Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಫಿಜಿ ನಡುವೆ ವಾಯು ಸೇವೆಯ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಫಿಜಿ ನಡುವೆ ಹೊಸ ವಾಯು ಸೇವೆಗಳ ಒಪ್ಪಂದ (ಎಎಸ್.ಎ)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ಒಪ್ಪಂದವು ಎರಡೂ ದೇಶಗಳ ನಡುವೆ 1974ರ ಜನವರಿ 28ರಂದು ಅಂಕಿತ ಹಾಕಲಾಗಿರುವ ಹಾಲಿ ಚಾಲ್ತಿಯಲ್ಲಿರುವ ವಾಯು ಸೇವೆಗಳ ಒಪ್ಪಂದ (ಎ.ಎಸ್.ಎ.)ವನ್ನು ಇಂದಿನ ಅಗತ್ಯಕ್ಕೆ ಮಾರ್ಪಡಿಸುವುದಾಗಿದೆ. ಈ ಮೇಲ್ದರ್ಜೆ ನವೀಕರಣವು ನಾಗರಿಕ ವಿಮಾನ ಯಾನ ವಲಯದಲ್ಲಿ ಇತ್ತೀಚೆಗೆ ಆಗಿರುವ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಎರಡು ರಾಷ್ಟ್ರಗಳ ನಡುವಿನ ವಾಯು ಸಂಪರ್ಕ ಸುಧಾರಣೆಗಾಗಿ ರೂಪಿಸಲಾಗಿರುವ ಇತ್ತೀಚಿನ ಐ.ಸಿ.ಎ.ಓ. ಮಾದರಿಗೆ ಅನುಗುಣವಾಗಿದೆ.

ವಾಯು ಸೇವೆಗಳ ಒಪ್ಪಂದದ ಕರಡನ್ನು ಕಾನೂನು ಮತ್ತು ನ್ಯಾಯ (ಕಾನೂನು ವ್ಯವಹಾರಗಳ ಇಲಾಖೆ) ಸಚಿವಾಲಯ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ, ಕಂದಾಯ ಇಲಾಖೆ), ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಾಣಿಜ್ಯ ಸಚಿವಾಲಯ ಮತ್ತು ಪ್ರವಾಸೋದ್ಯಮ ಸಚಿವಾಲಯದೊಂದಿಗೆ ಸಮಾಲೋಚಿಸಿ ರೂಪಿಸಲಾಗಿದೆ.

ವಾಯು ಸೇವೆಗಳ ಒಪ್ಪಂದದ ಅಗತ್ಯ ಅಂಶಗಳು ಈ ಕೆಳಗಿನಂತಿವೆ:

1. ಎರಡೂ ರಾಷ್ಟ್ರಗಳು ಒಂದು ಅಥವಾ ಅದಕ್ಕಿಂತ ಹೆಚ್ಚು ವಿಮಾನಗಳನ್ನು ನಿಯೋಜಿಸಬೇಕು.

2. ವಾಯು ಸೇವೆಗಳ ಮಾರಾಟ ಮತ್ತು ಉತ್ತೇಜನಕ್ಕಾಗಿ ಮತ್ತೊಂದು ರಾಷ್ಟ್ರದ ಎಲ್ಲೆಯಲ್ಲಿ ತನ್ನ ಕಚೇರಿಯನ್ನು ಸ್ಥಾಪಿಸುವ ಹಕ್ಕನ್ನು ಎರಡೂ ರಾಷ್ಟ್ರಗಳ ನಿಯೋಜಿತ ವಾಯುಯಾನ ಸಂಸ್ಥೆಗಳು ಹೊಂದಿರುತ್ತವೆ.

3.ಎರಡೂ ರಾಷ್ಟ್ರಗಳ ನಿಯೋಜಿತ ವಾಯುಯಾನ ಸಂಸ್ಥೆಗಳಿಗೆ ನಿರ್ದಿಷ್ಟ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲು ಸಮಾನ ಮತ್ತು ಮುಕ್ತ ಅವಕಾಶ ಇರುತ್ತದೆ. ನಂತರದಲ್ಲಿ ಮಾರ್ಗ ಮತ್ತು ಸಂಚಾರದ ಆವರ್ತನೆಗಳನ್ನು ನಿರ್ಧರಿಸಲಾಗುತ್ತದೆ.

4. ವಾಣಿಜ್ಯ ಪರಿಗಣನೆ ಆಧಾರದ ಮೇಲೆ ಸಮಂಜಸವಾದ ಮಟ್ಟದಲ್ಲಿ ನಿರ್ಧರಿತ ಸೇವೆಗೆ ಸಂಬಂಧಿಸಿದಂತೆ ನಿಯೋಜಿತ ವಾಯುಯಾನ ಸಂಸ್ಥೆ ದರ ನಿರ್ಧರಿಸಿಕೊಳ್ಳಲು ಮುಕ್ತವಾಗಿರುತ್ತದೆ.

5.ಎರಡೂ ಕಡೆಯ ನಿಯೋಜಿತ ವಾಯುಯಾನ ಸಂಸ್ಥೆಗಳು ತಮ್ಮ ಪಕ್ಷದ ಅಥವಾ ಮತ್ತೊಂದು ಪಕ್ಷದ ನಿಯೋಜಿತ ವಾಯು ಸೇವೆ ಸಂಸ್ಥೆಗಳೊಂದಿಗೆ ಸಹಕಾರ ಮಾರುಕಟ್ಟೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ.

6.ಈ ಮೇಲೆ ಹೇಳಲಾದ ಅಂಶಗಳಲ್ಲದೆ, ಎ.ಎಸ್.ಎ.ಗೆ ಕಾರ್ಯಾಚರಣೆ ಅಧಿಕಾರ, ಒಪ್ಪಿತ ಸೇವೆಗಳ ಕಾರ್ಯಾಚರಣೆಯ ಆಡಳಿತ ನೀತಿಯನ್ನು, ವಾಣಿಜ್ಯ ಅವಕಾಶಗಳನ್ನು, ಸುರಕ್ಷತೆ ಕುರಿತ ಷರತ್ತುಗಳು ಇತ್ಯಾದಿಯನ್ನು ಅಮಾನತು ಮಾಡುವ ಅಥವಾ ತೆಗೆದುಹಾಕುವ ಅಧಿಕಾರ ಹೊಂದಿರುತ್ತದೆ. ಇವೆಲ್ಲವೂ ಭಾರತೀಯ ಎ.ಎಸ್.ಎ. ಮಾದರಿಯಲ್ಲಿ ಅಂತರ್ಗತವಾಗಿವೆ.

7. ಹೆಚ್ಚಿನ ಸಂಪರ್ಕಕ್ಕಾಗಿ ಎ.ಎಸ್.ಎ.ಯಲ್ಲಿ ಹಾಲಿ ಇರುವ ಮಾರ್ಗಗಳ ಕಾರ್ಯಪಟ್ಟಿಯನ್ನು ಪರಿಷ್ಕರಿಸಲಾಗಿದೆ ಮತ್ತು ಹೊಸ ತಾಣಗಳನ್ನು ಸೇರಿಸಲಾಗಿದೆ. ಈಗ ಭಾರತೀಯ ವಿಮಾನಯಾನ ಸಂಸ್ಥೆಗಳು ಭಾರತದ ಯಾವುದೇ ನಿಲ್ದಾಣದಿಂದ ಫಿಜಿಯ ಯಾವುದೇ ನಿಲ್ದಾಣಕ್ಕೆ ಕಾರ್ಯಾಚರಣೆ ನಡೆಸಬಹುದಾಗಿದೆ. ಆದರೆ, ಫಿಜಿಯ ವಿಮಾನ ಸಂಸ್ಥೆಗಳು ಭಾರತದಲ್ಲಿ ದೆಹಲಿ, ಮುಂಬೈ ಮತ್ತು ಚೆನ್ನೈಗೆ ನೇರವಾಗಿ ಹಾರಾಟ ನಡೆಸಬಹುದಾಗಿದೆ ಮತ್ತು ನೇರ ಕಾರ್ಯಾಚರಣೆಗೆ ನೀಡಲಾಗಿರುವ ತಾಣಗಳ ಜೊತೆಗೆ ಬೆಂಗಳೂರು, ಕೋಲ್ಕತ್ತಾ, ಹೈದ್ರಾಬಾದ್ ಗಳಿಗೆ ಭಾರತೀಯ ವಿಮಾನಯಾನ ಸಂಸ್ಥೆಗಳೊಂದಿಗೆ ಕೋಡ್ ಹಂಚಿಕೆ ಮಾಡಿಕೊಳ್ಳಬಹುದಾಗಿದೆ.ಇದರ ಜೊತೆಗೆ ಕೊಚ್ಚಿ, ವಾರಾಣಸಿ, ಅಹ್ಮದಾಬಾದ್ ಮತ್ತು ಅಮೃತಸರಗಳಿಗೆ ದೇಶೀಯ ಕೋಡ್ ಹಂಚಿಕೆ ಕಾರ್ಯಾಚರಣೆ ನೀಡಬಹುದಾಗಿದೆ.

AKT/VBA/SH