ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್, ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಜಿ, ಇತರ ಎಲ್ಲ ಗೌರವಾನ್ವಿತ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!
ಮೊದಲನೆಯದಾಗಿ, ನಾನು ಇಲ್ಲಿಗೆ ಬರುವುದರಲ್ಲಿ ವಿಳಂಬವಾದದ್ದಕ್ಕೆ ಕ್ಷಮೆಯಿರಲಿ. ನಿನ್ನೆ ನಾನು ಇಲ್ಲಿಗೆ ಬಂದಾಗ, ಇಂದು 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿವೆ ಎಂದು ತಿಳಿಯಿತು. ರಾಜಭವನದಿಂದ ನಾನು ಹೊರಡುವ ಸಮಯ ಮತ್ತು ಅವರ ಪರೀಕ್ಷೆಯ ಸಮಯ ಒಂದೇ ಆಗುತ್ತಿತ್ತು. ಭದ್ರತಾ ಕಾರಣಗಳಿಂದ ರಸ್ತೆಗಳನ್ನು ಮುಚ್ಚಿದರೆ, ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ತಲುಪಲು ತೊಂದರೆಯಾಗುವ ಸಾಧ್ಯತೆ ಇತ್ತು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದೆಂದು, ಎಲ್ಲಾ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ತಲುಪಿದ ನಂತರವೇ ರಾಜಭವನದಿಂದ ಹೊರಡಲು ನಿರ್ಧರಿಸಿದೆ. ಆದ್ದರಿಂದ, ನಾನು ಉದ್ದೇಶಪೂರ್ವಕವಾಗಿ 15-20 ನಿಮಿಷಗಳ ಕಾಲ ನನ್ನ ಹೊರಡುವಿಕೆಯನ್ನು ವಿಳಂಬ ಮಾಡಿದೆ. ಇದರಿಂದ ನಿಮಗೆಲ್ಲರಿಗೂ ಸ್ವಲ್ಪ ಅನಾನುಕೂಲವಾಯಿತು. ಮತ್ತೊಮ್ಮೆ ನಿಮ್ಮೆಲ್ಲರಿಗೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ.
ಸ್ನೇಹಿತರೇ,
ರಾಜ ಭೋಜರ ಈ ಪವಿತ್ರ ನಗರಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸುವುದು ನನಗೆ ಹೆಮ್ಮೆಯ ವಿಷಯವಾಗಿದೆ. ವಿವಿಧ ಕೈಗಾರಿಕೆಗಳು ಮತ್ತು ವಲಯಗಳ ಅನೇಕ ಸಹೋದ್ಯೋಗಿಗಳು ಇಂದು ಇಲ್ಲಿ ಸೇರಿದ್ದಾರೆ. ‘ವಿಕಸಿತ ಮಧ್ಯಪ್ರದೇಶ’ದಿಂದ ‘ವಿಕಸಿತ ಭಾರತ’ದವರೆಗಿನ ಪಯಣದಲ್ಲಿ ಇಂದಿನ ಕಾರ್ಯಕ್ರಮವು ಬಹಳ ಮಹತ್ವದ್ದಾಗಿದೆ. ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಮೋಹನ್ ಜೀ ಮತ್ತು ಅವರ ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಭಾರತದ ಇತಿಹಾಸದಲ್ಲಿ ಇದೇ ಮೊದಲು, ಇಡೀ ಜಗತ್ತು ಭಾರತದ ಭವಿಷ್ಯದ ಬಗ್ಗೆ ಇಷ್ಟು ಆಶಾವಾದವನ್ನು ವ್ಯಕ್ತಪಡಿಸುತ್ತಿದೆ. ಸಾಮಾನ್ಯ ಜನರಿರಲಿ, ಆರ್ಥಿಕ ತಜ್ಞರಿರಲಿ, ಬೇರೆ ದೇಶಗಳೇ ಆಗಲಿ ಅಥವಾ ಜಾಗತಿಕ ಸಂಸ್ಥೆಗಳೇ ಆಗಲಿ, ಎಲ್ಲರೂ ಭಾರತದಿಂದ ದೊಡ್ಡ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಬಂದಿರುವ ಹೇಳಿಕೆಗಳು ಭಾರತದ ಪ್ರತಿ ಹೂಡಿಕೆದಾರರ ಉತ್ಸಾಹವನ್ನು ಹೆಚ್ಚಿಸಿವೆ. ಕೆಲವೇ ದಿನಗಳ ಹಿಂದೆ, ವಿಶ್ವ ಬ್ಯಾಂಕ್ ಭಾರತವು ಮುಂಬರುವ ವರ್ಷಗಳಲ್ಲಿ ಜಗತ್ತಿನ ಅತಿ ವೇಗದ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ದೇಶವಾಗಿ ಮುಂದುವರೆಯುತ್ತದೆ ಎಂದು ಹೇಳಿದೆ. OECD ಯ ಪ್ರಮುಖ ಪ್ರತಿನಿಧಿಯೊಬ್ಬರು, “ವಿಶ್ವದ ಭವಿಷ್ಯ ಭಾರತದಲ್ಲಿದೆ” ಎಂದು ದೃಢವಾಗಿ ನುಡಿದಿದ್ದಾರೆ. ಇತ್ತೀಚೆಗೆ, ಹವಾಮಾನ ಬದಲಾವಣೆಯ ಕುರಿತಾದ ವಿಶ್ವಸಂಸ್ಥೆಯ ಸಂಸ್ಥೆಯೊಂದು ಭಾರತವನ್ನು ಸೌರಶಕ್ತಿಯಲ್ಲಿ ಒಂದು ಮಹಾಶಕ್ತಿಯೆಂದು ಗುರುತಿಸಿದೆ. ಅನೇಕ ದೇಶಗಳು ಕೇವಲ ಮಾತುಗಳನ್ನಾಡುತ್ತವೆ, ಆದರೆ ಭಾರತ ಮಾತ್ರ ಕಾರ್ಯರೂಪಕ್ಕೆ ತರುತ್ತದೆ ಎಂದು ಈ ಸಂಸ್ಥೆ ಸ್ಪಷ್ಟವಾಗಿ ಹೇಳಿದೆ. ಇತ್ತೀಚಿನ ವರದಿಯೊಂದು ಜಾಗತಿಕ ವಾಯುಯಾನ ಸಂಸ್ಥೆಗಳಿಗೆ ಭಾರತವು ಒಂದು ಅತ್ಯುತ್ತಮ ಪೂರೈಕೆ ಸರಪಳಿ ಕೇಂದ್ರವಾಗಿ ಹೇಗೆ ಹೊರಹೊಮ್ಮುತ್ತಿದೆ ಎಂಬುದನ್ನು ಎತ್ತಿ ತೋರಿಸಿದೆ. ಜಾಗತಿಕ ಪೂರೈಕೆ ಸರಪಳಿಯ ಸವಾಲುಗಳಿಗೆ ಭಾರತವು ಪರಿಹಾರವೆಂದು ಅನೇಕರು ನಂಬುತ್ತಾರೆ. ಭಾರತದ ಬಗ್ಗೆ ಜಗತ್ತಿನ ವಿಶ್ವಾಸ ಹೆಚ್ಚುತ್ತಿರುವ ಇಂತಹ ಅನೇಕ ಉದಾಹರಣೆಗಳನ್ನು ನಾನು ನೀಡಬಲ್ಲೆ. ಈ ವಿಶ್ವಾಸವು ಭಾರತದ ಪ್ರತಿಯೊಂದು ರಾಜ್ಯದ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತಿದೆ. ಇಂದು, ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಈ ಜಾಗತಿಕ ಶೃಂಗಸಭೆಯಲ್ಲಿ ಈ ಆಶಾವಾದವನ್ನು ನಾವು ಕಣ್ಣಾರೆ ಕಾಣಬಹುದು ಮತ್ತು ಅನುಭವಿಸಬಹುದು.
ಸ್ನೇಹಿತರೇ,
ಜನಸಂಖ್ಯೆಯ ಲೆಕ್ಕದಲ್ಲಿ ಮಧ್ಯಪ್ರದೇಶವು ಭಾರತದ ಐದನೇ ಅತಿ ದೊಡ್ಡ ರಾಜ್ಯ. ಕೃಷಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಇದೂ ಒಂದು ಮತ್ತು ಖನಿಜ ಸಂಪನ್ಮೂಲಗಳಲ್ಲೂ ಮೊದಲ ಐದು ರಾಜ್ಯಗಳ ಪಟ್ಟಿಯಲ್ಲಿದೆ. ಜೀವದಾಯಿನಿ ನರ್ಮದಾ ಮಾತೆಯ ಆಶೀರ್ವಾದವಿರುವ ಈ ರಾಜ್ಯಕ್ಕೆ, ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದಲ್ಲಿ ದೇಶದ ಮೊದಲ ಐದು ರಾಜ್ಯಗಳಲ್ಲಿ ಒಂದಾಗುವ ಎಲ್ಲಾ ಸಾಮರ್ಥ್ಯ ಮತ್ತು ಅವಕಾಶಗಳಿವೆ.
ಸ್ನೇಹಿತರೇ,
ಕಳೆದ ಎರಡು ದಶಕಗಳಲ್ಲಿ, ಮಧ್ಯಪ್ರದೇಶವು ಪರಿವರ್ತನೆಯ ಹೊಸ ಯುಗಕ್ಕೆ ಸಾಕ್ಷಿಯಾಗಿದೆ. ಒಂದು ಕಾಲದಲ್ಲಿ, ಈ ರಾಜ್ಯವು ವಿದ್ಯುತ್ ಮತ್ತು ನೀರಿನ ಪೂರೈಕೆಗೆ ಸಂಬಂಧಿಸಿದ ಪ್ರಮುಖ ಸವಾಲುಗಳನ್ನು ಎದುರಿಸುತ್ತಿತ್ತು. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯೂ ಕೆಟ್ಟದಾಗಿತ್ತು, ಇದರಿಂದ ಕೈಗಾರಿಕಾ ಅಭಿವೃದ್ಧಿ ತುಂಬಾ ಕಷ್ಟಕರವಾಗಿತ್ತು. ಆದಾಗ್ಯೂ, ಕಳೆದ 20 ವರ್ಷಗಳಲ್ಲಿ, ಜನರ ಬೆಂಬಲದೊಂದಿಗೆ, ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಉತ್ತಮ ಆಡಳಿತದ ಮೇಲೆ ಗಮನ ಕೇಂದ್ರೀಕರಿಸಿದೆ. ಎರಡು ದಶಕಗಳ ಹಿಂದೆ, ಹೂಡಿಕೆದಾರರು ಮಧ್ಯಪ್ರದೇಶದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದರು. ಆದರೆ ಇಂದು, ಮಧ್ಯಪ್ರದೇಶವು ದೇಶದ ಉನ್ನತ ಹೂಡಿಕೆ ತಾಣಗಳಲ್ಲಿ ಒಂದಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಒಂದು ಕಾಲದಲ್ಲಿ ಕಳಪೆ ರಸ್ತೆ ಪರಿಸ್ಥಿತಿಗಳಿಂದಾಗಿ ಮಧ್ಯಪ್ರದೇಶದಲ್ಲಿ ಬಸ್ ಸಾರಿಗೆಯೂ ಕಷ್ಟಕರವಾಗಿತ್ತು. ಆದರೆ ಇಂದು, ಮಧ್ಯಪ್ರದೇಶವು ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದೆ. ಜನವರಿ 2025 ರ ವೇಳೆಗೆ, ರಾಜ್ಯದಲ್ಲಿ ಸುಮಾರು 2 ಲಕ್ಷ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ, ಇದು ಸುಮಾರು 90% ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಇದು ಮಧ್ಯಪ್ರದೇಶವು ಹೊಸ ಉತ್ಪಾದನಾ ವಲಯಗಳಿಗೆ ಆಕರ್ಷಕ ತಾಣವಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ತೋರಿಸುತ್ತದೆ. ಈ ವರ್ಷವನ್ನು ಕೈಗಾರಿಕೆ ಮತ್ತು ಉದ್ಯೋಗದ ವರ್ಷವೆಂದು ಘೋಷಿಸಿದ್ದಕ್ಕಾಗಿ ಮೋಹನ್ ಜೀ ಮತ್ತು ಅವರ ತಂಡಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಕಳೆದ ದಶಕದಲ್ಲಿ, ಭಾರತವು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅಭೂತಪೂರ್ವ ಪ್ರಗತಿಯನ್ನು ಕಂಡಿದೆ. ಮಧ್ಯಪ್ರದೇಶವು ಇದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ದೇಶದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ, ಮಧ್ಯಪ್ರದೇಶದ ಮೂಲಕ ಹಾದುಹೋಗುತ್ತದೆ. ಇದರರ್ಥ, ಒಂದೆಡೆ, ಮಧ್ಯಪ್ರದೇಶವು ಮುಂಬೈನ ಬಂದರುಗಳಿಗೆ ವೇಗದ ಸಂಪರ್ಕವನ್ನು ಪಡೆಯುತ್ತಿದೆ ಮತ್ತು ಮತ್ತೊಂದೆಡೆ, ಇದು ಉತ್ತರ ಭಾರತದ ಮಾರುಕಟ್ಟೆಗಳನ್ನು ಸಹ ಸಂಪರ್ಕಿಸುತ್ತಿದೆ. ಇಂದು, ಮಧ್ಯಪ್ರದೇಶವು 5 ಲಕ್ಷ ಕಿಲೋಮೀಟರ್ ಗಳಿಗೂ ಹೆಚ್ಚು ರಸ್ತೆ ಜಾಲವನ್ನು ಹೊಂದಿದೆ. ರಾಜ್ಯದ ಕೈಗಾರಿಕಾ ಕಾರಿಡಾರ್ ಗಳನ್ನು ಆಧುನಿಕ ಎಕ್ಸ್ಪ್ರೆಸ್ ವೇಗಳೊಂದಿಗೆ ಸಂಯೋಜಿಸಲಾಗುತ್ತಿದೆ. ಇದು ಮಧ್ಯಪ್ರದೇಶದಲ್ಲಿ ಲಾಜಿಸ್ಟಿಕ್ಸ್ ವಲಯದಲ್ಲಿ ತ್ವರಿತ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.
ಸ್ನೇಹಿತರೇ,
ವಿಮಾನ ಸಂಪರ್ಕದ ಬಗ್ಗೆ ಹೇಳುವುದಾದರೆ, ಗ್ವಾಲಿಯರ್ ಮತ್ತು ಜಬಲ್ಪುರ್ ವಿಮಾನ ನಿಲ್ದಾಣಗಳ ಟರ್ಮಿನಲ್ ಗಳನ್ನು ವಿಸ್ತರಿಸಲಾಗಿದೆ. ಆದರೆ ನಾವು ಅಲ್ಲಿಗೆ ನಿಂತಿಲ್ಲ – ಮಧ್ಯಪ್ರದೇಶದ ವಿಸ್ತಾರವಾದ ರೈಲ್ವೆ ಜಾಲವನ್ನು ಸಹ ಆಧುನೀಕರಿಸಲಾಗುತ್ತಿದೆ. ರಾಜ್ಯವು 100% ರೈಲ್ವೆ ವಿದ್ಯುದ್ದೀಕರಣವನ್ನು ಸಾಧಿಸಿದೆ. ಭೋಪಾಲ್ ನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣವು ತನ್ನ ವಿಶ್ವ ದರ್ಜೆಯ ವಿನ್ಯಾಸದಿಂದ ಎಲ್ಲರನ್ನೂ ಮೆಚ್ಚಿಸುತ್ತಿದೆ. ಈ ಮಾದರಿಯನ್ನು ಅನುಸರಿಸಿ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ಮಧ್ಯಪ್ರದೇಶದ 80 ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ.
ಸ್ನೇಹಿತರೇ,
ಕಳೆದ ದಶಕವು ಭಾರತದ ಇಂಧನ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿಗೆ ಸಾಕ್ಷಿಯಾಗಿದೆ. ವಿಶೇಷವಾಗಿ ಹಸಿರು ಇಂಧನದಲ್ಲಿ, ಭಾರತ ಊಹಿಸಲೂ ಸಾಧ್ಯವಾಗದ್ದನ್ನು ಸಾಧಿಸಿದೆ. ಕಳೆದ 10 ವರ್ಷಗಳಲ್ಲಿ, 70 ಶತಕೋಟಿ ಡಾಲರ್ ಗಳಿಗೂ ಹೆಚ್ಚು, ಅಂದರೆ 5 ಲಕ್ಷ ಕೋಟಿ ರೂಪಾಯಿಗಳ ಬಂಡವಾಳವನ್ನು ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಲಾಗಿದೆ. ಇದರಿಂದಾಗಿ ಕಳೆದ ವರ್ಷ ಮಾತ್ರ ಪರಿಸರ ಸ್ನೇಹಿ ಇಂಧನ ಕ್ಷೇತ್ರದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ. ಮಧ್ಯಪ್ರದೇಶವು ಈ ಇಂಧನ ಕ್ರಾಂತಿಯಿಂದ ಹೆಚ್ಚಿನ ಲಾಭ ಪಡೆದಿದೆ. ಇಂದು, ಮಧ್ಯಪ್ರದೇಶವು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದು, ಸುಮಾರು 31,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 30% ನಷ್ಟು ಭಾಗ ಪರಿಸರ ಸ್ನೇಹಿ ಮೂಲಗಳಿಂದ ಬರುತ್ತದೆ. ರೇವಾ ಸೋಲಾರ್ ಪಾರ್ಕ್ ದೇಶದ ಅತಿದೊಡ್ಡ ಸೌರ ಉದ್ಯಾನವನಗಳಲ್ಲಿ ಒಂದಾಗಿದೆ. ಇತ್ತೀಚೆಗೆ, ಓಂಕಾರೇಶ್ವರದಲ್ಲಿ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ಉದ್ಘಾಟಿಸಲಾಗಿದೆ. ಇದರ ಜೊತೆಗೆ, ಸರ್ಕಾರವು ಬಿನಾ ರಿಫೈನರಿ ಪೆಟ್ರೋಕೆಮಿಕಲ್ ಸಂಕೀರ್ಣದಲ್ಲಿ 50,000 ಕೋಟಿ ರೂಪಾಯಿಗಳ ಬಂಡವಾಳ ಹೂಡಿದೆ. ಇದು ಮಧ್ಯಪ್ರದೇಶವನ್ನು ಪೆಟ್ರೋಕೆಮಿಕಲ್ ಗಳ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಲು ನೆರವಾಗಲಿದೆ. ಈ ಬೆಳೆಯುತ್ತಿರುವ ಮೂಲಸೌಕರ್ಯಗಳಿಗೆ ಪೂರಕವಾಗಿ, ಮಧ್ಯಪ್ರದೇಶ ಸರ್ಕಾರವು ಆಧುನಿಕ ನೀತಿಗಳು ಮತ್ತು ವಿಶೇಷ ಕೈಗಾರಿಕಾ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ. ರಾಜ್ಯವು ಈಗಾಗಲೇ 300 ಕ್ಕೂ ಹೆಚ್ಚು ಕೈಗಾರಿಕಾ ವಲಯಗಳನ್ನು ಹೊಂದಿದೆ. ಪಿಥಾಂಪುರ್, ರತ್ಲಾಮ್ ಮತ್ತು ದೇವಾಸ್ ನಲ್ಲಿ ಸಾವಿರಾರು ಎಕರೆಗಳ ವಿಸ್ತೀರ್ಣದಲ್ಲಿ ದೊಡ್ಡ ಹೂಡಿಕೆ ವಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರರ್ಥ ಎಲ್ಲಾ ಹೂಡಿಕೆದಾರರಿಗೆ, ಮಧ್ಯಪ್ರದೇಶವು ಭಾರಿ ಲಾಭ ಗಳಿಸಲು ಅಪಾರ ಅವಕಾಶಗಳನ್ನು ಒದಗಿಸುತ್ತದೆ.
ಸ್ನೇಹಿತರೇ,
ಕೈಗಾರಿಕಾ ಅಭಿವೃದ್ಧಿಗೆ ನೀರಿನ ಭದ್ರತೆ ಎಷ್ಟು ಮುಖ್ಯ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದನ್ನು ಖಚಿತಪಡಿಸಿಕೊಳ್ಳಲು, ನಾವು ಒಂದೆಡೆ ನೀರಿನ ಸಂರಕ್ಷಣೆಯತ್ತ ಗಮನ ಹರಿಸುತ್ತಿದ್ದೇವೆ ಮತ್ತು ಮತ್ತೊಂದೆಡೆ ನದಿಗಳ ಜೋಡಣೆಯ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ಮುನ್ನಡೆಯುತ್ತಿದ್ದೇವೆ. ಈ ಉಪಕ್ರಮದಿಂದ ಮಧ್ಯಪ್ರದೇಶದ ಕೃಷಿ ಮತ್ತು ಕೈಗಾರಿಕೆಗಳು ಹೆಚ್ಚಿನ ಲಾಭ ಪಡೆಯಲಿವೆ. ಇತ್ತೀಚೆಗೆ, 45,000 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯ ಕಾಮಗಾರಿ ಆರಂಭವಾಗಿದೆ. ಈ ಯೋಜನೆಯು ಸುಮಾರು 10 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಇದು ಮಧ್ಯಪ್ರದೇಶದಲ್ಲಿ ನೀರಿನ ನಿರ್ವಹಣೆಯನ್ನು ಗಣನೀಯವಾಗಿ ಬಲಪಡಿಸುತ್ತದೆ. ರೀತಿಯ ಉಪಕ್ರಮಗಳು ಆಹಾರ ಸಂಸ್ಕರಣೆ, ಕೃಷಿ-ಕೈಗಾರಿಕೆ ಮತ್ತು ಜವಳಿ ವಲಯಗಳಲ್ಲಿ ಅಪಾರ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತವೆ.
ಸ್ನೇಹಿತರೇ,
ಮಧ್ಯಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಅಭಿವೃದ್ಧಿಯ ಗತಿಯೂ ದುಪ್ಪಟ್ಟಾಗಿದೆ. ರಾಜ್ಯ ಮತ್ತು ದೇಶದ ಪ್ರಗತಿಗಾಗಿ ಕೇಂದ್ರ ಸರ್ಕಾರವು ಮಧ್ಯಪ್ರದೇಶ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಚುನಾವಣೆಯ ಸಮಯದಲ್ಲಿ, ನಮ್ಮ ಮೂರನೇ ಅವಧಿಯಲ್ಲಿ ನಾವು ಮೂರು ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ನಾನು ಭರವಸೆ ನೀಡಿದ್ದೆ. 2025 ರ ಮೊದಲ 50 ದಿನಗಳಲ್ಲಿಯೇ ನಾವು ಈ ವೇಗವನ್ನು ಕಾಣುತ್ತಿದ್ದೇವೆ. ಈ ತಿಂಗಳು, ನಮ್ಮ ಬಜೆಟ್ ಮಂಡಿಸಲಾಗಿದೆ. ಈ ಬಜೆಟ್ನಲ್ಲಿ, ಭಾರತದ ಅಭಿವೃದ್ಧಿಗೆ ಚಾಲನೆ ನೀಡುವ ಪ್ರತಿಯೊಂದು ಅಂಶಕ್ಕೂ ನಾವು ಉತ್ತೇಜನ ನೀಡಿದ್ದೇವೆ. ನಮ್ಮ ಮಧ್ಯಮ ವರ್ಗವು ಅತಿ ಹೆಚ್ಚು ತೆರಿಗೆ ಪಾವತಿಸುವ ವರ್ಗವಾಗಿದ್ದು, ಸೇವೆಗಳು ಮತ್ತು ಉತ್ಪಾದನಾ ವಲಯಗಳಿಗೆ ಬೇಡಿಕೆಯನ್ನು ಸೃಷ್ಟಿಸುತ್ತದೆ. ಈ ಬಜೆಟ್ನಲ್ಲಿ ಮಧ್ಯಮ ವರ್ಗವನ್ನು ಸಬಲೀಕರಣಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. 12 ಲಕ್ಷ ರೂಪಾಯಿಗಳವರೆಗಿನ ಆದಾಯವನ್ನು ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಮತ್ತು ತೆರಿಗೆ ಶ್ರೇಣಿಗಳನ್ನು ಪರಿಷ್ಕರಿಸಲಾಗಿದೆ. ಬಜೆಟ್ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಬಡ್ಡಿದರಗಳನ್ನು ಇಳಿಸಿದೆ.
ಸ್ನೇಹಿತರೇ,
ಉತ್ಪಾದನಾ ಕ್ಷೇತ್ರದಲ್ಲಿ ನಾವು ಸಂಪೂರ್ಣ ಸ್ವಾವಲಂಬನೆ ಸಾಧಿಸಲು, ಸ್ಥಳೀಯ ಪೂರೈಕೆ ಸರಪಳಿಯನ್ನು ಬಲಪಡಿಸುವುದಕ್ಕೆ ಈ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಹಿಂದಿನ ಸರ್ಕಾರಗಳು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (MSME) ಸಾಮರ್ಥ್ಯವನ್ನು ಕುಂಠಿತಗೊಳಿಸಿದ್ದವು. ಇದರಿಂದಾಗಿ ಭಾರತದಲ್ಲಿ ಸ್ಥಳೀಯ ಪೂರೈಕೆ ಸರಪಳಿಯು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿಲ್ಲ. ಆದರೆ ಇಂದು, MSMEಗಳ ನೇತೃತ್ವದಲ್ಲಿ ಸ್ಥಳೀಯ ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸುವುದಕ್ಕೆ ನಾವು ಆದ್ಯತೆ ನೀಡುತ್ತಿದ್ದೇವೆ. MSMEಗಳ ವ್ಯಾಖ್ಯಾನವನ್ನು ಇನ್ನಷ್ಟು ಉತ್ತಮಗೊಳಿಸಲಾಗಿದೆ, ಸಾಲ ಆಧಾರಿತ ಪ್ರೋತ್ಸಾಹ ಧನವನ್ನು ಒದಗಿಸಲಾಗುತ್ತಿದೆ, ಸಾಲ ಸೌಲಭ್ಯವನ್ನು ಸುಲಭಗೊಳಿಸಲಾಗಿದೆ ಮತ್ತು ಮೌಲ್ಯವರ್ಧನೆ ಹಾಗೂ ರಫ್ತಿಗೆ ಹೆಚ್ಚಿನ ಬೆಂಬಲ ನೀಡಲಾಗುತ್ತಿದೆ.
ಸ್ನೇಹಿತರೇ,
ಕಳೆದ ದಶಕದಿಂದ, ನಾವು ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸುಧಾರಣೆಗಳನ್ನು ಜಾರಿಗೊಳಿಸುವುದನ್ನು ಚುರುಕುಗೊಳಿಸಿದ್ದೇವೆ. ಈಗ, ರಾಜ್ಯ ಮತ್ತು ಸ್ಥಳೀಯ ಹಂತಗಳಲ್ಲಿಯೂ ಸುಧಾರಣೆಗಳನ್ನು ಉತ್ತೇಜಿಸಲಾಗುತ್ತಿದೆ. ಬಜೆಟ್ ನಲ್ಲಿ ಪ್ರಸ್ತಾಪಿಸಲಾದ ರಾಜ್ಯ ಡಿ-ರೆಗ್ಯುಲೇಶನ್ ಆಯೋಗದ ಬಗ್ಗೆ ನಾನು ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ನಾವು ರಾಜ್ಯಗಳೊಂದಿಗೆ ನಿರಂತರವಾಗಿ ಸಮಾಲೋಚಿಸುತ್ತಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ, ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸಿ 40,000 ಕ್ಕೂ ಹೆಚ್ಚು ಅನಗತ್ಯ ನಿಯಮಗಳನ್ನು ಕಡಿಮೆ ಮಾಡಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ, ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿರುವ ಸುಮಾರು 1,500 ಹಳೆಯ ಕಾನೂನುಗಳನ್ನು ರದ್ದುಪಡಿಸಲಾಗಿದೆ. ವ್ಯಾಪಾರ ನಡೆಸುವುದನ್ನು ಸುಲಭಗೊಳಿಸಲು ಅಡ್ಡಿಪಡಿಸುವ ನಿಯಮಗಳನ್ನು ಗುರುತಿಸುವುದು ನಮ್ಮ ಉದ್ದೇಶ. ಡಿ-ರೆಗ್ಯುಲೇಶನ್ ಆಯೋಗವು ರಾಜ್ಯಗಳಲ್ಲಿ ಹೂಡಿಕೆ-ಸ್ನೇಹಿ ನಿಯಂತ್ರಕ ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡುತ್ತದೆ.
ಸ್ನೇಹಿತರೇ,
ಈ ಬಜೆಟ್ ನಲ್ಲಿ, ನಾವು ಮೂಲಭೂತ ಕಸ್ಟಮ್ಸ್ ಸುಂಕ ರಚನೆಯನ್ನು ಸರಳೀಕರಿಸಿದ್ದೇವೆ. ಹಲವಾರು ಅಗತ್ಯ ಕೈಗಾರಿಕಾ ಉತ್ಪನ್ನಗಳ ಸುಂಕವನ್ನು ಕಡಿಮೆ ಮಾಡಲಾಗಿದೆ. ಕಸ್ಟಮ್ಸ್ ಪ್ರಕರಣಗಳ ಮೌಲ್ಯಮಾಪನಕ್ಕೆ ಸಮಯ ಮಿತಿಯನ್ನು ಸಹ ನಿಗದಿಪಡಿಸಲಾಗುತ್ತಿದೆ. ಇದರ ಜೊತೆಗೆ, ಖಾಸಗಿ ಉದ್ಯಮಶೀಲತೆ ಮತ್ತು ಹೂಡಿಕೆಗಾಗಿ ಹೊಸ ವಲಯಗಳನ್ನು ನಿರಂತರವಾಗಿ ತೆರೆಯಲಾಗುತ್ತಿದೆ. ಈ ವರ್ಷ, ಪರಮಾಣು ಶಕ್ತಿ, ಜೈವಿಕ ಉತ್ಪಾದನೆ, ನಿರ್ಣಾಯಕ ಖನಿಜ ಸಂಸ್ಕರಣೆ ಮತ್ತು ಲಿಥಿಯಂ ಬ್ಯಾಟರಿ ಉತ್ಪಾದನೆ ಸೇರಿದಂತೆ ಹೂಡಿಕೆಗೆ ಹಲವಾರು ಹೊಸ ಮಾರ್ಗಗಳನ್ನು ನಾವು ತೆರೆದಿದ್ದೇವೆ. ಇದು ಸರ್ಕಾರದ ಉದ್ದೇಶ ಮತ್ತು ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಸ್ನೇಹಿತರೇ,
ಭಾರತದ ಅಭಿವೃದ್ಧಿ ಹೊಂದಿದ ಭವಿಷ್ಯವನ್ನು ರೂಪಿಸುವಲ್ಲಿ ಮೂರು ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸಲಿವೆ. ಈ ಮೂರು ಕ್ಷೇತ್ರಗಳು ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ. ಅವುಗಳೆಂದರೆ ಜವಳಿ, ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ. ಜವಳಿ ಕ್ಷೇತ್ರದ ಕಡೆಗೆ ಗಮನ ಹರಿಸಿದರೆ, ಭಾರತವು ಹತ್ತಿ, ರೇಷ್ಮೆ, ಪಾಲಿಯೆಸ್ಟರ್ ಮತ್ತು ವಿಸ್ಕೋಸ್ನ ಎರಡನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಜವಳಿ ಉದ್ಯಮವು ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತದೆ. ಜವಳಿ ಉತ್ಪಾದನೆಯಲ್ಲಿ ಭಾರತವು ಶ್ರೀಮಂತ ಪರಂಪರೆ, ನುರಿತ ಕಾರ್ಮಿಕ ವರ್ಗ ಮತ್ತು ಉದ್ಯಮಶೀಲತಾ ಮನೋಭಾವವನ್ನು ಹೊಂದಿದೆ. ವಿಶೇಷವಾಗಿ ಮಧ್ಯಪ್ರದೇಶವನ್ನು ಭಾರತದ “ಹತ್ತಿ ರಾಜಧಾನಿ” ಎಂದೇ ಕರೆಯಲಾಗುತ್ತದೆ. ಭಾರತದ ಸಾವಯವ ಹತ್ತಿ ಪೂರೈಕೆಯಲ್ಲಿ ಸುಮಾರು 25 ಪ್ರತಿಶತದಷ್ಟು ಮಧ್ಯಪ್ರದೇಶದಿಂದ ಬರುತ್ತದೆ. ದೇಶದಲ್ಲಿ ಮಲ್ಬರಿ ರೇಷ್ಮೆಯ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯವೂ ಇದಾಗಿದೆ. ಇಲ್ಲಿಯ ಪ್ರಸಿದ್ಧ ಚಂದೇರಿ ಮತ್ತು ಮಹೇಶ್ವರಿ ಸೀರೆಗಳು ಅತ್ಯಂತ ಜನಪ್ರಿಯವಾಗಿದ್ದು, ಭೌಗೋಳಿಕ ಗುರುತಿನ (GI) ಟ್ಯಾಗ್ ಪಡೆದುಕೊಂಡಿವೆ. ಈ ವಲಯದಲ್ಲಿ ನೀವು ಹೂಡಿಕೆ ಮಾಡುವುದರಿಂದ ಮಧ್ಯಪ್ರದೇಶದ ಜವಳಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಮಿಂಚಲು ಗಣನೀಯವಾಗಿ ಸಹಾಯವಾಗುತ್ತದೆ.
ಸ್ನೇಹಿತರೇ,
ಸಾಂಪ್ರದಾಯಿಕ ಜವಳಿಗಳ ಜೊತೆಗೆ, ಭಾರತವು ಹೊಸ ಅವಕಾಶಗಳನ್ನು ಸಹ ಅನ್ವೇಷಿಸುತ್ತಿದೆ. ನಾವು ಕೃಷಿ ಜವಳಿ, ವೈದ್ಯಕೀಯ ಜವಳಿ ಮತ್ತು ಭೂ ಜವಳಿಗಳನ್ನು ಉತ್ತೇಜಿಸುತ್ತಿದ್ದೇವೆ, ಇವು ತಾಂತ್ರಿಕ ಜವಳಿಗಳ ವರ್ಗಕ್ಕೆ ಸೇರುತ್ತವೆ. ಇದಕ್ಕಾಗಿ ರಾಷ್ಟ್ರೀಯ ಮಿಷನ್ ಪ್ರಾರಂಭಿಸಲಾಗಿದೆ ಮತ್ತು ನಾವು ಬಜೆಟ್ ನಲ್ಲಿ ಅದಕ್ಕೆ ಪ್ರೋತ್ಸಾಹಕಗಳನ್ನು ಒದಗಿಸಿದ್ದೇವೆ. ಪಿಎಂ ಮಿತ್ರ ಯೋಜನೆಯ ಬಗ್ಗೆಯೂ ನಿಮಗೆ ತಿಳಿದಿರಬೇಕು, ಇದರ ಅಡಿಯಲ್ಲಿ ದೇಶಾದ್ಯಂತ ಏಳು ಪ್ರಮುಖ ಜವಳಿ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಪಾರ್ಕ್ಗಳಲ್ಲಿ ಒಂದನ್ನು ಮಧ್ಯಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದ್ದು, ಇದು ಜವಳಿ ವಲಯದ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜವಳಿ ಉದ್ಯಮಕ್ಕಾಗಿ ಘೋಷಿಸಲಾದ PLI ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ.
ಸ್ನೇಹಿತರೇ,
ಜವಳಿ ಕ್ಷೇತ್ರದಂತೆಯೇ, ಭಾರತವು ತನ್ನ ಪ್ರವಾಸೋದ್ಯಮ ವಲಯಕ್ಕೂ ಹೊಸ ಆಯಾಮಗಳನ್ನು ನೀಡುತ್ತಿದೆ. ಮಧ್ಯಪ್ರದೇಶ ಪ್ರವಾಸೋದ್ಯಮಕ್ಕಾಗಿ ಒಂದು ಕಾಲದಲ್ಲಿ “ಎಂ.ಪಿ. ಅಜಬ್ ಭೀ ಹೈ, ಸಬ್ಸೆ ಗಜಬ್ ಭೀ ಹೈ” (ಮಧ್ಯಪ್ರದೇಶ ವಿಶಿಷ್ಟವೂ ಹೌದು, ಅತ್ಯಂತ ಅದ್ಭುತವೂ ಹೌದು) ಎಂಬ ಜನಪ್ರಿಯ ಅಭಿಯಾನವಿತ್ತು. ಮಧ್ಯಪ್ರದೇಶದಲ್ಲಿ, ನರ್ಮದಾ ನದಿ ಮತ್ತು ಬುಡಕಟ್ಟು ಪ್ರದೇಶಗಳ ಸುತ್ತಮುತ್ತಲಿನ ಪ್ರವಾಸೋದ್ಯಮ ಮೂಲಸೌಕರ್ಯಗಳಲ್ಲಿ ಗಣನೀಯ ಅಭಿವೃದ್ಧಿ ಕಂಡುಬಂದಿದೆ. ರಾಜ್ಯವು ಹಲವಾರು ರಾಷ್ಟ್ರೀಯ ಉದ್ಯಾನವನಗಳ ತವರೂರಾಗಿದ್ದು, ಆರೋಗ್ಯ ಮತ್ತು ಕ್ಷೇಮ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳನ್ನು ಒದಗಿಸುತ್ತದೆ. “ಹೀಲ್ ಇನ್ ಇಂಡಿಯಾ” ಎಂಬ ಘೋಷಣೆಯು ಜಾಗತಿಕ ಮನ್ನಣೆಯನ್ನು ಗಳಿಸುತ್ತಿದೆ. ಆರೋಗ್ಯ ಮತ್ತು ಕ್ಷೇಮ ಕ್ಷೇತ್ರದಲ್ಲಿ ಹೂಡಿಕೆಯ ಅವಕಾಶಗಳು ನಿರಂತರವಾಗಿ ಹೆಚ್ಚುತ್ತಿವೆ. ಆದ್ದರಿಂದಲೇ, ಈ ಕ್ಷೇತ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವವನ್ನು ನಮ್ಮ ಸರ್ಕಾರವು ಉತ್ತೇಜಿಸುತ್ತಿದೆ. ಭಾರತವು ತನ್ನ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳು ಮತ್ತು ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್) ಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸುತ್ತಿದೆ. ನಾವು ವಿಶೇಷ ಆಯುಷ್ ವೀಸಾಗಳನ್ನು ಸಹ ನೀಡುತ್ತಿದ್ದೇವೆ. ಈ ಎಲ್ಲಾ ಉಪಕ್ರಮಗಳು ಮಧ್ಯಪ್ರದೇಶಕ್ಕೂ ಸಹ ಹೆಚ್ಚಿನ ಲಾಭವನ್ನು ತಂದುಕೊಡುತ್ತವೆ.
ಸ್ನೇಹಿತರೇ,
ನೀವು ಇಲ್ಲೇ ಇರುವುದರಿಂದ, ಉಜ್ಜಯಿನಿಯಲ್ಲಿರುವ ಮಹಾಕಾಲ್ ಮಹಾಲೋಕ್ಗೆ ಭೇಟಿ ನೀಡುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ಅಲ್ಲಿ ನೀವು ಮಹಾಕಾಲ್ ದೇವರ ಆಶೀರ್ವಾದ ಪಡೆಯುವುದರ ಜೊತೆಗೆ, ದೇಶವು ತನ್ನ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸುತ್ತಿದೆ ಎಂಬುದನ್ನು ಕಣ್ಣಾರೆ ಕಾಣುವಿರಿ.
ಸ್ನೇಹಿತರೇ,
ನಾನು ಕೆಂಪು ಕೋಟೆಯಿಂದ ಹೇಳಿದ ಮಾತು ನಿಮಗೆ ನೆನಪಿರಬಹುದು: “ಇದು ಸಕಾಲ, ಸರಿಯಾದ ಸಮಯ.” ಮಧ್ಯಪ್ರದೇಶದಲ್ಲಿ ಹೂಡಿಕೆ ಮಾಡಲು ಮತ್ತು ಹೂಡಿಕೆಗಳನ್ನು ವಿಸ್ತರಿಸಲು ಇದೇ ಸೂಕ್ತ ಸಮಯ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು.
ಧನ್ಯವಾದಗಳು.
ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.
*****
Addressing the Global Investors Summit 2025 in Bhopal. With a strong talent pool and thriving industries, Madhya Pradesh is becoming a preferred business destination. https://t.co/EOUVj9ePW7
— Narendra Modi (@narendramodi) February 24, 2025
The world is optimistic about India. pic.twitter.com/5cBcUw74p3
— PMO India (@PMOIndia) February 24, 2025
In the past decade, India has witnessed a boom in infrastructure development. pic.twitter.com/bndn4hv8Bn
— PMO India (@PMOIndia) February 24, 2025
The past decade has been a period of unprecedented growth for India's energy sector. pic.twitter.com/ZIfB0MKjEz
— PMO India (@PMOIndia) February 24, 2025
Water security is crucial for industrial development.
— PMO India (@PMOIndia) February 24, 2025
On one hand, we are emphasising water conservation and on the other, we are advancing with the mega mission of river interlinking. pic.twitter.com/hv2QOzmaLw
In this year's budget, we have energised every catalyst of India's growth. pic.twitter.com/5taehyiNQa
— PMO India (@PMOIndia) February 24, 2025
After national level, reforms are now being encouraged at the state and local levels. pic.twitter.com/7zisj7ek88
— PMO India (@PMOIndia) February 24, 2025
Textile, Tourism and Technology will be key drivers of India's developed future. pic.twitter.com/yi0jFA1wTp
— PMO India (@PMOIndia) February 24, 2025
The Global Investors Summit in Madhya Pradesh is a commendable initiative. It serves as a vital platform to showcase the state’s immense potential in industry, innovation and infrastructure. By attracting global investors, it is paving the way for economic growth and job… pic.twitter.com/MyRyx3CqrY
— Narendra Modi (@narendramodi) February 24, 2025
The future of the world is in India!
— Narendra Modi (@narendramodi) February 24, 2025
Come, explore the growth opportunities in our nation…. pic.twitter.com/IRcLhy4CJK
Madhya Pradesh will benefit significantly from the infrastructure efforts of the NDA Government. pic.twitter.com/WVdXczW3cV
— Narendra Modi (@narendramodi) February 24, 2025
Our Governments, at the Centre and in MP, are focusing on water security, which is essential for growth. pic.twitter.com/9xzR8tGbNJ
— Narendra Modi (@narendramodi) February 24, 2025
The first 50 days of 2025 have witnessed fast-paced growth! pic.twitter.com/CfbaU7US2m
— Narendra Modi (@narendramodi) February 24, 2025