ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಮತ್ತು ಶ್ರೀಲಂಕಾ ನಡುವೆ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿನ ಸಹಕಾರ ಉತ್ತೇಜನಕ್ಕಾಗಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು) ಬಗ್ಗೆ ವಿವರಣೆ ನೀಡಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ ಕೇಂದ್ರ ಕಾನೂನು ಮತ್ತು ನ್ಯಾಯ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಶ್ರೀ ರವಿ ಶಂಕರ್ ಪ್ರಸಾದ್ 2018ರ ಜನವರಿ 15ರಂದು ಶ್ರೀಲಂಕಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಂಕಿತ ಹಾಕಲಾಗಿತ್ತು.
ಇ- ಆಡಳಿತ, ಎಂ-ಆಡಳಿತ, ಇ-ಸಾರ್ವಜನಿಕ ಸೇವೆಗಳ ವಿತರಣೆ, ಸೈಬರ್ ಭದ್ರತೆ, ತಂತ್ರಾಂಶ ತಂತ್ರಜ್ಞಾನ ಪಾರ್ಕ್, ನವೋದ್ಯಮ ಪರಿಸರ ವ್ಯವಸ್ಥೆ ಇತ್ಯಾದಿಗಳಲ್ಲಿ ಆಪ್ತ ಸಹಕಾರವನ್ನು ಉತ್ತೇಜಿಸುವ ಇಂಗಿತವನ್ನು ಈ ಎಂ.ಓ.ಯು. ಹೊಂದಿದೆ.
ಈ ತಿಳಿವಳಿಕೆ ಒಪ್ಪಂದವನ್ನು ಎರಡೂ ಕಡೆಗಳ ಪ್ರತಿನಿಧಿಗಳನ್ನು ಒಳಗೊಂಡ ಐಟಿ ಮತ್ತು ಇ ಕುರಿತ ಜಂಟಿ ಕಾರ್ಯ ಗುಂಪು ಸ್ಥಾಪಿಸುವ ಮೂಲಕ ಜಾರಿ ಮಾಡಲಾಗುತ್ತದೆ. ಬಿ2ಬಿ ಮತ್ತು ಜಿ2ಜಿ ಎರಡೂ ಸೇರಿದ ಐಸಿಟಿ ಡೊಮೈನ್ ನ ದ್ವಿಪಕ್ಷೀಯ ಸಹಕಾರ ವರ್ಧನೆಯಾಗುತ್ತದೆ.
ಹಿನ್ನೆಲೆ:
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಎಂ.ಇ.ಐ.ಟಿ.ವೈ) ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಸಹಕಾರ ಚೌಕಟ್ಟಿನ ಅಡಿಯಲ್ಲಿ ಮುಂಚೂಣಿಯ ಮತ್ತು ಹೊರಹೊಮ್ಮುತ್ತಿರುವ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವ ಅಧಿಕಾರವನ್ನು ಹೊಂದಿದೆ. ಐಸಿಟಿ ಕ್ಷೇತ್ರದಲ್ಲಿ ಆಪ್ತ ಸಹಕಾರ ಮತ್ತು ಮಾಹಿತಿಯ ವಿನಿಮಯಕ್ಕಾಗಿ ವಿವಿಧ ರಾಷ್ಟ್ರಗಳ ತನ್ನ ಸಹವರ್ತಿ ಸಂಸ್ಥೆಗಳು / ಸಂಘಟನೆಗಳೊಂದಿಗೆ ಎಂ.ಇ.ಐ.ಟಿ.ವೈ. ತಿಳಿವಳಿಕೆ ಒಪ್ಪಂದ / ಒಪ್ಪಂದ ಮಾಡಿಕೊಂಡಿದೆ. ವಿವಿಧ ದೇಶಗಳೊಂದಿಗೆ ಹೆಚ್ಚಿನ ಸಹಕಾರ ವರ್ಧನೆಗಾಗಿ ಅದರಲ್ಲೂ ಭಾರತ ಸರ್ಕಾರ ಕೈಗೊಂಡಿರುವ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಇತ್ಯಾದಿ ಹೊಸ ಉಪಕ್ರಮಗಳ ನಿಟ್ಟಿನಲ್ಲಿ, ಆಸಕ್ತಿದಾಯಕವಾದ ತಂತ್ರಜ್ಞಾನ ಕ್ಷೇತ್ರದಲ್ಲಿನ ವಾಣಿಜ್ಯ ಅವಕಾಶಗಳನ್ನು ಶೋಧಿಸಲು ಹೆಚ್ಚಿನ ಅಗತ್ಯವಿದೆ.
ಪ್ರಧಾನಮಂತ್ರಿಯವರು 2015ರಲ್ಲಿ ಶ್ರೀಲಂಕಾಗೆ ನೀಡಿದ್ದ ಭೇಟಿ, “ಭಾರತದ ನೆರೆಯವರು ಮೊದಲು” ನೀತಿಗೆ ಪ್ರೋತ್ಸಾಹ ನೀಡಿತ್ತು. ಕೊಲಂಬೋದಲ್ಲಿನ ಭಾರತೀಯ ಅಭಿಯಾನ ಮತ್ತು ಐಟಿ ವಲಯದಲ್ಲಿ ಸಹಕಾರ ವಿಸ್ತರಿಸಲು ಎಂ.ಇ.ಎ. ಸಕ್ರಿಯ ಸಹಕಾರಕ್ಕೆ ಚೌಕಟ್ಟು ರೂಪಿಸಲು ಒತ್ತು ನೀಡಿತ್ತು. ಈ ನಿಟ್ಟಿನಲ್ಲಿ ಎಂ.ಇ.ಐ.ಟಿ.ವೈ ಐಸಿಟಿ ವಲಯದಲ್ಲಿ ಅಂದರೆ ಇ – ಆಡಳಿತ, ಸೈಬರ್ ಭದ್ರತೆ, ಬಿ2ಬಿ ಪಾಲುದಾರಿಕೆ, ಐ.ಟಿ. ಶಿಕ್ಷಣ ಮತ್ತು ಸಂಶೋಧನೆ / ನಾವಿನ್ಯತೆ ಇತ್ಯಾದಿ ಕ್ಷೇತ್ರದಲ್ಲಿನ ಗಮನಾರ್ಹ ಸಹಕಾರಕ್ಕಾಗಿ ಸಮಗ್ರ ತಿಳಿವಳಿಕೆ ಒಪ್ಪಂದಕ್ಕೆ ಸಂಧಾನ ನಡೆಸಿತ್ತು.
***