2025ರ ಏಪ್ರಿಲ್ 03-04 ರ ಅವಧಿಯಲ್ಲಿ, ಭಾರತ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರು ಥೈಲ್ಯಾಂಡ್ ಗೆ ಅಧಿಕೃತ ಭೇಟಿ ನೀಡಿದರು ಮತ್ತು ಥೈಲ್ಯಾಂಡ್ ರಾಜಪ್ರಭುತ್ವದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀಮತಿ ಪೇಟೊಂಗ್ಟಾರ್ನ್ ಶಿನವಾತ್ರಾ ಅವರ ಆಹ್ವಾನದ ಮೇರೆಗೆ ಬ್ಯಾಂಕಾಕ್ ನಲ್ಲಿ ನಡೆದ 6 ನೇ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಬ್ಯಾಂಕಾಕ್ ನ ಸರ್ಕಾರಿ ಭವನದಲ್ಲಿ ಪ್ರಧಾನಮಂತ್ರಿ ಶಿನವಾತ್ರಾ ಅವರು ಔಪಚಾರಿಕ, ಸಾಂಪ್ರದಾಯಿಕ ಸ್ವಾಗತ ಕೋರಿದರು.
ಆಳವಾದ ನಾಗರಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಭಾಷಾ ಬಂಧಗಳು ಮತ್ತು ಭಾರತ ಹಾಗು ಥೈಲ್ಯಾಂಡ್ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 78 ವರ್ಷಗಳನ್ನು ಅವಲೋಕಿಸಿದ ಉಭಯ ನಾಯಕರು, ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಸಂಪರ್ಕ, ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ಬಾಹ್ಯಾಕಾಶ, ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಜನತೆ ಹಾಗು ಜನತೆಯ ನಡುವಿನ ವಿನಿಮಯ ಸೇರಿದಂತೆ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದರು. ಅವರು ಪರಸ್ಪರ ಹಿತಾಸಕ್ತಿಯ ಉಪ-ಪ್ರಾದೇಶಿಕ, ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಇಬ್ಬರೂ ನಾಯಕರು ಸಹಕಾರದ ವಿವಿಧ ಕ್ಷೇತ್ರಗಳನ್ನು ಒಳಗೊಂಡ ಹಲವಾರು ತಿಳಿವಳಿಕಾ ಒಡಂಬಡಿಕೆಗಳ ವಿನಿಮಯಕ್ಕೆ ಸಾಕ್ಷಿಯಾದರು. ಭಾರತ-ಥೈಲ್ಯಾಂಡ್ ಕಾನ್ಸುಲರ್ ಸಂವಾದದ ಸ್ಥಾಪನೆಯನ್ನು ಅವರು ಸ್ವಾಗತಿಸಿದರು.
ಪ್ರಧಾನಮಂತ್ರಿ ಶಿನವಾತ್ರಾ ಮತ್ತು ಪ್ರಧಾನಿ ಮೋದಿ ಅವರು ವಾಟ್ ಫ್ರಾ ಚೆಟುಫೋನ್ ವಿಮೋನ್ ಮಂಗ್ಖಲಾರಾಮ್ ರಾಜವರಮಹಾವಿಹಾರಕ್ಕೆ ಭೇಟಿ ನೀಡಿ ಐತಿಹಾಸಿಕ ಒರಗಿರುವ ಬುದ್ಧ ಪ್ರತಿಮೆಗೆ ಗೌರವ ಸಲ್ಲಿಸಿದರು.
ಚಾಲ್ತಿಯರುವ ಸಹಕಾರ ಮತ್ತು ದ್ವಿಪಕ್ಷೀಯ ಹಾಗು ಪ್ರಾದೇಶಿಕ ಮಟ್ಟದಲ್ಲಿ ಮಾತ್ರವಲ್ಲದೆ ವೇಗವಾಗಿ ವಿಕಸನಗೊಳ್ಳುತ್ತಿರುವ ಜಾಗತಿಕ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಸನ್ನಿವೇಶದಲ್ಲಿ ನಿಕಟ ಸಹಕಾರದ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡು, ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಇದು ಎರಡೂ ದೇಶಗಳ ನಡುವಿನ ಸಹಕಾರದ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ವರ್ಧಿತ ಪಾಲುದಾರಿಕೆಯ ಹೊಸ ಅಧ್ಯಾಯವನ್ನು ಸೂಚಿಸುತ್ತದೆ.
ವ್ಯೂಹಾತ್ಮಕ ಪಾಲುದಾರಿಕೆಯು ಎರಡೂ ದೇಶಗಳು ಮತ್ತು ಆಯಾ ಪ್ರದೇಶಗಳ ನಿರಂತರ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಪರಸ್ಪರ ಬದ್ಧತೆಯನ್ನು ಆಧರಿಸಿದೆ. ಈ ವ್ಯೂಹಾತ್ಮಕ ಪಾಲುದಾರಿಕೆಯು ಅವಕಾಶಗಳನ್ನು ಹೆಚ್ಚಿಸಲು, ನಿಕಟ ಸಹಕಾರ ಮತ್ತು ಸಾಮಾನ್ಯ ಸವಾಲುಗಳಿಗೆ ಜಂಟಿಯಾಗಿ ಪ್ರತಿಕ್ರಿಯಿಸಲು ಭವಿಷ್ಯ-ಆಧಾರಿತ ಮತ್ತು ಪರಸ್ಪರ ಪ್ರಯೋಜನಕಾರಿ ಮಾರ್ಗವನ್ನು ರೂಪಿಸಲು ಉಭಯ ದೇಶಗಳಿಗೆ ಪ್ರಮುಖ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ.
ಈ ಕಾರ್ಯತಂತ್ರದ ಪಾಲುದಾರಿಕೆಯು ರಾಜಕೀಯ, ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಸಂಪರ್ಕ, ಶಿಕ್ಷಣ, ಸಾಮಾಜಿಕ-ಸಾಂಸ್ಕೃತಿಕ ಅಭಿವೃದ್ಧಿ ಮತ್ತು ಜನತೆ ಹಾಗು ಜನತೆಯ ನಡುವಿನ ವಿನಿಮಯ ಮತ್ತು ಪರಸ್ಪರ ಹಿತಾಸಕ್ತಿಯ ಇತರ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಒಳಗೊಂಡಿರುವ ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ಸಹಕಾರದ ಕಾರ್ಯವಿಧಾನಗಳನ್ನು ರೂಪಿಸುತ್ತದೆ.
ಈ ವ್ಯೂಹಾತ್ಮಕ ಪಾಲುದಾರಿಕೆಯನ್ನು ಘೋಷಿಸುವ ಮೂಲಕ, ಇಬ್ಬರೂ ನಾಯಕರು ಮುಕ್ತ, ಪಾರದರ್ಶಕ, ನಿಯಮ ಆಧಾರಿತ, ಅಂತರ್ಗತ, ಸಮೃದ್ಧ ಮತ್ತು ಸ್ಥಿತಿಸ್ಥಾಪಕ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ತಮ್ಮ ಹಂಚಿಕೆಯ ಹಿತಾಸಕ್ತಿಗಳನ್ನು ಪುನರುಚ್ಚರಿಸಿದರು ಮತ್ತು ಆಸಿಯಾನ್ ಕೇಂದ್ರೀಕರಣಕ್ಕೆ ತಮ್ಮ ಬಲವಾದ ಬೆಂಬಲವನ್ನು ಪುನರುಚ್ಚರಿಸಿದರು. ಆಸ್ಟ್ರೇಲಿಯಾದೊಂದಿಗೆ ಐಪಿಒಐನ ಕಡಲ ಪರಿಸರ ಸ್ತಂಭವನ್ನು ಸಹನಾಯಕನಾಗಿ-ಮುನ್ನಡೆಸಲು ಥೈಲ್ಯಾಂಡ್ನ ರಚನಾತ್ಮಕ ಪಾತ್ರ ಸೇರಿದಂತೆ ಎಒಐಪಿ ಮತ್ತು ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ನಡುವಿನ ಸಹಕಾರ ಹೆಚ್ಚಳದ ಮೂಲಕ ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಆಸಿಯಾನ್ ದೃಷ್ಟಿಕೋನದ (ಎಒಐಪಿ) ಸಹಕಾರಕ್ಕಾಗಿ ಆಸಿಯಾನ್-ಭಾರತ ಜಂಟಿ ಹೇಳಿಕೆಯನ್ನು ಕಾರ್ಯಗತಗೊಳಿಸಲು ದೃಢವಾದ ಚಟುವಟಿಕೆಗಳನ್ನು ಅನ್ವೇಷಿಸುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವ ಮತ್ತು ಆಳಗೊಳಿಸುವ ಪ್ರಯತ್ನದಲ್ಲಿ, ಉಭಯ ನಾಯಕರು ಈ ಕೆಳಗಿನ ಅಂಶಗಳನ್ನು ಒಪ್ಪಿಕೊಂಡರು:
ರಾಜಕೀಯ ಸಹಕಾರ
ಪರಸ್ಪರ ಹಂಚಿಕೆಯ ಪ್ರಾದೇಶಿಕ ಹಿತಾಸಕ್ತಿಗಳನ್ನು ಚರ್ಚಿಸುವ ದೃಷ್ಟಿಯಿಂದ ಮತ್ತು ಪ್ರಾದೇಶಿಕ ಹಾಗು ಜಾಗತಿಕ ಭದ್ರತಾ ಸವಾಲುಗಳನ್ನು ಎದುರಿಸುವ ದೃಷ್ಟಿಯಿಂದ ಬಹುಪಕ್ಷೀಯ ಸಭೆಗಳ ಹೊರತಾಗಿ ನಾಯಕತ್ವ ಮಟ್ಟದಲ್ಲಿ ನಿಯಮಿತ ಉನ್ನತ ಮಟ್ಟದ ವಿನಿಮಯಗಳ ಮೂಲಕ ರಾಜಕೀಯ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವುದು.
ವಿದೇಶಾಂಗ ಸಚಿವರ ಮಟ್ಟದಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿ ಜಂಟಿ ಸಮಿತಿಯ ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಅಡಿಯಲ್ಲಿ ವಿದೇಶಾಂಗ ಸಚಿವರು ಮತ್ತು ಸಂಬಂಧಿತ ವಿದೇಶಾಂಗ ವ್ಯವಹಾರಗಳು / ಬಾಹ್ಯ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳ ನಡುವೆ ನಿಯಮಿತ ಸಭೆಗಳನ್ನು ಆಯೋಜಿಸುವುದು ಮತ್ತು ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ವಿದೇಶಾಂಗ ಕಚೇರಿ ಸಮಾಲೋಚನೆಗಳನ್ನು ನಡೆಸುವುದು.
ಎರಡೂ ದೇಶಗಳ ನಡುವೆ ನಿಯಮಿತವಾಗಿ ಸಂಸದೀಯ ವಿನಿಮಯವನ್ನು ಉತ್ತೇಜಿಸುವುದು.
ರಕ್ಷಣಾ ಮತ್ತು ಭದ್ರತಾ ಸಹಕಾರ
ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದಂತೆ ಈಗಿರುವ ಕಾರ್ಯವಿಧಾನಗಳನ್ನು ಬಲಪಡಿಸುವುದು, ಜೊತೆಗೆ ಸೂಕ್ತ ಕಾರ್ಯವಿಧಾನಗಳನ್ನು ಸ್ಥಾಪಿಸುವುದು ಸೇರಿದಂತೆ ರಕ್ಷಣಾ ತಂತ್ರಜ್ಞಾನ, ರಕ್ಷಣಾ ಉದ್ಯಮ, ಸಂಶೋಧನೆ, ತರಬೇತಿ, ವಿನಿಮಯ, ತರಬೇತಿ ಕವಾಯತು ಮತ್ತು ಸಾಮರ್ಥ್ಯ ವರ್ಧನೆಗೆ ವಿಶೇಷವಾಗಿ ಒತ್ತು ನೀಡುವ ಮೂಲಕ ಉಭಯ ದೇಶಗಳ ರಕ್ಷಣಾ ಕ್ಷೇತ್ರಗಳ ನಡುವೆ ಮತ್ತಷ್ಟು ಸಹಯೋಗವನ್ನು ಉತ್ತೇಜಿಸುವುದು.
ಸವಾಲುಗಳು ಹೆಚ್ಚುತ್ತಿರುವ ಜಾಗತಿಕ ಮತ್ತು ಪ್ರಾದೇಶಿಕ ಭದ್ರತಾ ವಾತಾವರಣವನ್ನು ನಿಭಾಯಿಸಲು ಮತ್ತು ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಭದ್ರತಾ ವಿಷಯಗಳಲ್ಲಿ ಸಹಕರಿಸಲು, ಥಾಯ್ ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ನಡುವೆ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ / ಪ್ರಧಾನ ಕಾರ್ಯದರ್ಶಿ ಮಟ್ಟದ ಕಾರ್ಯತಂತ್ರದ ಸಂವಾದವನ್ನು ಅಳವಡಿಸುವ ಮೂಲಕ ಆಯಾ ಭದ್ರತಾ ಮತ್ತು ಕಾನೂನು ಜಾರಿ ಸಂಸ್ಥೆಗಳು / ಸಂಘಟನೆಗಳ ನಡುವೆ ನಿಯಮಿತವಾಗಿ ಸಂವಾದಗಳು ಮತ್ತು ವಿನಿಮಯಗಳ ಮೂಲಕ ಭದ್ರತಾ ಸಹಕಾರವನ್ನು ಹೆಚ್ಚಿಸುವುದು. ರಕ್ಷಣೆ, ಕಡಲ ಭದ್ರತೆ, ಸೈಬರ್ ಭದ್ರತೆ, ಭಯೋತ್ಪಾದನೆ ನಿಗ್ರಹ, ಕಾನೂನು ಜಾರಿ ಸಮಸ್ಯೆಗಳು ಮತ್ತು ಸೈಬರ್ ಅಪರಾಧಗಳು, ಅಂತರರಾಷ್ಟ್ರೀಯ ಆರ್ಥಿಕ ಅಪರಾಧಗಳು, ಅಕ್ರಮ ಹಣ ವರ್ಗಾವಣೆ ಮತ್ತು ಮಾನವ, ಮಾದಕವಸ್ತು, ಶಸ್ತ್ರಾಸ್ತ್ರ ಮತ್ತು ವನ್ಯಜೀವಿ ಕಳ್ಳಸಾಗಣೆಯಂತಹ ಬಹುರಾಷ್ಟ್ರೀಯ ಸಂಘಟಿತ ಅಪರಾಧಗಳನ್ನು ಎದುರಿಸುವುದು, ಮಾಹಿತಿ ಮತ್ತು ಗುಪ್ತಚರ ವಿನಿಮಯ ಮತ್ತು ಉತ್ತಮ ಪದ್ಧತಿಗಳ ವಿನಿಮಯದ ಮೂಲಕ ಇದನ್ನು ಸಾಧಿಸುವುದು.
ಆರ್ಥಿಕ, ವ್ಯಾಪಾರ ಮತ್ತು ಹೂಡಿಕೆ ಸಹಕಾರ
ಭಾರತ ಮತ್ತು ಥೈಲ್ಯಾಂಡ್ ನಡುವೆ ಜಂಟಿ ವ್ಯಾಪಾರ ಸಮಿತಿಯ ಅಸ್ತಿತ್ವದಲ್ಲಿರುವ ಕಾರ್ಯವಿಧಾನದ ಅಡಿಯಲ್ಲಿ ಆಯಾ ವಾಣಿಜ್ಯ / ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ನಡುವೆ ನಿಯಮಿತ ಸಭೆಗಳು ಮತ್ತು ವಿನಿಮಯಗಳನ್ನು ಆಯೋಜಿಸುವುದು. ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸಲು ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ವಾರ್ಷಿಕ ಸಭೆಗಳನ್ನು ಖಚಿತಪಡಿಸಿಕೊಳ್ಳಲು ಸಹ ಒಪ್ಪಲಾಯಿತು; ಜಾಗತಿಕ ಪೂರೈಕೆ ಸರಪಳಿಯೊಂದಿಗೆ ಎರಡೂ ದೇಶಗಳ ಸಂಪರ್ಕವನ್ನು ಬಲಪಡಿಸುವ ಮತ್ತು ಎರಡೂ ದೇಶಗಳ ಖಾಸಗಿ ವಲಯಗಳ ವಿಶ್ವಾಸವನ್ನು ಹೆಚ್ಚಿಸುವ ದೃಷ್ಟಿಯಿಂದ ವ್ಯಾಪಾರವನ್ನು ಸುಗಮಗೊಳಿಸುವುದು ಮತ್ತು ಮಾರುಕಟ್ಟೆ ಪ್ರವೇಶ ಸಮಸ್ಯೆಗಳನ್ನು ಪರಿಹರಿಸುವುದು; ಪರಸ್ಪರ ಒಪ್ಪಿತ ಕ್ಷೇತ್ರಗಳ ಸಮನ್ವಯ, ಸಮಾನತೆ ಮತ್ತು ಮಾನದಂಡಗಳ ಪರಸ್ಪರ ಗುರುತಿಸುವಿಕೆಯಲ್ಲಿ ಸಹಕಾರದ ಮೂಲಕ; ಮತ್ತು ವ್ಯಾಪಾರ ಮತ್ತು ಹೂಡಿಕೆಯ ಹೊಸ ಕ್ಷೇತ್ರಗಳಿಗೆ, ವಿಶೇಷವಾಗಿ ನವೀಕರಿಸಬಹುದಾದ ಇಂಧನ, ಎಲೆಕ್ಟ್ರಿಕ್ ವಾಹನಗಳು, ಡಿಜಿಟಲ್ ತಂತ್ರಜ್ಞಾನ, ರೊಬೊಟಿಕ್ಸ್, ಐಸಿಟಿ, ಬಾಹ್ಯಾಕಾಶ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಸೃಜನಶೀಲ ಉದ್ಯಮ ಮತ್ತು ನವೋದ್ಯಮಗಳಂತಹ ಭವಿಷ್ಯದ-ಆಧಾರಿತ ಕೈಗಾರಿಕೆಗಳಿಗೆ ತಯಾರಿ ನಡೆಸುವುದು.
2023-24ರಲ್ಲಿ ಅಂದಾಜು 15 ಬಿಲಿಯನ್ ಯುಎಸ್ ಡಾಲರ್ ತಲುಪಿದ ದ್ವಿಪಕ್ಷೀಯ ವ್ಯಾಪಾರವನ್ನು ಸ್ವಾಗತಿಸುತ್ತೇವೆ ಮತ್ತು ಸಂಭಾವ್ಯ ಕ್ಷೇತ್ರಗಳಲ್ಲಿ ಆರ್ಥಿಕ ಸಂಪರ್ಕಗಳ ವಿಸ್ತರಣೆಯ ಮೂಲಕ ಸುಸ್ಥಿರ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಹಾಗು ಅದರ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತೇವೆ. ಮೌಲ್ಯವರ್ಧಿತ ಸಾಗರ ಉತ್ಪನ್ನಗಳು, ಸ್ಮಾರ್ಟ್ ಫೋನ್ ಗಳು, ವಿದ್ಯುತ್ ವಾಹನಗಳು, ಆಹಾರ ಸಂಸ್ಕರಣೆ, ಪೆಟ್ರೋಲಿಯಂ ಉತ್ಪನ್ನಗಳು, ವಾಹನ ಘಟಕಗಳು, ಸೇವೆಗಳು ಮತ್ತು ಔಷಧೀಯ ಕ್ಷೇತ್ರಗಳಲ್ಲಿ ಸುಸ್ಥಿರ ವ್ಯಾಪಾರವನ್ನು ಉತ್ತೇಜಿಸಲಾಗುವುದು.
ಥೈಲ್ಯಾಂಡ್ ಮತ್ತು ಭಾರತದ ನಡುವೆ ಸಮಗ್ರ ಮುಕ್ತ ವ್ಯಾಪಾರ ಪ್ರದೇಶವನ್ನು ಸ್ಥಾಪಿಸುವ ಚೌಕಟ್ಟು ಒಪ್ಪಂದ ಮತ್ತು ಆಸಿಯಾನ್-ಭಾರತ ಸರಕುಗಳ ವ್ಯಾಪಾರ ಒಪ್ಪಂದ (ಎಐಟಿಐಜಿಎ) ಸೇರಿದಂತೆ ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ಚೌಕಟ್ಟುಗಳ ಅಡಿಯಲ್ಲಿ ವ್ಯಾಪಾರ ಸೌಲಭ್ಯವನ್ನು ಉತ್ತೇಜಿಸುವುದು ಮತ್ತು ಸಹಕಾರವನ್ನು ಆಳಗೊಳಿಸುವುದು. ಸ್ಥಳೀಯ ಕರೆನ್ಸಿ ಆಧಾರಿತ ಪಾವತಿ ಕಾರ್ಯವಿಧಾನವನ್ನು ಸ್ಥಾಪಿಸುವ ಮೂಲಕ ದ್ವಿಪಕ್ಷೀಯ ವ್ಯಾಪಾರಕ್ಕೆ ಹೆಚ್ಚಿನ ಪ್ರಚೋದನೆ ನೀಡಲಾಗುವುದು.
2025 ರಲ್ಲಿ ಗಣನೀಯ ಫಲಿತಾಂಶವನ್ನು ಸಾಧಿಸುವ ಮತ್ತು ಭಾರತ ಹಾಗು ಆಸಿಯಾನ್ ರಾಷ್ಟ್ರಗಳ ನಡುವಿನ ಪೂರೈಕೆ ಸರಪಳಿಗಳನ್ನು ಬಲಪಡಿಸುವ ಗುರಿಯೊಂದಿಗೆ ಆಸಿಯಾನ್-ಭಾರತ ಸರಕು ವ್ಯಾಪಾರ ಒಪ್ಪಂದದ (ಎಐಟಿಐಜಿಎ) ಪರಿಶೀಲನೆಯನ್ನು ಹೆಚ್ಚು ಬಳಕೆದಾರ ಸ್ನೇಹಿ, ಸರಳ ಮತ್ತು ವ್ಯಾಪಾರ ಅನುಕೂಲಕರವಾಗಿಸಲು ಬೆಂಬಲಿಸುವುದು ಮತ್ತು ತ್ವರಿತಗೊಳಿಸುವುದು.
ಅಸ್ತಿತ್ವದಲ್ಲಿರುವ ಹೂಡಿಕೆ ನೀತಿಗಳು ಮತ್ತು ಯೋಜನೆಗಳ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸಲು, ವಿಶೇಷವಾಗಿ ಆಕ್ಟ್ ಈಸ್ಟ್ ಪಾಲಿಸಿ ಮತ್ತು ಮೇಕ್ ಇನ್ ಇಂಡಿಯಾ ಮೂಲಕ ಥೈಲ್ಯಾಂಡ್ ನ ದೃಷ್ಟಿಕೋನವನ್ನು ಮುನ್ನಡೆಸಲು ಮತ್ತು ದ್ವಿಪಕ್ಷೀಯ ಹೂಡಿಕೆಯನ್ನು ಹೆಚ್ಚಿಸಲು ಎರಡೂ ದೇಶಗಳಲ್ಲಿ ವಿಶೇಷ ಆರ್ಥಿಕ ವಲಯಗಳು (ಎಸ್ ಇಜೆಡ್) ಮತ್ತು ಕೈಗಾರಿಕಾ ಕಾರಿಡಾರ್ ಗಳ ಬಳಕೆಯನ್ನು ಉತ್ತೇಜಿಸಲು ಥೈಲ್ಯಾಂಡ್ ನ ಹೂಡಿಕೆ ಮಂಡಳಿ ಮತ್ತು ಇನ್ವೆಸ್ಟ್ ಇಂಡಿಯಾ ಸೇರಿದಂತೆ ಎರಡೂ ದೇಶಗಳ ಹೂಡಿಕೆ ಉತ್ತೇಜನ ಸಂಸ್ಥೆಗಳ ನಡುವೆ ನಿಕಟ ಸಹಯೋಗವನ್ನು ಉತ್ತೇಜಿಸುವುದು.
ಭಾರತ-ಥೈಲ್ಯಾಂಡ್ ಜಂಟಿ ವ್ಯಾಪಾರ ವೇದಿಕೆಯ (ಐಟಿಜೆಬಿಎಫ್)ಗಳ ನಡುವೆ ವಾರ್ಷಿಕ ಆಧಾರದ ಮೇಲೆ ನಿಯಮಿತ ಸಭೆಗಳನ್ನು ಆಯೋಜಿಸುವುದು, ಇದು ಎರಡೂ ದೇಶಗಳ ಖಾಸಗಿ ವಲಯಗಳ ನಡುವೆ ವಿನಿಮಯ ಮತ್ತು ಜಂಟಿ ಯೋಜನೆಗಳ ಉತ್ತೇಜನ ಹಾಗು ಸಹಯೋಗಕ್ಕೆ ಮುಖ್ಯ ಕಾರ್ಯವಿಧಾನವಾಗಿ ಬಳಕೆಯಾಗುತ್ತದೆ.
ಉದ್ಯಮಿಗಳು, ಎಸ್ಎಂಇಗಳು ಮತ್ತು ಸ್ಟಾರ್ಟ್ಅಪ್ ಗಳ (ನವೋದ್ಯಮಗಳ) ನಡುವೆ ವಿನಿಮಯವನ್ನು ಉತ್ತೇಜಿಸಲು ಸೂಕ್ತ ಕಾರ್ಯವಿಧಾನಗಳನ್ನು ಅನ್ವೇಷಿಸಿ. ಸಾಮರ್ಥ್ಯ ವರ್ಧನೆ ಮತ್ತು ಭಾರತ ಹಾಗು ಥೈಲ್ಯಾಂಡ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶದ ಸಾಮಾನ್ಯ ಕಾರ್ಯತಂತ್ರದ ಗುರಿಗಳನ್ನು ಗಮನದಲ್ಲಿಟ್ಟುಕೊಂಡು, ಪರಸ್ಪರ ಪ್ರಾಮುಖ್ಯತೆಯ ಕ್ಷೇತ್ರಗಳ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮಗಳು ಮತ್ತು ತಜ್ಞರ ಅಧಿವೇಶನಗಳು, ಕೇಂದ್ರೀಕೃತ ಹೂಡಿಕೆದಾರರ ಪಿಚ್, ಕಾರ್ಪೊರೇಟ್ಗಳು ಮತ್ತು ವ್ಯಾಪಾರ ಸಂಘಗಳೊಂದಿಗೆ ವ್ಯವಹಾರ ಹೊಂದಾಣಿಕೆ, ನಾವೀನ್ಯತೆ ಸವಾಲುಗಳು, ಎರಡೂ ದೇಶಗಳಲ್ಲಿನ ಶೈಕ್ಷಣಿಕ ಸಂಸ್ಥೆಗಳ ಏಕೀಕರಣ ಮತ್ತು ಕ್ರಾಸ್-ಇನ್ಕ್ಯುಬೇಷನ್ ಮಾದರಿಗಳನ್ನು ಬೆಂಬಲಿಸುವುದು ಸೇರಿದಂತೆ ಸ್ಟಾರ್ಟ್ಅಪ್ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಎರಡೂ ದೇಶಗಳ ನಡುವಿನ ಆರ್ಥಿಕ ಮತ್ತು ಹಣಕಾಸು ಸಂಪರ್ಕಗಳನ್ನು ಬಲಪಡಿಸಲು ವ್ಯಾಪಾರ, ಹೂಡಿಕೆ ಮತ್ತು ಗಡಿಯಾಚೆಗಿನ ಪಾವತಿಗಳನ್ನು ಸುಗಮಗೊಳಿಸಲು ಭಾರತ ಮತ್ತು ಥೈಲ್ಯಾಂಡ್ ನ ಹಣಕಾಸು ಸೇವಾ ಪೂರೈಕೆದಾರರ ನಡುವೆ ನಿಕಟ ಸಹಯೋಗವನ್ನು ಉತ್ತೇಜಿಸುವುದು.
ಎರಡೂ ಕಡೆಯ ಹವಾಮಾನ ಬದಲಾವಣೆಯ ಗುರಿಗಳನ್ನು ಪೂರೈಸಲು ಜೈವಿಕ ವೃತ್ತಾಕಾರದ- ಹಸಿರು ಆರ್ಥಿಕತೆ ಮತ್ತು ಪರಿಸರಕ್ಕಾಗಿ ಜೀವನ ಶೈಲಿ, ವಿಶೇಷವಾಗಿ ನವೀಕರಿಸಬಹುದಾದ ಇಂಧನ ಮತ್ತು ಇಂಧನ ದಕ್ಷತೆಯ ತಂತ್ರಜ್ಞಾನಗಳು ಸೇರಿದಂತೆ ಸುಸ್ಥಿರ ಆರ್ಥಿಕ ಬೆಳವಣಿಗೆಗಾಗಿ ಸಹಕಾರವನ್ನು ಉತ್ತೇಜಿಸುವುದು.
ಸಂಪರ್ಕ
ಭಾರತ-ಮ್ಯಾನ್ಮಾರ್-ಥೈಲ್ಯಾಂಡ್ ತ್ರಿಪಕ್ಷೀಯ ಹೆದ್ದಾರಿ ಮತ್ತು ಅದರ ಪೂರ್ವ ಭಾಗದ ವಿಸ್ತರಣೆ, ಜೊತೆಗೆ ಭಾರತ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಮೋಟಾರು ವಾಹನ ಒಪ್ಪಂದ, ಕರಾವಳಿ ಹಡಗುಗಳ ಮೂಲಕ ಪ್ರಾದೇಶಿಕ ಕಡಲ ಸಂಪರ್ಕವನ್ನು ಬಲಪಡಿಸುವುದು ಮತ್ತು ಬಂದರು-ಬಂದರು ಸಂಪರ್ಕಗಳನ್ನು ಹೆಚ್ಚಿಸುವುದು ಹಾಗೂ ಎರಡೂ ದೇಶಗಳ ನಡುವೆ ವಿಮಾನ ಯಾನ ಸಂಪರ್ಕಗಳನ್ನು ಹೆಚ್ಚಿಸಲು ಮಾತುಕತೆಗಳಲ್ಲಿ ತೊಡಗುವಂತೆ ನಾಗರಿಕ ವಿಮಾನಯಾನ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದು ಸೇರಿದಂತೆ ಭಾರತ ಮತ್ತು ಥೈಲ್ಯಾಂಡ್ ನಡುವಿನ ಭೌತಿಕ, ಡಿಜಿಟಲ್ ಮತ್ತು ಹಣಕಾಸು ಸಂಪರ್ಕದಂತಹ ಎಲ್ಲಾ ರೀತಿಯ ಸಂಪರ್ಕವನ್ನು ಹೆಚ್ಚಿಸುವುದು ಮತ್ತು ಪ್ರಾದೇಶಿಕ ಸಂಪರ್ಕಗಳನ್ನು ಬಲಪಡಿಸುವುದು ಎರಡೂ ದೇಶಗಳ ನಡುವೆ ವಾಯು ಸಂಪರ್ಕವನ್ನು ಹೆಚ್ಚಿಸುವ ಚರ್ಚೆಗಳಲ್ಲಿ ತೊಡಗುವುದು.
ಸಾಮಾಜಿಕ-ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಜನತೆ ಮತ್ತು ಜನತೆಯ ನಡುವಿನ ವಿನಿಮಯ
ಜನತೆ ಮತ್ತು ಜನತೆಯ ನಡುವಿನ ವಿನಿಮಯದ ಸಕಾರಾತ್ಮಕ ರೀತಿಯ ವೇಗವನ್ನು ಉತ್ತೇಜಿಸುವುದು, ಜೊತೆಗೆ ಎರಡೂ ದೇಶಗಳ ನಡುವೆ ಪ್ರವಾಸೋದ್ಯಮದ ಸಂಭಾವ್ಯ ಕ್ಷೇತ್ರಗಳನ್ನು ಉತ್ತೇಜಿಸುವುದು.
ವಿದ್ಯಾರ್ಹತೆಗಳ ಪರಸ್ಪರ ಮಾನ್ಯತೆ, ಭಾರತ ಮತ್ತು ಥೈಲ್ಯಾಂಡ್ ನಲ್ಲಿ ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳ ವಿನಿಮಯವನ್ನು ಹೆಚ್ಚಿಸುವುದು, ವಿದ್ಯಾರ್ಥಿಗಳ ವಿನಿಮಯ, ಜಂಟಿ ಸಂಶೋಧನೆ ಮತ್ತು ಫೆಲೋಶಿಪ್ ಗಳಿಗೆ ಅನುಕೂಲವಾಗುವಂತೆ ಶೈಕ್ಷಣಿಕ ಸಹಕಾರವನ್ನು ಉತ್ತೇಜಿಸುವ ಸಲುವಾಗಿ ಎರಡೂ ದೇಶಗಳಲ್ಲಿನ ಶಿಕ್ಷಣಕ್ಕೆ ಜವಾಬ್ದಾರರಾಗಿರುವ ಸಚಿವಾಲಯಗಳ ನಡುವಿನ ಸಹಕಾರದ ಕಾರ್ಯವಿಧಾನಗಳನ್ನು ಬಲಪಡಿಸುವುದು. ಕೌಶಲ್ಯ ಅಭಿವೃದ್ಧಿ, ಇಂಗ್ಲಿಷ್ ಭಾಷಾ ತರಬೇತಿ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ (ಟಿವಿಇಟಿ), ಥಾಯ್ ಮತ್ತು ಹಿಂದಿ ಅಧ್ಯಯನಗಳು ಮತ್ತು ಎರಡೂ ದೇಶಗಳ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳ ನಡುವೆ ಸಹಯೋಗದಲ್ಲಿ ಸಹಕಾರವನ್ನು ಉತ್ತೇಜಿಸುವುದು.
ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ (ಸಿಇಪಿ) ಗುರುತಿಸಲಾದ ಪ್ರದರ್ಶನ ಕಲೆಗಳು, ಪ್ರದರ್ಶನಗಳು, ವಿಚಾರ ಸಂಕಿರಣಗಳು, ಸಮ್ಮೇಳನ, ಪುರಾತತ್ವಶಾಸ್ತ್ರ, ಪತ್ರಾಗಾರಗಳು, ವಸ್ತುಸಂಗ್ರಹಾಲಯಗಳು, ಸಂಶೋಧನೆ ಮತ್ತು ದಾಖಲೀಕರಣ ಮತ್ತು ಉತ್ಸವಗಳು ಸೇರಿದಂತೆ ಸಾಂಸ್ಕೃತಿಕ ಸಂಬಂಧಗಳು ಮತ್ತು ಸಹಕಾರವನ್ನು ಆಳಗೊಳಿಸುವ ಮೂಲಕ ಉಭಯ ದೇಶಗಳ ನಡುವಿನ ಸಂಪರ್ಕವನ್ನು ಬಲಪಡಿಸುವುದು.
ಕ್ರೀಡಾ ಸಮಗ್ರತೆ, ಕ್ರೀಡಾ ಆಡಳಿತ ಮಂಡಳಿಗಳು, ಕ್ರೀಡಾ ವಿಜ್ಞಾನ ಮತ್ತು ಸಂಶೋಧನೆ, ಕ್ರೀಡಾ ಉದ್ಯಮ ಮತ್ತು ಕ್ರೀಡಾ ಪ್ರವಾಸೋದ್ಯಮದಂತಹ ಕ್ರೀಡೆಗಳಲ್ಲಿ ಸಹಯೋಗದ ಸಂಭಾವ್ಯ ಕ್ಷೇತ್ರಗಳನ್ನು ಅನ್ವೇಷಿಸುವುದು, ಜೊತೆಗೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ತಜ್ಞರು ಮತ್ತು ಪದ್ಧತಿಗಳನ್ನು ಅನುಸರಿಸುತ್ತಿರುವವರ (ಪ್ರಾಕ್ಟೀಷನರ್ಸ್ ) ವಿನಿಮಯ.
ಭಾರತದ ಈಶಾನ್ಯ ಪ್ರದೇಶದೊಂದಿಗೆ ನಿಕಟ ಸಹಕಾರವನ್ನು ಸ್ಥಾಪಿಸಲು ಮತ್ತು ವಿಶೇಷವಾಗಿ ಪ್ರವಾಸೋದ್ಯಮ, ಸಂಸ್ಕೃತಿ, ಶಿಕ್ಷಣ, ವೃತ್ತಿಪರ ಮತ್ತು ತಾಂತ್ರಿಕ ಸಹಕಾರ ಕ್ಷೇತ್ರಗಳಲ್ಲಿ ವಿನಿಮಯವನ್ನು ಹೆಚ್ಚಿಸಲು ಭಾರತ ಮತ್ತು ಥೈಲ್ಯಾಂಡ್ ನಡುವೆ ನಿಕಟ ಸಹಯೋಗವನ್ನು ಉತ್ತೇಜಿಸುವುದು.
ಕೃಷಿ, ಜೈವಿಕ ತಂತ್ರಜ್ಞಾನ, ಐಸಿಟಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಆದ್ಯತೆಯ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನಾ ಯೋಜನೆಗಳು, ಕಾರ್ಯಾಗಾರಗಳು ಮತ್ತು ವಿನಿಮಯಗಳ ಮೂಲಕ ಹೊಸ ಸವಾಲುಗಳನ್ನು ಎದುರಿಸಲು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ವಿನಿಮಯ ಮತ್ತು ನಿಕಟ ಸಹಯೋಗದೊಂದಿಗೆ ಅವಕಾಶಗಳನ್ನು ಸೃಷ್ಟಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಜವಾಬ್ದಾರಿಯುತ ಸಚಿವಾಲಯಗಳ ನಡುವಿನ ಸಹಕಾರವನ್ನು ಬಲಪಡಿಸುವುದು.
ಮಾಹಿತಿ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗು ಮಾನವ ಸಂಪನ್ಮೂಲ ಅಭಿವೃದ್ಧಿಯ ಹೆಚ್ಚಿನ ವಿನಿಮಯ ಸೇರಿದಂತೆ ಆರೋಗ್ಯ, ವೈದ್ಯಕೀಯ ಉತ್ಪನ್ನಗಳು ಮತ್ತು ಸಾಂಪ್ರದಾಯಿಕ ಔಷಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ನಿಕಟ ಸಹಕಾರವನ್ನು ಉತ್ತೇಜಿಸುವುದು.
ಮಹಿಳಾ ಉದ್ಯಮಶೀಲತೆಯನ್ನು ಹೆಚ್ಚಿಸಲು ನಾಯಕತ್ವ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ವೃತ್ತಿಪರ ಕೌಶಲ್ಯಗಳು ಸೇರಿದಂತೆ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದ ವಿನಿಮಯ ಮತ್ತು ಸಹಕಾರವನ್ನು ಕೈಗೊಳ್ಳುವುದು.
ಪ್ರಾದೇಶಿಕ, ಬಹುಪಕ್ಷೀಯ ಮತ್ತು ಅಂತಾರಾಷ್ಟ್ರೀಯ ಸಹಕಾರ
ಪರಸ್ಪರ ಕಾಳಜಿ ಮತ್ತು ಹಿತಾಸಕ್ತಿಯ ಜಾಗತಿಕ ವಿಷಯಗಳ ಬಗ್ಗೆ ಎರಡೂ ಕಡೆಯ ರಚನಾತ್ಮಕ ಪಾತ್ರವನ್ನು ಉತ್ತೇಜಿಸಲು ಭಾರತ ಮತ್ತು ಥೈಲ್ಯಾಂಡ್ ನಡುವೆ ವಿಶೇಷವಾಗಿ ವಿಶ್ವಸಂಸ್ಥೆಯಲ್ಲಿ ಸಹಕಾರವನ್ನು ಹೆಚ್ಚಿಸುವುದು.
ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್), ಅಯ್ಯವಾಡಿ-ಚಾವೊ ಫ್ರಾಯಾ-ಮೆಕಾಂಗ್ ಆರ್ಥಿಕ ಸಹಕಾರ ಕಾರ್ಯತಂತ್ರ (ಎಸಿಎಂಇಸಿಎಸ್), ಮೆಕಾಂಗ್-ಗಂಗಾ ಸಹಕಾರ (ಎಂಜಿಸಿ), ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ (ಬಿಮ್ಸ್ಟೆಕ್), ಹಿಂದೂ ಮಹಾಸಾಗರದ ರಿಮ್ ಅಸೋಸಿಯೇಷನ್ (ಐಒಆರ್ಎ), ಏಷ್ಯಾ ಸಹಕಾರ ಸಂವಾದ (ಎಸಿಡಿ) ಮತ್ತು ಇಂಡೋನೇಷ್ಯಾ-ಮಲೇಷ್ಯಾ-ಥೈಲ್ಯಾಂಡ್ ಬೆಳವಣಿಗೆ ತ್ರಿಕೋನ (ಐಎಂಟಿ-ಜಿಟಿ) ಸೇರಿದಂತೆ ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಚೌಕಟ್ಟುಗಳಲ್ಲಿ ಭಾರತ ಮತ್ತು ಥೈಲ್ಯಾಂಡ್ ನಡುವಿನ ಸಹಕಾರವನ್ನು ಬಲಪಡಿಸುವುದು. ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಸವಾಲುಗಳನ್ನು ಸಮಗ್ರವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸುವ ಉದ್ದೇಶದಿಂದ ಈ ಚೌಕಟ್ಟುಗಳ ನಡುವೆ ಸಂಯೋಜನೆಯನ್ನು ತರುವುದು.
ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯನ್ನು ಜಂಟಿಯಾಗಿ ಪ್ರತಿಪಾದಿಸಲು ಜಿ 77 ಮತ್ತು ದಕ್ಷಿಣ-ದಕ್ಷಿಣ ಸಹಕಾರದಂತಹ ಬಹುಪಕ್ಷೀಯ ಚೌಕಟ್ಟುಗಳಲ್ಲಿ ಥೈಲ್ಯಾಂಡ್ ಮತ್ತು ಭಾರತದ ನಡುವಿನ ಸಹಕಾರವನ್ನು ಬಲಪಡಿಸುವುದು.
2022ರಲ್ಲಿ ನೋಮ್ ಪೆನ್ ನಲ್ಲಿ ನಡೆದ ಆಸಿಯಾನ್-ಭಾರತ ಸಂವಾದ ಸಂಬಂಧಗಳ 30ನೇ ವಾರ್ಷಿಕೋತ್ಸವದ ನೆನಪಿಗಾಗಿ 19ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಸ್ಥಾಪಿಸಲಾದ ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಜಂಟಿಯಾಗಿ ಬಲಪಡಿಸುವುದು ಮತ್ತು ಆಸಿಯಾನ್ ಕೇಂದ್ರೀಕರಣಕ್ಕೆ ಭಾರತದ ನಿರಂತರ ಬೆಂಬಲ ಮತ್ತು ವಿಕಸನಗೊಳ್ಳುತ್ತಿರುವ ಪ್ರಾದೇಶಿಕ ವಾಸ್ತುಶಿಲ್ಪದಲ್ಲಿ ಆಸಿಯಾನ್ ನೇತೃತ್ವದ ಕಾರ್ಯವಿಧಾನಗಳಲ್ಲಿ ಭಾರತದ ಸಕ್ರಿಯ ಸಹಕಾರವನ್ನು ಸ್ವಾಗತಿಸುವುದು.
ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಸಂಪರ್ಕವನ್ನು ಹೆಚ್ಚಿಸಲು ಮೆಕಾಂಗ್-ಗಂಗಾ ಸಹಕಾರ (ಎಂಜಿಸಿ) ಚೌಕಟ್ಟಿನಡಿ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ಮತ್ತು ಶತಮಾನಗಳಷ್ಟು ಹಳೆಯ ನಾಗರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು.
ಸಮೃದ್ಧ, ಸ್ಥಿತಿಸ್ಥಾಪಕ ಮತ್ತು ಮುಕ್ತ ಬಂಗಾಳಕೊಲ್ಲಿ ಸಮುದಾಯದತ್ತ ಕೆಲಸ ಮಾಡುವಲ್ಲಿ ಭಾರತ ಮತ್ತು ಥೈಲ್ಯಾಂಡ್ ಗಳು ಸ್ಥಾಪಕ ಸದಸ್ಯರಾಗಿ ಮತ್ತು ಬಿಮ್ ಸ್ಟೆಕ್ ನ ಎರಡು ಅತಿದೊಡ್ಡ ಆರ್ಥಿಕತೆಗಳಾಗಿ ಪ್ರಮುಖ ಮತ್ತು ಪೂರ್ವಭಾವಿ ಪಾತ್ರವನ್ನು ಉತ್ತೇಜಿಸುವುದು, ಅದೇ ಸಮಯದಲ್ಲಿ ಇತ್ತೀಚೆಗೆ ಅಂಗೀಕರಿಸಲಾದ ಬಿಮ್ ಸ್ಟೆಕ್ ಚಾರ್ಟರ್ ನ ಬದ್ಧತೆ ಮತ್ತು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ನಡುವಿನ ಸೇತುವೆಯಾಗಿ ಬಿಮ್ ಸ್ಟೆಕ್ ನ ವಿಶಿಷ್ಟ ಗುಣಲಕ್ಷಣವನ್ನು ಬಳಸಿಕೊಳ್ಳುವುದು. ಸಾರಿಗೆ ಸಂಪರ್ಕಕ್ಕಾಗಿ ಬಿಮ್ ಸ್ಟೆಕ್ ಮಾಸ್ಟರ್ ಪ್ಲಾನ್ ಮತ್ತು ಕಡಲ ಸಾರಿಗೆ ಸಹಕಾರ ಒಪ್ಪಂದ ಸೇರಿದಂತೆ ಸಂಬಂಧಿತ ಒಪ್ಪಂದಗಳ ಅನುಷ್ಠಾನದ ಮೂಲಕ ಬಿಮ್ ಸ್ಟೆಕ್ ಸಾರಿಗೆ ಸಂಪರ್ಕವನ್ನು ಬಲಪಡಿಸುವುದು.
ಥೈಲ್ಯಾಂಡ್ ದೇಶದ ಪ್ರಧಾನಮಂತ್ರಿ ಮತ್ತು ಭಾರತ ಗಣರಾಜ್ಯದ ಪ್ರಧಾನ ಮಂತ್ರಿಯವರು ವ್ಯೂಹಾತ್ಮಕ ಪಾಲುದಾರಿಕೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಂಟಿ ಕ್ರಿಯಾ ಯೋಜನೆಯನ್ನು ರೂಪಿಸಲು ಸಂಬಂಧಿತ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸಲು ಥೈಲ್ಯಾಂಡ್ ಸಾಮ್ರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಜವಾಬ್ದಾರಿ ವಹಿಸಲು ಒಪ್ಪಿಕೊಂಡರು.
*****
Deepening cultural ties and bringing BIMSTEC nations even closer. pic.twitter.com/lLLhJECO9r
— PMO India (@PMOIndia) April 4, 2025
Encouraging the participation of youth. pic.twitter.com/X5VeZMoqQj
— PMO India (@PMOIndia) April 4, 2025
At the BIMSTEC Summit, PM @narendramodi highlighted the need to enhance collaboration among member nations and deepen engagement. He put forward a comprehensive 21-point Action Plan. pic.twitter.com/u2xGIea8SA
— PMO India (@PMOIndia) April 4, 2025