Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭೂತಾನ್‌ನ ದೊರೆ ಮತ್ತು ರಾಣಿಯನ್ನು ಬರಮಾಡಿಕೊಂಡ ಪ್ರಧಾನಮಂತ್ರಿ

ಭೂತಾನ್‌ನ ದೊರೆ ಮತ್ತು ರಾಣಿಯನ್ನು ಬರಮಾಡಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಭೂತಾನ್ ದೊರೆ ಘನತೆವೆತ್ತ ಜಿಗ್ಮೆ ಖೇಸರ್ ನಮ್ಗಯೆಲ್ ವಾಂಗ್ ಚುಕ್ ಮತ್ತು ಭೂತಾನ್ ರಾಣಿ ಘನತೆವೆತ್ತ ಜೆಟ್ಸುನ್ ಪೆಮಾ ವಾಂಗ್ ಚುಕ್ ಅವರನ್ನು ಬರಮಾಡಿಕೊಂಡರು. ಪ್ರಧಾನಮಂತ್ರಿಯವರು ಘನತೆವೆತ್ತರಿಗೆ ಶುಭಾಶಯಗಳನ್ನು ತಿಳಿಸಿದರು ಮತ್ತು 2024ರ ಮಾರ್ಚ್ ನಲ್ಲಿ ತಾವು ಭೂತಾನ್‌ಗೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ ಸರ್ಕಾರ ಮತ್ತು ಅಲ್ಲಿನ ಜನರು ನೀಡಿದ ಅಸಾಧಾರಣ ಆತ್ಮೀಯ ಆತಿಥ್ಯವನ್ನು ಪ್ರೀತಿಯಿಂದ ಸ್ಮರಿಸಿದರು.

ಅಭಿವೃದ್ಧಿ ಸಹಕಾರ, ಶುದ್ಧ ಇಂಧನ ಪಾಲುದಾರಿಕೆ, ವ್ಯಾಪಾರ ಮತ್ತು ಹೂಡಿಕೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಸಹಕಾರ ಹಾಗೂ ಜನರ ನಡುವಿನ ಬಾಂಧವ್ಯ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಅತ್ಯುತ್ತಮ ಸ್ಥಿತಿಯ ಬಗ್ಗೆ ಪ್ರಧಾನಮಂತ್ರಿ ಮತ್ತು ಘನತೆವೆತ್ತ ದೊರೆ ತೃಪ್ತಿ ವ್ಯಕ್ತಪಡಿಸಿದರು. ಎಲ್ಲಾ ಕ್ಷೇತ್ರಗಳಲ್ಲಿ ಈ ಅನುಕರಣೀಯ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಉಭಯ ದೇಶಗಳ ನಡುವಿನ ಆರ್ಥಿಕ ಸಂಪರ್ಕವನ್ನು ವೃದ್ಧಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಿದರು. ಭೂತಾನ್‌ನ ಅಭಿವೃದ್ಧಿಗೆ ವೇಗ ನೀಡಲು ಮತ್ತು ಭಾರತದ ಪಕ್ಕದ ಗಡಿ ಪ್ರದೇಶಗಳೊಂದಿಗೆ ಸಂಪರ್ಕವನ್ನು ಬಲಪಡಿಸಲು ಘನತೆವೆತ್ತ ದೊರೆಯವರು ಮುನ್ನಡೆಸಿದ ದೂರದೃಷ್ಟಿಯ ಯೋಜನೆಯಾದ ʻಗೆಲೆಫು ಮೈಂಡ್‌ಫುಲ್‌ನೆಸ್‌ ಸಿಟಿʼ ಉಪಕ್ರಮದ ಬಗ್ಗೆ ವಿಚಾರಗಳನ್ನು ವಿನಿಮಯ ಮಾಡಿಕೊಂಡರು.

ಭೂತಾನ್‌ನ ಆರ್ಥಿಕ ಅಭಿವೃದ್ಧಿಗೆ ಭಾರತದ ಬಲವಾದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, 13ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಭೂತಾನ್‌ಗೆ ಭಾರತದ ಅಭಿವೃದ್ಧಿ ಬೆಂಬಲವನ್ನು ದ್ವಿಗುಣಗೊಳಿಸಿರುವುದನ್ನು ಒತ್ತಿ ಹೇಳಿದರು. ಘನತೆವೆತ್ತ ದೊರೆಗಳು ಭೂತಾನ್‌ನ ಸಂತೋಷ, ಪ್ರಗತಿ ಮತ್ತು ಸಮೃದ್ಧಿಯ ಆಕಾಂಕ್ಷೆಗಳಿಗೆ ದೃಢವಾದ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಮತ್ತು ಭಾರತದ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ಸಭೆಯ ನಂತರ ಪ್ರಧಾನಮಂತ್ರಿಯವರು ಘನತೆವೆತ್ತ ದೊರೆ ಮತ್ತು ಘನತೆವೆತ್ತ ರಾಣಿ ಅವರ ಗೌರವಾರ್ಥ ಭೋಜನಕೂಟ ಏರ್ಪಡಿಸಿದ್ದರು.

ಭಾರತ ಮತ್ತು ಭೂತಾನ್ ನಡುವೆ ನಿಯಮಿತವಾಗಿ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯವನ್ನು ಈ ಭೇಟಿಯು ಒತ್ತಿಹೇಳಿದೆ. ಇದು ಪರಸ್ಪರ ನಂಬಿಕೆ, ಸಹಕಾರ ಮತ್ತು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಆಧಾರವಾಗಿರುವ ಆಳವಾದ ತಿಳುವಳಿಕೆಯನ್ನು ಸೂಚಿಸುತ್ತದೆ.

 

*****