Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಣಿಪುರ ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಪಠ್ಯ


ಮಣಿಪುರದ ರಾಜ್ಯಪಾಲರಾದ ಶ್ರೀಮತಿ ನಜ್ಮಾ ಹೆಪ್ತುಲ್ಲಾ ಜಿ, ಮಣಿಪುರದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಎನ್. ಬಿರೇನ್ ಸಿಂಗ್ ಜಿ, ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಗಜೇಂದ್ರ ಸಿಂಗ್ ಶೆಖಾವತ್, ಶ್ರೀ ಜಿತೇಂದ್ರ ಸಿಂಗ್ ಜಿ, ಶ್ರೀ ರತ್ನಾಲಾಲ್ ಕಟಾರಿಯಾ ಜಿ, ಮಣಿಪುರದ ಎಲ್ಲಾ ಸಂಸದರು ಮತ್ತು ಶಾಸಕರೇ ಹಾಗೂ ಮಣಿಪುರದ ನನ್ನೆಲ್ಲಾ ಪ್ರೀತಿಯ ಸಹೋದರ ಸಹೋದರಿಯರೇ.

 ಇಂದಿನ ಈ ಸಮಾರಂಭ ಕೊರೊನಾದ ಸಂಕಷ್ಟ ಕಾಲದಲ್ಲಿ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿಲ್ಲ ,ದೇಶಕ್ಕೆ ದಣಿವಾಗಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಕೊರೊನಾ ಸೋಂಕಿಗೆ ಲಸಿಕೆ ಬಿಡುಗಡೆಯಾಗುವವರೆಗೆ ನಾವು ಕೊರೊನಾದ ವಿರುದ್ಧ ಶಕ್ತಿಶಾಲಿಯಾಗಿ ಹೋರಾಟ ನಡೆಸಬೇಕಾಗಿದೆಯಲ್ಲದೆ, ವಿಜಯಶಾಲಿಯಾಗಬೇಕಾಗಿದೆ. ಅದೇ ವೇಳೆ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಮುಂದೆ ಕೊಂಡೊಯ್ಯಬೇಕಾದ ಅಗತ್ಯವೂ ಇದೆ. ಈ ಸಮಯದಲ್ಲಿ ಪೂರ್ವ ಹಾಗೂ ಈಶಾನ್ಯ ಭಾರತ ಎರಡು ಬಗೆಯ ಸವಾಲುಗಳನ್ನು ಎದುರಿಸುತ್ತಿದೆ. ಈ ವರ್ಷ ಈಶಾನ್ಯ ಭಾಗದಲ್ಲಿ ಮತ್ತೆ ಭಾರೀ ಮಳೆಯಿಂದಾಗಿ ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ. ಹಲವರು ಮೃತಪಟ್ಟಿದ್ದಾರೆ ಮತ್ತು ಇನ್ನೂ ಹಲವರು ತಮ್ಮ ಮನೆಗಳನ್ನು ತೊರೆಯಬೇಕಾದ ಸಂದರ್ಭ ಬಂದಿದೆ. ಎಲ್ಲ ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ಸೂಚಿಸಲು ಬಯಸುತ್ತೇನೆ. ನಾನು ಈ ಸಂದರ್ಭದಲ್ಲಿ ಇಡೀ ದೇಶ ನಿಮ್ಮ ಜೊತೆಗೆ ಇದೆ ಎಂದು ಎಲ್ಲರಿಗೂ ಭರವಸೆ ನೀಡುತ್ತೇನೆ. ಭಾರತ ಸರ್ಕಾರ, ಎಲ್ಲ ರಾಜ್ಯ ಸರ್ಕಾರಗಳ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಎಲ್ಲ ಬಗೆಯ ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಲು ನಿರಂತರ ಪ್ರಯತ್ನ ನಡೆಸಿದೆ.

ಮಿತ್ರರೇ,

ರಾಜ್ಯ ಸರ್ಕಾರ ಹಗಲು ರಾತ್ರಿ ಮಣಿಪುರದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮತ್ತು ಅದರ ವೇಗ ನಿಯಂತ್ರಿಸಲು ಶ್ರಮಿಸುತ್ತಿದೆ. ರಾಜ್ಯ ಸರ್ಕಾರ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಅವಶ್ಯಕ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಮತ್ತು ಸಂಕಷ್ಟಕ್ಕೆ ಸಿಲುಕಿದವರನ್ನು ವಾಪಸ್ ಕರೆತರಲೂ ಸಹ ಕ್ರಮಗಳನ್ನು ಕೈಗೊಂಡಿದೆ. ಮಣಿಪುರದ ಸುಮಾರು 25 ಲಕ್ಷ ಬಡ ಸಹೋದರ ಸಹೋದರಿಯರಿಗೆ ಅಂದರೆ ಸುಮಾರು 5 ರಿಂದ 6 ಲಕ್ಷ ಬಡಕುಟುಂಬಗಳು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಉಚಿತ ಆಹಾರಧಾನ್ಯಗಳನ್ನು ಸ್ವೀಕರಿಸಿವೆ. ಅದೇ ರೀತಿ 1.5 ಲಕ್ಷಕ್ಕೂ ಅಧಿಕ ಸಹೋದರಿಯರು ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಿಲಿಂಡರ್ ಸೌಕರ್ಯವನ್ನು ಪಡೆದುಕೊಂಡಿದ್ದಾರೆ. ಅಂತೆಯೇ ಈ ಸಂಕಷ್ಟದ ಸಮಯದಲ್ಲಿ ಬಡವರಿಗೆ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಸಹಾಯ ಮುಂದುವರಿದಿದೆ ಎಂಬ ಭರವಸೆ ನನಗಿದೆ.

ಮಿತ್ರರೇ,

ಇಂಫಾಲ ಸೇರಿದಂತೆ ಮಣಿಪುರದ ಲಕ್ಷಾಂತರ ನನ್ನ ಸಹೋದರಿಯರು ಮತ್ತು ಸ್ನೇಹಿತರಿಗೆ ಇಂದು ಅತ್ಯಂತ ಮಹತ್ವದ ದಿನವಾಗಿದೆ. ಮಣಿಪುರದ ಸಹೋದರಿಯರು ರಾಖಿ ಹಬ್ಬದ ಈ ಸಂದರ್ಭದಲ್ಲಿ ಭಾರೀ ದೊಡ್ಡ ಉಡುಗೊರೆಯನ್ನು ಸ್ವೀಕರಿಸಲಿದ್ದಾರೆ. 3000 ಕೋಟಿ ರೂ. ವೆಚ್ಚದಲ್ಲಿ ಮಣಿಪುರ ನೀರು ಪೂರೈಕೆ ಯೋಜನೆ ಪೂರ್ಣಗೊಳ್ಳಲಿದ್ದು, ಇದರಿಂದ ಇಲ್ಲಿನ ಜನರಿಗೆ ನೀರಿನ ಕೊರತೆ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗಲಿವೆ. ಈ ಯೋಜನೆಯಡಿ ಗ್ರೇಟರ್ ಇಂಫಾಲ ಸೇರಿ, 25 ನಗರ ಮತ್ತು ಪಟ್ಟಣಗಳು ಹಾಗೂ 1700ಕ್ಕೂ ಅಧಿಕ ಗ್ರಾಮಗಳಿಗೆ ನೀರಿನ ಸೌಕರ್ಯ ಲಭ್ಯವಾಗುವುದಲ್ಲದೆ, ಜನರ ಜೀವನಾಡಿಯಾಗಿ ಸೇವೆ ಸಲ್ಲಿಸಲಿದೆ. ಅದೆಲ್ಲಕ್ಕೂ ಮುಖ್ಯವಾಗಿ ಈ ಯೋಜನೆಯನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಿಲ್ಲ, ಮುಂದಿನ 20-22 ವರ್ಷಗಳ ಪ್ರಗತಿಯನ್ನು ಮನಗಂಡು ರೂಪಿಸಲಾಗಿದೆ.

 ಈ ಯೋಜನೆಯಿಂದಾಗಿ ಲಕ್ಷಾಂತರ ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವುದು ಮಾತ್ರವಲ್ಲದೆ, ಸಹಸ್ರಾರು ಜನರಿಗೆ ಉದ್ಯೋಗಾವಕಾಶವೂ ಸಹ ದೊರಕಲಿದೆ. ಅಲ್ಲದೆ ನಿಮಗೆಲ್ಲಾ ತಿಳಿದಿರುವಂತೆ ಶುದ್ಧ ಕುಡಿಯುವ ನೀರು ಕುಡಿಯುವುದರಿಂದ ಸಹಜವಾಗಿಯೇ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ರೋಗಗಳ ವಿರುದ್ಧ ಪ್ರತಿರೋಧವನ್ನು ಸೃಷ್ಟಿಸುತ್ತದೆ. ಆದ್ದರಿಂದ ಇದರ ಬಳಕೆ ಕೇವಲ ಕೊಳವೆ ನೀರಿನ ಪೂರೈಕೆಗೆ ಮಾತ್ರ ಸೀಮಿತವಾಗಿಲ್ಲ. ಖಂಡಿತವಾಗಿಯೂ ಈ ಯೋಜನೆ ಪ್ರತಿಯೊಂದು ಮನೆಗೂ ಕೊಳವೆ ಮಾರ್ಗದ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ನಮ್ಮ ಸಮಗ್ರ ಗುರಿ ಸಾಧನೆ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ. ನಾನು ಮಣಿಪುರದ ಜನತೆಯನ್ನು ಮತ್ತು ವಿಶೇಷವಾಗಿ ಮಣಿಪುರದ ತಾಯಂದಿರುವ ಹಾಗೂ ಸಹೋದರಿಯರನ್ನು ಈ ಯೋಜನೆಗಾಗಿ ಅಭಿನಂದಿಸಲು ಬಯಸುತ್ತೇನೆ.

ಮಿತ್ರರೇ,

ಕಳೆದ ವರ್ಷ ದೇಶದಲ್ಲಿ ಜಲ ಜೀವನ್ ಮಿಷನ್ ಆರಂಭವಾದಾಗ ನಾನು ಹಿಂದಿನ ಸರ್ಕಾರಗಳಿಗಿಂತ ನಾವು ಹಲವು ಪಟ್ಟು ಅತ್ಯಂತ ವೇಗದಿಂದ ಕೆಲಸ ಮಾಡಬೇಕು ಎಂದು ಹೇಳಿದ್ದೆ, 15 ಕೋಟಿಗೂ ಅಧಿಕ ಮನೆಗಳಿಗೆ ಕೊಳವೆ ಮಾರ್ಗದ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಬೇಕಾದ ಅವಶ್ಯಕತೆ ಇದ್ದ ಸಂದರ್ಭದಲ್ಲಿ ನಾವು ಒಂದು ಕ್ಷಣವೂ ಕೂಡ ನಿಲ್ಲುವ ಆಲೋಚನೆ ಮಾಡಬಾರದು. ಇದೇ ಕಾರಣಕ್ಕೆ ನಾವು ಲಾಕ್ ಡೌನ್ ಸಮಯದಲ್ಲೂ ಪಂಚಾಯಿತಿಗಳ ಸಹಾಯದಿಂದ ನೀರಿನ ಕೊಳವೆ ಮಾರ್ಗಗಳನ್ನು ಅಳವಡಿಸುವುದು ಮತ್ತು ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮುಂದುವರಿಸಿದ್ದೇವೆ.

ಇಂದು ದೇಶಾದ್ಯಂತ ಪ್ರತಿ ದಿನ ಒಂದು ಲಕ್ಷ ನೀರಿನ ಸಂಪರ್ಕಗಳನ್ನು ಒದಗಿಸುವಂತಹ ಸ್ಥಿತಿ ಇದೆ. ಅಂದರೆ ಪ್ರತಿ ದಿನ ನಾವು ಒಂದು ಲಕ್ಷ ತಾಯಂದಿರು ಮತ್ತು ಸಹೋದರಿಯರು ನೀರಿನ ಕಾರಣದಿಂದಾಗಿ ಅನುಭವಿಸುತ್ತಿದ್ದ ಒತ್ತಡ ಅಥವಾ ಹೊರೆಯನ್ನು ಇಳಿಸಿದಂತಾಗುತ್ತದೆ. ಒಂದು ಲಕ್ಷ ಕುಟುಂಬಗಳ ತಾಯಂದಿರು ಮತ್ತು ಸಹೋದರಿಯರ ಜೀವನ ಸುಲಭಗೊಳಿಸಲಾಗುತ್ತಿದೆ. ಇದೆಲ್ಲಾ ಸಾಧ್ಯವಾಗಿದ್ದು, ಜಲಜೀವನ ಯೋಜನೆ ಒಂದು ಜನಾಂದೋಲನವಾಗಿ ಪರಿವರ್ತನೆಯಾಗಿರುವುದರಿಂದ. ಈ ಯೋಜನೆಯಡಿಯಲ್ಲಿ ಗ್ರಾಮಗಳ ಜನರು ವಿಶೇಷವಾಗಿ ಸಹೋದರಿಯರು ಮತ್ತು ಗ್ರಾಮಗಳ ಜನಪ್ರತಿನಿಧಿಗಳು ಕೊಳವೆಗಳನ್ನು ಅಳವಡಿಸಬೇಕೆ ಎಂಬ ಬಗ್ಗೆ, ಯಾವ ನೀರಿನ ಮೂಲವನ್ನು ಪಡೆಯಬೇಕು ಎಂಬುದರ ಕುರಿತು ಹಾಗೂ ಎಲ್ಲಿ ಟ್ಯಾಂಕ್ ಗಳನ್ನು ನಿರ್ಮಿಸಬೇಕು ಮತ್ತು ಅದಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ

 ಮಿತ್ರರೇ,

ಸರ್ಕಾರದ ವ್ಯವಸ್ಥೆಯಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ವಿಕೇಂದ್ರೀಕರಣವಾಗುತ್ತಿದೆ ಮತ್ತು ತಳಮಟ್ಟದಲ್ಲಿ ಸಬಲೀಕರಣವಾಗುತ್ತಿರುವುದರಿಂದ ನೀವು ನೀರಿನ ಶಕ್ತಿಯನ್ನು ಊಹಿಸಿಕೊಳ್ಳಬಹುದು.

ಮಿತ್ರರೇ,

ಉತ್ತಮ ಜೀವನಕ್ಕೆ ಸುಗಮ ಹಾಗೂ ಪೂರಕ ವಾತಾವರಣ ಸೃಷ್ಟಿ ಅಗತ್ಯವಿದೆ. ಹಣ ಬರಬಹುದು ಹೋಗಬಹುದು ಆದರೆ ಉತ್ತಮ ರೀತಿಯಲ್ಲಿ ಜೀವನ ನಡೆಸುವುದು ಪ್ರತಿಯೊಬ್ಬರ ಹಕ್ಕಾಗಿದೆ. ವಿಶೇಷವಾಗಿ ಪ್ರತಿಯೊಬ್ಬ ಬಡ ಸಹೋದರರು, ತಾಯಂದಿರು, ಸಹೋದರಿಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದ ವರ್ಗದವರು ಮತ್ತು ಬುಡಕಟ್ಟು ಜನರ ಹಕ್ಕಾಗಿದೆ.

 ಆದ್ದರಿಂದ ಕಳೆದ ಆರು ವರ್ಷಗಳಲ್ಲಿ ಜೀವನವನ್ನು ಸುಗಮಗೊಳಿಸಲು ದೇಶದಲ್ಲಿ ಬೃಹತ್ ಆಂದೋಲನವನ್ನು ಕೈಗೊಳ್ಳಲಾಗಿದೆ. ಭಾರತ ತನ್ನ ನಾಗರಿಕರಿಗೆ ಎಲ್ಲಾ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಲು ಪ್ರಯತ್ನಿಸುತ್ತಿದೆ. ಕಳೆದ ಆರು ವರ್ಷಗಳಲ್ಲಿ ಬಡವರನ್ನು ಉತ್ತೇಜಿಸಲು, ಸಾಮಾನ್ಯ ಜನರನ್ನು ಮುಖ್ಯವಾಹಿನಿಗೆ ತರಲು ಎಲ್ಲ ವಲಯದಲ್ಲಿ, ಎಲ್ಲ ಹಂತಗಳಲ್ಲಿ ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂದು ಮಣಿಪುರ ಸೇರಿದಂತೆ ಇಡೀ ಭಾರತವನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಭಾರತದ ಪ್ರತಿಯೊಂದು ಗ್ರಾಮಕ್ಕೂ ಇಂದು ವಿದ್ಯುತ್ ಸಂಪರ್ಕ ಲಭ್ಯವಾಗಿದೆ ಮತ್ತು ಪ್ರತಿಯೊಂದು ಕುಟುಂಬಕ್ಕೂ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ. ಅಡುಗೆ ಅನಿಲ ಸಂಪರ್ಕ ಬಡವರಲ್ಲಿ ಅತಿ ಕಡುಬಡವರ ಅಡುಗೆ ಕೋಣೆಗಳನ್ನೂ ಸಹ ಇಂದು ತಲುಪಿದೆ. ಪ್ರತಿಯೊಂದು ಗ್ರಾಮಕ್ಕೂ ಉತ್ತಮ ರಸ್ತೆ ಸಂಪರ್ಕ ಜಾಲ ಒದಗಿಸಲಾಗಿದೆ. ಪ್ರತಿಯೊಂದು ಬಡ ವಸತಿರಹಿತರಿಗೂ ಉತ್ತಮ ಮನೆಗಳನ್ನು ಒದಗಿಸಲಾಗಿದೆ. ಭಾರೀ ಕೊರತೆಯಿದ್ದ ಒಂದೇ ಒಂದು ಅಂಶವೆಂದರೆ ಶುದ್ಧ ಕುಡಿಯುವ ನೀರು. ಹಾಗಾಗಿ ಕುಡಿಯುವ ನೀರು ಪೂರೈಸುವ ಕೆಲಸವನ್ನು ಪೂರ್ಣಗೊಳಿಸಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.        

ಮಿತ್ರರೇ,

ಉತ್ತಮ ಜೀವನ, ಪ್ರಗತಿ ಮತ್ತು ಏಳಿಗೆ ಇವು ನೇರವಾಗಿ ಸಂಪರ್ಕಕ್ಕೆ ಸಂಬಂಧಿಸಿದವು. ಈಶಾನ್ಯ ಭಾರತದ ಸಂಪರ್ಕ ಕೇವಲ ಅಗತ್ಯ ಮಾತ್ರವಲ್ಲ. ಅಲ್ಲಿನ ಜನರು ಸುಗಮ ರೀತಿಯಲ್ಲಿ ಜೀವನ ನಡೆಸುವಂತಾಗಲು ಸಹಕಾರಿಯಾಗುವುದಲ್ಲದೆ, ಸುರಕ್ಷಿತ ಮತ್ತು ಸ್ವಾವಲಂಬಿ ಭಾರತದ ಗುರಿ ಸಾಧನೆಗೆ ಅತ್ಯಂತ ಪ್ರಮುಖ ಅವಶ್ಯಕತೆಯಾಗಿದೆ. ಇದರಿಂದಾಗಿ ಒಂದು ಕಡೆ ಮ್ಯಾನ್ಮಾರ್, ಭೂತಾನ್, ನೇಪಾಳ ಮತ್ತು ಬಾಂಗ್ಲಾದೇಶದೊಂದಿಗೆ ನಮ್ಮ ಸಾಮಾಜಿಕ ಮತ್ತು ವ್ಯಾಪಾರ ಸಂಬಂಧಗಳು ಬಲವರ್ಧನೆಗೊಳ್ಳುತ್ತಿವೆ ಹಾಗೂ ಭಾರತದ ಪೂರ್ವ ಕ್ರಿಯಾ ನೀತಿಯನ್ನು ಉತ್ತೇಜಿಸುತ್ತದೆ.

ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದಂತೆ ಒಂದು ವಿಧದಲ್ಲಿ ಹೇಳುವುದಾದರೆ ಅವು ಪೂರ್ವ ಏಷ್ಯಾದ ನಮ್ಮ ಪುರಾತನ ಸಾಂಸ್ಕೃತಿಕ ಸಂಬಂಧಗಳ ಹೆಬ್ಬಾಗಿಲಾಗಿದೆ ಮತ್ತು ಅದರ ಜೊತೆ ನಮ್ಮ ಭವಿಷ್ಯದ ವ್ಯಾಪಾರ, ಪ್ರಯಾಣ ಹಾಗೂ ಪ್ರವಾಸೋದ್ಯಮವೂ ಸೇರಿಕೊಂಡಿದೆ. ಈ ಯೋಜನೆಯ ದಾಟಿಯಲ್ಲಿ ಮಣಿಪುರ ಸೇರಿದಂತೆ ಸಂಪೂರ್ಣ ಈಶಾನ್ಯ ಭಾಗದಲ್ಲಿ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಲದೆ ರಸ್ತೆಗಳು, ಹೆದ್ದಾರಿಗಳು, ವಾಯುಮಾರ್ಗ, ಜಲಮಾರ್ಗ ಹಾಗೂ ಒಳನಾಡು   ಮಾರ್ಗಗಳು ಸೇರಿದಂತೆ ಆಧುನಿಕ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅನಿಲ ಕೊಳವೆ ಮಾರ್ಗ, ಆಪ್ಟಿಕಲ್ ಫೈಬರ್ ಸಂಪರ್ಕಜಾಲ ಮತ್ತು ಈಶಾನ್ಯ ಭಾಗದಲ್ಲಿ ಪವರ್ ಗ್ರಿಡ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

 ಕಳೆದ ಆರು ವರ್ಷಗಳಲ್ಲಿ ಇಡೀ ಈಶಾನ್ಯ ರಾಜ್ಯಗಳಲ್ಲಿ ಮೂಲಸೌಕರ್ಯಕ್ಕಾಗಿ ಸಾವಿರಾರು ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ. ಈಶಾನ್ಯ ರಾಜ್ಯಗಳ ರಾಜಧಾನಿಗಳನ್ನು ನಾಲ್ಕು ಪಥದ ರಸ್ತೆಗಳೊಂದಿಗೆ ಮತ್ತು ಜಿಲ್ಲಾ ಕೇಂದ್ರಗಳನ್ನು ಎರಡು ಪಥದ ರಸ್ತೆಗಳೊಂದಿಗೆ ಮತ್ತು ಗ್ರಾಮಗಳಿಗೆ ಸರ್ವಋತು ಸಂಪರ್ಕ ರಸ್ತೆಗಳನ್ನು ಕಲ್ಪಿಸುವ ಪ್ರಯತ್ನ ನಡೆದಿದೆ. ಅದರಡಿ ಈವರೆಗೆ ಸುಮಾರು 3000 ಕಿಲೋಮೀಟರ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ ಮತ್ತು ಸುಮಾರು 6000 ಕಿಲೋಮೀಟರ್ ರಸ್ತೆ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ

 ಮಿತ್ರರೇ,

 ಈಶಾನ್ಯ ಭಾಗದಲ್ಲಿ ರೈಲು ಸಂಪರ್ಕ ವಲಯದಲ್ಲಿ ಭಾರೀ ಬದಲಾವಣೆಯಾಗಿರುವುದನ್ನು ಪ್ರತಿಯೊಬ್ಬರೂ ಗಮನಿಸಬಹುದು. ಒಂದೆಡೆ ರೈಲುಗಳು ಹೊಸ ರೈಲು ನಿಲ್ದಾಣಗಳನ್ನು ತಲುಪುತ್ತಿವೆ, ಮತ್ತೊಂದೆಡೆ ಇಡೀ ಈಶಾನ್ಯ ರಾಜ್ಯಗಳ ರೈಲು ಮಾರ್ಗವನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸಲಾಗುತ್ತಿದೆ. ನಿಮಗೆಲ್ಲಾ ಈ ಬದಲಾವಣೆಯ ಅನುಭವವಾಗುತ್ತಿದೆ. ಜಿರಿಬಮ್ಇಂಫಾಲ ರೈಲು ಮಾರ್ಗವನ್ನು 14000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಮಣಿಪುರದಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ. ಅದೇ ರೀತಿ ಈಶಾನ್ಯ ಭಾಗದ ಪ್ರತಿಯೊಂದು ರಾಜಧಾನಿಗಳಿಗೆ ಉತ್ತಮ ರೈಲು ಸಂಪರ್ಕ ಕಲ್ಪಿಸುವ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಇನ್ನು ಎರಡು ವರ್ಷದಲ್ಲಿ ತ್ವರಿತಗತಿಯಲ್ಲಿ ಆ ಕಾಮಗಾರಿಗಳು ಪೂರ್ಣಗೊಳ್ಳಲಿವೆ.

ಮಿತ್ರರೇ,

ಈಶಾನ್ಯ ಭಾಗಕ್ಕೆ ರಸ್ತೆ ಮತ್ತು ರೈಲು ಸಂಪರ್ಕ ಮಾತ್ರವಲ್ಲದೆ, ವಾಯು ಸಂಪರ್ಕ ಕೂಡ ಅಷ್ಟೇ ಪ್ರಮುಖವಾಗಿದೆ. ಇಂದು ಈಶಾನ್ಯ ರಾಜ್ಯಗಳಲ್ಲಿ ದೊಡ್ಡ ಹಾಗೂ ಸಣ್ಣ ವಿಮಾನ ನಿಲ್ದಾಣ ಸೇರಿದಂತೆ 13 ವಿಮಾನ ನಿಲ್ದಾಣಗಳು ಕಾರ್ಯಾಚರಣೆ ನಡೆಸುತ್ತಿವೆ. ಇಂಫಾಲ ವಿಮಾನ ನಿಲ್ದಾಣ ಅಭಿವೃದ್ಧಿ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಹಾಲಿ ಇರುವ ವಿಮಾನ ನಿಲ್ದಾಣಗಳ ವಿಸ್ತರಣೆ ಹಾಗೂ ಆಧುನಿಕ ಸೌಕರ್ಯಗಳ ಅಭಿವೃದ್ಧಿಗೆ ಸುಮಾರು 3000 ಕೋಟಿ ರೂ.ಗೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ.

 ಮಿತ್ರರೇ,

ಈಶಾನ್ಯ ಭಾಗದಲ್ಲಿ ನಡೆಯುತ್ತಿರುವ ಮತ್ತೊಂದು ಪ್ರಮುಖ ಕಾಮಗಾರಿ ಎಂದರೆ ಅದು ಒಳನಾಡು ಜಲಮಾರ್ಗ ವಲಯ. ಅದರಲ್ಲಿ ನಾನು ಭಾರೀ ಕ್ರಾಂತಿಯನ್ನು ನೋಡುತ್ತಿದ್ದೇನೆ. ಇದೀಗ 20 ರಾಷ್ಟ್ರೀಯ ಜಲ ಮಾರ್ಗಗಳು ನಿರ್ಮಾಣ ಹಂತದಲ್ಲಿವೆ. ಭವಿಷ್ಯದಲ್ಲಿ ಸಂಪರ್ಕ ಸಿಲಿಗುರಿ ಕಾರಿಡಾರ್ ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಇದೀಗ ಸಾಗರ ಮತ್ತು ನದಿಗಳ ಮಾರ್ಗದ ಮೂಲಕ ಸೀಮಾತೀತ ಸಂಪರ್ಕವನ್ನು ಕಲ್ಪಿಸುವ ಕಾರ್ಯ ಆರಂಭವಾಗಿದೆ.  ಈ ಸಂಪರ್ಕ ಹೆಚ್ಚಳದಿಂದ ನಮ್ಮ ಉದ್ಯಮಿಗಳು ಹಾಗೂ ನಮ್ಮ ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಅಲ್ಲದೆ ಇದು ಈಶಾನ್ಯ ಭಾಗದ ಸಾರಿಗೆ ಸಂಪರ್ಕದಲ್ಲಿ ಭಾರೀ ಸಮಯವನ್ನು ಉಳಿತಾಯ ಮಾಡುತ್ತಿದೆ. ಅಲ್ಲದೆ ಈಶಾನ್ಯ ರಾಜ್ಯಗಳ ಗ್ರಾಮಗಳ ರೈತರು ಹಾಲು, ತರಕಾರಿ ಮತ್ತು ಇತರೆ ಉತ್ಪನ್ನಗಳನ್ನು ನೇರವಾಗಿ ದೇಶಾದ್ಯಂತ ದೊಡ್ಡ ಹಾಗೂ ವಿದೇಶಿ ಮಾರುಕಟ್ಟೆಗಳಿಗೂ ಸಹ ತಲುಪಿಸಬಹುದಾಗಿದೆ.

 ಮಿತ್ರರೇ,

ಈಶಾನ್ಯ ಭಾರತದ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆ, ಸಂಸ್ಕೃತಿ ಶಕ್ತಿಯ ಸಂಕೇತವಾಗಿದೆ. ಇದು ಭಾರತಕ್ಕೆ ದೊಡ್ಡ ಹೆಮ್ಮೆಯಾಗಿದೆ. ಈ ಸಂದರ್ಭದಲ್ಲಿ ಆಧುನಿಕ ಮೂಲಸೌಕರ್ಯ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಮಣಿಪುರ ಸೇರಿದಂತೆ ಈಶಾನ್ಯ ಭಾಗದ ಪ್ರವಾಸೋದ್ಯಮ ಸಾಮರ್ಥ್ಯ ಸಮರ್ಪಕವಾಗಿ ಅನ್ವೇಷಣೆಗೊಂಡಿಲ್ಲ. ನಾನು ಇದೀಗ ಈಶಾನ್ಯ ಭಾಗದ ವರ್ಚಸ್ಸಿನಲ್ಲಿ ಬದಲಾವಣೆ ಮತ್ತು ಅದು ದೇಶ ಹಾಗೂ ವಿದೇಶದ ಪ್ರತಿಯೊಂದು ಮನೆಗೂ ಸಾಮಾಜಿಕ ಮಾಧ್ಯಮ ಮತ್ತು ವಿಡಿಯೋ ಸ್ಟ್ರೀಮಿಂಗ್ ಮೂಲಕ ತಲುಪಿಸುವ ಸಾಮರ್ಥ್ಯವನ್ನು ಕಾಣುತ್ತಿದ್ದೇನೆ. ಈಶಾನ್ಯ ಭಾಗದ ಯಾರೂ ಸಂಪರ್ಕ ಸಾಧಿಸದ ಜಾಗಗಳ ವಿಡಿಯೋ ದೃಶ್ಯಾವಳಿ ಜನರನ್ನು ಆಶ್ಚರ್ಯ ಚಕಿತಗೊಳಿಸುತ್ತದೆ. ಜನರು ನಮ್ಮ ದೇಶದಲ್ಲಿ ಇಂತಹದೊಂದು ಸ್ಥಳವಿದೆಯೇ ಎಂದು ಪ್ರಶ್ನಿಸುತ್ತಾರೆ. ಈಶಾನ್ಯ ಭಾಗ ಈ ಶಕ್ತಿಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಈ ಭಾಗದ ಯುವಕರಿಗೆ ಉದ್ಯೋಗಾವಕಾಶಗಳನ್ನು ಖಾತ್ರಿಗೊಳಿಸುವ ನಿಟ್ಟಿನಿಂದ ಸರ್ಕಾರ ಹಲವು ಯೋಜನೆಗಳ ಮೂಲಕ ಮುಂದಡಿ ಇಟ್ಟಿದೆ.

 ಮಿತ್ರರೇ,

ದೇಶದ ಅಭಿವೃದ್ಧಿಗಾಥೆಯಲ್ಲಿ ಈಶಾನ್ಯ ಭಾಗ ಪ್ರಗತಿಯ ಇಂಜಿನ್ ಆಗುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ. ಇಡೀ ಈಶಾನ್ಯ ಭಾಗದಲ್ಲಿ ಇದೀಗ ಶಾಂತಿ ನೆಲೆಸಿರುವುದರಿಂದ ದಿನೇ ದಿನೇ ನನ್ನ ವಿಶ್ವಾಸ ವೃದ್ಧಿಸುತ್ತಿದೆ. ಮೊದಲು ಪದೇ ಪದೇ ನಕಾರಾತ್ಮಕ ಸುದ್ದಿಗಳಿಂದ ಸದ್ದು ಮಾಡುತ್ತಿದ್ದ ಜಾಗದಲ್ಲಿ ಇದೀಗ ಶಾಂತಿ, ಪ್ರಗತಿ ಮತ್ತು ಅಭ್ಯುದಯದ ಮಂತ್ರ ಪ್ರತಿಧ್ವನಿಸುತ್ತಿದೆ.

 ಮಣಿಪುರದಲ್ಲಿ ಇದೀಗ ರಸ್ತೆ ಬಂದ್, ಅಡೆತಡೆ (ಬ್ಲಾಕೇಡ್)ಗಳು ಇತಿಹಾಸದ ಭಾಗವಾಗಿವೆ ಮತ್ತು ಇದೀಗ ಮುಖ್ಯಮಂತ್ರಿಗಳು ಕೂಡ ಅದೇ ವಿಷಯವನ್ನು ಹೇಳುತ್ತಿದ್ದರು. ಈಶಾನ್ಯ ಭಾಗದ ಜನರನ್ನು ನಾನು ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ. ವಿಶೇಷವಾಗಿ ಮಣಿಪುರದ ಪ್ರಜೆಗಳು ನಮ್ಮನ್ನು ಬೆಂಬಲಿಸಿದರು ಮತ್ತು ಉತ್ತೇಜನ ನೀಡಿದರು, ಹಾಗಾಗಿ ಇಂದು ಬ್ಲಾಕೇಡ್ ಎನ್ನುವುದು ಹಿಂದಿನ ಸಂಗತಿಯಾಗಿದೆ ಮತ್ತು ಅಸ್ಸಾಂನಲ್ಲಿ ದಶಕಗಳಿಂದ ನಡೆಯುತ್ತಿದ್ದ ಹಿಂಸಾಚಾರ ಕೊನೆಗೊಂಡಿದೆ. ತ್ರಿಪುರಾ ಮತ್ತು ಮಿಝೋರಾಂಗಳಲ್ಲೂ ಯುವಕರು ಹಿಂಸಾ ಮಾರ್ಗವನ್ನು ತ್ಯಜಿಸಿದ್ದಾರೆ. ಇದೀಗ ಬ್ರೂರೆಯಾಂಗ್ ನಿರಾಶ್ರಿತರು ಉತ್ತಮ ಜೀವನದತ್ತ ಸಾಗುತ್ತಿದ್ದಾರೆ.

ಮಿತ್ರರೇ,

ಉತ್ತಮ ಮೂಲಸೌಕರ್ಯ, ಸಂಪರ್ಕ ಮತ್ತು ಶಾಂತಿ ಈ ಮೂರು ಸಂಗತಿಗಳು ಸ್ಥಾಪನೆಯಾದರೆ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿಕೆ ಸಾಧ್ಯತೆಗಳು ಹಲವು ಪಟ್ಟು ಏರಿಕೆಯಾಗಲಿದೆ. ಈಶಾನ್ಯ ಭಾಗದಲ್ಲಿ ಎರಡು ಸಂಗತಿಗಳು ಅಂದರೆ ಸಾವಯವ ಉತ್ಪನ್ನಗಳು ಮತ್ತು ಬಿದಿರು ಅತ್ಯಂತ ಪ್ರಮುಖವಾಗಿದ್ದು, ಅವು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಉತ್ತೇಜನ ನೀಡುವ ಎಲ್ಲ ಸಾಮರ್ಥ್ಯವನ್ನು ನೀಡಿದೆ. ಇಂದು ಈಶಾನ್ಯ ಭಾಗದ ರೈತ ಸಹೋದರ ಸಹೋದರಿಯರ ಜೊತೆ ನಾನು ಮಾತನಾಡಲು ಬಯಸುತ್ತೇನೆ. ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಈಶಾನ್ಯ ಭಾಗ ದೇಶದ ಸಾವಯವ ರಾಜಧಾನಿ ಆಗಬೇಕು ಎಂದು. ಇದೀಗ ನಾನು ಮತ್ತೊಂದು ಸಂಗತಿಯನ್ನು ಹೇಳಲು ಬಯಸುತ್ತೇನೆ. ಒಂದು ದಿನ ನಾನು ಕೆಲವು ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಆರ್ಥಿಕ ತಜ್ಞರನ್ನು ಭೇಟಿ ಮಾಡಿದ್ದೆ. ಅವರು ಒಂದು ಆಸಕ್ತಿಕರ ವಿಷಯವನ್ನು ನನಗೆ ತಿಳಿಸಿದ್ದರು. ಅದೆಂದರೆ ಈಶಾನ್ಯ ಭಾಗದ ರೈತರು ಪಾಲ್ಮೋಲಿನ್ (ಪಾಮಾಯಿಲ್ ) ಬೆಳೆಯನ್ನು ಆರಂಭಿಸಿದರೆ ಇಡೀ ದೇಶದಲ್ಲಿ ಮತ್ತು ಈಶಾನ್ಯ ಭಾಗದ ರೈತರಿಗೆ ಭಾರೀ ಅನುಕೂಲವಾಗಲಿದೆ ಎಂದು. ಇಂದು ಪಾಲ್ಮೋಲಿನ್ ಎಣ್ಣೆ ಭಾರತದಲ್ಲಿ ಭರವಸೆಯ ಮಾರುಕಟ್ಟೆಯನ್ನು ಹೊಂದಿದೆ. ಈಶಾನ್ಯ ಭಾಗದ ರೈತರು ಸಾವಯವ ಕೃಷಿ ಮಾಡಿ, ಪಾಲ್ಮೋಲಿನ್ ಬೆಳೆದರೆ ನೀವು ಹೇಗೆ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಬಹುದು ಎಂಬುದನ್ನು ಯೋಚಿಸಿ. ನೀವು ನಮ್ಮ ಆರ್ಥಿಕತೆಗೆ ಹೊಸ ವೇಗವನ್ನು ತಂದುಕೊಡಬಹುದು. ನಾನು ಈ ಭಾಗದ ಎಲ್ಲ ರಾಜ್ಯ  ಸರ್ಕಾರಗಳಿಗೆ ಆಗ್ರಹಿಸುವುದೆಂದರೆ ಆಯಾ ರಾಜ್ಯಗಳಲ್ಲಿ ಪಾಲ್ಮೋಲಿನ್ ಮಿಷನ್ ಕೈಗೆತ್ತಿಕೊಳ್ಳಬೇಕು ಎಂದು. ರೈತರಿಗೆ ಉತ್ತೇಜನ ನೀಡಿ, ಅವರನ್ನು ಜಾಗೃತಗೊಳಿಸಬೇಕು ಮತ್ತು ಈ ನಿಟ್ಟಿನಲ್ಲಿ ನಾವು ರೈತರಿಗೆ ಹೇಗೆ ಸಹಾಯ ಮಾಡಬಹುದು ಎಂಬ ಬಗ್ಗೆ ಸಭೆ ನಡೆಸಿ, ಯೋಜನೆಗಳನ್ನು ರೂಪಿಸಬೇಕಾಗಿದೆ. ನಾವು ಆ ನಿಟ್ಟಿನಲ್ಲಿ ಯೋಚಿಸಬೇಕು. ಹಾಗಾಗಿ ನಾನು ಇಂದು ಮಣಿಪುರದ ಸಹೋದರ ಸಹೋದರಿಯರಿಗೆ ಅದನ್ನು ಹೇಳಲು ಬಯಸುತ್ತಿದ್ದೇನೆ.

 ಈಶಾನ್ಯ ಭಾಗದ ನನ್ನ ಸಹೋದರ ಸಹೋದರಿಯರು ಸದಾ ವೋಕಲ್ ಫಾರ್ ಲೋಕಲ್ಅಂದರೆ ಸ್ಥಳೀಯ ಉತ್ಪನ್ನಗಳಿಗೆ ದನಿಯಾಗುತ್ತಿದ್ದಾರೆ ಮತ್ತು ಅವು ಕೇವಲ ದನಿಗಳಲ್ಲ. ಈಶಾನ್ಯ ಭಾಗದವರ ಮತ್ತೊಂದು ವಿಶೇಷತೆ ಎಂದರೆ ಅವರಿಗೆ ಸ್ಥಳೀಯ ಉತ್ಪನ್ನಗಳ ಬಗ್ಗೆ ಭಾರೀ ಹೆಮ್ಮೆ ಇದೆ. ನನಗೆ ಈ ಬಗೆಯ ಪೋಷಾಕುಗಳನ್ನು ಧರಿಸಿದಾಗ ಆ ಭಾಗದ ಜನ ಅತ್ಯಂತ ಹೆಮ್ಮೆಯಿಂದ ನನ್ನನ್ನು ಗುರುತಿಸುತ್ತಿದ್ದರು. ತಮ್ಮ ಉತ್ಪನ್ನಗಳ ಬಗ್ಗೆ ಹೆಮ್ಮೆ ಇರುವುದು ಅತ್ಯಂತ ಗೌರವದ ವಿಷಯ ಮತ್ತು ಹಾಗಾಗಿ ಈಶಾನ್ಯ ಭಾಗದ  ಜನರಿಗೆ ನಾನು ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ ಎಂದು ಹೇಳುವುದು ಸರಿಯಲ್ಲ, ಏಕೆಂದರೆ ನೀವು ಈಗಾಗಲೇ ನಾಲ್ಕು ಹೆಜ್ಜೆ ಮುಂದಿಟ್ಟಿದ್ದೀರಿ. ನಿಮಗೆ ಸ್ಥಳೀಯ ಉತ್ಪನ್ನಗಳ ಬಗ್ಗೆ ಭಾರೀ ಹೆಮ್ಮೆ ಇದೆ. ನಿಮಗೆ ನಮ್ಮದು ಎಂಬ ಹೆಚ್ಚಿನ ಗೌರವವೂ ಇದೆ. ಇದು ಅತಿದೊಡ್ಡ ಶಕ್ತಿಯೂ ಆಗಿದೆ.

 ಈಶಾನ್ಯ ಭಾಗದ ಬಹುತೇಕ ಉತ್ಪನ್ನಗಳು ಕೆಲವೊಮ್ಮೆ ಮೌಲ್ಯವರ್ಧಿತದನೆ ಜೊತೆಗೆ ಉತ್ತೇಜನ ಮತ್ತು ಮಾರುಕಟ್ಟೆಯಿಂದ ವಂಚಿತವಾಗುತ್ತವೆ. ಆತ್ಮನಿರ್ಭರ ಭಾರತ ಅಭಿಯಾನದಡಿ ಭಾರತ ಇದೀಗ ಸ್ಥಳೀಯ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು  ಮಾರುಕಟ್ಟೆಗೆ ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಸಂಗತಿ ಜನರಿಗೆ ತಿಳಿದಿರುವುದಿಲ್ಲ. ಈ ಕ್ಲಸ್ಟರ್ ಗಳಲ್ಲಿ ಕೃಷಿ ನವೋದ್ಯಮಗಳು ಮತ್ತು ಇತರೆ ಉದ್ಯಮಗಳಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುವುದು. ಅಂತಹ ಸನ್ನಿವೇಶಗಳಲ್ಲಿ ಈಶಾನ್ಯ ಭಾಗಕ್ಕೆ ತಮ್ಮ ಸಾವಯವ ಉತ್ಪನ್ನಗಳನ್ನು ದೇಶ ವಿದೇಶದ ಎಲ್ಲ ಭಾಗಗಳಿಗೂ ತಲುಪಿಸಲು ಅಗತ್ಯ ಪ್ರತಿಯೊಂದು ಸೌಕರ್ಯಗಳನ್ನೂ ಸಹ ಕಲ್ಪಿಸಿ ಕೊಡಲಾಗುವುದು.

 ಮಿತ್ರರೇ,

ಈಶಾನ್ಯ ಭಾಗಕ್ಕೆ ಸ್ಥಳೀಯ ಉತ್ಪಾದನೆ ಮೂಲಕ ಭಾರತದ ಬಿದಿರು ಆಮದನ್ನು ಬದಲಿಸುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲಿ ಊದಿನಕಡ್ಡಿಗಳಿಗೆ (ಇನ್ಸೆನ್) ಭಾರೀ ಬೇಡಿಕೆ ಇದೆ. ಆದರೆ  ನಾವು ಅದಕ್ಕೂ ಕೂಡ ಸಾವಿರಾರು ಕೋಟಿ ರೂಪಾಯಿಗಳ ಬಿದಿರನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ದೇಶದಲ್ಲಿ ಸಾಕಷ್ಟು ಕಾರ್ಯ ನಡೆದಿದ್ದು, ಇದರಿಂದ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಮಿತ್ರರೇ,

ಈಶಾನ್ಯ ಭಾಗದಲ್ಲಿ ಬಿದಿರು ಉದ್ಯಮವನ್ನು ಉತ್ತೇಜಿಸಲು ಈಗಾಗಲೇ ಬಿದಿರು ಕೈಗಾರಿಕಾ ಪಾರ್ಕ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಅಲ್ಲದೆ, ನುಮಾಲಿಘರ್ ನಲ್ಲಿ ಬಿದಿರಿನಿಂದ ಜೈವಿಕ ಇಂಧನವನ್ನು ಉತ್ಪಾದಿಸಿ ಕಾರ್ಖಾನೆಯಿಂದ ಉತ್ಪಾದಕರವರೆಗೆ ತಲುಪಿಸುವ ಘಟಕವನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಬಿದಿರು ಮಿಷನ್ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿ ಬಿದಿರು ಬೆಳೆಯುವ ರೈತರು, ಕರಕುಶಲ ಕಲೆಯಲ್ಲಿ ತೊಡಗಿರುವ ಕುಶಲಕರ್ಮಿಗಳು ಮತ್ತು ಇತರೆಯವರಿಗೆ ಅಗತ್ಯ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಈಶಾನ್ಯ ಭಾಗದ ಯುವಕರಿಗೆ ಹಾಗೂ ಇಲ್ಲಿನ ನವೋದ್ಯಮಗಳಿಗೆ ಭಾರೀ ಅನುಕೂಲವಾಗಲಿದೆ.

ಮಿತ್ರರೇ,

ಈಶಾನ್ಯ ಭಾಗದಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಗಳ ಪ್ರಯೋಜನವನ್ನು ಕೇವಲ ಸಕ್ರಿಯ ರಾಜ್ಯಗಳು ಮಾತ್ರ ಪಡೆದುಕೊಳ್ಳಲು ಸಾಧ್ಯ. ಮಣಿಪುರದಲ್ಲಿ ವಿಪುಲ ಅವಕಾಶಗಳಿವೆ ಮತ್ತು ಮಣಿಪುರ ಅಂತಹ ಅವಕಾಶಗಳನ್ನು ಎಂದಿಗೂ ಸಹ ಕೈಬಿಡುವುದಿಲ್ಲ ಎಂಬ ಭರವಸೆ ನನಗಿದೆ. ಇಲ್ಲಿನ ರೈತರು ಮತ್ತು ಯುವ ಉದ್ಯಮಿಗಳಿಗೆ ಭಾರೀ ಅನುಕೂಲವಾಗಲಿದೆ. ಮಣಿಪುರದ ಯುವಕರಿಗೆ ಸ್ಥಳೀಯವಾಗಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ, ನವೋದ್ಯಮ ಮತ್ತು ಇತರೆ ತರಬೇತಿಗಳಿಗೆ ಹಲವು ಸಂಸ್ಥೆಗಳನ್ನು ಇಲ್ಲಿ ಸ್ಥಾಪಿಸಲಾಗಿದೆ.

ಇಲ್ಲಿ ವಿಶ್ವದರ್ಜೆಯ ಕ್ರೀಡಾಂಗಣಗಳು ಮತ್ತು ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯಿಂದಾಗಿ ಮಣಿಪುರ ದೇಶದ ಕ್ರೀಡಾ ಪ್ರತಿಭೆಗಳ ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿದೆ. ಅಲ್ಲದೆ ದೇಶದ ಇತರ ಭಾಗಗಳಲ್ಲೂ ಮಣಿಪುರ ಸೇರಿದಂತೆ ಈಶಾನ್ಯ ಭಾಗಗಳ ಯುವಕರಿಗೆ ಇಂದು ಉತ್ತಮ ವಸತಿ ನಿಲಯ ಸೇರಿದಂತೆ ಹಲವು ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಈ ಅಭಿವೃದ್ಧಿ ಮತ್ತು ವಿಶ್ವಾಸದ ಪಥವನ್ನು ಇನ್ನಷ್ಟು ಬಲವರ್ಧನೆಗೊಳಿಸುವುದನ್ನು ಮುಂದುವರಿಸುತ್ತೇವೆ. ಮತ್ತೊಮ್ಮೆ ಈ ಹೊಸ ಜಲ ಯೋಜನೆಗಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.

 ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ನಮ್ಮ ಕನಸಿಗೆ ಯಾವುದೇ ಅಡ್ಡಿಯಾಗಬಾರದು ಮತ್ತು ನಾವು ಗಡುವಿಗಿಂತ ಮುಂಚೆಯೇ ಕಾಮಗಾರಿಯನ್ನು ಪೂರ್ಣಗೊಳಿಸಲು ನಾನು ನಮ್ಮ ಎಲ್ಲ ತಾಯಂದಿರು ಹಾಗೂ ಸಹೋದರಿಯರ ಆಶೀರ್ವಾದ ಕೋರುತ್ತೇನೆತಾಯಂದಿರು ಹಾಗೂ ಸಹೋದರಿಯರು ನಮ್ಮನ್ನು ಆಶೀರ್ವದಿಸಲಿ. ನಾವು ಕಾರ್ಯನಿರ್ವಹಿಸಲು ಸಿದ್ಧವಿದ್ದೇವೆ. ಈ ಕಾರ್ಯ ಪೂರ್ಣಗೊಳಿಸಲು ನಮಗೆ ಆಶೀರ್ವದಿಸಿ, ನಿಮ್ಮ ಆಶೀರ್ವಾದ ನಮಗೆ ಭಾರೀ ಶಕ್ತಿಯನ್ನು ಕೊಡಲಿದೆ. ರಕ್ಷಾ ಬಂಧನ ಹಬ್ಬ ಇನ್ನೇನು ಸನಿಹದಲ್ಲಿದೆ. ಹಾಗಾಗಿ ನಾನು ನಿಮ್ಮೆಲ್ಲರ ಆಶೀರ್ವಾದ ಕೋರುತ್ತಿದ್ದೇನೆ. ನೀವೆಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಈಶಾನ್ಯ ಭಾಗ ಮೊದಲಿನಿಂದಲೂ ಸ್ವಚ್ಛತೆ ಬಗ್ಗೆ ಹೆಚ್ಚು ಗಂಭೀರ ಮತ್ತು ಜಾಗೃತವಾಗಿರುತ್ತದೆ. ಇದು ದೇಶಕ್ಕೆ ಮಾದರಿಯಾಗಿದೆ. ಆದರೆ ಇಂದು ನಾವು ಕೊರೊನಾ ವಿರುದ್ಧ ಸಮರ ನಡೆಸುತ್ತಿದ್ದು, ಈಗ ನಾವು ಎರಡು ಗಜ ದೂರ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಖಗವಸು ಧರಿಸುವುದು ಮತ್ತು ಕೈಶುಚಿಗೊಳಿಸಿಕೊಳ್ಳುವುದು ಹಾಗೂ ನಾವು ಯಾವುದೇ ಪ್ರದೇಶಗಳಲ್ಲೂ ಉಗುಳಬಾರದು. ಈ ಕ್ರಮಗಳನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡು ಪಾಲಿಸಬೇಕಾಗಿದೆ. ಇಂದು ಇವು ಕೊರೊನಾ ವಿರುದ್ಧ ಸೆಣೆಸಲು ಅತ್ಯಂತ ಶಕ್ತಿಶಾಲಿ ಅಸ್ತ್ರಗಳಾಗಿವೆ. ಇವು ಕೊರೊನಾ ವಿರುದ್ಧ ಹೋರಾಟಕ್ಕೆ ನಮ್ಮೆಲ್ಲರಿಗೂ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಲಿವೆ.

ತುಂಬಾ ಧನ್ಯವಾದಗಳು