Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸುಮಾರು 19,260 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸುಮಾರು 19,260 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿಂದು ಸುಮಾರು 19,260 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಯೋಜನೆಗಳ ಪೈಕಿ ದೆಹಲಿ-ವಡೋದರಾ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ, ಪಿಎಂಎವೈ-ಗ್ರಾಮೀಣ ಯೋಜನೆ ಅಡಿ ನಿರ್ಮಿಸಲಾದ 2.2 ಲಕ್ಷ ಮನೆಗಳ ಗೃಹ ಪ್ರವೇಶ ಮತ್ತು ಪಿಎಂಎವೈ – ನಗರ ಯೋಜನೆ ಅಡಿ ನಿರ್ಮಿಸಲಾದ ಮನೆಗಳ ಲೋಕಾರ್ಪಣೆ, ಜಲಜೀವನ್ ಮಿಷನ್ ಯೋಜನೆಗಳಿಗೆ ಶಂಕುಸ್ಥಾಪನೆ, ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿ 9 ಆರೋಗ್ಯ ಕೇಂದ್ರಗಳು, ಐಐಟಿ ಇಂದೋರ್‌ನ ಶೈಕ್ಷಣಿಕ ಕಟ್ಟಡದ ಸಮರ್ಪಣೆ ಮತ್ತು ಕ್ಯಾಂಪಸ್‌ನಲ್ಲಿ ಹಾಸ್ಟೆಲ್ ಮತ್ತು ಇತರ ಕಟ್ಟಡಗಳಿಗೆ ಶಂಕುಸ್ಥಾಪನೆ  ಮತ್ತು ಇಂದೋರ್‌ನಲ್ಲಿ ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಸೇರಿನೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಗ್ವಾಲಿಯರ್ ಭೂಮಿ ಶೌರ್ಯ, ಸ್ವಾಭಿಮಾನ, ಹೆಮ್ಮೆ, ಸಂಗೀತ, ರುಚಿ ಮತ್ತು ಸಾಸಿವೆಗಳ ಸಂಕೇತವಾಗಿದೆ. ಈ ಭೂಮಿ ದೇಶಕ್ಕಾಗಿ ಅನೇಕ ಕ್ರಾಂತಿಕಾರಿ ನಾಯಕರನ್ನು ಹಾಗೂ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಧೀರ ಯೋಧರ ನೆಲೆಯಾಗಿದೆ. ಗ್ವಾಲಿಯರ್‌ನ ಭೂಮಿಯು ಆಡಳಿತ ಪಕ್ಷದ ನೀತಿಗಳು ಮತ್ತು ನಾಯಕತ್ವವನ್ನು ರೂಪಿಸಿದೆ. ರಾಜಮಾತಾ ವಿಜಯ ರಾಜೇ ಸಿಂಧಿಯಾ, ಕುಶಾಭೌ ಠಾಕ್ರೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಂತಹ ನಾಯಕರ ಕೊಡುಗೆ ನೀಡಿದೆ. “ಗ್ವಾಲಿಯರ್ ಭೂಮಿ ಸ್ವತಃ ಸ್ಫೂರ್ತಿಯಾಗಿದೆ”, ಮಣ್ಣಿನ ಮಕ್ಕಳು ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.

ಹೊಸ ಪೀಳಿಗೆಯ ಜನರಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಅವಕಾಶ ಸಿಗದಿದ್ದರೂ ಭಾರತವನ್ನು ಅಭಿವೃದ್ಧಿ ಮತ್ತು ಸಮೃದ್ಧಗೊಳಿಸುವ ಜವಾಬ್ದಾರಿ ನೀಡಿದೆ.  ಇಂದು ಲೋಕಾರ್ಪಣೆಯಾದ ಮತ್ತು ಶಂಕುಸ್ಥಾಪನೆಯಾದ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಅನೇಕ ಸರ್ಕಾರಗಳು ತರಲು ಸಾಧ್ಯವಾಗದ ಅನೇಕ ಯೋಜನೆಗಳನ್ನು ಒಂದು ವರ್ಷದಲ್ಲಿ ನಮ್ಮ ಸರಕಾರ ಒಂದೇ ದಿನದಲ್ಲಿ ತರುತ್ತಿದೆ ಎಂದು ಹೇಳಿದರು.

ದಸರಾ ದೀಪಾವಳಿ ಮತ್ತು ಧನ್ ತೇರಸ್ ಹಬ್ಬಕ್ಕೆ ಮೊದಲು ಸುಮಾರು 2 ಲಕ್ಷ ಕುಟುಂಬಗಳು ಗೃಹ ಪ್ರವೇಶ ಮಾಡುತ್ತಿವೆ. ಅನೇಕ ಸಂಪರ್ಕ ಯೋಜನೆಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಉಜ್ಜಯಿನಿಯ ವಿಕ್ರಮ್ ಉದ್ಯೋಗಪುರಿ ಮತ್ತು ಬಹುಮಾದರಿ ಲಾಜಿಸ್ಟಿಕ್ಸ್ ಪಾರ್ಕ್ ಮಧ್ಯಪ್ರದೇಶದ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡಲಿದೆ. ಗ್ವಾಲಿಯರ್ ಐಐಟಿಯಲ್ಲಿ ಹೊಸ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಯೋಜನೆ ಅಡಿ ವಿದಿಶಾ, ಬೈತುಲ್, ಕಟ್ನಿ, ಬುರ್ಹಾನ್‌ಪುರ, ನರಸಿಂಗ್‌ಪುರ, ದಾಮೋಹ್ ಮತ್ತು ಶಾಜಾಪುರದಲ್ಲಿ ಹೊಸ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

 

ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಡಬಲ್ ಇಂಜಿನ್ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ದೆಹಲಿ ಮತ್ತು ಭೋಪಾಲ್ ಎರಡರಲ್ಲೂ ಸಾರ್ವಜನಿಕರಿಗೆ ಸಮರ್ಪಿತವಾದ ಒಂದೇ ರೀತಿಯ ತತ್ವಗಳನ್ನು ಹೊಂದಿರುವ ಸರ್ಕಾರವು ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮಧ್ಯಪ್ರದೇಶದ ಜನರು ಡಬಲ್ ಇಂಜಿನ್ ಸರ್ಕಾರವನ್ನು ನಂಬುತ್ತಾರೆ. “ಡಬಲ್ ಇಂಜಿನ್ ಎಂದರೆ ಮಧ್ಯಪ್ರದೇಶದ 2 ಅಭಿವೃದ್ಧಿ” ಎಂದು ಶ್ರೀ ಮೋದಿ ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ, ಸರ್ಕಾರವು ಮಧ್ಯಪ್ರದೇಶವನ್ನು ‘ಬಿಮಾರು ರಾಜ್ಯ’ (ಹಿಂದುಳಿದ ರಾಜ್ಯ)ದಿಂದ ದೇಶದ ಅಗ್ರ 10 ರಾಜ್ಯಗಳಲ್ಲಿ ಒಂದಾಗಿ ಪರಿವರ್ತಿಸಿದೆ. “ಇಲ್ಲಿಂದ ಮುಂದೆ”, “ಸರ್ಕಾರವು ಮಧ್ಯಪ್ರದೇಶವನ್ನು ಭಾರತದ ಅಗ್ರ 3 ರಾಜ್ಯಗಳಿಗೆ ಕೊಂಡೊಯ್ಯುವ ಗುರಿ ಹೊಂದಿದೆ”. ಮಧ್ಯಪ್ರದೇಶವನ್ನು ಅಗ್ರ 3 ರಾಜ್ಯಗಳ ಸ್ಥಾನಕ್ಕೆ ಕೊಂಡೊಯ್ಯುವ ಜವಾಬ್ದಾರಿಯುತ ನಾಗರಿಕರಾಗಿ ಪ್ರತಿಯೊಬ್ಬರೂ ತಮ್ಮ ಮತ ಚಲಾಯಿಸಬೇಕೆಂದು ಅವರು ಮನವಿ ಮಾಡಿದರು.

ಜಗತ್ತು ತನ್ನ ಭವಿಷ್ಯವನ್ನು ಭಾರತದಲ್ಲಿ ನೋಡುತ್ತದೆ. ಭಾರತವು ಕೇವಲ 9 ವರ್ಷಗಳಲ್ಲಿ 10ನೇ ಸ್ಥಾನದಿಂದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಭಾರತದ ಈ ಕ್ಷಣದ ಬಗ್ಗೆ  ನಂಬಿಕೆಯಿಲ್ಲದವರು ಇದ್ದಾರೆ. “ಮುಂದಿನ ಸರ್ಕಾರದ ಅಧಿಕಾರಾವಧಿಯಲ್ಲಿ ಭಾರತವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಅಗ್ರ ಸ್ಥಾನಕ್ಕೆ ಏರುವುದು ಮೋದಿಯವರ ಗ್ಯಾರಂಟಿ” ಎಂದರು.

“ಮೋದಿ ಅವರು ಬಡವರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ಖಾತರಿಪಡಿಸಿದ್ದಾರೆ”. ದೇಶದಲ್ಲಿ 4 ಕೋಟಿ ಕುಟುಂಬಗಳಿಗೆ ಇದುವರೆಗೆ ಪಕ್ಕಾ ಮನೆಗಳನ್ನು ಹಸ್ತಾಂತರಿಸಲಾಗಿದೆ. ಮಧ್ಯಪ್ರದೇಶದಲ್ಲಿ ಇದುವರೆಗೆ ಲಕ್ಷಾಂತರ ಮನೆಗಳನ್ನು ಬಡ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಇಂದು ಸಹ ಅನೇಕ ಮನೆಗಳನ್ನು ಉದ್ಘಾಟಿಸಲಾಗಿದೆ. ಹಿಂದಿನ ಸರ್ಕಾರದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ವಂಚನೆಯ ಯೋಜನೆಗಳು ಮತ್ತು ಬಡವರಿಗೆ ವಿತರಿಸಲಾದ ಮನೆಗಳ ಕಳಪೆ ಗುಣಮಟ್ಟದ ಬಗ್ಗೆ ವಿಷಾದಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಹಸ್ತಾಂತರಿಸಲಾದ ಮನೆಗಳನ್ನು ಫಲಾನುಭವಿಗಳ ಅಗತ್ಯತೆಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ. ತಂತ್ರಜ್ಞಾನದ ಸಹಾಯದಿಂದ ಪ್ರಗತಿ ಸಾಧಿಸಲಾಗುತಿದೆ. ಹಣವನ್ನು ನೇರವಾಗಿ ಫಲಾನುಭವಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಮನೆಗಳು ಶೌಚಾಲಯ, ವಿದ್ಯುತ್, ನಲ್ಲಿ ನೀರಿನ ಸಂಪರ್ಕ ಮತ್ತು ಉಜ್ವಲಾ ಗ್ಯಾಸ್ ಸಂಪರ್ಕವನ್ನು ಹೊಂದಿವೆ. ಇಂದಿನ ಜಲಜೀವನ್ ಮಿಷನ್ ಯೋಜನೆಗಳ ಕುರಿತು ಮಾತನಾಡಿದ ಪ್ರಧಾನಿ, ಈ ಮನೆಗಳಿಗೆ ನೀರು ಪೂರೈಸಲು ಇದು ಸಹಾಯ ಮಾಡುತ್ತದೆ ಎಂದರು.

ಈ ಮನೆಗಳನ್ನು ಮನೆಯ ಮಹಿಳೆಯರ ಹೆಸರಿನಲ್ಲೇ ನೋದಣಿ ಮಾಡಲಾಗುತ್ತಿದೆ. ಇದು ಕೋಟಿಗಟ್ಟಲೆ ಸಹೋದರಿಯರನ್ನು ‘ಲಖ್ಪತಿ’ಯನ್ನಾಗಿ ಮಾಡಿದೆ ಎಂದು ಪ್ರಧಾನಿ ಹೇಳಿದರು. ತಮ್ಮ ಮಕ್ಕಳ ಶಿಕ್ಷಣದತ್ತ ಗಮನ ಹರಿಸಬೇಕು ಎಂದು ಮನೆಗಳ ಮಾಲೀಕರಿಗೆ ಪ್ರಧಾನ ಮಂತ್ರಿ ಸಲಹೆ ನೀಡಿದರು.

“ಮಹಿಳಾ ಸಬಲೀಕರಣವು ವೋಟ್ ಬ್ಯಾಂಕ್ ಸಮಸ್ಯೆಗಿಂತ ರಾಷ್ಟ್ರೀಯ ಪುನರ್ನಿರ್ಮಾಣ ಮತ್ತು ರಾಷ್ಟ್ರೀಯ ಕಲ್ಯಾಣದ ಧ್ಯೇಯವಾಗಿದೆ” ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇತ್ತೀಚೆಗೆ ಅಂಗೀಕರಿಸಿದ ‘ನಾರಿಶಕ್ತಿ ವಂದನ್ ಅಧಿನಿಯಮ’ವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ, “ಮೋದಿ ಗ್ಯಾರಂಟಿ ಎಂದರೆ ಎಲ್ಲಾ ಭರವಸೆಗಳ ಈಡೇರಿಕೆಯ ಭರವಸೆ” ಎಂದರು. ರಾಷ್ಟ್ರದ ಅಭಿವೃದ್ಧಿ ಪಯಣದಲ್ಲಿ ಮಾತೃಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿ ಎಂದು ಹಾರೈಸಿದರು.

ಗ್ವಾಲಿಯರ್ ಮತ್ತು ಚಂಬಲ್ ಅವಕಾಶಗಳ ನಾಡಾಗುತ್ತಿವೆ, ಇದು ಹಿಂದಿನ ಕಾಲದ ಕಾನೂನುಬಾಹಿರತೆ, ಅಭಿವೃದ್ಧಿಯಾಗದ ಮತ್ತು ಸಾಮಾಜಿಕ ನ್ಯಾಯದ ಉಲ್ಲಂಘನೆಯ ನಂತರ ಸರ್ಕಾರದ ಕಠಿಣ ಪರಿಶ್ರಮದ ಫಲವಾಗಿದೆ. ಹಿಂತಿರುಗಿ ನೋಡಲು ನಮಗೆ ಸಾಧ್ಯವಿಲ್ಲ ಎಂದರು.

“ಆಧುನಿಕ ಮೂಲಸೌಕರ್ಯ ಮತ್ತು ಸದೃಢವಾದ ಕಾನೂನು ಮತ್ತು ಸುವ್ಯವಸ್ಥೆಯು ರೈತರು ಮತ್ತು ಕೈಗಾರಿಕೆಗಳೆರಡಕ್ಕೂ ಪ್ರಯೋಜನವನ್ನು ನೀಡುತ್ತದೆ”. “ಅಭಿವೃದ್ಧಿ ವಿರೋಧಿ ಸರ್ಕಾರದ ಉಪಸ್ಥಿತಿಯೊಂದಿಗೆ ಎರಡೂ ವ್ಯವಸ್ಥೆಗಳು ಕುಸಿಯುತ್ತವೆ”. ಅಭಿವೃದ್ಧಿ ವಿರೋಧಿ ಸರ್ಕಾರವು ಅಪರಾಧ ಮತ್ತು ತುಷ್ಟೀಕರಣವನ್ನು ಸಹ ಹುಟ್ಟುಹಾಕುತ್ತದೆ, ಆ ಮೂಲಕ ಗೂಂಡಾಗಳು, ಕ್ರಿಮಿನಲ್‌ಗಳು, ಗಲಭೆಕೋರರು ಮತ್ತು ಭ್ರಷ್ಟರಿಗೆ ಮುಕ್ತ ಹಸ್ತವನ್ನು ನೀಡುತ್ತದೆ. ಇದು ಮಹಿಳೆಯರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರ ಮೇಲಿನ ದೌರ್ಜನ್ಯಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇಂತಹ ಅಭಿವೃದ್ಧಿ ವಿರೋಧಿ ವಿಚಾರಗಳಿಂದ ಎಚ್ಚರದಿಂದ ಇರಬೇಕೆಂದು ಪ್ರಧಾನಿ ಮಧ್ಯಪ್ರದೇಶದ ಜನರನ್ನು ಒತ್ತಾಯಿಸಿದರು.

ವಂಚಿತರಿಗೆ ಆದ್ಯತೆ ನೀಡುವ ಸರ್ಕಾರದ ನೀತಿಯನ್ನು ಉಲ್ಲೇಖಿಸಿದ ಪ್ರಧಾನಿ, “ನಮ್ಮ ಸರ್ಕಾರವು ಪ್ರತಿಯೊಂದು ವರ್ಗ ಮತ್ತು ಪ್ರತಿಯೊಂದು ಪ್ರದೇಶಕ್ಕೂ ಅಭಿವೃದ್ಧಿ ಒದಗಿಸಲು ಸಮರ್ಪಿತವಾಗಿದೆ. ಯಾರನ್ನು ಯಾರೂ ಕಾಳಜಿ ವಹಿಸುವುದಿಲ್ಲ, ಆದರೆ ಮೋದಿ ಅವರ ಬಗ್ಗೆ ಕಾಳಜಿ ವಹಿಸುತ್ತಾರೆ, ಮೋದಿ ಅವರನ್ನು ಪೂಜಿಸುತ್ತಾರೆ. ಆಧುನಿಕ ಉಪಕರಣಗಳು ಮತ್ತು ಸಾಮಾನ್ಯ ಸಂಕೇತ ಭಾಷೆಯ ಅಭಿವೃದ್ಧಿಯಂತಹ ದಿವ್ಯಾಂಗರಿಗೆ ಇರುವ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಅವರು, ಇಂದು ಗ್ವಾಲಿಯರ್‌ನಲ್ಲಿ ದಿವ್ಯಾಂಗ ಕ್ರೀಡಾಪಟುಗಳಿಗಾಗಿ ಹೊಸ ಕ್ರೀಡಾ ಕೇಂದ್ರ ಉದ್ಘಾಟಿಸಲಾಯಿತು. ಅದೇ ರೀತಿ, ಸಣ್ಣ ರೈತರನ್ನು ದಶಕಗಳಿಂದ ನಿರ್ಲಕ್ಷಿಸಲಾಯಿತು, ಈಗ ಅವರನ್ನು ನೋಡಿಕೊಳ್ಳಲಾಗುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೂಲಕ ದೇಶದ ಪ್ರತಿಯೊಬ್ಬ ಸಣ್ಣ ರೈತರ ಖಾತೆಗಳಿಗೆ ಸರ್ಕಾರ ಇದುವರೆಗೆ 28 ಸಾವಿರ ರೂಪಾಯಿಗಳನ್ನು ಕಳುಹಿಸಿದೆ ಎಂದು ಪ್ರಧಾನಿ ತಿಳಿಸಿದರು. ನಮ್ಮ ದೇಶದಲ್ಲಿ 2.5 ಕೋಟಿ ಸಣ್ಣ ರೈತರು ಸಿರಿಧಾನ್ಯಗಳನ್ನು ಬೆಳೆಯುತ್ತಾರೆ. “ಹಿಂದೆ ಯಾರೂ ಸಿರಿಧಾನ್ಯಗಳನ್ನು ಬೆಳೆಯುವ ಸಣ್ಣ ರೈತರ ಬಗ್ಗೆ ಕಾಳಜಿ ವಹಿಸಲಿಲ್ಲ. ನಮ್ಮ ಸರ್ಕಾರವೇ ಭಾರತೀಯ ಆಹಾರಕ್ಕೆ ಸಿರಿಧಾನ್ಯಗಳ ಗುರುತನ್ನು ನೀಡಿದೆ, ಅದನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯುತ್ತಿದೆ ಎಂದು ಅವರು ಹೇಳಿದರು.

ವಿಶ್ವಕರ್ಮ ಯೋಜನೆ ಕುರಿತು ಮಾತನಾಡಿದ ಅವರು, ಇದು ಕುಮ್ಹಾರ್, ಲೋಹರ್, ಸುತಾರ್, ಸುನಾರ್, ಮಲಕರ್, ದರ್ಜಿ, ಧೋಬಿ ಮತ್ತು ಚಮ್ಮಾರರು ಮತ್ತು ಕ್ಷೌರಿಕರಿಗೆ ಪ್ರಯೋಜನ ನೀಡುತ್ತದೆ. ಸಮಾಜದ ಈ ವರ್ಗವು ಹಿಂದುಳಿದಿದೆ.  “ಮೋದಿ ಅವರನ್ನು ಮುಂದೆ ತರಲು ದೊಡ್ಡ ಅಭಿಯಾನ ಪ್ರಾರಂಭಿಸಿದ್ದಾರೆ”. ಅವರ ತರಬೇತಿಗೆ ತಗಲುವ ವೆಚ್ಚವನ್ನು ಸರಕಾರವೇ ಭರಿಸಲಿದ್ದು, ಆಧುನಿಕ ಉಪಕರಣಗಳಿಗೆ 15 ಸಾವಿರ ರೂ. ನೀಡಲಿದೆ. ಲಕ್ಷಾಂತರ ರೂಪಾಯಿ ಅಗ್ಗದ ಸಾಲವನ್ನು ಅವರಿಗೆ ನೀಡಲಾಗುತ್ತಿದೆ.  ಮೋದಿ ಅವರು ವಿಶ್ವಕರ್ಮರ ಸಾಲದ ಗ್ಯಾರಂಟಿ ತೆಗೆದುಕೊಂಡಿದ್ದಾರೆ.

ಡಬಲ್ ಇಂಜಿನ್ ಸರ್ಕಾರದ ಭವಿಷ್ಯದ-ಉದ್ದೇಶಿತ ವಿಧಾನವನ್ನು ಪ್ರಸ್ತಾಪಿಸಿದ ಅವರು, ಮಧ್ಯಪ್ರದೇಶವನ್ನು ದೇಶದ ಉನ್ನತ ರಾಜ್ಯಗಳಿಗೆ ತರುವ ಬದ್ಧತೆಯನ್ನು ಪುನರುಚ್ಚರಿಸಿದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್, ಡಾ ವೀರೇಂದ್ರ ಕುಮಾರ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ, ಸಂಸದರು ಮತ್ತು ಮಧ್ಯಪ್ರದೇಶ ಸರ್ಕಾರದ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದೇಶಾದ್ಯಂತ ಸಂಪರ್ಕ ಹೆಚ್ಚಿಸುವ ಮತ್ತೊಂದು ಉಪಕ್ರಮವಾಗಿ, ಸುಮಾರು 11,895 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ದೆಹಲಿ-ವಡೋದರಾ ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಸುಮಾರು 1880 ಕೋಟಿ ರೂ. ವೆಚ್ಚದ 5 ವಿವಿಧ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರತಿಯೊಬ್ಬರಿಗೂ ಸ್ವಂತ ಮನೆ ಇರುವಂತೆ ನೋಡಿಕೊಳ್ಳುವುದು ಪ್ರಧಾನಿ ಅವರ ನಿರಂತರ ಪ್ರಯತ್ನವಾಗಿದೆ. ಈ ದೃಷ್ಟಿಗೆ ಅನುಗುಣವಾಗಿ, ಪಿಎಂಎವೈ – ಗ್ರಾಮೀಣ ಯೋಜನೆ ಅಡಿ ನಿರ್ಮಿಸಲಾದ 2.2 ಲಕ್ಷ ಮನೆಗಳ ಗೃಹ ಪ್ರವೇಶಕ್ಕೆ ಪ್ರಧಾನ ಮಂತ್ರಿ ಚಾಲನೆ ನೀಡಿದರು. ಪಿಎಂಎವೈ – ನಗರ ಯೋಜನೆ ಅಡಿ ಸುಮಾರು 140 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಮನೆಗಳನ್ನು ಲೋಕಾರ್ಪಣೆ ಮಾಡಿದರು.

ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರು ಒದಗಿಸುವುದು ಸರ್ಕಾರದ ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಗುರಿಯನ್ನು ಮುಂದುವರೆಸುತ್ತಾ, ಪ್ರಧಾನ ಮಂತ್ರಿ ಅವರು ಗ್ವಾಲಿಯರ್ ಮತ್ತು ಶಿಯೋಪುರ್ ಜಿಲ್ಲೆಗಳಲ್ಲಿ 1530 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಜಲಜೀವನ್ ಮಿಷನ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ಒಟ್ಟಾಗಿ ಈ ಪ್ರದೇಶದ 720 ಹಳ್ಳಿಗಳಿಗೆ ಪ್ರಯೋಜನ ನೀಡುತ್ತವೆ.

ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುವ ಒಂದು ಹಂತವಾಗಿ,  ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಯೋಜನೆ ಅಡಿ, 9 ಆರೋಗ್ಯ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿದು. 150 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು.

ಪ್ರಧಾನ ಮಂತ್ರಿ ಅವರು ಐಐಟಿ ಇಂದೋರ್‌ನ ಶೈಕ್ಷಣಿಕ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. ಕ್ಯಾಂಪಸ್‌ನಲ್ಲಿ ಹಾಸ್ಟೆಲ್ ಮತ್ತು ಇತರ ಕಟ್ಟಡಗಳಿಗೆ ಶಂಕುಸ್ಥಾಪನೆ ಮಾಡಿದರು. ಇದಲ್ಲದೆ, ಪ್ರಧಾನ ಮಂತ್ರಿ ಅವರು ಇಂದೋರ್‌ನಲ್ಲಿ ಬಹುಮಾದರಿ ಲಾಜಿಸ್ಟಿಕ್ಸ್ ಪಾರ್ಕ್‌ಗೆ ಶಂಕುಸ್ಥಾಪನೆ ಮಾಡಿದರು. ಅವರು ಉಜ್ಜಯಿನಿಯಲ್ಲಿ ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ಟೌನ್‌ಶಿಪ್, ಐಒಸಿಎಲ್ ಬಾಟ್ಲಿಂಗ್ ಪ್ಲಾಂಟ್ ಮತ್ತು ಗ್ವಾಲಿಯರ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ ದಿವ್ಯಾಂಗ್ ಕ್ರೀಡಾ ತರಬೇತಿ ಕೇಂದ್ರವನ್ನು ಉತ್ತೇಜಿಸುವ ವಿವಿಧ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

***