ಬ್ರೂನೈ ದರುಸ್ಸಲಾಮ್‌ನ ಸುಲ್ತಾನ್ ಮತ್ತು ಆಡಳಿತಾಧಿಕಾರಿ ಅಥವಾ ರಾಜ(ಯಾಂಗ್ ಡಿ-ಪೆರ್ಚುವಾನ್) ಹಾಜಿ ಹಸನಲ್ ಬೊಲ್ಕಿಯಾ ಮುಯಿಜ್ಜದ್ದೀನ್ ವದ್ದೌಲಾ ಇಬ್ನಿ ಅಲ್-ಮರ್ಹೂಮ್ ಸುಲ್ತಾನ್ ಹಾಜಿ ಒಮರ್ ಅಲಿ ಸೈಫುದ್ದೀನ್ ಸಅದುಲ್ ಖೈರಿ ವಾಡಿಯನ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 3 ಮತ್ತು 4ರಂದು ಬ್ರೂನೈ ದಾರುಸ್ಸಲಾಮ್‌ಗೆ ಅಧಿಕೃತ ಭೇಟಿ ನೀಡಿದ್ದರು. ಇದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮೊದಲ ಭೇಟಿ ಮತ್ತು ಬ್ರೂನೈಗೆ ಭಾರತದ ಪ್ರಧಾನಿ ಅವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ.
ಬ್ರೂನೈಗೆ ಆಗಮಿಸಿದ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಬ್ರೂನೈ ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಸಚಿವ ಮತ್ತು ರಾಜಕುಮಾರ ಗೌರವಾನ್ವಿತ ಹಾಜಿ ಅಲ್-ಮುಹ್ತದಿ ಬಿಲ್ಲಾ ಅವರು ಸ್ವಾಗತಿಸಿದರು. ನಂತರ ಅವರು ಅವರು ಪ್ರಧಾನ ಮಂತ್ರಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಅದಾದ ಬಳಿಕ ಇಸ್ತಾನಾ ನೂರುಲ್ ಇಮಾನ್‌ನಲ್ಲಿ ಮೋದಿ ಅವರಿಗೆ ಔತಣಕೂಟ ಏರ್ಪಡಿಸಲಾಗಿತ್ತು.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 40ನೇ ವಾರ್ಷಿಕೋತ್ಸವದೊಂದಿಗೆ ಈ ಐತಿಹಾಸಿಕ ಭೇಟಿಯು ಹೊಂದಿಕೆಯಾಗುತ್ತಿದೆ ಎಂದು ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಕಳೆದ 4 ದಶಕಗಳಲ್ಲಿ ಬ್ರೂನೈ ಮತ್ತು ಭಾರತದ ನಡುವಿನ ಗಾಢ ಸ್ನೇಹವು ವಿವಿಧ ಕ್ಷೇತ್ರಗಳಲ್ಲಿ ಬಲಗೊಂಡಿದೆ ಎಂದು ಇಬ್ಬರೂ ಒಪ್ಪಿಗೆ ಸೂಚಿಸಿದರು.
ಬ್ರೂನೈ ಮತ್ತು ಭಾರತವು ಶತಮಾನಗಳ ಹಿಂದಿನಿಂದ ಐತಿಹಾಸಿಕ ಸಂಬಂಧಗಳನ್ನು ಹಂಚಿಕೊಂಡಿವೆ. ಸಾಂಸ್ಕೃತಿಕ ಸಂಪರ್ಕ ಮತ್ತು ವ್ಯಾಪಾರ ವ್ಯವಹಾರದಿಂದ ಇದನ್ನು ಸುಗಮಗೊಳಿಸಲಾಗಿದೆ. 1984ರಲ್ಲಿ ಉಭಯ ದೇಶಗಳ ನಡುವೆ ಏರ್ಪಟ್ಟ ರಾಜತಾಂತ್ರಿಕ ಸಂಬಂಧಗಳ ಔಪಚಾರಿಕತೆಯು ನಿರಂತರ ಪಾಲುದಾರಿಕೆಯ ಆರಂಭವನ್ನು ಗುರುತಿಸಿದೆ.
ಬ್ರೂನೈನ ಸಾಮಾಜಿಕ, ಆರ್ಥಿಕ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ದೇಶದ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಸಮುದಾಯ ಅಮೂಲ್ಯ ಕೊಡುಗೆ ನೀಡುತ್ತಾ ಬಂದಿದೆ ಎಂದು ಹಾಜಿ ಅಲ್-ಮುಹ್ತದಿ ಬಿಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದರು.
ದ್ವಿಪಕ್ಷೀಯ ಸಂಬಂಧ ಅನೇಕ ವರ್ಷಗಳಲ್ಲಿ ಅಥವಾ ಕಾಲಾನುಕ್ರಮದಲ್ಲಿ ಅತ್ಯುತ್ತಮ ಪ್ರಗತಿ ಕಾಣುತ್ತಾ ಬಂದಿರುವುದನ್ನು ಪ್ರತಿಬಿಂಬಿಸಿದ ಉಭಯ ನಾಯಕರು, ಪರಸ್ಪರ ಆಸಕ್ತಿಯ ಎಲ್ಲಾ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು, ಗಾಢಗೊಳಿಸಲು ಮತ್ತು ಹೆಚ್ಚಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ರಕ್ಷಣೆ, ಸಂಪರ್ಕ, ವ್ಯಾಪಾರ ಮತ್ತು ಹೂಡಿಕೆ, ನವೀಕರಿಸಬಹುದಾದ ಇಂಧನ, ಬಾಹ್ಯಾಕಾಶ, ಐಸಿಟಿ, ಆರೋಗ್ಯ ಮತ್ತು ಔಷಧ, ಶಿಕ್ಷಣ ಮತ್ತು ಸಾಮರ್ಥ್ಯ ವೃದ್ಧಿ, ಸಂಸ್ಕೃತಿ, ಪ್ರವಾಸೋದ್ಯಮ, ಯುವಕರು ಮತ್ತು ಜನರಿಂದ ಜನರಿಗೆ ವಿನಿಮಯಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಸಹಕಾರ ಹೆಚ್ಚಿಸಲು ಇಬ್ಬರೂ ನಾಯಕರು ಚರ್ಚೆ ನಡೆಸಿದರು. ಹಾಗೆಯೇ ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಕಾರ್ಯವಿಧಾನಗಳ ಮೂಲಕ ನಿಕಟ ಸಂವಾದ ನಡೆಸುವ ಪ್ರಾಮುಖ್ಯತೆ ಇದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು. ವಿದೇಶಾಂಗ ಕಚೇರಿಯ ಸಮಾಲೋಚನೆಗಳು ಮತ್ತು ವಿವಿಧ ಜಂಟಿ ಕಾರ್ಯ ಗುಂಪಿನ ಸಭೆಗಳನ್ನು ನಿಯಮಿತವಾಗಿ ಕರೆಯುವುದು ಸೇರಿದಂತೆ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವಿಷಯಗಳ ಕುರಿತು ನಿಯಮಿತ ಸಭೆಗಳು, ವಿನಿಮಯ ಮತ್ತು ಸಂವಾದ ಮುಂದುವರಿಸಲು ಒಪ್ಪಿಕೊಂಡರು.
ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಜಂಟಿ ವ್ಯಾಪಾರ ಸಮಿತಿ(ಜೆಟಿಸಿ) ಮತ್ತು ಇತರೆ ಸಂಬಂಧಿತ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಗಳಂತಹ ಪ್ರಮುಖ ವೇದಿಕೆಗಳ ಮೂಲಕ ನಡೆಯಬೇಕಾದ ನಿಯಮಿತ ವಿನಿಮಯ ಮತ್ತು ಸಂವಾದದ ಪ್ರಾಮುಖ್ಯತೆಗೆ ಅವರು ಒತ್ತು ನೀಡಿದರು.
ತಂತ್ರಜ್ಞಾನ, ಹಣಕಾಸು, ಉತ್ಪಾದನೆ ಮತ್ತು ಸಂಸ್ಕರಣೆ ಸೇರಿದಂತೆ ಆಯಾ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಮತ್ತು ಪರಸ್ಪರ ಪ್ರಯೋಜನಕಾರಿ ರೀತಿಯಲ್ಲಿ ಪೂರಕತೆ ಅನ್ವೇಷಿಸಲು ಇಬ್ಬರೂ ನಾಯಕರು ಕರೆ ನೀಡಿದರು.
ಆಹಾರ ಭದ್ರತೆಯ ಮಹತ್ವ ಗುರುತಿಸಿದ ಇಬ್ಬರೂ ನಾಯಕರು, ಜ್ಞಾನ, ಉತ್ತಮ ಅಭ್ಯಾಸಗಳು ಮತ್ತು ಅನುಭವಗಳ ಹಂಚಿಕೆಯ ಮೂಲಕ ಕೃಷಿ ಮತ್ತು ಆಹಾರ ಪೂರೈಕೆ ಸರಪಳಿಯಲ್ಲಿ ಸಹಕಾರ ಹೆಚ್ಚಿಸಲು ಒಪ್ಪಿಗೆ ಸೂಚಿಸಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ನಿರಂತರ ಪ್ರಯತ್ನಗಳಿಗೆ ಕೊಡುಗೆ ನೀಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಟೆಲಿಕಮಾಂಡ್(ಟಿಟಿಸಿ) ಕೇಂದ್ರದ ಆತಿಥ್ಯ ಮುಂದುವರಿಸಿದ್ದಕ್ಕಾಗಿ ಬ್ರೂನೈಗೆ ಪ್ರಧಾನ ಮಂತ್ರಿ ಮೋದಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಉಭಯ ನಾಯಕರು ಎರಡು ಸರ್ಕಾರಗಳ ನಡುವಿನ ತಿಳುವಳಿಕೆ ಒಪ್ಪಂದ(ಎಂಒಯು) ಅಡಿ, ದೀರ್ಘಕಾಲೀನ ವ್ಯವಸ್ಥೆ ಮತ್ತು ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರ ಸ್ವಾಗತಿಸುವ ನವೀಕೃತ ಎಂಒಯು ಮಾಡಿಕೊಳ್ಳುವ ತೀರ್ಮಾನವನ್ನು ಶ್ಲಾಘಿಸಿದರು.
ಎರಡೂ ದೇಶಗಳ ನಡುವೆ ನಿಯಮಿತ ಭೇಟಿಗಳು, ತರಬೇತಿ ಕಾರ್ಯಕ್ರಮಗಳು, ಜಂಟಿ ಅಭ್ಯಾಸಗಳು, ನೌಕಾ ಮತ್ತು ಕರಾವಳಿ ರಕ್ಷಣಾ ಹಡಗುಗಳ ಭೇಟಿ ಮೂಲಕ ರಕ್ಷಣಾ ಮತ್ತು ಕಡಲ ಸಹಕಾರ ಹೆಚ್ಚಿಸುವ ಪ್ರಾಮುಖ್ಯತೆ ಇದೆ ಎಂದು ಇಬ್ಬರೂ ನಾಯಕರು ಒಪ್ಪಿಗೆ ಸೂಚಿಸಿದರು.
ಎರಡೂ ದೇಶಗಳ ಹಡಗುಗಳ ನಿಯಮಿತ ಬಂದರು ಕರೆಗಳ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು.
ಬಂದರ್ ಸೆರಿ ಬೆಗವಾನ್ ಮತ್ತು ಚೆನ್ನೈ ನಡುವಿನ ಯೋಜಿತ ನೇರ ವಿಮಾನ ಸಂಪರ್ಕವನ್ನು ಉಭಯ ನಾಯಕರು ಸ್ವಾಗತಿಸಿದರು, ಇದು ಜನರ-ಜನರ ನಡುವಿನ ಬಲವಾದ ಸಂಪರ್ಕ ಉತ್ತೇಜಿಸುತ್ತದೆ. ಜತೆಗೆ, ಉಭಯ ದೇಶಗಳ ನಡುವೆ ಹೆಚ್ಚಿನ ವ್ಯಾಪಾರ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ.
ಇಬ್ಬರೂ ನಾಯಕರು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಯುವಕರ ಪ್ರಮುಖ ಪಾತ್ರವನ್ನು ಗುರುತಿಸಿದರು, ಎರಡೂ ದೇಶಗಳ ನಡುವೆ ಹೆಚ್ಚಿನ ಯುವ ವಿನಿಮಯವನ್ನು ಉತ್ತೇಜಿಸಲು ಒಪ್ಪಿಗೆ ಸೂಚಿಸಿದರು.
ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ(ಐಟಿಇಸಿ) ಮತ್ತು ಇ-ಐಟಿಇಸಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಅಡಿ, ಬ್ರೂನೈ ಪ್ರಜೆಗಳಿಗೆ ಭಾರತವು ನೀಡುವ ತರಬೇತಿ ಮತ್ತು ವಿದ್ಯಾರ್ಥಿವೇತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬ್ರೂನೈ ಸಚಿವರು, ಈ ಕಾರ್ಯಕ್ರಮದ ಮುಂದುವರಿಕೆಯನ್ನು ಸ್ವಾಗತಿಸಿದರು.
ಈ ಪ್ರದೇಶದ ಶಾಂತಿ, ಸ್ಥಿರತೆ, ಭದ್ರತೆ, ಸಮೃದ್ಧಿ ಮತ್ತು ಹೊಂದಾಣಿಕೆ ಕಾಪಾಡಿಕೊಳ್ಳಲು ತಮ್ಮ ದೃಢವಾದ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು, ವಿಶ್ವಸಂಸ್ಥೆಯ ಸನ್ನದು ಮತ್ತು ಅಂತಾರಾಷ್ಟ್ರೀಯ ಕಾನೂನಿನಲ್ಲಿ ವಿವರಿಸಿರುವ ತತ್ವಗಳಿಗೆ ಬದ್ಧವಾಗಿರುವ ಮಹತ್ವಕ್ಕೆ ಒತ್ತು ನೀಡಿದರು.
ಆಸಿಯಾನ್-ಭಾರತ ಸಂವಾದ ಸಂಬಂಧಗಳು, ಪೂರ್ವ ಏಷ್ಯಾ ಶೃಂಗಸಭೆ, ಆಸಿಯಾನ್ ಪ್ರಾದೇಶಿಕ ವೇದಿಕೆ, ಏಷ್ಯಾ-ಯುರೋಪ್ ಸಭೆ(ಎಎಸ್ಇಎಂ) ಮತ್ತು ವಿಶ್ವಸಂಸ್ಥೆಯಂತಹ ವಿವಿಧ ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ ಬಲಪಡಿಸಲು ಇಬ್ಬರೂ ನಾಯಕರು ಒಪ್ಪಿಗೆ ಸೂಚಿಸಿದರು. ಶಾಂತಿ ಮತ್ತು ಅಭಿವೃದ್ಧಿ ಖಾತ್ರಿಪಡಿಸಿಕೊಳ್ಳಲು ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆ ಅಥವಾ ಕಟ್ಟುಪಾಡು ಅನುಸರಿಸುವುದು ಅತ್ಯಗತ್ಯ ಎಂದು ನಾಯಕರು ಎತ್ತಿಹಿಡಿದರು.
ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವ ವರ್ಧಿತ ಬಹುಪಕ್ಷೀಯತೆಗಾಗಿ ಒಟ್ಟಿಗೆ ಕೆಲಸ ಮಾಡಲು ಇಬ್ಬರೂ ನಾಯಕರು ಒಪ್ಪಿಗೆ ಸೂಚಿಸಿದರು.
ಆಸಿಯಾನ್-ಭಾರತದ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಪರಸ್ಪರ ಲಾಭದಾಯಕ ಪ್ರದೇಶಗಳಲ್ಲಿ ನಿಕಟವಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.
ಶಾಂತಿ, ಸ್ಥಿರತೆ, ಕಡಲ ಸುರಕ್ಷತೆ ಮತ್ತು ಭದ್ರತೆ ಕಾಪಾಡಿಕೊಳ್ಳಲು ಮತ್ತು ಉತ್ತೇಜಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಜತೆಗೆ, ನ್ಯಾವಿಗೇಷನ್ ಸ್ವಾತಂತ್ರ್ಯ ಮತ್ತು ಓವರ್‌ಫ್ಲೈಟ್ ಮತ್ತು ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯ ವ್ಯವಹಾರ, ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ, ವಿಶೇಷವಾಗಿ 1982ರ ಸಾಗರ ಕಾನೂನಿನ ಮೇಲಿನ ವಿಶ್ವಸಂಸ್ಥೆಯ ಒಪ್ಪಂದ(ಯುಎನ್ ಸಿಎಲ್ಒಎಸ್) ಗೌರವಿಸಲು, ಇದರ ಪ್ರಕಾರ, ಶಾಂತಿಯುತ ವಿಧಾನಗಳ ಮೂಲಕ ವಿವಾದಗಳನ್ನು ಪರಿಹರಿಸಲು ಎಲ್ಲಾ ರಾಷ್ಟ್ರಗಳನ್ನು ನಾಯಕರು ಒತ್ತಾಯಿಸಿದರು.
ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ಖಂಡಿಸಿದ ನಾಯಕರು, ಅದನ್ನು ತಿರಸ್ಕರಿಸುವಂತೆ ರಾಷ್ಟ್ರಗಳಿಗೆ ಕರೆ ನೀಡಿದರು. ಯಾವುದೇ ದೇಶವು ತನ್ನ ನಿಯಂತ್ರಣದಲ್ಲಿರುವ ಪ್ರದೇಶವನ್ನು ಭಯೋತ್ಪಾದನೆಗೆ ಬಳಸಿಕೊಳ್ಳಲು ಅನುಮತಿ ನೀಡಬಾರದು. ಯಾವುದೇ ದೇಶ ಭಯೋತ್ಪಾದಕರಿಗೆ ಆಶ್ರಯ ನೀಡಬಾರದು, ಭಯೋತ್ಪಾದಕ ಕೃತ್ಯಗಳ ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರಲು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಲಾಗಿದೆ. ಭಯೋತ್ಪಾದನೆ ಮತ್ತು ಅಂತಾರಾಷ್ಟ್ರೀಯ ಸಂಘಟಿತ ಅಪರಾಧ ಸಂಬಂಧಗಳನ್ನು ಗುರುತಿಸಿ, ಇಬ್ಬರೂ ನಾಯಕರು ಈ ನಿಟ್ಟಿನಲ್ಲಿ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಂಡರು. ಭಯೋತ್ಪಾದನೆ ಎದುರಿಸಲು ಯುಎನ್ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಒಪ್ಪಿಗೆ ಸೂಚಿಸಿದರು.
ಪ್ಯಾರಿಸ್ ಒಪ್ಪಂದದಂತಹ ಅಂತಾರಾಷ್ಟ್ರೀಯ ಹವಾಮಾನ ಉದ್ದೇಶಗಳಿಗೆ ಅನುಗುಣವಾಗಿ ಹವಾಮಾನ ಬದಲಾವಣೆಯನ್ನು ಪರಿಹರಿಸಲು ಮತ್ತು ಹೆಚ್ಚುತ್ತಿರುವ ಸವಾಲಿನಿಂದ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸುವಲ್ಲಿ ಪ್ರಯತ್ನಗಳನ್ನು ಹೆಚ್ಚಿಸುವ ತುರ್ತು ಅಗತ್ಯವನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. ಅಂತಾರಾಷ್ಟ್ರೀಯ ಸೌರ ಒಕ್ಕೂಟ(ಐಎಸ್ಎ), ವಿಪತ್ತು ನಿರ್ವಹಣೆಯ ಮೂಲಸೌಕರ್ಯಗಳ ಒಕ್ಕೂಟ(ಸಿಡಿಆರ್ ಐ) ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟ(ಜಿಬಿಎ) ಸ್ಥಾಪಿಸುವಲ್ಲಿ ಭಾರತದ ಉಪಕ್ರಮವನ್ನು ಬ್ರೂನೈ ಸಚಿವರು ಶ್ಲಾಘಿಸಿದರು. ಹವಾಮಾನ ಬದಲಾವಣೆಗಾಗಿ ಆಸಿಯಾನ್ ಕೇಂದ್ರ ಆಯೋಜಿಸುವ ಬ್ರೂನೈ ಪ್ರಯತ್ನಗಳಿಗೆ ಭಾರತ ನೀಡುತ್ತಿರುವ ಬೆಂಬಲವನ್ನು ಅವರು ಶ್ಲಾಘಿಸಿದರು.
ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಸಮ್ಮಿಟ್(ವಿಒಜಿಎಸ್ಎಸ್)ನಲ್ಲಿ ಬ್ರೂನೈನ ನಿರಂತರ ಭಾಗವಹಿಸುವಿಕೆಯನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಈ ಭಾರತೀಯ ನೇತೃತ್ವದ ಉಪಕ್ರಮವು ಜಾಗತಿಕ ದಕ್ಷಿಣದ ದೇಶಗಳನ್ನು ತಮ್ಮ ದೃಷ್ಟಿಕೋನಗಳು ಮತ್ತು ಆದ್ಯತೆಗಳನ್ನು ಸಂಪೂರ್ಣ ಶ್ರೇಣಿಯ ಸಮಸ್ಯೆಗಳಲ್ಲಿ ಹಂಚಿಕೊಳ್ಳಲು ಒಂದು ಸಾಮಾನ್ಯ ವೇದಿಕೆಯಡಿ, ಒಟ್ಟುಗೂಡಿಸುವ ಗುರಿ ಹೊಂದಿದೆ ಎಂದರು.
ಈ ಭೇಟಿಯ ಸಂದರ್ಭದಲ್ಲಿ ತಮಗೆ ಮತ್ತು ನಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಪ್ರಧಾನ ಮಂತ್ರಿ ಅವರು ಸಚಿವರಿಗೆ ಧನ್ಯವಾದ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನ ಮಂತ್ರಿ ಮೋದಿ ಅವರು ಸಚಿವರಿಗೆ ಆಹ್ವಾನ ನೀಡಿದರು.
*****