Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ಪ್ರಧಾನ  ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ಮೊರ್ಬಿಯಲ್ಲಿರುವ ಸ್ವಾಮಿ ದಯಾನಂದ ಅವರ ಜನ್ಮಸ್ಥಳ ಟಂಕರದಲ್ಲಿಂದು ಆಯೋಜಿಸಲಾದ ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ  ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು.

ಸ್ವಾಮಿ ಜಿ ಅವರ ಕೊಡುಗೆಗಳನ್ನು ಗೌರವಿಸಲು ಮತ್ತು ಅವರ ಬೋಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಆರ್ಯ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಕಳೆದ ವರ್ಷದ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದ ಅವರು, “ಇಂತಹ ಮಹಾನ್ ಚೇತನದ ಕೊಡುಗೆಗಳು ಅಸಾಧಾರಣವಾದಾಗ, ಅವುಗಳಿಗೆ ಸಂಬಂಧಿಸಿದ ಉತ್ಸವಗಳು ವ್ಯಾಪಕವಾಗುವುದು ಸಹಜ” ಎಂದರು.

“ನಮ್ಮ ಹೊಸ ಪೀಳಿಗೆಗೆ ಮಹರ್ಷಿ ದಯಾನಂದರ ಜೀವನವನ್ನು ಪರಿಚಯ ಮಾಡಿಕೊಳ್ಳಲು ಈ ಕಾರ್ಯಕ್ರಮವು ಪರಿಣಾಮಕಾರಿ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ. ಅಂತಹ ಗಮನಾರ್ಹ ವ್ಯಕ್ತಿಗಳ ಪರಂಪರೆಯನ್ನು ಮುಂದುವರಿಸಬೇಕು ಎಂದು ಒತ್ತಿ ಹೇಳಿದರು.

ಸ್ವಾಮಿ ದಯಾನಂದರು ಗುಜರಾತ್‌ನಲ್ಲಿ ಜನಿಸಿದರು, ಹರಿಯಾಣದಲ್ಲಿ ಸಕ್ರಿಯರಾಗಿದ್ದರು. ಅವರು ಎರಡೂ ಪ್ರದೇಶಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ನನ್ನ ಜೀವನದ ಮೇಲೆ ಸ್ವಾಮಿ ದಯಾನಂದ ಅವರ ಆಳವಾದ ಪ್ರಭಾವವಿದೆ. “ಅವರ ಬೋಧನೆಗಳು ನನ್ನ ದೃಷ್ಟಿಕೋನವನ್ನು ರೂಪಿಸಿವೆ, ಅವರ ಪರಂಪರೆಯು ನನ್ನ ಪ್ರಯಾಣದ ಅವಿಭಾಜ್ಯ ಅಂಗವಾಗಿ ಉಳಿದಿದೆ”. ಸ್ವಾಮೀಜಿ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತ ಮತ್ತು ವಿದೇಶಗಳಲ್ಲಿನ ಲಕ್ಷಾಂತರ ಅನುಯಾಯಿಗಳಿಗೆ ಪ್ರಧಾನಿ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಸ್ವಾಮಿ ದಯಾನಂದ ಅವರ ಬೋಧನೆಗಳ ಪರಿವರ್ತನೆಯ ಪ್ರಭಾವವನ್ನು ಸ್ಮರಿಸಿದ ಪ್ರಧಾನಿ ಮೋದಿ, “ಇತಿಹಾಸದಲ್ಲಿ ಭವಿಷ್ಯದ ಹಾದಿಯನ್ನು ಬದಲಾಯಿಸುವ ಕ್ಷಣಗಳಿವೆ. 200 ವರ್ಷಗಳ ಹಿಂದೆ, ಸ್ವಾಮಿ ದಯಾನಂದ ಅವರ ಜನ್ಮವು ಅಂತಹ ಅಭೂತಪೂರ್ವ ಕ್ಷಣವಾಗಿದೆ. ಭಾರತವನ್ನು ಅಜ್ಞಾನ ಮತ್ತು ಮೂಢನಂಬಿಕೆಯ ಸಂಕೋಲೆಯಿಂದ ಜಾಗೃತಗೊಳಿಸುವಲ್ಲಿ ಸ್ವಾಮೀಜಿ ಅವರ ಪಾತ್ರ ದೊಡ್ಡದು. ಸ್ವಾಮೀಜಿ ವೈದಿಕ ಜ್ಞಾನದ ಸಾರವನ್ನು ಮರುಶೋಧಿಸುವ ಚಳುವಳಿ ನಡೆಸಿದರು. “ನಮ್ಮ ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕತೆ ಮರೆಯಾಗುತ್ತಿರುವ ಸಮಯದಲ್ಲಿ, ಸ್ವಾಮಿ ದಯಾನಂದರು ‘ವೇದಗಳಿಗೆ ಹಿಂತಿರುಗಿ’ ಎಂದು ನಮಗೆ ಕರೆ ನೀಡಿದ್ದಾರೆ. ವೇದಗಳ ಮೇಲೆ ಪಾಂಡಿತ್ಯಪೂರ್ಣ ವ್ಯಾಖ್ಯಾನಗಳು ಮತ್ತು ತರ್ಕಬದ್ಧ ವ್ಯಾಖ್ಯಾನಗಳನ್ನು ಒದಗಿಸಲು ಸ್ವಾಮೀಜಿ ಅವರ ಪ್ರಯತ್ನಗಳು ಅಪಾರ. ಸಮಾಜದೊಳಗೆ ಆತ್ಮವಿಶ್ವಾಸ ಪುನರುಜ್ಜೀವನಗೊಳಿಸಿದ ಸ್ವಾಮೀಜಿ ಅವರ ಸಾಮಾಜಿಕ ನಿಯಮಗಳ ನಿರ್ಭೀತ ವಿಮರ್ಶೆ ಮತ್ತು ಭಾರತೀಯ ತತ್ತ್ವಶಾಸ್ತ್ರದ ಮೂಲಕ ಅವರು ನಿಜವಾದ ಸಾರವನ್ನು ತೋರಿದ್ದಾರೆ. ಏಕತೆ ಬೆಳೆಸುವಲ್ಲಿ ಮತ್ತು ಭಾರತದ ಪ್ರಾಚೀನ ಪರಂಪರೆಯಲ್ಲಿ ಹೆಮ್ಮೆಯ ಭಾವವನ್ನು ತುಂಬುವಲ್ಲಿ ಸ್ವಾಮಿ ದಯಾನಂದ ಅವರ ಬೋಧನೆಗಳ ಮಹತ್ವವನ್ನು ಪ್ರಧಾನಿ ಪುನರುಚ್ಚರಿಸಿದರು.

“ನಮ್ಮ ಸಾಮಾಜಿಕ ಅನಿಷ್ಟಗಳನ್ನು ಬ್ರಿಟಿಷ್ ಸರ್ಕಾರವು ನಮ್ಮನ್ನು ಕೀಳು ಎಂದು ಬಿಂಬಿಸಲು ಒಂದು ಸಾಧನವಾಗಿ ಬಳಸಿಕೊಂಡಿದೆ. ಕೆಲವರು ಸಾಮಾಜಿಕ ಬದಲಾವಣೆಗಳನ್ನು ಉಲ್ಲೇಖಿಸುವ ಮೂಲಕ ಬ್ರಿಟಿಷ್ ಆಡಳಿತವನ್ನು ಸಮರ್ಥಿಸಿದರು. ಸ್ವಾಮಿ ದಯಾನಂದ ಅವರ ಆಗಮನವು ಈ ಪಿತೂರಿಗಳಿಗೆ ತೀವ್ರ ಹೊಡೆತ ನೀಡಿತು. “ಆರ್ಯ ಸಮಾಜದಿಂದ ಪ್ರಭಾವಿತರಾಗಿ ಲಾಲಾ ಲಜಪತ್ ರಾಯ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಸ್ವಾಮಿ ಶ್ರದ್ಧಾನಂದರಂತಹ ಕ್ರಾಂತಿಕಾರಿಗಳ ಸರಣಿಯೇ ಹೊರಹೊಮ್ಮಿತು. ಆದ್ದರಿಂದ, ದಯಾನಂದ ಜಿ ಕೇವಲ ವೈದಿಕ ಋಷಿಯಾಗಿರಲಿಲ್ಲ, ಅವರು ರಾಷ್ಟ್ರೀಯ ಋಷಿಮುನಿಯೂ ಆಗಿದ್ದರು.

ಅಮೃತ ಕಾಲದ ಆರಂಭಿಕ ವರ್ಷಗಳಲ್ಲಿ 200ನೇ ವಾರ್ಷಿಕೋತ್ಸವ ಬಂದಿದೆ. ಸ್ವಾಮಿ ದಯಾನಂದ ಅವರು ನೀಡಿದ್ದ ದೇಶದ ಉಜ್ವಲ ಭವಿಷ್ಯದ ದರ್ಶನವನ್ನು ಪ್ರಧಾನಿ ಮೋದಿ ಸ್ಮರಿಸಿದರು. “ಸ್ವಾಮೀಜಿಗೆ ಭಾರತದ ಬಗ್ಗೆ ಇದ್ದ ನಂಬಿಕೆ, ಆ ನಂಬಿಕೆಯನ್ನು ನಾವು ಅಮೃತ ಕಾಲದಲ್ಲಿ ನಮ್ಮ ಆತ್ಮವಿಶ್ವಾಸವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಸ್ವಾಮಿ ದಯಾನಂದರು ಆಧುನಿಕತೆಯ ಪ್ರತಿಪಾದಕರು ಮತ್ತು ಮಾರ್ಗದರ್ಶಿಯಾಗಿದ್ದರು” ಎಂದು ಪ್ರಧಾನಮಂತ್ರಿ ತಿಳಿಸಿದರು.

ಜಗತ್ತಿನಾದ್ಯಂತ ಆರ್ಯ ಸಮಾಜವು ಹಲವಾರು ಸಂಸ್ಥೆಗಳ ವ್ಯಾಪಕ ಜಾಲ ಹೊಂದಿದೆ. “2,500ಕ್ಕೂ ಹೆಚ್ಚು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಮತ್ತು 400ಕ್ಕೂ ಹೆಚ್ಚು ಗುರುಕುಲಗಳು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಆರ್ಯ ಸಮಾಜವು ಆಧುನಿಕತೆ ಮತ್ತು ಮಾರ್ಗದರ್ಶನಕ್ಕೆ ರೋಮಾಂಚಕ ಸಾಕ್ಷಿಯಾಗಿದೆ”. 21ನೇ ಶತಮಾನದಲ್ಲಿ ಹೊಸ ಚೈತನ್ಯದೊಂದಿಗೆ ರಾಷ್ಟ್ರ ನಿರ್ಮಾಣದ ಉಪಕ್ರಮಗಳ ಜವಾಬ್ದಾರಿಯನ್ನು ಈ ಸಮುದಾಯ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಡಿಎವಿ ಸಂಸ್ಥೆಗಳನ್ನು ‘ಸ್ವಾಮೀಜಿಯ ಜೀವಂತ ಸ್ಮರಣೆ’ ಎಂದು ಕರೆದ ಪ್ರಧಾನ ಮಂತ್ರಿ, ಅವುಗಳ ನಿರಂತರ ಸಬಲೀಕರಣದ ಭರವಸೆ ನೀಡಿದರು.

ಸ್ವಾಮೀಜಿ ಅವರ ದೃಷ್ಟಿಯನ್ನು ಮುಂದಕ್ಕೆ ಕೊಂಡೊಯ್ಯುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಧಾನಿ ಪ್ರಸ್ತಾಪಿಸಿದರು. ಆರ್ಯ ಸಮಾಜದ ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳು ಸ್ಥಳೀಯ, ಆತ್ಮನಿರ್ಭರ ಭಾರತ್, ಮಿಷನ್ ಲೈಫ್, ಜಲ ಸಂರಕ್ಷಣೆ, ಸ್ವಚ್ಛ ಭಾರತ್, ಕ್ರೀಡೆ ಮತ್ತು ಫಿಟ್‌ನೆಸ್‌ಗೆ ಕೊಡುಗೆ ನೀಡಬೇಕು. ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮೊದಲ ಬಾರಿಗೆ ಮತದಾರರಿಗೆ ಪ್ರಧಾನಿ ಮನವಿ ಮಾಡಿದರು.

ಆರ್ಯ ಸಮಾಜದ ಸ್ಥಾಪನೆಯ ಮುಂಬರುವ 150ನೇ ವಾರ್ಷಿಕೋತ್ಸವ ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ಮಹತ್ವದ ಸಂದರ್ಭವನ್ನು ಸಾಮೂಹಿಕ ಪ್ರಗತಿ ಮತ್ತು ಸ್ಮರಣೆಯ ಅವಕಾಶವಾಗಿ ಬಳಸಿಕೊಳ್ಳುವಂತೆ ಪ್ರತಿಯೊಬ್ಬರಿಗೂ ಕರೆ ನೀಡಿದರು.

ನೈಸರ್ಗಿಕ ಕೃಷಿಯ ಮಹತ್ವ ತಿಳಿಸಿದ ಪ್ರಧಾನ ಮಂತ್ರಿ, ಆಚಾರ್ಯ ದೇವವ್ರತ್ ಜಿ ಅವರ ಪ್ರಯತ್ನಗಳನ್ನು ಎತ್ತಿ ಹೇಳಿದರು. “ಸ್ವಾಮಿ ದಯಾನಂದ ಜಿ ಅವರ ಜನ್ಮಸ್ಥಳದಿಂದ ಸಾವಯವ ಕೃಷಿಯ ಸಂದೇಶವು ರಾಷ್ಟ್ರದ ಪ್ರತಿಯೊಬ್ಬ ರೈತರನ್ನು ತಲುಪಲಿ” ಎಂದು ಕರೆ ನೀಡಿದರು.

ಮಹಿಳಾ ಹಕ್ಕುಗಳಿಗಾಗಿ ಸ್ವಾಮಿ ದಯಾನಂದ ಅವರ ಪ್ರತಿಪಾದನೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಇತ್ತೀಚಿನ ನಾರಿ ಶಕ್ತಿ ವಂದನ್ ಅಧಿನಿಯಮ್ ಜಾರಿಗೆ ತರಲಾಗಿದೆ. “ಪ್ರಾಮಾಣಿಕ ಪ್ರಯತ್ನಗಳು ಮತ್ತು ಹೊಸ ನೀತಿಗಳ ಮೂಲಕ ರಾಷ್ಟ್ರವು ತನ್ನ ಹೆಣ್ಣು ಮಕ್ಕಳನ್ನು ಮುನ್ನಡೆಸುತ್ತಿದೆ”. ಈ ಸಾಮಾಜಿಕ ಉಪಕ್ರಮಗಳ ಮೂಲಕ ಜನರನ್ನು ಸಂಪರ್ಕಿಸುವ ಮಹತ್ವವೇ ಮಹರ್ಷಿ ದಯಾನಂದರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ಹೊಸದಾಗಿ ರೂಪುಗೊಂಡ ಯುವ ಸಂಘಟನೆ “ಮೈ-ಭಾರತ್‌”ಗೆ ಸೇರುವಂತೆ ಡಿಎವಿ(ದಯಾನಂದ್ ಆಂಗ್ಲೋ ವೇದಿಕ್) ಟ್ರಸ್ಟ್ ಜಾಲದ ಯುವಕರಿಗೆ ಕರೆ ನೀಡಿದ ಪ್ರಧಾನಿ, “ಸ್ವಾಮಿ ದಯಾನಂದ ಸರಸ್ವತಿ ಅವರ ಎಲ್ಲಾ ಅನುಯಾಯಿಗಳು ಡಿಎವಿ – ಶೈಕ್ಷಣಿಕ ಜಾಲದ ವಿದ್ಯಾರ್ಥಿಗಳನ್ನು ಮೈ-ಭಾರತ್ ಗೆ ಸೇರಲು ಪ್ರೋತ್ಸಾಹಿಸುವಂತೆ ನಾನು ಕೋರುತ್ತೇನೆ” ಎಂದು ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

***