Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ಸಂದರ್ಭದಲ್ಲಿ, ಮಧ್ಯಪ್ರದೇಶದ ಕೆನ್-ಬೆಟ್ವಾ ನದಿಯನ್ನು ಜೋಡಿಸುವ ರಾಷ್ಟ್ರೀಯ ಯೋಜನೆಗೆ ಡಿಸೆಂಬರ್ 25 , 2024 ರಂದು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ 


ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 25 ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅದೇ ದಿನ ಮಧ್ಯಾಹ್ನ 12:30 ರ ಸುಮಾರಿಗೆ ಅವರು ಖಜುರಾಹೊದಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಪ್ರಧಾನಮಂತ್ರಿಯವರು ಕೆನ್-ಬೆಟ್ವಾ ನದಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ರಾಷ್ಟ್ರೀಯ ದೃಷ್ಟಿಕೋನದ ಯೋಜನೆಯಡಿಯಲ್ಲಿ ದೇಶದ ಮೊದಲ ನದಿಗಳ ಜೋಡಣೆ ಯೋಜನೆ ಇದಾಗಿದೆ. ಈ ಯೋಜನೆಯು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಿ ಲಕ್ಷಾಂತರ ರೈತ ಕುಟುಂಬಗಳಿಗೆ ಪ್ರಯೋಜನವನ್ನು ನೀಡಲಿದೆ. ಈ ಯೋಜನೆಯಿಂದ ಈ ಭಾಗದ ಜನರಿಗೆ ಕುಡಿಯುವ ನೀರಿನ ಸೌಲಭ್ಯವೂ ದೊರೆಯಲಿದೆ. ಇದರೊಂದಿಗೆ ಜಲವಿದ್ಯುತ್ ಯೋಜನೆಗಳು ಹಸಿರು ಶಕ್ತಿಯಲ್ಲಿ 100 ಎಂ.ಡಬ್ಲ್ಯೂ. ಗಿಂತ ಇನ್ನೂ ಹೆಚ್ಚಿನ ಕೊಡುಗೆ ನೀಡಲಿವೆ. ಈ ಯೋಜನೆಯು ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತವೆ.

ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಲಿದ್ದಾರೆ. 1153 ಅಟಲ್ ಗ್ರಾಮ ಸುಶಾಸನ ಕಟ್ಟಡಗಳ ಶಂಕುಸ್ಥಾಪನೆಯನ್ನೂ ಅವರು ನೆರವೇರಿಸಲಿದ್ದಾರೆ. ಈ ಕಟ್ಟಡಗಳು ಸ್ಥಳೀಯ ಮಟ್ಟದಲ್ಲಿ ಉತ್ತಮ ಆಡಳಿತಕ್ಕೆ ಕಾರಣವಾಗುವ ಗ್ರಾಮ ಪಂಚಾಯತ್ ಗಳ ಕಾರ್ಯ ಮತ್ತು ಜವಾಬ್ದಾರಿಗಳ ಪ್ರಾಯೋಗಿಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಕೇಂದ್ರ ಸರ್ಕಾರದ ಇಂಧನ ಸಮರ್ಪಕತೆ ಮತ್ತು ಹಸಿರು ಶಕ್ತಿಯನ್ನು ಉತ್ತೇಜಿಸುವ ಅವರ ಬದ್ಧತೆಗೆ ಅನುಗುಣವಾಗಿ, ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರದಲ್ಲಿ ಸ್ಥಾಪಿಸಲಾದ ಓಂಕಾರೇಶ್ವರ ತೇಲುವ ಸೌರ ಯೋಜನೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಈ ಯೋಜನೆಯು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯ ಸರ್ಕಾರದ ಪರಿಕಲ್ಪನೆಗೆ ಅಪಾರ ಕೊಡುಗೆ ನೀಡಲಿದೆ. ಇದು ಜಲಾನಯನಗಳ ನೀರಿನ ಆವಿಯಾಗುವಿಕೆಯನ್ನು ಕಡಿಮೆ ಮಾಡುವ ಮೂಲಕ ನೀರಿನ ಸಂರಕ್ಷಣೆಗೆ ಸಹಾಯ ಮಾಡುತ್ತದೆ.

 

*****