ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಮೆರಿಕ ಅಧ್ಯಕ್ಷ ಜೋಸೆಫ್ ಆರ್ ಬೈಡನ್ ಜೂನಿಯರ್ ಅವರನ್ನು ಭಾರತಕ್ಕೆ ಸ್ವಾಗತಿಸಿದರು, ಭಾರತ ಮತ್ತು ಅಮೆರಿಕ ನಡುವಿನ ನಿಕಟ ಮತ್ತು ಶಾಶ್ವತ ಪಾಲುದಾರಿಕೆಯನ್ನು ಪುನರುಚ್ಚರಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಐತಿಹಾಸಿಕ ಜೂನ್ 2023ರ ವಾಷಿಂಗ್ಟನ್ ಭೇಟಿಯ ಸಾಧನೆಗಳನ್ನು ಕಾರ್ಯಗತಗೊಳಿಸುವಲ್ಲಿ ಆಗಿರುವ ಗಣನೀಯ ಪ್ರಗತಿಯ ಬಗ್ಗೆ ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಸ್ಪರ ನಂಬಿಕೆ ಮತ್ತು ತಿಳಿವಳಿಕೆಯನ್ನು ಆಧರಿಸಿದ ನಮ್ಮ ಬಹುಮುಖಿ ಜಾಗತಿಕ ಕಾರ್ಯಸೂಚಿಯ ಎಲ್ಲಾ ಆಯಾಮಗಳಲ್ಲಿ ʻಭಾರತ-ಅಮೆರಿಕ ವ್ಯೂಹಾತ್ಮಕ ಪಾಲುದಾರಿಕೆʼಯನ್ನು ಪರಿವರ್ತಿಸುವ ಕೆಲಸವನ್ನು ಮುಂದುವರಿಸುವಂತೆ ನಾಯಕರು ತಮ್ಮ ಸರ್ಕಾರಗಳಿಗೆ ಕರೆ ನೀಡಿದರು. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಒಳಗೊಳ್ಳುವಿಕೆ, ಬಹುತ್ವ ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳ ಹಂಚಿಕೆಯ ಮೌಲ್ಯಗಳು ನಮ್ಮ ದೇಶಗಳು ಅನುಭವಿಸುತ್ತಿರುವ ಯಶಸ್ಸಿಗೆ ನಿರ್ಣಾಯಕವಾಗಿವೆ. ಈ ಮೌಲ್ಯಗಳು ನಮ್ಮ ಸಂಬಂಧವನ್ನು ಬಲಪಡಿಸುತ್ತವೆ ಎಂದು ನಾಯಕರು ಪುನರುಚ್ಚರಿಸಿದರು.
ʻಜಿ 20ʼ ಒಂದು ವೇದಿಕೆಯಾಗಿ ಹೇಗೆ ಪ್ರಮುಖ ಫಲಿತಾಂಶಗಳನ್ನು ನೀಡಬಲ್ಲದು ಎಂಬುದನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸಿದ್ದಕ್ಕಾಗಿ ಅಧ್ಯಕ್ಷ ಬೈಡನ್ ಅವರು ಭಾರತದ ಜಿ 20 ಅಧ್ಯಕ್ಷತೆಯನ್ನು ಶ್ಲಾಘಿಸಿದರು. ʻಜಿ 20ʼಗೆ ತಮ್ಮ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು ಮತ್ತು ನವದೆಹಲಿಯಲ್ಲಿ ನಡೆವ ಜಿ 20 ನಾಯಕರ ಶೃಂಗಸಭೆಯ ಫಲಿತಾಂಶಗಳು ಸುಸ್ಥಿರ ಅಭಿವೃದ್ಧಿಯನ್ನು ವೇಗಗೊಳಿಸುವ, ಬಹುಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಹಾಗೂ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು ಮೂಲಭೂತವಾಗಿ ಮರುರೂಪಿ ಸುವ ಮತ್ತು ವೃದ್ಧಿಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಮ್ಮ ಬೃಹತ್ ಸಾಮಾನ್ಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಂಡ ಆರ್ಥಿಕ ನೀತಿಗಳ ಬಗ್ಗೆ ಜಾಗತಿಕವಾಗಿ ಒಮ್ಮತವನ್ನು ಮೂಡಿಸುವಂತಹ ಪರಸ್ಪರ ಹಂಚಿಕೆಯ ಗುರಿಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ವಿಚಾರದಲ್ಲೂ ಜಿ 20 ಶೃಂಗಸಭೆಯು ಯಶಸ್ವಿಯಾಗುವ ಆಶಯವನ್ನೂ ನಾಯಕರು ವ್ಯಕ್ತಪಡಿಸಿದರು.
ಸ್ವತಂತ್ರ, ಮುಕ್ತ, ಎಲ್ಲರನ್ನೂ ಒಳಗೊಂಡ ಮತ್ತು ಸ್ಥಿತಿಸ್ಥಾಪಕ ʻಇಂಡೋ-ಪೆಸಿಫಿಕ್ʼ ವಲಯವನ್ನು ಬೆಂಬಲಿಸುವಲ್ಲಿ ʻಕ್ವಾಡ್ʼ (Quad) ಮಹತ್ವವನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬೈಡನ್ ಪುನರುಚ್ಚರಿಸಿದರು. 2024ರಲ್ಲಿ ಭಾರತ ಆತಿಥ್ಯ ವಹಿಸಲಿರುವ ಮುಂದಿನ ʻಕ್ವಾಡ್’ ನಾಯಕರ ಶೃಂಗಸಭೆಗೆ ಅಧ್ಯಕ್ಷ ಬೈಡನ್ ಅವರನ್ನು ಸ್ವಾಗತಿಸಲು ಪ್ರಧಾನಿ ಮೋದಿ ಎದುರು ನೋಡುತ್ತಿದ್ದಾರೆ. 2023ರ ಜೂನ್ನಲ್ಲಿ ʻಐಪಿಒಐʼಗೆ ಸೇರುವ ಅಮೆರಿಕದ ನಿರ್ಧಾರದ ಮುಂದುವರಿದ ಭಾಗವಾಗಿ, ʻವಾಣಿಜ್ಯ ಸಂಪರ್ಕ ಮತ್ತು ಕಡಲ ಸಾರಿಗೆ ಕುರಿತ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ ಸ್ತಂಭʼವನ್ನು ಜೊತೆಯಾಗಿ ಮುನ್ನಡೆಸುವ ಅಮೆರಿಕದ ತೀರ್ಮಾನವನ್ನು ಭಾರತ ಸ್ವಾಗತಿಸಿತು.
ಜಾಗತಿಕ ಆಡಳಿತವು ಹೆಚ್ಚು ಒಳಗೊಳ್ಳುವಿಕೆಯಿಂದ ಕೂಡಿರಬೇಕು ಮತ್ತು ಪ್ರಾತಿನಿಧಿಕವಾಗಿರಬೇಕು ಎಂಬ ಅಭಿಪ್ರಾಯವನ್ನು ಅಧ್ಯಕ್ಷ ಬೈಡನ್ ಪುನರುಚ್ಛರಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(ಯುಎನ್ಎಸ್ಸಿ) ಭಾರತಕ್ಕೆ ಖಾಯಂ ಸದಸ್ಯವನ್ನು ಒದಗಿಸುವ ಮೂಲಕ ಯುಎನ್ಎಸ್ಸಿ ಸುಧಾರಣೆಗೆ ತಮ್ಮ ಬೆಂಬಲವನ್ನು ಬೈಡನ್ ಪುನರುಚ್ಚರಿಸಿದರು. ಇದೇ ವೇಳೆ, 2028-29ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯತ್ವಕ್ಕೆ ಭಾರತದ ಉಮೇದುವಾರಿಕೆಯನ್ನು ಮತ್ತೊಮ್ಮೆ ಸ್ವಾಗತಿಸಿದರು. ವಿಶ್ವಸಂಸ್ಥೆಯು ಸಮಕಾಲೀನ ವಾಸ್ತವಗಳನ್ನು ಉತ್ತಮವಾಗಿ ಪ್ರತಿಬಿಂಬಿಸುವ ರೀತಿಯಲ್ಲಿ ಹಾಗೂ ವಿಶ್ವಸಂಸ್ಥೆಯ ಸಮಗ್ರ ಸುಧಾರಣೆಗೆ ಬದ್ಧವಾಗಿರುವ ರೀತಿಯಲ್ಲಿ ಬಹುಪಕ್ಷೀಯ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಸುಧಾರಿಸುವ ಅಗತ್ಯವನ್ನು ನಾಯಕರು ಮತ್ತೊಮ್ಮೆ ಒತ್ತಿಹೇಳಿದರು. ಇದರಲ್ಲಿ ಭದ್ರತಾ ಮಂಡಳಿಯ ಶಾಶ್ವತ ಮತ್ತು ಶಾಶ್ವತವಲ್ಲದ ವರ್ಗಗಳ ಸದಸ್ಯತ್ವದ ವಿಸ್ತರಣೆ ಸೇರಿದಂತೆ ಎಂದರು.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬಿಡೆನ್ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಳಗೊಳಿಸುವಲ್ಲಿ ತಂತ್ರಜ್ಞಾನದ ನಿರ್ಣಾಯಕ ಪಾತ್ರವನ್ನು ಪುನರುಚ್ಚರಿಸಿದರು ಮತ್ತು ಈ ನಿಟ್ಟಿನಲ್ಲಿ ʻನಿರ್ಣಾಯಕ ಹಾಗೂ ಉದಯೋನ್ಮುಖ ತಂತ್ರಜ್ಞಾನ ಕುರಿತಾದ ಭಾರತ-ಅಮೆರಿಕ ಉಪಕ್ರಮʼ(ಐಸಿಇಟಿ) ಮೂಲಕ ನಡೆಯುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಪರಸ್ಪರ ಹಂಚಿಕೊಂಡ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸುವ ವಿಶ್ವಾಸದ ತಳಹದಿಯ ಮೇಲೆ ಮುಕ್ತವಾದ, ಪ್ರವೇಶಸಾಧ್ಯವಾದ, ಸುರಕ್ಷಿತ ಹಾಗೂ ಸ್ಥಿತಿಸ್ಥಾಪಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳು ಹಾಗೂ ಮೌಲ್ಯ ಸರಪಳಿಗಳನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ. 2024ರ ಆರಂಭದಲ್ಲಿ ಎರಡೂ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಹ-ನೇತೃತ್ವದಲ್ಲಿ ನಡೆಯಲಿರುವ ʻವಾರ್ಷಿಕ ಐಸಿಇಟಿ ಪರಾಮರ್ಶೆʼಯತ್ತ ವೇಗವನ್ನು ಮುಂದುವರಿಸಲು ಅಮೆರಿಕ ಹಾಗೂ ಭಾರತ ಸೆಪ್ಟೆಂಬರ್ 2023ರಲ್ಲಿ ʻಐಸಿಇಟಿʼಯ ಮಧ್ಯಂತರ ಪರಿಶೀಲನೆಯನ್ನು ಕೈಗೊಳ್ಳಲು ಉದ್ದೇಶಿಸಿವೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ʻಚಂದ್ರಯಾನ -3ʼ ರ ಐತಿಹಾಸಿಕ ಲ್ಯಾಂಡಿಂಗ್ ಮತ್ತು ಭಾರತದ ಮೊದಲ ʻಸೌರ ಮಿಷನ್ ಆದಿತ್ಯ -ಎಲ್ 1ʼ ಯಶಸ್ವಿ ಉಡಾವಣೆಗಾಗಿ ಅಧ್ಯಕ್ಷ ಬೈಡನ್ ಅವರು ಪ್ರಧಾನಿ ಮೋದಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಿಜ್ಞಾನಿಗಳು, ಎಂಜಿನಿಯರ್ಗಳನ್ನು ಅಭಿನಂದಿಸಿದರು. ಬಾಹ್ಯಾಕಾಶ ಸಹಕಾರದ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಗಡಿಗಳನ್ನು ತಲುಪಲು ಮಾರ್ಗವನ್ನು ನಿಗದಿಪಡಿಸಿದ ನಾಯಕರು, ಅಸ್ತಿತ್ವದಲ್ಲಿರುವ ʻಭಾರತ-ಅಮೆರಿಕ ನಾಗರಿಕ ಬಾಹ್ಯಾಕಾಶ ಜಂಟಿ ಕಾರ್ಯಪಡೆʼ ಅಡಿಯಲ್ಲಿ ವಾಣಿಜ್ಯ ಬಾಹ್ಯಾಕಾಶ ಸಹಯೋಗಕ್ಕಾಗಿ ಮತ್ತೊಮದು ಕಾರ್ಯಪಡೆ ಸ್ಥಾಪಿಸುವ ಪ್ರಯತ್ನಗಳನ್ನು ಸ್ವಾಗತಿಸಿದರು. ಬಾಹ್ಯಾಕಾಶ ಸಂಶೋಧನೆಯಲ್ಲಿ ನಮ್ಮ ಪಾಲುದಾರಿಕೆಯನ್ನು ಆಳಗೊಳಿಸಲು ನಿರ್ಧರಿಸಿದ ʻಇಸ್ರೋʼ ಮತ್ತು ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) 2024ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜಂಟಿ ಪ್ರಯತ್ನವನ್ನು ಹೆಚ್ಚಿಸುವ ವಿಧಾನಗಳು, ಸಾಮರ್ಥ್ಯ ವರ್ಧನೆ ಮತ್ತು ತರಬೇತಿಯ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಿವೆ. 2023ರ ಅಂತ್ಯದ ವೇಳೆಗೆ ಮಾನವ ಬಾಹ್ಯಾಕಾಶ ಹಾರಾಟ ಸಹಕಾರಕ್ಕಾಗಿ ಕಾರ್ಯತಂತ್ರದ ನೀತಿಗಳನ್ನು ಅಂತಿಮಗೊಳಿಸುವ ಪ್ರಯತ್ನಗಳನ್ನು ಮುಂದುವರಿಸುತ್ತಿವೆ. ಕ್ಷುದ್ರಗ್ರಹಗಳು ಮತ್ತು ಭೂಮಿಯ ಸಮೀಪದ ವಸ್ತುಗಳ ಪ್ರಭಾವದಿಂದ ಭೂಮಿಯನ್ನು ಹಾಗೂ ಬಾಹ್ಯಾಕಾಶ ಸ್ವತ್ತುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಂತರಿಕ್ಷ ರಕ್ಷಣೆಯಲ್ಲಿ ಸಮನ್ವಯವನ್ನು ಹೆಚ್ಚಿಸಲು ಭಾರತ ಮತ್ತು ಅಮೆರಿಕ ಉದ್ದೇಶಿಸಿವೆ. ʻಮೈನರ್ ಪ್ಲಾನೆಟ್ ಸೆಂಟರ್ʼ ಮೂಲಕ ಕ್ಷುದ್ರಗ್ರಹ ಪತ್ತೆ ಮತ್ತು ಟ್ರ್ಯಾಕಿಂಗ್ನಲ್ಲಿ ಭಾರತದ ಭಾಗವಹಿಸುವಿಕೆಗೆ ಅಮೆರಿಕದ ಬೆಂಬಲವೂ ಇದರ ಒಂದು ಭಾಗವಾಗಿದೆ.
ಸದೃಢವಾದ ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಉಭಯ ನಾಯಕರು ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಇದರ ಭಾಗವಾಗಿ, ಭಾರತದಲ್ಲಿ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಉಪಸ್ಥಿತಿಯನ್ನು ವಿಸ್ತರಿಸಲು ʻಮೈಕ್ರೊಚಿಪ್ ಟೆಕ್ನಾಲಜಿ ಇಂಕ್ʼನಿಂದ ಸುಮಾರು 300 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಬಹುವರ್ಷಗಳ ಯೋಜನೆ ಸಹ ಸೇರಿದೆ. ಜೊತೆಗೆ, ಭಾರತದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಎಂಜಿನಿಯರಿಂಗ್ ಕಾರ್ಯಾಚರಣೆಗಳನ್ನು ವಿಸ್ತರಿಸಲು ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 400 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ʻಅಡ್ವಾನ್ಸ್ಡ್ ಮೈಕ್ರೋ ಡಿವೈಸ್ʼನ ಘೋಷಣೆಯನ್ನು ನಾಯಕರು ಉಲ್ಲೇಖಿಸಿದರು.
ಅಮೆರಿಕದ ಕಂಪನಿಗಳಾದ, ʻಮೈಕ್ರಾನ್ʼ, ʻಲ್ಯಾಮ್ ರಿಸರ್ಚ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ʼ ಜೂನ್ 2023ರಲ್ಲಿ ಮಾಡಿದ ಘೋಷಣೆಗಳ ಅನುಷ್ಠಾನದ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು.
ಸುರಕ್ಷಿತ ಮತ್ತು ವಿಶ್ವಾಸಾರ್ಹ ದೂರಸಂಪರ್ಕ, ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳು ಮತ್ತು ಜಾಗತಿಕ ಡಿಜಿಟಲ್ ಸೇರ್ಪಡೆಯ ದೃಷ್ಟಿಕೋನವನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬೈಡನ್ ಹಂಚಿಕೊಂಡರು. ಮಾರಾಟಗಾರರು ಮತ್ತು ನಿರ್ವಾಹಕರ ನಡುವಿನ ಸಾರ್ವಜನಿಕ-ಖಾಸಗಿ ಸಹಕಾರವನ್ನು ಆಳಗೊಳಿಸುವ ಮೊದಲ ಹೆಜ್ಜೆಯಾಗಿ ʻಅಲೈಯನ್ಸ್ ಫಾರ್ ಟೆಲಿಕಮ್ಯುನಿಕೇಷನ್ಸ್ ಇಂಡಸ್ಟ್ರಿ ಸೊಲ್ಯೂಷನ್ಸ್ʼ ನಿರ್ವಹಿಸುವ ʻಭಾರತ್ 6 ಜಿ ಅಲೈಯನ್ಸ್ ಮತ್ತು ʻನೆಕ್ಸ್ಟ್ ಜಿ ಅಲೈಯನ್ಸ್ʼ ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು. “5ಜಿ / 6ಜಿ ತಂತ್ರಜ್ಞಾನ ಮತ್ತು ʻಓಪನ್ ಆರ್ಎಎನ್ʼ ಕ್ಷೇತ್ರದಲ್ಲಿ ಸಹಯೋಗ, ಸಂಶೋಧನೆ ಹಾಗೂ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸಿದ ಎರಡು ಜಂಟಿ ಕಾರ್ಯಪಡೆಗಳ ಸ್ಥಾಪನೆಯನ್ನು ಅವರು ಸಮ್ಮತಿಸಿದರು. ಭಾರತದಲ್ಲಿ ʻಓಪನ್ ಆರ್ಎಎನ್ʼ ಅನುಷ್ಠಾನಕ್ಕೆ ಮುನ್ನ, ಪ್ರಮುಖ ಭಾರತೀಯ ಟೆಲಿಕಾಂ ಆಪರೇಟರ್ ಸಂಸ್ಥೆಯಲ್ಲಿ ʻ5 ಜಿ ಓಪನ್ ಆರ್ಎಎನ್ʼ ಪ್ರಾಯೋಗಿಕ ಅನುಷ್ಠಾನವನ್ನುಅಮೆರಿಕದ ಓಪನ್ ಆರ್ಎಎನ್ ತಯಾರಕರು ಕೈಗೊಳ್ಳಲಿದ್ದಾರೆ. ʻಯು.ಎಸ್. ರಿಪ್ ಅಂಡ್ ರೀಪ್ಲೇಸ್ ಪ್ರೋಗ್ರಾಮ್ʼನಲ್ಲಿ ಭಾರತೀಯ ಕಂಪನಿಗಳ ಭಾಗವಹಿಸುವಿಕೆಯನ್ನು ಎದುರು ನೋಡುತ್ತಿರುವುದಾಗಿ ನಾಯಕರು ತಿಳಿಸಿದರು; ಅಮೆರಿಕದಲ್ಲಿ ʻರಿಪ್ ಅಂಡ್ ರೀಪ್ಲೇಸ್ʼ ಪ್ರಾಯೋಗಿಕ ಯೋಜನೆಗೆ ಭಾರತದ ಬೆಂಬಲವನ್ನು ಅಧ್ಯಕ್ಷ ಬೈಡನ್ ಸ್ವಾಗತಿಸಿದರು.
ʻಕ್ವಾಂಟಮ್ʼ ಕ್ಷೇತ್ರದಲ್ಲಿ ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಅಮೆರಿಕ ಪುನರುಚ್ಚರಿಸಿತು. ದ್ವಿಪಕ್ಷೀಯವಾಗಿ ಹಾಗೂ ಅಂತರರಾಷ್ಟ್ರೀಯ ಕ್ವಾಂಟಮ್ ವಿನಿಮಯ ಅವಕಾಶಗಳನ್ನು ಸುಗಮಗೊಳಿಸುವ ವೇದಿಕೆಯಾದ ʻಕ್ವಾಂಟಮ್ ಎಂಟಾಂಗಲ್ಮೆಂಟ್ ಎಕ್ಸ್ಚೇಂಜ್ʼ ಮೂಲಕ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಅಮೆರಿಕ ಭರವಸೆ ನೀಡಿತು. ʻಕ್ವಾಂಟಮ್ ಎಕನಾಮಿಕ್ ಡೆವಲಪ್ಮೆಂಟ್ ಕನ್ಸೋರ್ಟಿಯಮ್ʼನ ಸದಸ್ಯರಾಗಿ ಕೋಲ್ಕತಾದ ʻಎಸ್.ಎನ್. ಬೋಸ್ ನ್ಯಾಷನಲ್ ಸೆಂಟರ್ ಫಾರ್ ಬೇಸಿಕ್ ಸೈನ್ಸಸ್ʼ ಭಾಗವಹಿಸುವುದನ್ನು ಅಮೆರಿಕ ಸ್ವಾಗತಿಸಿತು. ʻಚಿಕಾಗೋ ಕ್ವಾಂಟಮ್ ಎಕ್ಸ್ಚೇಂಜ್ʼನಲ್ಲಿ ಅಂತರರಾಷ್ಟ್ರೀಯ ಪಾಲುದಾನಾಗಿ ಬಾಂಬೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿʼ(ಐಐಟಿ-ಬಾಂಬೆ) ಸೇರ್ಪಡೆಯನ್ನು ಅಮೆರಿಕ ಗುರುತಿಸಿತು.
ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಉತ್ಪಾದನೆಯ ಆವಿಷ್ಕಾರಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನಾ ಸಹಯೋಗವನ್ನು ಸಕ್ರಿಯಗೊಳಿಸಲು ʻಅಮೆರಿಕದ ನ್ಯಾಷನಲ್ ಸೈನ್ಸ್ ಫೌಂಡೇಶನ್ʼ(ಎನ್ಎಸ್ಎಫ್) ಮತ್ತು ಭಾರತದ ಜೈವಿಕ ತಂತ್ರಜ್ಞಾನ ಇಲಾಖೆ ನಡುವೆ ಅನುಷ್ಠಾನ ವ್ಯವಸ್ಥೆಗೆ ಸಹಿ ಹಾಕಿರುವುದನ್ನು ನಾಯಕರು ಶ್ಲಾಘಿಸಿದರು. ಸೆಮಿಕಂಡಕ್ಟರ್ ಸಂಶೋಧನೆ, ಮುಂದಿನ ಪೀಳಿಗೆಯ ಸಂವಹನ ವ್ಯವಸ್ಥೆಗಳು, ಸೈಬರ್ ಭದ್ರತೆ, ಸುಸ್ಥಿರತೆ ಮತ್ತು ಹಸಿರು ತಂತ್ರಜ್ಞಾನಗಳು ಹಾಗೂ ʻಇಂಟಲಿಜೆಂಟ್ ಸಾರಿಗೆ ವ್ಯವಸ್ಥೆʼಗಳಲ್ಲಿ ಶೈಕ್ಷಣಿಕ ಮತ್ತು ಕೈಗಾರಿಕಾ ಸಹಯೋಗವನ್ನು ಉತ್ತೇಜಿಸಲು ʻಎನ್ಎಸ್ಎಫ್ʼ ಮತ್ತು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬಿಡುಗಡೆ ಮಾಡಿದ ಪ್ರಸ್ತಾಪಗಳ ಕರೆಯನ್ನು ಅವರು ಸ್ವಾಗತಿಸಿದರು.
ಸ್ಥಿತಿಸ್ಥಾಪಕ ತಂತ್ರಜ್ಞಾನ ಮೌಲ್ಯ ಸರಪಳಿಗಳನ್ನು ನಿರ್ಮಿಸುವ ಮತ್ತು ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆಗಳನ್ನು ಸಂಪರ್ಕಿಸುವ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ನೀತಿಗಳನ್ನು ಉತ್ತೇಜಿಸಲು ಹಾಗೂ ಭಾರತ-ಅಮೆರಿಕದ ಉದ್ಯಮಗಳು, ಸರ್ಕಾರ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಹೆಚ್ಚಿನ ತಂತ್ರಜ್ಞಾನ ಹಂಚಿಕೆ, ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನಾ ಅವಕಾಶಗಳನ್ನು ಸುಗಮಗೊಳಿಸುವ ನಿಯಮಗಳನ್ನು ಅಳವಡಿಸಿಕೊಳ್ಳಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. 2023ರ ಜೂನ್ನಲ್ಲಿ ಪ್ರಾರಂಭಿಸಲಾದ ʻದ್ವಿಪಕ್ಷೀಯ ಕಾರ್ಯತಂತ್ರದ ವ್ಯಾಪಾರ ಸಂವಾದʼದ ಆಶ್ರಯದಲ್ಲಿ ʻಅಂತರ-ಏಜೆನ್ಸಿ ಮೇಲ್ವಿಚಾರಣಾ ಕಾರ್ಯವಿಧಾನʼದ ಮೂಲಕ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಅವರು ಸ್ವಾಗತಿಸಿದರು.
ಕನಿಷ್ಠ 10 ದಶಲಕ್ಷ ಅಮೆರಿಕನ್ ಡಾಲರ್ ಸಂಯೋಜಿತ ಆರಂಭಿಕ ಹೂಡಿಕೆ ಬದ್ಧತೆಯೊಂದಿಗೆ, ʻಭಾರತ-ಅಮೆರಿಕ ಜಾಗತಿಕ ಸವಾಲುಗಳ ಸಂಸ್ಥೆʼ ಸ್ಥಾಪನೆಗಾಗಿ ʻಕೌನ್ಸಿಲ್ ಆಫ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಕೌನ್ಸಿಲ್) ಪ್ರತಿನಿಧಿಸುವ ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಅಸೋಸಿಯೇಷನ್ ಆಫ್ ಅಮೆರಿಕನ್ ಯೂನಿವರ್ಸಿಟೀಸ್ (ಎಎಯು) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು. ʻಜಾಗತಿಕ ಸವಾಲುಗಳ ಸಂಸ್ಥೆʼಯು ಸುಸ್ಥಿರ ಇಂಧನ, ಕೃಷಿ, ಆರೋಗ್ಯ ಮತ್ತು ಸಾಂಕ್ರಾಮಿಕ ಸನ್ನದ್ಧತೆ, ಸೆಮಿಕಂಡಕ್ಟರ್ ತಂತ್ರಜ್ಞಾನ ಮತ್ತು ಉತ್ಪಾದನೆ, ಸುಧಾರಿತ ವಸ್ತುಗಳು, ದೂರಸಂಪರ್ಕ, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ವಿಜ್ಞಾನದಲ್ಲಿ ಸಹಯೋಗವನ್ನು ವಿಸ್ತರಿಸುವ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ಗಡಿಗಳನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಇದು ʻಎಎಯುʼ ಮತ್ತು ʻಐಐಟಿʼ ಸದಸ್ಯತ್ವವನ್ನು ಮೀರಿ ನಮ್ಮ ಎರಡೂ ರಾಷ್ಟ್ರಗಳ ಪ್ರಮುಖ ಸಂಶೋಧನೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಟ್ಟುಗೂಡಿಸುತ್ತದೆ.
ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ʻನ್ಯೂಯಾರ್ಕ್ ವಿಶ್ವವಿದ್ಯಾಲಯ-ಟಂಡನ್ ಮತ್ತು ಐಐಟಿ ಕಾನ್ಪುರ ಸುಧಾರಿತ ಸಂಸೋಧನಾ ಕೇಂದ್ರ ಮತ್ತು ಬಫಲೋದಲ್ಲಿರುವ ʻಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ʼನ ಜಂಟಿ ಸಂಶೋಧನಾ ಕೇಂದ್ರಗಳು ಹಾಗೂ ಐಐಟಿ ದೆಹಲಿ, ಕಾನ್ಪುರ, ಜೋಧಪುರ ಮತ್ತು ಬಿಎಚ್ಯು ನಡುವೆ ಹೆಚ್ಚುತ್ತಿರುವ ಬಹು-ಸಾಂಸ್ಥಿಕ ಸಹಯೋಗದ ಶಿಕ್ಷಣ ಪಾಲುದಾರಿಕೆಯನ್ನು ನಾಯಕರು ಸ್ವಾಗತಿಸಿದರು.
ಡಿಜಿಟಲ್ ಆರ್ಥಿಕತೆಯಲ್ಲಿ ಲಿಂಗ ಡಿಜಿಟಲ್ ವಿಭಜನೆಯನ್ನು ತೊರೆದುಹಾಕುವ ಪ್ರಯತ್ನಗಳ ಮಹತ್ವವನ್ನು ನಾಯಕರು ಒತ್ತಿ ಹೇಳಿದರು. 2030ರ ವೇಳೆಗೆ ಡಿಜಿಟಲ್ ಲಿಂಗ ಅಂತರವನ್ನು ಅರ್ಧದಷ್ಟು ಕಡಿಮೆ ಮಾಡುವ ಜಿ 20 ಬದ್ಧತೆಯನ್ನು ಉಲ್ಲೇಖಿಸಿದರು ಮತ್ತು ಡಿಜಿಟಲ್ ಲಿಂಗ ವಿಭಜನೆಯನ್ನು ಮುಚ್ಚುವತ್ತ ಪ್ರಗತಿಯನ್ನು ವೇಗಗೊಳಿಸಲು ಸರ್ಕಾರಗಳು, ಖಾಸಗಿ ವಲಯದ ಕಂಪನಿಗಳು, ಪ್ರತಿಷ್ಠಾನಗಳು, ನಾಗರಿಕ ಸಮಾಜ ಮತ್ತು ಬಹುಪಕ್ಷೀಯ ಸಂಸ್ಥೆಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ʻಡಿಜಿಟಲ್ ಆರ್ಥಿಕತೆಯಲ್ಲಿ ಮಹಿಳೆಯರ ಉಪಕ್ರಮʼಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬೈಡನ್ ಅವರು ಭಾರತ-ಅಮೆರಿಕ ಸಂಬಂಧವನ್ನು ಆಳಗೊಳಿಸುವ ಮತ್ತು ವೈವಿಧ್ಯಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆಯಂತಹ ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಮೂಲಕ ಮತ್ತು ರಕ್ಷಣಾ ಕೈಗಾರಿಕಾ ಸಹಯೋಗವನ್ನು ವೇಗಗೊಳಿಸುವ ಮೂಲಕ ಪ್ರಮುಖ ರಕ್ಷಣಾ ಪಾಲುದಾರಿಕೆಗೆ ಸಮ್ಮತಿಸಿದರು.
2023ರ ಆಗಸ್ಟ್ 29ರಂದು ʻಕಾಂಗ್ರೆಸ್ ಅಧಿಸೂಚನೆʼ ಪ್ರಕ್ರಿಯೆ ಪೂರ್ಣಗೊಂಡಿರುವುದನ್ನು ಮತ್ತು ಭಾರತದಲ್ಲಿ ʻಜಿಇಎಫ್-414ʼ ಜೆಟ್ ಎಂಜಿನ್ಗಳನ್ನು ತಯಾರಿಸಲು ʻಜಿಇ ಏರೋಸ್ಪೇಸ್ʼ ಮತ್ತು ʻಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ʼ(ಎಚ್ಎಎಲ್) ನಡುವೆ ವಾಣಿಜ್ಯ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಪ್ರಾರಂಭಿಸಿರುವುದನ್ನು ನಾಯಕರು ಸ್ವಾಗತಿಸಿದರು. ಈ ಅಭೂತಪೂರ್ವ ಸಹ-ಉತ್ಪಾದನೆ ಮತ್ತು ತಂತ್ರಜ್ಞಾನ ವರ್ಗಾವಣೆ ಪ್ರಸ್ತಾಪದ ಪ್ರಗತಿಯನ್ನು ಬೆಂಬಲಿಸಲು ಸಹಯೋಗ ಹೆಚ್ಚಿಸುವುದರ ಮತ್ತು ತ್ವರಿತವಾಗಿ ಕೆಲಸ ಮಾಡುವುದಾಗಿ ಪುನರುಚ್ಚರಿಸಿದರು.
ಆಗಸ್ಟ್ 2023ರಲ್ಲಿ ಅಮೆರಿಕ ನೌಕಾಪಡೆ ಮತ್ತು ʻಮಜಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ʼ ಸಹಿ ಹಾಕಿದ ಇತ್ತೀಚಿನ ಒಪ್ಪಂದದೊಂದಿಗೆ ಎರಡನೇ ʻಮಾಸ್ಟರ್ ಹಡಗು ದುರಸ್ತಿʼ ಒಪ್ಪಂದ ಪೂರ್ಣಗೊಂಡಿರುವುದನ್ನು ನಾಯಕರು ಶ್ಲಾಘಿಸಿದರು. ಮುಂಚೂಣಿಯಲ್ಲಿ ನಿಯೋಜಿಸಲಾದ ಅಮೆರಿಕ ನೌಕಾಪಡೆಯ ಸ್ವತ್ತುಗಳು, ಇತರ ವಿಮಾನಗಳು ಹಾಗೂ ಹಡಗುಗಳ ನಿರ್ವಹಣೆ ಹಾಗೂ ದುರಸ್ತಿಯ ಕೇಂದ್ರವಾಗಿ ಭಾರತದ ಹೊರಹೊಮ್ಮುವುದನ್ನು ಮುನ್ನಡೆಸಲು ಎರಡೂ ದೇಶಗಳು ಪುನರುಚ್ಚರಿಸಿದವು. ಭಾರತದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರಿಶೀಲನೆ ಸಾಮರ್ಥ್ಯಗಳು ಹಾಗೂ ವಿಮಾನಗಳ ಘಟಕದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಅಮೆರಿಕದ ಉದ್ಯಮಗಳಿಂದ ಹೆಚ್ಚಿನ ಬದ್ಧತೆಗಳನ್ನು ಉಭಯ ನಾಯಕರು ಸ್ವಾಗತಿಸಿದರು.
ಪರಸ್ಪರ ಹಂಚಿಕೊಂಡ ಭದ್ರತಾ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಭಾರತೀಯ ರಕ್ಷಣಾ ಕ್ಷೇತ್ರಗಳ ನವೀನ ಕೆಲಸಗಳನ್ನು ಬಳಸಿಕೊಳ್ಳಲು ದೃಢವಾದ ಸಹಯೋಗ ಕಾರ್ಯಸೂಚಿಯನ್ನು ರೂಪಿಸಿರುವ ʻಭಾರತ-ಅಮೆರಿಕ ರಕ್ಷಣಾ ವೇಗವರ್ಧನೆ ಪರಿಸರವ್ಯವಸ್ಥೆʼ(ಇಂಡಸ್-ಎಕ್ಸ್). ತಂಡದ ಕೆಲಸವನ್ನು ನಾಯಕರು ಶ್ಲಾಘಿಸಿದರು. ʻಪೆನ್ ಸ್ಟೇಟ್ ಯೂನಿವರ್ಸಿಟಿʼಯ ಭಾಗವಹಿಸುವಿಕೆಯೊಂದಿಗೆ ʻಐಐಟಿ ಕಾನ್ಪುರʼದಲ್ಲಿ ಉದ್ಘಾಟನಾ ಶೈಕ್ಷಣಿಕ ಸ್ಟಾರ್ಟ್-ಅಪ್ ಪಾಲುದಾರಿಕೆಯನ್ನು ʻಇಂಡಸ್-ಎಕ್ಸ್ʼ ಆಯೋಜಿಸಿದೆ. ಆಗಸ್ಟ್ 2023ರಲ್ಲಿ ಅಮೆರಿಕದ ವೇಗವರ್ಧಕ ಸಂಸ್ಥೆಯ ʻಮೆಸರ್ಸ್ ಹ್ಯಾಕಿಂಗ್ 4 ಆಲೀಸ್ (ಎಚ್4 ಎಕ್ಸ್) ಹಾಗೂ ʻಐಐಟಿ ಹೈದರಾಬಾದ್ʼ ನೇತೃತ್ವದ ಕಾರ್ಯಾಗಾರದ ಮೂಲಕ ʻಭಾರತೀಯ ನವೋದ್ಯಮಗಳಿಗಾಗಿ ಜಂಟಿ ವೇಗವರ್ಧಕ ಕಾರ್ಯಕ್ರಮʼವನ್ನು ʻಇಂಡಸ್-ಎಕ್ಸ್ʼ ಪ್ರಾರಂಭಿಸಿದೆ. ರಕ್ಷಣಾ ತಂತ್ರಜ್ಞಾನದ ಸವಾಲುಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನವೋದ್ಯಮಗಳನ್ನು ಆಹ್ವಾನಿಸುವ ಎರಡು ಜಂಟಿ ಯೋಜನೆಗಳನ್ನು ಪ್ರಾರಂಭಿಸಲು ಭಾರತೀಯ ರಕ್ಷಣಾ ಸಚಿವಾಲಯದಿಂದ ʻರಕ್ಷಣಾ ಸಚಿವಾಲಯದ ನಾವೀನ್ಯತೆಗಳುʼ ಮತ್ತು ಅಮೆರಿಕ ರಕ್ಷಣಾ ಇಲಾಖೆಯ ʻರಕ್ಷಣಾ ನಾವೀನ್ಯತೆ ಘಟಕʼದ ಘೋಷಣೆಯನ್ನು ಉಭಯ ನಾಯಕರು ಸ್ವಾಗತಿಸಿದರು.
31 ʻಜನರಲ್ ಅಟಾಮಿಕ್ಸ್ ಎಂಕ್ಯೂ -9 ಬಿʼ (16 ಸ್ಕೈ ಗಾರ್ಡಿಯನ್ ಮತ್ತು 15 ಸೀ ಗಾರ್ಡಿಯನ್) ರಿಮೋಟ್ ಪೈಲಟ್ ವಿಮಾನಗಳು ಮತ್ತು ಅವುಗಳ ಸಂಬಂಧಿತ ಉಪಕರಣಗಳನ್ನು ಖರೀದಿಸಲು ಭಾರತದ ರಕ್ಷಣಾ ಸಚಿವಾಲಯ ಸಲ್ಲಿಸಿರುವ ಕೋರಿಕೆ ಪತ್ರವನ್ನು ಅಧ್ಯಕ್ಷ ಬೈಡನ್ ಸ್ವಾಗತಿಸಿದರು, ಇದು ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ಸಶಸ್ತ್ರ ಪಡೆಗಳ ಗುಪ್ತಚರ, ಕಣ್ಗಾವಲು ಮತ್ತು ಬೇಹುಗಾರಿಕೆ (ಐಎಸ್ಆರ್) ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.
ನಮ್ಮ ರಾಷ್ಟ್ರಗಳ ಹವಾಮಾನ, ಇಂಧನ ಪರಿವರ್ತನೆ ಮತ್ತು ಇಂಧನ ಭದ್ರತಾ ಅಗತ್ಯಗಳನ್ನು ಪೂರೈಸಲು ಅಗತ್ಯವಾದ ಸಂಪನ್ಮೂಲವಾಗಿ ಪರಮಾಣು ಶಕ್ತಿಯ ಮಹತ್ವವನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬೈಡನ್ ಪುನರುಚ್ಚರಿಸಿದರು. ಭಾರತ-ಅಮೆರಿಕಕ್ಕೆ ಅನುಕೂಲವಾಗುವಂತೆ ಅವಕಾಶಗಳನ್ನು ವಿಸ್ತರಿಸಲು ಎರಡೂ ಕಡೆಯ ಸಂಬಂಧಿತ ಘಟಕಗಳ ನಡುವೆ ತೀವ್ರವಾದ ಸಮಾಲೋಚನೆಗಳನ್ನು ಸ್ವಾಗತಿಸಿದರು. ಮುಂದಿನ ಪೀಳಿಗೆಯ ಸಣ್ಣ ಮಾಡ್ಯುಲರ್ ರಿಯಾಕ್ಟರ್ ತಂತ್ರಜ್ಞಾನಗಳನ್ನು ಸಹಯೋಗದ ಮೋಡ್ ನಲ್ಲಿ ಅಭಿವೃದ್ಧಿಪಡಿಸುವುದು ಸೇರಿದಂತೆ ಪರಮಾಣು ಶಕ್ತಿಯಲ್ಲಿ ಸಹಯೋಗವು ಇದರ ಭಾಗವಾಗಿದೆ. ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಭಾರತದ ಸದಸ್ಯತ್ವಕ್ಕೆ ಅಮೆರಿಕ ತನ್ನ ಬೆಂಬಲವನ್ನು ಪುನರುಚ್ಚರಿಸಿತು ಮತ್ತು ಈ ಗುರಿಯನ್ನು ಮುನ್ನಡೆಸಲು ಸಮಾನ ಮನಸ್ಕ ಪಾಲುದಾರರೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸಲು ಬದ್ಧತೆ ವ್ಯಕ್ತಪಡಿಸಿತು.
ಆಗಸ್ಟ್ 2023ರಲ್ಲಿ ʻಭಾರತ-ಅಮೆರಿಕ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ಕ್ರಿಯಾ ವೇದಿಕೆʼ[ಆರ್ಇ-ಟಿಎಪಿ] ಉದ್ಘಾಟನಾ ಸಭೆಯನ್ನು ನಾಯಕರು ಸ್ವಾಗತಿಸಿದರು. ಇದರ ಅಡಿಯಲ್ಲಿ ಉಭಯ ದೇಶಗಳು ಪ್ರಯೋಗಾಲಯ ಸಹಯೋಗ, ಪ್ರಾಯೋಗಿಕ ಮತ್ತು ನವೀನ ತಂತ್ರಜ್ಞಾನಗಳ ಪರೀಕ್ಷೆಯಲ್ಲಿ ತೊಡಗುತ್ತವೆ; ನವೀಕರಿಸಬಹುದಾದ ಇಂಧನ ಮತ್ತು ತಂತ್ರಜ್ಞಾನಗಳನ್ನು ಸಕ್ರಿಯಗೊಳಿಸಲು ನೀತಿ ಮತ್ತು ಯೋಜನೆಯಲ್ಲಿ ಸಹಯೋಗ; ಹೂಡಿಕೆ, ಇನ್ಕ್ಯುಬೇಷನ್ ಮತ್ತು ಔಟ್ರೀಚ್ ಕಾರ್ಯಕ್ರಮಗಳೂ ಇದರ ಭಾಗವಾಗಿವೆ. ಜೊತೆಗೆ, ಹೊಸ ಮತ್ತು ಉದಯೋನ್ಮುಖ ನವೀಕರಿಸಬಹುದಾದ ತಂತ್ರಜ್ಞಾನಗಳು ಮತ್ತು ಇಂಧನ ವ್ಯವಸ್ಥೆಗಳ ಬಳಕೆ ಮತ್ತು ಅಳವಡಿಕೆಯನ್ನು ವೇಗಗೊಳಿಸಲು ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿಯೂ ಇದರ ಭಾಗವಾಗಿದೆ.
ಸಾರಿಗೆ ವಲಯವನ್ನು ಇಂಗಾಲ ಮುಕ್ತಗೊಳಿಸುವ ಮಹತ್ವವನ್ನು ಪುನರುಚ್ಚರಿಸಿದ ನಾಯಕರು, ಭಾರತದಲ್ಲಿ ಸಾರಿಗೆಯನ್ನು ಎಲೆಕ್ಟ್ರಿಕ್ ವಾಹನಗಳತ್ತ ವಿಸ್ತ ವಿಸ್ತರಿಸುವ ಹಾಗೂ ಇದಕ್ಕಾಗಿ ಸಾರ್ವಜನಿಕ ಮತ್ತು ಖಾಸಗಿ ನಿಧಿಗಳ ಮೂಲಕ ಹಣಕಾಸು ಒದಗಿಸುವ ʻಪಾವತಿ ಭದ್ರತಾ ಕಾರ್ಯವಿಧಾನಕ್ಕೆ ಬೆಂಬಲವನ್ನು ಸ್ವಾಗತಿಸಿದರು. ಇದು ಭಾರತೀಯ ʻಪಿಎಂ ಇ-ಬಸ್ʼ ಸೇವಾ ಕಾರ್ಯಕ್ರಮ ಸೇರಿದಂತೆ 10,000 ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಬಸ್ಗಳ ಖರೀದಿಯನ್ನು ವೇಗಗೊಳಿಸುತ್ತದೆ. ಇದರಲ್ಲಿ ಸಂಬಂಧಿತ ಚಾರ್ಜಿಂಗ್ ಮೂಲಸೌಕರ್ಯವೂ ಸೇರಿದೆ. ಇ-ಮೊಬಿಲಿಟಿಗಾಗಿ ಜಾಗತಿಕ ಪೂರೈಕೆ ಸರಪಳಿಯನ್ನು ವೈವಿಧ್ಯಗೊಳಿಸಲು ಸಹಾಯ ಮಾಡಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿವೆ.
ಬಂಡವಾಳದ ವೆಚ್ಚವನ್ನು ಕಡಿಮೆ ಮಾಡಲು ಮತ್ತು ನವೀಕರಿಸಬಹುದಾದ ಗ್ರೀನ್ ಫೀಲ್ಡ್ ಇಂಧನ, ಬ್ಯಾಟರಿ ಸಂಗ್ರಹಣೆ ಮತ್ತು ಭಾರತದಲ್ಲಿ ಉದಯೋನ್ಮುಖ ಹಸಿರು ತಂತ್ರಜ್ಞಾನ ಯೋಜನೆಗಳ ನಿಯೋಜನೆಯನ್ನು ವೇಗಗೊಳಿಸಲು ಹೂಡಿಕೆ ವೇದಿಕೆಗಳ ರಚನೆಯನ್ನು ಭಾರತ ಮತ್ತು ಅಮೆರಿಕ ಮುನ್ನಡೆಸುತ್ತಿವೆ. ಈ ನಿಟ್ಟಿನಲ್ಲಿ, ʻಭಾರತದ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿʼ ಮತ್ತು ʻಯುಎಸ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ʼ ನವೀಕರಿಸಬಹುದಾದ ಮೂಲಸೌಕರ್ಯ ಹೂಡಿಕೆ ನಿಧಿಯನ್ನು ಸ್ಥಾಪಿಸಲು ತಲಾ 500 ದಶಲಕ್ಷ ಅಮೆರಿಕನ್ ಡಾಲರ್ವರೆಗೆ ಹಣವನ್ನು ಒದಗಿಸುವ ಉದ್ದೇಶದ ಪತ್ರಗಳನ್ನು ವಿನಿಮಯ ಮಾಡಿಕೊಂಡವು.
ಭಾರತ ಮತ್ತು ಅಮೆರಿಕ ನಡುವಿನ ಏಳನೇ ಮತ್ತು ಬಾಕಿ ಇದ್ದ ಕೊನೆಯ ʻವಿಶ್ವ ವ್ಯಾಪಾರ ಸಂಸ್ಥೆʼ(ಡಬ್ಲ್ಯುಟಿಒ) ವಿವಾದವನ್ನು ಬಗೆಹರಿಸಿರುವುದನ್ನು ನಾಯಕರು ಶ್ಲಾಘಿಸಿದರು. ಜೂನ್ 2023ರಲ್ಲಿ ʻಡಬ್ಲ್ಯುಟಿಒʼದಲ್ಲಿ ಬಾಕಿ ಇರುವ ಆರು ದ್ವಿಪಕ್ಷೀಯ ವ್ಯಾಪಾರ ವಿವಾದಗಳನ್ನು ಅಭೂತಪೂರ್ವವಾಗಿ ಇತ್ಯರ್ಥಪಡಿಸಲಾಗಿದೆ.
ʻಭಾರತ-ಅಮೆರಿಕ ವಾಣಿಜ್ಯ ಒಪ್ಪಂದದʼ ಅಡಿಯಲ್ಲಿ ಮಹತ್ವಾಕಾಂಕ್ಷೆಯ “ಇನ್ನೋವೇಶನ್ ಹ್ಯಾಂಡ್ಶೇಕ್” ಕಾರ್ಯಸೂಚಿಯನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ನಾಯಕರು ಸ್ವಾಗತಿಸಿದರು. ವಾಣಿಜ್ಯ ಒಪ್ಪಂದವು ಎರಡು ಮೂಲ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ (ಒಂದು ಭಾರತದಲ್ಲಿ ಮತ್ತು ಒಂದು ಅಮೆರಿಕದಲ್ಲಿ), ಇದರಲ್ಲಿ ನಮ್ಮ ಎರಡೂ ಕಡೆಯವರು ನವೋದ್ಯಮಗಳು, ಖಾಸಗಿ ಈಕ್ವಿಟಿ ಮತ್ತು ಸಾಹಸೋದ್ಯಮ ಬಂಡವಾಳ ಸಂಸ್ಥೆಗಳು, ಕಾರ್ಪೊರೇಟ್ ಹೂಡಿಕೆ ಇಲಾಖೆಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಟ್ಟುಗೂಡಿಸಲು ಎರಡೂ ದೇಶಗಳ ʻನಾವೀನ್ಯತೆ ಪರಿಸರ ವ್ಯವಸ್ಥೆಗಳʼ ನಡುವೆ ಸಂಪರ್ಕವನ್ನು ರೂಪಿಸಲು ಸಹಕರಿಸುತ್ತಾರೆ.
ಕ್ಯಾನ್ಸರ್ ಸಂಶೋಧನೆ, ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರವನ್ನು ನಾಯಕರು ಸ್ವಾಗತಿಸಿದರು ಮತ್ತು ನವೆಂಬರ್ 2023ರಲ್ಲಿ ʻಭಾರತ-ಅಮೆರಿಕ ಕ್ಯಾನ್ಸರ್ ಸಂವಾದʼ ಆರಂಭವನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. ಈ ಸಂವಾದವು ʻಕ್ಯಾನ್ಸರ್ ಜೀನೋಮಿಕ್ಸ್ʼನಲ್ಲಿ ಜ್ಞಾನಹೆಚ್ಚಳ, ನಗರ ಮತ್ತು ಗ್ರಾಮೀಣ ಸಮುದಾಯಗಳು ಸೇರಿದಂತೆ ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸಲು ಮತ್ತು ಬಲಪಡಿಸಲು ಹೊಸ ರೋಗನಿರ್ಣಯ ಮತ್ತು ಚಿಕಿತ್ಸಕಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತದೆ. ವಾಷಿಂಗ್ಟನ್ ಡಿ.ಸಿ.ಯಲ್ಲಿ 2023ರ ಅಕ್ಟೋಬರ್ನಲ್ಲಿ ನಡೆಯಲಿರುವ ಮುಂಬರುವ ʻಅಮೆರಿಕ-ಭಾರತ ಆರೋಗ್ಯ ಸಂವಾದʼವನ್ನು ನಾಯಕರು ಎತ್ತಿ ತೋರಿಸಿದರು. ನಮ್ಮ ಎರಡೂ ರಾಷ್ಟ್ರಗಳ ನಡುವೆ ವೈಜ್ಞಾನಿಕ, ನಿಯಂತ್ರಕ ಮತ್ತು ಆರೋಗ್ಯ ಸಹಕಾರವನ್ನು ಬಲಪಡಿಸುವ ಮತ್ತು ಸುಗಮಗೊಳಿಸುವ ಜಂಟಿ ಬದ್ಧತೆಯನ್ನು ಒತ್ತಿಹೇಳಿದರು.
ಎರಡನೇ ಮಹಾಯುದ್ಧದಲ್ಲಿ ಹುತಾತ್ಮರಾದ ಅಮೆರಿಕದ ಸೇವಾ ಸದಸ್ಯರ ಅವಶೇಷಗಳನ್ನು ಭಾರತದಿಂದ ವಶಪಡಿಸಿಕೊಳ್ಳಲು ಅನುಕೂಲವಾಗುವಂತೆ ಅಮೆರಿಕದ ರಕ್ಷಣಾ ಇಲಾಖೆ ಪಿಒಡಬ್ಲ್ಯೂ / ಎಂಐಎ ಅಕೌಂಟಿಂಗ್ ಏಜೆನ್ಸಿ ಮತ್ತು ಆಂಥ್ರೊಪೊಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎಎನ್ಎಸ್ಐ) ನಡುವಿನ ಒಪ್ಪಂದದ ನವೀಕರಣವನ್ನು ನಾಯಕರು ಸ್ವಾಗತಿಸಿದರು.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬೈಡನ್ ಅವರು ತಮ್ಮ ಸರ್ಕಾರಗಳು, ಕೈಗಾರಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಉನ್ನತ ಮಟ್ಟದ ಸಂಬಂಧವನ್ನು ಉಳಿಸಿಕೊಳ್ಳಲು ಮತ್ತು ಶಾಶ್ವತ ಭಾರತ-ಅಮೆರಿಕ ಸಂಬಂಧಕ್ಕಾಗಿ ತಮ್ಮ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಂಕಲ್ಪ ತೊಟ್ಟರು. ಉಜ್ವಲ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ನಮ್ಮ ಜನರ ಆಕಾಂಕ್ಷೆಗಳನ್ನು ಮುನ್ನಡೆಸುವ, ಜಾಗತಿಕ ಒಳಿತಿಗೆ ಸೇವೆ ಸಲ್ಲಿಸುವ ಮತ್ತು ಮುಕ್ತ, ಮುಕ್ತ, ಎಲ್ಲರನ್ನೂ ಒಳಗೊಂಡ ಮತ್ತು ಸ್ಥಿತಿಸ್ಥಾಪಕ ಇಂಡೋ-ಪೆಸಿಫಿಕ್ಗೆ ಕೊಡುಗೆ ನೀಡುವ ಪಾಲುದಾರಿಕೆಗೆ ಬದ್ಧತೆ ವ್ಯಕ್ತಪಡಿಸಿದರು.
*****
Prime Minister @narendramodi and @POTUS @JoeBiden are holding talks at 7, Lok Kalyan Marg in Delhi.
— PMO India (@PMOIndia) September 8, 2023
Their discussions include a wide range of issues and will further deepen the bond between India and USA. pic.twitter.com/PWGBOZIwNT
Happy to have welcomed @POTUS @JoeBiden to 7, Lok Kalyan Marg. Our meeting was very productive. We were able to discuss numerous topics which will further economic and people-to-people linkages between India and USA. The friendship between our nations will continue to play a… pic.twitter.com/Yg1tz9kGwQ
— Narendra Modi (@narendramodi) September 8, 2023