ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಟರ್ಕಿ ನಡುವೆ ಟರ್ಕಿಯಿಂದ ಆಮದಾಗುವ ಗಸಗಸೆ ಬೀಜಗಳ ತ್ವರಿತ ಮತ್ತು ಪಾರದರ್ಶಕ ಸಂಸ್ಕರಣೆಯನ್ನು ಖಾತ್ರಿಪಡಿಸುವ ಗಸ ಗಸೆ ಬೀಜಗಳ ವ್ಯಾಪಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ಅನುಮೋದನೆ ನೀಡಿತು.
ವಿವರಗಳು:
ಈ ತಿಳುವಳಿಕಾ ಒಡಂಬಡಿಕೆಯು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ–
1 .ಟರ್ಕಿಯ ಧಾನ್ಯ ಮಂಡಳಿ (ಟಿ.ಎಂ.ಒ) ಯು ಟರ್ಕಿಯಿಂದ ಭಾರತಕ್ಕೆ ಗಸಗಸೆ ಬೀಜದ ರಫ್ತಿಗೆ ಸಂಬಂಧಿಸಿ ನಿಯಂತ್ರಣಕ್ಕಾಗಿ ಆನ್ ಲೈನ್ ವ್ಯವಸ್ಥೆಯನ್ನು ನಿರ್ವಹಿಸಬೇಕು. ರಫ್ತು ಮಾಡುವ ಕಂಪೆನಿಗಳು ಏಜಿಯನ್ ಎಕ್ ಪೋರ್ಟರ್ಸ್ ಅಸೋಸಿಯೇಶನ್ (ಇ.ಐ.ಬಿ.) ಮೂಲಕ ( ಕಾನೂನಿನ ಮೂಲಕ ಈ ಜವಾಬ್ದಾರಿ ನೀಡಲಾಗಿದೆ.) ಟಿ.ಎಂ.ಒ.ಗೆ ಆನ್ ಲೈನ್ ವ್ಯವಸ್ಥೆಯ ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಸಬೇಕು.
2. ಪ್ರತೀ ವರ್ಷ , ಭಾರತವು ಟರ್ಕಿಯಿಂದ ಆಮದು ಮಾಡುವ ಗಸಗಸೆ ಬೀಜದ ಪ್ರಮಾಣವನ್ನು ಟರ್ಕಿ ಸರಕಾರದ ಜೊತೆ ಸಮಾಲೋಚನೆಯ ಮೂಲಕ ಭಾರತ ಸರಕಾರ ನಿರ್ಧರಿಸುತ್ತದೆ. ಇದರಲ್ಲಿ ಒಂದು ಬೆಳೆ ವರ್ಷದಲ್ಲಿ ಟರ್ಕಿಯಲ್ಲಿ ಉತ್ಪಾದನೆ ಆಗುವ ಗಸಗಸೆ ಬೀಜದ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಮತ್ತು ಟರ್ಕಿ ಗಣರಾಜ್ಯದ ದೇಶೀಯ ಹಾಗು ಇತರ ರಫ್ತು ಆವಶ್ಯಕತೆಗಳನ್ನು, ಹಿಂದಿನ ಬೆಳೆ ವರ್ಷದ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
3. ರಪ್ತು ಮಾಡುವ ಕಂಪೆನಿಗಳು ಟಿ.ಎಂ.ಒ ಜೊತೆ ನೊಂದಾಯಿಸಿಕೊಂಡಿರಬೇಕಾಗುತ್ತದೆ. ಭಾರತದ ಆಮದುದಾರರ ಜೊತೆ ರಫ್ತು ಕಂಪೆನಿ ಮಾಡಿಕೊಳ್ಳುವ ಪ್ರತೀ ಮಾರಾಟ ಒಪ್ಪಂದ ಸೂಚಿತ ಆನ್ ಲೈನ್ ವ್ಯವಸ್ಥೆಯ ಮೂಲಕ ಟಿ.ಎಂ.ಒ. ಜೊತೆ ನೊಂದಾಯಿಸಲ್ಪಟ್ಟಿರಬೇಕು. ಮೇಲ್ಕಾಣಿಸಿದ ಎರಡನೇ ಪ್ಯಾರಾದಲ್ಲಿ ಸೂಚಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಮಾರಾಟ ಒಪ್ಪಂದ ನೊಂದಾವಣೆಯಾಗದಂತೆ ನೋಡಿಕೊಳ್ಳುವುದು ಟಿ.ಎಂ.ಒ. ಜವಾಬ್ದಾರಿ.
4. ಮೇಲ್ಕಾಣಿಸಿದ ಪ್ಯಾರಾ 2 ರಲ್ಲಿ ಪ್ರಸ್ತಾವಿಸಿದ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಪ್ರತೀ ವರ್ಷವೂ ಎರಡೂ ಕಡೆಯವರು ಒಂದು ಬೆಳೆ ವರ್ಷದಲ್ಲಿ ಭಾರತದ ಯಾವುದೇ ಆಮದುದಾರರು ಆಮದು ಮಾಡಬಹುದಾದ ಪ್ರಮಾಣವನ್ನು ನಿಗದಿ ಮಾಡಬಹುದು.
5. ಕೇಂದ್ರೀಯ ಮಾದಕ ದ್ರವ್ಯಗಳ ಮಂಡಳಿ (ಸಿ.ಬಿ.ಎನ್.)ಯು ಟಿ.ಎಂ.ಒ ನಿರ್ವಹಿಸುವ ಆನ್ ಲೈನ್ ವ್ಯವಸ್ಥೆಯ ಮೂಲಕ ಲಭ್ಯ ಇರುವ ವಿವರಗಳನ್ನು ಪಡೆದುಕೊಂಡು ಟಿ.ಎಂ.ಒ. ನೊಂದಾಯಿಸಿದ ಮಾರಾಟ ಒಪ್ಪಂದವನ್ನು ನೊಂದಾಯಿಸಿಕೊಳ್ಳುತ್ತದೆ. ಭಾರತ ಸರಕಾರದ ಹಣಕಾಸು ಮಂತ್ರಾಲಯ ನೊಂದಾವಣೆಗೆ ನಿಗದಿ ಮಾಡಿದ ಮಾರ್ಗದರ್ಶಿಗಳ ಅನ್ವಯ ಈ ಕ್ರಮ ಕೈಗೊಳ್ಳಲಾಗುತ್ತದೆ. ನೊಂದಾವಣೆಯಾದ ಮಾರಾಟ ಒಪ್ಪಂದದ ವಿವರಗಳನ್ನು ಸಿ.ಬಿ.ಎನ್. ಆನ್ ಲೈನ್ ವ್ಯವಸ್ಥೆಗೆ ಅಪ್ ಲೋಡ್ ಮಾಡಬೇಕಾಗುತ್ತದೆ.
6. ಮಾರಾಟ ಒಪ್ಪಂದ ಮತ್ತು ಇತರ ಅವಶ್ಯ ಪ್ರಕ್ರಿಯೆಗಳನ್ನು ಪೂರೈಸಿ ಸಲ್ಲಿಸಿದ ಬಳಿಕ ಗಸಗಸೆ ಬೀಜಗಳ ರಫ್ತುದಾರರಿಗೆ ಕಾನೂನು ಬದ್ದ ಉತ್ಪಾದನಾ ಪ್ರಮಾಣ ಪತ್ರವನ್ನು ಟಿ.ಎಂ.ಓ ನೀಡಬೇಕಾಗುತ್ತದೆ. .
ಈ ತಿಳುವಳಿಕಾ ಒಡಂಬಡಿಕೆಯು ಮಂಜೂರಾದ ಪ್ರಮಾಣದ ಗಸಗಸೆ ಬೀಜಗಳ ತ್ವರಿತ ಮತ್ತು ಪಾರದರ್ಶಕ ಸಂಸ್ಕರಣೆಯನ್ನು ಉತ್ತೇಜಿಸುತ್ತದೆ ಮತ್ತು ಟರ್ಕಿಯಿಂದ ಆಮದಾಗುವ ಗಸಗಸೆ ಬೀಜಗಳಿಗೆ ಮುಂಚಿತವಾಗಿ ಅಧಿಕೃತತೆಯ ಪ್ರಮಾಣೀಕರಣವನ್ನು ನೀಡುತ್ತದೆ. ಈ ರೀತಿಯಲ್ಲಿ ಆಮದು ಕರಾರಿನ ಸತ್ಯಾ ಸತ್ಯತೆಯನ್ನು ಸುಲಭವಾಗಿ ಖಾತ್ರಿಪಡಿಸಬಹುದು ಮಾತ್ರವಲ್ಲದೆ ಆಮದು ವಿಳಂಬಕ್ಕೆ ಸಂಬಂಧಿಸಿದಂತೆ ಉಂಟಾಗುವ ಹಲವು ತಕರಾರು, ವ್ಯಾಜ್ಯಗಳನ್ನು ತಡೆಯಬಹುದು.
ತಿಳುವಳಿಕಾ ಒಡಂಬಡಿಕೆಯು ಗಸಗಸೆ ಬೀಜಗಳು ಭಾರತದ ದೇಶೀಯ ಮಾರುಕಟ್ಟೆಯಲ್ಲಿ ನಿರಂತರ ಲಭ್ಯವಾಗುವಂತೆ ಖಾತ್ರಿಪಡಿಸುವುದಲ್ಲದೆ ಇದರಿಂದ ಅಂತಿಮವಾಗಿ ಗಸಗಸೆ ಬೀಜ ಬಳಕೆ ಮಾಡುವ ಭಾರತೀಯ ಗ್ರಾಹಕರಿಗೆ ಲಾಭವಾಗಲಿದೆ.
ಹಿನ್ನೆಲೆ:
ಟರ್ಕಿಯಿಂದ ಗಸಗಸೆ ಬೀಜಗಳ ಆಮದನ್ನು ತಕರಾರು–ವ್ಯಾಜ್ಯಗಳ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು ಮತ್ತು ಇದರಿಂದ ಭಾರತದ ದೇಶೀಯ ಮಾರುಕಟ್ಟೆಯಲ್ಲಿ ಗಸಗಸೆ ಬೀಜಗಳ ಬೆಲೆಯಲ್ಲಿ ಭಾರೀ ಹೆಚ್ಚಳ ಉಂಟಾಗಿತ್ತು. ಕೆಲವು ಆಮದುದಾರರು ಅದನ್ನು ದಾಸ್ತಾನು ಮಾಡಿಟ್ಟಿದ್ದರು. ನ್ಯಾಯಾಲಯಗಳು ನೀಡಿದ ವಿವಿಧ ತಡೆಯಾಜ್ಞೆಗಳು, ಪದೇ ಪದೇ ವಿಚಾರಣೆ ಮುಂದೂಡಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಕಠಿಣಗೊಳಿಸಿದವು ಮತ್ತು ದೇಶದಲ್ಲಿ ಇದರ ಪರಿಣಾಮವಾಗಿ ಗಸಗಸೆ ಬೀಜಗಳು ದುರ್ಲಭವಾದವು, ಗ್ರಾಹಕರಿಗೆ ಇದರಿಂದ ಸಮಸ್ಯೆಗಳಾದವು. ಇಂತಹ ಸಂಕೀರ್ಣ ಕಾನೂನಾತ್ಮಕ ಪರಿಸ್ಥಿತಿಯನ್ನು ನಿವಾರಿಸಲು, ಬೆಲೆ ಏರಿಕೆ ಹಾಗು ದಾಸ್ತಾನು ತಡೆಯಲು ಪರ್ಯಾಯ ವ್ಯವಸ್ಥೆಯಾಗಿ ಭಾರತ ಸರಕಾರ ಮತ್ತು ಟರ್ಕಿ ಸರಕಾರದ ನಡುವೆ ತಿಳುವಳಿಕಾ ಒಡಂಬಡಿಕೆಯನ್ನು ರೂಪಿಸಲಾಯಿತು. ಇದರಿಂದ ಟರ್ಕಿಯಿಂದ ಆಮದಾಗುವ ಗಸಗಸೆ ಬೀಜಗಳ ಪ್ರಮಾಣ, ನೈಜತೆ ಮತ್ತು ಟರ್ಕಿಯಲ್ಲಿ ಕಾನೂನು ಬದ್ಧವಾಗಿ ಉತ್ಪಾದನೆಯಾಗುವ ಗಸಗಸೆ ಬೀಜದ ಪ್ರಮಾಣವನ್ನು ನೈಜ ಸಮಯದಲ್ಲಿ ತಿಳಿಯಬಹುದಾಗಿದೆ.