ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾರತ ಮತ್ತು ಡನ್ಮಾರ್ಕ್ ನಡುವೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ವಲಯದಲ್ಲಿ ಪರಸ್ಪರ ಸಹಕಾರದ ಒಡಂಬಡಿಕೆಗೆ ಅನುಮೋದನೆ ನೀಡಲಾಯಿತು. ಈ ಒಪ್ಪಂದಕ್ಕೆ 2018ರ ಏಪ್ರಿಲ್ 16ರಂದು ಸಹಿ ಹಾಕಲಾಗಿತ್ತು.
ಈ ಒಪ್ಪಂದದನ್ವಯ ಹಾಲಿ ಇರುವ ಸಂಸ್ಥೆಗಳ ಬಲವರ್ಧನೆ ಮತ್ತು ಹೈನುಗಾರಿಕೆ ಅಭಿವೃದ್ಧಿಯಲ್ಲಿ ಜ್ಞಾನದ ಮೂಲವನ್ನು ವಿಸ್ತರಿಸುವ ಉದ್ದೇಶದಿಂದ ಪಶುಸಂಗೋಪನೆ ಮತ್ತು ಹೈನುಗಾರಿಕೆ ವಲಯದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಅಭಿವೃದ್ಧಿಗೊಳಿಸುವ ಗುರಿ ಹೊಂದಲಾಗಿದೆ.
ಜಂಟಿ ಕಾರ್ಯಕ್ರಮಗಳನ್ನು ರೂಪಿಸಲು ಪರಸ್ಪರ ಸಹಕಾರ ಮತ್ತು ಸಮಾಲೋಚನೆಗೆ ಅನುವಾಗುವಂತೆ ಹಾಗೂ ಮೌಲ್ಯಮಾಪನಕ್ಕೆ ನೆರವಾಗುವಂತೆ ಎರಡೂ ದೇಶಗಳ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಕಾರ್ಯಕಾರಿ ಸಮಿತಿ(ಜೆಡಬ್ಲ್ಯೂಸಿ)ಯನ್ನು ರಚಿಸುವುದು.
ಪಶುಸಂಗೋಪನೆ, ಪ್ರಾಣಿಗಳ ಆರೋಗ್ಯ ಮತ್ತು ಹೈನುಗಾರಿಕೆ ಹಾಗೂ ಮೇವು ನಿರ್ವಹಣೆ ಮತ್ತಿತರ ವಲಯಗಳಲ್ಲಿ ಜ್ಞಾನ ಮತ್ತು ಪರಿಣಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದನ್ನು ಡೆನ್ಮಾರ್ಕ್ ನಿಂದ ನಿರೀಕ್ಷಿಸಲಾಗುತ್ತಿದೆ. ಇದರಿಂದ ಭಾರತದಲ್ಲಿ ಜಾನುವಾರುಗಳ ಉತ್ಪಾದನೆ ಮತ್ತು ಅವುಗಳ ಉತ್ಪನ್ನವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.