಗಳು ಮತ್ತು ಸವಾಲುಗಳೊಂದಿಗೆ ಸೆಟೆದುಕೊಂಡಿತ್ತು. ಭಾರತ್‌ನ ಬ್ಯಾಂಕಿಂಗ್ ವ್ಯವಸ್ಥೆಯ ಸ್ಥಿರತೆ ಮತ್ತು ಅದರ ಭವಿಷ್ಯದ ಬಗ್ಗೆ ವಿಶೇಷವಾಗಿ ಅನುತ್ಪಾದಕ ಆಸ್ತಿಗಳ(ಎನ್ ಪಿಎ) ಬಗ್ಗೆ ಕಳವಳಗಳು ವ್ಯಾಪಕವಾಗಿದ್ದವು. ದೇಶದ ಆರ್ಥಿಕ ಪ್ರಗತಿಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಗಣನೀಯ ಕೊಡುಗೆ ನೀಡಲು ಸಾಧ್ಯವಾಗದೆ ಪರಿಸ್ಥಿತಿ ಅಷ್ಟು ಭೀಕರವಾಗಿತ್ತು. ನಾವೆಲ್ಲ ಅಲ್ಲಿಂದ ಶುರು ಮಾಡಿದೆವು. ಈಗ ನೋಡಿ, ಇಂದು ಭಾರತ್‌ನ ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿಶ್ವದ ಪ್ರಬಲ ಮತ್ತು ಸುಸ್ಥಿರ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಒಂದು ಕಾಲದಲ್ಲಿ ಮುಳುಗಡೆಯ ಅಂಚಿನಲ್ಲಿದ್ದ ಬ್ಯಾಂಕಿಂಗ್ ವ್ಯವಸ್ಥೆ ಈಗ ಲಾಭ ಗಳಿಸುತ್ತಿದೆ ಮತ್ತು ಸಾಲ ನೀಡಿಕೆಯಲ್ಲಿ ದಾಖಲೆಯ ಬೆಳವಣಿಗೆಯನ್ನು ತೋರಿಸುತ್ತಿದೆ.

ಸ್ನೇಹಿತರೆ,

ಕೇವಲ 10 ವರ್ಷಗಳಲ್ಲಿ ಅಂತಹ ಮಹತ್ವದ ಬದಲಾವಣೆಯು ಸುಲಭವಾಗಿರಲಿಲ್ಲ ಎಂಬುದು ನಿಮಗೂ ತಿಳಿದಿದೆ. ನಮ್ಮ ನೀತಿಗಳು, ಉದ್ದೇಶಗಳು ಮತ್ತು ನಿರ್ಧಾರಗಳಲ್ಲಿ ಸ್ಪಷ್ಟತೆ ಇದ್ದ ಕಾರಣ ಈ ಬದಲಾವಣೆಯಾಗಿದೆ. ನಮ್ಮ ಪ್ರಯತ್ನದಲ್ಲಿ ದೃಢತೆ ಮತ್ತು ಪ್ರಾಮಾಣಿಕತೆ ಇದ್ದ ಕಾರಣ ಈ ಬದಲಾವಣೆ ಬಂದಿದೆ. ಉದ್ದೇಶ ಸರಿ ಇದ್ದಾಗ ನೀತಿಗಳೂ ಸರಿ ಎಂಬುದಕ್ಕೆ ಇಂದು ಇಡೀ ದೇಶವೇ ಸಾಕ್ಷಿಯಾಗುತ್ತಿದೆ. ನೀತಿಗಳು ಸರಿಯಾಗಿದ್ದರೆ ನಿರ್ಧಾರಗಳೂ ಸರಿ. ನಿರ್ಧಾರಗಳು ಸರಿಯಾಗಿದ್ದಾಗ, ಫಲಿತಾಂಶಗಳು ಸಹ ಸರಿಯಾಗಿವೆ. ಸಂಕ್ಷಿಪ್ತವಾಗಿ, ನಾನು ಹೇಳಲು ಬಯಸುವುದೇನೆಂದರೆ – ಉದ್ದೇಶಗಳು ಸರಿಯಾಗಿದ್ದಾಗ, ಫಲಿತಾಂಶಗಳು ಸಹಜವಾಗಿ ಸರಿಯಾಗುತ್ತವೆ.

ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ಹೇಗೆ ರೂಪಾಂತರಗೊಂಡಿದೆ ಎಂಬುದು ಸ್ವತಃ ಅಧ್ಯಯನದ ವಿಷಯವಾಗಿದೆ. ಯಾವುದೇ ಯಾವುದೇ ಪ್ರಯತ್ನ ಮಾಡದೆ ಬಿಡಲಿಲ್ಲ. ನಮ್ಮ ಸರ್ಕಾರವು ‘ಮನ್ನಣೆ’, ‘ನಿರ್ಣಯ’ ಮತ್ತು ‘ಮರು ಬಂಡವಾಳೀಕರಣ’ ನೀತಿಯ ಮೇಲೆ ಕೆಲಸ ಮಾಡಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಸ್ಥಿತಿಯನ್ನು ಸುಧಾರಿಸಲು, ಸರ್ಕಾರವು ಸುಮಾರು 3.5 ಲಕ್ಷ ಕೋಟಿ ರೂಪಾಯಿ ಬಂಡವಾಳ ತುಂಬಿತು, ಹಲವಾರು ಆಡಳಿತ-ಸಂಬಂಧಿತ ಸುಧಾರಣೆಗಳನ್ನು ಜಾರಿಗೆ ತಂದಿತು. ದಿವಾಳಿತನ ಮತ್ತು ಋಣಭಾರ ಸಂಹಿತೆಯ ಹೊಸ ಚೌಕಟ್ಟಿ(ಮಾರ್ಗಸೂಚಿ)ನಿಂದಲೇ ಸುಮಾರು 3.25 ಲಕ್ಷ ಕೋಟಿ ರೂಪಾಯಿ ಸಾಲ ಪರಿಹರಿಸಲಾಗಿದೆ.

ನಾಗರಿಕರು ತಿಳಿದಿರಬೇಕಾದ ಒಂದಂಕಿ ಅಂಶವೆಂದರೆ, 9 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಡೀಫಾಲ್ಟ್‌(ಋಣಬಾಧೆ)ಗಳೊಂದಿಗೆ 27,000ಕ್ಕೂ ಹೆಚ್ಚು ಅರ್ಜಿಗಳನ್ನು ಐಬಿಸಿ ಪ್ರವೇಶಕ್ಕೆ ಮುಂಚೆಯೇ ಪರಿಹರಿಸಲಾಗಿದೆ. ಇದು ಈ ಹೊಸ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ತೋರಿಸುತ್ತದೆ. 2018ರಲ್ಲಿ ಸುಮಾರು 11% ರಷ್ಟಿದ್ದ ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿಯ ಪ್ರಮಾಣ(NPA) ಸೆಪ್ಟೆಂಬರ್ 2023ರ ವೇಳೆಗೆ 3%ಗಿಂತ ಕಡಿಮೆಯಾಗಿದೆ.

ಇಂದು ಅವಳಿ ಬ್ಯಾಲೆನ್ಸ್ ಶೀಟ್ ಸಮಸ್ಯೆ ಈಗ ಹಿಂದಿನ ಭಾಗವಾಗಿದೆ. ಇಂದು ಬ್ಯಾಂಕ್‌ಗಳ ಸಾಲದ ಬೆಳವಣಿಗೆಯು ಶೇಕಡ 15ಕ್ಕೆ ತಲುಪಿದೆ. ಈ ಎಲ್ಲಾ ಸಾಧನೆಗಳಲ್ಲಿ ಆರ್‌ಬಿಐ ಪಾಲುದಾರನಾಗಿ ಮಹತ್ವದ ಪಾತ್ರ ವಹಿಸಿದ್ದು, ಅದರ ಪ್ರಯತ್ನ ಶ್ಲಾಘನೀಯ.

ಸ್ನೇಹಿತರೆ,

ಆರ್‌ಬಿಐನಂತಹ ಸಂಸ್ಥೆಗಳ ಕುರಿತಾದ ಚರ್ಚೆಯು ಸಾಮಾನ್ಯವಾಗಿ ಹಣಕಾಸಿನ ವ್ಯಾಖ್ಯಾನಗಳು ಮತ್ತು ಸಂಕೀರ್ಣ ಪರಿಭಾಷೆಗಳಿಗೆ ಸೀಮಿತವಾಗಿರುತ್ತದೆ. ನಿಮ್ಮ ಕೆಲಸದ ಜಟಿಲತೆಗಳನ್ನು ಗಮನಿಸಿದರೆ ಇದು ಸಹಜ. ಆದಾಗ್ಯೂ, ನೀವು ಮಾಡುವ ಕೆಲಸವು ಸಾಮಾನ್ಯ ನಾಗರಿಕರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕಳೆದ 10 ವರ್ಷಗಳಲ್ಲಿ, ಕೇಂದ್ರೀಯ ಬ್ಯಾಂಕ್, ಬ್ಯಾಂಕಿಂಗ್ ವ್ಯವಸ್ಥೆ ಮತ್ತು ತಳಮಟ್ಟದ ಸಾಮಾನ್ಯ ವ್ಯಕ್ತಿಗಳ ನಡುವಿನ ಈ ಸಂಪರ್ಕವನ್ನು ನಾವು ಎತ್ತಿ ತೋರಿಸಿದ್ದೇವೆ. ಬಡವರಿಗೆ ಆರ್ಥಿಕ ಸೇರ್ಪಡೆ ಇಂದು ಗಮನಾರ್ಹ ಉದಾಹರಣೆಯಾಗಿದೆ. ನಾವು ದೇಶದಲ್ಲಿ 52 ಕೋಟಿ ಜನ್ ಧನ್ ಖಾತೆಗಳನ್ನು ಹೊಂದಿದ್ದೇವೆ, ಇವುಗಳಲ್ಲಿ 55%ಗಿಂತ  ಹೆಚ್ಚು ಖಾತೆಗಳು ಮಹಿಳೆಯರ ಹೆಸರಿನಲ್ಲಿವೆ. ಈ ಆರ್ಥಿಕ ಸೇರ್ಪಡೆಯ ಪರಿಣಾಮವನ್ನು ಕೃಷಿ ಮತ್ತು ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿಯೂ ಕಾಣಬಹುದು.

ಇಂದು 7 ಕೋಟಿಗೂ ಹೆಚ್ಚು ರೈತರು, ಮೀನುಗಾರರು ಮತ್ತು ಜಾನುವಾರು ಮಾಲೀಕರು ರೈತ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಇದು ನಮ್ಮ ಗ್ರಾಮೀಣ ಆರ್ಥಿಕತೆಗೆ ಗಮನಾರ್ಹ ಉತ್ತೇಜನ ನೀಡಿದೆ. ಕಳೆದ 10 ವರ್ಷಗಳಲ್ಲಿ ಸಹಕಾರಿ ಕ್ಷೇತ್ರವೂ ಪ್ರಮುಖ ಉತ್ತೇಜನ ಪಡೆದಿದೆ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಹಕಾರಿ ಸಂಸ್ಥೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ಇದು ರಿಸರ್ವ್ ಬ್ಯಾಂಕ್‌ಗೆ ನಿಯಂತ್ರಣ ಮತ್ತು ಮೇಲ್ವಿಚಾರಣೆಯ ಪ್ರಮುಖ ಕ್ಷೇತ್ರವಾಗಿದೆ. ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐI) ಈಗ ಜಾಗತಿಕವಾಗಿ ಗುರುತಿಸಲ್ಪಟ್ಟ ವೇದಿಕೆಯಾಗಿದೆ. ಇದು ಪ್ರತಿ ತಿಂಗಳು 1,200 ಕೋಟಿಗೂ ಹೆಚ್ಚು ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುತ್ತದೆ.

ಈಗ ನೀವು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯಲ್ಲಿ (ಸಿಬಿಡಿಸಿ) ಕೆಲಸ ಮಾಡುತ್ತಿದ್ದೀರಿ. ಇದು ಕಳೆದ 10 ವರ್ಷಗಳಲ್ಲಿ ಆಗಿರುವ ಪರಿವರ್ತನೆಯ ಸ್ನ್ಯಾಪ್‌ಶಾಟ್ ಆಗಿದೆ. ಒಂದು ದಶಕದೊಳಗೆ, ನಾವು ಸಂಪೂರ್ಣವಾಗಿ ಹೊಸ ಬ್ಯಾಂಕಿಂಗ್ ವ್ಯವಸ್ಥೆ, ಹೊಸ ಆರ್ಥಿಕತೆ ಮತ್ತು ಹೊಸ ಕರೆನ್ಸಿಯ ಅನುಭವ ಪಡೆಯುತ್ತಿದ್ದೇವೆ. ನಾನು ಮೊದಲೇ ಹೇಳಿದಂತೆ, ಕಳೆದ 10 ವರ್ಷಗಳಲ್ಲಿ ಏನಾಯಿತು ಎಂಬುದು ಕೇವಲ ಉದಾಹರಣೆ. ಇನ್ನೂ ಮಾಡಬೇಕಾದ್ದು ಬಹಳಷ್ಟಿದೆ, ನಾವು ದೇಶವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಬೇಕು.

ಸ್ನೇಹಿತರೆ,

ಮುಂದಿನ 10 ವರ್ಷಗಳವರೆಗೆ ನಾವು ಸ್ಪಷ್ಟ ಗುರಿಗಳನ್ನು ಹೊಂದಿದ್ದೇವೆ ಎಂಬುದು ನಿರ್ಣಾಯಕ. ಮುಂದಿನ ದಶಕದಲ್ಲಿ ಡಿಜಿಟಲ್ ವಹಿವಾಟಿನ ಸಾಧ್ಯತೆಗಳನ್ನು ವಿಸ್ತರಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಗದು ರಹಿತ ಆರ್ಥಿಕತೆಯೆಡೆಗಿನ ಬದಲಾವಣೆಯಿಂದ ಆಗುತ್ತಿರುವ ಪರಿವರ್ತನೆಗಳ ಮೇಲೂ ನಾವು ನಿಗಾ ಇಡಬೇಕಾಗಿದೆ. ಆರ್ಥಿಕ ಸೇರ್ಪಡೆ ಮತ್ತು ಸಬಲೀಕರಣದ ಪ್ರಯತ್ನಗಳನ್ನು ಮತ್ತಷ್ಟು ಸುಧಾರಿಸಲು ನಾವು ಶ್ರಮಿಸಬೇಕು.

ಸ್ನೇಹಿತರೆ,

ಅಂತಹ ದೊಡ್ಡ ಜನಸಂಖ್ಯೆಯ ಬ್ಯಾಂಕಿಂಗ್ ಅಗತ್ಯಗಳು ವಾಸ್ತವವಾಗಿ ವ್ಯಾಪಕವಾಗಿ ಬದಲಾಗಬಹುದು. ಕೆಲವು ಜನರು ಸಾಂಪ್ರದಾಯಿಕ ಭೌತಿಕ ಶಾಖೆಯ ಮಾದರಿಯನ್ನು ಬಯಸುತ್ತಾರೆ, ಆದರೆ ಉಳಿದವರು ಡಿಜಿಟಲ್ ಪಾವತಿ ಬಯಸುತ್ತಾರೆ. ಬ್ಯಾಂಕಿಂಗ್‌ನ ಸುಲಭತೆಯನ್ನು ಸುಧಾರಿಸುವ ಮತ್ತು ಪ್ರತಿಯೊಬ್ಬರ ಅಗತ್ಯಗಳಿಗೆ ಅನುಗುಣವಾಗಿ ಸಾಲ ಪ್ರವೇಶವನ್ನು ಒದಗಿಸುವ ನೀತಿಗಳನ್ನು ರೂಪಿಸುವುದು ಅತ್ಯಗತ್ಯ. ಡಿಜಿಟಲ್ ಪಾವತಿ ಮೂಲಸೌಕರ್ಯ(ಡಿಪಿಐ) ಕ್ಷೇತ್ರದಲ್ಲಿ ಭಾರತವನ್ನು ನಾಯಕನನ್ನಾಗಿ ಮಾಡಲು, ನಾವು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನವನ್ನು ನಿರಂತರವಾಗಿ ಬಳಸಿಕೊಳ್ಳುವ ಅಗತ್ಯವಿದೆ. ಭಾರತದ ಪ್ರಗತಿಯು ತ್ವರಿತ, ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರವಾದ ಕ್ರಮಗಳನ್ನು ಕೈಗೊಳ್ಳುವುದನ್ನು ರಿಸರ್ವ್ ಬ್ಯಾಂಕ್ ಸ್ಥಿರವಾಗಿ ಮುಂದುವರಿಸಬೇಕು. ನಿಯಂತ್ರಕ ಸಂಸ್ಥೆಯಾಗಿ ಆರ್‌ಬಿಐ, ಬ್ಯಾಂಕಿಂಗ್ ವಲಯದಲ್ಲಿ ನಿಯಮಾಧಾರಿತ ಶಿಸ್ತು ಮತ್ತು ಆರ್ಥಿಕವಾಗಿ ವಿವೇಕಯುತ ಅಭ್ಯಾಸಗಳನ್ನು ಖಾತ್ರಿಪಡಿಸಿದೆ.

ಆದಾಗ್ಯೂ, ಆರ್‌ಬಿಐ ವಿವಿಧ ವಲಯಗಳ ಭವಿಷ್ಯದ ಅಗತ್ಯಗಳನ್ನು ನಿರೀಕ್ಷಿಸುವುದು, ಮುಂಚಿತವಾಗಿ ತಯಾರಿ ಮಾಡುವುದು ಮತ್ತು ಬ್ಯಾಂಕುಗಳು ತಮ್ಮ ಅಗತ್ಯಗಳನ್ನು ನಿರ್ಣಯಿಸುವಾಗ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಉತ್ತೇಜಿಸುವುದು ಅತ್ಯಗತ್ಯ. ಸರ್ಕಾರ ನಿಮ್ಮೊಂದಿಗೆ ನಿಂತಿದೆ ಎಂದು ನಾನು ಭರವಸೆ ನೀಡುತ್ತೇನೆ. ಎರಡು-ಅಂಕಿಯ ಹಣದುಬ್ಬರದೊಂದಿಗೆ ವ್ಯವಹರಿಸುವುದು 10 ವರ್ಷಗಳ ಹಿಂದೆ ಹಣಕಾಸು ನೀತಿಗಳಲ್ಲಿ ಪ್ರತಿಬಿಂಬಿತವಾಗಿರಲಿಲ್ಲ ಎಂಬುದನ್ನು ನೀವು ನೆನಪಿಸಿಕೊಳ್ಳಬಹುದು. ಈ ಸವಾಲು ಎದುರಿಸಲು, ನಮ್ಮ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಹಣದುಬ್ಬರ ನಿಯಂತ್ರಣ ಗುರಿಯ ಜವಾಬ್ದಾರಿ ವಹಿಸಿದೆ. ಈ ಆದೇಶ ಪೂರೈಸುವಲ್ಲಿ ವಿತ್ತೀಯ ನೀತಿ ಸಮಿತಿಯು ಅತ್ಯುತ್ತಮವಾದ ಕೆಲಸ ಮಾಡಿದೆ. ಹೆಚ್ಚುವರಿಯಾಗಿ, ಸರ್ಕಾರವು ಸಕ್ರಿಯ ಬೆಲೆ ಮೇಲ್ವಿಚಾರಣೆ ಮತ್ತು ಹಣಕಾಸಿನ ಬಲವರ್ಧನೆಯಂತಹ ಕ್ರಮಗಳನ್ನು ತೆಗೆದುಕೊಂಡಿದೆ. ಆದ್ದರಿಂದ, ಕೋವಿಡ್ ಬಿಕ್ಕಟ್ಟು, ವಿವಿಧ ದೇಶಗಳಲ್ಲಿ ಯುದ್ಧದ ಸಂದರ್ಭಗಳು ಮತ್ತು ಉದ್ವಿಗ್ನತೆಯ ಹೊರತಾಗಿಯೂ, ಭಾರತದಲ್ಲಿ ಹಣದುಬ್ಬರವು ಮಧ್ಯಮ ಮಟ್ಟದಲ್ಲಿದೆ.

ಸ್ನೇಹಿತರೆ,

ಸ್ಪಷ್ಟ ಆದ್ಯತೆಗಳನ್ನು ಹೊಂದಿರುವ ದೇಶದ ಪ್ರಗತಿ ತಡೆಯಲು ಸಾಧ್ಯವಿಲ್ಲ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ನಾವು ಸಾಮಾನ್ಯ ನಾಗರಿಕರ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ, ಆರ್ಥಿಕ ವಿವೇಕಕ್ಕೆ ಆದ್ಯತೆ ನೀಡಿದ್ದೇವೆ. ಅದಕ್ಕಾಗಿಯೇ ಭಾರತದ ಬಡ ಮತ್ತು ಮಧ್ಯಮ ವರ್ಗದವರು ಈಗ ಬಿಕ್ಕಟ್ಟಿನ ನಡುವೆಯೂ ದೇಶದ ಆರ್ಥಿಕತೆಯನ್ನು ಮುನ್ನಡೆಸುತ್ತಿದ್ದಾರೆ. ವಿಶ್ವದ ಅನೇಕ ದೊಡ್ಡ ಆರ್ಥಿಕತೆಗಳು ಇನ್ನೂ ಆಘಾತದಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವಾಗ, ಭಾರತೀಯ ಆರ್ಥಿಕತೆಯು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಆರ್‌ಬಿಐ ಭಾರತ್‌ನ ಯಶಸ್ಸನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಹುದು.

ಹಣದುಬ್ಬರ ನಿಯಂತ್ರಣ ಮತ್ತು ಬೆಳವಣಿಗೆಯನ್ನು ಸಮತೋಲನಗೊಳಿಸುವುದು ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಒಂದು ಅನನ್ಯ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ಯಾವ ವಿತ್ತೀಯ ಸಾಧನಗಳನ್ನು ಬಳಸಬಹುದು ಎಂಬುದರ ಕುರಿತು ಯೋಚಿಸುವುದು ಅತ್ಯಗತ್ಯ. ಈ ವಿಧಾನಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಆರ್‌ಬಿಐ ಜಾಗತಿಕ ನಾಯಕತ್ವದ ಪಾತ್ರ ವಹಿಸುತ್ತದೆ. ನಾನು ಇದನ್ನು 10 ವರ್ಷಗಳ ಅನುಭವದ ಆಧಾರದ ಮೇಲೆ ಹೇಳುತ್ತೇನೆ. ಜಗತ್ತನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ಅರ್ಥ ಮಾಡಿಕೊಂಡ ನಂತರ. ಇದು ಇಡೀ ಜಾಗತಿಕ ದಕ್ಷಿಣಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ.

ಸ್ನೇಹಿತರೆ,

ಮುಂದಿನ 10 ವರ್ಷಗಳ ಗುರಿಗಳನ್ನು ಹೊಂದಿಸುವಾಗ, ನಾವು ಭಾರತದ ಯುವಕರ ಆಕಾಂಕ್ಷೆಗಳನ್ನು ಪರಿಗಣಿಸಬೇಕು. ಭಾರತವು ಇಂದು ವಿಶ್ವದ ಅತ್ಯಂತ ಹೆಚ್ಚಿನ ಯುವ ಸಮುದಾಯ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಯುವಕರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಆರ್‌ಬಿಐ ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ 10 ವರ್ಷಗಳಲ್ಲಿ, ಸರ್ಕಾರದ ನೀತಿಗಳಿಂದಾಗಿ ಹೊಸ ಕ್ಷೇತ್ರಗಳು ಹೊರಹೊಮ್ಮಿವೆ, ದೇಶದ ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತಿವೆ. ಇಂದು ಹಸಿರು ಇಂಧನದಂತಹ ಉದಯೋನ್ಮುಖ ವಲಯಗಳಲ್ಲಿ ವಿಸ್ತರಣೆಯನ್ನು ನಾವು ನೋಡಬಹುದು.

ಸರ್ಕಾರವು ಸೌರಶಕ್ತಿ ಮತ್ತು ಹಸಿರು ಜಲಜನಕದಂತಹ ಕ್ಷೇತ್ರಗಳನ್ನು ಉತ್ತೇಜಿಸುತ್ತಿದೆ. ದೇಶದಲ್ಲಿ ಎಥೆನಾಲ್ ಮಿಶ್ರಣದಲ್ಲಿ ಸ್ಥಿರವಾದ ಬೆಳವಣಿಗೆ ಕಂಡುಬಂದಿದೆ. ಭಾರತ್ ಡಿಜಿಟಲ್ ತಂತ್ರಜ್ಞಾನದಲ್ಲಿ ಜಾಗತಿಕ ಸರದಾರನಾಗಿ ಹೊರಹೊಮ್ಮಿದೆ. ಸ್ಥಳೀಯ 5ಜಿ ತಂತ್ರಜ್ಞಾನದ ಕಡೆಗೆ ಹೆಚ್ಚಿನ ಪ್ರಯತ್ನಗಳನ್ನು ಮಾಡಲಾಗಿದೆ. ಹೆಚ್ಚುವರಿಯಾಗಿ, ನಾವು ರಕ್ಷಣಾ ವಲಯದ ರಫ್ತುದಾರರಾಗಿ ಮಹತ್ವದ ಪಾತ್ರ ವಹಿಸುತ್ತಿದ್ದೇವೆ.

ಎಂಎಸ್‌ಎಂಇಗಳು ಭಾರತದ ಆರ್ಥಿಕತೆ ಮತ್ತು ಉತ್ಪಾದನಾ ವಲಯದ ಬೆನ್ನೆಲುಬಾಗಿವೆ. ಈ ಎಲ್ಲಾ ಕ್ಷೇತ್ರಗಳಿಗೆ ವಿವಿಧ ರೀತಿಯ ಹಣಕಾಸು ಅಗತ್ಯವಿರುತ್ತದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಎಂಎಸ್‌ಎಂಇಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆಯು ಈ ವಲಯಕ್ಕೆ ಗಮನಾರ್ಹವಾದ ಉತ್ತೇಜನ ನೀಡಿತು. ರಿಸರ್ವ್ ಬ್ಯಾಂಕ್ ಕೂಡ ಉದಾರ ನೀತಿಗಳ ಬಗ್ಗೆ ಯೋಚಿಸಬೇಕಾಗಿದೆ. ನಮ್ಮ ಆರ್‌ಬಿಐ ಗವರ್ನರ್ ಶಕ್ತಿಕಾಂತ ಜೀ ಅವರು ಉದಾರ ನೀತಿಗಳ ಬಗ್ಗೆ ಯೋಚಿಸುವುದರಲ್ಲಿ ಪರಿಣಿತರು ಎಂದು ನಾನು ನೋಡಿದ್ದೇನೆ. ಈ ಹೇಳಿಕೆಗೆ ಹೆಚ್ಚಿನ ಚಪ್ಪಾಳೆ ಬರುತ್ತಿರುವುದಕ್ಕೆ  ನನಗೆ ಸಂತೋಷವಾಗಿದೆ. ನಮ್ಮ ಯುವಕರು ಸಾಕಷ್ಟು ಸಾಲದ ಲಭ್ಯತೆಯನ್ನು, ವಿಶೇಷವಾಗಿ ಹೊಸ ಕ್ಷೇತ್ರಗಳಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.

ಸ್ನೇಹಿತರೆ,

21ನೇ ಶತಮಾನದಲ್ಲಿ ನಾವೀನ್ಯತೆ ಪ್ರಮುಖ ಪಾತ್ರ ವಹಿಸುತ್ತದೆ. ಆವಿಷ್ಕಾರದಲ್ಲಿ ಸರ್ಕಾರ ದಾಖಲೆಯ ಹೂಡಿಕೆ ಮಾಡುತ್ತಿದೆ. ನೀವು ನೋಡಿದಂತೆ ನಾವು ಇತ್ತೀಚಿನ ಮಧ್ಯಂತರ ಬಜೆಟ್‌ನಲ್ಲಿ ನಾವೀನ್ಯತೆಗಾಗಿ 1 ಲಕ್ಷ ಕೋಟಿ ರೂಪಾಯಿಗಳ ಸಂಶೋಧನಾ ನಿಧಿ ನಿಗದಿಪಡಿಸಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವವರನ್ನು ನಾವು ಹೇಗೆ ಸಿದ್ಧಪಡಿಸಬಹುದು ಎಂಬುದರ ಕುರಿತು ಯೋಚಿಸುವುದು ಅತ್ಯಗತ್ಯ. ಬರುವ ಪ್ರಸ್ತಾಪಗಳನ್ನು ಪರಿಗಣಿಸಿ, ಆರ್‌ಬಿಐ ಅವರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಯೋಚಿಸಲು ಪ್ರಾರಂಭಿಸಬೇಕು. ಅಂತಹ ವ್ಯಕ್ತಿಗಳನ್ನು ಗುರುತಿಸಿ ತಂಡಗಳನ್ನು ರಚಿಸಬೇಕಾಗಿದೆ. ನಾವು ಸಾಂಪ್ರದಾಯಿಕ ವ್ಯವಹಾರಗಳು ಮತ್ತು ಮುಂಬರುವ ವಿಷಯಗಳಲ್ಲಿ ಪರಿಣತಿಯನ್ನು ಬೆಳೆಸಿಕೊಳ್ಳಬೇಕು.

ಅಂತೆಯೇ, ಬಾಹ್ಯಾಕಾಶ ಕ್ಷೇತ್ರವು ತೆರೆದುಕೊಳ್ಳುತ್ತಿದೆ, ಹೊಸ ಸ್ಟಾರ್ಟಪ್‌ಗಳು ಹೊರಹೊಮ್ಮುತ್ತಿವೆ. ಸಾಲಕ್ಕೆ ಅವರಿಗೆ ಯಾವ ರೀತಿಯ ಬೆಂಬಲ ಬೇಕು ಎಂಬುದನ್ನು  ನೋಡಬೇಕು. ಅದೇ ರೀತಿ, ಭಾರತ್‌ನಲ್ಲಿ ಪೂರ್ಣ ಬಲದಿಂದ ಹೊರಹೊಮ್ಮುತ್ತಿರುವ ಬೃಹತ್ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರವೂ ಒಂದು. ಪ್ರವಾಸೋದ್ಯಮ ಕ್ಷೇತ್ರವು ಬೆಳೆಯುತ್ತಿದೆ ಮತ್ತು ಇಡೀ ಜಗತ್ತು ಭಾರತಕ್ಕೆ ಬರಲು, ಭಾರತವನ್ನು ನೋಡಲು ಮತ್ತು ಭಾರತವನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಿದೆ. ಮುಂಬರುವ ವರ್ಷಗಳಲ್ಲಿ ಅಯೋಧ್ಯೆ ಧಾರ್ಮಿಕ ಪ್ರವಾಸೋದ್ಯಮದಲ್ಲಿ ವಿಶ್ವದ ಅತಿದೊಡ್ಡ ರಾಜಧಾನಿಯಾಗಲಿದೆ ಎಂದು ಪ್ರವಾಸೋದ್ಯಮ ತಜ್ಞರು ಹೇಳಿರುವುದನ್ನು ನಾನು ಎಲ್ಲೋ ಓದಿದ್ದೇನೆ. ಈ ಕ್ಷೇತ್ರವನ್ನು ಆರ್ಥಿಕವಾಗಿ ಬೆಂಬಲಿಸಲು ನಾವು ನಮ್ಮ ಸಿದ್ಧತೆಗಳನ್ನು ನೋಡಬೇಕಾಗಿದೆ. ದೇಶದಲ್ಲಿ ಹೊಸ ಹೊಸ ಕ್ಷೇತ್ರಗಳು ಹುಟ್ಟಿಕೊಂಡಂತೆ, ನಾವು ಈಗಿನಿಂದಲೇ ಅವುಗಳಲ್ಲಿ ಪರಿಣತಿಯನ್ನು ಬೆಳೆಸಿಕೊಳ್ಳಬೇಕು. ನಾವು ಅವುಗಳನ್ನು ಹೇಗೆ ಬೆಂಬಲಿಸುತ್ತೇವೆ ಎಂಬುದರ ಕುರಿತು ಬುದ್ದಿಮತ್ತೆ ಮಾಡಬೇಕಾಗಿದೆ.

ನಾನು ಮುಂದಿನ 100 ದಿನಗಳ ಕಾಲ ಚುನಾವಣೆಗಳಲ್ಲಿ ನಿರತನಾಗುತ್ತೇನೆ. ಆದ್ದರಿಂದ ನೀವು ಯೋಚಿಸಲು ಸಾಕಷ್ಟು ಸಮಯವಿದೆ, ಏಕೆಂದರೆ ಪ್ರಮಾಣ ವಚನ ಸ್ವೀಕರಿಸಿದ 2ನೇ ದಿನದಿಂದಲೇ ಮಾಡಲು ಸಾಕಷ್ಟು ಕೆಲಸಗಳಿವೆ.

ಸ್ನೇಹಿತರೆ,

ಹಣಕಾಸು ಸೇರ್ಪಡೆ ಮತ್ತು ಡಿಜಿಟಲ್ ಪಾವತಿಗೆ ಸಂಬಂಧಿಸಿದಂತೆ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಇದರ ಪರಿಣಾಮವಾಗಿ, ನಮ್ಮ ಸಣ್ಣ ಉದ್ಯಮಗಳು ಮತ್ತು ಬೀದಿ ವ್ಯಾಪಾರಿಗಳ ಆರ್ಥಿಕ ಸಾಮರ್ಥ್ಯವು ಈಗ ಪಾರದರ್ಶಕವಾಗಿ ಗೋಚರಿಸುತ್ತಿದೆ. ಈಗ, ಈ ಮಾಹಿತಿ ಬಳಸಿಕೊಂಡು, ನಾವು ಅವರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸಬೇಕಾಗಿದೆ.

ಸ್ನೇಹಿತರೆ,

ಮುಂದಿನ 10 ವರ್ಷಗಳಲ್ಲಿ ಭಾರತದ ಆರ್ಥಿಕ ಸ್ವಾವಲಂಬನೆಯನ್ನು ಇನ್ನಷ್ಟು ಹೆಚ್ಚಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಜಾಗತಿಕ ಬಿಕ್ಕಟ್ಟುಗಳಿಂದ ನಮ್ಮ ಆರ್ಥಿಕತೆಯ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಇಂದು ಭಾರತವು ಜಾಗತಿಕ ಜಿಡಿಪಿ ಬೆಳವಣಿಗೆಯಲ್ಲಿ ಶೇಕಡ 15ರಷ್ಟು ಪಾಲು ಹೊಂದಿರುವ ಜಾಗತಿಕ ಬೆಳವಣಿಗೆಯ ಎಂಜಿನ್ ಆಗುತ್ತಿದೆ. ಈ ಸಂದರ್ಭಗಳಲ್ಲಿ, ನಮ್ಮ ಕರೆನ್ಸಿಯನ್ನು ವಿಶ್ವಾದ್ಯಂತ ಹೆಚ್ಚು ಸುಲಭವಾಗಿ ಮತ್ತು ಸ್ವೀಕಾರಾರ್ಹವಾಗಿಸಲು ಪ್ರಯತ್ನಗಳನ್ನು ಮಾಡಬೇಕು.

ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ಕಂಡುಬರುವ ಮತ್ತೊಂದು ಪ್ರವೃತ್ತಿಯು ಅತಿಯಾದ ಆರ್ಥಿಕ ವಿಸ್ತರಣೆ ಮತ್ತು ಹೆಚ್ಚುತ್ತಿರುವ ಸಾಲವಾಗಿದೆ. ಅನೇಕ ದೇಶಗಳ ಖಾಸಗಿ ವಲಯದ ಸಾಲವು ಅವುಗಳ ಜಿಡಿಪಿಯ 2 ಪಟ್ಟು ಪ್ರಮಾಣಕ್ಕೆ ತಲುಪಿದೆ. ಹಲವಾರು ದೇಶಗಳ ಸಾಲದ ಮಟ್ಟವು ಆ ದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ಇಡೀ ಜಾಗತಿಕ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಅಧ್ಯಯನ ನಡೆಸಬೇಕು.

ಭಾರತ್‌ನ ಬೆಳವಣಿಗೆಯ ನಿರೀಕ್ಷೆಗಳು ಮತ್ತು ಸಾಮರ್ಥ್ಯವನ್ನು ಪರಿಗಣಿಸಿ, ಎಷ್ಟು ಕ್ರೆಡಿಟ್ ಲಭ್ಯತೆ ಇರಬೇಕು, ಆಧುನಿಕ ಸಂದರ್ಭದಲ್ಲಿ ಅದನ್ನು ಸುಸ್ಥಿರವಾಗಿ ಹೇಗೆ ನಿರ್ವಹಿಸಬೇಕು ಎಂಬುದನ್ನು ನಿರ್ಧರಿಸುವುದು ಅತ್ಯಗತ್ಯ.

ಸ್ನೇಹಿತರೆ,

ದೇಶಕ್ಕೆ ಅಗತ್ಯವಾದ ಯೋಜನೆಗಳಿಗೆ ಧನಸಹಾಯ ನೀಡಲು ನಮ್ಮ ಬ್ಯಾಂಕಿಂಗ್ ಉದ್ಯಮವು ಮುನ್ನಡೆಯುವುದು ಅಷ್ಟೇ ಮುಖ್ಯವಾಗಿರುತ್ತದೆ. ಈ ಅಗತ್ಯದ ನಡುವೆ ಇಂದು ಹಲವು ರಂಗಗಳಲ್ಲಿ ಸವಾಲುಗಳೂ ಇವೆ. ಕೃತಕ ಬುದ್ಧಿಮತ್ತೆ ಮತ್ತು  ಬ್ಲಾಕ್ ಚೈನ್ ನಂತಹ ಹೊಸ ತಂತ್ರಜ್ಞಾನಗಳು ಬ್ಯಾಂಕಿಂಗ್ ಕಾರ್ಯವಿಧಾನಗಳನ್ನು ಮಾರ್ಪಡಿಸಿವೆ, ಸಂಪೂರ್ಣ ವಿಧಾನವನ್ನು ಬದಲಾಯಿಸಿವೆ. ಡಿಜಿಟಲ್ ಬ್ಯಾಂಕಿಂಗ್‌ನ ಹೆಚ್ಚುತ್ತಿರುವ ಯುಗದಲ್ಲಿ ಸೈಬರ್ ಭದ್ರತೆಯ ಪಾತ್ರವು ನಿರ್ಣಾಯಕವಾಗಿದೆ. ಹಣಕಾಸು ತಂತ್ರಜ್ಞಾನ ಆವಿಷ್ಕಾರಗಳು ಬ್ಯಾಂಕಿಂಗ್‌ಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿವೆ. ಅಂತಹ ಸಂದರ್ಭಗಳಲ್ಲಿ, ದೇಶದ ಬ್ಯಾಂಕಿಂಗ್ ಕ್ಷೇತ್ರದ ರಚನೆಯಲ್ಲಿ ಅಗತ್ಯವಾದ ಬದಲಾವಣೆಗಳ ಬಗ್ಗೆ ನಾವು ಯೋಚಿಸಬೇಕಾಗಿದೆ. ಇದಕ್ಕೆ ಹೊಸ ಹಣಕಾಸು, ಕಾರ್ಯಾಚರಣೆ ಮತ್ತು ವ್ಯಾಪಾರ ಮಾದರಿಗಳ ಅಗತ್ಯವಿರಬಹುದು. ಜಾಗತಿಕ ಚಾಂಪಿಯನ್‌ಗಳ ಸಾಲದ ಅಗತ್ಯಗಳಿಂದ ಹಿಡಿದು ಬೀದಿ ಬದಿ ವ್ಯಾಪಾರಿಗಳ ಅಗತ್ಯತೆಗಳ ತನಕ, ಅತ್ಯಾಧುನಿಕ ವಲಯಗಳಿಂದ ಸಾಂಪ್ರದಾಯಿಕ ವಲಯಗಳವರೆಗೆ, ಈ ಅಗತ್ಯಗಳನ್ನು ಪೂರೈಸುವುದು ‘ವಿಕ್ಷಿತ್ ಭಾರತ್’ಗೆ ನಿರ್ಣಾಯಕವಾಗಿದೆ.

‘ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ದೃಷ್ಟಿಕೋನದ ಈ ಸಂಪೂರ್ಣ ಅಧ್ಯಯನಕ್ಕೆ ರಿಸರ್ವ್ ಬ್ಯಾಂಕ್ ಅತ್ಯಂತ ಸೂಕ್ತವಾದ ಸಂಸ್ಥೆಯಾಗಿದೆ. 2047ರ ವೇಳೆಗೆ ‘ವಿಕಸಿತ ಭಾರತ’ ಅಭಿವೃದ್ಧಿಗೆ ನಿಮ್ಮ ಪ್ರಯತ್ನಗಳು ನಿರ್ಣಾಯಕವಾಗಿವೆ.

ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.

ತುಂಬು ಧನ್ಯವಾದಗಳು!

***