Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ – ನ್ಯೂಜಿಲೆಂಡ್ ಜಂಟಿ ಹೇಳಿಕೆ

ಭಾರತ – ನ್ಯೂಜಿಲೆಂಡ್ ಜಂಟಿ ಹೇಳಿಕೆ


ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಗೌರವಾನ್ವಿತ ನ್ಯೂಜಿಲೆಂಡ್ ಪ್ರಧಾನಮಂತ್ರಿ  ಶ್ರೀ ಕ್ರಿಸ್ಟೋಫರ್ ಲಕ್ಸನ್ ಅವರು 2025ರ ಮಾರ್ಚ್ 16 ರಿಂದ 20 ರವರೆಗೆ ಭಾರತಕ್ಕೆ ಅಧಿಕೃತ ಭೇಟಿಯಲ್ಲಿದ್ದಾರೆ. ಪ್ರಧಾನಮಂತ್ರಿ ಯಾಗಿ ಭಾರತಕ್ಕೆ ಮೊದಲ ಭೇಟಿ ನೀಡಿರುವ ಶ್ರೀ ಲಕ್ಸನ್  ಅವರು ನವದೆಹಲಿ ಮತ್ತು ಮುಂಬೈಗೆ ಭೇಟಿ ನೀಡುತ್ತಿದ್ದು, ಪ್ರವಾಸೋದ್ಯಮ ಮತ್ತು ಆತಿಥ್ಯ ಸಚಿವರಾದ ಶ್ರೀ ಲೂಯಿಸ್ ಅಪ್‌ಸ್ಟನ್, ಜನಾಂಗೀಯ ಸಮುದಾಯಗಳು ಮತ್ತು ಕ್ರೀಡೆ ಮತ್ತು ಮನರಂಜನಾ ಸಚಿವರಾದ ಶ್ರೀ ಮಾರ್ಕ್ ಮಿಚೆಲ್ ಮತ್ತು ವ್ಯಾಪಾರ ಮತ್ತು ಹೂಡಿಕೆ, ಕೃಷಿ ಮತ್ತು ಅರಣ್ಯ ಸಚಿವರಾದ ಶ್ರೀ ಟಾಡ್ ಮೆಕ್‌ ಕ್ಲೇ ಮತ್ತು ಅಧಿಕಾರಿಗಳು ಮತ್ತು ಉದ್ಯಮಗಳು, ವಲಸೆ ಸಮುದಾಯ, ಮಾಧ್ಯಮ ಮತ್ತು ಸಾಂಸ್ಕೃತಿಕ ಗುಂಪುಗಳ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಅವರ ಜೊತೆಗಿದೆ.

ನವದೆಹಲಿಯಲ್ಲಿ ಪ್ರಧಾನಮಂತ್ರಿ  ಲಕ್ಸನ್ ಅವರಿಗೆ ಆತ್ಮೀಯ ಮತ್ತು ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಪ್ರಧಾನಮಂತ್ರಿ  ಮೋದಿ ಅವರು ಪ್ರಧಾನಮಂತ್ರಿ  ಲಕ್ಸನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಪ್ರಧಾನಮಂತ್ರಿ  ಮೋದಿ ಮಾರ್ಚ್ 17, 2025 ರಂದು ನವದೆಹಲಿಯಲ್ಲಿ ರೈಸಿನಾ ಸಂವಾದದ 10ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ, ಪ್ರಧಾನಮಂತ್ರಿ ಲಕ್ಸನ್ ಮುಖ್ಯ ಅತಿಥಿಯಾಗಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ನ್ಯೂಜಿಲೆಂಡ್ ಪ್ರಧಾನಮಂತ್ರಿ ಯವರು ರಾಜಘಾಟ್ ನಲ್ಲಿ ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು ಮತ್ತು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬೆಳೆಯುತ್ತಿರುವ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ತಮ್ಮ ಹಂಚಿಕೆಯ ಆಶಯವನ್ನು ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು, ಇದು ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಬಲವಾದ ಜನರು-ಜನರ ನಡುವಿನ ಸಂಬಂಧಗಳಲ್ಲಿ ನೆಲೆಗೊಂಡಿದೆ. ದ್ವಿಪಕ್ಷೀಯ ಸಂಬಂಧದಲ್ಲಿ ಮತ್ತಷ್ಟು ಬೆಳವಣಿಗೆಗೆ ಗಮನಾರ್ಹ ಸಾಮರ್ಥ್ಯವಿದೆ ಎಂದು ಉಭಯ ನಾಯಕರು ಹೇಳಿದರು ಮತ್ತು ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಶಿಕ್ಷಣ ಮತ್ತು ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ ತಂತ್ರಜ್ಞಾನ, ಬಾಹ್ಯಾಕಾಶ, ಜನರ ಚಲನಶೀಲತೆ ಮತ್ತು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಕಟವಾಗಿ ಸಹಕರಿಸಲು ಸಹಮತ ಸೂಚಿಸಿದರು.

ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಪ್ರಧಾನ ಮಂತ್ರಿಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಬಹುಪಕ್ಷೀಯ ಸಹಕಾರವನ್ನು ಬಲಪಡಿಸಲು ಒಪ್ಪಿಕೊಂಡರು. ನಾವು ಹೆಚ್ಚುತ್ತಿರುವ ಅನಿಶ್ಚಿತ ಮತ್ತು ಅಪಾಯಕಾರಿ ಜಗತ್ತನ್ನು ಎದುರಿಸುತ್ತಿದ್ದೇವೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಸಾಗರ ರಾಷ್ಟ್ರಗಳಾಗಿ, ಭಾರತ ಮತ್ತು ನ್ಯೂಜಿಲೆಂಡ್ ಮುಕ್ತ, ಎಲ್ಲರನ್ನೂ ಒಳಗೊಂಡ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ ನಲ್ಲಿ ಬಲವಾದ ಮತ್ತು ಸಾಮಾನ್ಯ ಆಸಕ್ತಿಯನ್ನು ಹೊಂದಿವೆ, ಅಲ್ಲಿ ನಿಯಮ ಆಧಾರಿತ ಅಂತರರಾಷ್ಟ್ರೀಯ ಕ್ರಮವನ್ನು ಎತ್ತಿಹಿಡಿಯಲಾಗುತ್ತದೆ ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ವಿಶೇಷವಾಗಿ 1982ರ ವಿಶ್ವಸಂಸ್ಥೆಯ ಸಮುದ್ರ ಕಾನೂನಿನ ಸಮಾವೇಶಕ್ಕೆ (UNCLOS) ಅನುಗುಣವಾಗಿ ನ್ಯಾವಿಗೇಷನ್ ಮತ್ತು ಓವರ್‌ಫ್ಲೈಟ್ ಮತ್ತು ಸಮುದ್ರದ ಇತರ ಕಾನೂನುಬದ್ಧ ಬಳಕೆಗಳ ಸ್ವಾತಂತ್ರ್ಯದ ಹಕ್ಕನ್ನು ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ವಿವಾದಗಳ ಶಾಂತಿಯುತ ಪರಿಹಾರವನ್ನು ಅನುಸರಿಸುವ ಅಗತ್ಯವನ್ನು ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ವಿಶೇಷವಾಗಿ UNCLOS ಗೆ ಅನುಗುಣವಾಗಿ ವಿವಾದಗಳ ಶಾಂತಿಯುತ ಪರಿಹಾರವನ್ನು ಅನುಸರಿಸುವ ಅಗತ್ಯವನ್ನು ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು.

ನ್ಯೂಜಿಲೆಂಡ್‌ ಜನಸಂಖ್ಯೆಯಲ್ಲಿ ಸುಮಾರು ಆರು ಪ್ರತಿಶತದಷ್ಟು ಭಾರತೀಯ ಮೂಲದ ಜನರಿದ್ದು, ಎರಡೂ ದೇಶಗಳ ಜನರ ನಡುವಿನ ಬಲವಾದ ಬಾಂಧವ್ಯದ ಬಗ್ಗೆ ಪ್ರಧಾನ ಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. ನ್ಯೂಜಿಲೆಂಡ್‌ ನಲ್ಲಿ ಭಾರತೀಯ ವಲಸಿಗರ ಗಮನಾರ್ಹ ಕೊಡುಗೆ ಮತ್ತು ಎರಡೂ ದೇಶಗಳ ನಡುವಿನ ಜನರು-ಜನರ ನಡುವಿನ ಸಂಬಂಧವನ್ನು ಸುಗಮಗೊಳಿಸುವಲ್ಲಿ ಅವರ ಸಕಾರಾತ್ಮಕ ಪಾತ್ರವನ್ನು ಅವರು ಶ್ಲಾಘಿಸಿದರು. ನ್ಯೂಜಿಲೆಂಡ್‌ ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಸಮುದಾಯದ ಮತ್ತು ಭಾರತದಲ್ಲಿನ ನ್ಯೂಜಿಲೆಂಡ್‌ ನವರು ಮತ್ತು ಭಾರತಕ್ಕೆ ಭೇಟಿ ನೀಡುವವರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಉಭಯ ನಾಯಕರು ಒಪ್ಪಿಕೊಂಡರು.

ವ್ಯಾಪಾರ, ಹೂಡಿಕೆ ಮತ್ತು ಹಣಕಾಸು ವಿಷಯಗಳಲ್ಲಿ ಸಹಕಾರ:

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಿರಂತರ ವ್ಯಾಪಾರ ಮತ್ತು ಹೂಡಿಕೆಯ ಹರಿವನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ವಿಸ್ತರಿಸುವ ಸಾಮರ್ಥ್ಯವನ್ನು ಮತ್ತಷ್ಟು ಅನ್ವೇಷಿಸಲು ಕರೆ ನೀಡಿದರು. ಎರಡೂ ಕಡೆಯ ವ್ಯವಹಾರಗಳು ಸಂಪರ್ಕಗಳನ್ನು ಬೆಳೆಸಿಕೊಳ್ಳುವಂತೆ; ಎರಡು ಆರ್ಥಿಕತೆಗಳಿಗೆ ಪೂರಕವಾಗುವಂತೆ ಉದಯೋನ್ಮುಖ ಆರ್ಥಿಕ ಮತ್ತು ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವಂತೆ ಅವರು ಪ್ರೋತ್ಸಾಹಿಸಿದರು.

ದ್ವಿಪಕ್ಷೀಯ ಸಹಕಾರದಲ್ಲಿ ನಡೆಯುತ್ತಿರುವ ಬಲವಾದ ಆವೇಗವನ್ನು ಪ್ರತಿಬಿಂಬಿಸುವ ಹೆಚ್ಚಿನ ದ್ವಿಮುಖ ಹೂಡಿಕೆಗೆ ನಾಯಕರು ಕರೆ ನೀಡಿದರು.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧವನ್ನು ಹೆಚ್ಚಿಸಲು ಮತ್ತು ಅದರ ಬಳಕೆಯಾಗದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.

ಆಳವಾದ ಆರ್ಥಿಕ ಏಕೀಕರಣವನ್ನು ಸಾಧಿಸಲು ಸಮತೋಲಿತ, ಮಹತ್ವಾಕಾಂಕ್ಷೆಯ, ಸಮಗ್ರ ಮತ್ತು ಪರಸ್ಪರ ಲಾಭದಾಯಕ ವ್ಯಾಪಾರ ಒಪ್ಪಂದಕ್ಕಾಗಿ ಎಫ್‌ ಟಿ ಎ ಮಾತುಕತೆಗಳ ಆರಂಭವನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಸಮಗ್ರ ವ್ಯಾಪಾರ ಒಪ್ಪಂದವು ಒಂದು ಪ್ರಮುಖ ಅವಕಾಶವನ್ನು ಒದಗಿಸುತ್ತದೆ ಎಂದು ನಾಯಕರು ಒಪ್ಪಿಕೊಂಡರು. ಪ್ರತಿ ದೇಶದ ಸಾಮರ್ಥ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಅವರ ಕಾಳಜಿಗಳನ್ನು ಪರಿಹರಿಸುವ ಮೂಲಕ ಮತ್ತು ಸವಾಲುಗಳನ್ನು ಎದುರಿಸುವ ಮೂಲಕ, ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಪರಸ್ಪರ ಲಾಭದಾಯಕ ವ್ಯಾಪಾರ ಮತ್ತು ಹೂಡಿಕೆಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಎರಡೂ ಪಕ್ಷಗಳಿಗೆ ಸಮಾನ ಪ್ರಯೋಜನಗಳನ್ನು ಮತ್ತು ಪೂರಕತೆಯನ್ನು ಖಾತರಿಪಡಿಸುತ್ತದೆ. ಈ ಮಾತುಕತೆಗಳನ್ನು ಸಾಧ್ಯವಾದಷ್ಟು ಬೇಗ ನಿರ್ಣಯದ ಕಡೆಗೆ ಕೊಂಡೊಯ್ಯಲು ಹಿರಿಯ ಪ್ರತಿನಿಧಿಗಳನ್ನು ನೇಮಿಸಲು ನಾಯಕರು ಬದ್ಧತೆ ತೋರಿದರು.

ಎಫ್‌ ಟಿ ಎ ಮಾತುಕತೆಯ ಸಂದರ್ಭದಲ್ಲಿ, ಡಿಜಿಟಲ್ ಪಾವತಿ ವಲಯದಲ್ಲಿ ಸಹಕಾರದ ಆರಂಭಿಕ ಅನುಷ್ಠಾನವನ್ನು ಅನ್ವೇಷಿಸಲು ಎರಡೂ ಕಡೆಯ ಸಂಬಂಧಿತ ಅಧಿಕಾರಿಗಳ ನಡುವಿನ ಚರ್ಚೆಗಳಿಗೆ ನಾಯಕರು ಒಪ್ಪಿಕೊಂಡರು.

2024 ರಲ್ಲಿ ಸಹಿ ಹಾಕಲಾದ ಕಸ್ಟಮ್ಸ್ ಸಹಕಾರ ಒಪ್ಪಂದ (ಸಿಸಿಎ) ಆಶ್ರಯದಲ್ಲಿ ಅಧಿಕೃತ ಆರ್ಥಿಕ ನಿರ್ವಾಹಕರ ಪರಸ್ಪರ ಗುರುತಿಸುವಿಕೆ ಒಪ್ಪಂದ (AEO-MRA)ಕ್ಕೆ ಸಹಿ ಹಾಕಿರುವುದನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಇದು ಕಸ್ಟಮ್ಸ್ ಅಧಿಕಾರಿಗಳ ನಡುವಿನ ನಿಕಟ ಸಹಕಾರದ ಮೂಲಕ ಎರಡೂ ದೇಶಗಳ ನಡುವೆ ಸರಕುಗಳ ಸುಲಭ ಸಾಗಣೆಯನ್ನು ಸುಗಮಗಿಳಿಸುತ್ತದೆ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುತ್ತದೆ.

ತೋಟಗಾರಿಕೆ ಮತ್ತು ಅರಣ್ಯ ಕ್ಷೇತ್ರದಲ್ಲಿ ಹೊಸ ಸಹಕಾರವನ್ನು ನಾಯಕರು ಸ್ವಾಗತಿಸಿದರು, ಅವುಗಳಲ್ಲಿ: ಜ್ಞಾನ ಮತ್ತು ಸಂಶೋಧನಾ ವಿನಿಮಯವನ್ನು ಉತ್ತೇಜಿಸುವ ಮೂಲಕ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ತೋಟಗಾರಿಕೆ ಸಹಕಾರ ಜ್ಞಾಪಕ ಪತ್ರಕ್ಕೆ ಸಹಿ ಹಾಕುವುದು, ಕೊಯ್ಲಿನ ನಂತರದ ಮತ್ತು ಮಾರುಕಟ್ಟೆ ಮೂಲಸೌಕರ್ಯ ಅಭಿವೃದ್ಧಿ; ಮತ್ತು ನೀತಿ ಸಂವಾದಗಳು ಮತ್ತು ತಾಂತ್ರಿಕ ವಿನಿಮಯಗಳನ್ನು ಪ್ರೋತ್ಸಾಹಿಸುವ ಅರಣ್ಯ ಸಹಕಾರದ ಕುರಿತಾದ ಉದ್ದೇಶ ಪತ್ರಕ್ಕೆ ಸಹಿ ಹಾಕುವುದು ಸೇರಿವೆ.

ಆರ್ಥಿಕ ಬೆಳವಣಿಗೆಯನ್ನು ಸೃಷ್ಟಿಸುವಲ್ಲಿ, ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವಲ್ಲಿ ಮತ್ತು ಎರಡೂ ದೇಶಗಳ ಜನರ ನಡುವೆ ಹೆಚ್ಚಿನ ತಿಳುವಳಿಕೆಯನ್ನು ಸೃಷ್ಟಿಸುವಲ್ಲಿ ಪ್ರವಾಸೋದ್ಯಮ ವಹಿಸುವ ಸಕಾರಾತ್ಮಕ ಪಾತ್ರವನ್ನು ನಾಯಕರು ಗುರುತಿಸಿದರು. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಹೆಚ್ಚುತ್ತಿರುವ ಪ್ರವಾಸಿಗರ ಹರಿವನ್ನು ಅವರು ಸ್ವಾಗತಿಸಿದರು. ಭಾರತ-ನ್ಯೂಜಿಲೆಂಡ್ ವಾಯು ಸೇವೆಗಳ ಒಪ್ಪಂದದ ನವೀಕರಣವನ್ನು ಅವರು ಶ್ಲಾಘಿಸಿದರು ಮತ್ತು ಎರಡೂ ದೇಶಗಳ ನಡುವೆ ನೇರ (ನಿಲುಗಡೆ ರಹಿತ) ವಿಮಾನ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ತಮ್ಮ ವಿಮಾನಯಾನ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಒಪ್ಪಿಕೊಂಡರು.

ರಾಜಕೀಯ, ರಕ್ಷಣಾ ಮತ್ತು ಭದ್ರತಾ ಸಹಕಾರ:

ಉಭಯ ಪ್ರಧಾನಮಂತ್ರಿಗಳು ಸಂಸದೀಯ ವಿನಿಮಯದ ಮಹತ್ವವನ್ನು ಗುರುತಿಸಿದರು ಮತ್ತು ಎರಡೂ ದೇಶಗಳ ನಡುವೆ ಸಂಸದೀಯ ನಿಯೋಗಗಳ ನಿಯಮಿತ ಭೇಟಿಗಳನ್ನು ಪ್ರೋತ್ಸಾಹಿಸಿದರು.

ಕಳೆದ ಶತಮಾನದಲ್ಲಿ ಪ್ರಪಂಚದಾದ್ಯಂತ ಪರಸ್ಪರ ಹೋರಾಡಿ ಸೇವೆ ಸಲ್ಲಿಸಿದ ಭಾರತ ಮತ್ತು ನ್ಯೂಜಿಲೆಂಡ್ ಸೇನಾ ಸಿಬ್ಬಂದಿಯ ತ್ಯಾಗದ ಹಂಚಿಕೆಯ ಇತಿಹಾಸವನ್ನು ಪ್ರಧಾನಮಂತ್ರಿಗಳು ಶ್ಲಾಘಿಸಿದರು.

ಮಿಲಿಟರಿ ಅಭ್ಯಾಸಗಳಲ್ಲಿ ಭಾಗವಹಿಸುವಿಕೆ, ಸಿಬ್ಬಂದಿ ಕಾಲೇಜು ವಿನಿಮಯ, ನೌಕಾ ಹಡಗುಗಳ ನಿಯಮಿತ ಬಂದರು ನಿಲುಗಡೆಗಳು ಮತ್ತು ಉನ್ನತ ಮಟ್ಟದ ರಕ್ಷಣಾ ನಿಯೋಗಗಳ ವಿನಿಮಯ ಸೇರಿದಂತೆ ರಕ್ಷಣಾ ಕಾರ್ಯಗಳಲ್ಲಿ ಮುಂದುವರಿದ ಪ್ರಗತಿಯನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಭಾರತೀಯ ನೌಕಾಪಡೆಯ ನೌಕಾಯಾನ ಹಡಗು ತಾರಿಣಿ 2024ರ ಡಿಸೆಂಬರ್‌ನಲ್ಲಿ ನ್ಯೂಜಿಲೆಂಡ್‌ ನ ಕ್ರೈಸ್ಟ್‌ಚರ್ಚ್‌ ಲಿಟ್ಟೆಲ್ಟನ್‌ ಬಂದರಿಗೆ ಭೇಟಿ ನೀಡಿದ್ದನ್ನು ಅವರು ನೆನಪಿಸಿಕೊಂಡರು. ಅವರು ರಾಯಲ್ ನ್ಯೂಜಿಲೆಂಡ್ ನೌಕಾಪಡೆಯ ಹಡಗು ಎಚ್‌ ಎಂ ಎನ್‌ ಜಡ್‌ ಎಸ್‌ ಟೆ ಕಹಾ ಮುಂಬೈ ಬಂದರಿಗೆ ಬರಲಿರುವುದನ್ನು ಸಹ ಉಲ್ಲೇಖಿಸಿದರು.

ರಕ್ಷಣಾ ಸಹಕಾರಕ್ಕಾಗಿ ಭಾರತ-ನ್ಯೂಜಿಲೆಂಡ್ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಇದು ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ನಿಯಮಿತ ದ್ವಿಪಕ್ಷೀಯ ರಕ್ಷಣಾ ಪಾಲುದಾರಿಕೆಯನ್ನು ಸ್ಥಾಪಿಸುತ್ತದೆ. ಸಮುದ್ರ ಮಾರ್ಗಗಳ ಸಂವಹನದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಎರಡೂ ಕಡೆಯವರು ಗಮನಿಸಿದರು ಮತ್ತು ಕಡಲ ಸುರಕ್ಷತೆಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲು ನಿಯಮಿತ ಮಾತುಕತೆಯ ಅಗತ್ಯವಿದೆ ಎಂದು ಒಪ್ಪಿಕೊಂಡರು.

ಜಂಟಿ ಕಡಲ ಪಡೆಗಳಿಗೆ ಭಾರತ ಸೇರ್ಪಡೆಯಾಗಿರುವುದನ್ನು ನ್ಯೂಜಿಲೆಂಡ್ ಸ್ವಾಗತಿಸಿತು. ಕಮಾಂಡ್ ಟಾಸ್ಕ್ ಫೋರ್ಸ್ 150 ರ ನ್ಯೂಜಿಲೆಂಡ್ ಕಮಾಂಡ್ ಸಮಯದಲ್ಲಿ ರಕ್ಷಣಾ ಸಂಬಂಧಗಳಲ್ಲಿನ ಪ್ರಗತಿಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

ರಕ್ಷಣಾ ಕಾಲೇಜುಗಳು ಸೇರಿದಂತೆ ಪರಸ್ಪರ ಆಧಾರದ ಮೇಲೆ ಅಧಿಕಾರಿಗಳ ನಿಯಮಿತ ತರಬೇತಿ ವಿನಿಮಯವನ್ನು ಇಬ್ಬರೂ ನಾಯಕರು ಶ್ಲಾಘಿಸಿದರು. ವರ್ಧಿತ ಸಾಮರ್ಥ್ಯ ನಿರ್ಮಾಣ ಸಹಕಾರಕ್ಕೆ ಎರಡೂ ಕಡೆಯವರು ಒಪ್ಪಿಕೊಂಡರು.

ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ದಲ್ಲಿ ಸೇರಲು ನ್ಯೂಜಿಲೆಂಡ್ ಆಸಕ್ತಿ ಹೊಂದಿದೆ ಎಂದು ಪ್ರಧಾನಮಂತ್ರಿ  ಲಕ್ಸನ್ ಹೇಳಿದರು. ಕಡಲ ಪ್ರದೇಶವನ್ನು ನಿರ್ವಹಿಸಲು, ಸಂರಕ್ಷಿಸಲು ಮತ್ತು ಉಳಿಸಿಕೊಳ್ಳಲು ಬಯಸುವ ಸಮಾನ ಮನಸ್ಕ ದೇಶಗಳೊಂದಿಗಿನ ಈ ಪಾಲುದಾರಿಕೆಗೆ ನ್ಯೂಜಿಲೆಂಡ್ ಅನ್ನು ಪ್ರಧಾನಮಂತ್ರಿ  ಮೋದಿ ಸ್ವಾಗತಿಸಿದರು. ಗುಜರಾತ್‌ ನ ಲೋಥಾಲ್‌ ನಲ್ಲಿ ಸ್ಥಾಪಿಸಲಾಗುತ್ತಿರುವ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ (ಎನ್‌ ಎಂ ಎಚ್‌ ಸಿ) ಕುರಿತು ತಜ್ಞರ ನಡುವೆ ಚರ್ಚೆಗಳು ನಡೆಯುತ್ತಿದ್ದು, ಕಡಲ ರಾಷ್ಟ್ರಗಳಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮತ್ತಷ್ಟು ಸಹಕಾರವನ್ನು ಸಹ ಅನ್ವೇಷಿಸಲಾಗುತ್ತಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ವಿಪತ್ತು ನಿರ್ವಹಣೆಯಲ್ಲಿ ಸಹಕಾರ:

ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭವಾಗಿ ಸಂಶೋಧನೆ, ವೈಜ್ಞಾನಿಕ ಸಂಪರ್ಕಗಳು, ತಂತ್ರಜ್ಞಾನ ಪಾಲುದಾರಿಕೆಗಳು ಮತ್ತು ನಾವೀನ್ಯತೆಗಳ ಮಹತ್ವವನ್ನು ಇಬ್ಬರೂ ನಾಯಕರು ಗಮನಿಸಿದರು ಮತ್ತು ಪರಸ್ಪರ ಹಿತಾಸಕ್ತಿಯಿಂದ ಅಂತಹ ಅವಕಾಶಗಳನ್ನು ಅನ್ವೇಷಿಸುವಂತೆ ಕರೆ ನೀಡಿದರು. ವ್ಯವಹಾರಗಳು ಮತ್ತು ಕೈಗಾರಿಕೆಗಳ ನಡುವಿನ ನಿಕಟ ಸಹಯೋಗದ ಮೂಲಕ ಗುರುತಿಸಲಾದ ಕ್ಷೇತ್ರಗಳಲ್ಲಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ವಾಣಿಜ್ಯೀಕರಣಗೊಳಿಸಲು ಬಲವಾದ ಸಹಯೋಗದ ಅಗತ್ಯವನ್ನು ಎರಡೂ ಕಡೆಯವರು ಒತ್ತಿ ಹೇಳಿದರು.

ಹವಾಮಾನ ಬದಲಾವಣೆ ಮತ್ತು ಇಂಗಾಲದ ಕಡಿಮೆ ಹೊರಸೂಸುವಿಕೆಯ ಹವಾಮಾನ ಸ್ಥಿತಿಸ್ಥಾಪಕ ಆರ್ಥಿಕತೆಗಳಿಗೆ ಪರಿವರ್ತನೆಯಿಂದ ತಮ್ಮ ಆರ್ಥಿಕತೆಗೆ ಎದುರಾಗುವ ಸವಾಲುಗಳನ್ನು ಎರಡೂ ಕಡೆಯವರು ಗುರುತಿಸಿದರು. ಅಂತರರಾಷ್ಟ್ರೀಯ ಸೌರ ಒಕ್ಕೂಟದಲ್ಲಿ (ಐ ಎಸ್‌ ಎ) ಭಾರತದ ನಾಯಕತ್ವವನ್ನು ಪ್ರಧಾನಮಂತ್ರಿ  ಲಕ್ಸನ್ ಸ್ವಾಗತಿಸಿದರು ಮತ್ತು 2024 ರಿಂದ ಸದಸ್ಯನಾಗಿರುವ ನ್ಯೂಜಿಲೆಂಡ್‌ ನ ಬಲವಾದ ಬೆಂಬಲವನ್ನು ಪುನರುಚ್ಚರಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್‌ ಡಿ ಜಿ ಗಳು), ಪ್ಯಾರಿಸ್ ಹವಾಮಾನ ಒಪ್ಪಂದ ಮತ್ತು ವಿಪತ್ತು ಅಪಾಯ ಕಡಿತಕ್ಕಾಗಿ ಸೆಂಡೈ ಚೌಕಟ್ಟಿನ ಉದ್ದೇಶಗಳನ್ನು ಸಾಧಿಸಲು ವ್ಯವಸ್ಥೆಗಳು ಮತ್ತು ಮೂಲಸೌಕರ್ಯವನ್ನು ಸ್ಥಿತಿಸ್ಥಾಪಕವಾಗಿಸುವ ಗುರಿಯನ್ನು ಹೊಂದಿರುವ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟಕ್ಕೆ (ಸಿ ಡಿ ಆರ್‌ ಐ) ನ್ಯೂಜಿಲೆಂಡ್ ಸೇರ್ಪಡೆಯನ್ನು ಪ್ರಧಾನಮಂತ್ರಿ  ಮೋದಿ ಸ್ವಾಗತಿಸಿದರು.

ಭೂಕಂಪನ ತಗ್ಗಿಸುವಿಕೆ ಸಹಕಾರಕ್ಕಾಗಿ ಭಾರತ ಮತ್ತು ನ್ಯೂಜಿಲೆಂಡ್‌ ನ ಸಂಬಂಧಿತ ಅಧಿಕಾರಿಗಳ ನಡುವೆ ಸಹಕಾರ ಒಪ್ಪಂದದತ್ತ ಕೆಲಸ ಮಾಡುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಇದು ಭೂಕಂಪನ ಸಿದ್ಧತೆ, ತುರ್ತು ಪ್ರತಿಕ್ರಿಯೆ ಕಾರ್ಯವಿಧಾನ ಮತ್ತು ಸಾಮರ್ಥ್ಯ ವರ್ಧನೆಯಲ್ಲಿ ಅನುಭವಗಳ ವಿನಿಮಯಕ್ಕೆ ಅನುಕೂಲವಾಗುತ್ತದೆ.

ಶಿಕ್ಷಣ, ಚಲನಶೀಲತೆ, ಕ್ರೀಡೆ ಮತ್ತು ಜನರ ನಡುವಿನ ಸಂಬಂಧಗಳು:

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಬೆಳೆಯುತ್ತಿರುವ ಶಿಕ್ಷಣ ಮತ್ತು ಸಮುದಾಯದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಹೆಚ್ಚಿನ ಸಾಮರ್ಥ್ಯವಿದೆ ಎಂದು ಉಭಯ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು. ವಿಜ್ಞಾನ, ನಾವೀನ್ಯತೆ, ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಸೇರಿದಂತೆ ಪರಸ್ಪರ ಆಸಕ್ತಿಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದ ಭವಿಷ್ಯ-ಆಧಾರಿತ ಪಾಲುದಾರಿಕೆಯನ್ನು ನಿರ್ಮಿಸಲು ಅವರು ಎರಡೂ ದೇಶಗಳ ಶಿಕ್ಷಣ ಸಂಸ್ಥೆಗಳಿಗೆ ಕರೆ ನೀಡಿದರು.

ನ್ಯೂಜಿಲೆಂಡ್‌ ನಲ್ಲಿ ಗುಣಮಟ್ಟದ ಶಿಕ್ಷಣವನ್ನು  ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸಲು ನಾಯಕರು ಕರೆ ನೀಡಿದರು. ವಿಜ್ಞಾನ, ನಾವೀನ್ಯತೆ ಮತ್ತು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಸೇರಿದಂತೆ ಕ್ಷೇತ್ರಗಳಲ್ಲಿ ವಿಸ್ತೃತ ತೊಡಗಿಸಿಕೊಳ್ಳುವಿಕೆಯನ್ನು ಬೆಂಬಲಿಸಲು ಕೌಶಲ್ಯ ಅಭಿವೃದ್ಧಿ ಮತ್ತು ಕೌಶಲ್ಯಪೂರ್ಣ ಸಿಬ್ಬಂದಿಯ ಚಲನಶೀಲತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ನಾಯಕರು ಆರಂಭಿಸಲು ಒಪ್ಪಿಕೊಂಡಿರುವ ವ್ಯಾಪಾರ ಒಪ್ಪಂದ ಮಾತುಕತೆಗಳ ಸಂದರ್ಭದಲ್ಲಿ, ಎರಡೂ ದೇಶಗಳ ನಡುವೆ ವೃತ್ತಿಪರರು ಮತ್ತು ನುರಿತ ಕೆಲಸಗಾರರ ಚಲನಶೀಲತೆಯನ್ನು ಸುಗಮಗೊಳಿಸುವ ವ್ಯವಸ್ಥೆಯ ಕುರಿತು ಮಾತುಕತೆಗಳನ್ನು ಪ್ರಾರಂಭಿಸಲು ಮತ್ತು ಅನಿಯಮಿತ ವಲಸೆಯ ಸಮಸ್ಯೆಯನ್ನು ಪರಿಹರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.

ಭಾರತದ ಶಿಕ್ಷಣ ಸಚಿವಾಲಯ ಮತ್ತು ನ್ಯೂಜಿಲೆಂಡ್ ಶಿಕ್ಷಣ ಸಚಿವಾಲಯದ ನಡುವಿನ ನವೀಕರಿಸಿದ ಶಿಕ್ಷಣ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು. ಈ ಒಪ್ಪಂದವು ದ್ವಿಪಕ್ಷೀಯ ಶಿಕ್ಷಣ ಸಂಬಂಧವನ್ನು ಬಲಪಡಿಸುವ ಆಧಾರವಾಗಿ ಭಾರತ ಮತ್ತು ನ್ಯೂಜಿಲೆಂಡ್‌ ನ ಆಯಾ ಶಿಕ್ಷಣ ವ್ಯವಸ್ಥೆಗಳ ಕುರಿತು ಮಾಹಿತಿಯ ನಿರಂತರ ವಿನಿಮಯವನ್ನು ಸುಗಮಗೊಳಿಸುತ್ತದೆ.

ಭಾರತ ಮತ್ತು ನ್ಯೂಜಿಲೆಂಡ್ ಕ್ರೀಡೆಗಳಲ್ಲಿ, ವಿಶೇಷವಾಗಿ ಕ್ರಿಕೆಟ್, ಹಾಕಿ ಮತ್ತು ಇತರ ಒಲಿಂಪಿಕ್ ಕ್ರೀಡೆಗಳಲ್ಲಿ ನಿಕಟ ಸಂಬಂಧವನ್ನು ಹೊಂದಿವೆ ಎಂದು ನಾಯಕರು ಗಮನಿಸಿದರು. ದೇಶಗಳ ನಡುವೆ ಹೆಚ್ಚಿನ ಕ್ರೀಡೆಗಳು ಮತ್ತು ಸಹಕಾರವನ್ನು ಉತ್ತೇಜಿಸಲು ಕ್ರೀಡೆಗಳ ಮೇಲಿನ ಸಹಕಾರದ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 100 ವರ್ಷಗಳ ಕ್ರೀಡಾ ಸಂಪರ್ಕಗಳನ್ನು ಗುರುತಿಸಲು ಮತ್ತು ಆಚರಿಸಲು 2026 ರಲ್ಲಿ ಯೋಜಿಸಲಾದ “ಸ್ಪೋರ್ಟ್ಸ್ ಯೂನಿಟಿ” ಕಾರ್ಯಕ್ರಮಗಳನ್ನು ಅವರು ಸ್ವಾಗತಿಸಿದರು.

ಭಾರತ ಮತ್ತು ನ್ಯೂಜಿಲೆಂಡ್‌ ನಲ್ಲಿ ಸಾಂಪ್ರದಾಯಿಕ ಔಷಧದ ಬಲಿಷ್ಠ ವ್ಯವಸ್ಥೆಗಳ ಮಹತ್ವವನ್ನು ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು ಮತ್ತು ಮಾಹಿತಿ ಮತ್ತು ಉತ್ತಮ ಅಭ್ಯಾಸಗಳ ಹಂಚಿಕೆ ಮತ್ತು ತಜ್ಞರ ಭೇಟಿ ಸೇರಿದಂತೆ ಸಹಕಾರದ ಸಂಭಾವ್ಯ ಕ್ಷೇತ್ರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನ್ವೇಷಿಸಲು ವಿಜ್ಞಾನ ಮತ್ತು ಸಂಶೋಧನಾ ತಜ್ಞರು ಸೇರಿದಂತೆ ಎರಡೂ ಕಡೆಯ ತಜ್ಞರ ನಡುವಿನ ಚರ್ಚೆಗಳನ್ನು ಸ್ವಾಗತಿಸಿದರು.

ನ್ಯೂಜಿಲೆಂಡ್ ನಿವಾಸಿಗಳಲ್ಲಿ ಯೋಗ ಮತ್ತು ಭಾರತೀಯ ಸಂಗೀತ ಮತ್ತು ನೃತ್ಯದ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯನ್ನು ಹಾಗೂ ಭಾರತೀಯ ಹಬ್ಬಗಳನ್ನು ಮುಕ್ತವಾಗಿ ಆಚರಿಸುತ್ತಿರುವುದನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಗಮನಿಸಿದರು. ಸಂಗೀತ, ನೃತ್ಯ, ರಂಗಭೂಮಿ, ಚಲನಚಿತ್ರಗಳು ಮತ್ತು ಉತ್ಸವಗಳ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಉತ್ತೇಜಿಸಲು ಅವರು ಕರೆ ನೀಡಿದರು.

ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ:

ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಮುಕ್ತ, ಎಲ್ಲರನ್ನೂ ಒಳಗೊಂಡ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಅನ್ನು ಬೆಂಬಲಿಸುವ ಬದ್ಧತೆಯನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು.

ಪೂರ್ವ ಏಷ್ಯಾ ಶೃಂಗಸಭೆ, ಆಸಿಯಾನ್ ರಕ್ಷಣಾ ಸಚಿವರ ಸಭೆ ಪ್ಲಸ್ ಮತ್ತು ಆಸಿಯಾನ್ ಪ್ರಾದೇಶಿಕ ವೇದಿಕೆಯಂತಹ ಆಸಿಯಾನ್ ನೇತೃತ್ವದ ವೇದಿಕೆಗಳು ಸೇರಿದಂತೆ ವಿವಿಧ ಪ್ರಾದೇಶಿಕ ವೇದಿಕೆಗಳಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸಹಕಾರವನ್ನು ನಾಯಕರು ಗಮನಿಸಿದರು. ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಈ ಪ್ರಾದೇಶಿಕ ಸಂಸ್ಥೆಗಳು ಮತ್ತು ಆಸಿಯಾನ್ ಕೇಂದ್ರೀಯತೆಯ ಮಹತ್ವವನ್ನು ನಾಯಕರು ಪುನರುಚ್ಚರಿಸಿದರು ಮತ್ತು ಈ ಪ್ರದೇಶದಲ್ಲಿ ಎಲ್ಲಾ ದೇಶಗಳು ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು.

ಜಾಗತಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಪ್ರಮುಖ ಅಂಶವಾಗಿ, ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವ ವಿಶ್ವಸಂಸ್ಥೆಯ ಮೇಲೆ ಕೇಂದ್ರೀಕೃತವಾದ ಪರಿಣಾಮಕಾರಿ ಬಹುಪಕ್ಷೀಯ ವ್ಯವಸ್ಥೆಯ ಮಹತ್ವವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಭದ್ರತಾ ಮಂಡಳಿಯನ್ನು ಹೆಚ್ಚು ಪ್ರಾತಿನಿಧಿಕ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿಯನ್ನಾಗಿ ಮಾಡಲು ಅದರ ಸದಸ್ಯತ್ವವನ್ನು ವಿಸ್ತರಿಸುವ ಮೂಲಕ ವಿಶ್ವಸಂಸ್ಥೆಯ ಸುಧಾರಣೆಗಳ ಅಗತ್ಯವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಸುಧಾರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವಕ್ಕಾಗಿ ಭಾರತದ ಉಮೇದುವಾರಿಕೆಯನ್ನು ನ್ಯೂಜಿಲೆಂಡ್ ಅನುಮೋದಿಸಿತು. ಬಹುಪಕ್ಷೀಯ ವೇದಿಕೆಗಳಲ್ಲಿ ಪರಸ್ಪರರ ಉಮೇದುವಾರಿಕೆಗಳಿಗೆ ಪರಸ್ಪರ ಬೆಂಬಲವನ್ನು ವಿಸ್ತರಿಸುವ ಸಾಧ್ಯತೆಯನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿಕೊಂಡರು.

ಜಾಗತಿಕ ಪರಮಾಣು ನಿಶ್ಯಸ್ತ್ರೀಕರಣ ಮತ್ತು ಪ್ರಸರಣ ರಹಿತ ಆಡಳಿತವನ್ನು ಎತ್ತಿಹಿಡಿಯುವ ಪ್ರಾಮುಖ್ಯತೆಯನ್ನು ಉಭಯ ನಾಯಕರು ಒತ್ತಿ ಹೇಳಿದರು ಮತ್ತು ಭಾರತದ ಶುದ್ಧ ಇಂಧನ ಗುರಿಗಳು ಮತ್ತು ಅದರ ಪ್ರಸರಣ-ರಹಿತತೆಯ ರುಜುವಾತುಗಳ ಸಂದರ್ಭದಲ್ಲಿ ಭಾರತ ಪರಮಾಣು ಪೂರೈಕೆದಾರರ ಗುಂಪಿಗೆ ಸೇರುವ ಮೌಲ್ಯವನ್ನು ಒಪ್ಪಿಕೊಂಡರು.

ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಇಬ್ಬರೂ ನಾಯಕರು ತಮ್ಮ ದೃಢವಾದ ಬೆಂಬಲವನ್ನು ಪುನರುಚ್ಚರಿಸಿದರು ಮತ್ತು ಒತ್ತೆಯಾಳುಗಳ ಬಿಡುಗಡೆ ಮತ್ತು ಜನವರಿ 2025 ರ ಕದನ ವಿರಾಮದ ಒಪ್ಪಂದವನ್ನು ಸ್ವಾಗತಿಸಿದರು. ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಜಾದಾದ್ಯಂತ ತ್ವರಿತ, ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಮಾನವೀಯ ಪ್ರವೇಶವನ್ನು ಒಳಗೊಂಡ ಶಾಶ್ವತ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ನಿರಂತರ ಮಾತುಕತೆಗಳಿಗೆ ಅವರು ತಮ್ಮ ಕರೆಯನ್ನು ಪುನರುಚ್ಚರಿಸಿದರು. ಸಾರ್ವಭೌಮ, ಕಾರ್ಯಸಾಧ್ಯ ಮತ್ತು ಸ್ವತಂತ್ರ ಪ್ಯಾಲಿಸ್ತೀನ್‌ ರಾಷ್ಟ್ರದ ಸ್ಥಾಪನೆಗೆ ಮತ್ತು ಇಸ್ರೇಲ್‌ ನೊಂದಿಗೆ ಶಾಂತಿ ಮತ್ತು ಭದ್ರತೆಯಲ್ಲಿ ಅಕ್ಕಪಕ್ಕದಲ್ಲಿ ಸುರಕ್ಷಿತ ಮತ್ತು ಪರಸ್ಪರ ಗುರುತಿಸಲ್ಪಟ್ಟ ಗಡಿಗಳಲ್ಲಿ ವಾಸಿಸಲು ಕಾರಣವಾಗುವ ಮಾತುಕತೆಯ ಮೂಲಕ ಎರಡು-ರಾಷ್ಟ್ರಗಳ ಪರಿಹಾರದ ಮಹತ್ವವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು.

ನಾಯಕರು ಉಕ್ರೇನ್‌ ನಲ್ಲಿನ ಯುದ್ಧದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಅಂತರರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಚಾರ್ಟರ್‌ ನ ತತ್ವಗಳು ಮತ್ತು ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವ ಆಧಾರದ ಮೇಲೆ ನ್ಯಾಯಯುತ ಮತ್ತು ಶಾಶ್ವತ ಶಾಂತಿಗೆ ಬೆಂಬಲ ವ್ಯಕ್ತಪಡಿಸಿದರು.

ಉಭಯ ನಾಯಕರು ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ಖಂಡಿಸಿದರು. ವಿಶ್ವಸಂಸ್ಥೆ ನಿಷೇಧಿಸಿರುವ ಭಯೋತ್ಪಾದಕ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ಎಲ್ಲಾ ದೇಶಗಳು ತಕ್ಷಣದ, ನಿರಂತರ ಮತ್ತು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವ ತುರ್ತು ಅಗತ್ಯವನ್ನು ಉಭಯ ನಾಯಕರು ಒತ್ತಿ ಹೇಳಿದರು. ಭಯೋತ್ಪಾದನೆಗೆ ಹಣಕಾಸು ಒದಗಿಸುವ ಜಾಲಗಳು ಮತ್ತು ಸುರಕ್ಷಿತ ತಾಣಗಳನ್ನು ನಿರ್ಮೂಲನೆ ಮಾಡಲು, ಆನ್‌ಲೈನ್ ಸೇರಿದಂತೆ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಲು ಮತ್ತು ಭಯೋತ್ಪಾದನೆಯ ಅಪರಾಧಿಗಳನ್ನು ತ್ವರಿತವಾಗಿ ನ್ಯಾದ ಕಟಕಟೆಗೆ ತರಲು ಅವರು ಕರೆ ನೀಡಿದರು. ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಕಾರ್ಯವಿಧಾನಗಳ ಮೂಲಕ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಎದುರಿಸಲು ಪರಸ್ಪರ ಸಹಕರಿಸಲು ಉಭಯ ನಾಯಕರು ಒಪ್ಪಿಕೊಂಡರು.

ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಪರಸ್ಪರ ಪ್ರಯೋಜನಕ್ಕಾಗಿ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಪ್ರಯೋಜನಕ್ಕಾಗಿ ದ್ವಿಪಕ್ಷೀಯ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ಮತ್ತು ಆಳಗೊಳಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸಲು ಮತ್ತು ಹಸಿರು ಮತ್ತು ಕೃಷಿ ತಂತ್ರಜ್ಞಾನಗಳ ಕ್ಷೇತ್ರಗಳನ್ನು ಒಳಗೊಂಡಂತೆ ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸಲು ಅವರು ಕರೆ ನೀಡಿದರು.

ಭಾರತಕ್ಕೆ ತಮ್ಮ ಅಧಿಕೃತ ಭೇಟಿಯ ಸಂದರ್ಭದಲ್ಲಿ ತಮಗೆ ಮತ್ತು ತಮ್ಮ ನಿಯೋಗದ ಸದಸ್ಯರಿಗೆ ನೀಡಿದ ಆತ್ಮೀಯ ಆತಿಥ್ಯ ಮತ್ತು ಗೌರವಕ್ಕಾಗಿ ಪ್ರಧಾನಮಂತ್ರಿ ಲುಕ್ಸನ್ ಅವರು ಪ್ರಧಾನಮಂತ್ರಿ ಮೋದಿ, ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು. ನ್ಯೂಜಿಲೆಂಡ್‌ ಗೆ ಭೇಟಿ ನೀಡುವಂತೆ ಪ್ರಧಾನಮಂತ್ರಿ  ಲುಕ್ಸನ್ ಅವರು ಪ್ರಧಾನಮಂತ್ರಿ  ಮೋದಿಯವರನ್ನು ಆಹ್ವಾನಿಸಿದರು.

 

*****