ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರಿಷಸ್ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ಪ್ರವೀಂದ್ ಜುಗ್ನೌಥ್ ಅವರನ್ನು ನವದೆಹಲಿಯಲ್ಲಿ ಇಂದು ಭೇಟಿಯಾದರು. ಪ್ರಧಾನಿ ಜುಗ್ನೌಥ್ ಅವರು ಪತ್ನಿ ಶ್ರೀಮತಿ ಕೋಬಿತಾ ಜುಗ್ನೌಥ್ ಅವರೊಂದಿಗೆ ಭಾರತಕ್ಕೆ ಖಾಸಗಿ ಭೇಟಿ ನೀಡಿದ್ದಾರೆ..
ಚುನಾವಣೆಯಲ್ಲಿ ಮರು ಆಯ್ಕೆಯಾದ ಪ್ರಧಾನ ಮಂತ್ರಿ ಜುಗ್ನೌಥ್ ಅವರಿಗೆ ಪ್ರಧಾನಿ ಮೋದಿ ಅವರು ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು. ಪ್ರಧಾನಿ ಜುಗ್ನೌಥ್ ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಉಭಯ ದೇಶಗಳ ನಡುವಿನ ಭ್ರಾತೃತ್ವ ಮತ್ತು ನಿರಂತರ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಮತ್ತು ಗಾಢಗೊಳಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಮಾರಿಷಸ್ನಲ್ಲಿ ಜಾರಿಗೆ ತರಲಾಗುತ್ತಿರುವ ಮೆಟ್ರೊ ಎಕ್ಸ್ಪ್ರೆಸ್ ಯೋಜನೆ, ಇಎನ್ಟಿ ಆಸ್ಪತ್ರೆ, ಸಾಮಾಜಿಕ ವಸತಿ ಯೋಜನೆ ಮುಂತಾದ ಅನೇಕ ಅಭಿವೃದ್ಧಿ ಯೋಜನೆಗಳಲ್ಲಿ ಭಾರತ ನೀಡುತ್ತಿರುವ ಬೆಂಬಲಕ್ಕೆ ಪ್ರಧಾನಿ ಜುಗ್ನೌಥ್ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಇದು ತಮ್ಮ ಜನರಿಗೆ ನಿಜವಾದ ಪ್ರಯೋಜನಗಳನ್ನು ಕೊಟ್ಟಿದೆ ಎಂದರು. ಮಾರಿಷಸ್ನ ಸರ್ವತೋಮುಖ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವುದು ಮತ್ತು ಭಾರತದೊಂದಿಗಿನ ಸಹಕಾರದ ವ್ಯಾಪ್ತಿಯನ್ನು ಗಾಢವಾಗಿಸುವುದು ನೂತನ ಅವಧಿಯಲ್ಲಿ ತಮ್ಮ ಆದ್ಯತೆಗಳಾಗಿವೆ ಎಂದು ಪ್ರಧಾನಿ ಜುಗ್ನೌಥ್ ತಿಳಿಸಿದರು. ಈ ಪ್ರಯತ್ನದಲ್ಲಿ ಭಾರತ ಪ್ರಮುಖ ಪಾತ್ರ ವಹಿಸುವುದನ್ನು ತಾವು ನಿರೀಕ್ಷಿಸುವುದಾಗಿ ಅವರು ಹೇಳಿದರು.
ಹೆಚ್ಚು ಸುರಕ್ಷಿತ, ಸ್ಥಿರ ಮತ್ತು ಸಮೃದ್ಧವಾದ ಮಾರಿಷಸ್ ಅನ್ನು ನಿರ್ಮಿಸುವ ಆಕಾಂಕ್ಷೆಗಳಲ್ಲಿ ಅಲ್ಲಿನ ಸರ್ಕಾರ ಮತ್ತು ಮಾರಿಷಸ್ ಜನತೆ ಭಾರತದ ಮುಕ್ತ ಮನಸ್ಸಿನ ಬೆಂಬಲ ಮತ್ತು ನಿರಂತರ ಐಕಮತ್ಯವನ್ನು ಸಾಧಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದರು.
ಪರಸ್ಪರ ಆಸಕ್ತಿ ಮತ್ತು ಆದ್ಯತೆಗಳ ಆಧಾರದ ಮೇಲೆ ನಿಕಟ ಬಹುಮುಖಿ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸಲು ಮತ್ತು ಹೊಸ ಮಾರ್ಗಗಳನ್ನು ಅನ್ವೇಷಿಸಲು ಉಭಯ ನಾಯಕರು ನಿಕಟವಾಗಿ ಕೆಲಸ ಮಾಡಲು ಸಮ್ಮತಿಸಿದರು.