Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾಲ್ದೀವ್ಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ನೀಡಿದ ಪತ್ರಿಕಾ ಹೇಳಿಕೆಯ ಭಾಷಾಂತರ


ಗೌರವಾನ್ವಿತರಾದ, ನನ್ನ ಸ್ನೇಹಿತರೂ,  ಅಧ್ಯಕ್ಷರೂ ಆಗಿರುವ ಸೋಲಿ ಅವರೇ, ಮಹಿಳೆಯರೇ ಮತ್ತು ಮಹನೀಯರೇ.

ನನ್ನ ಎರಡನೇ ಅವಧಿಯಲ್ಲಿ ಮೊದಲ ವಿದೇಶ ಪ್ರವಾಸ ನಿಮ್ಮ ಸುಂದರ ರಾಷ್ಟ್ರ ಮಾಲ್ದೀವ್ಸ್ ಗೆ ಏರ್ಪಾಡಾಗಿರುವುದು ನನ್ನ ಸೌಭಾಗ್ಯ. ನಾನಿದರಿಂದ ಸಂತೋಷಗೊಂಡಿದ್ದೇನೆ. ನಿಮ್ಮಂತಹ ನಿಕಟ ಸ್ನೇಹಿತರನ್ನು ಮತ್ತೊಮ್ಮೆ ಭೇಟಿಯಾಗುವ ಅವಕಾಶ ನನಗೆ ಸಿಕ್ಕಿರುವುದಕ್ಕೆ ಅಪಾರ ಸಂತೋಷವಾಗಿದೆ. ನನ್ನ ತಂಡದ ಪರವಾಗಿ ಮತ್ತು ನನ್ನ ಪರವಾಗಿ ಈ ಅವಕಾಶಕ್ಕಾಗಿ ಮತ್ತು ನಿಮ್ಮ ಅದ್ಭುತ ಆತಿಥ್ಯಕ್ಕಾಗಿ ನಾನು ನಿಮಗೆ, ಮಾಲ್ದೀವ್ಸ್ ಸರಕಾರಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮ್ಮ ದೇಶಗಳು ಕೆಲವು ದಿನಗಳ ಹಿಂದೆ ಸಂತೋಷದಿಂದ ಮತ್ತು ಸಂಭ್ರಮದಿಂದ ಈದ್ ಹಬ್ಬವನ್ನು ಆಚರಿಸಿವೆ. ಈ ಹಬ್ಬದ ಬೆಳಕು ನಮ್ಮ ನಾಗರಿಕರ ಜೀವನದ ಮೇಲೆ ಸದಾ ಬೀರುತ್ತಿರಲಿ ಎಂದು ನಾನು ಹಾರೈಸುತ್ತೇನೆ.

 

ಗೌರವಾನ್ವಿತರೇ,

 

ಇಂದು ಮಾಲ್ದೀವ್ಸ್ ನ ಅತ್ಯುನ್ನತ ಗೌರವವನ್ನು ಕೊಟ್ಟು ನನ್ನನ್ನು ಆದರಿಸಿದ್ದೀರಿ, ನೀವು ನನಗೆ ಮಾತ್ರ ಗೌರವ ಕೊಟ್ಟುದಲ್ಲ, ಇಡೀ ಭಾರತವನ್ನು ಗೌರವಿಸಿದ್ದೀರಿ. ಮಾಲ್ದೀವ್ಸ್ ನ ಅತ್ಯುನ್ನತ ಗೌರವವಾದ “ಡಿಸ್ಟಿಂಗ್ವಿಶ್ಡ್  ರೂಲ್ ಆಫ್ ಇಜುದ್ದೀನ್” ನನಗೆ ಸಂತೋಷದ ಜೊತೆ ಹೆಮ್ಮೆಯ ವಿಷಯ. ಇದು ನನಗೆ ಸಂದ ಗೌರವದ ಜೊತೆಗೆ ಇದು ಉಭಯ ರಾಷ್ಟ್ರಗಳ ನಡುವಣ ನಿಕಟ ಸಂಬಂಧ ಮತ್ತು ಸ್ನೇಹಾಚಾರಕ್ಕೆ ಸಂದ ಗೌರವ . ಎಲ್ಲಾ ಭಾರತೀಯರ ಪರವಾಗಿ ನಾನಿದನ್ನು ನಮ್ರತೆಯಿಂದ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಸಾವಿರಾರು ವರ್ಷಗಳಿಂದ ನಮ್ಮ ಎರಡು ದೇಶಗಳು ಭಾರತೀಯ ಸಾಗರದ ಅಲೆಗಳಿಂದ ಸಂಪರ್ಕಿಸಲ್ಪಟ್ಟಿವೆ , ಚಾರಿತ್ರಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹೊಂದಿವೆ. ಈ ಹತ್ತಿರದ,  ಕದಡದ ಸಂಬಂಧ ಕಠಿಣ ಪರಿಸ್ಥಿತಿಗಳಲ್ಲಿ ಮಾರ್ಗದರ್ಶಿಯಾಗಿಯೂ ಕೆಲಸ ಮಾಡಿದೆ. 1988 ರಲ್ಲಿ ನಡೆದ ಬಾಹ್ಯ ದಾಳಿ ಇರಲಿ, ತ್ಸುನಾಮಿಯಂತಹ ನೈಸರ್ಗಿಕ ಪ್ರಕೋಪ ಇರಲಿ ಅಥವಾ ಇತ್ತೀಚಿನ ಕುಡಿಯುವ ನೀರಿನ ಕೊರತೆ ಆಗಿರಲಿ , ಭಾರತವು ಸದಾ ಮಾಲ್ದೀವ್ಸ್ ಜೊತೆ ನಿಂತಿದೆ ಮತ್ತು ಸದಾ ಮೊದಲ ಸಹಾಯ ಮಾಡಲು ಮುಂದೆ ಬಂದಿದೆ.

 

ಸ್ನೇಹಿತರೇ,

 

ಭಾರತದಲ್ಲಿ ಸಂಸತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಮತ್ತು ಮಾಲ್ದೀವ್ಸ್ ನ ಅಧ್ಯಕ್ಷೀಯ ಮತ್ತು ಮಜ್ಲಿಸ್ ಚುನಾವಣೆಗಳು ಉಭಯ ದೇಶಗಳ ಜನತೆ ಸ್ಥಿರತೆ ಮತ್ತು ಅಭಿವೃದ್ದಿಯನ್ನು ಅಪೇಕ್ಷಿಸುತ್ತಿರುವುದನ್ನು ಸ್ಪಷ್ಟಪಡಿಸಿದೆ. ಈಗ ನಮ್ಮ ಜವಾಬ್ದಾರಿ ಬಹಳ ಮುಖ್ಯವಾಗಿ ಜನ ಕೇಂದ್ರಿತ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ದಿ ಹಾಗು ಉತ್ತಮ ಆಡಳಿತ ನೀಡುವುದಾಗಿದೆ.

 

ನಾನು ಈಗಷ್ಟೇ ಅಧ್ಯಕ್ಷರಾದ ಸೋಲಿ ಅವರ ಜೊತೆ ವಿವರವಾದ ಮತ್ತು ಫಲಪ್ರದವಾದ ಮಾತುಕತೆ ನಡೆಸಿದ್ದೇನೆ. ನಾವು ನಮ್ಮ ದ್ವಿಪಕ್ಷೀಯ ಸಹಕಾರವನ್ನು ವಿವರವಾಗಿ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳನ್ನು ಒಳಗೊಂಡಂತೆ ಪುನರ್ವಿಮರ್ಶೆ ಮಾಡಿದ್ದೇವೆ. ನಮ್ಮ ಸಹಭಾಗಿತ್ವದ ಭವಿಷ್ಯದ ದಾರಿಯ ಬಗ್ಗೆ ನಮಗೆ ಪೂರ್ಣ ಸಹಮತ ಇದೆ.

 

ಅಧ್ಯಕ್ಷರಾದ ಸೋಲಿ ಅವರೇ, ನೀವು ಅಧಿಕಾರ ವಹಿಸಿಕೊಂಡಂದಿನಿಂದ ದ್ವಿಪಕ್ಷೀಯ ಸಹಕಾರದ ದಿಕ್ಕು ಮತ್ತು ವೇಗದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. 2018 ರ ಡಿಸೆಂಬರ್ ತಿಂಗಳಲ್ಲಿ ತಾವು ಭಾರತಕ್ಕೆ ಭೇಟಿ ನೀಡಿದಾಗ ಮಾಡಲಾದ ನಿರ್ಧಾರಗಳು ಕಾಳಜಿಯುತವಾಗಿ , ಕಾಲ ಬದ್ಧತೆಯ ರೀತಿಯಲ್ಲಿ  ಅನುಷ್ಟಾನಗೊಳ್ಳುತ್ತಿವೆ. 

 

ಸ್ನೇಹಿತರೇ

 

ಮಾಲ್ದೀವ್ಸ್ ನ ತಕ್ಷಣದ ಹಣಕಾಸು ಆವಶ್ಯಕತೆಯನ್ನು ಅಧ್ಯಕ್ಷ ಸೋಲಿ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಘೋಷಿಸಲಾದ 1.4 ಬಿಲಿಯನ್ ಡಾಲರ್ ಹಣಕಾಸು ಪ್ಯಾಕೇಜ್ ಮೂಲಕ ಪೂರೈಸಲಾಗಿದೆ. ಇದರ ಜೊತೆಗೆ ಸಾಮಾಜಿಕ ಪರಿಣಾಮದ ಹೊಸ ಯೋಜನೆಗಳನ್ನು ಆರಂಭಿಸಲಾಗಿದೆ. ಅಭಿವೃದ್ದಿ ಕಾಮಗಾರಿಯ ಹೊಸ ಮಾರ್ಗಗಳು ಡಾಲರ್  800 ಮಿಲಿಯನ್ ಸಾಲದ ಮೂಲಕ ತೆರೆಯಲ್ಪಟ್ಟಿವೆ.

 

ಭಾರತ ಮತ್ತು ಮಾಲ್ದೀವ್ಸ್ ನಡುವಣ ಅಭಿವೃದ್ದಿ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲು ನಾವು ಮಾಲ್ದೀವ್ಸ್ ನ ಸಾಮಾನ್ಯ ನಾಗರಿಕರಿಗೆ ಪ್ರಯೋಜನವಾಗುವ ಯೋಜನೆಗಳತ್ತ ಗಮನ ಕೇಂದ್ರೀಕರಿಸಿದ್ದೇವೆ.

 

ಇಂದು ನಮ್ಮ ದ್ವಿಪಕ್ಷೀಯ ಸಹಕಾರ ಮಾಲ್ದೀವ್ಸ್ ನ ಸಹಜ ಜೀವನದ ಪ್ರತೀಯೊಂದು ಅಂಶದಲ್ಲಿಯೂ ಅಡಕಗೊಂಡಿದೆ.

 

·        ವಿವಿಧ ದ್ವೀಪಗಳಲ್ಲಿ ಜಲ ಮತ್ತು ನೈರ್ಮಲ್ಯೀಕರಣ ವ್ಯವಸ್ಥೆಗಳು

 

·        ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಕಷ್ಟು ಹಣಕಾಸು.

 

·        ಬಂದರುಗಳ ಅಭಿವೃದ್ದಿ

 

·        ಸಮ್ಮೇಳನ ಮತ್ತು ಸಮುದಾಯ ಕೇಂದ್ರಗಳ ನಿರ್ಮಾಣ.

 

·        ಕ್ರಿಕೆಟ್ ಕ್ರೀಡಾಂಗಣಗಳ ನಿರ್ಮಾಣ.

 

·        ತುರ್ತು ವೈದ್ಯಕೀಯ ಸೇವೆಗಳು.

 

·        ಕರಾವಳಿ ಸುರಕ್ಷೆಯನ್ನು ಖಾತ್ರಿಪಡಿಸುವಿಕೆ.

 

·        ಹೊರಾಂಗಣ ಕ್ಷಮತೆಯ ಉಪಕರಣಗಳ ವ್ಯವಸ್ಥೆ

 

·        ಔಷಧಿ ವಿಷ ನಿವಾರಣ ಕೇಂದ್ರಗಳು.

 

·        ವಿದ್ಯಾರ್ಥಿ ಫೆರಿ (ಹಡಗು) ಸೇವೆ.

 

·        ಕೃಷಿ ಮತ್ತು ಮೀನುಗಾರಿಕೆ

 

·        ಪುನರ್ನವೀಕರಿಸಬಹುದಾದ ಇಂಧನ ಮತ್ತು ಪ್ರವಾಸೋದ್ಯಮ.

 

ಭಾರತೀಯ ಸಹಕಾರದ ಇಂತಹ ಹಲವು ಯೋಜನೆಗಳು ಮಾಲ್ದೀವ್ಸ್ ನ ಜನತೆಗೆ ನೇರ ಪ್ರಯೋಜನಕ್ಕೆ ಲಭಿಸುವಂತಹವು. 

 

 ನಾವು ಮೂಲಸೌಕರ್ಯ ಅಭಿವೃದ್ದಿ ಮತ್ತು ಅದ್ದು ನಲ್ಲಿರುವ ಚಾರಿತ್ರಿಕ ಫ್ರೈಡೇ  ಮಸೀದಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಹಕಾರ ನೀಡಲು ಒಪ್ಪಿಕೊಂಡಿದ್ದೇವೆ.ಉಭಯ ದೇಶಗಳ ನಾಗರಿಕರ ನಡುವೆ ಸಂಪರ್ಕವನ್ನು ಹೆಚ್ಚಿಸಲು ಕುಲ್ ಹುದ್ದುಫುಸಿ ಮತ್ತು ಮಾಲ್ದೀವ್ಸ್ ನ ಮಾಲೆ ಹಾಗು ಭಾರತದ ಕೊಚ್ಚಿಯ ನಡುವೆ ಹಡಗು ಸೇವೆ ಆರಂಭಿಸಲು ನಾವು ಒಪ್ಪಿಕೊಂಡಿದ್ದೇವೆ. ಮಾಲ್ದೀವ್ಸ್ ನಲ್ಲಿ ರುಪೇ ಕಾರ್ಡ್ ಬಿಡುಗಡೆಯಿಂದಾಗಿ ಅಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಈ ನಿಟ್ಟಿನಲ್ಲಿ ನಾವು ಶೀಘ್ರವೇ ಕ್ರಮ ಕೈಗೊಳ್ಳಲಿದ್ದೇವೆ. ನಮ್ಮ ರಕ್ಷಣಾ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆದಿವೆ. ಇಂದು ನಾವು ಜಂಟಿಯಾಗಿ ಮಾಲ್ದೀವ್ಸ್ ರಕ್ಷಣಾ ಪಡೆಗಳ ಸಂಯುಕ್ತ ತರಬೇತಿ ಕೇಂದ್ರ ಮತ್ತು ಕರಾವಳಿ ಸರ್ವೇಕ್ಷಣೆಯ ರಾಡಾರ್ ವ್ಯವಸ್ಥೆಯನ್ನು ಉದ್ಘಾಟಿಸಿದ್ದೇವೆ. ಇದು ಮಾಲ್ದೀವ್ಸ್ ನ ನಾವಿಕ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಭಾರತವು ಮಾಲ್ದೀವ್ಸ್ ಜೊತೆಗಿನ ತನ್ನ ಬಾಂದವ್ಯಕ್ಕೆ ಗರಿಷ್ಟ ಪ್ರಾಮುಖ್ಯತೆಯನ್ನು ಕೊಡುತ್ತದೆ.  ನಾವು ಪರಸ್ಪರ ಆಳವಾದ ಮತ್ತು ಬಲಿಷ್ಟವಾದ ಸಹಭಾಗಿತ್ವವನ್ನು ಅಪೇಕ್ಷಿಸುತ್ತೇವೆ. ಸಮೃದ್ದ, ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತ ಮಾಲ್ದೀವ್ಸ್ ಇಡೀ ವಲಯಕ್ಕೆ ಲಾಭದಾಯಕ. ಮಾಲ್ದೀವ್ಸ್ ಗೆ ಸಾಧ್ಯವಿರುವ ಪ್ರತಿಯೊಂದು ಸಹಾಯವನ್ನು ಮಾಡುವುದಕ್ಕೆ ಭಾರತ ಸದಾ ಬದ್ದವಾಗಿರುತ್ತದೆ ಎಂಬುದನ್ನು ನಾನಿಲ್ಲಿ ಪುನರುಚ್ಚರಿಸಲು ಬಯಸುತ್ತೇನೆ.ನಾನು ಮಗದೊಮ್ಮೆ ಗೌರವಾನ್ವಿತರಾದ ಅಧ್ಯಕ್ಷರು, ಮತ್ತು ಮಾಲ್ದೀವ್ಸ್ ನ ಜನತೆಗೆ ಅವರ ಹಾರ್ದಿಕ ಆತಿಥ್ಯಕ್ಕೆ ಧನ್ಯವಾದ ಹೇಳಬಯಸುತ್ತೇನೆ. ಭಾರತ – ಮಾಲ್ದೀವ್ಸ್ ಗೆಳೆತನ ಚಿರಾಯುವಾಗಲಿ.

 

DiveeRajjeAiyegeRahmethreikhanAbadah

 

ಧನ್ಯವಾದಗಳು