ಘನತೆವೆತ್ತ ಲಾಂಚೆನ್ ಡಾ. ಲೋಟೆ ಶೇರಿಂಗ್ ಅವರೇ, ಭಾರತ ಮತ್ತು ಭೂತಾನ್ ನ ಎಲ್ಲ ಗೌರವಾನ್ವಿತ ಅತಿಥಿಗಳೇ,
ನಮಸ್ಕಾರ!
ಎಲ್ಲ ಭಾರತೀಯರಂತೆ, ನನಗೂ ಕೂಡ ಭೂತಾನ್ ಬಗ್ಗೆ ಪ್ರೀತಿ ಮತ್ತು ಬಾಂಧವ್ಯ ಇದೆ. ನಾನು ಯಾವಾಗ ನಿಮ್ಮನ್ನ ಭೇಟಿ ಮಾಡುತ್ತೇನೋ, ಆಗ ನನಗೆ ವಿಶೇಷ ಆಪ್ತತೆಯ ಅನುಭವವಾಗುತ್ತದೆ.
ಭಾರತ ಮತ್ತು ಭೂತಾನ್ ನಡುವಿನ ಅನನ್ಯ ಬಾಂಧವ್ಯ ತಮ್ಮ ನಮ್ಮ ವಿಶೇಷ ಗೆಳೆತನ ನಮ್ಮ ಎರಡೂ ರಾಷ್ಟ್ರಗಳಿಗೆ ಅಮೂಲ್ಯವಷ್ಟೇ ಅಲ್ಲ, ವಿಶ್ವಕ್ಕೆ ಒಂದು ಅನುಪಮ ಉದಾಹರಣೆಯೂ ಆಗಿದೆ.
ಕಳೆದ ವರ್ಷ ನಾನು ನೀಡಿದ ಭೂತಾನ್ ಭೇಟಿ ಹಲವು ನೆನಪುಗಳಿಂದ ಕೂಡಿದೆ. ಹೊಸ ಕಾರ್ಯಕ್ರಮ, ಪ್ರತಿ ಕ್ಷಣದಲ್ಲೂ ಹೊಸ ಕೌತುಕ ಮತ್ತು ಹೊಸ ಉತ್ಸಾಹದಿಂದ ಕೂಡಿದ ಅದು ಒಂದು ರೀತಿ ಸ್ಮರಣಾರ್ಹ ಪಯಣವಾಗಿತ್ತು. ನಾವು ಡಿಜಿಟಲ್, ಬಾಹ್ಯಾಕಾಶ ಮತ್ತು ಹೊರಹೊಮ್ಮುವ ತಂತ್ರಜ್ಞಾನವನ್ನು ನಮ್ಮ ಸಹಕಾರ ಕ್ಷೇತ್ರಕ್ಕೆ ಹೊಸದಾಗಿ ಸೇರಿಸಿಕೊಳ್ಳುವ ಮಹತ್ವದ ಉಪಕ್ರಮ ಕೈಗೊಂಡೆವು.
21ನೇ ಶತಮಾನದಲ್ಲಿ, ಇದು ಎರಡೂ ರಾಷ್ಟ್ರಗಳ ನಡುವೆ ಸಂಪರ್ಕದ ಅದರಲ್ಲೂ ನಮ್ಮ ಯುವ ಪೀಳಿಗೆಗೆ ಹೊಸ ಮೂಲವಾಗಿದೆ. ಭೂತಾನ್ ಗೆ ನಾನು ಭೇಟಿ ನೀಡಿದ ವೇಳೆ ನಾವು ಎರಡೂ ದೇಶಗಳ ನಡುವೆ ರೂಪೆ ಕಾರ್ಡ್ ಯೋಜನೆಯ ಪ್ರಥಮ ಹಂತಕ್ಕೆ ಚಾಲನೆ ನೀಡಿದ್ದೆವು.
ಇದು ಭಾರತೀಯ ನಾಗರಿಕರಿಗೆ ಭಾರತೀಯ ಬ್ಯಾಂಕುಗಳು ನೀಡುವ ಕಾರ್ಡ್ ಗಳಿಂದ ಭೂತಾನಕ್ಕೆ ಹಣ ಪಾವತಿಸಲು ಅನುಕೂಲವಾಗಿದೆ. ಭೂತಾನ್ ನಲ್ಲಿ ಇದುವರೆಗೆ 11,000 ಯಶಸ್ವಿ ರುಪೇ ವ್ಯವಹಾರಗಳು ನಡೆದಿವೆ ಎಂದು ತಿಳಿದಾಗ ನನಗೆ ಸಂತೋಷವಾಯಿತು. ಕೋವಿಡ್-19 ಸಾಂಕ್ರಾಮಿಕ ಇಲ್ಲದಿದ್ದರೆ ಈ ಅಂಕಿ ಅಂಶವು ಇನ್ನೂ ಹೆಚ್ಚಾಗುತ್ತಿತ್ತು.
ಇಂದು ನಾವು ನಮ್ಮ ಈ ಮಹತ್ವಾಕಾಂಕ್ಷೆಯ ಯೋಜನೆಯ ಹಂತ ಎರಡಕ್ಕೆ ಚಾಲನೆ ನೀಡಿದ್ದೇವೆ. ಇದರೊಂದಿಗೆ ನಾವು ರೂಪೇ ಕಾರ್ಡ್ ಜಾಲದಲ್ಲಿ ಭೂತಾನ್ ಅನ್ನು ಪೂರ್ಣ ಸಹಯೋಗಿಯಾಗಿ ಸ್ವಾಗತಿಸುತ್ತೇವೆ. ಈ ಸಾಧನೆಗಾಗಿ ಶ್ರಮಿಸಿದ ಭಾರತ ಮತ್ತು ಭೂತಾನ್ ನ ಅಧಿಕಾರಿಗಳನ್ನು ನಾನು ಶ್ಲಾಘಿಸುತ್ತೇನೆ.
ಇಂದಿನಿಂದ, ಭೂತಾನ್ ರಾಷ್ಟ್ರೀಯ ಬ್ಯಾಂಕ್ ನೀಡಿರುವ ರೂಪೇ ಕಾರ್ಡ್ ಹೊಂದಿರುವವರು ಭಾರತದ 1 ಲಕ್ಷ ಎ.ಟಿ.ಎಂ.ಗಳನ್ನು ಮತ್ತು 20 ಲಕ್ಷ ಪಾಯಿಂಟ್ ಆಫ್ ಸೇಲ್ ಟರ್ಮಿನಲ್ ಬಳಸಬಹುದಾಗಿದೆ. ಭಾರತದಲ್ಲಿ ಪ್ರವಾಸೋದ್ಯಮ ಅಥವಾ ತೀರ್ಥಯಾತ್ರೆ, ಆರೋಗ್ಯ, ಶಿಕ್ಷಣಕ್ಕೆ ಭೂತಾನಿ ಪ್ರವಾಸಿಗರಿಗೆ ಇದು ತುಂಬಾ ಅನುಕೂಲಕರವಾಗಿರುತ್ತದೆ ಎಂಬುದು ನನ್ನ ವಿಶ್ವಾಸವಾಗಿದೆ.
ಇದು ಭೂತಾನ್ ನಲ್ಲಿ ಡಿಜಿಟಲ್ ವಹಿವಾಟು ಹೆಚ್ಚಳಕ್ಕೂ ನೆರವಾಗಲಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಾಗಿರುವ ಡಿಜಿಟಲ್ ವಹಿವಾಟು ಲಕ್ಷಾಂತರ ಜನರ ಜೀವನದಲ್ಲಿ ಪರಿವರ್ತನೆ ತಂದಿದೆ.
ಘನತೆವೆತ್ತರೆ, ಸ್ನೇಹಿತರೆ,
ಬಾಹ್ಯಾಕಾಶ ಕ್ಷೇತ್ರ ನಮ್ಮ ನಡುವಿನ ಸಂಪರ್ಕಕ್ಕೆ ಮತ್ತೊಂದು ಮಹತ್ವದ ಕ್ಷೇತ್ರವಾಗಿದೆ. ಭಾರತ ಅಭಿವೃದ್ಧಿಯ ಉದ್ದೇಶದ ಈಡೇರಿಕೆಗಾಗಿ ಸದಾ ಬಾಹ್ಯಾಕಾಶ ತಂತ್ರಜ್ಞಾನ ಬಳಸಿದೆ. ಭಾರತ ಮತ್ತು ಭೂತಾನ್ ಈ ಉದ್ದೇಶ ಹಂಚಿಕೊಂಡಿವೆ.
ಕಳೆದ ವರ್ಷ, ಭೂತಾನ್ ನಲ್ಲಿ ದಕ್ಷಿಣ ಏಷ್ಯಾ ಬಾಹ್ಯಾಕಾಶ ಬಳಕೆಗೆ ಗ್ರೌಂಡ್ ಅರ್ಥ್ ಕೇಂದ್ರವನ್ನು ನಾನು ಉದ್ಘಾಟಿಸಿದ್ದೆ. ಈ ಕೇಂದ್ರದ ನೆರವಿನಿಂದ ವಿಪತ್ತು ನಿರ್ವಹಣೆ ಮತ್ತು ಪ್ರಸಾರಕ್ಕೆ ಭೂತಾನ್ ದಕ್ಷಿಣ ಏಷ್ಯಾ ಬಾಹ್ಯಾಕಾಶವನ್ನು ಹೆಚ್ಚು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ ಎಂಬುದು ನನಗೆ ಸಂತಸ ನೀಡಿದೆ.
ನಿನ್ನೆ, ನಾವು ಬಾಹ್ಯಾಕಾಶದ ಶಾಂತಿಯುತ ಬಳಕೆಯ ಹೆಚ್ಚಿನ ಸಹಕಾರ ಕುರಿತಂತೆ ಚೌಕಟ್ಟು ದಸ್ತಾವೇಜಿಗೆ ಅಂಕಿತ ಹಾಕಿದ್ದೇವೆ. ಇದು ಎರಡೂ ದೇಶಗಳ ವಿವಿಧ ಸಂಸ್ಥೆಗಳ ನಡುವೆ ಸಹಕಾರಕ್ಕೆ ಹಾದಿ ಮಾಡಿಕೊಡುತ್ತದೆ.
ಭಾರತ ತನ್ನ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಉದ್ದಿಮೆಗಳಿಗೆ ಮುಕ್ತಗೊಳಿಸಿದೆ; ಇದು ದೊಡ್ಡ ಸುಧಾರಣೆಯಾಗಿದೆ. ಇದು ಸಾಮರ್ಥ್ಯ, ನಾವಿನ್ಯತೆ ಮತ್ತು ಕೌಶಲ ಉತ್ತೇಜಿಸುತ್ತದೆ.
ಭೂತಾನ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರಕ್ರಿಯೆ ಇಸ್ರೋದಲ್ಲಿ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂಬುದು ನನಗೆ ಸಂತಸದ ವಿಷಯವಾಗಿದೆ.
ಇದಕ್ಕಾಗಿ ಭೂತಾನ್ ನ ನಾಲ್ವರು ಭರವಸೆಯ ಯುವ ಬಾಹ್ಯಾಕಾಶ ಎಂಜಿನಿಯರ್ ಗಳು ಡಿಸೆಂಬರ್ ನಲ್ಲಿ ಇಸ್ರೋಗೆ ಭೇಟಿ ನೀಡಲಿದ್ದಾರೆ. ನಾಲ್ಕು ಯುವಕರಿಗೆ ನಾನು ಶುಭಾಶಯಗಳನ್ನು ತಿಳಿಸುತ್ತೇನೆ. ಭೂತಾನ್ ನ ಘನತೆವೆತ್ತ ದೊರೆ ತಮ್ಮ ದೇಶದ ಅಭಿವೃದ್ಧಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಬೇಕೆಂಬ ಆಳವಾದ ಬಯಕೆಯನ್ನು ಹೊಂದಿದ್ದಾರೆ ಮತ್ತು ಅವರು ಅದನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಅವರಿಗೆ ತನ್ನದೇ ಆದ ದೃಷ್ಟಿಕೋನವೂ ಇದೆ ಎಂಬುದು ನನಗೆ ತಿಳಿದಿದೆ.
ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಭಾರತ ಯಾವಾಗಲೂ ತನ್ನ ಅನುಭವ ಮತ್ತು ಸೌಲಭ್ಯಗಳನ್ನು ಹಂಚಿಕೊಳ್ಳಲು ಸಿದ್ಧವಾಗಿರುತ್ತದೆ. ಅಂತೆಯೇ, ಭೂತಾನ್ ನಲ್ಲಿ ಐಸಿಟಿ-ಶಕ್ತಗೊಂಡ ಜ್ಞಾನ ಆಧಾರಿತ ಸಮಾಜವನ್ನು ನಿರ್ಮಿಸುವ ಉದ್ದೇಶವನ್ನೂ ನಾವು ಬೆಂಬಲಿಸುತ್ತೇವೆ. ಭೂತಾನ್ ಗೆ ಮೂರನೇ ಅಂತಾರಾಷ್ಟ್ರೀಯ ಇಂಟರ್ನೆಟ್ ಗೇಟ್ ವೇ ಒದಗಿಸುವ ಬಿಎಸ್.ಎನ್.ಎಲ್ ಜೊತೆಗಿನ ಒಪ್ಪಂದವನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
ಘನತೆವೆತ್ತರೆ, ಸ್ನೇಹಿತರೇ,
ನಾವು ವೈಯಕ್ತಿಕವಾಗಿ ಭೇಟಿ ಮಾಡಿ ಈ ಸಂದರ್ಭವನ್ನು ಸಂಭ್ರಮಿಸುವುದು ಉತ್ತಮವಾಗಿರುತ್ತಿತ್ತು. ಆದರೆ, ಕೊರೊನಾದಿಂದ ಇದು ಸಾಧ್ಯವಾಗಲಿಲ್ಲ.
ಆದರೆ, ಮತ್ತೊಂದೆಡೆ, ನಾವು ಈ ತಂತ್ರಜ್ಞಾನ ಕ್ಷೇತ್ರದ ಆಚರಣೆಯನ್ನು ತಂತ್ರಜ್ಞಾನದ ನೆರವಿನಿಂದಲೇ ಮಾಡುತ್ತಿರುವುದಕ್ಕೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.
ಕೋವಿಡ್ ಬಿಕ್ಕಟ್ಟನ್ನು ಎದುರಿಸುವಲ್ಲಿ ಭೂತಾನ್ ಜನರು ಮತ್ತು ಸರ್ಕಾರ ತೋರಿಸಿದ ತಾಳ್ಮೆ ಮತ್ತು ಶಿಸ್ತನ್ನು ನಾನು ಶ್ಲಾಘಿಸುತ್ತೇನೆ. ನಾನು, ಭಾರತದ 130 ಕೋಟಿ ಜನರ ಪರವಾಗಿ, ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯ ಮತ್ತು ಯಶಸ್ಸನ್ನು ಕೋರುತ್ತೇನೆ.
ಈ ಸಂಕಷ್ಟದ ಸಮಯದಲ್ಲಿ ನಾವು ಭೂತಾನ್ ಜೊತೆಗೆ ನಿಲ್ಲುತ್ತೇವೆ ಎಂಬ ಭರವಸೆ ನೀಡುತ್ತೇನೆ ಮತ್ತು ನಿಮ್ಮ ಅಗತ್ಯಗಳು ನಮಗೆ ಸದಾ ಉನ್ನತ ಆದ್ಯತೆಯಾಗಿದೆ.
ಮತ್ತೊಮ್ಮೆ, ಎಲ್ಲರಿಗೂ ತುಂಬಾ ಧನ್ಯವಾದಗಳು! ರಾಜ ಮನೆತನಕ್ಕೆ ಉತ್ತಮ ಆರೋಗ್ಯದ ಶುಭ ಕೋರುತ್ತೇನೆ.
ತಾಶಿ ಡೆಲೆಕ್!
ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
Boosting ties with Bhutan. https://t.co/LvRhjJNvoE
— Narendra Modi (@narendramodi) November 20, 2020