Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಮನದ ಮಾತು 2.0’ ಯ 9 ನೇ ಕಂತಿನಲ್ಲಿ ಮಾತನಾಡಿದ ಪ್ರಧಾನ ಮಂತ್ರಿಗಳು


‘ಮನದ ಮಾತು 2.0’ ಯ 9 ನೇ ಕಂತಿನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಲವಾರು ಭಾರತೀಯರಿಗೆ ಪ್ರೇರಣೆ ನೀಡಬಲ್ಲ ಬಿಹಾರದ ಪ್ರೇರಣಾತ್ಮಕ ಉಪಾಖ್ಯಾನದ ಕುರಿತು ವಿವರಿಸಿದರು. ಬಿಹಾರದ ಪೂರ್ಣಿಯಾದ ಕತೆಯು, ಇಡೀ ದೇಶದ ಜನರಿಗೆ ಪ್ರೇರಣೆ ನೀಡುವಂತಹದ್ದಾಗಿದೆ. ದಶಕಗಳಿಂದಲೂ ಪ್ರವಾಹದ ಸಮಸ್ಯೆಯಿಂದ ಬಳಲುತ್ತಿರುವ ಪ್ರದೇಶ ಇದಾಗಿದೆ. ಇಂತಹದ್ದರಲ್ಲಿ, ಇಲ್ಲಿ, ಬೇಸಾಯ ಮತ್ತು ಇತರ ಆದಾಯದ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಬಹಳ ಕಷ್ಟಕರವಾಗಿದೆ. ಆದರೆ, ಇದೇ ಪರಿಸ್ಥಿತಿಗಳಲ್ಲಿ ಪೂರ್ಣಿಯಾದಲ್ಲಿ, ಕೆಲವು ಮಹಿಳೆಯರು ಒಂದು ಬೇರೆಯೇ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಮೊದಲು ಈ ಪ್ರದೇಶದ ಮಹಿಳೆಯರು ರೇಷ್ಮೆ ಹುಳುಗಳಿಂದ ರೇಷ್ಮೆಗೂಡು ತಯಾರಿಸುತ್ತಿದ್ದರು. ಇದಕ್ಕೆ ಅವರಿಗೆ ಬಹಳ ಕಡಿಮೆ ದರ ಸಿಗುತ್ತಿತ್ತು. ಇದನ್ನು ಖರೀದಿಸುವ ವ್ಯಕ್ತಿಗಳು, ಈ ಗೂಡುಗಳಿಂದ ರೇಷ್ಮೆ ದಾರ ತಯಾರಿಸಿ, ಭಾರೀ ಲಾಭ ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ, ಇಂದು ಪೂರ್ಣಿಯಾದ ಮಹಿಳೆಯರು ಒಂದು ಹೊಸ ಉಪಕ್ರಮಕ್ಕೆ ಮುಂದಾಗಿದ್ದಾರೆ ಮತ್ತು ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ಈ ಮಹಿಳೆಯರು ಸರ್ಕಾರದ ಸಹಾಯದೊಂದಿಗೆ, ಮಲ್ಬರಿ-ಉತ್ಪನ್ನ ಸಮೂಹ ರಚಿಸಿದರು ಎಂದು ಪ್ರಧಾನಮಂತ್ರಿಗಳು ಹೇಳಿದರು. ಇದಾದ ನಂತರ ಅವರು ರೇಷ್ಮೆ ಗೂಡುಗಳಿಂದ ರೇಷ್ಮೆ ದಾರ ತಯಾರಿಸಿ ಆ ನೂಲುಗಳಿಂದ ಸ್ವತಃ ಸೀರೆಗಳನ್ನು ತಯಾರಿಸಿ, ಹೆಚ್ಚಿನ ಆದಾಯಗಳಿಸಲಾರಂಭಿಸಿದರು ಎಂದು ಸಹ ಅವರು ತಿಳಿಸಿದರು.

ತಮ್ಮ ಹನ್ನೆರಡನೇ ವಯಸ್ಸಿನಲ್ಲೇ, ಮೌಂಟ್ ಅಕಾನ್ಕಾಗುವಾ ಏರುವ ಸಾಧನೆ ಮಾಡಿ ತೋರಿದ ಕಾಮ್ಯಾ ಕಾರ್ತಿಕೇಯನ್ ಅವರ ಸಾಧನೆಯ ಪ್ರೇರಣಾತ್ಮಕ ಕಥೆಯನ್ನೂ ಅವರು ಹಂಚಿಕೊಂಡರು. ಇದು ದಕ್ಷಿಣ ಅಮೆರಿಕಾದಲ್ಲಿ, ಆಂಡಿಸ್ ಪರ್ವತದ ಅತ್ಯಂತ ಎತ್ತರದ ಶಿಖರವಾಗಿದ್ದು. ಸುಮಾರು 7000 ಮೀಟರ್ ಎತ್ತರವಿದೆ ಎಂದು ಕೂಡಾ ಅವರು ತಿಳಿಸಿದರು. “ಈಗ ಆಕೆ ಮಿಷನ್ ಸಾಹಸ್ ಎಂಬ ಹೊಸದೊಂದು ಕಾರ್ಯಾಚರಣೆಯಲ್ಲಿದ್ದಾರೆ ಮತ್ತು ಇದರ ಮೂಲಕ ಅವರು ಎಲ್ಲಾ ಭೂಖಂಡಗಳ ಅತಿ ಎತ್ತರದ ಪರ್ವತಾರೋಹಣ ಮಾಡುವಲ್ಲಿ ನಿರತರಾಗಿದ್ದಾರೆ” ಎಂದು ಸಹ ಅವರು ತಿಳಿಸಿದರು. ನಿಮ್ಮ ಇಷ್ಟದ ಜಾಗ, ನಿಮ್ಮ ಇಚ್ಛೆಯ ಚಟುವಟಿಕೆ ಆಯ್ಕೆ ಮಾಡಿ ಮತ್ತು ನಿಮ್ಮ ಜೀವನವನ್ನು ಸಾಹಸದೊಂದಿಗೆ ಖಂಡಿತಾ ಜೋಡಿಸಿ ಎಂದು ನಾನು ನಿಮ್ಮೆಲ್ಲರಲ್ಲಿ ವಿಶೇಷವಾಗಿ ಮನವಿ ಮಾಡುತ್ತೇನೆ ಎಂದರು. ಜನರು ತಮ್ಮ ಇಷ್ಟದ ಜಾಗಕ್ಕೆ ತೆರಳಿ, ತಮ್ಮ ಇಚ್ಛೆಯ ಚಟುವಟಿಕೆ ಆಯ್ಕೆ ಮಾಡಿ ಮತ್ತು ತಮ್ಮ ಜೀವನವನ್ನು ಸಾಹಸಮಯಗೊಳಿಸಿ ಎಂದು ಎಲ್ಲರಲ್ಲಿ ಪ್ರಧಾನಮಂತ್ರಿಯವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮುಂದೆ ಅವರು, ಚಿಕ್ಕ ವಯಸ್ಸಿನಲ್ಲೇ ತಮ್ಮ ತಾಯಿ ಮತ್ತು ಪತಿಯನ್ನು ಕಳೆದುಕೊಂಡ ಕೇರಳದ ಕೊಲ್ಲಮ್ ನಿವಾಸಿ 105 ರ ವಯೋಮಾನದ ಭಾಗೀರತಿ ಅಮ್ಮಾ ಅವರ ಯಶೋಗಾಥೆಯನ್ನು ವಿವರಿಸಿದರು. ಅವರು 105 ನೇ ವಯಸ್ಸಿನಲ್ಲಿ ಪುನಃ ಶಾಲಾ ಶಿಕ್ಷಣವನ್ನು ಪುನರಾರಂಭಿಸಿದರು. ಈ ಇಳಿ ವಯಸ್ಸಿನಲ್ಲೂ ಭಾಗೀರಥಿ ಅಮ್ಮ ಲೆವೆಲ್ 4 ರ ಪರೀಕ್ಷೆ ಬರೆದರು ಮತ್ತು ಬಹಳ ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಅವರು ಪರೀಕ್ಷೆಯಲ್ಲಿ ಶೇಕಡಾ 75 ಅಂಕಗಳನ್ನು ಗಳಿಸಿದರು. ಇಷ್ಟೇ ಅಲ್ಲ, ಈಗ ಮುಂದೆ ಓದಲು ಬಯಸುತ್ತಿದ್ದಾರೆ. ಭಾಗೀರಥಿ ಅಮ್ಮನಂತಹ ವ್ಯಕ್ತಿಗಳು, ನಿಸ್ಸಂಶಯವಾಗಿಯೂ ಈ ದೇಶದ ಶಕ್ತಿಯಾಗಿದ್ದಾರೆ. ಸ್ಫೂರ್ತಿಯ ಅತಿದೊಡ್ಡ ಸೆಲೆಯಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಹುಟ್ಟಿನಿಂದಲೇ ದಿವ್ಯಾಂಗರಾದ ಮೊರಾದಾಬಾದ್ ನ ಹಮೀರ್ಪುರ್ ಗ್ರಾಮ ನಿವಾಸಿ ಸಲ್ಮಾನ್ ಅವರ ಉದಾಹರಣೆಯನ್ನು ಪ್ರಧಾನ ಮಂತ್ರಿಗಳು ಉಲ್ಲೇಖಿಸಿದರು. ಇಂತಹ ಕಷ್ಟಗಳ ನಡುವೆಯೂ ನಿರುತ್ಸಾಹರಾಗಲಿಲ್ಲ ಮತ್ತು ಸ್ವಂತಃ ತಮ್ಮ ಕೆಲಸ ಆರಂಭಿಸಬೇಕೆಂದು ನಿರ್ಧರಿಸಿದರು. ಜೊತೆಯಲ್ಲೇ, ತಾವು ತಮ್ಮಂತಹ ದಿವ್ಯಾಂಗರಿಗೆ ಸಹಾಯ ಕೂಡಾ ಮಾಡುವುದಾಗಿ ನಿರ್ಧರಿಸಿದರು. ನಂತರ, ಸಲ್ಮಾನ್ ತಮ್ಮ ಗ್ರಾಮದಲ್ಲೇ, ಚಪ್ಪಲಿ ಮತ್ತು ಡಿಟರ್ಜೆಂಟ್ ತಯಾರಿಸುವ ಕೆಲಸ ಆರಂಭಿಸಿದರು. ನೋಡ ನೋಡುತ್ತಿದ್ದಂತೆಯೇ, ಅವರೊಂದಿಗೆ ಇತರ 30 ಮಂದಿ ದಿವ್ಯಾಂಗ ಸ್ನೇಹಿತರು ಸೇರಿಕೊಂಡರು.

ಇಂಥದೇ ಧೃಡ ಸಂಕಲ್ಪ ತೋರಿದ ಗುಜರಾತ್ ನ ಕಛ್ ಪ್ರದೇಶದ ಅಜ್ರಕ್ ಗ್ರಾಮನಿವಾಸಿಗಳ ಕಥೆಯನ್ನೂ ಪ್ರಧಾನ ಮಂತ್ರಿಯವರು ವಿವರಿಸಿದರು. 2001 ರಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ,ಜನರೆಲ್ಲರೂ ಗ್ರಾಮ ತೊರೆಯುತ್ತಿದ್ದರು, ಆಗ ಇಸ್ಮಾಯಿಲ್ ಖತ್ರಿ ಎಂಬ ವ್ಯಕ್ತಿಯು, ಗ್ರಾಮದಲ್ಲೇ ಉಳಿದು, ತಮ್ಮ ಸಾಂಪ್ರದಾಯಿಕ ಅಜರಕ್ ಪ್ರಿಂಟ್ ನ ಕಲೆಯನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದರು. ನೋಡ ನೋಡುತ್ತಿದ್ದಂತೆಯೇ ಪ್ರಾಕೃತಿಕ ಬಣ್ಣಗಳಿಂದ ತಯಾರಿಸಿದ ಅಜರಕ್ ಕಲೆಯು ಪ್ರತಿಯೊಬ್ಬರನ್ನೂ ಆಕರ್ಷಿಸತೊಡಗಿತು ಮತ್ತು ಈ ಸಂಪೂರ್ಣ ಗ್ರಾಮವು ತನ್ನ ಸಾಂಪ್ರದಾಯಿಕ ಕರಕುಶಲ ವಿಧಾನದೊಂದಿಗೆ ಬೆಸೆದುಕೊಂಡಿತು.

ಪ್ರಧಾನ ಮಂತ್ರಿಗಳು ದೇಶದ ಜನತೆಗೆ ಇತ್ತೀಚೆಗೆ ಆಚರಿಸಲಾದ ಮಹಾ-ಶಿವರಾತ್ರಿಯ ಶುಭಾಷಯ ಕೋರಿ, ಮಹಾ-ಶಿವರಾತ್ರಿಯಂದು ಭೋಲೇ ಬಾಬಾನ ಆಶೀರ್ವಾದ ಎಲ್ಲರ ಮೇಲಿರಲಿ, ಎಲ್ಲರ ಮನೋಭಿಲಾಷೆಗಳನ್ನು ಶಿವ ಈಡೇರಿಸಲಿ, ಎಲ್ಲರೂ ಶಕ್ತಿವಂತರಾಗಿರಿ, ಆರೋಗ್ಯವಂತರಾಗಿರಿ, ಸುಖವಾಗಿರಿ, ಸಂತೋಷವಾಗಿರಿ ಮತ್ತು ದೇಶಕ್ಕಾಗಿ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿರಿ ಎಂದು ಅವರು ಹೇಳಿದರು.

“ಮುಂಬರುವ ದಿನಗಳಲ್ಲಿ ನಾವೆಲ್ಲ ಹೋಳಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಅದಾದ ನಂತರ ಶೀಘ್ರದಲ್ಲೇ ಗುಡಿಪಾಡವಾ ಕೂಡಾ ಬರಲಿದೆ. ನವರಾತ್ರಿಯ ಹಬ್ಬವೂ ವಸಂತ ಋತುವಿನೊಂದಿಗೆ ಮಿಳಿತವಾಗಿದೆ. ರಾಮನವಮಿ ಹಬ್ಬವನ್ನೂ ಆಚರಿಸಲಾಗುತ್ತದೆ. ಹಬ್ಬಗಳು ನಮ್ಮ ದೇಶದಲ್ಲಿ ಸಾಮಾಜಿಕ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಪ್ರತಿ ಹಬ್ಬದ ಹಿಂದೆ ಯಾವುದಾದರೊಂದು ಸಾಮಾಜಿಕ ಸಂದೇಶ ಅಡಗಿರುತ್ತದೆ ಮತ್ತು ಈ ಸಂದೇಶವು ಕೇವಲ ಸಮಾಜವನ್ನು ಮಾತ್ರವಲ್ಲ, ಸಂಪೂರ್ಣ ದೇಶವನ್ನು, ಏಕತೆಯಲ್ಲಿ ಬಂಧಿಸಿಡುತ್ತದೆ” ಎಂದು ಪ್ರಧಾನ ಮಂತ್ರಿಗಳು ಹೇಳಿದರು.