Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರಿಷಸ್ ಪ್ರಧಾನಮಂತ್ರಿಯವರು ಆಯೋಜಿಸಿದ್ದ ಔತಣಕೂಟದಲ್ಲಿ ಪ್ರಧಾನಮಂತ್ರಿಯವರ ಭಾಷಣ


ಗೌರವಾನ್ವಿತ ಪ್ರಧಾನಮಂತ್ರಿ ಡಾ. ನವೀನ್ ಚಂದ್ರ ರಾಮಗೂಲಂ ಜಿ,
ಶ್ರೀಮತಿ ವೀಣಾ ರಾಮಗೂಲಂ ಜಿ,
ಉಪ ಪ್ರಧಾನಮಂತ್ರಿ ಪಾಲ್ ಬೆರೆಂಜರ್ ಜಿ,
ಮಾರಿಷಸ್‌ನ ಗೌರವಾನ್ವಿತ ಸಚಿವರುಗಳೇ,
ಗೌರವಾನ್ವಿತ ಸಹೋದರ ಸಹೋದರಿಯರೇ, 
ನಿಮ್ಮೆಲ್ಲರಿಗೂ ನಮಸ್ಕಾರ ಮತ್ತು ಶುಭಾಶಯಗಳು .!

ಮೊಟ್ಟ ಮೊದಲಿಗೆ, ಪ್ರಧಾನಮಂತ್ರಿ ಅವರ ಭಾವನಾತ್ಮಕ ಮತ್ತು ಸ್ಪೂರ್ತಿದಾಯಕ ಚಿಂತನೆಗಳಿಗಾಗಿ ನಾನು ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಭವ್ಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಪ್ರಧಾನಿ, ಮಾರಿಷಸ್ ಸರ್ಕಾರ ಮತ್ತು ಅದರ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ಮಾರಿಷಸ್‌ಗೆ ಭೇಟಿ ನೀಡುವುದು ಭಾರತೀಯ ಪ್ರಧಾನಿಗೆ ಸದಾ ಬಹಳ ವಿಶೇಷವಾಗಿರುತ್ತದೆ. ಇದು ಕೇವಲ ರಾಜತಾಂತ್ರಿಕ ಭೇಟಿಯಲ್ಲ, ಆದರೆ ಕುಟುಂಬವನ್ನು ಭೇಟಿ ಮಾಡುವ ಅವಕಾಶ. ನಾನು ಮಾರಿಷಸ್ ನೆಲದಲ್ಲಿ ಕಾಲಿಟ್ಟ ಕ್ಷಣದಿಂದಲೇ ಈ ಬಾಂಧವ್ಯವನ್ನು ಅನುಭವಿಸಿದೆ. ಎಲ್ಲೆಡೆ ಒಂದೇ ಎಂದು ಸೇರಿಕೊಳ್ಳುವ ಭಾವನೆ ಇದೆ. ಶಿಷ್ಟಾಚಾರದ ಯಾವುದೇ ಅಡೆತಡೆಗಳಿಲ್ಲ. ಮಾರಿಷಸ್ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿ ಮತ್ತೊಮ್ಮೆ ನನ್ನನ್ನು ಆಹ್ವಾನಿಸಿರುವುದು  ನನಗೆ ಹಮ್ಮೆಯ ವಿಷಯವಾಗಿದೆ. ಈ ಸಂದರ್ಭದಲ್ಲಿ 140 ಕೋಟಿ ಭಾರತೀಯರ ಪರವಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಬಯಸುತ್ತೇನೆ. 

ಗೌರವಾನ್ವಿತ ಪ್ರಧಾನಮಂತ್ರಿಯವರೇ, 

ಮಾರಿಷಸ್ ಜನರು ನಿಮ್ಮನ್ನು ನಾಲ್ಕನೇ ಬಾರಿಗೆ ತಮ್ಮ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ. ಕಳೆದ ವರ್ಷ ಭಾರತದ ಜನರು ಸತತ ಮೂರನೇ ಬಾರಿಗೆ ನನ್ನನ್ನು ಸೇವೆ ಸಲ್ಲಿಸಲು ಆಯ್ಕೆ ಮಾಡಿದ್ದಾರೆ. ಮತ್ತು, ಈ ಅವಧಿಯಲ್ಲಿ ನಿಮ್ಮಂತಹ ಹಿರಿಯ ಮತ್ತು ಅನುಭವಿ ನಾಯಕರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯುವುದು ಆಕಸ್ಮಿಕವೆಂದು ನಾನು ಭಾವಿಸುತ್ತೇನೆ. ಭಾರತ – ಮಾರಿಷಸ್ ಸಂಬಂಧವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ದೊಡ್ಡ ಅದೃಷ್ಟ ನಮಗಿದೆ. ಭಾರತ ಮತ್ತು ಮಾರಿಷಸ್ ನಡುವಿನ ಪಾಲುದಾರಿಕೆಯು ನಮ್ಮ ಐತಿಹಾಸಿಕ ಸಂಬಂಧಗಳಿಗೆ ಸೀಮಿತವಾಗಿಲ್ಲ. ಇದು ಹಂಚಿಕೆಯ ಮೌಲ್ಯಗಳು, ಪರಸ್ಪರ ನಂಬಿಕೆ ಮತ್ತು ಉಜ್ವಲ ಭವಿಷ್ಯದ ಸಾಮಾನ್ಯ ದೂರದೃಷ್ಟಿಯನ್ನು ಆಧರಿಸಿದೆ. ನಿಮ್ಮ ನಾಯಕತ್ವವು ನಮ್ಮ ಸಂಬಂಧಗಳಿಗೆ ಸದಾ ಮಾರ್ಗದರ್ಶನ ಮಾಡಿದೆ ಮತ್ತು ಬಲವರ್ಧನೆಗೊಳಿಸಿದೆ. ಈ ನಾಯಕತ್ವದಡಿಯಲ್ಲಿ ನಮ್ಮ ಪಾಲುದಾರಿಕೆಯು ಎಲ್ಲಾ ವಲಯಗಳಲ್ಲಿಯೂ ಬಲಗೊಳ್ಳುತ್ತಿದೆ ಮತ್ತು ವಿಸ್ತರಣೆಯಾಗುತ್ತಿದೆ. ಮಾರಿಷಸ್‌ನ ಅಭಿವೃದ್ಧಿ ಪಯಣದಲ್ಲಿ ವಿಶ್ವಾಸಾರ್ಹ ಮತ್ತು ಮೌಲ್ಯಯುತ ಪಾಲುದಾರನಾಗಲು ಭಾರತ ಹೆಮ್ಮೆಪಡುತ್ತದೆ. ಇಬ್ಬರೂ ಒಗ್ಗೂಡಿ, ಮಾರಿಷಸ್‌ನ ಪ್ರತಿಯೊಂದು ಮೂಲೆಯಲ್ಲೂ ಪ್ರಗತಿಯ ಹೆಜ್ಜೆ ಗುರುತು ಮೂಡಿಸುವಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸಾಮರ್ಥ್ಯ ವೃದ್ಧಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರದ ಫಲಿತಾಂಶಗಳು ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿವೆ. ನೈಸರ್ಗಿಕ ವಿಕೋಪವಾಗಲಿ ಅಥವಾ ಕೋವಿಡ್ ಸಾಂಕ್ರಾಮಿಕವಾಗಲಿ, ಪ್ರತಿ ಸವಾಲಿನ ಕ್ಷಣದಲ್ಲಿಯೂ ನಾವು ಕುಟುಂಬದಂತೆ ಒಂದಾಗಿ ನಿಂತಿದ್ದೇವೆ. ಇಂದು ನಮ್ಮ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು ಸಮಗ್ರ ಪಾಲುದಾರಿಕೆಯ ರೂಪವನ್ನು ಪಡೆದುಕೊಂಡಿವೆ.

ಮಿತ್ರರೇ, 

ಮಾರಿಷಸ್ ನಮ್ಮ ನಿಕಟ ಕಡಲ ನೆರೆಯ ರಾಷ್ಟ್ರ ಮತ್ತು ಹಿಂದೂ ಮಹಾಸಾಗರ ಪ್ರದೇಶದ ಪ್ರಮುಖ ಪಾಲುದಾರ. ಮಾರಿಷಸ್‌ಗೆ ನನ್ನ ಕೊನೆಯ ಭೇಟಿಯ ಸಂದರ್ಭದಲ್ಲಿ ನಾನು  ಸಾಗರ್ ದೂರದೃಷ್ಟಿಯನ್ನು ಹಂಚಿಕೊಂಡೆ. ಇದು ಪ್ರಾದೇಶಿಕ ಅಭಿವೃದ್ಧಿ, ಭದ್ರತೆ ಮತ್ತು ಹಂಚಿಕೆಯ ಸಮೃದ್ಧಿಯನ್ನು ಪ್ರಮುಖ ಉದ್ದೇಶವನ್ನಾಗಿರಿಸಿಕೊಂಡಿದೆ. ಜಾಗತಿಕ ದಕ್ಷಿಣದ ದೇಶಗಳು ಒಗ್ಗೂಡಿ ಒಗ್ಗಟ್ಟಿನ ಧ್ವನಿಯೊಂದಿಗೆ ಮಾತನಾಡಬೇಕೆಂದು ನಾವು ದೃಢವಾಗಿ ನಂಬಿದ್ದೇವೆ. ಈ ಮನೋಭಾವದಿಂದ ನಮ್ಮ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ನಾವು ಜಾಗತಿಕ ದಕ್ಷಿಣವನ್ನು ಕೇಂದ್ರ ಸ್ಥಾನದಲ್ಲಿರಿಸಿಕೊಂಡು ಅಗ್ರ ಆದ್ಯತೆ ನೀಡಿದ್ದೇವೆ ಮತ್ತು ನಾವು ಮಾರಿಷಸ್ ಅನ್ನು ವಿಶೇಷ ಅತಿಥಿಯಾಗಿ ನಮ್ಮೊಂದಿಗೆ ಸೇರಿಕೊಳ್ಳಲು ಆಹ್ವಾನಿಸಿದ್ದೇವೆ. 

ಮಿತ್ರರೇ,

ನಾನು ಈ ಮೊದಲೇ ಹೇಳಿದಂತೆ ಜಗತ್ತಿನಲ್ಲಿ ಭಾರತದ ಮೇಲೆ ಹಕ್ಕನ್ನು ಹೊಂದಿರುವ ಒಂದು ದೇಶವಿದ್ದರೆ, ಅದು ಮಾರಿಷಸ್. ನಮ್ಮ ಸಂಬಂಧಕ್ಕೆ ಯಾವುದೇ ಮಿತಿಗಳಿಲ್ಲ. ನಮ್ಮ ಸಂಬಂಧಗಳ ಬಗ್ಗೆ ನಮ್ಮ ಭರವಸೆಗಳು ಮತ್ತು ಆಕಾಂಕ್ಷೆಗಳಿಗೆ ಯಾವುದೇ ಮಿತಿಗಳಿಲ್ಲ. ಭವಿಷ್ಯದಲ್ಲಿ ನಮ್ಮ ಜನರ ಸಮೃದ್ಧಿ ಮತ್ತು ಇಡೀ ಪ್ರದೇಶದ ಶಾಂತಿ ಮತ್ತು ಸುರಕ್ಷತೆಗಾಗಿ ನಾವು ಸಹಕರಿಸುವುದನ್ನು ಮುಂದುವರಿಸುತ್ತೇವೆ. ಈ ಸ್ಫೂರ್ತಿಯೊಂದಿಗೆ ಪ್ರಧಾನಮಂತ್ರಿ ಡಾ. ನವೀನಚಂದ್ರ ರಾಮಗೂಲಂ ಮತ್ತು ಶ್ರೀಮತಿ ವೀಣಾ ಜಿ ಅವರ ಉತ್ತಮ ಆರೋಗ್ಯಕ್ಕಾಗಿ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಲು ನಾವೆಲ್ಲರೂ ಒಗ್ಗೂಡೋಣ. ಮಾರಿಷಸ್ ಜನರ ನಿರಂತರ ಪ್ರಗತಿ ಮತ್ತು ಸಮೃದ್ಧಿ ಮತ್ತು ಭಾರತ ಮತ್ತು ಮಾರಿಷಸ್ ನಡುವಿನ ಬಲವಾದ ಸ್ನೇಹಕ್ಕೆ ಶುಭ ಹಾರೈಸುತ್ತೇನೆ.  

ಜೈಹಿಂದ್‌  !
ವೈವ್ ಮೌರಿಸ್..! 

 

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

 

*****