Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ – ಮಾರಿಷಸ್ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ

ಭಾರತ – ಮಾರಿಷಸ್ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ


ಗೌರವಾನ್ವಿತ ಪ್ರಧಾನಮಂತ್ರಿ ಡಾ. ನವೀನಚಂದ್ರ ರಾಮಗೂಲಮ್‌ ಅವರೇ,

ಉಭಯ ದೇಶಗಳ ಪ್ರತಿನಿಧಿಗಳೇ,

ಮಾಧ್ಯಮ ಮಿತ್ರರೇ,

ನಮಸ್ಕಾರ, ಶುಭೋದಯ!

140 ಕೋಟಿ ಭಾರತೀಯರ ಪರವಾಗಿ, ಮಾರಿಷಸ್ ಜನತೆಗೆ ಅವರ ರಾಷ್ಟ್ರೀಯ ದಿನದಂದು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಮತ್ತೊಮ್ಮೆ ಮಾರಿಷಸ್‌ ಗೆ ಭೇಟಿ ನೀಡುತ್ತಿರುವುದು ನನಗೆ ಅತ್ಯಂತ ಗೌರವದ ವಿಷಯವಾಗಿದೆ. ಈ ಗೌರವಕ್ಕಾಗಿ ಪ್ರಧಾನಿ ನವೀನಚಂದ್ರ ರಾಮಗೂಲಮ್ ಮತ್ತು ಮಾರಿಷಸ್ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಭಾರತ ಮತ್ತು ಮಾರಿಷಸ್ ನಡುವಿನ ಸಂಬಂಧಗಳು ಹಿಂದೂ ಮಹಾಸಾಗರದಿಂದ ಮಾತ್ರವಲ್ಲದೆ, ನಮ್ಮ ಹಂಚಿಕೆಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಮೌಲ್ಯಗಳಿಂದ ಕೂಡಿವೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಪ್ರಯಾಣದಲ್ಲಿ ನಾವು ಪಾಲುದಾರರಾಗಿದ್ದೇವೆ. ಅದು ನೈಸರ್ಗಿಕ ವಿಕೋಪವಾಗಿರಬಹುದು ಅಥವಾ ಕೋವಿಡ್ ಸಾಂಕ್ರಾಮಿಕವಾಗಿರಬಹುದು, ನಾವು ಯಾವಾಗಲೂ ಪರಸ್ಪರ ಬೆಂಬಲಿಸಿದ್ದೇವೆ. ಭದ್ರತೆ ಅಥವಾ ಶಿಕ್ಷಣ, ಆರೋಗ್ಯ ರಕ್ಷಣೆ ಅಥವಾ ಬಾಹ್ಯಾಕಾಶ ಇರಲಿ, ಪ್ರತಿಯೊಂದು ವಲಯದಲ್ಲೂ ನಾವು ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತೇವೆ. ಕಳೆದ ಹತ್ತು ವರ್ಷಗಳಲ್ಲಿ ನಾವು ನಮ್ಮ ಸಂಬಂಧಗಳಿಗೆ ಹಲವು ಹೊಸ ಆಯಾಮಗಳನ್ನು ಸೇರಿಸಿದ್ದೇವೆ. ಅಭಿವೃದ್ಧಿ ಸಹಕಾರ ಮತ್ತು ಸಾಮರ್ಥ್ಯ ವೃದ್ಧಿಯ ಕ್ಷೇತ್ರದಲ್ಲಿ ನಾವು ಹೊಸ ದಾಖಲೆಗಳನ್ನು ಸ್ಥಾಪಿಸಿದ್ದೇವೆ.

ಮಾರಿಷಸ್‌ ಗೆ ವೇಗ ನೀಡಲು ಮೆಟ್ರೋ ಎಕ್ಸ್‌ಪ್ರೆಸ್,

ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಕಟ್ಟಡ,

ಆರಾಮದಾಯಕ ಜೀವನಕ್ಕಾಗಿ ಸಾಮಾಜಿಕ ವಸತಿ,

ಉತ್ತಮ ಆರೋಗ್ಯಕ್ಕಾಗಿ ಇ ಎನ್‌ ಟಿ ಆಸ್ಪತ್ರೆಗಳು,

ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಯುಪಿಐ ಮತ್ತು ರುಪೇ ಕಾರ್ಡ್‌ಗಳು;

ಕೈಗೆಟಕುವ ಮತ್ತು ಗುಣಮಟ್ಟದ ಔಷಧಿಗಳಿಗಾಗಿ ಜನೌಷಧಿ ಕೇಂದ್ರದಂತಹ ಹಲವಾರು ಜನ-ಕೇಂದ್ರಿತ ಉಪಕ್ರಮಗಳನ್ನು ನಾವು ಕಾಲಮಿತಿಯಲ್ಲಿ ಪೂರ್ಣಗೊಳಿಸಿದ್ದೇವೆ.

ಚಿಡೋ ಚಂಡಮಾರುತದಿಂದ ಸಂತ್ರಸ್ತರಾದವರಿಗೆ ಮಾನವೀಯ ಸಹಾಯವನ್ನು ವೇಗವಾಗಿ ತಲುಪಿಸಲು ಅಗಾಲೆಗಾದ ಉತ್ತಮ ಸಂಪರ್ಕವು ಸಹಾಯ ಮಾಡಿತು. ಇದರಿಂದಾಗಿ ಹಲವಾರು ಜನರ ಪ್ರಾಣ ಉಳಿಸಲು ಸಾಧ್ಯವಾಯಿತು. ನಾವು ಈಗಷ್ಟೇ ಕ್ಯಾಪ್ ಮಾಲ್ಹ್ಯೂರೆಕ್ಸ್ ಏರಿಯಾ ಆರೋಗ್ಯ ಕೇಂದ್ರ ಹಾಗೂ ಇಪ್ಪತ್ತು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದೇವೆ. ಸ್ವಲ್ಪ ಸಮಯದ ನಂತರ ಪ್ರಧಾನ ಮಂತ್ರಿಯವರ ಜೊತೆ ಸೇರಿ, “ಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ಸೇವೆ ಮತ್ತು ನಾವೀನ್ಯತೆ ಸಂಸ್ಥೆ”ಯನ್ನು ಉದ್ಘಾಟಿಸುವ ಮತ್ತು ಅದನ್ನು ಮಾರಿಷಸ್‌ ಗೆ ಹಸ್ತಾಂತರಿಸುವ ಗೌರವ ನನಗೂ ಸಿಗಲಿದೆ.

ಸ್ನೇಹಿತರೇ,

ಇಂದು ಪ್ರಧಾನ ಮಂತ್ರಿ ನವೀನಚಂದ್ರ ರಾಮಗೂಲಮ್ ಮತ್ತು ನಾನು ಭಾರತ-ಮಾರಿಷಸ್ ಪಾಲುದಾರಿಕೆಯನ್ನು ‘ವರ್ಧಿತ ಕಾರ್ಯತಂತ್ರದ ಪಾಲುದಾರಿಕೆ’ ಮಟ್ಟಕ್ಕೆ ಏರಿಸಲು ನಿರ್ಧರಿಸಿದ್ದೇವೆ. ಮಾರಿಷಸ್‌ ನಲ್ಲಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಭಾರತ ಸಹಕಾರ ನೀಡಲಿದೆ. ಇದು ಪ್ರಜಾಪ್ರಭುತ್ವದ ತಾಯಿಯಿಂದ ಮಾರಿಷಸ್‌ ಗೆ ಉಡುಗೊರೆಯಾಗಲಿದೆ. ಮಾರಿಷಸ್‌ ನಲ್ಲಿ 100 ಕಿಮೀ ಉದ್ದದ ನೀರಿನ ಪೈಪ್‌ಲೈನ್ ಅನ್ನು ಆಧುನೀಕರಿಸಲು ಪ್ರಯತ್ನಿಸಲಾಗುವುದು.

ಸಮುದಾಯ ಅಭಿವೃದ್ಧಿ ಯೋಜನೆಗಳ ಎರಡನೇ ಹಂತದಲ್ಲಿ 500 ಮಿಲಿಯನ್ ಮಾರಿಷಸ್ ರೂಪಾಯಿ ಮೌಲ್ಯದ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಮಾರಿಷಸ್‌ ನ 500 ನಾಗರಿಕ ಸೇವಕರಿಗೆ ಭಾರತದಲ್ಲಿ ತರಬೇತಿ ನೀಡಲಾಗುವುದು. ಹೆಚ್ಚುವರಿಯಾಗಿ, ಸ್ಥಳೀಯ ಕರೆನ್ಸಿಯಲ್ಲಿ ಪರಸ್ಪರ ವ್ಯಾಪಾರವನ್ನು ಇತ್ಯರ್ಥಪಡಿಸುವ ಒಪ್ಪಂದಕ್ಕೆ ನಾವು ಬಂದಿದ್ದೇವೆ.

ಸ್ನೇಹಿತರೇ,

ರಕ್ಷಣಾ ಸಹಕಾರ ಮತ್ತು ಕಡಲ ಭದ್ರತೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಆಧಾರ ಸ್ತಂಭಗಳಾಗಿವೆ ಎಂಬುದನ್ನು ಪ್ರಧಾನಮಂತ್ರಿಯವರು ಮತ್ತು ನಾನು ಒಪ್ಪುತ್ತೇವೆ. ಮುಕ್ತ, ಮತ್ತು ಸುರಕ್ಷಿತ ಹಿಂದೂ ಮಹಾಸಾಗರವು ನಮ್ಮ ಆದ್ಯತೆಯಾಗಿದೆ. ಮಾರಿಷಸ್‌ ನ ವಿಶೇಷ ಆರ್ಥಿಕ ವಲಯದ ಭದ್ರತೆಗೆ ಸಂಪೂರ್ಣ ಬೆಂಬಲವನ್ನು ನೀಡಲು ನಾವು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ, ಕರಾವಳಿ ಕಾವಲುಪಡೆಯ ಅಗತ್ಯತೆಗಳನ್ನು ಪೂರೈಸಲು ನಾವು ಸಾಧ್ಯವಿರುವ ಎಲ್ಲ ನೆರವು ನೀಡುತ್ತೇವೆ.

ಮಾರಿಷಸ್‌ ನಲ್ಲಿ ಪೊಲೀಸ್ ಅಕಾಡೆಮಿ ಮತ್ತು ರಾಷ್ಟ್ರೀಯ ಕಡಲ ಮಾಹಿತಿ ಹಂಚಿಕೆ ಕೇಂದ್ರವನ್ನು ಸ್ಥಾಪಿಸುವಲ್ಲಿ ಭಾರತವು ಸಹಾಯ ಮಾಡುತ್ತದೆ. ವೈಟ್ ಶಿಪ್ಪಿಂಗ್, ಬ್ಲೂ ಎಕಾನಮಿ ಮತ್ತು ಹೈಡ್ರೋಗ್ರಫಿಯಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಲಾಗುವುದು.

ಚಾಗೋಸ್‌ ಗೆ ಸಂಬಂಧಿಸಿದಂತೆ ನಾವು ಮಾರಿಷಸ್‌ ನ ಸಾರ್ವಭೌಮತ್ವವನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ. ಕೊಲಂಬೊ ಭದ್ರತಾ ಸಮ್ಮೇಳನ, ಹಿಂದೂ ಮಹಾಸಾಗರ ರಿಮ್ ಅಸೋಸಿಯೇಷನ್ ​​ಮತ್ತು ಹಿಂದೂ ಮಹಾಸಾಗರ ಸಮ್ಮೇಳನದಂತಹ ವೇದಿಕೆಗಳ ಮೂಲಕ ನಾವು ನಮ್ಮ ಸಹಕಾರವನ್ನು ವಿಸ್ತರಿಸುತ್ತೇವೆ.

ಸ್ನೇಹಿತರೇ,

ಜನರ ನಡುವಿನ ಸಂಬಂಧಗಳು ನಮ್ಮ ಪಾಲುದಾರಿಕೆಗೆ ಬಲವಾದ ಅಡಿಪಾಯವಾಗಿವೆ. ಡಿಜಿಟಲ್ ಆರೋಗ್ಯ, ಆಯುಷ್ ಕೇಂದ್ರ, ಶಾಲಾ ಶಿಕ್ಷಣ, ಕೌಶಲ್ಯ ಮತ್ತು ಚಲನಶೀಲತೆಯಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲಾಗುವುದು. ಮನುಕುಲದ ಅಭಿವೃದ್ಧಿಗಾಗಿ ಎಐ ಮತ್ತು ಡಿಪಿಐ ಅಂದರೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಳಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ,

ಮಾರಿಷಸ್ ಜನರಿಗೆ, ಭಾರತದಲ್ಲಿ ಚಾರ್ ಧಾಮ್ ಯಾತ್ರೆ ಮತ್ತು ರಾಮಾಯಣ ಟ್ರಯಲ್‌ ಗೆ ಸೌಲಭ್ಯವನ್ನು ಒದಗಿಸಲಾಗುವುದು. ಗಿರ್ಮಿಟಿಯಾ ಪರಂಪರೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಒತ್ತು ನೀಡಲಾಗುವುದು.

ಸ್ನೇಹಿತರೇ,

ಜಾಗತಿಕ ದಕ್ಷಿಣವಾಗಿರಲಿ, ಹಿಂದೂ ಮಹಾಸಾಗರವಾಗಿರಲಿ ಅಥವಾ ಆಫ್ರಿಕನ್ ಖಂಡವಾಗಿರಲಿ, ಮಾರಿಷಸ್ ನಮ್ಮ ಪ್ರಮುಖ ಪಾಲುದಾರನಾಗಿದೆ. ಹತ್ತು ವರ್ಷಗಳ ಹಿಂದೆ, “ಪ್ರದೇಶದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ” ಎಂಬ ದೃಷ್ಟಿಕೋನದ ವಿಷನ್ SAGAR ಗೆ ಅಡಿಪಾಯವನ್ನು ಮಾರಿಷಸ್‌ನಲ್ಲಿ ಹಾಕಲಾಯಿತು. ಈ ಪ್ರದೇಶದ ಸ್ಥಿರತೆ ಮತ್ತು ಸಮೃದ್ಧಿಗಾಗಿ ನಾವು SAGAR ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದ್ದೇವೆ.

ಇಂದು, ಇದರ ಆಧಾರದ ಮೇಲೆ, ಜಾಗತಿಕ ದಕ್ಷಿಣಕ್ಕಾಗಿ ನಮ್ಮ ದೃಷ್ಟಿಕೋನವು – SAGAR ಅನ್ನು ಮೀರಿ – MAHASAGAR ಅಂದರೆ “ಪ್ರದೇಶಗಳಾದ್ಯಂತ ಭದ್ರತೆ ಮತ್ತು ಬೆಳವಣಿಗೆಗೆ ಪರಸ್ಪರ ಮತ್ತು ಸಮಗ್ರ ಪ್ರಗತಿ” ಆಗಿರುತ್ತದೆ ಎಂದು ನಾನು ಹೇಳಲು ಬಯಸುತ್ತೇನೆ. ಇದು ಅಭಿವೃದ್ಧಿಗಾಗಿ ವ್ಯಾಪಾರ, ಸುಸ್ಥಿರ ಬೆಳವಣಿಗೆಗಾಗಿ ಸಾಮರ್ಥ್ಯ ವೃದ್ಧಿ ಮತ್ತು ಹಂಚಿಕೆಯ ಭವಿಷ್ಯಕ್ಕಾಗಿ ಪರಸ್ಪರ ಭದ್ರತೆಯ ವಿಚಾರಗಳನ್ನು ಒಳಗೊಂಡಿರುತ್ತದೆ. ಇದರ ಅಡಿಯಲ್ಲಿ, ನಾವು ತಂತ್ರಜ್ಞಾನ ಹಂಚಿಕೆ, ರಿಯಾಯಿತಿ ಸಾಲ ಮತ್ತು ಅನುದಾನಗಳ ಮೂಲಕ ಸಹಕಾರವನ್ನು ವಿಸ್ತರಿಸುತ್ತೇವೆ.

ಗೌರವಾನ್ವಿತರೇ,

ಮತ್ತೊಮ್ಮೆ, ನನಗೆ ಇಲ್ಲಿ ದೊರೆತ ಆತ್ಮೀಯ ಸ್ವಾಗತಕ್ಕಾಗಿ ನಿಮಗೆ ಮತ್ತು ಮಾರಿಷಸ್ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಭಾರತಕ್ಕೆ ಭೇಟಿ ನೀಡಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ನಿಮ್ಮನ್ನು ಭಾರತಕ್ಕೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ

ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು.

 

ಸೂಚನೆಇದು ಪ್ರಧಾನಮಂತ್ರಿಯವರ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಯು ಹಿಂದಿಯಲ್ಲಿತ್ತು.

 

*****