Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭ್ರಷ್ಟಾಚಾರ ಮತ್ತು ಕಪ್ಪು ಹಣದ ಅಂತ್ಯಕ್ಕೆ ಪ್ರಧಾನಮಂತ್ರಿಯವರಿಂದ ಐತಿಹಾಸಿಕ ಪ್ರಕಟಣೆ; ಇಂದು ಮಧ್ಯರಾತ್ರಿಯಿಂದಲೇ ಐನೂರು ಮತ್ತು ಒಂದು ಸಾವಿರ ರೂಪಾಯಿ ನೋಟುಗಳು ಕಾನೂನಾತ್ಮಕ ಚಲಾವಣೆ ಇಲ್ಲ


ಭ್ರಷ್ಟಾಚಾರ, ಕಪ್ಪುಹಣ, ಅಕ್ರಮ ಹಣ ಸಾಗಣೆ, ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಆರ್ಥಿಕ ನೆರವು ಹಾಗೂ ನಕಲಿ ನೋಟುಗಳ ವಿರುದ್ಧದ ಹೋರಾಟಕ್ಕೆ ದಾಖಲೆಯ ಶಕ್ತಿ ತುಂಬುವಂಥ ಐತಿಹಾಸಿಕ ಹೆಜ್ಜೆಯನ್ನು ಇಟ್ಟಿರುವ ಭಾರತ ಸರ್ಕಾರ, ಐನೂರು ಮತ್ತು ಒಂದು ಸಾವಿರ ರೂಪಾಯಿ ನೋಟುಗಳ ಕಾನೂನು ಬದ್ಧ ಚಲಾವಣೆಯನ್ನು ಇಂದು ಅಂದರೆ 8ನೇ ನವೆಂಬರ್ 2016ರ ಮಧ್ಯರಾತ್ರಿಯಿಂದಲೇ ಅಂತ್ಯಗೊಳಿಸಿದೆ.
ಸರ್ಕಾರವು ಎರಡು ಸಾವಿರ ರೂಪಾಯಿ ನೋಟುಗಳನ್ನು ಮತ್ತು ಹೊಸ ಐನೂರು ರೂಪಾಯಿ ನೋಟುಗಳನ್ನು ಚಲಾವಣೆಗೆ ತರಬೇಕೆಂಬ ಆರ್.ಬಿ.ಐ.ನ ಶಿಫಾರಸುಗಳನ್ನು ಒಪ್ಪಿಕೊಂಡಿದೆ.

ಇಂದಿನ ನಿರ್ಧಾರದಿಂದ ನೂರು, ಐವತ್ತು, ಇಪ್ಪತ್ತು, ಹತ್ತು, ಐದು, ಎರಡು ಮತ್ತು ಒಂದು ರೂಪಾಯಿ ನೋಟುಗಳ ಕಾನೂನು ಬದ್ಧ ಚಲಾವಣೆ ಅಬಾಧಿತವಾಗಿರುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2016ರ ನವೆಂಬರ್ 8ರ ಸಂಜೆ ದೂರದರ್ಶನದ ಮೂಲಕ ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಈ ಪ್ರಕಟಣೆಗಳನ್ನು ಮಾಡಿದ್ದಾರೆ. ಈ ನಿರ್ಧಾರಗಳು ಭಾರತದ ಶ್ರಮಜೀವಿಗಳು ಮತ್ತು ಪ್ರಾಮಾಣಿಕ ಜನರ ಹಿತವನ್ನು ರಕ್ಷಿಸುತ್ತದೆ ಹಾಗೂ ರಾಷ್ಟ್ರವಿರೋಧಿ ಮತ್ತು ಸಮಾಜ ಘಾತುಕ ಶಕ್ತಿಗಳ ಕೈಸೇರಿ ಅವರು ಕೂಡಿಟ್ಟಿದ್ದ ಐನೂರು ಮತ್ತು ಸಾವಿರ ರೂಪಾಯಿ ನೋಟುಗಳು ಮೌಲ್ಯ ರಹಿತ ಕಾಗದದ ಚೂರಾಗುತ್ತದೆ.

ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ಭ್ರಷ್ಟಾಚಾರ, ಕಪ್ಪುಹಣ ಮತ್ತು ನಕಲಿ ನೋಟುಗಳ ವಿರುದ್ಧದ ಹೋರಾಟದಲ್ಲಿ ಶ್ರೀಸಾಮಾನ್ಯನ ಕೈಗಳು ಬಲಗೊಳ್ಳುತ್ತವೆ. ಸಂಪೂರ್ಣ ಸಂವೇದನಾಶೀಲವಾಗಿ ಶ್ರೀಸಾಮಾನ್ಯ ಮುಂಬರುವ ದಿನಗಳಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದಾದರೂ ಮೋದಿ ಅವರು ಪ್ರಕಟಿಸಿರುವ ಸರಣಿ ಕ್ರಮಗಳು ಸಂಭಾವ್ಯ ಸಮಸ್ಯೆಗಳಿಂದ ಹೊರಬರಲು ಸಹಕಾರಿ ಆಗಲಿದೆ.

ಐನೂರು ಮತ್ತು ಒಂದು ಸಾವಿರ ರೂಪಾಯಿಗಳ ಹಳೆಯ ನೋಟುಗಳನ್ನು ಹೊಂದಿರುವವರು ಈ ನೋಟುಗಳನ್ನು ನವೆಂಬರ್ 10ರಿಂದ ಡಿಸೆಂಬರ್ 30ರವರೆಗೆ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಜಮೆ ಮಾಡಬಹುದು ಎಂದು ಪ್ರಧಾನಮಂತ್ರಿಯವರು ಪ್ರಕಟಿಸಿದ್ದಾರೆ. ಅಲ್ಪಕಾಲದವರೆಗೆ ಬ್ಯಾಂಕ್ ಮತ್ತು ಎಟಿಎಂಗಳಿಂದ ಹಣ ಪಡೆಯುವುದಕ್ಕೆ ಕೂಡ ಕೆಲವು ಮಿತಿಗಳನ್ನು ಹೇರಲಾಗಿದೆ.
ಮಾನವೀಯತೆಯ ದೃಷ್ಟಿಯಿಂದ ಐನೂರು ಮತ್ತು ಒಂದು ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿರುವ ಔಷಧದ ಅಂಗಡಿಗಳಲ್ಲಿ (ವೈದ್ಯರು ಬರೆದುಕೊಟ್ಟ ಔಷಧ ಚೀಟಿ), ರೈಲ್ವೆ ಟಿಕೆಟ್ ಕೌಂಟರ್ ಗಳಲ್ಲಿ, ಸರ್ಕಾರಿ ಬಸ್ ಗಳಲ್ಲಿ, ವಿಮಾನ ಟಿಕೆಟ್ ಮಾರಾಟದ ಕೌಂಟರ್ ಗಳಲ್ಲಿ, ಪಿಎಸ್.ಯು ತೈಲ ಕಂಪನಿಗಳ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸ್ಟೇಷನ್ ಗಳಲ್ಲಿ, ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಧಿಕೃತ ಗ್ರಾಹಕ ಸಹಕಾರ ಮಳಿಗೆಗಳಲ್ಲಿ, ರಾಜ್ಯ ಸರ್ಕಾರಗಳ ಅಧಿಕೃತ ಹಾಲಿನ ಮಳಿಗೆಗಳಲ್ಲಿ ಮತ್ತು ಸ್ಮಶಾನ ಮತ್ತು ಚಿತಾಗಾರಗಳಲ್ಲಿ ಅಂಗೀಕರಿಸಲಾಗುತ್ತದೆ,

ಶ್ರೀ ಮೋದಿ ಅವರು, ಚೆಕ್, ಡಿಮ್ಯಾಂಡ್ ಡ್ರಾಫ್ಟ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮತ್ತು ವಿದ್ಯುನ್ಮಾನ ಹಣ ವರ್ಗಾವಣೆಯ ಮೇಲೆ ಯಾವುದೇ ನಿರ್ಬಂಧ ಇಲ್ಲ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಚಲಾವಣೆಯಲ್ಲಿರುವ ನಗದಿನ ಪ್ರಮಾಣ ಹಣದುಬ್ಬರಕ್ಕೆ ಹೇಗೆ ಬೆಸೆದುಕೊಂಡಿದೆ ಮತ್ತು ಭ್ರಷ್ಟ ಮಾರ್ಗದ ಮೂಲಕ ಹೂಡಲಾದ ನಗದಿನಿಂದ ಹೇಗೆ ಪರಿಸ್ಥಿತಿ ಹದಗೆಟ್ಟಿದೆ ಎಂಬ ಒಳನೋಟವನ್ನು ಹಂಚಿಕೊಂಡಿದ್ದಾರೆ. ಇದು ಬಡವರು ಮತ್ತು ಸಣ್ಣ ಮಧ್ಯಮವರ್ಗದ ಜನರ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತಿತ್ತು ಎಂದೂ ಹೇಳಿದ್ದಾರೆ. ಪ್ರಾಮಾಣಿಕ ನಾಗರಿಕರು ಮನೆಗಳನ್ನು ಖರೀದಿಸುವಾಗ ಎದುರಿಸುತ್ತಿದ್ದ ಸಮಸ್ಯೆಗಳನ್ನೂ ಅವರು ಉದಾಹರಣೆಯಾಗಿ ನೀಡಿದ್ದಾರೆ.
ಕಪ್ಪುಹಣವನ್ನು ನಿರ್ಮೂಲನೆ ಮಾಡಲು ಸಮಯ- ಪರೀಕ್ಷಿತ ಬದ್ಧತೆ

ಪ್ರಧಾನಮಂತ್ರಿಯವರು ಪದೆ ಪದೇ ಸರ್ಕಾರ ಕಪ್ಪುಹಣದ ಪಿಡುಗಿನಿಂದ ಹೊರಬರಲು ಕ್ರಮಕ್ಕೆ ಬದ್ಧವಾಗಿದೆ ಎಂದು ಹೇಳುತ್ತಿದ್ದರು. ಕಳೆದ ಎರಡೂವರೆ ವರ್ಷಗಳಲ್ಲಿ ಎನ್.ಡಿ.ಎ. ಸರ್ಕಾರ ಅವರು ಈ ಬಗ್ಗೆ ಮಾತನಾಡಿದ್ದಾರೆ ಮತ್ತು ಅದಕ್ಕೆ ಉದಾಹರಣೆಗಳನ್ನೂ ನೀಡಿದ್ದಾರೆ.

ಕಪ್ಪು ಹಣ ಕುರಿತಂತೆ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರದ ಮೊದಲ ನಿರ್ಧಾರ ಎಸ್.ಐ.ಟಿ. ಸ್ಥಾಪನೆ ಆಗಿತ್ತು.
2015ರಲ್ಲಿ ವಿದೇಶೀ ಬ್ಯಾಂಕ್ ಖಾತೆಗಳ ಬಹಿರಂಗಕ್ಕೆ ಕಾನೂನು ತರಲಾಯಿತು. 2016ರ ಆಗಸ್ಟ್ ನಲ್ಲಿ ಬೇನಾಮಿ ವಹಿವಾಟಿಗೆ ಸಂಬಂಧಿಸಿದಂತೆ ಮಹತ್ವದ ನಿಯಮಗಳನ್ನು ಜಾರಿಗೊಳಿಸಲಾಯಿತು. ಇದೇ ಅವಧಿಯಲ್ಲಿ ಕಪ್ಪುಹಣ ಘೋಷಣೆಗೆ ಯೋಜನೆಯನ್ನೂ ಪರಿಚಯಿಸಲಾಗಿತ್ತು.

ಈ ಪ್ರಯತ್ನಗಳು ಫಲ ನೀಡಿವೆ. ಕಳೆದ ಎರಡೂವರೆ ವರ್ಷಗಲಲ್ಲಿ 1.25ಲಕ್ಷ ಕೋಟಿ ರೂಪಾಯಿ ಕಪ್ಪುಹಣ ಹೊರಗೆ ಬಂದಿದೆ.
ವಿಶ್ವ ವೇದಿಕೆಯಲ್ಲಿ ಕಪ್ಪುಹಣದ ವಿಷಯ ಪ್ರಸ್ತಾಪ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಯಕರೊಂದಿಗೆ ಮಹತ್ವದ ಬಹುಪಕ್ಷೀಯ ಶೃಂಗ ಮತ್ತು ದ್ವಿಪಕ್ಷೀಯ ಸಭೆ ಸೇರಿದಂತೆ ಹಲವು ಜಾಗತಿಕ ವೇದಿಕೆಗಳಲ್ಲಿ ಮತ್ತೆ ಮತ್ತೆ ಕಪ್ಪು ಹಣದ ಪ್ರಸ್ತಾಪವನ್ನು ಮಾಡಿದ್ದರು.

ಕಳೆದ ಎರಡೂವರೆ ವರ್ಷದಲ್ಲಿ ದಾಖಲೆಯ ವೃದ್ಧಿ

ಸರ್ಕಾರದ ಪ್ರಯತ್ನಗಳು ಜಾಗತಿಕ ಆರ್ಥಿಕತೆಯಲ್ಲಿ ಪ್ರಜ್ವಲವಾದ ಕೇಂದ್ರವಾಗಿ ಹೊರಹೊಮ್ಮಲು ಕಾರಣವಾಗಿವೆ ಎಂದು ಪ್ರಧಾನಿ ಹೇಳಿದ್ದಾರೆ. ಭಾರತ ಹೂಡಿಕೆಗೆ ಸೂಕ್ತ ತಾಣವಾಗಿದೆ ಮತ್ತು ಸುಲಭವಾಗಿ ವಾಣಿಜ್ಯ ನಡೆಸುವ ತಾಣವೂ ಆಗಿದೆ. ಭಾರತದ ಪ್ರಗತಿಯ ಬಗ್ಗೆ ಪ್ರಮುಖ ಹಣಕಾಸು ಸಂಸ್ಥೆಗಳು ಆಶಾಭಾವನೆಯನ್ನು ವ್ಯಕ್ತಪಡಿಸಿವೆ.

ಇದೆಲ್ಲರೊಂದಿಗೆ, ಭಾರತದ ಉದ್ಯಮ ಮತ್ತು ನಾವಿನ್ಯತೆಯು ಭಾರತದಲ್ಲಿ ಸಂಶೋಧನೆ ಮತ್ತು ನಾವಿನ್ಯತೆ, ಉದ್ಯಮಾಚರಣೆಗೆ ಮೇಕ್ ಇನ್ ಇಂಡಿಯಾ ಮತ್ತು ನವೋದ್ಯಮ ಮೂಲಕ ಚೇತರಿಕೆ ನೀಡಿದೆ.

ಪ್ರಧಾನಮಂತ್ರಿಯವರು ಮಾಡಿರುವ ಈ ಐತಿಹಾಸಿಕ ಪ್ರಕಟಣೆ ಕೇಂದ್ರಸರ್ಕಾರ ಈಗಾಗಲೇ ಕೈಗೊಂಡಿರುವ ಅಭಿವೃದ್ಧಿಪರವಾದ ಪ್ರಯತ್ನಗಳಿಗೆ ಮತ್ತಷ್ಟು ಮೌಲ್ಯವನ್ನು ನೀಡುತ್ತದೆ.

***

AKT/AK