Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ-ನ್ಯೂಜಿಲೆಂಡ್ ಜಂಟಿ ಹೇಳಿಕೆ ಕುರಿತು ಪ್ರಧಾನಮಂತ್ರಿ ಪತ್ರಿಕಾ ಹೇಳಿಕೆ

ಭಾರತ-ನ್ಯೂಜಿಲೆಂಡ್ ಜಂಟಿ ಹೇಳಿಕೆ ಕುರಿತು ಪ್ರಧಾನಮಂತ್ರಿ ಪತ್ರಿಕಾ ಹೇಳಿಕೆ


ಗೌರವಾನ್ವಿತ ಪ್ರಧಾನ ಮಂತ್ರಿ ಲಕ್ಸನ್ ಅವರೆ,

ಎರಡೂ ದೇಶಗಳ ಪ್ರತಿನಿಧಿಗಳೆ,

ಮಾಧ್ಯಮ ಸ್ನೇಹಿತರೆ,

ನಮಸ್ಕಾರ!

ನ್ಯೂಜಿಲೆಂಡ್ ಪ್ರಧಾನಮಂತ್ರಿ ಲಕ್ಸನ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಪ್ರಧಾನ ಮಂತ್ರಿ ಲಕ್ಸನ್ ಅವರು ಭಾರತದೊಂದಿಗೆ ದೀರ್ಘ ಸಂಬಂಧ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಆಕ್ಲೆಂಡ್‌ನಲ್ಲಿ ಹೋಳಿ ಹಬ್ಬವನ್ನು ಹೇಗೆ ಸಂಭ್ರಮದಿಂದ ಆಚರಿಸಿದರು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ! ಪ್ರಧಾನ ಮಂತ್ರಿ ಲಕ್ಸನ್ ಅವರು ನ್ಯೂಜಿಲೆಂಡ್‌ನಲ್ಲಿ ವಾಸಿಸುತ್ತಿರುವವ ಭಾರತೀಯ ಮೂಲದ ಜನರ ಮೇಲೆ ಇಟ್ಟಿರುವ ಪ್ರೀತಿಯನ್ನು ಅವರೊಂದಿಗೆ ಭಾರತಕ್ಕೆ ಬಂದಿರುವ ದೊಡ್ಡ ಸಮುದಾಯದ ನಿಯೋಗದಲ್ಲಿ ಕಾಣಬಹುದು. ಈ ವರ್ಷದ ರೈಸಿನಾ ಸಂವಾದದ ಮುಖ್ಯ ಅತಿಥಿಯಾಗಿ ಅವರಂತಹ ಯುವ, ಶಕ್ತಿಯುತ ಮತ್ತು ಪ್ರತಿಭಾನ್ವಿತ ನಾಯಕನನ್ನು ಹೊಂದಿರುವುದು ನಮಗೆ ಬಹಳ ಸಂತೋಷದ ವಿಷಯವಾಗಿದೆ.

ಸ್ನೇಹಿತರೆ,

ಇಂದು ನಾವು ನಮ್ಮ ದ್ವಿಪಕ್ಷೀಯ ಸಂಬಂಧಗಳ ವಿವಿಧ ಕ್ಷೇತ್ರಗಳ ಕುರಿತು ಆಳವಾದ ಚರ್ಚೆಗಳನ್ನು ನಡೆಸಿದ್ದೇವೆ. ನಮ್ಮ ರಕ್ಷಣಾ ಮತ್ತು ಭದ್ರತಾ ಸಹಭಾಗಿತ್ವ  ಬಲಪಡಿಸಲು ಮತ್ತು ಸಾಂಸ್ಥಿಕಗೊಳಿಸಲು ನಾವು ನಿರ್ಧರಿಸಿದ್ದೇವೆ. ಜಂಟಿ ಅಭ್ಯಾಸಗಳು, ತರಬೇತಿ ಮತ್ತು ಬಂದರು ಭೇಟಿಗಳ ಜತೆಗೆ, ದ್ವಿಪಕ್ಷೀಯ ರಕ್ಷಣಾ ಉದ್ಯಮ ಸಹಭಾಗಿತ್ವಕ್ಕಾಗಿ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲಾಗುವುದು. ಹಿಂದೂ ಮಹಾಸಾಗರದಲ್ಲಿ ಕಡಲ ಭದ್ರತೆಗಾಗಿ ನಮ್ಮ ನೌಕಾಪಡೆಗಳು ಸಂಯೋಜಿತ ಕಾರ್ಯಪಡೆ-150ರಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ. ನ್ಯೂಜಿಲೆಂಡ್ ನೌಕಾ ಹಡಗು 2 ದಿನಗಳಲ್ಲೇ ಮುಂಬೈ ಬಂದರಿಗೆ ಭೇಟಿ ನೀಡುತ್ತಿರುವುದು ನಮಗೆ ಸಂತೋಷ ತಂದಿದೆ.

ಸ್ನೇಹಿತರೆ,

ಎರಡೂ ದೇಶಗಳ ನಡುವೆ ಪರಸ್ಪರ ಪ್ರಯೋಜನಕಾರಿಯಾಗುವ ಮುಕ್ತ ವ್ಯಾಪಾರ ಒಪ್ಪಂದದ ಚರ್ಚೆಗಳನ್ನು ಆರಂಭಿಸಲು ನಾವು ನಿರ್ಧರಿಸಿದ್ದೇವೆ. ಇದು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಡೇರಿ, ಆಹಾರ ಸಂಸ್ಕರಣೆ ಮತ್ತು ಔಷಧದಂತಹ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಮತ್ತು ಹೂಡಿಕೆಯನ್ನು ಪ್ರೋತ್ಸಾಹಿಸಲಾಗುವುದು. ನವೀಕರಿಸಬಹುದಾದ ಇಂಧನ ಮತ್ತು ನಿರ್ಣಾಯಕ ಖನಿಜ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ನಾವು ಆದ್ಯತೆ ನೀಡಿದ್ದೇವೆ. ಅರಣ್ಯ ಮತ್ತು ತೋಟಗಾರಿಕೆಯಲ್ಲಿ ಜಂಟಿಯಾಗಿ ಕೆಲಸಗಳನ್ನು ಮಾಡಲಾಗುವುದು. ಪ್ರಧಾನ ಮಂತ್ರಿ ಅವರ ಜತೆಗಿರುವ ಬೃಹತ್ ಉದ್ಯಮ ವ್ಯಾಪಾರ ನಿಯೋಗವು ಭಾರತದಲ್ಲಿನ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಮತ್ತು ಅರ್ಥ ಮಾಡಿಕೊಳ್ಳಲು ಅವಕಾಶ ಪಡೆಯುತ್ತದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಕ್ರಿಕೆಟ್ ಆಗಿರಲಿ, ಹಾಕಿಯೇ ಆಗಿರಲಿ ಅಥವಾ ಪರ್ವತಾರೋಹಣವೇ ಆಗಿರಲಿ, ಎರಡೂ ದೇಶಗಳು ಕ್ರೀಡೆಯಲ್ಲಿ ದೀರ್ಘಕಾಲದ ಬಾಂಧವ್ಯವನ್ನು ಹಂಚಿಕೊಳ್ಳುತ್ತವೆ. ಕ್ರೀಡಾ ತರಬೇತಿ, ಆಟಗಾರರ ವಿನಿಮಯ ಮತ್ತು ಕ್ರೀಡಾ ವಿಜ್ಞಾನ, ಮನೋವಿಜ್ಞಾನ ಮತ್ತು ವೈದ್ಯಕೀಯದಂತಹ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸಲು ನಾವು ಒಪ್ಪಿಕೊಂಡಿದ್ದೇವೆ. 2026ರಲ್ಲಿ ನಮ್ಮ ಎರಡೂ ರಾಷ್ಟ್ರಗಳ ನಡುವಿನ 100 ವರ್ಷಗಳ ಕ್ರೀಡಾ ಸಂಬಂಧವನ್ನು ಆಚರಿಸಲು ನಾವು ನಿರ್ಧರಿಸಿದ್ದೇವೆ.

ಸ್ನೇಹಿತರೆ,

ನ್ಯೂಜಿಲೆಂಡ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯವು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುತ್ತಿದೆ. ಕೌಶಲ್ಯಪೂರ್ಣ ಕಾರ್ಮಿಕರ ಚಲನಶೀಲತೆಯನ್ನು ಸರಳಗೊಳಿಸುವ ಮತ್ತು ಅಕ್ರಮ ವಲಸೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಒಪ್ಪಂದದ ಮೇಲೆ ತ್ವರಿತವಾಗಿ ಕೆಲಸ ಮಾಡಲು ನಾವು ಒಪ್ಪಿಕೊಂಡಿದ್ದೇವೆ. ಯುಪಿಐ ಸಂಪರ್ಕ ಹೆಚ್ಚಿಸುವುದು, ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವುದು ಮತ್ತು ಪ್ರವಾಸೋದ್ಯಮ ಹೆಚ್ಚಿಸುವತ್ತಲೂ ನಾವು ಗಮನ ಹರಿಸುತ್ತೇವೆ. ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸಂಬಂಧಗಳು ದೀರ್ಘಕಾಲದಿಂದ ಬಂದಿವೆ ಮತ್ತು ಭಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ನಾವು ನ್ಯೂಜಿಲೆಂಡ್‌ನ ವಿಶ್ವವಿದ್ಯಾಲಯಗಳನ್ನು ಆಹ್ವಾನಿಸುತ್ತೇವೆ.

ಸ್ನೇಹಿತರೆ,

ಭಯೋತ್ಪಾದನೆಯ ವಿರುದ್ಧ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. 2019 ಮಾರ್ಚ್ 15ರ ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯಾಗಿರಲಿ ಅಥವಾ 2008 ನವೆಂಬರ್ 26ರ ಮುಂಬೈ ದಾಳಿಯಾಗಿರಲಿ, ಯಾವುದೇ ರೀತಿಯ ಭಯೋತ್ಪಾದನೆ ಸ್ವೀಕಾರಾರ್ಹವಲ್ಲ. ಅಂತಹ ದಾಳಿಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭಯೋತ್ಪಾದನೆ, ಪ್ರತ್ಯೇಕತಾವಾದಿ ಮತ್ತು ಉಗ್ರಗಾಮಿ ಶಕ್ತಿಗಳನ್ನು ಎದುರಿಸಲು ನಾವು ಸಹಕಾರ ಮುಂದುವರಿಸುತ್ತೇವೆ. ಈ ನಿಟ್ಟಿನಲ್ಲಿ, ನ್ಯೂಜಿಲೆಂಡ್‌ನಲ್ಲಿ ಕೆಲವು ಕಾನೂನುಬಾಹಿರ ಶಕ್ತಿಗಳ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಇರುವ ನಮ್ಮ ಕಳವಳಗಳನ್ನು ನಾವು ಹಂಚಿಕೊಂಡಿದ್ದೇವೆ. ಅಂತಹ ಕಾನೂನುಬಾಹಿರ ಶಕ್ತಿಗಳ ವಿರುದ್ಧ ನ್ಯೂಜಿಲೆಂಡ್ ಸರ್ಕಾರದ ಸಂಪೂರ್ಣ ಸಹಕಾರ ಪಡೆಯುತ್ತೇವೆ ಎಂಬ ವಿಶ್ವಾಸ ನಮಗಿದೆ.

ಸ್ನೇಹಿತರೆ,

ನಾವಿಬ್ಬರೂ ಮುಕ್ತ, ತೆರೆದ, ಸುರಕ್ಷಿತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ವಲಯ ಸ್ಥಾಪಿಸಲು ಬೆಂಬಲಿಸುತ್ತೇವೆ. ನಾವು ವಿಸ್ತರಣಾವಾದದಲ್ಲಿ ನಂಬಿಕೆ ಇಟ್ಟಿಲ್ಲ, ಅಭಿವೃದ್ಧಿಯ ನೀತಿಯಲ್ಲಿ ನಂಬಿಕೆ ಇಡುತ್ತೇವೆ. ಇಂಡೋ-ಪೆಸಿಫಿಕ್ ಸಾಗರ ಉಪಕ್ರಮಕ್ಕೆ ನ್ಯೂಜಿಲೆಂಡ್ ಸೇರುವುದನ್ನು ನಾವು ಸ್ವಾಗತಿಸುತ್ತೇವೆ. ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದಲ್ಲಿ ಸದಸ್ಯತ್ವ ಪಡೆದ ನಂತರ, ವಿಪತ್ತು ನಿರ್ವಹಣಾ(ಸ್ಥಿತಿಸ್ಥಾಪಕ) ಮೂಲಸೌಕರ್ಯ ಮೈತ್ರಿಕೂಟ(ಟಸಿಡಿಆರ್‌ಐ)ಕ್ಕೆ ಸೇರ್ಪಡೆಯಾಗುತ್ತಿರುವ ನ್ಯೂಜಿಲೆಂಡ್ ಅನ್ನು ಸಹ ನಾವು ಅಭಿನಂದಿಸುತ್ತೇವೆ.

ಸ್ನೇಹಿತರೆ,

ಕೊನೆಯದಾಗಿ, ರಗ್ಬಿಯ ಭಾಷೆಯಲ್ಲಿ ನಾನು ಹೇಳುವುದೇನೆಂದರೆ – ನಮ್ಮ ಸಂಬಂಧದಲ್ಲಿ ಉಜ್ವಲ ಭವಿಷ್ಯಕ್ಕಾಗಿ ನಾವಿಬ್ಬರೂ “ಮುಂಚೂಣಿಗೆ ಬರಲು” ಸಿದ್ಧರಿದ್ದೇವೆ. ನಾವು ಒಟ್ಟಾಗಿ ಹೆಜ್ಜೆ ಹಾಕಲು ಮತ್ತು ಉಜ್ವಲ ಪಾಲುದಾರಿಕೆಯ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿದ್ದೇವೆ! ನಮ್ಮ ನಿರ್ಣಾಯಕ ಸಹಭಾಗಿತ್ವ(ಪಾಲುದಾರಿಕೆ)ವು ಎರಡೂ ದೇಶಗಳ ಜನರಿಗೆ ಗೆಲುವು ತಂದುಕೊಡುವ ಪಾಲುದಾರಿಕೆಯಾಗಿ ಪರಿಣಮಿಸುತ್ತದೆ ಎಂಬ ವಿಶ್ವಾಸ ನನಗಿದೆ.

ತುಂಬು ಧನ್ಯವಾದಗಳು!

 

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****