Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ-ಯುಎಇ ವರ್ಚುವಲ್ ಶೃಂಗಸಭೆ

ಭಾರತ-ಯುಎಇ ವರ್ಚುವಲ್ ಶೃಂಗಸಭೆ


ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಬುಧಾಬಿಯ ಯುವರಾಜ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಇಂದು ವರ್ಚುವಲ್ ಶೃಂಗಸಭೆ ನಡೆಸಿದರು. ಎಲ್ಲಾ ವಲಯಗಳಲ್ಲಿ ದ್ವಿಪಕ್ಷೀಯ ಸಂಬಂಧಗಳ ನಿರಂತರ ಬೆಳವಣಿಗೆಯ ಬಗ್ಗೆ ಉಭಯ ನಾಯಕರು ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದರು.

ಗೌರವಾನ್ವಿತ ಪ್ರಧಾನಮಂತ್ರಿ ಮತ್ತು ಘನತೆವೆತ್ತ ಯುವರಾಜರು “ಭಾರತ ಮತ್ತು ಯುಎಇ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯ ಮುಂದುವರಿಕೆ: ಹೊಸ ಸೀಮಾ ರೇಖೆಗಳು, ಹೊಸ ಮೈಲಿಗಲ್ಲು” ಎಂಬ ಜಂಟಿ ಧ್ಯೇಯ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಈ ಹೇಳಿಕೆಯು ಭಾರತ ಮತ್ತು ಯುಎಇ ನಡುವೆ ಭವಿಷ್ಯ ಆಧಾರಿತ ಪಾಲುದಾರಿಕೆಗೆ ಮಾರ್ಗಸೂಚಿಯನ್ನು ಒದಗಿಸಲಿದೆ ಮತ್ತು ಗಮನ ಕೇಂದ್ರೀಕರಿಸಬೇಕಾದ ಕ್ಷೇತ್ರಗಳು ಮತ್ತು ಫಲಿತಾಂಶಗಳನ್ನು ಗುರುತಿಸುತ್ತದೆ. ಆರ್ಥಿಕತೆ, ಇಂಧನ, ಹವಾಮಾನ ಉಪಕ್ರಮ, ಉದಯೋನ್ಮುಖ ತಂತ್ರಜ್ಞಾನಗಳು, ಕೌಶಲ್ಯಗಳು ಮತ್ತು ಶಿಕ್ಷಣ, ಆಹಾರ ಭದ್ರತೆ, ಆರೋಗ್ಯ ಸೇವೆ, ರಕ್ಷಣೆ ಮತ್ತು ಭದ್ರತೆ ಸೇರಿದಂತೆ ವೈವಿಧ್ಯಮಯ ವಲಯಗಳಲ್ಲಿ ಹೊಸ ವ್ಯಾಪಾರ, ಹೂಡಿಕೆ ಮತ್ತು ಆವಿಷ್ಕಾರದವನ್ನು ಉತ್ತೇಜಿಸುವ ಗುರಿಯನ್ನು ಉಭಯ ದೇಶಗಳು ಪರಸ್ಪರ ಹಂಚಿಕೊಂಡಿವೆ.

ಉಭಯ ನಾಯಕರ ವರ್ಚ್ಯುಯಲ್‌ ಉಪಸ್ಥಿತಿಯಲ್ಲಿ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಶ್‌ ಗೋಯಲ್ ಮತ್ತು ಯುಎಇ ಆರ್ಥಿಕತೆ ಸಚಿವ ಘನತೆವೆತ್ತ ಅಬ್ದುಲ್ಲಾ ಬಿನ್ ತೌಕ್ ಅಲ್ ಮರಿ ಅವರು ʻಭಾರತ-ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದʼಕ್ಕೆ (ಸಿಇಪಿಎ) ಸಹಿ ಹಾಕಿದ್ದು ಈ ಒಪ್ಪಂದದ ಪ್ರತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದು ವರ್ಚುವಲ್ ಶೃಂಗಸಭೆಯ ಪ್ರಮುಖ ಅಂಶವಾಗಿದೆ. ಈ ಒಪ್ಪಂದವು ಭಾರತ ಮತ್ತು ಯುಎಇ ವ್ಯವಹಾರಗಳಿಗೆ ಗಮನಾರ್ಹ ಪ್ರಯೋಜನಗಳನ್ನು ಒದಗಿಸಲಿದ್ದು,  ಮಾರುಕಟ್ಟೆ ಪ್ರವೇಶ ಮತ್ತು ಅಗ್ಗದ ಸುಂಕಗಳು ಇದರಲ್ಲಿ ಸೇರಿವೆ. ಈ ʻಸಿಇಪಿಎʼ ಒಪ್ಪಂದವು ಮುಂದಿನ 5 ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು  ಪ್ರಸ್ತುತ ಇರುವ 60 ಶತಕೋಟಿ ಅಮೆರಿಕನ್ ಡಾಲರ್‌ನಿಂದ 100 ಶತಕೋಟಿ ಡಾಲರ್‌ಗೆ ವೃದ್ಧಿಸಲು ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಮತ್ತು ʻಯುಎಇʼಯ 50ನೇ ಸಂಸ್ಥಾಪನಾ ವರ್ಷದ ಸಂದರ್ಭದಲ್ಲಿ ಉಭಯ ನಾಯಕರು ʻಜಂಟಿ ಸ್ಮರಣಾರ್ಥ ಅಂಚೆ ಚೀಟಿʼ ಬಿಡುಗಡೆ ಮಾಡಿದರು. ಭಾರತ ಮತ್ತು ಯುಎಇ ಘಟಕಗಳ ನಡುವೆ ಸಹಿ ಹಾಕಲಾದ ಎರಡು ತಿಳಿವಳಿಕೆ ಒಪ್ಪಂದಗಳನ್ನು ಸಹ ಶೃಂಗಸಭೆಯಲ್ಲಿ ಘೋಷಿಸಲಾಯಿತು. ಆಹಾರ ಭದ್ರತಾ ಕಾರಿಡಾರ್ ಉಪಕ್ರಮ ಕುರಿತಾಗಿ ʻಎಪಿಇಡಿಎʼ ಮತ್ತು ʻಡಿಪಿ ವರ್ಲ್ಡ್ʼ ಮತ್ತು ʻಅಲ್ ದಹ್ರಾʼ ನಡುವಿನ ಒಪ್ಪಂದ ಹಾಗೂ  ಹಣಕಾಸು ಯೋಜನೆಗಳು ಮತ್ತು ಸೇವೆಗಳ ಸಹಕಾರಕ್ಕಾಗಿ ಭಾರತದ ʻಗಿಫ್ಟ್‌ ಸಿಟಿʼ, ʻಅಬುಧಾಬಿ ಗ್ಲೋಬಲ್‌ ಮಾರ್ಕೆಟ್‌ʼ ನಡುವಿನ ಒಪ್ಪಂದವು ಇವುಗಳಲ್ಲಿ ಸೇರಿವೆ. ಹವಾಮಾನ ಉಪಕ್ರಮದಲ್ಲಿ ಸಹಕಾರ ಮತ್ತು ಶಿಕ್ಷಣ ಕುರಿತಾದ ಇತರೆ ಎರಡು ಒಡಂಬಡಿಕೆಗಳಿಗೂ ಉಭಯ ಪಕ್ಷಗಳಿಂದ ಸಮ್ಮತಿ ಸೂಚಿಸಲಾಯಿತು.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತೀಯ ಸಮುದಾಯದ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ಅಬುಧಾಬಿಯ ಘನತೆವೆತ್ತ ಯುವರಾಜರಿಗೆ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು. ಭಾರತಕ್ಕೆ ಶೀಘ್ರ ಭೇಟಿ ನೀಡುವಂತೆಯೂ ಅವರು ಆಹ್ವಾನಿಸಿದರು.

***