ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 7 ಲೋಕ ಕಲ್ಯಾಣ ಮಾರ್ಗದಲ್ಲಿ, ಭಾರತ ಮತ್ತು ಜಪಾನ್ ನಡುವಿನ ಆರ್ಥಿಕ ಸಹಕಾರವನ್ನು ಆಳಗೊಳಿಸುವ ನಿಟ್ಟಿನಲ್ಲಿ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ಆಲಿಸಲು ಕೀಜೈ ಡೊಯುಕೈ ಅಧ್ಯಕ್ಷ ಶ್ರೀ ತಕೇಶಿ ನೈನಾಮಿ ನೇತೃತ್ವದ ಕೀಜೈ ಡೊಯುಕೈ (ಜಪಾನ್ ಕಾರ್ಪೊರೇಟ್ ಕಾರ್ಯನಿರ್ವಾಹಕರ ಸಂಘ) ಮತ್ತು ಇತರ 20 ವಾಣಿಜ್ಯ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗವನ್ನು ಸ್ವಾಗತಿಸಿದರು.
ದ್ವಿಪಕ್ಷೀಯ ವ್ಯಾಪಾರವನ್ನು ಬಲಪಡಿಸುವುದು, ಹೂಡಿಕೆ ಅವಕಾಶಗಳನ್ನು ಹೆಚ್ಚಿಸುವುದು ಮತ್ತು ಕೃಷಿ, ಸಾಗರ ಉತ್ಪನ್ನಗಳು, ಬಾಹ್ಯಾಕಾಶ, ರಕ್ಷಣೆ, ವಿಮೆ, ತಂತ್ರಜ್ಞಾನ, ಮೂಲಸೌಕರ್ಯ, ನಾಗರಿಕ ವಿಮಾನಯಾನ, ಶುದ್ಧ ಇಂಧನ, ಪರಮಾಣು ಶಕ್ತಿ ಮತ್ತು ಎಂಎಸ್ಎಂಇ ಪಾಲುದಾರಿಕೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಯೋಗವನ್ನು ಉತ್ತೇಜಿಸುವುದು ಈ ಚರ್ಚೆಯ ಭಾಗವಾಗಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಎತ್ತಿ ತೋರಿಸಿದರು ಮತ್ತು ವ್ಯಾಪಾರ ಸ್ನೇಹಿ ವಾತಾವರಣವನ್ನು ಒದಗಿಸುವ ಭಾರತದ ದೃಢ ನಿರ್ಧಾರವನ್ನು ಪುನರುಚ್ಚರಿಸಿದರು. ಭಾರತದಲ್ಲಿ ಜಪಾನಿನ ಹೂಡಿಕೆಗೆ ಅನುಕೂಲವಾಗುವಂತೆ ಮತ್ತು ತ್ವರಿತವಾಗಿ ಟ್ರ್ಯಾಕ್ ಮಾಡಲು ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಜಪಾನ್ ಪ್ಲಸ್ ವ್ಯವಸ್ಥೆಯನ್ನು ಅವರು ಎತ್ತಿ ತೋರಿಸಿದರು. ಹೂಡಿಕೆದಾರರಿಗೆ ಯಾವುದೇ ಅಸ್ಪಷ್ಟತೆ/ಗೊಂದಲ ಅಥವಾ ಹಿಂಜರಿಕೆ ಇರಬಾರದು ಎಂದು ಅವರು ಒತ್ತಿ ಹೇಳಿದರು. ಭಾರತದ ಆಡಳಿತವು ನೀತಿ-ಚಾಲಿತವಾಗಿದೆ ಮತ್ತು ಪಾರದರ್ಶಕತೆಯನ್ನು ಒಳಗೊಂಡು ಊಹಿಸಬಹುದಾದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.
ದೇಶದಲ್ಲಿ ವಾಯುಯಾನ ಕ್ಷೇತ್ರದ ಅಗಾಧ ಪ್ರಮಾಣದ ಬೆಳವಣಿಗೆಯ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಮತ್ತು ಲಾಜಿಸ್ಟಿಕ್ಸ್ ಸಾಮರ್ಥ್ಯಗಳ ವಿಸ್ತರಣೆ ಸೇರಿದಂತೆ ಗಮನಾರ್ಹ ಮೂಲಸೌಕರ್ಯಗಳನ್ನು ನಿರ್ಮಿಸುವತ್ತ ಭಾರತ ಕೆಲಸ ಮಾಡುತ್ತಿದೆ ಎಂಬುದನ್ನು ಅವರು ಉಲ್ಲೇಖಿಸಿದರು.
ಭಾರತದ ವಿಶಾಲ ವೈವಿಧ್ಯತೆಯನ್ನು ಗಮನಿಸಿದರೆ, ಎಐ ಭೂದೃಶ್ಯದಲ್ಲಿ ದೇಶವು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೃತಕ ಬುದ್ಧಿಮತ್ತೆಯಲ್ಲಿ ತೊಡಗಿರುವವರೊಂದಿಗೆ ಸಹಯೋಗದ ಮಹತ್ವವನ್ನು ಅವರು ಒತ್ತಿ ಹೇಳಿದರು, ಭಾರತದೊಂದಿಗೆ ಪಾಲುದಾರರಾಗಲು ಅವರನ್ನು ಪ್ರೋತ್ಸಾಹಿಸಿದರು.
ಜೈವಿಕ ಇಂಧನಗಳ ಮೇಲೆ ಗಮನ ಕೇಂದ್ರೀಕರಿಸಿದ ಅಭಿಯಾನವನ್ನು ಪ್ರಾರಂಭಿಸಿದ ಭಾರತವು ಹಸಿರು ಇಂಧನ ಕ್ಷೇತ್ರದಲ್ಲಿ ಗಮನಾರ್ಹ ದಾಪುಗಾಲು ಹಾಕುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ವಿಶೇಷವಾಗಿ ಕೃಷಿ ವಲಯವು ಜೈವಿಕ ಇಂಧನಗಳ ಪರಿಣಾಮವಾಗಿ ಪ್ರಮುಖ ಮೌಲ್ಯವರ್ಧನೆಯ ಪ್ರಯೋಜನ ಪಡೆಯಲಿದೆ ಎಂದು ಅವರು ಹೇಳಿದರು.
ವಿಮಾ ವಲಯವನ್ನು ಮುಕ್ತ ಮಾಡುವ ಬಗ್ಗೆ ಮತ್ತು ಬಾಹ್ಯಾಕಾಶ ಹಾಗು ಪರಮಾಣು ಇಂಧನದಂತಹ (ಅಣು ಶಕ್ತಿ) ಅತ್ಯಾಧುನಿಕ ಕ್ಷೇತ್ರಗಳಲ್ಲಿ ಅವಕಾಶಗಳನ್ನು ವಿಸ್ತರಿಸುವ ಬಗ್ಗೆಯೂ ಪ್ರಧಾನಮಂತ್ರಿ ಮಾತನಾಡಿದರು.
ಜಪಾನ್ ನ ವಾಣಿಜ್ಯೋದ್ಯಮದ ಹಿರಿಯ ನಾಯಕರನ್ನು ಒಳಗೊಂಡ ಕೀಜೈ ಡೊಯುಕೈ ನಿಯೋಗವು ಭಾರತಕ್ಕಾಗಿರುವ ತಮ್ಮ ಯೋಜನೆಗಳನ್ನು ಹಂಚಿಕೊಂಡಿತು. ಮಾನವ ಸಂಪನ್ಮೂಲ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಭಾರತ ಮತ್ತು ಜಪಾನ್ ನಡುವಿನ ಪೂರಕ ಸಂಗತಿಗಳನ್ನು ಬಳಸಿಕೊಳ್ಳುವ ಆಸಕ್ತಿಯನ್ನು ನಿಯೋಗ ವ್ಯಕ್ತಪಡಿಸಿತು. ಎರಡೂ ಕಡೆಯವರು ಭವಿಷ್ಯದ ಸಹಯೋಗಗಳ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು ಮತ್ತು ಮುಂಬರುವ ವರ್ಷಗಳಲ್ಲಿ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಆಳಗೊಳಿಸುವುದನ್ನು ಎದುರು ನೋಡುವುದಾಗಿ ತಿಳಿಸಿದರು.
ಸನ್ಟೋರಿ ಹೋಲ್ಡಿಂಗ್ಸ್ ಲಿಮಿಟೆಡ್ ನ ಪ್ರತಿನಿಧಿ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ನೈನಾಮಿ ತಕೇಶಿ ಅವರು ಪ್ರಧಾನಮಂತ್ರಿ ಮೋದಿಯವರ ನಾಯಕತ್ವದಲ್ಲಿ ಭಾರತ ಮತ್ತು ಜಪಾನ್ ನಡುವೆ ಸಂಬಂಧ ಅಭಿವೃದ್ಧಿ ಹೊಂದುತ್ತಿರುವುದನ್ನು ಶ್ಲಾಘಿಸಿದರು. ಭಾರತದಲ್ಲಿ ಹೂಡಿಕೆ ಮಾಡಲು ಜಪಾನ್ ಗೆ ದೊಡ್ಡ ಅವಕಾಶವನ್ನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ನ ಪ್ರಧಾನಮಂತ್ರಿ ಮೋದಿಯವರ ಚಿಂತನೆ/ದೃಷ್ಟಿಕೋನವನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿದರು.
ಎನ್ಇಸಿ ಕಾರ್ಪೊರೇಷನ್ನಿನ ಕಾರ್ಪೊರೇಟ್ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ಸರ್ಕಾರಿ ವ್ಯವಹಾರಗಳ ಅಧಿಕಾರಿ ಟನಾಕಾ ಶಿಗೆಹಿರೊ, ಜಪಾನಿನ ಉದ್ಯಮವು ಭಾರತದಲ್ಲಿ ಹೂಡಿಕೆ ಮಾಡುವ ಬಗ್ಗೆ ಪ್ರಧಾನಮಂತ್ರಿ ಮೋದಿ ತಮ್ಮ ದೃಷ್ಟಿಕೋನ ಮತ್ತು ನಿರೀಕ್ಷೆಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ ಎಂದು ಹೇಳಿದರು.
ಅರ್ಥಪೂರ್ಣ ಮತ್ತು ಪರಸ್ಪರ ಪ್ರಯೋಜನಕಾರಿ ರೀತಿಯಲ್ಲಿ ವಿಕಸಿತ ಭಾರತ @ 2047ರ ದೃಷ್ಟಿಕೋನಕ್ಕೆ ಜಪಾನಿನ ಉದ್ಯಮದ ಬೆಂಬಲ ಮತ್ತು ಬದ್ಧತೆಯನ್ನು ಸಭೆ ಒತ್ತಿಹೇಳಿತು.
*****
Had an excellent meeting with a delegation from Keizai Doyukai (Japan Association of Corporate Executives). We talked about the robust India-Japan friendship and how to deepen economic linkages.https://t.co/SNhu8C173Q pic.twitter.com/gMeYeSmgZT
— Narendra Modi (@narendramodi) March 27, 2025