Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ – ಮಧ್ಯ ಏಷ್ಯಾ ಸಮಾವೇಶದ ಚೊಚ್ಚಲ ಸಭೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಮಧ್ಯ ಏಷ್ಯಾ ಶೃಂಗಸಭೆಯ ಮೊದಲ ವರ್ಚುಯಲ್ ಸಭೆಯನ್ನು ಜನವರಿ 27ರಂದು ಆಯೋಜಿಸಲಿದ್ದಾರೆ. ಕಝಾಕಿಸ್ತಾನ್, ಕಿರ್ಗಿಜ್ ಗಣರಾಜ್ಯ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷರು ಈ ಸಮಾವೇಶದಲ್ಲಿ  ಭಾಗವಹಿಸಲಿದ್ದಾರೆ. ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವೆ ನಾಯಕರ ಮಟ್ಟದಲ್ಲಿ ನಡೆಯುತ್ತಿರುವ ಚೊಚ್ಚಲ ಸಮಾವೇಶ ಇದಾಗಿದೆ.

ಭಾರತ – ಮಧ್ಯ ಏಷ್ಯಾ ನಡುವಿನ ಚೊಚ್ಚಲ ಸಮಾವೇಶವು ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ಭಾರತದ ಹೆಚ್ಚುತ್ತಿರುವ ಸ್ನೇಹ ಸಂಬಂಧ ಮತ್ತು ತೊಡಗಿಸಿಕೊಳ್ಳುವಿಕೆಯ ಪ್ರತಿಬಿಂಬವಾಗಿದೆ, ಜತೆಗೆ ನೆರೆಹೊರೆಯ ರಾಷ್ಟ್ರಗಳ ಜತೆಗಿನ ವಿಸ್ತೃತ ಸ್ನೇಹ ಸಂಬಂಧದ ಭಾಗವಾಗಿದೆ.  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015ರಲ್ಲಿ ಎಲ್ಲಾ ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಐತಿಹಾಸಿಕ ಭೇಟಿ ನೀಡಿದ್ದರು. ತರುವಾಯ, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಉನ್ನತ ಮಟ್ಟದ ಮಾತುಕತೆಗಳು ನಡೆದಿವೆ.

2021 ಡಿಸೆಂಬರ್ 18-20ರಂದು ನವದೆಹಲಿಯಲ್ಲಿ ವಿದೇಶಾಂಗ ಸಚಿವರ ಮಟ್ಟದ ಭಾರತ-ಮಧ್ಯ ಏಷ್ಯಾ ಸಂವಾದದ 3ನೇ ಸಭೆ ನಡೆಯಿತು. ಇದು ಭಾರತ-ಮಧ್ಯ ಏಷ್ಯಾ ಸ್ನೇಹ ಸಂಬಂಧ ಬಲವರ್ಧನೆಗೆ ಉತ್ತೇಜನ ನೀಡಿತು. 2021  ನವೆಂಬರ್ 10ರಂದು ನವದೆಹಲಿಯಲ್ಲಿ ನಡೆದ ಅಫ್ಘಾನಿಸ್ತಾನದ ಪ್ರಾದೇಶಿಕ ಭದ್ರತಾ ಸಂವಾದ ಸಭೆಯಲ್ಲಿ ಮಧ್ಯ ಏಷ್ಯಾ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಮಂಡಳಿಗಳ ಕಾರ್ಯದರ್ಶಿಗಳ ಭಾಗವಹಿಸಿ, ಅಫ್ಘಾನಿಸ್ತಾನ ಸಮಸ್ಯೆಯ ಪರಿಹಾರಕ್ಕೆ ಸಾಮಾನ್ಯ ಪ್ರಾದೇಶಿಕ ಕಾರ್ಯ ವಿಧಾನ ಅನುಸರಣೆಗೆ ಒತ್ತು ನೀಡಿದ್ದರು.

ಮೊದಲ ಭಾರತ-ಮಧ್ಯ ಏಷ್ಯಾ ಶೃಂಗಸಭೆಯಲ್ಲಿ, ಭಾರತ-ಮಧ್ಯ ಏಷ್ಯಾ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಕ್ರಮಗಳ ಕುರಿತು ನಾಯಕರು ಚರ್ಚಿಸುವ ನಿರೀಕ್ಷೆಯಿದೆ. ಅವರು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಆಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ನಿರೀಕ್ಷೆಯಿದೆ, ವಿಶೇಷವಾಗಿ ವಿಕಸನಗೊಳ್ಳುತ್ತಿರುವ ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಕುರಿತು ಪರಸ್ಪರ ಚರ್ಚೆ ನಡೆಸಲಿದ್ದಾರೆ.

ಈ ಶೃಂಗಸಭೆಯು ಭಾರತ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳ ನಾಯಕರು ಸಮಗ್ರ ಮತ್ತು ನಿರಂತರ ಭಾರತ-ಮಧ್ಯ ಏಷ್ಯಾ ಪಾಲುದಾರಿಕೆಗೆ ನೀಡಿದ ಪ್ರಾಮುಖ್ಯತೆಯ ಸಂಕೇತವಾಗಿದೆ.

***